ರಾಷ್ಟ್ರಹಿತದ ನೆಪದಲ್ಲಿ ಆಪ್-ಕಾಂಗ್ರೆಸ್ ಮೈತ್ರಿ ಸಾಧ್ಯವೇ? ವಾಸ್ತವ ಏನು ಹೇಳುತ್ತದೆ?

Date:

ರಾ‍ಷ್ಟ್ರಹಿತದ ನೆಪ ಹೇಳುತ್ತಾ ವಿಷಯಾಧಾರಿತ ಮೈತ್ರಿಗೆ ಆಪ್-ಕಾಂಗ್ರೆಸ್ ಮುಂದಾಗಿವೆ. ಆದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಬೆಂಬಲಕ್ಕಾಗಿ ತನ್ನ ವಿಧಾನಸಭಾ ಚುನಾವಣಾ ರಾಜಕೀಯ ಯೋಜನೆಗಳಲ್ಲಿ ಆಪ್ ಬದಲಾವಣೆ ತರುವ ಸಾಧ್ಯತೆ ಕಡಿಮೆ.

ದೆಹಲಿ ಆಡಳಿತಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದನ್ನು ತಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು ವಿಪಕ್ಷಗಳ ಬೆಂಬಲಕ್ಕೆ ದೇಶವಿಡೀ ಓಡಾಡಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ಅವಕಾಶ ಕೋರಿದ್ದಾರೆ. ಆದರೆ, ಪರಸ್ಪರ ಶತ್ರುಗಳಂತೆ ನೋಡುವ ಆಪ್-ಕಾಂಗ್ರೆಸ್ ಮೈತ್ರಿ ಸಾಧ್ಯವೆ?

ದೆಹಲಿ ಆಡಳಿತ ನಿಯಂತ್ರಣದ ಪ್ರಶ್ನೆ

ಶುಕ್ರವಾರ ಬೆಳಗ್ಗೆ ದೆಹಲಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಗಾಗಿ ವಿನಂತಿಸಿದ್ದೇನೆ. ಪ್ರಜಾಸತ್ತೆಗೆ ವಿರೋಧವಾದ ಅಸಾಂವಿಧಾನಿಕ ಸುಗ್ರೀವಾಜ್ಞೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಅವರ ಬೆಂಬಲ ಯಾಚಿಸಲಿದ್ದೇನೆ. ಜೊತೆಗೆ, ಒಕ್ಕೂಟ ವ್ಯವಸ್ಥೆ ಮೇಲೆ ಕೇಂದ್ರ ಸರ್ಕಾರದ ದಾಳಿಯ ಬಗ್ಗೆಯೂ ಚರ್ಚಿಸಲಿದ್ದೇವೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ನಂತರ ರಾಷ್ಟ್ರ ರಾಜಧಾನಿಯ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ದೆಹಲಿ ಮುಖ್ಯಮಂತ್ರಿ ಪಶ್ಚಿಮ ಬಂಗಾಳದಿಂದ ಮಹಾರಾಷ್ಟ್ರದವರೆಗೆ ಪ್ರಯಾಣಿಸಿ ವಿಪಕ್ಷ ನಾಯಕರನ್ನು ಭೇಟಿಯಾಗಿದ್ದಾರೆ. ಈಗ ಅವರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಆದರೆ, ಕಾಂಗ್ರೆಸ್ ಬಳಿ ಸುಗ್ರೀವಾಜ್ಞೆ ತಡೆಯಲು ಬೆಂಬಲ ಕೋರುತ್ತಿದ್ದಾರೆಯೇ ವಿನಾ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸದೆ ಮತ ವಿಭಜನೆಯಾಗದಂತೆ ಸಹಕರಿಸುವ ಮೈತ್ರಿಯ ಉದ್ದೇಶವೇನೂ ಅವರು ಹೊಂದಿಲ್ಲ.

“ಪಕ್ಷಗಳು ಅಥವಾ ವ್ಯಕ್ತಿಗತವಾದ ಭಿನ್ನಮತ ಮುಖ್ಯವಾಗುವುದಿಲ್ಲ. ಪ್ರಜಾಪ್ರಭುತ್ವದ ಅಸ್ತಿತ್ವದ ಪ್ರಶ್ನೆ ಬಂದಾಗ ಎಲ್ಲಾ ಭಿನ್ನಾಭಿಪ್ರಾಯಗಳನ್ನೂ ಬದಿಗಿಟ್ಟು ಜೊತೆಗೂಡಿ ರಾಷ್ಟ್ರಹಿತಕ್ಕಾಗಿ ಕೆಲಸ ಮಾಡಬೇಕು” ಎಂದು ಆಪ್ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಹೇಳಿದ್ದಾರೆ.

ರಾಷ್ಟ್ರಹಿತದ ಆಚೆಗಿನ ವಾಸ್ತವ

31 ಸಂಸದರಿರುವ ಕಾಂಗ್ರೆಸ್ ಬೆಂಬಲವಿಲ್ಲದೆ ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆ ತಡೆಯುವುದು ಸಾಧ್ಯವಿಲ್ಲ ಎನ್ನುವುದು ಆಪ್‌ ಚೆನ್ನಾಗಿ ಅರಿತಿದೆ. ತಮ್ಮ ಹೋರಾಟಕ್ಕೆ ಬೆಂಬಲಿಸಲು ನಿರಾಕರಿಸಿದಲ್ಲಿ ಅದನ್ನು ಕಾಂಗ್ರೆಸ್‌ನ ಅಹಂ ಎಂದು ಆಪ್ ಕಾಣಲಿದೆ.

ಆದರೆ ರಾಷ್ಟ್ರಹಿತದ ಪ್ರಶ್ನೆಯ ಆಚೆಗೆ ರಾಜಕೀಯ ವಾಸ್ತವವೂ ಮುಖ್ಯವಾಗುತ್ತದೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ನೆಪದಲ್ಲಿ ಆಪ್ ಅವಕಾಶವಾದಿತನದ ರಾಜಕೀಯ ನಡೆಸುತ್ತಿದೆ ಎಂದು ದೆಹಲಿ ವಿಚಾರದಲ್ಲಿ ಅನೇಕ ಬಾರಿ ಟೀಕೆಗೆ ಒಳಗಾಗಿದೆ. ಅಲ್ಲದೆ, ಆಪ್ ಮತ್ತು ಕಾಂಗ್ರೆಸ್‌ ನಡುವಿನ ಮೈತ್ರಿ ಹೆಚ್ಚು ದಿನ ನಡೆಯುವುದಿಲ್ಲ ಎನ್ನುವುದು 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲೇ ಬಹಿರಂಗವಾಗಿದೆ.

ದೆಹಲಿಯಲ್ಲಿ ಕಾಂಗ್ರಸ್ ಸರ್ಕಾರದ ದುರಾಡಳಿತದ ಬಗ್ಗೆಯೇ ಪ್ರಚಾರ ಮಾಡಿ 28 ಸ್ಥಾನಗಳನ್ನು ಆಪ್ ಗೆದ್ದಿತ್ತು. ಬಿಜೆಪಿಗೆ 36 ಸ್ಥಾನಗಳು ಸಿಕ್ಕಿದ್ದವು. ಅಧಿಕಾರ ಹಿಡಿಯಲು ಕಾಂಗ್ರೆಸ್ ಬೆಂಬಲ ಯಾಚಿಸುವ ಅನಿವಾರ್ಯತೆ ಆಪ್‌ಗೆ ಇತ್ತು. ಆದರೆ ಮೈತ್ರಿ ಸರ್ಕಾರ 49 ದಿನಗಳಷ್ಟೇ ಉಳಿದಿತ್ತು. ಜನ್‌ ಲೋಕಪಾಲ್ ಮಸೂದೆ ತರಲು ಕಾಂಗ್ರೆಸ್ ಮತ್ತು ಬಿಜೆಪಿ ಅಡ್ಡಿಮಾಡುತ್ತಿವೆ ಎಂದು ಆರೋಪ ಹೊರಿಸಿ ಅರವಿಂದ್ ಕೇಜ್ರಿವಾಲ್ ಮೈತ್ರಿ ಕೂಟದಿಂದ ಹೊರಬಂದಿದ್ದರಿಂದ ಸರ್ಕಾರ ಬಿದ್ದು ಹೋಯಿತು.

ನಂತರ ನಡೆದ 2015 ಮತ್ತು 2020ರ ಚುನಾವಣೆಯಲ್ಲಿ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಒಬ್ಬ ಶಾಸಕನನ್ನೂ ಗೆಲ್ಲಲಾಗಲಿಲ್ಲ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಅದೇ ರಾಷ್ಟ್ರಹಿತದ ನೆಪದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಮುಂದಾಗಿದ್ದರು. ಆದರೆ ಕಾಂಗ್ರೆಸ್ ನಿರಾಕರಿಸಿತು.

ಲೋಕಸಭಾ ಚುನಾವಣೆಯ ಸೀಟು ಹಂಚಿಕೆ

ಆಪ್-ಕಾಂಗ್ರೆಸ್ ನಡುವಿನ ಚುನಾವಣಾ ಸೀಟು ಹಂಚಿಕೆ ಪರಿಹರಿಸಲಾಗದ ಬಿಕ್ಕಟ್ಟು. ದೆಹಲಿಯಾಚೆಗೆ ಹರಿಯಾಣ, ಪಂಜಾಬ್ ಹಾಗೂ ಗೋವಾದಲ್ಲಿ ಆಪ್ ನೆರವಾಗುವುದಾದರೆ ಸ್ಥಾನ ಹಂಚಿಕೆಗೆ ಸಿದ್ಧ ಎಂದು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿ ಪ್ರಯತ್ನಕ್ಕೆ ಕಾಂಗ್ರೆಸ್ ಹಿಂದೇಟು ಹಾಕಿತ್ತು. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಕೇಜ್ರಿವಾಲ್, “ಮೋದಿ- ಶಾ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ರಾಹುಲ್ ಗಾಂಧಿಯೇ ಅದಕ್ಕೆ ಜವಾಬ್ದಾರರು” ಎಂದು ಹೇಳಿದ್ದರು.

“ದೆಹಲಿಯಲ್ಲಿ ಆಪ್-ಕಾಂಗ್ರೆಸ್ ಮೈತ್ರಿ ಸಾಧ್ಯವಾದರೆ ಬಿಜೆಪಿಗೆ ಒಂದು ಲೋಕಸಭಾ ಸ್ಥಾನವೂ ಸಿಗದು. ಕಾಂಗ್ರೆಸ್ ಆಪ್‌ಗೆ 4 ಸ್ಥಾನ ನೀಡಲು ಸಿದ್ಧವಿತ್ತು. ಆದರೆ ಕೇಜ್ರಿವಾಲ್ ಮತ್ತೊಮ್ಮೆ ಯು ಟರ್ನ್ ಮಾಡಿದ್ದಾರೆ. ನಮ್ಮ ಬಾಗಿಲು ಇನ್ನೂ ತೆರೆದಿದೆ, ಸಮಯ ಸಾಗುತ್ತಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಅಂತಿಮವಾಗಿ ಬಿಜೆಪಿ ದೆಹಲಿಯ ಎಲ್ಲಾ ಏಳು ಸ್ಥಾನಗಳನ್ನೂ ಗೆದ್ದುಕೊಂಡಿತ್ತು.

ನಂತರ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಆಪ್ ಜಯಭೇರಿಗೆ ಕಾಂಗ್ರೆಸ್ ಮಣಿದಿದೆ. ಗೋವಾ ಮತ್ತು ಗುಜರಾತ್‌ನಲ್ಲೂ ಕಾಂಗ್ರೆಸ್ ವಿರುದ್ಧ ಆಪ್ ಗೆಲುವಿಗೆ ಪ್ರಯತ್ನಿಸಿ ಬಿಜೆಪಿ ಜಯಭೇರಿಗೆ ಕಾರಣರಾಗಿದ್ದರು.

ಆದರೆ ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಆಪ್ ಮತ್ತು ಕಾಂಗ್ರೆಸ್ ನಡುವಿನ ಯಾವುದೇ ಸಭೆಯಲ್ಲೂ ಸ್ಥಾನ ಹಂಚಿಕೆಯ ಲೆಕ್ಕಾಚಾರಗಳು ಬಂದೇ ಬರುತ್ತವೆ. ದೆಹಲಿಯ ಜೊತೆಗೆ ಗೋವಾ, ಗುಜರಾತ್, ಪಂಜಾಬ್ ಹಾಗೂ ಹರಿಯಾಣದ ಚುನಾವಣೆಗಳು ಚರ್ಚೆಯಾಗಲಿವೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬೆಂಗಳೂರು: ಅಂಡರ್‌ಪಾಸ್, ಫ್ಲೈಓವರ್, ರಸ್ತೆ ಗುಂಡಿ; ಹೆಜ್ಜೆ ಹೆಜ್ಜೆಗೂ ಕಾಡುವ ಸಾವು!

ಆಪ್ ಜೊತೆಗಿನ ಮೈತ್ರಿಗೆ ಕಾಂಗ್ರೆಸ್‌ನಲ್ಲೇ ವಿರೋಧ

ಆಪ್ ಈಗ ಸುಗ್ರೀವಾಜ್ಞೆ ತಡೆಯಲು ಕಾಂಗ್ರೆಸ್ ಬೆಂಬಲ ಬಯಸಿದೆ. ಕಾಂಗ್ರೆಸ್‌ಗೆ ದೆಹಲಿ ಜೊತೆಗೆ ಪಂಜಾಬ್‌ ಕೂಡ ಮುಖ್ಯವಾಗುತ್ತದೆ. 2024ರ ಚುನಾವಣೆ ಗಮನದಲ್ಲಿಟ್ಟು ಸೀಟು ಹಂಚಿಕೆ ಚರ್ಚೆಗೆ ಕಾಂಗ್ರೆಸ್‌ಗೆ ಇದು ವೇದಿಕೆಯಾಗುವುದು ಖಚಿತ. ಆದರೆ ದೆಹಲಿಯಲ್ಲಿ ಆಪ್‌ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಒಳಗೇ ವಿರೋಧವಿದೆ. ಕಾಂಗ್ರೆಸ್‌ನಿಂದ ಆಪ್‌ಗೆ ಹೋಗಿ ಮರಳಿ ಕಾಂಗ್ರೆಸ್‌ಗೆ ಬಂದಿರುವ ಅಲಕಾ ಲಂಬಾ ಅವರಿಂದ ಆರಂಭವಾಗಿ ಇತ್ತೀಚೆಗೆ ಕಾಂಗ್ರೆಸ್ ತೊರೆದಿರುವ ಅಜಯ್ ಮಾಕನ್‌ವರೆಗೆ ಆಪ್ ಜೊತೆಗಿನ ಹಲವರು ಕಾಂಗ್ರೆಸ್ ಮೈತ್ರಿಯನ್ನು ವಿರೋಧಿಸಿದ್ದಾರೆ. ಕರ್ನಾಟಕದಲ್ಲಿ ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಕಾಂಗ್ರೆಸ್ ಅರವಿಂದ ಕೇಜ್ರಿವಾಲ್ ಅವರನ್ನು ಆಹ್ವಾನಿರಲಿಸಿಲ್ಲ.

ಇದೇ ವರ್ಷ ವಿಧಾನಸಭೆ ನಡೆಯಲಿರುವ ಕಾಂಗ್ರೆಸ್ ಬಲಿಷ್ಠವಾಗಿರುವ ಮಧ್ಯಪ್ರದೇಶ, ಹರಿಯಾಣ, ಛತ್ತೀಸ್‌ಗಢ ಹಾಗೂ ರಾಜಸ್ಥಾನಗಳಲ್ಲಿ ಆಪ್ ಸ್ಪರ್ಧಿಸಲು ಬಯಸಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಬೆಂಬಲಕ್ಕಾಗಿ ಆಪ್ ತನ್ನ ಚುನಾವಣಾ ರಾಜಕೀಯ ಯೋಜನೆಗಳಲ್ಲಿ ಬದಲಾವಣೆ ತರುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ಆದರೆ ಆಪ್ ನಾಯಕರ ಪ್ರಕಾರ ಸುಗ್ರೀವಾಜ್ಞೆಗೆ ಬೆಂಬಲ ಮತ್ತು ಆಪ್ ಚುನಾವಣಾ ಸ್ಪರ್ಧೆಗಳು ಸಂಪೂರ್ಣ ಭಿನ್ನ ವಿಚಾರ. ಎಲ್ಲಾ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುವುದು ಆಪ್ ಮೊದಲ ಗುರಿ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೆಡಿಎಸ್ ಪಕ್ಷ ಅಸ್ತಿತ್ವದಲ್ಲಿಲ್ಲ ಎಂದು ಅವರೇ ಸಾಬೀತುಪಡಿಸಿದ್ದಾರೆ: ಡಿ ಕೆ ಶಿವಕುಮಾರ್

ಜೆಡಿಎಸ್ ಪಕ್ಷ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ. ಆ ಪಕ್ಷ ಅಸ್ತಿತ್ವದಲ್ಲಿದ್ದರೆ...

ಕಾಂಗ್ರೆಸ್ ನಂತರ, ಸಿಪಿಐಗೆ ಐಟಿ ಇಲಾಖೆ ನೋಟಿಸ್

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ (ಸಿಪಿಐ) ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್...

ಲೋಕಸಭಾ ಚುನಾವಣೆ | ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಧೀರಜ್ ಕಾಂಗ್ರೆಸ್‌ ಸೇರುವ ಸಾಧ್ಯತೆ!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಸಿದ್ದರಾಮಯ್ಯ...

ಬಿಜೆಪಿ ಜೊತೆ ಮೈತ್ರಿಗೆ ವಿರೋಧ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನಜ್ಮಾ ನಝೀರ್

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ...