ಅಂಬೇಡ್ಕರ್ ಪ್ರತಿಮೆಗಳು ಕೇವಲ ಶಿಲೆಗಳಲ್ಲ, ಅವು ದಲಿತರ ಅಸ್ಮಿತೆಯ ಸಂಕೇತಗಳಾಗಿವೆ. ಹಾಗಾಗಿ, ಪ್ರತಿಮೆಗಳ ನಿರ್ವಹಣೆಗೆ ಕೈಹಾಕುವ ಮೂಲಕ ಯೋಗಿ ಸರ್ಕಾರ ನೇರವಾಗಿ ದಲಿತ ಸಮುದಾಯದ ಭಾವನೆಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಬಹುಜನ ಸಮಾಜ ಪಕ್ಷದ(BSP) ಸಾಂಪ್ರದಾಯಿಕ ದಲಿತ ಮತಗಳನ್ನು ತನ್ನತ್ತ ಸೆಳೆಯಲು ಯೋಗಿ ಸರ್ಕಾರ ಈ ‘ಕಲ್ಯಾಣ ರಾಜಕಾರಣ’ವನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವ ರಾಜ್ಯದಾದ್ಯಂತ ಇರುವ ಎಲ್ಲಾ ಅಂಬೇಡ್ಕರ್ ಪ್ರತಿಮೆಗಳಿಗೆ ಸೂರು(ಮೇಲ್ಛಾವಣಿ) ನಿರ್ಮಿಸುವ ಭರವಸೆ ನೀಡಿರುವುದು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ದಲಿತ ಮತದಾರರನ್ನು ಸೆಳೆಯಲು ಬಿಜೆಪಿ ಸರ್ಕಾರ ಈ ತಂತ್ರ ಹೂಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ದಲಿತರ ಭಾವನೆಗಳೊಂದಿಗೆ ಸಂಪರ್ಕಿಸಲು ಯತ್ನ :
ಅಂಬೇಡ್ಕರ್ ಪ್ರತಿಮೆಗಳು ಕೇವಲ ಶಿಲೆಗಳಲ್ಲ, ಅವು ದಲಿತರ ಅಸ್ಮಿತೆಯ ಸಂಕೇತಗಳಾಗಿವೆ. ಹಾಗಾಗಿ, ಪ್ರತಿಮೆಗಳ ನಿರ್ವಹಣೆಗೆ ಕೈಹಾಕುವ ಮೂಲಕ ಯೋಗಿ ಸರ್ಕಾರ ನೇರವಾಗಿ ದಲಿತ ಸಮುದಾಯದ ಭಾವನೆಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ. ಯೋಗಿ ಸರ್ಕಾರವು ಈ ಹಿಂದೆ ‘ದಲಿತ ಮಿತ್ರ’ ಪ್ರಶಸ್ತಿಯನ್ನು ಕೂಡ ಘೋಷಿಸಿತ್ತು. ಈಗ ಪ್ರತಿಮೆಗಳಿಗೆ ಸೂರು ನಿರ್ಮಿಸುವ ಮೂಲಕ ಅಂಬೇಡ್ಕರ್ ವಾದಿಗಳನ್ನು ಓಲೈಸುವ ಹಾದಿಯಲ್ಲಿದೆ. ಅಂಬೇಡ್ಕರ್ ಪ್ರತಿಮೆಗಳಿಗೆ ಸೂರು ನಿರ್ಮಿಸಿದರೆ ಸಾಲದು, ದಲಿತರ ಮೇಲಿನ ದೌರ್ಜನ್ಯ ತಡೆಯಬೇಕು ಮತ್ತು ಅವರಿಗೆ ಸಾಮಾಜಿಕ ನ್ಯಾಯ ನೀಡುವ ಕನಿಷ್ಠ ಪೊರಯತ್ನವನ್ನಾದರೂ ಯೋಗಿ ಸರ್ಕಾರ ಮಾಡಬೇಕಿದೆ.
2026-27ರ ಬಜೆಟ್‌ನಲ್ಲಿ ರಾಜ್ಯಾದ್ಯಂತ ಇರುವ ಬಾಬಾಸಾಹೇಬ್ ಅಂಬೇಡ್ಕರ್, ಸಂತ ರವಿದಾಸ್ ಮತ್ತು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗಳ ನವೀಕರಣ ಮತ್ತು ಅಭಿವೃದ್ಧಿಗಾಗಿ ಯೋಗಿ ಸರ್ಕಾರ ಸುಮಾರು 500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಕೇವಲ ಸೂರು ಮಾತ್ರವಲ್ಲದೆ, ಪ್ರತಿಮೆಗಳ ಸುತ್ತಲೂ ರಕ್ಷಣಾ ಗೋಡೆಗಳನ್ನು (Boundary Walls) ನಿರ್ಮಿಸಲು ಆದೇಶಿಸಲಾಗಿದೆ. ಅಂಬೇಡ್ಕರ್ ಪ್ರತಿಮೆಗಳನ್ನು ಕಿಡಿಗೇಡಿಗಳ ದುಷ್ಕೃತ್ಯಗಳಿಂದ ರಕ್ಷಿಸುವುದು ನಮ್ಮ ಉದ್ದೇಶ ಎನ್ನುವುದು ಸರ್ಕಾರದ ವಾದ.
ಈ ಯೋಜನೆಯ ಜೊತೆಗೆ, ಅಂಬೇಡ್ಕರ್ ಪ್ರತಿಮೆಗಳು ಇರುವಂತಹ ದಲಿತ ಕೇರಿಗಳು, ಕೊಳಚೆ ಪ್ರದೇಶಗಳು ಮತ್ತು ಬುಡಕಟ್ಟು ಜನಾಂಗದ ವಸತಿ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ. ಒಂದು ವೇಳೆ ಯಾವುದೇ ಪ್ರದೇಶ ಸಂಪರ್ಕದಿಂದ ವಂಚಿತವಾಗಿದ್ದರೆ, ಅದನ್ನು ಕೂಡಲೇ ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ : ಹಾಸನ ಮಣ್ಣಿನ ಹೆಣ್ಣು ದನಿಗಳು | ಜಿಲ್ಲಾ ಲೇಖಕಿಯರ ಬಳಗ ನಡೆದು ಬಂದ ಹಾದಿ
ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಚುನಾವಣಾ ಗಿಮಿಕ್ :
ಉತ್ತರ ಪ್ರದೇಶದಲ್ಲಿ ದಲಿತ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ರಾಜ್ಯದಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ (BSP) ಹಿನ್ನಡೆ ಅನುಭವಿಸುತ್ತಿರುವ ಈ ಕಾಲಘಟ್ಟದಲ್ಲಿ, ಆ ಮತಬ್ಯಾಂಕ್ ಅನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಈ ‘ಸೂರು’ ಅಸ್ತ್ರವನ್ನು ಬಳಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆದ ಹಿನ್ನಡೆಯನ್ನು ಸರಿದೂಗಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರದಲ್ಲಿ ಈ ರೀತಿಯ ʼಚುನಾವಣಾ ಗಿಮಿಕ್ʼ ಮಾಡುವುದಕ್ಕೆ ಬಿಜೆಪಿ ಮುಂದಾಗಿದೆ.
ಇಂತಹ ಏಷ್ಟೇ ಯೋಜನೆಗಳನ್ನು, ಭರವಸೆಗಳನ್ನು ಮುಂದಿಟ್ಟರೂ ಬಿಜೆಪಿಗೆ ರಾಜಕೀಯವಾಗಿ ಲಾಭವಾಗುವುದಿಲ್ಲ ಎನ್ನುವುದು ಪರಮ ಸತ್ಯ. ಬಿಜೆಪಿ ಸರ್ಕಾರ ದಲಿತರನ್ನು ಕೇವಲ ‘ಮತಬ್ಯಾಂಕ್’ ಆಗಿ ಬಳಸಿಕೊಳ್ಳುತ್ತಿದೆ ಮತ್ತು ಅವರ ನೈಜ ಸಮಸ್ಯೆಗಳ ಬಗ್ಗೆ ಅಸಡ್ಡೆ ತೋರುತ್ತದೆ ಎನ್ನುವುದೇ ಮುಖ್ಯ ಕಾರಣ. ಆದರೂ, ತನ್ನ ರಾಜಕೀಯಕ್ಕೆ ಅಂಟಿರುವ ಕಳಂಕವನ್ನು ತೊಳೆದುಕೊಳ್ಳಲು ಯೋಗಿ ಸರ್ಕಾರ ಮಾಡುತ್ತಿರುವ ಕಸರತ್ತಿದು. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಸಂಖ್ಯೆ ಉದ್ದಕ್ಕೆ ಬೆಳೆದುಕೊಂಡಿದೆ ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕಂದಿಲ್ಲ. ದಲಿತ ಯುವತಿಯರ ಮೇಲಿನ ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಯೋಗಿ ಸರ್ಕಾರಕ್ಕೆ ಮಸಿ ಬಳಿದಿದೆ. 2017ರಲ್ಲಿ ಮಹಾರಾಣಾ ಪ್ರತಾಪ್ ಜಯಂತಿಯ ಸಂದರ್ಭದಲ್ಲಿ ನಡೆದ ಮೆರವಣಿಗೆಯಿಂದಾಗಿ ಠಾಕೂರ್ ಮತ್ತು ದಲಿತ ಸಮುದಾಯಗಳ ನಡುವೆ ಸಂಘರ್ಷ ನಡೆದಿತ್ತು. ಇದನ್ನು ಸಹರಾನ್ ಪುರ್ ಹಿಂಸಾಚಾರ ಎಂದೇ ಕರೆಯಲಾಗಿತ್ತು. ಈ ಘಟನೆಯಲ್ಲಿ ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಇದು ರಾಜ್ಯದಲ್ಲಿ ಭೀಮ್ ಆರ್ಮಿಯ ಉಗಮಕ್ಕೂ ಒಂದು ಕಾರಣವಾಯಿತು. ದಲಿತರ ಸ್ಥಿತಿಗತಿ ಉತ್ತರ ಪ್ರದೇಶದಲ್ಲಿ ಯಾವ ಮಟ್ಟಿಗೆ ಇದೆ ಎಂದು ವಿವರಿಸುವುದಕ್ಕೆ ಹತ್ರಾಸ್ ಪ್ರಕರಣವೊಂದೇ ಸಾಕು.
ಹತ್ರಾಸ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ. ಸೆಪ್ಟೆಂಬರ್ 2020ರಲ್ಲಿ, ಹತ್ರಾಸ್ ಜಿಲ್ಲೆಯ 19 ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಯುವತಿಯ ಮೇಲೆ ತೀವ್ರ ದೈಹಿಕ ಹಲ್ಲೆ ನಡೆಸಲಾಗಿತ್ತು, ಆಕೆಯ ಬೆನ್ನೆಲುಬು ಮುರಿದು ನಾಲಿಗೆಯನ್ನು ಕತ್ತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಸಂತ್ರಸ್ತೆಯ ಕುಟುಂಬದ ಒಪ್ಪಿಗೆಯಿಲ್ಲದೆ, ಮಧ್ಯರಾತ್ರಿಯಲ್ಲಿ ಪೊಲೀಸರೇ ಆಕೆಯ ಅಂತ್ಯಸಂಸ್ಕಾರ ನಡೆಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಇದು ಸಾಕ್ಷ್ಯ ನಾಶಪಡಿಸುವ ಯತ್ನ ಎಂದು ವ್ಯಾಪಕ ಟೀಕೆಯೂ ಕೂಡ ವ್ಯಕ್ತವಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ : ಸಿಇಸಿ ವಿರುದ್ಧದ ಅವಿಶ್ವಾಸ; ಕಾರಣವಿಲ್ಲದೇ ನೋಟಿಸ್ ತಿರಸ್ಕಾರ ಕೂಡ ಪ್ರಜಾತಂತ್ರಕ್ಕೆ ಮಾರಕ!
ಉನ್ನಾವೊ ಜಿಲ್ಲೆಯಲ್ಲಿ 2021 ರಲ್ಲಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮೂವರು ದಲಿತ ಬಾಲಕಿಯರು ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾದರು, ಈ ಪ್ರಕರಣವು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಇನ್ನು, ಸೆಪ್ಟೆಂಬರ್ 2022 ರಲ್ಲಿ ನಡೆದ ಲಖಿಂಪುರ್ ಘಟನೆ. ಲಖಿಂಪುರ್ ಖೇರಿಯಲ್ಲಿ ಇಬ್ಬರು ದಲಿತ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ, ಅತ್ಯಾಚಾರ ಎಸಗಲಾಗಿತ್ತು. ನಂತರ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಆ ಬಾಲಕಿಯರ ಶವ ಪತ್ತೆಯಾಗಿತ್ತು. ಈ ಘಟನೆ ರಾಜ್ಯದಲ್ಲಿ ದಲಿತ ಮಹಿಳೆಯರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿತ್ತು.
ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಬೇರೂರಿರುವ ಜಾತಿ ತಾರತಮ್ಯ ಮತ್ತು ಮೇಲ್ಜಾತಿಯವರ ಅಧಿಪತ್ಯ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳುವಲ್ಲಿ ಪೊಲೀಸರ ವಿಳಂಬ ಮತ್ತು ಆರೋಪಿಗಳಿಗೆ ರಾಜಕೀಯ ರಕ್ಷಣೆ ಸಿಗುತ್ತಿದೆ ಎಂಬ ಆರೋಪಗಳು, ದಲಿತರಿಗೆ ಸೇರಿದ ಭೂಮಿಯನ್ನು ಕಬಳಿಸುವ ಪ್ರಯತ್ನದಲ್ಲಿ ನಡೆಯುವ ಹಿಂಸಾಚಾರ, ದಲಿತರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬೆಳೆಯುತ್ತಿರುವುದನ್ನು ಸಹಿಸದ ಮನಸ್ಥಿತಿಗಳು ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳಿಗೆ ಪ್ರಮುಖ ಕಾರಣಗಳಾಗಿವೆ. ರಾಜ್ಯದಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಇಂತಹ ಘಟನೆಗಳೆಲ್ಲವೂ ಯೋಗಿ ಸರ್ಕಾರದ ವರ್ಚಸ್ಸನ್ನು ಕುಂದಿಸುತ್ತಲೇ ಬಂದಿವೆ. ಈಗ ದಲಿತರ ಮತಗಳನ್ನು ಮತ್ತೆ ತನ್ನೆಡೆಗೆ ಸೆಳೆಯುವುದಕ್ಕೆ ದಲಿತರು ಅತ್ಯಂತ ಗೌರವದಿಂದ ನಡೆದುಕೊಳ್ಳುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಸೂರು ನಿರ್ಮಿಸುವ ಕುತಂತ್ರಕ್ಕೆ ಮುಂದಾಗಿದೆ.
ಇನ್ನು, ದಲಿತರ ಓಲೈಕೆಗೆ ಬಿಜೆಪಿ ಸರ್ಕಾರ ಈ ಹಿಂದೆ ಪರಿಶಿಷ್ಟ ಜಾತಿಯ (SC) ವಿದ್ಯಾರ್ಥಿಗಳ ಮೆಟ್ರಿಕ್ ಪೂರ್ವ ಮತ್ತು ನಂತರದ ಶಿಷ್ಯವೇತನಕ್ಕಾಗಿ ಸುಮಾರು 977 ಕೋಟಿ ರೂ. ಮೀಸಲಿಟ್ಟಿತ್ತು, ದಲಿತ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ನೀಡುವ ಅನುದಾನವನ್ನು ಹೆಚ್ಚಿಸಲಾಗಿದೆ. ‘ಮುಖ್ಯಮಂತ್ರಿ ಸಮೂಹ ವಿವಾಹ ಯೋಜನೆ’ ಅಡಿಯಲ್ಲಿ ನೀಡುವ ಹಣವನ್ನು 1.01 ಲಕ್ಷ ರೂ. ಗೆ ಏರಿಸಿತ್ತು, ವೃದ್ಧಾಪ್ಯ ಮತ್ತು ರೈತ ಪಿಂಚಣಿ ಯೋಜನೆಗಳ ಮೂಲಕ ಲಕ್ಷಾಂತರ ದಲಿತ ಫಲಾನುಭವಿಗಳಿಗೆ ಮಾಸಿಕ 1,000 ರೂ. ಯೋಜನೆ, ಹೀಗೆ ಹಲವು ಯೋಜನೆಗಳನ್ನು ದಲಿತರ ಮತಗಳನ್ನು ಓಲೈಸಿಕೊಳ್ಳುವುದಕ್ಕೆ ತಂದಿದೆ. ಇದು ಅದರ ಮುಂದುವರಿದ ಅಧ್ಯಾಯವಷ್ಟೆ.
ಒಟ್ಟಾರೆಯಾಗಿ, 2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ (BSP) ಸಾಂಪ್ರದಾಯಿಕ ದಲಿತ ಮತಗಳನ್ನು ತನ್ನತ್ತ ಸೆಳೆಯಲು ಯೋಗಿ ಸರ್ಕಾರ ಈ ‘ಕಲ್ಯಾಣ ರಾಜಕಾರಣ’ವನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ. ಚುನಾವಣಾ ಸಂದರ್ಭದಲ್ಲಿ ಇಂತಹ ಭರವಸೆಗಳು ಮತಗಳಾಗಿ ಪರಿವರ್ತನೆಯಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.




