ಮುಂದಿನ ಲೋಕಸಭೆಗೆ ಹೋಗಲಿರುವ ಸಂಸದರಿಂದ ಜನಸಾಮಾನ್ಯರು ನಿರೀಕ್ಷಿಸುವುದೇನು?

Date:

ಜನರನ್ನು ಅದರಲ್ಲೂ ಸಾಮಾನ್ಯರನ್ನು ನಿಕೃಷ್ಟರಂತೆ ಕಾಣುವ ಅಥವಾ ಇವರೇನು ಮಾಡಿಯಾರು ಎಂಬ ಭಾವನೆ ಇದ್ದಲ್ಲಿ ಅದನ್ನು ಬೇಗನೆ ಬದಲಾಯಿಸಿಕೊಳ್ಳುವುದು ಉತ್ತಮ. ಜನರು ತಮ್ಮ ಬಳಿಗೆ ಭಿಕ್ಷೆ ಬೇಡಲು ಬಂದಿದ್ದಾರೆಂಬಂತೆ ವರ್ತಿಸುವುದನ್ನು ಬಿಡುವುದು ಒಳಿತು.

 

ಸರ್ಕಾರಿ ಮನೆ ಮಂಜೂರು ಮಾಡಿಸಿಕೊಂಡ ಸೂರಪ್ಪನಿಗೆ (ಹೆಸರು ಬದಲಿಸಲಾಗಿದೆ) ಆ ಖುಷಿ ಬಹಳ ದಿನ ಉಳಿಯಲಿಲ್ಲ. ಕಾರಣ ಅವನ ಹೆಸರು ಪಟ್ಟಿಯಿಂದ ಕಾಣೆಯಾಗಿತ್ತು. ಪರಿಹಾರಕ್ಕಾಗಿ ಎಲ್ಲಾ ಕಚೇರಿಗಳಿಗೆ ಚಪ್ಪಲಿ ಸವೆಸಿದ ಅವನು, ನಂತರದಲ್ಲಿ ಶಾಸಕರ ಮನೆಗೆ ಎಡತಾಕುತ್ತಾನೆ. ಅವರು ಆಗ ಬಾ, ಈಗ ಬಾ ಎನ್ನುತ್ತಾ ಕೊನೆಗೊಂದು ದಿನ ‘ಸರ್ಕಾರ ನಮ್ಮ ಕೈಯ್ಯಲ್ಲಿಲ್ಲವೆಂದು’ ಕೈ ಚೆಲ್ಲುತ್ತಾರೆ. ಡಬಲ್ ಇಂಜಿನ್ ಸರ್ಕಾರದ ಸಂಸದರಿಂದ ಪರಿಹಾರ ಸಿಗುತ್ತದೆಂದು ನಂಬಿದ ಸೂರಪ್ಪನ ಅಲೆತ ಜಿಲ್ಲಾ ಸ್ಥಳದತ್ತ ಸಾಗಿತ್ತು.

ಬೆಂಗಳೂರು-ದೇಹಲಿ ಎಂದು ಬ್ಯುಸಿಯಾಗಿರುವ ಸಂಸದರು ತಮ್ಮ ವಾಸ ಸ್ಥಳಕ್ಕೆ ಬರುವುದೇ ಅಪರೂಪ; ಬರುತ್ತೇನೆಂದ ದಿನ ಬರುವುದಿಲ್ಲ, ಬಂದ ದಿನ ಸಿಗುವುದಿಲ್ಲ. ಪಟ್ಟು ಬಿಡದ ಸೂರಪ್ಪ ಕೊನೆಗೂ ಕಾರು ಹತ್ತುವಾಗೊಮ್ಮೆ ಸಂಸದರನ್ನು ಹಿಡಿದೇ ಬಿಡುತ್ತಾನೆ. ಸಿಕ್ಕ ಎರಡು ನಿಮಿಷಗಳಲ್ಲಿ ತನ್ನ ಕಷ್ಟಗಳನ್ನೆಲ್ಲ ಒಂದೇ ಉಸಿರಿಗೆ ಬಡಬಡಿಸುತ್ತಾ ಕೊಟ್ಟ ಅವನ ಅರ್ಜಿಯನ್ನು ಸಂಸದರು ತನ್ನ ಪಿ.ಎ. ಕೈಗೆ ತುರುಕಿ, “ಅದೇನು ನೋಡು” ಎಂದು ಹೇಳಿ ತಮ್ಮ ಕಾರನ್ನೇರಿ ಹೊರಟೇ ಬಿಡುತ್ತಾರೆ.

ಬೆನ್ನುಬಿದ್ದ ಸೂರಪ್ಪನ ಕಾಟ ತಾಳದ ಸಂಸದರ ಪಿ. ಎ. ಮನೆಯ ವಿಷಯ ಮರೆತು ಬಿಡು ಎನ್ನುತ್ತಾ, ‘ನಿಮ್ಮ ಜಾತಿಯವರ ಓಟು ಮಾತ್ರ ಬೇರೆಯವರಿಗೆ, ಸಹಾಯಕ್ಕೆ ಮಾತ್ರ ನಮ್ಮ ಸಾಹೇಬರು ಬೇಕಾ?’ ಎಂದು ಗದರಿ, ಇನ್ನು ಮುಂದೆ ಕಚೇರಿ ಮೆಟ್ಟಿಲು ಹತ್ತಬಾರದೆಂದು ಸೂರಪ್ಪನಿಗೆ ಎಚ್ಚರಿಕೆ ನೀಡುತ್ತಾರೆ. ಹೀಗೆ, ತಿಂಗಳುಗಟ್ಟಲೆ ಅಲೆದು ಹಣ ಕಳೆದುಕೊಂಡ ಸೂರಪ್ಪನಿಗೆ ಮನೆ ವಿಷಯ ಏನಾಯಿತೆಂದು ಪದೇ ಪದೇ ಪೀಡಿಸುವ ಹೆಂಡತಿಯ ಮೇಲೆ ಕೆಂಡದಂತಹ ಕೋಪ; ‘ಮನೇನೂ ಬೇಡ, ಮಠನೂ ಬೇಡ’ ಅನ್ನುವ ಅವನಿಗೆ ‘ಕೈಲಾಗದವನು’ ಅಂತ ಹಂಗಿಸಿ ಪ್ರತಿಯಾಗಿ ಅವಳು ಒದೆ ತಿನ್ನುವುದು ನಡೆದಿತ್ತಂತೆ!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದು ಕೇವಲ ಸೂರಪ್ಪನ ಕಥೆಯಲ್ಲ. ಹೆಚ್ಚಿನಂಶ ಬಡ ಮತ್ತು ಕೆಳ ಮಧ್ಯಮ ವರ್ಗದವರ ಸ್ಥಿತಿಯೂ ಇದೇ ಆಗಿದೆ. ತಾವು ಜನ ಪ್ರತಿನಿಧಿಗಳೆಂಬುದು ಗೆದ್ದ ಮರುಕ್ಷಣದಿಂದಲೇ ಅನೇಕರಿಗೆ ಮರೆತುಹೋಗುತ್ತದೆ. ಈಗ ತಾನೆ ಮುಗಿದ ಲೋಕಸಭಾ ಚುನಾವಣೆ ಸಮಯದಲ್ಲಿ ಸಂಸದರು ಗೆದ್ದ ನಂತರ ನಮ್ಮ ಊರಿನತ್ತ ತಲೆಯೇ ಹಾಕಿಲ್ಲ, ಅವರನ್ನು ಕಂಡು ಸಮಸ್ಯೆ ಹೇಳಿಕೊಳ್ಳುವುದಂತೂ ಅಸಾಧ್ಯವೆಂಬ ಆಕ್ರೋಶದ ಮಾತುಗಳನ್ನು ಜನರು ವ್ಯಕ್ತಪಡಿಸಿದ್ದು ಸರಿಯಷ್ಟೇ. ತಮ್ಮನ್ನು ಕಾಣಲು ಬರುವ ಜನರನ್ನು ತಾಸುಗಟ್ಟಲೆ ಕಾಯಿಸುವುದು, ಪದೇ ಪದೇ ತಮ್ಮ ಕಚೇರಿಗೆ ಎಡತಾಕುವಂತೆ ಮಾಡುವುದು, ಅಥವಾ ಭೇಟಿಯಾದರೂ ಅವರ ಸಮಸ್ಯೆಗಳನ್ನು ಸರಿಯಾಗಿ ಆಲಿಸದಿರುವುದು ಸಾಮಾನ್ಯವಾಗಿದೆ.

ತಾವು ದರ್ಶನ ನೀಡಿದ್ದೆ ಮಹದುಪಕಾರವೆಂಬ ಹಮ್ಮು ಅನೇಕರದು. ಕೆಲ ಜಾತಿಯವರು ತಮಗೆ ಓಟು ಹಾಕಿಲ್ಲವೆಂಬ ಲೆಕ್ಕಚಾರದಲ್ಲಿ ಅವರನ್ನು ಸಂಪೂರ್ಣ ಕಡೆಗಣಿಸುವ ಮೂಲಕ ತಾವು ಇಡೀ ಕ್ಷೇತ್ರದ ಎಲ್ಲಾ ಜನರ ಪ್ರತಿನಿಧಿ ಎಂಬುದನ್ನು ಮರೆಯುತ್ತಾರೆ. ಜನರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿರದೆ ಹೋಗಬಹುದು, ಅಥವಾ ಅದು ಸಂಸದರಿಗೆ ಸಂಬಂಧವಿಲ್ಲದೆಯೂ ಇರಬಹುದು. ಆದರೆ ಜನರ ಮಾತನ್ನು ಕನಿಷ್ಠ ಆಲಿಸುವ ಕಳಕಳಿ ಇರಬೇಡವೇ? ಸಮಸ್ಯೆಗಳನ್ನೇ ಅಲಿಸದಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೇ?.

ಇನ್ನು ಕೆಲವರಂತೂ ದರ್ಪ ಮತ್ತು ಅಹಂಕಾರದಿಂದ ಜನರೊಂದಿಗೆ ವರ್ತಿಸುವುದನ್ನು ಕೇಳಿದ್ದೇವೆ. ಉದಾಹರಣೆಗೆ, ವಸ್ತುಪ್ರದರ್ಶನ ಉದ್ಘಾಟನೆಗೆ ಬಂದಿದ್ದ ಕೋಲಾರದ ಬಿಜೆಪಿ ಸಂಸದರು ಮಳಿಗೆಯೊಂದರಲ್ಲಿದ್ದ ಬಡ ಮಹಿಳೆಗೆ ‘ಯಾಕೆ ಕುಂಕುಮ ಇಟ್ಟಿಲ್ಲ, ಗಂಡ ಸತ್ತೋಗಿದ್ದಾನ?’ ಎಂದು ಗದರುತ್ತಾರೆ. ಇದೇ ಮಾತನ್ನು ಶ್ರೀಮಂತ ಮಹಿಳೆಗೆ ಹೇಳುವ ಧೈರ್ಯ ಈ ಸಂಸದರಿಗಿದೆಯೇ? ಮನೆ ಮಠ ಕಳೆದುಕೊಂಡ ನಿರಾಶ್ರಿತರಿಗೆ ಬಿಸ್ಕೆಟ್ ಎಸೆಯುವ ರೀತಿಯಾಗಲಿ, ಅಥವಾ ಕೆಲಸ ಮಾಡಿಕೊಡಲು ಪ್ರತಿಫಲದ ನಿರೀಕ್ಷೆಯಾಗಲಿ, ವರ್ತನೆಯಲ್ಲಿ ದರ್ಪ ತೋರುವುದಾಗಲಿ – ಇವೆಲ್ಲವೂ ಪಾಳೆಗಾರಿಕೆಯ ಮನೋಭಾವವೇ ಹೊರತು, ಪ್ರಜಾತಂತ್ರದ ಮಾದರಿಯಲ್ಲ.

ಚುನಾವಣೆ ಸಮಯದಲ್ಲಿ ಮಾತ್ರ ಸಾಮಾನ್ಯರೊಂದಿಗೆ ವಿನಯದಿಂದ ವರ್ತಿಸುವ ಮತ್ತು ಅಧಿಕಾರ ಬಂದ ತಕ್ಷಣ ಪಾಳೆಗಾರಿಕೆ ಧೋರಣೆ ತೋರುವ ಅನೇಕ ಜನಪ್ರತಿನಿಧಿಗಳಿಗೆ ಪ್ರಜಾಪ್ರಭುತ್ವವು ಕೇವಲ ಐದು ವರ್ಷಗಳಿಗೊಮ್ಮೆ ನಡೆಯುವ ನಾಟಕವಾಗಿದ್ದು, ಅಂದು ಮಾತ್ರ ಸೇವಕರ ಪಾತ್ರ ವಹಿಸುವ ಇವರು ನಂತರದಲ್ಲಿ ಜನಸಾಮಾನ್ಯರನ್ನು ಉಪೇಕ್ಷಿಸುವುದು ಸರ್ವೆಸಾಮಾನ್ಯವಾಗಿದೆ.

ಕಳೆದ 17ನೇ ಲೋಕಸಭೆಯಲ್ಲಿ ಅನೇಕ ಸಂಸದರ ಪ್ರಗತಿಯು ಅಷ್ಟೇನೂ ತೃಪ್ತಿಕರವಾಗಿರಲಿಲ್ಲವೆಂದು ತಿಳಿದು ಬಂದಿರುತ್ತದೆ. ಹಿಂದಿನ ಲೋಕಭೆಯ ಎಲ್ಲಾ ಅಧಿವೇಶನಗಳಲ್ಲಿ ಕೇವಲ 25 ಭಾಗದಷ್ಟು ಸಂಸದರು ಮಾತ್ರ 90% ಕ್ಕೂ ಹೆಚ್ಚು ಹಾಜರಾತಿ ಹೊಂದಿದ್ದು, ಅವರು ಸರಾಸರಿ 45 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಪಿ.ಆರ್.ಎಸ್. ಶಾಸಕಾಂಗ ಸಂಶೋಧನೆಯ (PRS Legislative Research) ವರದಿಯು ತಿಳಿಸುತ್ತದೆ. ಒಟ್ಟು 14 ಸಂಸದರು (ಕರ್ನಾಟಕದ ಐದು ಸಂಸದರು ಸೇರಿದಂತೆ) ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲವೆಂದು, ಹಾಗೂ 24 ಸಂಸದರು (ಕಾಂಗ್ರೆಸ್ಸಿನ ಸಂಸದೆ ಸೋನಿಯಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಕರ್ನಾಟಕದ ಮೂರು ಸಂಸದರು ಸೇರಿದಂತೆ) ಒಂದೇ ಒಂದು ಪ್ರಶ್ನೆಯನ್ನು ಎತ್ತಿಲ್ಲವೆಂದು ಮತ್ತು 73% ಸಂಸದರು ಖಾಸಗಿ ಸದಸ್ಯರ ಯಾವೊಂದು ಮಸೂದೆಯನ್ನು ಸಲ್ಲಿಸುವ ಗೊಡವೆಗೆ ಹೋಗಿಲ್ಲವೆಂಬ ವಿಷಯವನ್ನು ಇದೇ ವರದಿಯು ಹೇಳುತ್ತದೆ.

ದುರಂತವೆಂದರೆ ಹೆಚ್ಚು ಭಾಗವಹಿಸಿದ್ದ ಕೆಲವು ಸಂಸದರಿಂದ ಅನೂಕೂಲಕ್ಕಿಂತ ಹಾನಿಯೇ ಉಂಟಾಗಿದೆ. ಉದಾಹರಣೆಗೆ ಕೇಂದ್ರ ಸರ್ಕಾರವು ರಾಜ್ಯದ ಪಾಲಿನ ನಿಧಿ ಬಿಡುಗಡೆ ಮಾಡದಿರುವಾಗ, ಮಾತುಗಾರ ಸಂಸದರೊಬ್ಬರು ಕರ್ನಾಟಕದ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವ ಬದಲು, ವ್ಯತಿರಿಕ್ತವಾಗಿ ಮಾತನಾಡಿದ್ದನ್ನು ಈ ನಾಡಿನ ಜನತೆ ಮರೆಯಲಾದೀತೇ? ಅಷ್ಟೇ ಏಕೆ, ಪ್ರಸ್ತುತ ಕರ್ನಾಟಕ ಸರ್ಕಾರವು ಈ ಬಗ್ಗೆ ದೆಹಲಿ ಚಲೋ ಧರಣಿ ನಡೆಸಿದಾಗ, ಆಗಿನ 28 ಸಂಸದರಲ್ಲಿ 27 ಸಂಸದರು ಈ ಹೋರಾಟದಲ್ಲಿ ಭಾಗಿಯಾಗದ ದುರಂತವನ್ನು ಮತದಾರರು ಕಾಣಬೇಕಾಯಿತು. ಇದಲ್ಲದೆ, ಕೇವಲ ಒಂದೆರಡು ಸಂಸದರನ್ನು ಹೊರತು ಪಡಿಸಿ ಉಳಿದವರಾರು ಸಂಸತ್ತಿನಲ್ಲಿ ರೈತರ ಪರವಾಗಿ ರಾಜ್ಯಕ್ಕೆ ಬರ ಪರಿಹಾರ ನೀಡುವಂತೆ ಒತ್ತಾಯಿಸಿ ಧ್ವನಿ ಎತ್ತಲಿಲ್ಲ!

ಆದರೆ, ಮುಂದೆಯೂ ಹೀಗೆ ನಡೆಯಲು ಸಾಧ್ಯವಿಲ್ಲ. ಸಮಯ ಬದಲಾಗುತ್ತಿದೆ. ಜನರ ಅರಿವು ಮತ್ತು ಪ್ರಶ್ನಿಸುವ ಮನೋಭಾವ ಹೆಚ್ಚಾಗಿದ್ದು, ಅದಕ್ಕೆ ಸಾಮಾಜಿಕ ಜಾಲತಾಣಗಳು ಸೂಕ್ತ ವೇದಿಕೆ ಒದಗಿಸುತ್ತಿವೆ. ಜನರು ಅವಮಾನ ಮತ್ತು ಗುಲಾಮಿತನದ ಧೋರಣೆಯನ್ನು ಸಹಿಸುವುದಿಲ್ಲ ಎಂಬುದಕ್ಕೆ ಆಂದ್ರದ ತೆನಾಲಿ ಕ್ಷೇತ್ರದ ಶಾಸಕರೊಬ್ಬರು ತನ್ನನ್ನು ಪ್ರಶ್ನಿಸಿದಾತನಿಗೆ ಹೊಡೆದು, ತಿರುಗಿ ಕಪಾಳ ಮೋಕ್ಷ ಮಾಡಿಸಿಕೊಂಡ ಘಟನೆ ಮತ್ತು ಹಾಸನ ಸಂಸದನ ಅಸಹ್ಯಕರ ಲೈಂಗಿಕ ಶೋಷಣೆಯ ವಿರುದ್ಧದ ಜನಪರ ಹೋರಾಟಗಳು ಸಾಕ್ಷಿಯಾಗಿವೆ. ಆದ್ದರಿಂದ ಸಂಸದರು ಗೆದ್ದೆವೆಂಬ ಹಮ್ಮಿನಲ್ಲಿ ಬೀಗಿ ಬೀಳದಿರಲಿ ಎಂಬುದು ಜನರ ಸಲಹೆ ಮತ್ತು ಅಪೇಕ್ಷೆಯಾಗಿದೆ. ಎಲ್ಲಾ ಸಂಸದರು ಹೀಗೆ ಇದ್ದಾರೆಂಬ ಅಭಿಪ್ರಾಯವಲ್ಲ, ಕೆಲವರು ಇದಕ್ಕೆ ಅಪವಾದವಿರಬಹುದು. ಒಟ್ಟಾರೆಯಾಗಿ ಸಂಸದರಿಂದ ಜನರು ಸುಧಾರಿತ ವರ್ತನೆ ಮತ್ತು ಪ್ರಗತಿಯನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದಂತೂ ಖಂಡಿತಾ.

ಸಂಸದರು ಹಲವು ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದಾರೆ. ತಮ್ಮ ಜನರ ಮತ್ತು ಪ್ರದೇಶದ ಸಮಸ್ಯೆ ಹಾಗೂ ಕಾಳಜಿಗಳನ್ನು ಸಂಸತ್ತಿನಲ್ಲಿ ಧ್ವನಿಸಿ ಸೂಕ್ತ ಪರಿಹಾರ ದೊರಕಿಸುವುದು ಬಹು ಮುಖ್ಯವಾಗಿದೆ. ಈ ದಿಸೆಯತ್ತ, 18ನೇ ಲೋಕಸಭೆಗೆ ಆಯ್ಕೆಯಾಗಲಿರುವ ಎಲ್ಲಾ ಪಕ್ಷದ ಸಂಸದರನ್ನು ‘ಮಾದರಿ ಸಂಸದ’ರನ್ನಾಗಿ ನೋಡಲು ಜನರು ಬಯಸುತ್ತಾರೆ.

ಮೊದಲಿಗೆ, ಜನರನ್ನು ಅದರಲ್ಲೂ ಸಾಮಾನ್ಯರನ್ನು ನಿಕೃಷ್ಟರಂತೆ ಕಾಣುವ ಅಥವಾ ಇವರೇನು ಮಾಡಿಯಾರು ಎಂಬ ಭಾವನೆ ಇದ್ದಲ್ಲಿ ಅದನ್ನು ಬೇಗನೆ ಬದಲಾಯಿಸಿಕೊಳ್ಳುವುದು ಉತ್ತಮ. ಜನರು ತಮ್ಮ ಬಳಿಗೆ ಭಿಕ್ಷೆ ಬೇಡಲು ಬಂದಿದ್ದಾರೆಂಬಂತೆ ವರ್ತಿಸುವುದನ್ನು ಬಿಡುವುದು ಒಳಿತು. ತಮ್ಮ ದೂರವಾಣಿ ಸಂಖ್ಯೆ ಮತ್ತು ಇಮೈಲ್ ವಿಳಾಸವನ್ನು ಸಾರ್ವಜನಿಕವಾಗಿ ಪ್ರಕಟಿಸಿದರೆ ಸಾಲದು, ಅದಕ್ಕೆ ಸೂಕ್ತವಾಗಿ ಉತ್ತರಿಸುವ ವ್ಯವಸ್ಥೆಯಾಗಬೇಕು. ಜನರನ್ನು ಗಂಟೆಗಟ್ಟಲೆ ಕಾಯಿಸುವ, ಪದೇ ಪದೇ ಅಲೆಸುವ ಮತ್ತು ಗೊಂದಲದ ಉತ್ತರ ನೀಡುವ ಪರಿಪಾಠ ನಿಲ್ಲಬೇಕು. ಕೆಲಸ ಆಗುತ್ತದೆಯೇ, ಯಾವಾಗ ಆಗುತ್ತದೆ, ಅಥವಾ ಆಗದಿದ್ದರೆ ಯಾಕೆ ಎಂಬಂತಹ ಸ್ಪಷ್ಟತೆಯ ಉತ್ತರಗಳನ್ನು ನೀಡುವ ಮೂಲಕ ಕಾಣಲು ಬಂದವರ ಮುಂದಿನ ದಾರಿ ಸರಳವಾಗುವಂತೆ ಮಾಡುವ ವೃತ್ತಿಪರತೆಯ ಕಾರ್ಯವೈಖರಿಯನ್ನು ಜನರು ತಮ್ಮಿಂದ ಅಪೇಕ್ಷಿಸುತ್ತಾರೆ. ಕಾಣಲು ಬಂದವರಿಗೆ ಅಲ್ಲಿ ಹೋಗಿ, ಇಲ್ಲಿ ಹೋಗಿ ಎಂದೆಲ್ಲಾ ಹೇಳಿ ಅವರ ಅಲೆದಾಟವನ್ನು ಹೆಚ್ಚಿಸುವ ಬದಲು ನೀವೇ ಸಂಬಂಧ ಪಟ್ಟವರನ್ನು ಸಂಪರ್ಕಿಸಿ ಕೆಲಸ ಸುಗಮವಾಗುವಂತೆ ಮಾಡಿ. ಸರಿಯಾದ ಮಾರ್ಗವೆಂದರೆ ಜನರು ನಿಮ್ಮ ಬಳಿಗೆ ಬರದೆ, ನೀವೇ ಅವರನ್ನು ಸಂಪರ್ಕಿಸುವುದಾಗಿದೆ. ಮುಂದುವರಿದ ಇಂದಿನ ತಂತ್ರಜ್ಞಾನದ ಕಾಲದಲ್ಲಿ ಜನರನ್ನು ಸುಲಭವಾಗಿ ತಲುಪುವ ವ್ಯವಸ್ಥೆ ತರುವುದು ಕಷ್ಟವೇನಲ್ಲ.

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ತಾವುಗಳು ಸಂವಿಧಾನಾತ್ಮಕ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರೆಂದು ಜನತೆ ನಂಬಿ ತಮಗೆ ಮತ ನೀಡಿದೆ. ನಿಮ್ಮ ಜನರ ವೈಯಕ್ತಿಕ ಮತ್ತು ಕ್ಷೇತ್ರದ ಸಾರ್ವತ್ರಿಕ ಸಮಸ್ಯೆಗಳನ್ನು ಮತ್ತೊಮ್ಮೆ ಆಳವಾಗಿ ಅಧ್ಯಯನ ಮಾಡಿ, ಅರಿತುಕೊಂಡ ವಿಷಯಗಳನ್ನು ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ವಿಸ್ತರಿಸಿ, ವಿಶ್ಲೇಷಿಸಿ ಹಾಗೂ ಸಂಬಂಧಿತರೊಂದಿಗೆ ಚರ್ಚಿಸಿ, ಪೂರಕ ಅಂಕಿ ಅಂಶ ಮತ್ತು ದಾಖಲೆಗಳ ಸಹಿತ ಸಂಸತ್ತಿನಲ್ಲಿ ಮಂಡಿಸುವ ಮೂಲಕ ಜನಪರ ನೀತಿ ನಿಯಮಗಳನ್ನು ತರುತ್ತೀರೆಂದು ತಮ್ಮ ಕ್ಷೇತ್ರದ ಎಲ್ಲಾ ಜನರ ದೃಢ ನಂಬಿಕೆಯಾಗಿದೆ.
ತಮಗೆ ಶುಭವಾಗಲಿ!

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವರಾಜ ರಾಯರೆಡ್ಡಿ ಮಾಹಿತಿ ತಿಳಿದುಕೊಂಡು ಮಾತನಾಡಲಿ: ದಿನೇಶ್ ಗೂಳಿಗೌಡ

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂಬ ಮುಖ್ಯಮಂತ್ರಿಗಳ ಆರ್ಥಿಕ...

ಬಾಲ್ಯ ವಿವಾಹ | ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಳವಳ

ಬಾಲ್ಯ ವಿವಾಹ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ದುರದೃಷ್ಟಕರ...

ಉಪಚುನಾವಣೆ ಫಲಿತಾಂಶ | 13ರ ಪೈಕಿ 10ರಲ್ಲಿ ಗೆದ್ದ ‘ಇಂಡಿಯಾ’; ಎನ್‌ಡಿಎಗೆ ಕೇವಲ 2 ಸ್ಥಾನ

ಲೋಕಸಭಾ ಚುನಾವಣೆಯಲ್ಲಿನ ಪ್ರಬಲ ಪ್ರದರ್ಶನವನ್ನು ಮುಂದುವರೆಸಿರುವ 'ಇಂಡಿಯಾ' ಮೈತ್ರಿಕೂಟ ಏಳು ರಾಜ್ಯಗಳ...