ಜೆಡಿಎಸ್ – ಬಿಜೆಪಿ ಮೈತ್ರಿ ಬಗ್ಗೆ ಆಶ್ಚರ್ಯ ಪಡುವಂಥದ್ದೇನಿಲ್ಲ. ಎಚ್ ಡಿ ಕುಮಾರಸ್ವಾಮಿ ಅವರು 2006 ರಲ್ಲಿ ಕಾಂಗ್ರೆಸ್ ನಂಟು ಕಳಚಿಕೊಂಡು ಕೋಮುವಾದಿ ಬಿಜೆಪಿ ಜೊತೆ ಸರ್ಕಾರ ರಚನೆ ಮಾಡಿದಾಗಲೆ ಅದರ “ಜಾತ್ಯತೀತ” ಸಿದ್ಧಾಂತಕ್ಕೆ ಎಳ್ಳು – ನೀರು ಬಿಟ್ಟಂತಾಗಿತ್ತು.
ಆ ಸಂದರ್ಭದಲ್ಲಿ ಜೆಡಿಎಸ್‌ನ ಜಾತ್ಯತೀತ ಲೇಬಲ್ ನ ಲೇವಡಿ ಮಾಡಿದ ಹಿರಿಯ ಸಾಹಿತಿ ಯು.ಆರ್ ಅನಂತಮೂರ್ತಿ ಅವರಿಗೆ “ಸೆಕ್ಯುಲರಿಸಂ” ಅಂದ್ರೇನು ಎಂದು ಪ್ರಶ್ನೆ ಎಸೆಯುವ ಮೂಲಕ ಕುಮಾರಸ್ವಾಮಿ ತಮ್ಮ ಅವಕಾಶವಾದಿ ರಾಜಕಾರಣವನ್ನು ಸಮರ್ಥಿಸಿಕೊಂಡಿದ್ದರು.
ಹೀಗೆ ಅವಕಾಶವಾದಿ ರಾಜಕಾರಣವನ್ನು ಸಮರ್ಥಿಸಿಕೊಳ್ಳಲು ಕುಮಾರಸ್ವಾಮಿ, ಮತ್ತವರ ತಂದೆ ಎಚ್ ಡಿ ದೇವೇಗೌಡರಿಗೆ ಅನೇಕ ಉದಾಹರಣೆಗಳು ಸಿಗಬಹುದು.
ಈ ಹಿನ್ನೆಲೆಯಲ್ಲಿ ನೋಡಿದಾಗ ದೇಶದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಕೋಮುವಾದಿ ಬಿಜೆಪಿಯೊಂದಿಗೆ ಸೆಕ್ಯೂಲರ್ ಸಿದ್ದಾಂತದ ಘಟಾನುಘಟಿ ನಾಯಕರುಗಳೆ ಕೈಜೋಡಿಸಿದ್ದರು. ಅದು ಈಗಲೂ ಮುಂದುವರೆಯುತ್ತಿರುವುದು ಹೊಸತೇನಲ್ಲ.
ಇಂದಿರಾಗಾಂಧಿ ಅವರ ದೈತ್ಯ ರಾಜಕೀಯ ಶಕ್ತಿಯನ್ನು ಮಣಿಸಲು ಸಿದ್ಧಾಂತಗಳನ್ನು ಬದಿಗಿಟ್ಟು ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಆಂದೋಲನ ರೂಪವಾಗಿ ನಡೆದ ಹೋರಾಟವನ್ನು ನೆನಪಿಸಿಕೊಳ್ಳಬಹುದು. ಇಲ್ಲಿ ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಏಕೈಕ ಗುರಿಯೊಂದಿಗೆ ಅನೇಕ ನಾಯಕರುಗಳು ಸೈದ್ಧಾಂತಿಕ ಭಿನ್ನತೆಗಳನ್ನು ಮರೆತು ಒಂದುಗೂಡಿದ್ದರು.
ಹಿಂದೂತ್ವ, ರಾಮಮಂದಿರ ವಿಷಯಗಳೊಂದಿಗೆ ಕೋಮುವಾದಿ ರಾಜಕಾರಣವನ್ನೆ ಮುನ್ನೆಲೆಗೆ ತಂದ ಬಿಜೆಪಿಯ ಜೊತೆ ಕ್ರಾಂತಿಕಾರಿ ಹೋರಾಟಗಾರ ಜಾರ್ಜ್ ಫರ್ನಾಂಡೀಸ್, ದಲಿತರ ಪಾಲಿನ ಆಧುನಿಕ ಅಂಬೇಡ್ಕರ್ ಎಂದೆ ಅಭಿಮಾನಿಗಳಿಂದ ಕರೆಯಲ್ಪಡುತ್ತಿದ್ದ ರಾಮವಿಲಾಸ್ ಪಾಸ್ವಾನ್‌ರಂತಹ ನಾಯಕರುಗಳು ಕೈಜೋಡಿಸಿದ್ದು ಬಿಜೆಪಿಗಿದ್ದ ಮಡಿವಂತಿಕೆಯನ್ನು ಕಳಚಿದಂತಾಗಿತ್ತು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲು ಮಸೂದೆಗೆ ತಿದ್ದುಪಡಿ: ಮಲ್ಲಿಕಾರ್ಜುನ ಖರ್ಗೆ
ಇನ್ನು ಕರ್ನಾಟಕದ ಮಟ್ಟಿಗಂತೂ ಸೈದ್ಧಾಂತಿಕ ಬದ್ದತೆಯೆಲ್ಲಾ ಲೊಳಲೊಟ್ಟೆ ಎಂಬಂತಾಗಿ ಬೆತ್ತಲಾದವರು ಕಡಿಮೆಯೇನಲ್ಲ. ಜನತಾದಳ ಇಬ್ಭಾಗವಾದಾಗ ನಾಡಿನ ವೈಚಾರಿಕ ವಲಯವೇ ದಿಗಿಲುಗೊಳ್ಳುವಂತೆ ಜೆ ಹೆಚ್ ಪಟೇಲ್, ರಾಮಕೃಷ್ಣ ಹೆಗಡೆಯಂತಹ ನಾಯಕರುಗಳೆ ಜೆಡಿಯು ಹೆಸರಲ್ಲಿ ಬಿಜೆಪಿ ಜೊತೆ ಸಖ್ಯ ಬೆಳೆಸಿದರು.
ಮುಂದುವರೆದ ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಬಿಜೆಪಿಯ ನಡುಮನೆಗೆ ಯಾವ ಅಳುಕಿಲ್ಲದೆ ನಡೆದುಹೋದದ್ದು ಸೆಕ್ಯುಲರ್ ರಾಜಕಾರಣಕ್ಕೆ ಎರಗಿದ ಆಘಾತ. ಅವತ್ತಿನ ಕಾಂಗ್ರೆಸ್ ನಾಯಕರಾದ ಎಸ್ ಎಂ ಕೃಷ್ಣ, ಡಿ ಬಿ ಚಂದ್ರೇಗೌಡ, ಹೆಚ್ ವಿಶ್ವನಾಥ್ ರಂತಹ ಘಟಾನುಘಟಿ ನಾಯಕರೆಲ್ಲಾ ಬಂಗಾರಪ್ಪ ಅವರನ್ನು ಸೈದ್ಧಾಂತಿಕ ಭ್ರಷ್ಟತೆಯ ಕಟಕಟಗೆ ನಿಲ್ಲಿಸಿ ಲೇವಡಿ ಮಾಡಿದರು. ಕಾಲ ಸರಿದಂತೆ ಇವರೆಲ್ಲರೂ ಅದೇ ಕೋಮುವಾದಿ ಬಿಜೆಪಿಗೆ ಸೇರಿ ನೇಪಥ್ಯಕ್ಕೆ ಸರಿದದ್ದು ವೈರುಧ್ಯವೆ ಸರಿ.
2018 ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದ ಜೆಡಿಎಸ್‌ನ ಸೆಕ್ಯುಲರಿಸಂಗೆ ಹತ್ತಿದ್ದ ಕಳಂಕ ಕಳಚಿತು ಎನ್ನುತ್ತಿರುವಾಗಲೆ ಸರ್ಕಾರ ಪತನಗೊಂಡಿತು. ಜೊತೆಗೆ ಕಾಂಗ್ರೆಸ್ ಜೊತೆಗಿನ ಜೆಡಿಎಸ್ ಸಂಬಂಧವೂ ಹಳಸಿತು. ಎಷ್ಟರ ಮಟ್ಟಿಗೆಂದರೆ ಕಾಂಗ್ರೆಸ್‌ನ ಮಗ್ಗಲು ಮುರಿಯಲು ಸಿದ್ದಾಂತಭ್ರಷ್ಟ ಆರೋಪಕ್ಕೆ ಗುರಿಯಾದರೂ ಚಿಂತೆಯಿಲ್ಲ ಎಂದು ಬಿಜೆಪಿ ಜೊತೆ ಸಂಬಂಧ ಕುದುರಿಸಲಾಗಿದೆ. ಈ ಬಾರಿ ಖುದ್ದು ಎಚ್ ಡಿ ದೇವೇಗೌಡರೆ ಮುಂದೆ ನಿಂತು ಬಿಜೆಪಿ ಜೊತೆ ಸ್ನೇಹದ ಹಸ್ತಲಾಘವ ಮಾಡಿದ್ದಾರೆ.
ಒಂದು ಕಾಲದಲ್ಲಿ ಕೋಮುವಾದಿ ಬಿಜೆಪಿ ವಿರೋಧಿ ರಾಜಕಾರಣದ ಫಲವಾಗಿಯೇ ದೇಶದ ಪ್ರಧಾನಿಯಾಗಿದ್ದ ದೇವೇಗೌಡರು ಈಗ ತಾವೇ ಮುಂದೆ ನಿಂತು ಬಿಜೆಪಿ ಜೊತೆ ನೇರಾನೇರ ಕೈಜೋಡಿಸಿ ತಮ್ಮ ರಾಜಕೀಯ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ. ಇದು “ನನ್ನ ಒಂದು ಕಣ್ಣು ಹೋದರೂ ಚಿಂತೆಯಿಲ್ಲ, ಶತ್ರುವಿನ ಎರಡು ಕಣ್ಣುಗಳನ್ನು ತೆಗೀತಿನಿ” ಎಂಬ ಹಠಕ್ಕೆ ಬಿದ್ದಂತಿದೆ.
ಬಹಳ ಮುಖ್ಯವಾಗಿ ಕಳೆದ ಎರಡು ವರ್ಷಗಳ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ ಎಚ್ ಡಿ ಕುಮಾರಸ್ವಾಮಿ ಅವರ ರಾಜಕೀಯ ನಡೆ, ಹೇಳಿಕೆಗಳು ಸೂತ್ರ ಹರಿದ ಅಸಂಗತ ನಾಟಕಗಳಂತೆ ಗೋಚರಿಸಿದ್ದರೆ, ಅದು ದೃಷ್ಟಿದೋಷವೇನಲ್ಲ. ಮೊನ್ನೆ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಟ್ಟು ಯಾರೊಬ್ಬರೂ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದುಕೊಂಡೇ ಹೋರಾಡಿತ್ತಾದರೂ ಫಲಿತಾಂಶ ಜೆಡಿಎಸ್ ಅನ್ನು ನಿರಾಶೆಯ ಮಡುವಿಗೆ ನೂಕಿದ್ದು, ಎಷ್ಟರಮಟ್ಟಿಗೆ ಎಂದರೆ ತಮ್ಮ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಕರೆಕರೆದು ಅಲ್ಪಸಂಖ್ಯಾತರ ಮತಗಳನ್ನು ಬಾಚಿಕೊಂಡು ಬರಿಗೈ ಮಾಡಿದ ಕಾಂಗ್ರೆಸ್ ವಿರುದ್ಧ ಅಧಿಕೃತವಾಗಿ ಬಿಜೆಪಿ ಜೊತೆ ಕೈಜೋಡಿಸಿಯೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂಬಲ್ಲಿಗೆ ಬಂದು ನಿಂತಿದೆ.
ಇದೇ ಎಚ್ ಡಿ ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳ ಹಿಂದೆ ಬಿಜೆಪಿಯನ್ನು ಪೇಶ್ವೆಗಳ ಪಕ್ಷ ಎಂದು ಲೇವಡಿ ಮಾಡಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನೆ ನೇರವಾಗಿ ಪೇಶ್ವೆಗೆ ಹೋಲಿಸಿ ವಿವಾದ ಎಬ್ಬಿಸಿದ್ದರು. ಅಷ್ಟೇ ಅಲ್ಲ; ಬಿಜೆಪಿಯ ಮಾತೃಸಂಸ್ಥೆ ಆರ್ ಎಸ್ ಎಸ್ ಗೆ ನೇರಾನೇರವಾಗಿ ಕಲ್ಲು ಹೊಡೆದು ಬಿಟ್ಟಿದ್ದರು.
ಕಾಂಗ್ರೆಸ್ಸಿಗರಿಗಿಂತ ಒಂದು ಹೆಜ್ಜೆ ಮುಂದೆ ಎಂಬಂತೆ ಪ್ರಜಾವಾಣಿ ಪತ್ರಿಕೆಯ ಚರ್ಚೆ ವಿಭಾಗದಲ್ಲಿ “ಆರ್ ಎಸ್ ಎಸ್ ಐಷಾರಾಮಿ ಬದುಕಿನ ಆಗರ” (ಅಕ್ಟೋಬರ್ 16, 2021) ಎಂದು ಲೇಖನ ಬರೆಯುವ ಮೂಲಕ ಕುಮಾರಸ್ವಾಮಿ ಬಿಜೆಪಿಯ ಬುಡಕ್ಕೆ ಕೈ ಹಾಕಿ ಅಲುಗಾಡಿಸಿದ್ದರು.
ದಿನೇಶ್ ನಾರಾಯಣ್ ಅವರು ಬರೆದ “The RSS; And the making of the Deep Nation” ಕೃತಿಯನ್ನು ಉಲ್ಲೇಖಿಸುವ ಮೂಲಕ ಆರ್ ಎಸ್ ಎಸ್ ನ ಜನ್ಮ ಜಾಲಾಡುವ ಧೈರ್ಯ ಮೆರೆದಿದ್ದರು ಕುಮಾರಸ್ವಾಮಿ. ಇದು ಆರ್ ಎಸ್ ಎಸ್ ನ ರಾಜಕೀಯ ಸಂಘಟನೆಯಾದ ಬಿಜೆಪಿಗರನ್ನು ಕೆರಳಿಸಿ ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದಿದ್ದರು.
ಎಚ್‌ಡಿಕೆ ಅವರ ಪೇಶ್ವೆ ಹೇಳಿಕೆ ಮತ್ತು ಆರ್ ಎಸ್ ಎಸ್ ಕುರಿತ ಲೇಖನದ ಆಂತರ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಪಡೆಯುವ ತಂತ್ರಗಾರಿಕೆಯೂ ಅಡಗಿತ್ತು ಎಂಬುದನ್ನು ಅಲ್ಲಗಳೆಯಲಾಗದು.
ಆದರೆ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಅಲ್ಪಸಂಖ್ಯಾತರು ಕೈ ಹಿಡಿಯಲಿಲ್ಲ. ಸ್ವತಃ ತಮ್ಮ ಕ್ಷೇತ್ರ ರಾಮನಗರದಲ್ಲೆ ಮಗ ನಿಖಿಲ್ ವಿರುದ್ಧ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಅಭ್ಯರ್ಥಿ ಗೆಲುವು ಸಾಧಿಸಿದ್ದು ಕುಮಾರಸ್ವಾಮಿ, ದೇವೇಗೌಡರನ್ನು ವಿಚಲಿತಗೊಳಿಸಿಬಿಟ್ಟಿತು.
ಮುಂದೈದು ವರ್ಷಗಳ ಕಾಲ ತಮ್ಮ ಪಕ್ಷದ ಹೆಸರಿನಲ್ಲೆ ತಗುಲಿಕೊಂಡಿರುವ “ಜಾತ್ಯತೀತ” ಹೆಸರಿಗಾದರೂ ಬದ್ದರಾಗಿ ಪಕ್ಷವನ್ನು ಸಂಘಟಿಸಿ, ಜನರ ವಿಶ್ವಾಸ ಗಳಿಸುವ ಸಹನೆಯನ್ನೆ ಕಳೆದುಕೊಂಡು ಹತಾಶರಾದ ದಳಪತಿಗಳು ರಾಜ್ಯದ ಜನರಿಗಿದ್ದ ಮೂರನೆ ಆಯ್ಕೆಯ ರಾಜಕೀಯ ಶಕ್ತಿಯಾಗಬೇಕಾದ ಅವಕಾಶವನ್ನೆ ತಪ್ಪಿಸಿದ್ದಾರೆ ಮತ್ತು ಕಳೆದುಕೊಂಡಿದ್ದಾರೆ ಕೂಡ.
ತಮ್ಮ ಲೇಖನದ ಕೊನೆಯಲ್ಲಿ “ಆರ್ ಎಸ್ ಎಸ್ ಎಂದೂ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಂಡಿಲ್ಲ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದಿಲ್ಲ. ನೆಲದ ಕಾನೂನನ್ನು ಗೌರವಿಸಿಲ್ಲ. ಇಂಥ ಸಂಸ್ಥೆ ರಾಷ್ಟ್ರದ ವಿಪತ್ತು ಮಾತ್ರವಲ್ಲ, ದೇಶದ ಜಾತ್ಯತೀತ, ಧರ್ಮಾತೀತ ಮೂಲದ್ರವ್ಯಕ್ಕೆ ವಿಷವುಣಿಸುತ್ತಿರುವ ಕಾರ್ಕೋಟಕ ವಿಷ ಸರ್ಪ. ಹೀಗಾಗಿ ಎಲ್ಲರೂ ದೇಶವನ್ನು ರಕ್ಷಿಸಿಕೊಂಡು ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಹೋರಾಡಬೇಕಿದೆ. ಈ ದಿಕ್ಕಿನಲ್ಲಿ ಭಾರತಕ್ಕೆ ಭಾರತವೆ ಒಂದಾಗಬೇಕಿದೆ” ಎಂದು ಕರೆಕೊಟ್ಟ ಎಚ್ ಡಿ ಕುಮಾರಸ್ವಾಮಿ ಅವರೇ ಈಗ ಆರ್ ಎಸ್ ಎಸ್ ಎಂಬ ವಿಷಸರ್ಪದ ಸಂತತಿ ಬಿಜೆಪಿಯ ಜೊತೆ ಮಿಲನ ಮಹೋತ್ಸವದ ಸುಖಕ್ಕೊರಗಿದ್ದಾರೆ.

ಎನ್ ರವಿಕುಮಾರ್
ಪತ್ರಕರ್ತ, ಲೇಖಕ
ವಿಷಸರ್ಪದೊಂದಿಗೆ ಕೈಜೋಡಿಸಿದ ವಿಷಸರ್ಪ ?
ದೂರವಿರುವುದಲ್ಲ ; ಹೊಡೆದುರುಳಿಸಬೇಕು !