ನಟಿ ತ್ರಿಶಾ ಕೃಷ್ಣನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಹಿರಿಯ ಮುಖಂಡ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವು ನೀಡಿದ ದೂರಿನ ಆಧಾರದ ಮೇಲೆ ತಂಜಾವೂರಿನಲ್ಲಿ ಉದಯನಿಧಿ ತಂಗಿದ್ದ ನಿವಾಸದ ಸುತ್ತಲೂ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಅವರನ್ನು ವಶಕ್ಕೆ ಪಡೆಯಲಾಗಿದೆ.
ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಂಜಾವೂರಿನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಉದಯನಿಧಿ ಸ್ಟಾಲಿನ್ ಮಾತನಾಡುತ್ತಿದ್ದಾಗ ಈ ವಿವಾದ ಸೃಷ್ಟಿಯಾಗಿದೆ. ಅವರ ಭಾಷಣದ ಮಧ್ಯೆ ಸಭೆಯಲ್ಲಿದ್ದ ಕೆಲವರು ‘ತ್ರಿಶಾ, ತ್ರಿಶಾ’ ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಈ ವೇಳೆ ಭಾಷಣವನ್ನು ಕೊಂಚ ತಡೆದ ಉದಯನಿಧಿ, “ನೀರು ಬೇರೆ ಎಲ್ಲಾದರೂ ತಲುಪುತ್ತದೋ ಇಲ್ಲವೋ, ಅಲ್ಲಿಗೆ ತಲುಪಲೇಬೇಕು” ಎಂದು ಪ್ರತಿಕ್ರಿಯಿಸಿದ್ದರು. ತಾವು ಕಾವೇರಿ ನದಿಯ ನೀರನ್ನು ಉದ್ದೇಶಿಸಿ ಈ ಮಾತು ಹೇಳಿದ್ದಾಗಿ ಅವರು ಸ್ಪಷ್ಟಪಡಿಸಿದರಾದರೂ, ಅವರ ಪ್ರತಿಕ್ರಿಯೆಯು ದ್ವಂದ್ವಾರ್ಥದಿಂದ ಕೂಡಿದೆ ಹಾಗೂ ಅಶ್ಲೀಲವಾಗಿದೆ ಎಂದು ಟಿವಿಕೆ ಆರೋಪಿಸಿದೆ.
ಈ ಹೇಳಿಕೆಯನ್ನು ಖಂಡಿಸಿ ಟಿವಿಕೆ ತಂಜಾವೂರು ಮಧ್ಯ ಜಿಲ್ಲಾ ಮಹಿಳಾ ವಿಭಾಗದ ಸಂಘಟಕಿ ಎಸ್. ಭೈರವಿ ಅವರು ತಂಜಾವೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉದಯನಿಧಿ ಹಾಗೂ ಡಿಎಂಕೆ ಐಟಿ ವಿಭಾಗದವರು ಮಹಿಳೆಯರನ್ನು ಕೀಳಾಗಿ ಬಿಂಬಿಸುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ, ಇದರಿಂದ ನಟಿಗೆ ಹಾಗೂ ಒಟ್ಟಾರೆ ಮಹಿಳಾ ಸಮುದಾಯಕ್ಕೆ ಮಾನಸಿಕ ಕಿರುಕುಳವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉದ್ದೇಶಪೂರ್ವಕವಾಗಿಯೇ ಎರಡು ನಿಮಿಷಕ್ಕೂ ಹೆಚ್ಚಿನ ಅವಧಿಯ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದೂ ಆರೋಪಿಸಲಾಗಿದೆ. ಇದರ ಜೊತೆಗೆ, ಟಿವಿಕೆ ರಾಷ್ಟ್ರೀಯ ವಕ್ತಾರ ಪಳ ಸೆಲ್ವಕುಮಾರ್ ಅವರು ನವದೆಹಲಿಯಲ್ಲಿರುವ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ (NCW) ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
ಈ ಘಟನೆಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟಿವಿಕೆ ಮತ್ತು ಬಿಜೆಪಿ ನಾಯಕರು ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟಿವಿಕೆ ಶಾಸಕ ರೇವಂತ್ ಚರಣ್ ಮಾತನಾಡಿ, ಇದೊಂದು ಅತ್ಯಂತ ಅಸಹ್ಯಕರ ಕೃತ್ಯವಾಗಿದ್ದು, ಯಾರ ವಿರುದ್ಧವೇ ಆಗಲಿ ಇಂತಹ ಹೇಳಿಕೆ ನೀಡುವುದು ಡಿಎಂಕೆಯ ಕೀಳುಮಟ್ಟದ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.




