- ಬಿಜೆಪಿ ನಾಯಕರ ಕ್ಷಮೆಗೆ ಒತ್ತಾಯಿಸಿದ ಡಿಕೆಶಿ
- ಪತ್ರಿಕಾಗೋಷ್ಠಿ ನಡೆಸಿ ಯತ್ನಾಳ್ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ವಿಷದ ಹಾವಿಗೆ ಹೋಲಿಸಿದ್ದರು. ಖರ್ಗೆ ಹೇಳಿಕೆ ಬೆನ್ನಲ್ಲೇ ಯತ್ನಾಳ್ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆಗೆ ಹೋಲಿಸಿದ್ದಾರೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಡಿ ಕೆ ಶಿವಕುಮಾರ್, “ಸೋನಿಯಾ ಗಾಂಧಿ ವಿಷಕನ್ಯೆ ಎಂಬ ಹೇಳಿಕೆ ಮೂಲಕ ಇಡೀ ಸ್ತ್ರೀ ಕುಲವನ್ನೇ ಬಸನಗೌಡ ಪಾಟೀಲ ಯತ್ನಾಳ್ ಅವಮಾನಿಸಿದ್ದಾರೆ” ಎಂದು ಆಗ್ರಹಿಸಿದ್ದಾರೆ.
“ಭಾರತದ ಎಲ್ಲ ಮಹಿಳೆಯರನ್ನೂ ಯತ್ನಾಳ್ ಅವಮಾನಿಸಿದ್ದಾರೆ. ಈ ಘಟನೆಗೆ ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ಕ್ಷಮೆಯಾಚಿಸಬೇಕು” ಎಂದು ಹೇಳಿದ್ದಾರೆ.
“ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈ ಕೂಡಲೇ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು” ಎಂದಿದ್ದಾರೆ.
“ಸೋನಿಯಾ ಗಾಂಧಿ ದೇಶಕ್ಕಾಗಿ ತಮ್ಮ ಅತ್ತೆ ಮತ್ತು ಗಂಡನನ್ನು ಕಳೆದುಕೊಂಡವರು. ಎರಡು ಬಾರಿ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕರೂ ಡಾ ಮನಮೋಹನ್ ಸಿಂಗ್ ಅವರಂತಹ ಶ್ರೇಷ್ಠ ಆರ್ಥಿಕ ತಜ್ಞನಿಗೆ ಅವಕಾಶ ಕಲ್ಪಿಸಿದರು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಷ ವಿವಾದ | ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ದೂರು
“ಅಂತಹ ಧೀಮಂತ ಮಹಿಳೆಯ ಕುರಿತು ಯತ್ನಾಳ್ ಕೀಳುಮಟ್ಟದ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ” ಎಂದು ಡಿಕೆಶಿ ಕಿಡಿಕಾರಿದ್ದಾರೆ.