ವಿಶ್ಲೇಷಣೆ | ಬೇರು ಕಳೆದುಕೊಂಡ ರಾಜಕೀಯದ ಪಡಿಪಾಟಲು

Date:

ಬಹಳ ವೈರುಧ್ಯದ ಸಂಗತಿ ಎಂದರೆ, ರಾಜ್ಯದಲ್ಲಿ ಇನ್ನೂ ಬೇರು ಉಳಿಸಿಕೊಂಡಿರುವ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅತಂತ್ರ ಸನ್ನಿವೇಶದ ಲಾಭ ಪಡೆಯಲು ಕಾಯುತ್ತಿರುವ “ಕಿಂಗ್ ಮೇಕರ್” ತಾನು ಅಂದುಕೊಂಡು ಕುಳಿತಿತ್ತು. ಅವರು ಇಡಿಯ ರಾಜ್ಯದ ಕಡೆ ಯಾವತ್ತೂ ಕಣ್ಣಿಟ್ಟಿಲ್ಲ. ಅವರ ತಂತ್ರಕ್ಕೆ ತಕ್ಕ 20-30 ಸೀಟುಗಳಷ್ಟೇ ಅವರ ಗುರಿ! ಈಗ ಅವರಿಗೆ ಅದೇ ಕೈಕೊಟ್ಟಿದೆ

ಕಾಂಗ್ರೆಸ್ ವಿಧಾನಸಭೆಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿದೆ. ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರಿಸಿದೆ. ಎಲ್ಲೆಲ್ಲಿ ಜನ ಸಂಕಟ ಅನುಭವಿಸಿದ್ದಾರೋ ಅಲ್ಲೆಲ್ಲ ಅವರು ಆಡಳಿತದ ವಿರುದ್ಧ ತಿರುಗಿಬಿದ್ದಿದ್ದಾರೆ. ಅಧಿಕಾರದ ಹಪಾಹಪಿಯ “ಪ್ಲಾನ್ ಬಿ” ಭ್ರೂಣಾವಸ್ಥೆಯಲ್ಲೇ ಮರಣವನ್ನಪ್ಪಿದೆ. ಕಾಂಗ್ರೆಸ್ಸಿನ ಈ ಜಯ, ಅವರ ಮುಂದಿನ ಲೋಕಸಭಾ ಚುನಾವಣೆಗಳ ರನ್‌ಅಪ್‌ಗೆ ದೇಶದಲ್ಲಿ ಹೊಸ ಹುಮ್ಮಸ್ಸು ನೀಡಲಿದೆ.

ಕರ್ನಾಟಕದ ಇಂದಿನ ಚುನಾವಣಾ ಫಲಿತಾಂಶಗಳು ಹೇಗೇ ಇದ್ದರೂ, ಹಣದ ಥೈಲಿಗಳ ಹಿಂದೆ ಹೊರಟಿರುವ ರಾಜಕೀಯ, ತನ್ನ ಮತದಾರರ ಜೊತೆಗಿನ ಬೇರು ಸಂಬಂಧಗಳನ್ನು ಕಳೆದುಕೊಂಡಿದೆ ಎಂಬದನ್ನು ಈ ಬಾರಿಯ ಚುನಾವಣೆ ಸ್ಪಷ್ಟವಾಗಿ ತೋರಿಸಿದೆ. ಚುನಾವಣೆ ಎಂದರೆ ದುಡ್ಡು ಎಂದು ನಂಬಿಕೊಂಡಿರುವ ರಾಜಕೀಯಸ್ಥರು, ಭಾರತದಲ್ಲಿ (ಕರ್ನಾಟಕದಲ್ಲೂ) 70% ಗಿಂತ ಹೆಚ್ಚು ಮಂದಿ ಮತದಾರರು ಇನ್ನೂ ಬಡವರು ಎಂಬುದನ್ನು ಮರೆಯುತ್ತಾರೆ. ಪ್ರತೀಬಾರಿ ಜನಾದೇಶ ನೀಡುವವರು ಈ ಬಡ ಬಹುಸಂಖ್ಯಾತರು. ಆಳುವವರು ಈ ಬಹುಸಂಖ್ಯಾತರನ್ನು ಮರೆತಾಗಲೆಲ್ಲ, ಈ ಬಾರಿಯ ಚುನಾವಣಾ ಪ್ರಚಾರದ ವೇಳೆ ಕಾಣಿಸಿಕೊಂಡಿದ್ದ “ವಿಸ್ಮೃತಿ” ಕಾಣಿಸಿಕೊಂಡಿದೆ.

ಈ ಬಾರಿಯ ಚುನಾವಣೆಯಲ್ಲಿ ನಿಸ್ಸಂದೇಹವಾಗಿ ಚುನಾವಣಾ ಸಂಗತಿ ಎಂದಿದ್ದದ್ದು “ಬೆಲೆ ಏರಿಕೆ”. ಗ್ರಾಮೀಣ ಭಾಗಗಳಲ್ಲಿ ಅನೌಪಚಾರಿಕ ವಲಯದ ಸಣ್ಣ ಉದ್ಯೋಗಸ್ಥರು, ಕೃಷಿಯಲ್ಲಿ ತೊಡಗಿಕೊಂಡಿರುವ ಸಣ್ಣ ರೈತರು, ಕೃಷಿ ಕೂಲಿ ಕಾರ್ಮಿಕರು ಇತ್ಯಾದಿ ವರ್ಗಗಳಲ್ಲಿ ಅವರ ಜೀವನ ನಿರ್ವಹಣೆಯ ಖರ್ಚುಗಳಲ್ಲಿ 40%ಗೂ ಮಿಕ್ಕಿ ಏರಿಕೆ ಆಗಿದೆ. ಆ ಬೆಲೆ ಏರಿಕೆಯ ಬಿಸಿ ನೇರವಾಗಿ ತಟ್ಟಿದ್ದು, ಅಂತಹ ಕುಟುಂಬಗಳಲ್ಲಿ ಮಿತವ್ಯಯದ ಸಾಧನೆಗಾಗಿ ಮನೆಯ ಆರ್ಥಿಕ ಸೂತ್ರವನ್ನು ಸಹಜವಾಗಿಯೇ ಹಿಡಿದಿರುವ ಮಹಿಳೆಗೆ. ಆಕೆಗೆ ಈ ಬಾರಿ ನಿಜಕ್ಕೂ ಬಿಸಿ ತಾಗಿದೆ. ಆಕೆಯ ನಿರ್ಧಾರಗಳೇ ರಾಜ್ಯದ ಇಂದಿನ ಫಲಿತಾಂಶದ ಬೇರು. ನಗರ ಪ್ರದೇಶಗಳಲ್ಲೂ ಮಧ್ಯಮ-ಮೇಲು ಮಧ್ಯಮ ವರ್ಗಗಳಲ್ಲಿ ಚುನಾವಣೆಯ ಸಂಗತಿ ಇದೇ ಆಗಿದ್ದರೂ, ಅವರು ಇನ್ನೊಂದು 40%ನ ಚುಂಗು ಹಿಡಿದು ಹೊರಟರು. ಅದು ಭ್ರಷ್ಟಾಚಾರದ ವಿಚಾರ. ಇವರಡೂ ಸಂಗತಿಗಳ ಬಿಸಿ ತಾಗದ ಮೇಲುಮದ್ಯಮ ವರ್ಗದ ಡ್ರಾಯಿಂಗ್‌ರೂಂಗಳವರಿರುವ ಕಡೆಗಳಲ್ಲಿ ಮಾತ್ರ ಮತಗಳು ನೇರ ಮೋದಿಯವರಿಗೆ ತಲುಪಿದವು!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್ ಚುನಾವಣೆಯ ಆರಂಭದಲ್ಲಿ ಬಡವರ ಆತಂಕದ ಸನ್ನಿವೇಶವನ್ನು ಚೆನ್ನಾಗಿ ಗ್ರಹಿಸಿಕೊಂಡಿತು. ಅದಕ್ಕನುಗುಣವಾಗಿ ಗ್ಯಾರಂಟಿಕಾರ್ಡುಗಳು ಮತ್ತು “40% ಸರ್ಕಾರ”ದ ವಿರೋಧಿ ಘೋಷಣೆ ಸರಿಯಾದ ಹಾದಿಯಲ್ಲಿಯೇ ಹೊರಟಿತು. ಇಷ್ಟಾದರೂ ಕಾಂಗ್ರೆಸ್ ತನ್ನ ಬೇರುಗಳನ್ನು ಖಚಿತವಾಗಿ ನಂಬಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ದುಡ್ಡು, ಜಾತಿಗಳ ಆಧಾರದಲ್ಲಿಯೇ ತನ್ನ ಚುನಾವಣಾ ತಂತ್ರಗಳನ್ನು ರೂಪಿಸಿದ್ದ ಕಾಂಗ್ರೆಸ್‌ಗೆ, ಚುನಾವಣೆ ಮುಗಿದ ಬಳಿಕ ತನ್ನ ಬೇರಿನ ಮೇಲೆಯೇ ಸ್ಪಷ್ಟ ನಂಬಿಕೆ ಇದ್ದಂತಿರಲಿಲ್ಲ. ಹಾಗಾಗಿ ಪ್ಲಾನ್ ಬಿ ಯ ಮಾತುಗಳು ಬಂದಾಗ, ಮಾಧ್ಯಮಗಳು “ಅತಂತ್ರ” ಸರ್ಕಾರ ಬರಲಿದೆ ಎಂದಾಗ ಕಾಂಗ್ರೆಸ್, ಆಡಳಿತ ವಿರೋಧಿ ಅಲೆಯ ಬೆನ್ನೇರಿ ನಿಂತರುವ ತನ್ನ ಆತ್ಮವಿಶ್ವಾಸವನ್ನು ತೋರಿಸಿಲ್ಲ. ಬಿಜೆಪಿ ಕಡೆಯಿಂದ ನಡೆದ ರೋಡ್ ಷೋದಂತಹ ಆರ್ಕೆಸ್ಟ್ರೇಟೆಡ್ ಪ್ರಯತ್ನಗಳು ಕಾಂಗ್ರೆಸ್‌ನ್ನ ಪ್ರಚಾರದ ಕೊನೆಯ ಸುತ್ತಿನಲ್ಲಿ ಆತಂಕಕ್ಕೀಡು ಮಾಡಿದ್ದು ಸುಳ್ಳಲ್ಲ. ತಳಮಟ್ಟದಲ್ಲಿ ಕೇಡರ್ ಆಧರಿತ ಪಕ್ಷವಲ್ಲದ ಕಾಂಗ್ರಸ್, ಸಹಜವಾಗಿಯೇ ತನ್ನ ಬೇರಿಲ್ಲದಿರುವ ಆತಂಕಗಳನ್ನು ಚುನಾವಣೆ ಮುಗಿದ ಬಳಿಕ, ಇಂದು ಮತ ಎಣಿಕೆಯ ತನಕವೂ ತೋರಿಸಿದ್ದು ಢಾಳಾಗಿ ಕಾಣಿಸಿತ್ತು. ಅದಕ್ಕಿಂದು ದೊರಕಿರುವುದು ಅದು ಊಹಿಸಿದ್ದಕ್ಕಿಂತ ದೊಡ್ಡ ಜಯ.

ಇದನ್ನು ಓದಿ ಕನಕಪುರ | 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಡಿ.ಕೆ ಶಿವಕುಮಾರ್

ಕೇಡರ್ ಆಧರಿತ ಪಕ್ಷವಾಗಿರುವ ಬಿಜೆಪಿಯದು ಕೂಡ ವಿಚಿತ್ರವಾದ ಬೇರಿಲ್ಲದ ಸ್ಥಿತಿ. ತನ್ನ ಸೋಷಿಯಲ್ ಮೀಡಿಯಾದ ಅಬ್ಬರ, ತನ್ನ ಕಟ್ಟಾ ಅಭಿಮಾನಿಗಳ ಗದ್ದಲಗಳನ್ನೇ ನೆಚ್ಚಿಕೊಂಡ ಬಿಜೆಪಿಗೆ ತನ್ನ ಮೂರೂವರೆ ವರ್ಷಗಳ ಆಡಳಿತದ ವೈಫಲ್ಯಗಳ ಅರಿವಾದದ್ದು ಚನಾವಣೆ ಎದುರು ಬಂದು ನಿಂತಾಗಲೇ! ಅವರ ಹಿರಿಯ ನಾಯಕರು ಮೊನ್ನೆ 31,000 ಬೂತ್‌ಗಳಲ್ಲಿ ಮುನ್ನಡೆಯ ಲೆಕ್ಕಾಚಾರ ಹೇಳಿದಾಗಲೇ, ಬಿಜೆಪಿ ಬೇರು ಮಟ್ಟದಲ್ಲಿ ಲೆಕ್ಕಾಚಾರಗಳಿಗೆ ಕಾಗದ ಪತ್ರಗಳನ್ನೇ ನೆಚ್ಚಿಕೊಂಡಿದ್ದದ್ದು, ಸ್ಪಷ್ಟವಾಗಿದೆ. ಕೊನೆಯ ಕ್ಷಣದಲ್ಲಿ ಗುಜರಾತ್ ಮಾದರಿಯಲ್ಲಿ ಅಭ್ಯರ್ಥಿಗಳನ್ನೇ ಬದಲಿಸುವ ತಂತ್ರಗಾರಿಕೆಗೆ ಇಳಿದ ಬಿಜೆಪಿ ಸೋತದ್ದು, ತನ್ನ ಪರ್ಯಾಯ ಅಭ್ಯರ್ಥಿಗಳ ಆಯ್ಕೆಯಲ್ಲಿ. ಜೊತೆಗೆ, ತನ್ನ ಸ್ಟಾರ್ ಅಭ್ಯರ್ಥಿಗಳ ಭವಿಷ್ಯವನ್ನು ಅದು ಅವರವರ ದುಡ್ಡಿನ ಥೈಲಿಯ ಗಾತ್ರಕ್ಕೆ ಬಿಟ್ಟಂತಿತ್ತು. ಆ ಬಳಿಕ ಅದು ಸರ್ವತ್ರ ಅವಲಂಬಿಸಿದ್ದು ತಮ್ಮ ಪಕ್ಷದ “ಸ್ಟಾರ್ ಪ್ರಚಾರಕ” ಪ್ರಧಾನಿ ನರೇಂದ್ರ ಮೋದಿ ಅವರನ್ನೇ. ಕಡೆಯ ಕ್ಷಣದ ತನಕವೂ ಬಿಜೆಪಿ ಬೇರುಮಟ್ಟದಲ್ಲಿರುವ ಜನರ ಸಂಕಟಗಳನ್ನು ನಿರಾಕರಿಸಿತು. ಜನ ಕೋವಿಡೋತ್ತರ ಆರ್ಥಿಕ ಸಂಕಟಗಳಿಂದ, ದುರಾಡಳಿತದಿಂದ ಬೆಂದು, ಅದರ ಮೇಲೆ ಬೆಲೆ ಏರಿಕೆಯ ಬರೆ ಹಾಕಿಸಿಕೊಂಡಿದ್ದಾರೆಂಬ “ಡಬಲ್ ಟ್ರಬಲ್”ನ್ನು ಅವರ “ಡಬಲ್ ಎಂಜಿನ್” ಅರ್ಥ ಮಾಡಿಕೊಳ್ಳಲೇ ಇಲ್ಲ. ಬದಲಾಗಿ ಮೋದಿ ಅಲೆ, ಹನುಮಾನ್ ಚಾಲೀಸಾಗಳನ್ನೇ ಆಶ್ರಯಿಸಿದರು. ಬಿಜೆಪಿಯ ನಿಲುಕು ತನ್ನ ಸಮರ್ಥಕ ಮಧ್ಯಮ ವರ್ಗದಿಂದ ಕೆಳಗೆ ಇಳಿಯಲೇ ಇಲ್ಲ. ಇದು ಈ ಬಾರಿಯ ಬಿಜೆಪಿಯ ದಯನೀಯ ಸ್ಥಿತಿಗೆ ಕಾರಣ.

ಬಹಳ ವೈರುಧ್ಯದ ಸಂಗತಿ ಎಂದರೆ, ರಾಜ್ಯದಲ್ಲಿ ಇನ್ನೂ ಬೇರು ಉಳಿಸಿಕೊಂಡಿರುವ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅತಂತ್ರ ಸನ್ನಿವೇಶದ ಲಾಭ ಪಡೆಯಲು ಕಾಯುತ್ತಿರುವ “ಕಿಂಗ್ ಮೇಕರ್” ತಾನು ಅಂದುಕೊಂಡು ಕುಳಿತಿತ್ತು. ಅವರು ಇಡಿಯ ರಾಜ್ಯದ ಕಡೆ ಯಾವತ್ತೂ ಕಣ್ಣಿಟ್ಟಿಲ್ಲ. ಅವರ ತಂತ್ರಕ್ಕೆ ತಕ್ಕ 20-30 ಸೀಟುಗಳಷ್ಟೇ ಅವರ ಗುರಿ! ಈಗ ಅವರಿಗೆ ಅದೇ ಕೈಕೊಟ್ಟಿದೆ.

ಇದನ್ನು ಓದಿ ಕರ್ನಾಟಕ ಚುನಾವಣೆ 2023 | ಅಹಂಕಾರಿಗಳಿಗೆ ಅಂಕುಶ ಹಾಕಿದ ಮತದಾರ

ಮೂರೂ ರಾಜಕೀಯ ಪಕ್ಷಗಳ ಈ ಬೇರು ಕಳೆದುಕೊಂಡ ರಾಜಕೀಯವು ಮತದಾರರ ದೃಷ್ಟಿಯಿಂದ ಬಹಳ ಅಪಾಯಕಾರಿ, ಮತದಾರರಿಗೆ ಚುನಾವಣೆಗಳೆಂದರೆ, ಶಾಸನಸಭೆಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ದಕೊಳ್ಳುವ, ಐದು ವರ್ಷಗಳಿಗೊಮ್ಮೆ ಸಿಗುವ ಅಪೂರ್ವ ಅವಕಾಶ. ಇಂತಹ ಸನ್ನಿವೇಶದಲ್ಲಿ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ತಮ್ಮ ಬೇರುಗಳ ಆಶಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳದಿದ್ದರೆ ರಾಜಕಾರಣ ಮತ್ತು ತಳದ ವಾಸ್ತವಗಳು ಬೇರೆ ಬೇರೆಯೇ ಹಾದಿಯಲ್ಲಿ ಸಾಗುವ ಮತ್ತು ಸಂಪೂರ್ಣವಾಗಿ ತಳ ತಪ್ಪುವ ಸಾಧ್ಯತೆಗಳೇ ಹೆಚ್ಚು. ಜನರ ನಡುವೆ ಪರ ವಿರೋಧದ ಅಲೆಗಳೆದ್ದಾಗ ಮೊದಲು ಗುರುತಿಸಬೇಕಾದವರೇ ರಾಜಕೀಯಸ್ಥರು. ಅವರ ನಲಕ್ಕೇ ಅವರು ಈ ಪ್ರಮಾಣದಲ್ಲಿ ಈ ಹಿಂದೆ ಎಂದೂ ಅಪರಿಚಿತರಾಗಿರಲಿಲ್ಲ. ಈಗ ಬಂದಿರುವ ಚುನಾವಣೆ ಫಲಿತಾಂಶಗಳು ಅವರ ಆ ಎಚ್ಚರವನ್ನು ಹೆಚ್ಚಿಸಲಿ.

ರಾಜಾರಾಂ ತಲ್ಲೂರು
+ posts

ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕರು

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಕ್ರೀದ್ ಹಬ್ಬ | ಹಜ್ಜ್‌ಗೆ ತೆರಳುವ ಮುಸಲ್ಮಾನ ‘ಹಾಜಿ’ಯಾಗುತ್ತಾನೆ; ಹಾಜಿ ಹೇಗಿರಬೇಕು?

ಜೂನ್ 17ರ ಸೋಮವಾರ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಅಝ್‌ಹಾ...

ನಟ ದರ್ಶನ್‌ ಅಂಧಾಭಿಮಾನಿಗಳು ಕೊಡುತ್ತಿರುವ ಸಂದೇಶವೇನು?

ಕೊಲೆ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಲನಚಿತ್ರ ನಟ ದರ್ಶನ್‌ ತೂಗುದೀಪ ಅವರ...

ಅಮಿತ್ ಮಾಳವೀಯ ಎಂಬ ಸ್ತ್ರೀಪೀಡಕನೂ, ಬಿಜೆಪಿಯ ಬೇಟಿ ಬಚಾವೋ ಎಂಬ ಘೋಷಣೆಯೂ…

ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್‌ ಮಾಳವೀಯ ಪಶ್ಚಿಮ ಬಂಗಾಳದ...