ಶಾಂತಿಯುತ ರಾಜ್ಯದಲ್ಲಿ ಗಲಭೆ ಹರಡುವ ಪ್ರಯತ್ನ; ಯೂಟ್ಯೂಬರ್ ಅರ್ಜಿ ತಿರಸ್ಕರಿಸಿದ ಸುಪ್ರೀಂ

Date:

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ನಕಲಿ ವಿಡಿಯೋಗಳನ್ನು ಯೂಟ್ಯೂಬ್ ಚಾನಲ್ ಮೂಲಕ ಹರಡಿದ ಆರೋಪ ಎದುರಿಸುತ್ತಿರುವ ಬಿಹಾರದ ಯೂಟ್ಯೂಬರ್ ಮನೀಶ್ ಕಶ್ಯಪ್ ತನ್ನ ವಿರುದ್ಧ ಬಿಹಾರ ಮತ್ತು ತಮಿಳುನಾಡಿನಲ್ಲಿ ದಾಖಲಾಗಿರುವ ಎಫ್ಐಆರ್‌ಗಳನ್ನು ಒಟ್ಟುಗೂಡಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

“ತಮಿಳುನಾಡು ಶಾಂತಿಯುತ ರಾಜ್ಯ. ಅಂತಹ ರಾಜ್ಯದಲ್ಲಿ ಶಾಂತಿ ಕದಡಲು ನೀವು ನಕಲಿ ವಿಡಿಯೋಗಳ ಮೂಲಕ ಏನು ಬೇಕಾದರೂ ಸುದ್ದಿ ಹರಡಿಸುತ್ತೀರಿ. ಇದನ್ನು ಆಲಿಸಲು ನಾವು ಸಿದ್ದರಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಯೂಟ್ಯೂಬರ್ ಮನೀಶ್ ಕಶ್ಯಪ್ ಅವರ ಅರ್ಜಿಯನ್ನು ತಿರಸ್ಕರಿಸಿದರು.

ಇದೇ ಆರೋಪಕ್ಕೆ ಸಂಬಂಧಿಸಿ ರಾಷ್ಟ್ರೀಯ ಸುರಕ್ಷತೆ ಕಾಯಿದೆಯಡಿ ತನ್ನ ಬಂಧನವನ್ನೂ ರದ್ದುಗೊಳಿಸಬೇಕೆಂದು ಆತ ಸಲ್ಲಿಸಿದ್ದ ಅರ್ಜಿಯನ್ನೂ ಪರಿಗಣಿಸಲು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲ ಅವರ ಪೀಠ ನಿರಾಕರಿಸಿದೆ. ಆದರೆ ಇದೇ ಅರ್ಜಿಗಳನ್ನು ಹೈಕೋರ್ಟಿನಲ್ಲಿ ಸಲ್ಲಿಸುವ ಸ್ವಾತಂತ್ರ್ಯವನ್ನು ಸುಪ್ರೀಂಕೋರ್ಟ್ ಕಶ್ಯಪ್‌ ಅವರಿಗೆ ನೀಡಿದೆ.

ವಿಚಾರಣೆ ಶುರುವಾಗುತ್ತಲೇ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, “ಯಾವ ಕಾರಣಕ್ಕಾಗಿ ನೀವು ಈ ನಕಲಿ ವಿಡಿಯೋ ತಯಾರಿಸಿದ್ದೀರಿ” ಎಂದು ಕೇಳಿದರು. ಈ ಸಂದರ್ಭದಲ್ಲಿ ಕಶ್ಯಪ್ ಪರ ಹಾಜರಿದ್ದ ಹಿರಿಯ ವಕೀಲ ಮನೀಂದರ್ ಸಿಂಗ್ ಪ್ರತಿಕ್ರಿಯಿಸಿ, “ಕೆಲ ಮುಖ್ಯ ವಾಹಿನಿ ದಿನಪತ್ರಿಕೆಗಳು ಪ್ರಕಟಿಸಿದ ಸುದ್ದಿಯ ಆಧಾರದಲ್ಲಿ ವಿಡಿಯೋ ತಯಾರಿಸಲಾಗಿತ್ತು. ಕಶ್ಯಪ್ ಅವರನ್ನು ಬಂಧಿಸಿದ್ದರೆ ಅದೇ ರೀತಿಯ ಸುದ್ದಿಗಳನ್ನು ಪ್ರಕಟಿಸಿದ ಇತರ ಪತ್ರಿಕೆಗಳ ಪತ್ರಕರ್ತರನ್ನೂ ಇದೇ ಕಾಯಿದೆಯಡಿ ಬಂಧಿಸಬೇಕು” ಎಂದು ಹೇಳಿದರು.

ಅಲ್ಲದೆ ತಮಿಳುನಾಡಿನಲ್ಲಿ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಿ ಮೊದಲ ಎಫ್ಐಆರ್ ದಾಖಲಾದ ಬಿಹಾರಕ್ಕೆ ವರ್ಗಾಯಿಸಬೇಕೆಂದು ಕೋರಿದರು. ಇದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಲಿಲ್ಲ. ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿಕ್ರಿಯಿಸಿ, “ಅರ್ಜಿದಾರರು ಮದ್ರಾಸ್ ಹೈಕೋರ್ಟಿಗೆ ತಮ್ಮ ಮನವಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ” ಎಂದು ಹೇಳಿದರು.

ಏಪ್ರಿಲ್ 5ರಂದು, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ನಕಲಿ ವಿಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಬಿಹಾರ ಮೂಲದ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರನ್ನು ತಮಿಳುನಾಡು ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿದ್ದರು.

ಕಳೆದ ತಿಂಗಳು, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಸತ್ಯ ಪರಿಶೀಲಕರು ಮತ್ತು ಪೊಲೀಸ್ ಇಲಾಖೆ ವಿಡಿಯೋಗಳು ನಕಲಿ ಎಂದು ಸ್ಪಷ್ಟಪಡಿಸಿತ್ತು.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೂಡ ವಿಡಿಯೋ ಬಗ್ಗೆ ಹೇಳಿಕೆ ನೀಡಿ, “ವಲಸೆ ಕಾರ್ಮಿಕರ ಬಗ್ಗೆ ಇಂತಹ ವದಂತಿಗಳನ್ನು ನಂಬಬೇಡಿ ಮತ್ತು ರಾಜ್ಯವು ವಲಸೆ ಕಾರ್ಮಿಕರಿಗೆ ಅಗತ್ಯವಿರುವ ಎಲ್ಲ ಬೆಂಬಲ ನೀಡುತ್ತದೆ. ತಮಿಳುನಾಡಿನಲ್ಲಿ ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ” ಎಂದು ಭರವಸೆ ನೀಡಿದ್ದರು.

ಈ ಸುದ್ದಿ ಓದಿದ್ದೀರಾ? ಬಿಹಾರದ ಯೂಟ್ಯೂಬರ್ ವಿರುದ್ಧ ಎನ್‌ಎಸ್‌ಎ ಜಾರಿ; ತಮಿಳುನಾಡು ಸರ್ಕಾರದ ಕ್ರಮ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿತೀಶ್ ಪ್ರಯಾಣಕ್ಕೆ ಸಂಚಾರ ತಡೆ; ಟ್ರಾಫಿಕ್‌ನಲ್ಲಿ ಸಿಲುಕಿದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಕ್ಕಾಗಿ ಪೊಲೀಸರು ರಸ್ತೆಯಲ್ಲಿ ಇತರ ವಾಹನ...

‘ಆತ ನನ್ನ ಮಗನೇ ಇರಬಹುದು, ಆತನನ್ನು ಗಲ್ಲಿಗೇರಿಸಿ’: ಅತ್ಯಾಚಾರ ಆರೋಪಿಯ ತಂದೆ

ಆತ ನನ್ನ ಮಗನಾಗಿರಬಹುದು. ಆದರೆ, ಆತ ಅಪರಾಧಿ. ಆತನನ್ನು ಗಲ್ಲಿಗೇರಿಸಿ ಎಂದು...

ವಿಶೇಷಚೇತನ ಯೋಧರ ಹೊಸ ಪಿಂಚಣಿ ಯೋಜನೆ; ಮೋದಿ ಸರ್ಕಾರದ ನಕಲಿ ರಾಷ್ಟ್ರೀಯತೆ ಮತ್ತೊಮ್ಮೆ ಬಯಲು: ಖರ್ಗೆ

ಸಶಸ್ತ್ರ ಪಡೆ ಸಿಬ್ಬಂದಿಗೆ ಹೊಸ ವಿಶೇಷಚೇತನ ಪಿಂಚಣಿ ನಿಯಮಗಳ ಕುರಿತು ಶನಿವಾರ...

ಮಧ್ಯಪ್ರದೇಶ | ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟಂಬಕ್ಕೊಂದು ಉದ್ಯೋಗ: ಸಿಎಂ ಚೌಹಾಣ್

ಈ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶ ಚುನಾವಣೆ ನಡೆಯಲಿದೆ. ಅಲ್ಲಿ ಅಪರೇಷನ್ ಕಮಲಕ್ಕೆ...