ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ 15 ವರ್ಷದ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ತಾಯಿ, ನಿರಂತರವಾಗಿ ಬರುತ್ತಿರುವ ಬೆದರಿಕೆ ಮತ್ತು ಕಿರುಕುಳಕ್ಕೆ ಹೆದರಿ ತಮ್ಮ ಮನೆಯನ್ನು ಖಾಲಿ ಮಾಡಿ ತಲೆಮರೆಸಿಕೊಂಡಿದ್ದಾರೆ.
ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಈ ಬಾಲಕಿ, ಪ್ರಧಾನಿ ಮೋದಿ ಅವರನ್ನು ನಿಂದಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಉತ್ತರ ಪ್ರದೇಶದ ನೋಯ್ಡಾ ಪೊಲೀಸ್ ಠಾಣೆಯಲ್ಲಿ ‘ಜೀರೋ ಎಫ್‌ಐಆರ್’ ದಾಖಲಿಸಲಾಗಿತ್ತು, ನಂತರ ಅದನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ನಿಂದನೆ ಆರೋಪ: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಘರ್ಷಣೆ
ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಾಲಕಿ ಹಾಗೂ ಆಕೆಯ ಕುಟುಂಬದ ಖಾಸಗಿ ವಿವರಗಳು, ಕಾರಿನ ನಂಬರ್ ಹಾಗೂ ಗೃಹ ವಿಳಾಸ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಪ್ರಾರಂಭಿಸಿದವು. ಬಾಲಕಿಯ ಪರ ವಕೀಲರು ನೀಡಿದ ಮಾಹಿತಿಯಂತೆ, “ವಿಳಾಸ ಬಹಿರಂಗವಾದ ನಂತರ ಅಪರಿಚಿತ ವ್ಯಕ್ತಿಗಳು ಮತ್ತು ಕೆಲ ರಾಜಕೀಯ ಬೆಂಬಲಿಗರು ಮನೆಬಾಗಿಲಿಗೆ ಬಂದು ಬೆದರಿಕೆ ಹಾಕಲು ಶುರು ಮಾಡಿದರು. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರತೊಡಗಿದವು”.
ಈ ಕಿರುಕುಳ ಹಾಗೂ ಜೀವಭಯದಿಂದಾಗಿ ಬಾಲಕಿ ಮತ್ತು ಆಕೆಯ ತಾಯಿ ನೋಯ್ಡಾದ ತಮ್ಮ ಮನೆಯನ್ನು ತೊರೆದು, ಈಗಾಗಲೇ ಮೂರು ಬಾರಿ ಬೇರೆ ಬೇರೆ ರಹಸ್ಯ ಸ್ಥಳಗಳಿಗೆ ವಾಸ ಬದಲಾಯಿಸಿದ್ದಾರೆ. ವಿಡಿಯೋ ಹರಿದಾಡಿದ ತಕ್ಷಣವೇ ಬಾಲಕಿ ವಿಡಿಯೋ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಳು. ಆದರೂ ಸಂಘಪರಿವಾರದವರಿಂದ ನಿರಂತರ ಕೊಲೆ ಬೆದರಿಕೆ ಬರುತ್ತಲೇ ಇದೆ.
ಈ ಬಗ್ಗೆ ಮಾತನಾಡಿರುವ ಬಾಲಕಿಯ ತಾಯಿ, “ಪ್ರಧಾನಿಯವರು ನನ್ನ ಮಗಳಿಗೆ ಜೀವದಾನ ನೀಡಿದ್ದಾರೆ. ಆದರೆ ನಮ್ಮ ಬೆನ್ನು ಹತ್ತಿ ಬೇಟೆಯಾಡುವುದನ್ನು ಹಾಗೂ ಕಿರುಕುಳ ನೀಡುವುದನ್ನು ಜನರು ಇನ್ನಾದರೂ ನಿಲ್ಲಿಸಬೇಕು. ನನ್ನ ಮಗಳ ಮೇಲಿರುವ ಎಫ್‌ಐಆರ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಆಕೆ ನೆಮ್ಮದಿಯಿಂದ ಶಿಕ್ಷಣ ಮುಂದುವರಿಸಲು ಅವಕಾಶ ಮಾಡಿಕೊಡಬೇಕು” ಎಂದು ಕಣ್ಣೀರಿಡುತ್ತಾ ವಿನಂತಿಸಿದ್ದಾರೆ.
ಘಟನೆ ನಡೆದ ಸ್ಥಳ ದೆಹಲಿ ವ್ಯಾಪ್ತಿಗೆ ಬರುವುದರಿಂದ ಮತ್ತು ಬಾಲಕಿ ಅಪ್ರಾಪ್ತಳಾಗಿರುವುದರಿಂದ ಆಕೆಯ ವಿರುದ್ಧ ದಂಡನಾತ್ಮಕ ಎಫ್‌ಐಆರ್ ದಾಖಲಿಸದಿರಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ. ಆದಾಗ್ಯೂ, ಸಾಮಾಜಿಕ ಜಾಲತಾಣಗಳ ಟ್ರೋಲ್ ಹಾಗೂ ಪ್ರತ್ಯಕ್ಷ ಬೆದರಿಕೆಗಳ ಭಯದಿಂದ ಈ ಕುಟುಂಬ ಇನ್ನೂ ತಲೆಮರೆಸಿಕೊಂಡೇ ಕಾಲ ಕಳೆಯಬೇಕಾಗಿದೆ.




