ಗ್ಯಾರಂಟಿ ಯೋಜನೆ | ನಿರ್ವಹಣೆಯಲ್ಲಿ ಶಿಸ್ತು, ಸಂಪತ್ತಿನ ಸೋರಿಕೆ ತಡೆಯುವುದು ಅಗತ್ಯ

Date:

ಕರ್ನಾಟಕವನ್ನು ಪ್ರತಿನಿಧಿಸುವ ಒಕ್ಕೂಟ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗ ಮಾಡಿದ್ದ ವಿಶೇಷ ಅನುದಾನವನ್ನು ನೀಡದೆ ತಿರಸ್ಕರಿಸಿದರು. ಇದನ್ನು ಈಗಲೂ ಒತ್ತಾಯ ಮಾಡಿ ಪಡೆದುಕೊಂಡರೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಬಳಸಿಕೊಳ್ಳಬಹುದು. ಹೀಗೆ ಸಂಪನ್ಮೂಲಗಳನ್ನು ಗ್ಯಾರಂಟಿಗಳಿಗೆ ಸಂಘಟಿಸಿಕೊಳ್ಳುವುದು ಸಾಧ್ಯ. ಈ ಬಗ್ಗೆ ರಾಜ್ಯ ಸರ್ಕಾರ ತೀವ್ರ ಗಮನ ನೀಡಬೇಕು

ಕರ್ನಾಟಕ ವಿಧಾನಸಭೆಗೆ 2023ರ ಮೇ 10 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಮತದಾರರಿಗೆ ಐದು ಗ್ಯಾರಂಟಿಗಳನ್ನು ನೀಡಿತ್ತು. ಪ್ರತಿ ಮನೆಯೊಡತಿಗೆ ಮಾಸಿಕ ರೂ.2000(ಗೃಹಲಕ್ಷ್ಮಿ), ಪ್ರತಿ ಮನೆಗೆ 200 ಯುನಿಟ್‍ಗಳ ಉಚಿತ ವಿದ್ಯುತ್(ಗೃಹಜ್ಯೋತಿ), ಪ್ರತಿ ವ್ಯಕ್ತಿಗೆ 10 ಕಿ ಜಿ ಅಕ್ಕಿ ಉಚಿತ(ಅನ್ನಭಾಗ್ಯ), ನಿರುದ್ಯೋಗ ಭತ್ಯೆ(ಯುವನಿಧಿ) ಮತ್ತು ಮಹಿಳೆಯರಿಗೆ ಉಚಿತ ಸಾರಿಗೆ(ಶಕ್ತಿ). ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದು ಸರ್ಕಾರವನ್ನು ರಚಿಸಿದೆ. ಈಗ ಗ್ಯಾರಂಟಿಗಳ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವವಾಗಿವೆ.

  1. ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಟೀಕೆ ಮಾಡುವ ನೈತಿಕ ಅಧಿಕಾರ ಬಿಜೆಪಿಗಿದೆಯೇ?
  2. ಗ್ಯಾರಂಟಿಗಳು ಸಾರ್ವತ್ರಿಕವೋ ಅಥವಾ ಬಿಪಿಎಲ್ ಕಾರ್ಡ್‍ದಾರರಿಗೆ ಮಾತ್ರವೋ?(ಸಕಾರಾತ್ಮಕ ತಾರತಮ್ಯ)
  3. ಗ್ಯಾರಂಟಿಗಳನ್ನು ಶಿಸ್ತುಬದ್ಧವಾಗಿ, ಸೋರಿಕೆಯಿಲ್ಲದಂತೆ ಅನುಷ್ಠಾನಗೊಳಿಸಲು ಆಡಳಿತ ವ್ಯವಸ್ಥೆ ಸಿದ್ಧವಾಗಿದೆಯೇ? ಕಾಂಗ್ರೆಸ್ ಪಕ್ಷ ಇದರ ಬಗ್ಗೆ ಯೋಚಿಸಿದೆಯೇ?
  4. ಇವುಗಳ ಅನುಷ್ಠಾನಕ್ಕೆ ಹಣಕಾಸನ್ನು ಹೇಗೆ ಸಂಘಟಿಸಿಕೊಳ್ಳಲಾಗುತ್ತದೆ? ರಾಜ್ಯ ಬಜೆಟ್ಟಿನ ಶೇ. 15 ರಿಂದ ಶೇ. 16 ರಷ್ಟು ಇದಕ್ಕೆ ಅಗತ್ಯವಾದರೆ(ರೂ,52000 ಕೋಟಿ) ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೊಡೆತ ಬೀಳುವುದಿಲ್ಲವೇ?
  5. ಸಾಲ ಮಾಡಿ ಗ್ಯಾರಂಟಿಗಳಿಗೆ ಹಣವನ್ನು ಹೊಂದಿಸಲಾಗುತ್ತದೆಯೇ?
    ಈ ಪ್ರಶ್ನೆಗಳಿಗ ಉತ್ತರ ಕಂಡುಕೊಂಡರೆ ಗ್ಯಾರಂಟಿಗಳ ಬಗ್ಗೆ ಉಂಟಾಗಿರುವ ಅನೇಕ ಗೊಂದಲಗಳು ಬಗೆಹರಿಯುತ್ತವೆ.

    ಮೊದಲನೆಯದಾಗಿ ಗ್ಯಾರಂಟಿಗಳ ಬಗ್ಗೆ ವಿರೋಧ ಪಕ್ಷಗಳು ಇಲ್ಲಸಲ್ಲದ ಪ್ರಶ್ನೆಗಳನ್ನು ಎತ್ತುತ್ತಿವೆ. ಮಾಧ್ಯಮಗಳಂತೂ ಬಿಜೆಪಿ ಹೇಳಿಕೊಟ್ಟದ್ದನ್ನು ಗಿಳಿಪಾಠದಂತೆ ಒಪ್ಪಿಸುತ್ತಿವೆ. ಗ್ಯಾರಂಟಿಗಳನ್ನು ಬಿಟ್ಟರೆ ಹೊಸ ಸರ್ಕಾರದ ಮುಂದಿರುವ ಅಭಿವೃದ್ಧಿಯ ಸವಾಲುಗಳ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿಲ್ಲ. ಹಣ ಎಲ್ಲಿಂದ ತರುತ್ತೀರಾ? ಸಾಲ ಮಾಡುತ್ತೀರಾ? ಗ್ಯಾರಂಟಿಗಳನ್ನು ನಿಜಕ್ಕೂ ಜಾರಿಗೆ ತರುತ್ತೀರಾ? –ಮುಂತಾದ ಪ್ರಶ್ನೆಗಳನ್ನು ಅವು ಕೇಳುತ್ತಿವೆ. ಪ್ರಶ್ನೆ ಕೇಳುವುದು ಬಿಜೆಪಿ ಸಂಸ್ಕೃತಿಯಲ್ಲ. ಅಲ್ಲಿ ತಲೆಬಾಗುವುದಷ್ಟೇ ಕಾರ್ಯಕರ್ತರ ಕೆಲಸ. ಉದಾ: ಸಂಘದ ಸದಸ್ಯರಾದ ಮೇಲೆ ಅವರಿಗೆ ಆಯ್ಕೆಯ ಪ್ರಶ್ನೆಯಿಲ್ಲ ಮತ್ತು ಅವರಿಗೆ ವಿವೇಚನಾಶಕ್ತಿಯ ಅಗತ್ಯವಿಲ್ಲ ಎಂದು ಆರ್‌ಎಸ್‍ಎಸ್‍ನ ಎಂ. ಎಸ್. ಗೋಳ್ವಾಲ್ಕರ್ ಆದೇಶ ಹೊರಡಿಸಿದ್ದಾರೆ (ನೋಡಿ: ದೇವನೂರ ಮಹಾದೇವ, ಆರ್‌ಎಸ್‍ಎಸ್: ಆಳ-ಅಗಲ). ಇವರ ಬಾಯಿ ಮುಚ್ಚಿಸಲು ‘ಮೊದಲು ಪ್ರತಿಯೊಬ್ಬರ ಖಾತೆಗೆ ರೂ.15 ಲಕ್ಷ ಜಮೆ ಮಾಡಿ ನಂತರ ಗ್ಯಾರಂಟಿಗಳ ಬಗ್ಗೆ ಮಾತನಾಡಿ’ ಎಂದು ಹೇಳಿದರೆ ಸಾಕು.

    ಎರಡನೆಯದಾಗಿ ಗ್ಯಾರಂಟಿಗಳು ಸಾರ್ವತ್ರಿಕವೋ(ಎಲ್ಲರಿಗೂ) ಅಥವಾ ಬಿಪಿಎಲ್ ಕುಟುಂಬಗಳಿಗೆ ಮಾತ್ರವೋ ಎಂಬುದನ್ನು ಕಾಂಗ್ರೆಸ್ ಇನ್ನೂ ಸ್ಪಷ್ಟಪಡಸಿಲ್ಲ. ಸಾಮಾನ್ಯವಾಗಿ ಕಲ್ಯಾಣ ಕಾರ್ಯಕ್ರಮಗಳಿಗೆ ‘ಸಕಾರಾತ್ಮಕ ತಾರತಮ್ಯ’ ನೀತಿಯನ್ನು ಪಾಲಿಸುವುದು ರೂಢಿಯಲ್ಲಿದೆ. ಚುನಾವಣಾ ಪ್ರಚಾರದ ಬರದಲ್ಲಿ ಕಾಂಗ್ರೆಸ್ ನಾಯಕರು ಗ್ಯಾರಂಟಿ ‘ಎಲ್ಲರಿಗೂ’ ಎಂದು ಹೇಳಿರಬಹುದು. ಗ್ಯಾರಂಟಿಗಳನ್ನು ಎಲ್ಲರಿಗೂ ನೀಡುವುದು ಸಮರ್ಥನೀಯವಲ್ಲ. ಗ್ಯಾರಂಟಿಗಳನ್ನು ಸಮಾಜದಲ್ಲಿನ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವ ಸಾಧನವಾಗಿ ಬಳಸಬೇಕು. ಆದ್ದರಿಂದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವಾಗ ಅವನ್ನು ಬಿಪಿಎಲ್ ಕಾರ್ಡುದಾರರಿಗೆ ಸೀಮಿತಗೊಳಿಸುವುದು ಅತ್ಯಂತ ಅಗತ್ಯ. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ಮಾಡುತ್ತಿಲ್ಲ. ಉದಾ: ಮಹಿಳೆಯರಿಗೆ ಉಚಿತ ಸಾರಿಗೆ ಎನ್ನುವುದನ್ನು ಎಲ್ಲರಿಗೂ ಎಂಬ ಆದೇಶ ಹೊರಡಿಸಿದೆ.

    ಮೂರನೆಯದಾಗಿ ಗ್ಯಾರಂಟಿಯಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಮರ್ಥ ಆಡಳಿತ ವ್ಯವಸ್ಥೆಯ ಅಗತ್ಯವಿದೆ. ನಮ್ಮ ರಾಜ್ಯದಲ್ಲಿನ ಮುಖ್ಯ ಸಮಸ್ಯೆ ಇದಾಗಿದೆ. ಆಡಳಿತ ವ್ಯವಸ್ಥೆಯನ್ನು ಹಾಳುಗೆಡವಲಾಗಿದೆ. ಗ್ಯಾರಂಟಿಗಳ ನಿರ್ವಹಣೆಯಲ್ಲಿ ಶಿಸ್ತನ್ನು ಪಾಲಿಸದಿದ್ದರೆ ಅಲ್ಲಿ ತೀವ್ರ ರೀತಿಯ ಸೋರಿಕೆ ಉಂಟಾಗುತ್ತದೆ. ಆಗ ಉದ್ದೇಶಿತ ಗುರಿಯನ್ನು ಸಾಧಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಗ್ಯಾರಂಟಿಗಳ ಅನುಷ್ಠಾನಕ್ಕೆ ವಿಶೇಷ ಆಡಳಿತ ವ್ಯವಸ್ಥೆಯನ್ನು, ಅದರ ಮೇಲುಸ್ತುವಾರಿಗೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸರ್ಕಾರ ತೀವ್ರ ಗಮನ ನೀಡಬೇಕು. ಗ್ಯಾರಂಟಿಗಳ ಅನುಷ್ಠಾನದಿಂದ ಕಾಂಗ್ರೆಸ್ ರಾಜಕೀಯ ಲಾಭ ಪಡೆಯಬೇಕು ಎಂದಾದರೆ ಅದರ ನಿರ್ವಹಣೆ-ಮೇಲುಸ್ತುವಾರಿಗಳನ್ನು ಬಲಪಡಿಸಬೇಕು. ಸೋರಿಕೆಗಳ ಕಾರಣರಾದವರ ಮೇಲೆ ಕಠಿಣ ಶಿಕ್ಷೆ ವಿಧಿಸುವ ಕ್ರಮಗಳನ್ನು ಜಾರಿಗೊಳಿಸಬೇಕು.

    ನಾಲ್ಕನೆಯದಾಗಿ ಗ್ಯಾರಂಟಿಗಳನ್ನು ಕುರಿತ ಮಹತ್ವದ ಪ್ರಶ್ನೆ ಎಂದರೆ ಅವುಗಳ ಅನುಷ್ಠಾನಕ್ಕೆ ಹಣಕಾಸನ್ನು ಎಲ್ಲಿಂದ ತರಲಾಗುತ್ತದೆ ಎಂಬುದಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳು ಹಾಗೂ ಗಿಣಿಪಾಠದ ಮಾಧ್ಯಮಗಳು ಇಲ್ಲಸಲ್ಲದ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ಇದಕ್ಕೆ ಎರಡು ಉತ್ತರ ಸಾಧ್ಯ.

    (ಅ). ಕರ್ನಾಟಕ ಬಡ ರಾಜ್ಯವಲ್ಲ. ಇದರ 2020-21ರಲ್ಲಿ ಗುಜರಾತ್ ರಾಜ್ಯದ ಜಿಎಸ್‍ಡಿಪಿಯು ರೂ.14.59 ಲಕ್ಷ ಕೋಟಿಯಿತ್ತು. ಉತ್ತರ ಪ್ರದೇಶದ್ದು ರೂ.14.25 ಲಕ್ಷ ಕೋಟಿಯಿತ್ತು. ಇವೆರಡೂ ರಾಜ್ಯಗಳ ‘ಅಭಿವೃದ್ದಿ ಮಾದರಿ’ಯನ್ನು ಒಕ್ಕೂಟ ಸರ್ಕಾರ ಇತರೆ ರಾಜ್ಯಗಳಿಗೆ ಶಿಫಾರಸ್ಸು ಮಾಡುತ್ತಿದೆ. ಅವು ಪೊಳ್ಳು ಮಾದರಿ ಎಂಬುದು ಇಂದು ಸಿದ್ಧವಾಗಿದೆ. ಈ ಎರಡು ರಾಜ್ಯಗಳ ಜಿಎಸ್‍ಡಿಪಿಗಿಂತ ನಮ್ಮ ರಾಜ್ಯದ ಜಿಎಸ್‍ಡಿಪಿ ರೂ.15.75 ಲಕ್ಷ ಕೋಟಿ ಅಧಿಕವಾಗಿದೆ. ಆದ್ದರಿಂದ ದುಸ್ಥಿತಿಯಲ್ಲಿನ ಸಮುದಾಯಗಳಿಗೆ ಗ್ಯಾರಂಟಿಗಳ ಮೂಲಕ ನೆರವು ನೀಡುವುದು ರಾಜ್ಯಕ್ಕೆ ಕಷ್ಟವಾಗಬಾರದು. ಗ್ಯಾರಂಟಿಗಳ ಅಂದಾಜು ವೆಚ್ಚ ರೂ.52000 ಕೋಟಿ ಎಂದುಕೊಂಡರೆ ಇದು ರಾಜ್ಯದ 2023-24ರ ಅಂದಾಜು ಜಿಎಸ್‍ಡಿಪಿಯ(ರೂ.23.34 ಲಕ್ಷ ಕೋಟಿ) ಶೇ. 2.2 ರಷ್ಟಾಗುತ್ತದೆ. ಕೂಲಿಕಾರರ, ಕಾರ್ಮಿಕರ, ಅತಿಸಣ್ಣ-ಸಣ್ಣ ರೈತರ, ಸಣ್ಣ-ಪುಟ್ಟ ವ್ಯಾಪಾರ ಮಾಡುವವರ ಬದುಕನ್ನು ಉತ್ತಮಪಡಿಸಲು ಇಷ್ಟು ಸಂಪನ್ಮೂಲ ನೀಡುವುದು ಏಕೆ ಕಷ್ಟವಾಗಬೇಕು?

    ಹಿಂದಿನ ಸರ್ಕಾರ ಗುಡಿ ಕಟ್ಟುವುದನ್ನು ತನ್ನ ಜವಾಬ್ದಾರಿಯನ್ನಾಗಿ ಮಾಡಿಕೊಂಡಿತ್ತು. ಕಾಶಿ ಯಾತ್ರೆಗೆ ಅನುದಾನ, ಮಠಗಳಿಗೆ, ಸ್ವಾಮಿಗಳಿಗೆ ಯೋಗಿಗಳಿಗೆ ಸಾವಿರಾರು ಕೋಟಿ ಅನುದಾನ ನೀಡುತ್ತಿತ್ತು. ಹತ್ತಾರು ನಿಗಮ-ಮಂಡಳಿಗಳಿಗೂ ಸಹ ನೀಡಲಾಗುತ್ತಿತ್ತು. ಸರಿಯಿರುವ ರಸ್ತೆಗಳನ್ನು ಕಿತ್ತು ಹೊಸದನ್ನು (ಕಮೀಷನ್ ಆಸೆಗೆ) ಮಾಡುವುದು ನಡೆದಿತ್ತು. ಈ ಬಗೆಯ ಕಾಮಗಾರಿಗಳ ಮೇಲಿನ ಸಾವಿರಾರು ಕೋಟಿ ಅನವಶ್ಯಕ ವೆಚ್ಚವನ್ನು ಉಳಿಸಿದರೆ ಅದನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳಬಹುದು. ಅಭಿವೃದ್ಧಿ ನಿಗಮಗಳು ಬಿಳಿ ಆನೆಗಳು ಮಾತ್ರವಲ್ಲ ಅವು ಉದ್ದೇಶಿತ ಗುರಿಯನ್ನು ಸಾಧಿಸುತ್ತಿಲ್ಲ. ಅವು ಅತೃಪ್ತ ರಾಜಕಾರಣಿಗಳ ತಂಗುದಾಣಗಳಾಗುತ್ತಿವೆ. ಈ ಬಗೆಯ ಉಳಿತಾಯ ಸಾಧ್ಯವಾದರೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಪನ್ಮೂಲದ ಕೊರತೆಯಾಗಲಾರದು. ಅನವಶ್ಯಕ ಮೂಲಸೌಲಭ್ಯ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬಹುದು. ಉತ್ಸವಗಳು, ಸಂಭ್ರಮಾಚರಣೆಗಳು, ಅದ್ದೂರಿ ಉದ್ಘಾಟನಾ ಸಮಾರಂಭಗಳು ಮುಂತಾದವುಗಳನ್ನು ತಡೆಯಬಹುದು. ಸರ್ಕಾರವು ಅನೇಕ ರೀತಿಯಲ್ಲಿ ಸಂಪನ್ಮೂಲವನ್ನು ಉಳಿತಾಯ ಮಾಡಬಹುದು.
    ತೆರಿಗೆ ಸಂಗ್ರಹವನ್ನು ಸಮರ್ಪಕವಾಗಿ ಮಾಡುವ ಅಗತ್ಯವಿದೆ. ಎಲ್ಲಿ ಸಾಧ್ಯವಾಗುತ್ತದೊ ಅಲ್ಲಿ ತೆರಿಗೆ ದರಗಳನ್ನು ಹೆಚ್ಚಿಸಬಹುದು. ಅಬಕಾರಿ ಸುಂಕವನ್ನು ತೀವ್ರಮಟ್ಟಕ್ಕೆ ಏರಿಸಬಹುದು. ರಾಜ್ಯದ ಖನಿಜ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಹೆಚ್ಚು ಸೋರಿಕೆಯಿದೆ. ಗಣಿ ಕಂಪನಿಗಳಿಂದ ಬರಬೇಕಾದ ಶುಲ್ಕ, ದಂಡ, ಪರಿಹಾರ ಮುಂತಾದವುಗಳ ಸಂಗ್ರಹ ಸರಿಯಾಗಿ ನಡೆಯುತ್ತಿಲ್ಲ.

    ಇದನ್ನು ಓದಿ ಉಚಿತ ಯೋಜನೆ | ಇಲ್ಲಿ ಯಾರು ಯಾರಿಂದ ನಿಜವಾಗಿಯೂ ಉಪಕೃತರಾಗುತ್ತಿದ್ದಾರೆ?

    (ಆ) ಸ್ವಂತ ಸಂಪನ್ಮೂಲವನ್ನು ಉಳಿತಾಯದ ಮೂಲಕ, ಸಂಗ್ರಹವನ್ನು ಬಿಗಿಗೊಳಿಸುವುದರ ಮೂಲಕ, ಸೋರಿಕೆಯನ್ನು ತಡೆಯುವುದರ ಮೂಲಕ ಸಂಪನ್ಮೂಲ ಸಂಗ್ರಹಿಸಿಕೊಳ್ಳಬಹುದು. ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಡಿತ ಮಾಡದೆ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಬಹುದು. ಇದಕ್ಕಿಂತ ಮುಖ್ಯವಾಗಿ ರಾಜ್ಯಕ್ಕೆ ಒಕ್ಕೂಟ ಸರ್ಕಾರದಿಂದ ಸಂಪನ್ಮೂಲ ವರ್ಗಾವಣೆಯಲ್ಲಿ ತೀವ್ರ ಅನ್ಯಾಯವಾಗುತ್ತಿದೆ. ನ್ಯಾಯಬದ್ಧವಾಗಿ ರಾಜ್ಯಕ್ಕೆ ಬರಬೇಕಾದ ಸಂಪನ್ಮೂಲವನ್ನು ಒಕ್ಕೂಟ ಸರ್ಕಾರ ವರ್ಗಾಯಿಸುತ್ತಿಲ್ಲ.

    ಹಣಕಾಸು ಆಯೋಗಗಳ ಶಿಪಾರಸ್ಸಿನ ಪ್ರಕಾರ ಒಕ್ಕೂಟ ಸರ್ಕಾರ ತನ್ನ ಒಟ್ಟು ತೆರಿಗೆ ರಾಶಿಯಲ್ಲಿ ಶೇ. 41ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಬೇಕು. ವಾಸ್ತವವಾಗಿ ಅದು ವರ್ಗಾಯಿಸುತ್ತಿರುವ ಪ್ರಮಾಣ ಶೇ.30 ರ ಆಸುಪಾಸಿನಲ್ಲಿದೆ. ಉದಾ: 2023-24ರಲ್ಲಿ ಒಕ್ಕೂಟ ಸರ್ಕಾರದ ಒಟ್ಟು ತೆರಿಗೆ ರಾಶಿ ರೂ.33.60 ಲಕ್ಷ ಕೋಟಿ. ಇದರಲ್ಲಿ ಶೇ. 41 ರಷ್ಟನ್ನು ರಾಜ್ಯಗಳಿಗೆ ಹಂಚಬೇಕು. ಪ್ರಸ್ತುತ ಸಾಲಿನಲ್ಲಿ ಹಂಚಿರುವ ಮೊತ್ತ ರೂ.10.21 ಲಕ್ಷ ಕೋಟಿ. ವರ್ಗಾಯಿಸಬೇಕಾದುದು ರೂ.13.78 ಲಕ್ಷ ಕೋಟಿ. ರಾಜ್ಯಗಳಿಗಾದ ನಷ್ಟ ರೂ.3.56 ಲಕ್ಷ ಕೋಟಿ. ಇದನ್ನು ಸರಿಪಡಿಸಿದರೆ ರಾಜ್ಯಕ್ಕೆ ಹೆಚ್ಚಿನ ವರ್ಗಾವಣೆ ದೊರೆಯುತ್ತದೆ.

    ರಾಜ್ಯದ ಬಜೆಟ್ಟಿಗೆ ಒಕ್ಕೂಟ ಸರ್ಕಾರವು ವಾರ್ಷಿಕ ಎರಡು ರೀತಿಯಲ್ಲಿ ಹಣಕಾಸು ನೆರವನ್ನು ನೀಡುತ್ತದೆ. ಮೊದಲನೆಯದು ತೆರಿಗೆ ರಾಶಿಯಲ್ಲಿ ಪಾಲು. ಎರಡನೆಯದು ಗ್ರಾಂಟ್ ಇನ್ ಐಡ್. ಈ ಬಾಬ್ತು ಒಕ್ಕೂಟ ನ್ಯಾಯಬದ್ಧವಾಗಿ ಹಣಕಾಸನ್ನು ವರ್ಗಾವಣೆ ಮಾಡುತ್ತಿಲ್ಲ.

    ಉದಾ: 2018-19ರಲ್ಲಿ ಒಕ್ಕೂಟ ಎರಡೂ ಬಾಬ್ತು ರಾಜ್ಯಕ್ಕೆ ವರ್ಗಾವಣೆ ಮಾಡಿ ಮೊತ್ತ ರೂ.50621 ಕೋಟಿ. ಇದು ಆ ವರ್ಷ ರಾಜ್ಯದ ಒಟ್ಟು ರೆವಿನ್ಯೂ ಸ್ವೀಕೃತಿಯಲ್ಲಿ ಶೇ.30.69 ರಷ್ಟಿತ್ತು. ಮುಂದೆ 2023-24ರಲ್ಲಿ ವರ್ಗಾವಣೆ ಮಾಡುತ್ತಿರುವ ಮೊತ್ತ ರೂ.50257 ಕೋಟಿ. ಕಳೆದ ಆರು ವರ್ಷಗಳಲ್ಲಿ ವರ್ಗಾವಣೆಯಲ್ಲಿ ಏರಿಕೆಯಾಗುವುದಕ್ಕೆ ಪ್ರತಿಯಾಗಿ ಶೇ.(-)0.72 ರಷ್ಟು ಕಡಿತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ 2018-19ರಲ್ಲಿನ ವರ್ಗಾವಣೆಯು ಆ ವರ್ಷದ ರಾಜ್ಯದ ಒಟ್ಟು ರೆವಿನ್ಯೂ ಸ್ವೀಕೃತಿಯಲ್ಲಿ ಶೇ. 30.69 ರಷ್ಟಿದ್ದುದು 2023-24ರಲ್ಲಿ ಇದು ಶೇ. 22.25ಕ್ಕಿಳಿದಿದೆ. ಮತ್ತೆ 15ನೆಯ ಹಣಕಾಸು ಆಯೋಗವು 2020-21ನೆಯ ಸಾಲಿಗೆ ರಾಜ್ಯಕ್ಕೆ ವಿಶೇಷ ಅನುದಾನ ರೂ.5495 ಕೋಟಿಯನ್ನು ಶಿಫಾರಸ್ಸು ಮಾಡಿತ್ತು. ಕರ್ನಾಟಕವನ್ನು ಪ್ರತಿನಿಧಿಸುವ ಒಕ್ಕೂಟ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗ ಮಾಡಿದ್ದ ವಿಶೇಷ ಅನುದಾನವನ್ನು ನೀಡದೆ ತಿರಸ್ಕರಿಸಿದರು. ಇದನ್ನು ಈಗಲೂ ಒತ್ತಾಯ ಮಾಡಿ ಪಡೆದುಕೊಂಡರೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಬಳಸಿಕೊಳ್ಳಬಹುದು.

    ಇದನ್ನು ಓದಿ ಹರಿದ್ವಾರದಲ್ಲಿ ಚಾರಿತ್ರಿಕ ಪ್ರತಿಭಟನೆ; ಕುಸ್ತಿಪಟುಗಳು ಪದಕ ನದಿಗೆಸೆಯುವುದ ತಡೆದ ರೈತ ನಾಯಕ

    ಹೀಗೆ ಸಂಪನ್ಮೂಲಗಳನ್ನು ಗ್ಯಾರಂಟಿಗಳಿಗೆ ಸಂಘಟಿಸಿಕೊಳ್ಳುವುದು ಸಾಧ್ಯ. ಈ ಬಗ್ಗೆ ರಾಜ್ಯ ಸರ್ಕಾರ ತೀವ್ರ ಗಮನ ನೀಡಬೇಕು. ತನ್ನ ಸೊಂಟದ ಬೆಲ್ಟನ್ನು ಬಿಗಿಗೊಳಿಸಿಕೊಳ್ಳಬೇಕು. ಮಂತ್ರಿ ಮಂಡಳದ ಎಲ್ಲ ಸದಸ್ಯರೂ ಈ ಬಗ್ಗೆ ಜಾಗೃತರಾಗಿ ಕೆಲಸ ಮಾಡಬೇಕು. ಇದು ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಕೆಲಸ ಮಾತ್ರವಲ್ಲ.

    ಗ್ಯಾರಂಟಿಗಳಿಗಾಗಿ ಸಾಲ
    ಒಕ್ಕೂಟ ಸರ್ಕಾರದ ಮಂತ್ರಿ ರಾಜೀವ್ ಚಂದ್ರಶೇಖರ್ ಅವರು ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ `ಗ್ಯಾರಂಟಿಗಳಿಗಾಗಿ ಕರ್ನಾಟಕ ಸರ್ಕಾರ ಸಾಲದ ಮೊರೆ ಹೋಗಿ ಭವಿಷ್ಯದ ತಲೆಮಾರಿನ ಮೇಲೆ ಸಾಲದ ಹೊರೆ ಹೊರಿಸುತ್ತದೆ’ ಎಂದು ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದ್ದಾರೆ.

    ನಮ್ಮ ಪ್ರಶ್ನೆ: ಅವರ ಸರ್ಕಾರ ಏನು ಮಾಡುತ್ತಿದೆ? ಗ್ಯಾರಂಟಿಗಳಿಲ್ಲದಿದ್ದರೂ ಒಕ್ಕೂಟ ಸರ್ಕಾರ ಸಾಲ 2013-14 ರಲ್ಲಿ ರೂ.56.69 ಲಕ್ಷ ಕೋಟಿಯಿದ್ದುದು 2023-24ರಲ್ಲಿ ರೂ.169.46 ಲಕ್ಷ ಕೋಟಿಯಾಗಿದೆ. ಒಕ್ಕೂಟದ ಸಾಲವು 2023-24ರ ಜಿಡಿಪಿಯ ಶೇ.56.15 ರಷ್ಟಾಗುತ್ತದೆ. ಆದರೆ ಕರ್ನಾಟಕದ 2023-24ರ ಸಾಲ ರೂ.5.64 ಲಕ್ಷ ಕೋಟಿ. ಇದು ರಾಜ್ಯದ ಜಿಎಸ್‍ಡಿಪಿಯ ಶೇ. 24.20 ರಷ್ಟಾಗುತ್ತದೆ. ಇಲ್ಲಿ ಯಾರು ಸಾಲ ಮಾಡಿ ಹೆಚ್ಚು ತುಪ್ಪ ತಿನ್ನುತ್ತಿದ್ದಾರೆ?

    ರಾಜೀವ್ ಚಂದ್ರಶೇಖರ್ ಅವರು ತಮ್ಮ ಸರ್ಕಾರದ ಸಾಲ ವ್ಯವಹಾರದ ದುಸ್ಥಿತಿಯನ್ನು ಮರೆಮಾಚಿ ಕರ್ನಾಟಕದ ಬಗ್ಗೆ ಟೀಕೆ ಮಾಡುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಒಕ್ಕೂಟ ಸರ್ಕಾರವು ರಾಜ್ಯಗಳ ಸಾಲ ಎತ್ತುವುದರ ಮೇಲೆ ಜಿಎಸ್‍ಡಿಪಿ ಶೇ. 25 ರ ಮಿತಿ ಹೇರಿದೆ. ರಾಜ್ಯವು ಸಾಲವನ್ನು ಹೆಚ್ಚು ಎತ್ತಬೇಕೆಂದರೆ ಈಗ ಬಜೆಟ್ಟಿನ ಗಾತ್ರವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದು ಒಂದು ವಿತ್ತೀಯ ಕ್ರಮ. ಇದರಲ್ಲಿ ಯಾವುದೂ ಆತಂಕಕಾರಿಯಾದುದೇನಿಲ್ಲ.
ಟಿ ಆರ್ ಚಂದ್ರಶೇಖರ
+ posts

ವಿಶ್ರಾಂತ ಪ್ರಾಧ್ಯಾಪಕ, ಲೇಖಕರು

ಪೋಸ್ಟ್ ಹಂಚಿಕೊಳ್ಳಿ:

ಟಿ ಆರ್ ಚಂದ್ರಶೇಖರ
ಟಿ ಆರ್ ಚಂದ್ರಶೇಖರ
ವಿಶ್ರಾಂತ ಪ್ರಾಧ್ಯಾಪಕ, ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ)...