ಮೋದಿ ವಿರುದ್ಧ ಎದೆ ಸೆಟೆಸಿದ ಪಂಜಾಬ್ ಪುನಃ ಕೇಜ್ರೀವಾಲರ ಪೊರಕೆ ಹಿಡಿಯುವುದೇ?

Date:

ದೇಶದಲ್ಲೇ ಅತಿ ಹೆಚ್ಚು ಶೇಕಡಾವಾರು ದಲಿತರಿರುವ ಈ ರಾಜ್ಯದ 13 ಸೀಟುಗಳು ಯಾರ ಪಾಲಾಗಲಿವೆ? ಪಂಚನದಿಗಳ ನಾಡಿನಲ್ಲಿ ಆಪ್- ಕಾಂಗ್ರೆಸ್ ದೋಸ್ತಿ ಪಕ್ಷಗಳ ನಡುವೆಯೇ ಜಂಗೀ ಕುಸ್ತಿ!


2022ರ
ಚುನಾವಣೆಗಳಲ್ಲಿ ದೈತ್ಯ ಬಹುಮತದಿಂದ ಪಂಜಾಬ್ ವಿಧಾನಸಭೆಗೆ ಆರಿಸಿ ಬಂದ ಆಮ್ ಆದ್ಮೀ ಪಾರ್ಟಿಯ ಜನಪ್ರಿಯತೆಯನ್ನು ಹಾಲಿ ಲೋಕಸಭಾ ಚುನಾವಣೆ ಪರೀಕ್ಷೆಗೆ ಒಡ್ಡಿದೆ. ಇದೇ ಜೂನ್ ಒಂದರ ಅಂತಿಮ ಹಂತದಲ್ಲಿ ಈ ರಾಜ್ಯದ ಎಲ್ಲ 13 ಸ್ಥಾನಗಳಿಗೆ ಒಟ್ಟಿಗೆ ಮತದಾನ ನಡೆಯಲಿದೆ.

ಪಂಜಾಬ್ ದೇಶದಲ್ಲೇ ಅತಿ ಹೆಚ್ಚು ಶೇಕಡಾವಾರು (32) ದಲಿತ ಜನಸಂಖ್ಯೆಯನ್ನು ಹೊಂದಿದ ರಾಜ್ಯ. ಮೂರನೆಯ ಒಂದರಷ್ಟು ಜನಸಂಖ್ಯೆಯಿದ್ದರೂ ದಲಿತರಿಗೆ ರಾಜ್ಯಾಧಿಕಾರ ದಕ್ಕಲಿಲ್ಲ. ಜಾಟ್ ಸಿಖ್ ಜಮೀನುದಾರರೇ ಅದನ್ನು ಅನುಭವಿಸಿಕೊಂಡು ಬಂದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ ಸಲ ತನ್ನ ಅಧಿಕಾರಾವಧಿಯ ಕಟ್ಟಕಡೆಯಲ್ಲಿ ಕಾಂಗ್ರೆಸ್ ದಲಿತ ಚರಣಜಿತ್ ಸಿಂಗ್ ಚೆನ್ನಿಯವರನ್ನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳ್ಳಿರಿಸಿತು. ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದರು. ಎರಡೂ ಕಡೆ ಸೋತರು. ದಲಿತರ ಮತಗಳು ಒಂದೇ ಕಡೆ ಬೀಳದೆ ಹಲವು ಪಕ್ಷಗಳಲ್ಲಿ ಹಂಚಿ ಹೋದದ್ದು ವಾಸ್ತವ. ದಲಿತ ಚಹರೆ ಮುಂದೆ ಮಾಡಿದ ಕಾಂಗ್ರೆಸ್ ನಡೆಯ ಕುರಿತು ಮೇಲ್ವರ್ಗಗಳ ಅಸಮಾಧಾನ ಆಪ್ ಗೆ ಅನುಕೂಲವಾಗಿ ಪರಿಣಮಿಸಿದ ವರದಿಗಳೂ ಇದ್ದವು.

ದೆಹಲಿಯಲ್ಲಿ ಭಾರೀ ಯಶಸ್ಸು- ಜನಮನ್ನಣೆ ಗಳಿಸಿರುವ ಶಿಕ್ಷಣ, ವಿದ್ಯುಚ್ಛಕ್ತಿ ಹಾಗೂ ಆರೋಗ್ಯ ವಲಯಗಳಲ್ಲಿನ ತನ್ನ ಸಾಧನೆಗಳ ಹೇಳುವ ಜೊತೆಗೆ ಹೊಸ ಜನಕಲ್ಯಾಣ ಕಾರ್ಯಕ್ರಮಗಳ ಆಶ್ವಾಸನೆ ನೀಡಿ ಪಂಜಾಬಿನ ಜನಮನ ಗೆದ್ದಿತ್ತು ಆಪ್. ದಲಿತರು ಕೂಡ ಗಣನೀಯ ಪ್ರಮಾಣದಲ್ಲಿ ಈ ಪಕ್ಷಕ್ಕೆ ಒಲಿದಿದ್ದರು.

ಹಲವಾರು ರಾಜ್ಯಗಳು ಇತ್ತೀಚಿನ ವರ್ಷಗಳಲ್ಲಿ ಬಲಪಂಥೀಯ ಹಾದಿ ಹಿಡಿದರೂ ಪಂಜಾಬ್ ಈ ಪ್ರವೃತ್ತಿಯಿಂದ ದೂರ ಉಳಿಯುತ್ತಲೇ ಬಂದಿದೆ.

ಮೋದಿಯವರ ಹಿಂದೂ ಬಹುಸಂಖ್ಯಾತ ರಾಜಕಾರಣ ಮತ್ತು ಆಕ್ರಮಣಕಾರಿ ರಾಷ್ಟ್ರವಾದಕ್ಕೆ ಪಂಜಾಬಿನಲ್ಲಿ ದೊಡ್ಡ ಮಾರುಕಟ್ಟೆಯೇನೂ ಇಲ್ಲ. ಇಲ್ಲಿನ ಚುನಾವಣೆಗಳಲ್ಲಿ ರಾಷ್ಟ್ರೀಯ ವಿಚಾರಗಳ ನಾಣ್ಯ ನಡೆಯುವುದಿಲ್ಲ. ಲೋಕಸಭೆ ಚುನಾವಣೆಗಳಲ್ಲಿ ಕೂಡ ಸ್ಥಳೀಯ ವಿಚಾರಗಳನ್ನು ಆಧರಿಸಬೇಕಾಗುತ್ತದೆ. ರೈತರ ಪ್ರತಿಭಟನೆ ಸಿಡಿದೆದ್ದಿರುವ ಪಂಜಾಬಿನಲ್ಲಿ ಬಿಜೆಪಿಯ ವಿರುದ್ಧ ಪ್ರತಿಭಟನೆಗಳು ಜರುಗಿವೆ. ಕಪ್ಪುಬಾವುಟ ಪ್ರದರ್ಶನ ಎದುರಿಸಿದ್ದಾರೆ ಬಿಜೆಪಿ ಅಭ್ಯರ್ಥಿಗಳು. ಹಳ್ಳಿಗಳಿಗೆ ಅವರನ್ನು ಬಿಟ್ಟುಕೊಳ್ಳಲಾಗುತ್ತಿಲ್ಲ. ಪ್ರಚಾರದ ಅವಕಾಶ ಕುಗ್ಗಿ ಹೋಗಿದೆ.

ಇವರೆಲ್ಲ ನಕಲಿ ರೈತರು ಎನ್ನುತ್ತಿದ್ದಾರೆ ಬಿಜೆಪಿ ಅಧ್ಯಕ್ಷ ಸುನಿಲ್ ಜಾಖಡ್. ಸುಮಾರು ಎರಡೂವರೆ ದಶಕಗಳಷ್ಟು ದೀರ್ಘ ಕಾಲ ಅಕಾಲಿದಳದೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಬಿಜೆಪಿ ಇಲ್ಲಿ ದುರ್ಬಲವಾಗಿಯೇ ಉಳಿದಿದೆ. ಮಹಾರಾಷ್ಟ್ರ, ಕರ್ನಾಟಕ, ಒಡಿಶಾ, ಪಶ್ಚಿಮಬಂಗಾಳ ಹಾಗೂ ಬಿಹಾರದಲ್ಲಿ ಸ್ಥಳೀಯ ಪಕ್ಷಗಳೊಂದಿಗೆ ಕಿರಿಯ ಪಾಲುದಾರನಾಗಿ ಮೈತ್ರಿ ಮಾಡಿಕೊಂಡ ಬಿಜೆಪಿ ಇಂದು ಹಿರಿಯ ಪಾಲುದಾರ ಅಥವಾ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್‌ ಈ ಮಾತಿಗೆ ಹೊರತಾದ ರಾಜ್ಯ.

2019ರ ಲೋಕಸಭಾ ಚುನಾವಣೆಯಲ್ಲಿ ಎಂಟು ಸೀಟುಗಳನ್ನು ಗೆದ್ದು, ಶೇ.40ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷ ಆನಂತರ ಛಿದ್ರಗೊಂಡು ಒಡೆದ ಮನೆಯಾಗಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್, ಸುನೀಲ್ ಜಾಖಡ್, ರಾಣಾ ಗುರುಮೀತ್ ಸಿಂಗ್ ಸೋಧಿ ಹಾಗೂ ಪ್ರಣೀತ್ ಕೌರ್ ಅವರಂತಹ ಹೇಮಾಹೇಮಿ ನಾಯಕರನ್ನು ಕಳೆದುಕೊಂಡಿದೆ. ಇವರೆಲ್ಲ ಈಗ ಬಿಜೆಪಿಯ ಪಾಲಾಗಿದ್ದಾರೆ. ಸುನಿಲ್ ಜಾಖಡ್ ಪಂಜಾಬ್ ಬಿಜೆಪಿ ಅಧ್ಯಕ್ಷರೇ ಆಗಿ ಹೋಗಿದ್ದಾರೆ. ಕ್ಯಾಪ್ಟನ್ ನಂತರ ರಾಜ್ಯಾದ್ಯಂತ ಪ್ರಚಾರ ಕೈಗೊಳ್ಳಬಲ್ಲ ನಾಯಕ ಚಹರೆಗಳು ಕಾಂಗ್ರೆಸ್ಸಿನಲ್ಲಿ ಇಲ್ಲವಾಗಿವೆ.

ಪಂಚನದಿಗಳ ನಾಡಿನಾದ್ಯಂತ ಆಮ್ ಆದ್ಮಿ ಪಾರ್ಟಿಯ ಹೆಜ್ಜೆಗುರುತುಗಳು ನಿಚ್ಚಳವಾಗಿ ದೃಢವಾಗಿ ಒಡಮೂಡಿರುವುದು ಹೌದು. ಆದರೆ ಆಪ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ್ದು, ಅದರ ಕೆಲಸ ಕಾರ್ಯಗಳು ಮತ್ತು ಭರವಸೆಗಳ ಈಡೇರಿಕೆಯನ್ನು ಮತದಾರರು ಒರೆಗೆ ಹಚ್ಚಲಿದ್ದಾರೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ ಭರವಸೆಯನ್ನು ಈ ಪಕ್ಷ ಈಡೇರಿಸಿಲ್ಲ. ರಾಜ್ಯದ ಒಂದು ಕೋಟಿ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಒಂದು ಸಾವಿರ ರುಪಾಯಿ ನೀಡುವ ಭರವಸೆಯೂ ಬೆಳಕು ಕಂಡಿಲ್ಲ. ಈ ಅತೃಪ್ತಿಯ ಬಿಸಿಯನ್ನು ಲೋಕಸಭಾ ಚುನಾವಣೆಯಲ್ಲಿ ಎದುರಿಸುತ್ತಿದೆ ಪೊರಕೆ ಪಕ್ಷ.

ಇಲ್ಲಿ ಕಾಂಗ್ರೆಸ್ ಪಕ್ಷವೇ ಆಪ್ ನ ಪ್ರಮುಖ ಪ್ರತಿಸ್ಫರ್ಧಿ. ದೆಹಲಿ, ಚಂಡೀಗಢ ಹಾಗೂ ಹರಿಯಾಣದಲ್ಲಿ ದೋಸ್ತಿ ಬೆಳೆಸಿರುವ ಈ ಎರಡು ಪಕ್ಷಗಳು ಪಂಜಾಬಿನಲ್ಲಿ ಒಂದನ್ನು ಮತ್ತೊಂದು ಸೋಲಿಸಲು ರಾಜಕೀಯ ಹಗೆಗಳಾಗಿ ಕಾದಾಡುತ್ತಿವೆ. ರಾಜ್ಯದಲ್ಲಿ ಆಪ್ ಸರ್ಕಾರ ಮತ್ತು ಕೇಂದ್ರದಲ್ಲಿ ಮೋದಿ ಸರ್ಕಾರದ ವಿರುದ್ಧ ಮತದಾರರಲ್ಲಿ ಆಡಳಿತವಿರೋಧಿ ಭಾವನೆಯೊಂದೇ ಕಾಂಗ್ರೆಸ್ ಪಕ್ಷದ ಬಂಡವಾಳ. ದೆಹಲಿ ಗಡಿಗಳಲ್ಲಿ ನಡೆದ ಐತಿಹಾಸಿಕ ರೈತ ಚಳವಳಿಗಳ ಜೊತೆಗೆ ತಾನು ಅಚಲವಾಗಿ ನಿಂತದ್ದನ್ನೂ ನೆನಪಿಸಿಕೊಡುತ್ತಿದೆ.

2019ರಲ್ಲಿ ಕಾಂಗ್ರೆಸ್, ಶಿರೋಮಣಿ ಅಕಾಲಿದಳ (ಬಾದಲ್)- ಬಿಜೆಪಿ, ಹಾಗೂ ಆಮ್ ಆದ್ಮಿ ಪಾರ್ಟಿಯ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿತ್ತು. ಈ ಸಲ ಬಹುಜನಸಮಾಜ ಪಾರ್ಟಿ ಕೂಡ ಎಲ್ಲ ಸ್ಥಾನಗಳಿಗೆ ಸ್ವತಂತ್ರವಾಗಿ ಸ್ಪರ್ಧಿಸಿದೆ. ಬಿ.ಎಸ್.ಪಿ.ಯ ಮತಗಳಿಕೆ ಪ್ರಮಾಣ ಕಾಲಾನುಕ್ರಮದಲ್ಲಿ ಸತತ ಕುಸಿತ ಕಂಡಿದೆ. ಹಾಲಿ ದಲಿತ ಮತಗಳ ಮೇಲೆ ಕಣ್ಣಿಟ್ಟು ಕೆಲಸ ಮಾಡುತ್ತಿದೆ.

ಅರೆರಾಜ್ಯದ ಸ್ಥಾನಮಾನವಿರುವ ದೆಹಲಿಯಲ್ಲಿ ಗೆದ್ದ ಆಮ್ ಆದ್ಮಿ ಪಾರ್ಟಿಯನ್ನು ಆಲಿಂಗಿಸಿಕೊಂಡ ಮತ್ತೊಂದು ರಾಜ್ಯವಿದ್ದರೆ ಅದು ಪಂಜಾಬ್. ಹತ್ತು ವರ್ಷಗಳ ಹಿಂದೆಯೇ ಇಲ್ಲಿನ ಮೂರು ಲೋಕಸಭಾ ಸೀಟುಗಳನ್ನು ಗೆದ್ದು ಗಮನ ಸೆಳೆದಿತ್ತು ಆಮ್ ಆದ್ಮಿ ಪಾರ್ಟಿ. 2017ರ ವಿಧಾನಸಭಾ ಚುನಾವಣೆಗಳಲ್ಲಿ ಪ್ರಧಾನ ಪ್ರತಿಪಕ್ಷವಾಯಿತು. 2022ರಲ್ಲಿ ದೈತ್ಯ ಬಹುಮತದಿಂದ ರಾಜ್ಯದ ಅಧಿಕಾರ ಸೂತ್ರ ಹಿಡಿಯಿತು.

ಇದನ್ನೂ ಓದಿ ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಬೀಳಿಸೋದಾಗಿ ಅಮಿತ್ ಶಾ ಬೆದರಿಕೆ

ಬಿಜೆಪಿಯಂತೆ ಅಕಾಲಿದಳ (ಬಾದಲ್) ಕೂಡ 2019ರಲ್ಲಿ ಗೆದ್ದಿದ್ದು ಎರಡೇ ಸ್ಥಾನಗಳು. 2022ರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಶೋಚನೀಯ ಸೋಲು ಎದುರಿಸಿತು. ಕೇವಲ ಮೂರು ಸ್ಥಾನಗಳನ್ನು ಗೆದ್ದಿತ್ತು. ಸರ್ವಾಧಿಕಾರಿ ಧೋರಣೆ, ಧರ್ಮದ್ರೋಹದ ಪ್ರಕರಣಗಳ ಕಾರಣ ಜನಪ್ರಿಯತೆ ಕಳೆದುಕೊಂಡಿದೆ. ಹಿರಿಯ ನಾಯಕರು ಪಕ್ಷ ತೊರೆದಿದ್ದಾರೆ. ನೂರು ವರ್ಷಗಳ ಇತಿಹಾಸವಿರುವ ಪಕ್ಷ ಇಳಿಜಾರಿನ ಹಾದಿ ಹಿಡಿದಿದೆ. ಈ ಸಲವೂ ಶೋಚನೀಯ ಸೋಲಾದರೆ ಬಾದಲ್ ಕುಟುಂಬ ಸದ್ಯಕ್ಕಾದರೂ ಅವನತಿಯ ಕತ್ತಲಿಗೆ ಜಾರುವುದು ನಿಶ್ಚಿತ.

ಧಾರ್ಮಿಕ ತೀವ್ರವಾದಿಗಳು ಚುನಾವಣಾ ಕಣದಲ್ಲಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿತನಾಗಿರುವ ಅಮೃತಪಾಲ್ ಸಿಂಗ್ ಅಸ್ಸಾಮಿನ ದಿಬ್ರೂಗಢ ಜೈಲುವಾಸಿ. ಜೈಲಿನಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾನೆ. ಅಕಾಲಿದಳ (ಅಮೃತಸರ) ಪಕ್ಷದ ಮುಖ್ಯಸ್ಥ ಮಾಜಿ ಐಪಿಎಸ್ ಅಧಿಕಾರಿ ಸಿಮರನ್ಜಿತ್ ಸಿಂಗ್ ಮಾನ್ ಸೇರಿದಂತೆ ಹಲವು ಪ್ರತ್ಯೇಕತಾವಾದಿ ನಾಯಕರು ಚುನಾವಣೆಯ ಕಣದಲ್ಲಿದ್ದಾರೆ.
1984ರಲ್ಲಿ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ ಆಕೆಯ ಇಬ್ಬರು ಅಂಗರಕ್ಷಕರ ಪೈಕಿ ಒಬ್ಬಾತ ಬೇಅಂತ್ ಸಿಂಗ್. ಆತನ ಮಗ ಸರಬ್ಜಿತ್ ಸಿಂಗ್ ಖಾಲ್ಸಾ ಈ ಚುನಾವಣೆಯಲ್ಲಿ ಫರೀದ್ ಕೋಟ್ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿದ್ದಾರೆ. ತಮ್ಮ ಸಭೆಗಳತ್ತ ಭಾರೀ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿರುವ ವರದಿಗಳಿವೆ.

ಇದನ್ನೂ ಓದಿ ಅಂತ್ಯಗೊಳ್ಳುತ್ತಿದೆ ಮೋದಿ-ಶಾ ‘ಬ್ರಾಂಡ್’ ರಾಜಕಾರಣ; ಅದಕ್ಕೆ ಮಹಾರಾಷ್ಟ್ರವೇ ಸಾಕ್ಷಿ

ಪಂಜಾಬಿನ ರಾಜಕಾರಣ ಕಳೆದ ಐದು ವರ್ಷಗಳಲ್ಲಿ ನಾಟಕೀಯ ಬದಲಾವಣೆ ಕಂಡಿದೆ. ಎರಡು ಪಕ್ಷಗಳ ನಡುವಣ ಸ್ಪರ್ಧೆ ಇದೀಗ ಐದು ಪಕ್ಷಗಳಿರುವ ಪಂಚಕೋನದ ಪೈಪೋಟಿಯಾಗಿ ಹೋಗಿದೆ. ಹೊಸ ಚುನಾವಣಾ ಮೈತ್ರಿಗಳು ತಲೆಯೆತ್ತಿವೆ. ರೈತಾಪಿ ಬಿಕ್ಕಟ್ಟಿನ ಜೊತೆ ಜೊತೆಗೆ ತೀವ್ರಗಾಮಿ ಭಾವನೆಗಳು ಪುನಃ ಚಿಗುರತೊಡಗಿವೆ. ಮಾದಕದ್ರವ್ಯಗಳ ವ್ಯಸನಕ್ಕೆ ಕಡಿವಾಣವೇ ಇಲ್ಲವಾಗಿದೆ.

ಮೂರು ರೈತವಿರೋಧಿ ಕಾಯಿದೆಗಳ ವಿರೋಧಿ ಹಿನ್ನೆಲೆಯನ್ನು ಪ್ರತಿಭಟಿಸಿ ಬಿಜೆಪಿಯೊಂದಿಗೆ ಅಕಾಲಿ ದಳ (ಬಾದಲ್) ಮೈತ್ರಿ ಮುರಿದುಕೊಂಡಿತು. ಆನಂತರ ಎರಡೂ ಮಿತ್ರಪಕ್ಷಗಳ ದಾರಿಗಳು ಬೇರೆಯಾಗಿವೆ. ಶಕ್ತಿ ಕಳೆದುಕೊಂಡಿವೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ; ಸಿ.ಟಿ ರವಿ ವಿರುದ್ಧ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ ನೀಡಿದ್ದ ಮಾಜಿ ಸಚಿವ, ವಿಧಾನ...

ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತದೆ: ಎಎಪಿ

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟಂತೆ ನಟಿಸಿ...

120 ತಾಲ್ಲೂಕುಗಳಲ್ಲಿ ಕ್ರೀಡಾಂಗಣಗಳಿಲ್ಲ; ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯಗೆ ಮಾಹಿತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ...

ಷೇರು ಮಾರುಕಟ್ಟೆಯ ಅಕ್ರಮದ ತನಿಖೆಗಾಗಿ ಟಿಎಂಸಿ ನಿಯೋಗದಿಂದ ಸೆಬಿ ಅಧಿಕಾರಿಗಳ ಭೇಟಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರ ನಿಯೋಗ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ(ಸೆಬಿ)...