ಗುರುವಾರ ನಡೆದ ಝಾರ್ಖಂಡ್‌ನ ಎರಡು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಜೆಎಂಎಂ ಅಭ್ಯರ್ಥಿ ಬೈದ್ಯನಾಥ್ ರಾಮ್ ಮತ್ತು ಎನ್‌ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಪರಿಮಳ್ ನಾಥ್‌ವಾನಿ ಗೆಲುವು ಸಾಧಿಸಿದ್ದಾರೆ. ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆಯಾಗಿದ್ದು, ಸದ್ಯ ಎನ್‌ಡಿಎ ಧನಬಲಕ್ಕೆ ಗೆಲುವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಒಟ್ಟು 2 ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಗೆಲ್ಲಲು ತಲಾ 28 ಮತಗಳ ಅಗತ್ಯವಿತ್ತು. ಬೈದ್ಯನಾಥ್ ರಾಮ್ (JMM) 31 ಮತಗಳನ್ನು ಪಡೆದು ಸುಲಭವಾಗಿ ಜಯಗಳಿಸಿದರು. ಪರಿಮಳ್ ನಾಥ್‌ವಾನಿ (NDA ಬೆಂಬಲಿತ ಸ್ವತಂತ್ರ ಅಭ್ಯರ್ಥಿ) 28 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರಣವ್ ಝಾ (ಕಾಂಗ್ರೆಸ್) ಕೇವಲ 19 ಮತಗಳನ್ನು ಪಡೆದು ಸೋಲನ್ನೊಪ್ಪಿಕೊಂಡರು. 3 ಮತಗಳನ್ನು ಚುನಾವಣಾ ಆಯೋಗ ಅಮಾನ್ಯಗೊಳಿಸಿದೆ.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ನ ಮೂವರು, ಬಿಜೆಪಿ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆ
ಜಂಟಿ ಸಂಖ್ಯಾಬಲದ ಆಧಾರದ ಮೇಲೆ ಎರಡೂ ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿತ್ತು. ಆದರೆ ಕ್ರಾಸ್ ವೋಟಿಂಗ್ ನಡೆದು, ಎನ್‌ಡಿಎ ಬೆಂಬಲಿತ ಅಭ್ಯರ್ಥಿಗೆ ಗೆಲುವಾಗಿದೆ. ಈ ಸೋಲಿಗೆ ಎನ್‌ಡಿಎ ಹೂಡಿದ ರಾಜಕೀಯ ತಂತ್ರಗಾರಿಕೆ, ಧನಬಲದ ಬಳಕೆ ಮತ್ತು ಕುದುರೆ ವ್ಯಾಪಾರವೇ ಕಾರಣ ಎಂದು ಕಾಂಗ್ರೆಸ್ ಮತ್ತು ಜೆಎಂಎಂ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಎನ್‌ಡಿಎ ಮೈತ್ರಿಕೂಟವು ತನ್ನದೇ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸುವ ಬದಲು, ರಿಲಯನ್ಸ್ ಗ್ರೂಪ್‌ನ ಹಿರಿಯ ಅಧಿಕಾರಿಯಾಗಿರುವ ಬಿಲಿಯನೇರ್ ಉದ್ಯಮಿ ಪರಿಮಳ್ ನತ್ವಾಣಿ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು.
“ಎನ್‌ಡಿಎ ಒಬ್ಬ ಪ್ರಭಾವಿ ಕಾರ್ಪೊರೇಟ್ ಉದ್ಯಮಿಯನ್ನು ಪಕ್ಷೇತರನಾಗಿ ಕಣಕ್ಕಿಳಿಸಿದ್ದೇ ಶಾಸಕರನ್ನು ಧನಬಲದಿಂದ ಸೆಳೆಯಲು. ಕೇವಲ ಹಣದ ಪ್ರಭಾವದಿಂದಲೇ ಈ ಫಲಿತಾಂಶ ಉಲ್ಟಾ ಆಗಿದೆ” ಎಂದು ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಕೆ. ರಾಜು ಮತ್ತು ಸಚಿವೆ ದೀಪಿಕಾ ಪಾಂಡೆ ಸಿಂಗ್ ನೇರವಾಗಿ ಆರೋಪಿಸಿದ್ದಾರೆ.
ಮತದಾನಕ್ಕೆ ಮೊದಲೇ ಜೆಎಂಎಂ ನಾಯಕ ಮನೋಜ್ ಪಾಂಡೆ ಅವರು, “ಬಿಜೆಪಿ ಗುಜರಾತ್ ಮೂಲದ ಉದ್ಯಮಿಯನ್ನು ಬಳಸಿ ಜಾರ್ಖಂಡ್ ರಾಜಕಾರಣದಲ್ಲಿ ಹಣದ ಖೆಡ್ಡಾ ತೋಡುತ್ತಿದೆ” ಎಂದು ಎಚ್ಚರಿಸಿದ್ದರು.
ವಿಧಾನಸಭೆಯಲ್ಲಿ ಗೆಲುವಿಗೆ 28 ಮತಗಳು ಬೇಕಾಗಿದ್ದವು. ಎನ್‌ಡಿಎ ಬಳಿ ಇದ್ದದ್ದು ಕೇವಲ 24 ಮತಗಳು ಅಂದರೆ 4 ಮತಗಳ ಕೊರತೆ ಇತ್ತು. ಆದರೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಪ್ರತಿಪಕ್ಷಗಳ ಶಾಸಕರು ಕ್ರಾಸ್ ವೋಟಿಂಗ್ ಮಾಡುವಂತೆ ತೆರೆಮರೆಯಲ್ಲೇ ಪ್ರಭಾವ ಬೀರಲು ನಡೆಸಿದ ವ್ಯವಸ್ಥಿತ ತಂತ್ರವಾಗಿತ್ತು ಎಂಬುದು ಸ್ಪಷ್ಟವಾಗಿದೆ.




