ರಾಜ್ಯ ಸರ್ಕಾರ ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಶುಕ್ರವಾರ ತಮಿಳುನಾಡು ವಿಧಾನಸಭೆಯಲ್ಲಿ ಅವರು ಮಂಡಿಸಿದ ನಿರ್ಣಯವು ಸರ್ವಾನುಮತದಿಂದ ಅಂಗೀಕಾರಗೊಂಡಿದೆ.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಏಕಪಕ್ಷೀಯ ನಿರ್ಧಾರವನ್ನು ಈ ನಿರ್ಣಯವು ಬಲವಾಗಿ ವಿರೋಧಿಸಿದೆ. ಮೇಕೆದಾಟು ಯೋಜನೆಗೆ ತಾಂತ್ರಿಕ ಹಾಗೂ ಪರಿಸರ ಅನುಮತಿ ಸೇರಿದಂತೆ ಯಾವುದೇ ರೀತಿಯ ಒಪ್ಪಿಗೆಯನ್ನು ಕೇಂದ್ರ ಸರ್ಕಾರ ನೀಡಬಾರದು. ಅಲ್ಲದೆ, ಕರ್ನಾಟಕ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಕೇಂದ್ರ ಜಲ ಆಯೋಗವು (ಸಿಡಬ್ಲ್ಯುಸಿ) ಪರಿಶೀಲಿಸಬಾರದು ಅಥವಾ ಅದಕ್ಕೆ ಒಪ್ಪಿಗೆ ಸೂಚಿಸಬಾರದು ಎಂದು ನಿರ್ಣಯದಲ್ಲಿ ಕೋರಲಾಗಿದೆ.
ಇದನ್ನು ಓದಿದ್ದೀರಾ? ರಾಜಕೀಯದಿಂದ ಮೇಲೆದ್ದು, ವಿದ್ಯಾರ್ಥಿಗಳ ಮನಗೆದ್ದ ರಾಹುಲ್ – ಕೋಟದಲ್ಲಿ ಬಿಚ್ಚಿಟ್ಟ ಕರಾಳ ದೃಶ್ಯಾವಳಿ!
ಕಾವೇರಿ ಜಲವಿವಾದ ನ್ಯಾಯಮಂಡಳಿಯು 2007ರ ಫೆಬ್ರವರಿ 5ರಂದು ನೀಡಿದ ಅಂತಿಮ ತೀರ್ಪು ಹಾಗೂ ಸುಪ್ರೀಂ ಕೋರ್ಟ್ 2018ರ ಫೆಬ್ರವರಿ 16ರಂದು ನೀಡಿದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. “ಕಾವೇರಿ ಕೊಳ್ಳವು ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶವಾಗಿದೆ. ಇಲ್ಲಿ ಲಭ್ಯವಿರುವ ನೀರನ್ನು ಈಗಾಗಲೇ ಕಣಿವೆ ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ. ಹೀಗಾಗಿ, ಇತರ ಕಣಿವೆ ರಾಜ್ಯಗಳ ಒಪ್ಪಿಗೆ ಹಾಗೂ ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಯಾವುದೇ ಹೊಸ ಯೋಜನೆ ಕೈಗೊಳ್ಳುವಂತಿಲ್ಲ ಅಥವಾ ಹೆಚ್ಚುವರಿ ನೀರನ್ನು ಬಳಸುವಂತಿಲ್ಲ,” ಎಂದು ಮುಖ್ಯಮಂತ್ರಿ ವಿಜಯ್ ಪ್ರತಿಪಾದಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ತಮಿಳುನಾಡಿನ ರೈತರು ಮತ್ತು ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ವಿಜಯ್ ಕರೆ ನೀಡಿದರು. ಕಾವೇರಿ ವಿವಾದವು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ವಿವರಿಸಿದರು. ವಿಜಯ್ ಮಂಡಿಸಿದ ಈ ನಿರ್ಣಯಕ್ಕೆ ಕಾಂಗ್ರೆಸ್, ವಿಸಿಕೆ ಸೇರಿದಂತೆ ವಿಧಾನಸಭೆಯ ಎಲ್ಲಾ ಪಕ್ಷಗಳು ಬೆಂಬಲ ಸೂಚಿಸಿ, ಸರ್ವಾನುಮತದಿಂದ ಅಂಗೀಕರಿಸಿದವು.




