ಋತುಸ್ರಾವಕ್ಕೆ ಸಂಬಂಧಿಸಿದ ಆರೋಗ್ಯವನ್ನು ಸಮಗ್ರ ಸಾರ್ವಜನಿಕ ಆರೋಗ್ಯ ನೀತಿಯ ಭಾಗವಾಗಿಸುವ ಪ್ರಯತ್ನಗಳು ತೀರಾ ವಿರಳ. ಮುಟ್ಟನ್ನು ಇನ್ನೂ ನಿಷೇಧಿತ ವಿಷಯದಂತೆಯೇ ನೋಡುತ್ತಿರುವ ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ 'ಋತುತಾರೆ' ಯೋಜನೆ ಸ್ವಾಗತಾರ್ಹ. ದೇಶದಲ್ಲೇ ಮಹಿಳೆಯರ ಋತುಸಂಬಂಧಿ ಆರೋಗ್ಯಕ್ಕೆ ಪ್ರತ್ಯೇಕ ನೀತಿ ರೂಪಿಸುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗುತ್ತಿರುವುದು ಇನ್ನಷ್ಟು ಮಹತ್ವದ ಸಂಗತಿ.
ಮೊದಲಿನಿಂದಲೂ ಮಹಿಳೆಯರ ಆರೋಗ್ಯ ಬರೀ ಋತುಚಕ್ರ ಶುರುವಾಗುವುದು, ಪ್ರೌಢಾವಸ್ಥೆ, ಗರ್ಭಧಾರಣೆ, ಹೆರಿಗೆ, ಋತುಬಂಧ ಇವುಗಳ ಸುತ್ತಲೇ ಸುತ್ತುತ್ತಿದೆ. ಆದರೆ ಪುರುಷರಿಗೆ ಹೋಲಿಸಿಕೊಂಡರೆ ಅದರ ವ್ಯಾಪ್ತಿ ಇನ್ನೂ ದೊಡ್ಡದು. ಕಿಶೋರಾವಸ್ಥೆಯಿಂದ ಮೆನೋಪಾಸ್ (ಮುಟ್ಟುನಿಲ್ಲುವ) ವರೆಗಿನ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಆರೋಗ್ಯದ ಅಗತ್ಯಗಳು ವಿಭಿನ್ನವಾಗಿರುತ್ತವೆ. ಅದರಲ್ಲೂ ಋತುಸ್ರಾವ ಸಹಜ ಜೈವಿಕ ಪ್ರಕ್ರಿಯೆಯಾಗಿದ್ದರೂ, ಅದರ ಬಗ್ಗೆ ವೈಜ್ಞಾನಿಕ ಅರಿವಿಗಿಂತ ಮೂಢನಂಬಿಕೆ ಮತ್ತು ಸಂಕೋಚವೇ ಹೆಚ್ಚಾಗಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶಾಲೆ ಬಿಡುವ ಕಿಶೋರಿಯರಿಂದ ಹಿಡಿದು ಕೆಲಸದ ಸ್ಥಳಗಳಲ್ಲಿ ಸೂಕ್ತ ಸೌಲಭ್ಯಗಳ ಕೊರತೆ ಎದುರಿಸುವ ಪ್ರತಿ ಮಹಿಳೆಯರವರೆಗೆ ಈ ಸಮಸ್ಯೆ ವ್ಯಾಪಿಸಿದೆ. ಈ ಹಿನ್ನೆಲೆ ಆರೋಗ್ಯ, ಸ್ವಚ್ಛತೆ, ಪೌಷ್ಟಿಕತೆ ಮತ್ತು ಜಾಗೃತಿಯನ್ನು ಒಂದೇ ನೀತಿಯಡಿ ತರಲು ಸರ್ಕಾರ ಮುಂದಾಗಿರುವುದು ಪ್ರಶಂಸನೀಯ.
ಮುಖ್ಯವಾಗಿ ಈ ಯೋಜನೆಯ ಮೊದಲ ಹಂತವಾಗಿ ಮುಂದಿನ 6 ತಿಂಗಳ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಲಿದ್ದು, ಋತುಬಂಧದ ಹಂತದಲ್ಲಿರುವ (ಪ್ರೀ-ಮೆನೋಪಾಸ್ ಮತ್ತು ಪೋಸ್ಟ್-ಮೆನೋಪಾಸ್) ಮಹಿಳೆಯರ ಆರೋಗ್ಯದ ಸ್ಥಿತಿಗತಿ ಮತ್ತು ದತ್ತಾಂಶವನ್ನು (Data) ಸಂಗ್ರಹಿಸಲಾಗುತ್ತದೆ. ಈ ಸಮಯದಲ್ಲಿ ಕಾಡುವ ತೀವ್ರ ಮಾನಸಿಕ ಒತ್ತಡ, ಹಾರ್ಮೋನ್ ಬದಲಾವಣೆ ಹಾಗೂ ಖಿನ್ನತೆಯನ್ನು ನಿವಾರಿಸಲು ಆಪ್ತಸಮಾಲೋಚನೆ ನೀಡಲಾಗುತ್ತದೆ. ದೈಹಿಕ ತೊಂದರೆಗಳು, ಸುಸ್ತು ಮತ್ತು ಇತರೆ ಲಕ್ಷಣಗಳನ್ನು ಎದುರಿಸಲು ಮಹಿಳೆಯರಿಗೆ ಮುಕ್ತವಾಗಿ ಮಾತನಾಡಲು ವೇದಿಕೆ ಕಲ್ಪಿಸಲಾಗುತ್ತದೆ. ಯೋಜನೆಯ ಉಸ್ತುವಾರಿಗೆ ತಜ್ಞ ವೈದ್ಯರ ಸಮಿತಿಯೊಂದನ್ನು ರಚಿಸಲಾಗಿದ್ದು, ಮಹಿಳೆಯರಿಗೆ ಅಗತ್ಯವಿದ್ದಲ್ಲಿ ತಜ್ಞರಿಂದ ವೈದ್ಯಕೀಯ ಚಿಕಿತ್ಸೆ ಮತ್ತು ಮಾರ್ಗದರ್ಶನ ಕೂಡ ಸಿಗಲಿದೆ. ಮೆನೋಪಾಸ್ ಸಮಯದಲ್ಲಿ ಪಾಲಿಸಬೇಕಾದ ಪೌಷ್ಟಿಕ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಕರ್ನಾಟಕದಲ್ಲಿ ಹಂತಹಂತವಾಗಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ನಂತರ, ಇದನ್ನು ದೇಶಾದ್ಯಂತ ಜಾರಿಗೆ ತರುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸುವ ಯೋಜನೆಯನ್ನೂ ಸರ್ಕಾರ ಹೊಂದಿದೆ.
ಈ ಯೋಜನೆಗೆ ಕನ್ನಡದ ಖ್ಯಾತ ನಟಿ ರಮ್ಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿರುವುದು ಸಹ ಗಮನಾರ್ಹ ನಿರ್ಧಾರ. ಸಮಾಜದಲ್ಲಿ ವ್ಯಾಪಕ ಪ್ರಭಾವ ಬೀರಬಹುದಾದಂತಹ ಸಾರ್ವಜನಿಕ ವ್ಯಕ್ತಿಗಳ ಪಾಲ್ಗೊಳ್ಳುವಿಕೆ, ಋತುಸ್ರಾವದ ಬಗ್ಗೆ ಇರುವ ಮುಜುಗರವನ್ನು ಕಡಿಮೆ ಮಾಡಿ ಮುಕ್ತ ಸಂವಾದಕ್ಕೆ ಅವಕಾಶ ಕಲ್ಪಿಸಬಲ್ಲದು. ಮಹಿಳೆಯರ ಆರೋಗ್ಯದಂತಹ ವಿಷಯಗಳಲ್ಲಿ ಜನಜಾಗೃತಿ ಮೂಡಿಸಲು ಇಂತಹ ಮುಖಗಳು ಪರಿಣಾಮಕಾರಿ ಮಾಧ್ಯಮವಾಗುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಒಂದು ಯೋಜನೆಯ ಯಶಸ್ಸನ್ನು ತಲುಪಬೇಕಾದವರನ್ನು ತಲುಪಿದೆಯೇ, ಜನರ ಬದುಕಿನಲ್ಲಿ ಬದಲಾವಣೆ ತರುತ್ತಿದೆಯೇ ಎಂಬುದರಿಂದ ಅಳೆಯಬೇಕಿದೆ.
ಸಮಾಜದಲ್ಲಿ ಬದಲಾವಣೆ ತರಬಹುದಾದ ಒಂದೊಳ್ಳೆ ಯೋಜನೆಯನ್ನೇನೋ ಸರ್ಕಾರ ಜಾರಿ ಮಾಡಲು ಮುಂದಾಗಿದೆ. ಆದರೆ, ಅದರ ಅನುಷ್ಠಾನವೂ ಮುಖ್ಯ. ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಿಗೂ ‘ಋತುತಾರೆ’ ತಲುಪಬೇಕು. ಸಮಾಜದಲ್ಲಿ ಅಲೆಮಾರಿ ಸಮುದಾಯಗಳ ಮಹಿಳೆಯರು, ಕಟ್ಟಡ ನಿರ್ಮಾಣ, ಗಾರ್ಮೆಂಟ್ಸ್, ಕೃಷಿ ಹಾಗೂ ಇತರ ಅಸಂಘಟಿತ ವಲಯಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರು, ಅಕ್ಷರಜ್ಞಾನವಿಲ್ಲದವರು ಮತ್ತು ಆರೋಗ್ಯ ಸೇವೆಗಳು ಸುಲಭವಾಗಿ ತಲುಪದ ಕುಗ್ರಾಮಗಳ ಮಹಿಳೆಯರಿಗೂ ಈ ಯೋಜನೆ ಸಮಾನವಾಗಿ ತಲುಪಬೇಕು. ಸರ್ಕಾರಿ ಶಾಲೆ, ಕಾಲೇಜು, ಕೈಗಾರಿಕೆ, ಅಂಗನವಾಡಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಜಾಗೃತಿ ಹಾಗೂ ಆರೋಗ್ಯ ಸೇವೆಗಳು ಪರಿಣಾಮಕಾರಿಯಾಗಿ ಒದಗಬೇಕು. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಮತ್ತು ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಸುರಕ್ಷಿತ ಸ್ಯಾನಿಟರಿ ಉತ್ಪನ್ನಗಳ ಲಭ್ಯತೆ, ಅವುಗಳ ಸಮರ್ಪಕ ವಿಲೇವಾರಿ ವ್ಯವಸ್ಥೆ, ಸ್ವಚ್ಛ ಶೌಚಾಲಯಗಳು, ಸಮರ್ಪಕ ನೀರಿನ ವ್ಯವಸ್ಥೆ ಮತ್ತು ಆರೋಗ್ಯ ಸಲಹೆ ಎಲ್ಲರಿಗೂ ಸುಲಭವಾಗಿ ದೊರೆಯುವಂತಾಗಬೇಕು.
ಋತುಸ್ರಾವದ ಹಂತದ ಬಳಿಕ ಜೀವನದ ಮತ್ತೊಂದು ಮಹತ್ವದ ಘಟ್ಟವಾದ ಮೆನೋಪಾಸ್ ಸಮಯದಲ್ಲಿಯೂ ಮಹಿಳೆಯರು ಅನೇಕ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಎದುರಿಸುತ್ತಾರೆ. ನಿದ್ರಾಹೀನತೆ, ಆತಂಕ, ಮನೋಸ್ಥಿತಿಯ ಏರಿಳಿತ, ಮೂಳೆಗಳ ದುರ್ಬಲತೆ, ಹಾರ್ಮೋನ್‌ಗಳಲ್ಲಿನ ಬದಲಾವಣೆ ಸೇರಿದಂತೆ ಹಲವು ಸಮಸ್ಯೆಗಳು ಅವರ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಆದರೆ ಈ ಹಂತದ ಬಗ್ಗೆ ಸಮಾಜದಲ್ಲಿ ಸಾಕಷ್ಟು ಅರಿವಿಲ್ಲ. ಅನೇಕ ಮಹಿಳೆಯರು ತಾವು ಅನುಭವಿಸುವ ಬದಲಾವಣೆಗಳನ್ನು ಸಹಜವೆಂದು ಭಾವಿಸಿ ಸಹಿಸಿಕೊಳ್ಳುತ್ತಾರೆ. ಕುಟುಂಬದ ಸದಸ್ಯರು, ಉದ್ಯೋಗದಾತರು ಮತ್ತು ಆರೋಗ್ಯ ವ್ಯವಸ್ಥೆ ಈ ಹಂತದಲ್ಲಿ ಮಹಿಳೆಯರಿಗೆ ಅಗತ್ಯವಾದ ಮಾಹಿತಿ, ವೈದ್ಯಕೀಯ ಸಲಹೆ ಮತ್ತು ಭಾವನಾತ್ಮಕ ಬೆಂಬಲ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಮಹಿಳೆಯರ ಆರೋಗ್ಯದ ಬಗ್ಗೆ ಸಮಗ್ರ ನೀತಿ ಎಂದರೆ ಜೀವನದ ಎಲ್ಲ ಹಂತಗಳ ಅಗತ್ಯಗಳನ್ನು ಒಳಗೊಳ್ಳುವ ನೀತಿಯೇ ಆಗಬೇಕು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮಹಿಳೆಯರಿಲ್ಲದ ಸಚಿವ ಸಂಪುಟ: 33% ಮೀಸಲಾತಿ ಮಾತು ಎಲ್ಲೋಯ್ತು?
ಇದೇ ವೇಳೆ ಪಿಸಿಒಎಸ್, ಎಂಡೊಮೆಟ್ರಿಯೊಸಿಸ್ (ಗರ್ಭಾಶಯದ ಒಳಭಾಗದಲ್ಲಿರುವ ಎಂಡೊಮೆಟ್ರಿಯಮ್ (Endometrium) ಎಂಬ ಅಂಗಾಂಶದಂತೆಯೇ ಇರುವ ಅಂಗಾಂಶವು ಗರ್ಭಾಶಯದ ಹೊರಭಾಗದಲ್ಲಿ ಬೆಳೆಯುವ ಕಾಯಿಲೆ), ರಕ್ತಹೀನತೆ, ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಅನಾರೋಗ್ಯ, ಮಾನಸಿಕ ಒತ್ತಡ ಸೇರಿದಂತೆ ಮಹಿಳೆಯರನ್ನು ಬಾಧಿಸುವ ಎಲ್ಲಾ ರೀತಿಯ ವಿಷಯಗಳಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಹಿಳೆಯರ ಆರೋಗ್ಯವನ್ನು ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಮುಖ ಅಂಶವೆಂದೇ ಪರಿಗಣಿಸುವ ಸಮಯ ಬಂದಿದೆ. ಆರೋಗ್ಯವಂತ ಮಹಿಳೆ ಎಂದರೆ ಆರೋಗ್ಯವಂತ ಕುಟುಂಬ, ಆರೋಗ್ಯವಂತ ಕುಟುಂಬಗಳೇ ಆರೋಗ್ಯವಂತ ಸಮಾಜದ ಅಡಿಪಾಯ.
ಈ ಯೋಜನೆಗೆ ಅಗತ್ಯವಾದ ಅನುದಾನ, ಪರಿಣಾಮಕಾರಿ ಅನುಷ್ಠಾನ, ನಿರಂತರ ಮೇಲ್ವಿಚಾರಣೆ ಮತ್ತು ವೈಜ್ಞಾನಿಕ ಜಾಗೃತಿ ಅಭಿಯಾನಗಳನ್ನು ಸರ್ಕಾರ ಖಚಿತಪಡಿಸಬೇಕು. ಮಹಿಳೆಯರ ಆರೋಗ್ಯವನ್ನ ಸಾಮಾಜಿಕ ನ್ಯಾಯ, ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲದ ಹೂಡಿಕೆಯ ದೃಷ್ಟಿಯಿಂದಲೂ ಪರಿಗಣಿಸಬೇಕು. ಆರೋಗ್ಯವಂತ ಮಹಿಳೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ಕುಟುಂಬದ ನಿರ್ಧಾರಗಳಲ್ಲಿ ಮತ್ತು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಬಲ್ಲಳು. ಇದರಿಂದ ಕುಟುಂಬದ ಆರೋಗ್ಯ ಸುಧಾರಿಸುವುದರ ಜೊತೆಗೆ ಸಮಾಜದ ಉತ್ಪಾದಕತೆ ಮತ್ತು ದೇಶದ ಅಭಿವೃದ್ಧಿಗೂ ನೇರ ಕೊಡುಗೆ ದೊರೆಯುತ್ತದೆ. ಮಹಿಳೆಯರ ಆರೋಗ್ಯದ ಬಗ್ಗೆ ಇರುವ ಮುಜುಗರ, ತಾರತಮ್ಯ ಮತ್ತು ನಿರ್ಲಕ್ಷ್ಯಕ್ಕೆ ತೆರೆ ಎಳೆದು, ಅವರ ಆರೋಗ್ಯದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ನೀತಿ ನಿರೂಪಣೆ ರೂಪಿಸಬೇಕು. ಕರ್ನಾಟಕ ಸರ್ಕಾರದ ಈ ಮಾನವೀಯ, ಮಹಿಳಾಪರ ‘ಋತುತಾರೆ’ ಆ ದಿಕ್ಕಿನ ಆಶಾದಾಯಕ ಆರಂಭವಾಗಲಿ. ಅದು ಇತರ ರಾಜ್ಯಗಳಿಗೂ ಮಾದರಿಯಾಗಿ ದೇಶವ್ಯಾಪಿ ಮಹಿಳಾ ಆರೋಗ್ಯ ನೀತಿಗಳಿಗೆ ಪ್ರೇರಣೆಯಾಗಲಿ.




