ಎಚ್ಚೆತ್ತ ಮುಸ್ಲಿಂ ಸಮುದಾಯ: ಕಾಂಗ್ರೆಸ್ ಕಾರ್ಯವೈಖರಿ ವಿರುದ್ಧ ಸಮಾವೇಶ

Date:

ಕಾಂಗ್ರೆಸ್ ಸರಕಾರದ ಮೂರು ವರ್ಷಗಳ ಕಾರ್ಯವೈಖರಿ ಹಾಗೂ ಅತ್ಯಂತ ಪ್ರಮುಖ ಹತ್ತು ವಿಷಯಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ ಭರವಸೆಗಳು, ಅದರಲ್ಲಿ ಈಡೇರಿದ್ದೆಷ್ಟು, ಈಡೇರದೇ ಇರುವ ವಿಷಯಗಳೆಷ್ಟು, ಕಾಂಗ್ರೆಸ್ ಸರಕಾರದಲ್ಲಿ ಪ್ರಾತಿನಿಧ್ಯ ವಿಷಯದಲ್ಲಿ ಮುಸ್ಲಿಮರು ಎದುರಿಸಿದ ತಾರತಮ್ಯವೆಷ್ಟು... ಇದನ್ನು ಬಹಿರಂಗಪಡಿಸಲು ಸಮಾವೇಶ ಸಜ್ಜಾಗುತ್ತಿದೆ.

ಕೊಟ್ಟ ಮಾತನ್ನು ಕಾಂಗ್ರೆಸ್ ಉಳಿಸಿಕೊಂಡಿದೆಯೇ? ಕಾಂಗ್ರೆಸ್ ಪಕ್ಷವು ನಿಜಕ್ಕೂ ಅಲ್ಪಸಂಖ್ಯಾತರ ಪರವಿದೆಯೇ?- ಹೀಗೊಂದು ಚಿಂತನೆಗೆ ಇಳಿದಿದೆ ರಾಜ್ಯದ ಮುಸ್ಲಿಂ ಸಮುದಾಯ. ಕಾಂಗ್ರೆಸ್ ಸರ್ಕಾರ ಎಸಗಿರುವ ಸಾಲುಸಾಲು ಪ್ರಮಾದಗಳನ್ನು ಪ್ರಶ್ನಿಸಲು ಮತ್ತು ಕೊಟ್ಟಿರುವ ಭರವಸೆಗಳ ಈಡೇರಿಕೆಗೆ ಆಗ್ರಹಿಸಿ, ವಾಸ್ತವ ಸಂಗತಿಗಳನ್ನು ಮುಂದಿಡಲು ಇದೇ ಮೇ 16ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ‘ಕರ್ನಾಟಕ ಮುಸ್ಲಿಂ ಸಮಾವೇಶ’ ಆಯೋಜನೆಗೊಂಡಿದೆ.

- Advertisement -

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಅಧಿಕಾರ ಹಿಡಿದು ಮೇ 20ಕ್ಕೆ ಮೂರು ವರ್ಷ ತುಂಬುತ್ತದೆ. ನೆಚ್ಚಿ ಕೈ ಹಿಡಿದ ಕಾಂಗ್ರೆಸ್‌ನಿಂದ ಸಮುದಾಯಕ್ಕೇನಾದರೂ ಅನುಕೂಲ ಆಗಿದೆಯೇ ಎಂದು ಪ್ರಶ್ನಿಸುವ ಬಹುಮುಖ್ಯವಾದ ಹೆಜ್ಜೆಯನ್ನು ಮುಸ್ಲಿಮರು ಇಟ್ಟಿದ್ದಾರೆ. ‘ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?’ ಎಂಬ ಶೀರ್ಷಿಕೆಯಡಿ ಸರಕಾರದ ಮೂರು ವರ್ಷಗಳ ಕಾರ್ಯವೈಖರಿಯ ಕುರಿತಾದ ಸಮಗ್ರ ವರದಿಯನ್ನು ಸಮಾವೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ವರದಿಯನ್ನು ಸರ್ಕಾರಕ್ಕೂ ಎಲ್ಲಾ ಶಾಸಕರಿಗೂ ತಲುಪಿಸಲು ಉದ್ದೇಶಿಸಲಾಗಿದೆ. ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಯಾವುದೇ ರಾಜಕಾರಣಿಗಳಿಗೆ ಆಹ್ವಾನವಿಲ್ಲ! ಇದು ಭ್ರಮನಿರಸಗೊಂಡಿರುವ ಮತ್ತು ಎಚ್ಚೆತ್ತ ಸಮುದಾಯ ಏರ್ಪಡಿಸಿರುವ ಸಮಾವೇಶ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಸಮಾವೇಶಕ್ಕೆ ಪೂರ್ವಭಾವಿಯಾಗಿ ಮೇ 6ರಂದು ಬೆಂಗಳೂರಿನ ಶಿವಾಜಿನಗರದಲ್ಲಿರುವ ಎಜೆ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ರಾಜ್ಯದ ಪ್ರಮುಖ ಮುಸ್ಲಿಂ ಸಂಘಟನೆಗಳು, ಸಂಘ ಸಂಸ್ಥೆಗಳು, ಉಲೇಮಾ ಸಂಘಟನೆಗಳು, ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ (KRMO) ಅಡ್ ಹಾಕ್ ಸಮಿತಿಯ ಸದಸ್ಯರ ಸಭೆ ಜರುಗಿತು. KRMO ಅಡ್ ಹಾಕ್ ಸಮಿತಿಯ ವರದಿ ತಯಾರಿ ತಂಡದ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಪರಿಣತರು ರೂಪಿಸಿದ ವರದಿ ಚರ್ಚೆಯಾಯಿತು. ಕಾಂಗ್ರೆಸ್ ಸರಕಾರದ ಮೂರು ವರ್ಷಗಳ ಕಾರ್ಯವೈಖರಿ ಹಾಗೂ ಅತ್ಯಂತ ಪ್ರಮುಖ ಹತ್ತು ವಿಷಯಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ ಭರವಸೆಗಳು, ಅದರಲ್ಲಿ ಈಡೇರಿದ್ದೆಷ್ಟು, ಈಡೇರದೇ ಇರುವ ವಿಷಯಗಳೆಷ್ಟು, ಕಾಂಗ್ರೆಸ್ ಸರಕಾರದಲ್ಲಿ ಪ್ರಾತಿನಿಧ್ಯ ವಿಷಯದಲ್ಲಿ ಮುಸ್ಲಿಮರು ಎದುರಿಸಿದ ತಾರತಮ್ಯವೆಷ್ಟು ಇತ್ಯಾದಿ ಸಂಗತಿಗಳು ಸಭೆಯಲ್ಲಿ ಮುನ್ನೆಲೆಗೆ ಬಂದವು. ಮತ್ತೊಂದು ಸುತ್ತಿನ ಚರ್ಚೆ ನಡೆದು ಅಂತಿಮ ವರದಿ ಈಗ ರೂಪುಗೊಂಡಿದೆ. ಅದನ್ನು ಬಹಿರಂಗಪಡಿಸಲು ಸಮಾವೇಶ ಸಜ್ಜಾಗುತ್ತಿದೆ.

ಇದನ್ನು ಓದಿದ್ದೀರಾ?: ಕಾಂಗ್ರೆಸ್‌ನ ಢೋಂಗಿತನ; ಮುಸಲ್ಮಾನರಿಗೆ ನಿರಂತರ ದ್ರೋಹ

ಹಿಂದಣ ನೋಟ…
2023- ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯ ಬಹುದೊಡ್ಡ ತಿರುವು ಪಡೆದುಕೊಂಡ ವರ್ಷ. ಈವರೆಗೆ ರಾಜ್ಯದಲ್ಲಿ ಮುಸ್ಲಿಂ ಸಮುದಾಯವು ಈ ಪರಿಯ ಧ್ರುವೀಕರಣವನ್ನು ಕಂಡಿರಲಿಲ್ಲ. ಸಾಂಪ್ರದಾಯಿಕವಾಗಿ ಜೆಡಿಎಸ್‌ಗೂ ಮತ್ತು ಕಾಂಗ್ರೆಸ್‌ಗೂ ಹರಿದು ಹಂಚಿಹೋಗಿದ್ದ ಮುಸ್ಲಿಮರು ಸಂಪೂರ್ಣವಾಗಿ ಕಾಂಗ್ರೆಸ್‌ನತ್ತ ಹೊರಳುವ ಅನಿವಾರ್ಯ ಸನ್ನಿವೇಶ ಈ ವೇಳೆಗೆ ಸೃಷ್ಟಿಯಾಯಿತು.

GettyImages 1241301661 1
ಭಾರತೀಯ ಮುಸ್ಲಿಮರು

ದಿನಬೆಳಗಾದರೆ ಕೋಮು ಸಂಘರ್ಷವನ್ನೇ ಅಜೆಂಡಾವಾಗಿಟ್ಟುಕೊಂಡು ಆಡಳಿತ ನಡೆಸುತ್ತಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಸಂಘಪರಿವಾರದ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಿತ್ತು. ಸುಮ್ಮನೆ ಹಿಂತಿರುಗಿ ನೋಡಿದರೂ ಹತ್ತಾರು ಘಟನೆಗಳು ಕಣ್ಣಮುಂದೆ ಹಾದು ಹೋಗುತ್ತವೆ. ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಮತ್ತು ಶಿಕ್ಷಣ ಹಕ್ಕಿನ ವಂಚನೆ, ಮತೀಯ ಗೂಂಡಾಗಿರಿಯ ಸಮರ್ಥನೆ, ಮತಾಂತರ ನಿಷೇಧ ಕಾನೂನು, ಈಶ್ವರಪ್ಪನ ಭಗವಾಧ್ವಜ ಪ್ರಕರಣ ಮತ್ತು ಸರ್ಕಾರದ ಪರೋಕ್ಷ ಬೆಂಬಲ, ಮುಸ್ಲಿಂ ಸಮುದಾಯದ ವ್ಯಾಪಾರಿಗಳನ್ನು ಹೊರಗಿಡುವ ಚರ್ಚೆ, ಪಠ್ಯಪುಸ್ತಕ ಕೇಸರೀಕರಣ, ಮಸೂದ್, ಹರ್ಷ, ಪ್ರವೀಣ್, ಫಾಸಿಲ್ ಕೊಲೆ ಮತ್ತು ಪರಿಹಾರ ವಿತರಣೆಯಲ್ಲಿ ಸರ್ಕಾರದ ತಾರತಮ್ಯ ನೀತಿ, ಕೋಮುದ್ವೇಷಿ ಸಾವರ್ಕರ್ ವೈಭವೀಕರಣ, ಈದ್ಗಾ ಮೈದಾನಗಳಲ್ಲಿ ಗಣಪತಿ ಉತ್ಸವ, ಹಲಾಲ್ ಕಟ್, ಜಟ್ಕಾ ಕಟ್, ಉರಿಗೌಡ ನಂಜೇಗೌಡ ವಿವಾದ- ಒಂದೇ ಎರಡೇ? ಕೊನೆಗೆ ಮುಸ್ಲಿಮರ (2ಬಿ) ಮೀಸಲಾತಿಯನ್ನೇ ಕಿತ್ತು ಲಿಂಗಾಯತರಿಗೂ, ಒಕ್ಕಲಿಗರಿಗೂ ಹಂಚುವ ಮತ್ತು ಆ ಮೂಲಕ ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಸುವ ವಿಕೃತಿಯನ್ನು ಬೊಮ್ಮಾಯಿ ಸರ್ಕಾರ ಮೆರೆದಿತ್ತು.

ಇಂತಹ ಸಂದರ್ಭದಲ್ಲಿ ಮುಸ್ಲಿಮರು ಏನು ಮಾಡುವುದು? ಎಚ್.ಡಿ. ಕುಮಾರಸ್ವಾಮಿಯವರತ್ತ ನೋಡುವುದೇ? ಕರ್ನಾಟಕದಲ್ಲಿ ಬಿಜೆಪಿ ಜೊತೆ ಸರ್ಕಾರ ರಚಿಸಿ, ಕುಮಾರಸ್ವಾಮಿಯವರು ಮಾಡಿದ ಚಾರಿತ್ರಿಕ ಪ್ರಮಾದದ ಕಾರಣ ಸಂಘಪರಿವಾರಕ್ಕೆ ಭದ್ರವಾದ ನೆಲೆ ಸಿಕ್ಕಿತ್ತು. ಕೋಮು ಸಂಘರ್ಷದ ವಿರೋಧಿ ಹೇಳಿಕೆಗಳನ್ನು ಕುಮಾರಸ್ವಾಮಿಯವರು ನೀಡುತ್ತಿದ್ದರೂ ಸಮುದಾಯಕ್ಕೆ ಹೆಚ್ಚಿನ ನಂಬಿಕೆಯೇನೂ ಬರಲಿಲ್ಲ. ಬಿಜೆಪಿ ಜೊತೆ ಸರ್ಕಾರ ರಚಿಸಿದಾಚೆಗಿನ ರಾಜಕಾರಣದಲ್ಲೂ ಮುಸ್ಲಿಮರು ಸಂಪೂರ್ಣವಾಗಿ ಜೆಡಿಎಸ್ ಪಕ್ಷವನ್ನು ದೂರವಿಟ್ಟಿರಲೇನೂ ಇಲ್ಲ. ಆದರೆ 2006ರಿಂದಾಚೆಗೆ ಮುಸ್ಲಿಮರ ನಾಯಕತ್ವವನ್ನು ನಿಧಾನಕ್ಕೆ ಆವರಿಸುತ್ತಾ ಹೋದವರು ಸಿದ್ದರಾಮಯ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿ ಸೃಷ್ಟಿಸಿದ ವಿಕೃತಿಯ ಉತ್ತುಂಗದ ನಡುವೆ ಸಿದ್ದರಾಮಯ್ಯನವರ ಸೆಕ್ಯುಲರ್ ನಾಯಕತ್ವವೇ ಅಂತಿಮ ಆಯ್ಕೆಯಾಗಿತ್ತು.

ತನ್ನ ಪ್ರಣಾಳಿಕೆಯನ್ನೇ ‘ಸರ್ವಜನಾಂಗದ ಶಾಂತಿಯ ತೋಟ’ ಎಂದು ಕರೆದಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತರ ರಕ್ಷಣೆಗೆ ಸಾಂವಿಧಾನಿಕ ಭರವಸೆಗಳನ್ನು ನೀಡಿತ್ತು. ಮೀಸಲಾತಿಯ ಮರುಸ್ಥಾಪನೆ, ಕೋಮುದ್ವೇಷ ಹರಡುವ ವ್ಯಕ್ತಿ ಮತ್ತು ಸಂಘಟನೆಗಳಿಗೆ ಕಡಿವಾಣ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಆದ್ಯತೆ, ಬಿಜೆಪಿ ತಂದಿದ್ದ ವಿವಾದಾತ್ಮಕ ಆದೇಶಗಳ ಮರುಪರೀಶೀಲನೆಯ ಭರವಸೆ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಹೆಚ್ಚಿಸಿ ಶಿಕ್ಷಣೆಗೆ ಒತ್ತು- ಹೀಗೆ ಹತ್ತಾರು ಭರವಸೆಗಳನ್ನು ಕಾಂಗ್ರೆಸ್ ನೀಡಿತ್ತು. ಅಂದು ಮುಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆ ನಿಲ್ಲುವುದು ಆಯ್ಕೆಯಷ್ಟೇ ಅಲ್ಲ, ಅನಿವಾರ್ಯವೂ ಆಗಿತ್ತು. ಬಿಜೆಪಿ ಆಡಳಿತದ ವಿರುದ್ಧ ರಾಜ್ಯದಲ್ಲಿ ಮಡುಗಟ್ಟಿದ್ದ ಆಕ್ರೋಶ, ಆಡಳಿತ ವಿರೋಧಿ ಅಲೆ ಮತ್ತು ಮುಸ್ಲಿಂ ಮತಗಳ ಭಾರೀ ಧ್ರುವೀಕರಣದ ಫಲವಾಗಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ದಿಗ್ವಿಜಯ ಸಾಧಿಸಿ, ಅಧಿಕಾರ ಹಿಡಿಯಿತು. ಮುಸ್ಲಿಂ ಮತಗಳು ಎರಡು ಪಕ್ಷಕ್ಕೂ ಹಂಚಿಕೆಯಾಗುವ ಕಾಲದವರೆಗೂ ಕಿಂಗ್ ಮೇಕರ್ ಆಗಿ ಬೀಗುತ್ತಿದ್ದ ಜೆಡಿಎಸ್ ಮತ್ತು ಕುಮಾರಸ್ವಾಮಿಯವರಿಗೆ ಬಹುದೊಡ್ಡ ಆಘಾತವನ್ನು ಮುಸ್ಲಿಂ ಸಮುದಾಯ ನೀಡಿತ್ತು. ಪಕ್ಷವನ್ನು ಉಳಿಸಿಕೊಳ್ಳುವ ಬಿಕ್ಕಟ್ಟಿನಲ್ಲಿ ಮತ್ತು ಮುಸ್ಲಿಮರು ದೂರ ಸರಿದರೆಂಬ ಸಿಟ್ಟಿನಲ್ಲಿ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಮತ್ತೊಂದು ಸುತ್ತಿನ ಸಖ್ಯ ಬೆಳೆಸಿಕೊಂಡರು. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಮಾಡಿದ್ದೇನು? ಮುಸ್ಲಿಮರ ಅಸಹಾಯಕತೆಯನ್ನು ಅವಕಾಶವೆಂದು ಬಗೆದು ಜವಾಬ್ದಾರಿಗಳಿಂದ ನುಣುಚಿಕೊಂಡಿತೆ? ಮುಸ್ಲಿಂ ಸಮುದಾಯವನ್ನು ‘ಬಿಟ್ಟಿ ಸಿಕ್ಕವರು’ ಎಂಬ ಧೋರಣೆಯಲ್ಲಿ ನೋಡಿತೇ? ನಾವು ಹೇಳಿದಂತೆ ಕೇಳದಿದ್ದರೆ ನಿಮಗೆ ಬೇರೆ ಆಯ್ಕೆಗಳಿಲ್ಲ ಎಂಬ ಸಂದೇಶ ರವಾನಿಸಿತೇ? ಅಥವಾ ಹಿಂದುತ್ವವಾದಿಗಳ ಗೊಡ್ಡು ಬೆದರಿಕೆಗಳಿಗೆ ತಕ್ಕಂತೆ ಕುಣಿಯುತ್ತಾ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳೆಂದು ಪರಿಗಣಿಸಿತೆ?- ಹೀಗೆ ಹಲವು ಪ್ರಶ್ನೆಗಳು ಎದ್ದಿರುವುದರಿಂದಲೇ ಕಾಂಗ್ರೆಸ್‌ಗೆ ಕಟು ಸಂದೇಶವನ್ನು ರವಾನಿಸುವ ಸಮಯವೂ ಈಗ ಬಂದೊದಗಿದೆ.

ಮೂರು ವರ್ಷಗಳ ಅಸಮಾಧಾನಕ್ಕೆ ದಾವಣಗೆರೆ ಕಿಡಿ
ಮುಸ್ಲಿಮರ ಪ್ರಾತಿನಿಧ್ಯವೇ ಮರೀಚಿಕೆಯಾಗುತ್ತಿರುವ ಹೊತ್ತಿನಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿಯಾದರೂ ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂದು ಸಮುದಾಯ ಆಶಿಸಿತು. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನದಲ್ಲಿ ಮುಸ್ಲಿಂ ಪ್ರತಿನಿಧಿಯೊಬ್ಬರನ್ನು ಬಯಸುವುದು ಮಹಾಪರಾಧವೇನೂ ಆಗಿರಲಿಲ್ಲ. ಕರ್ನಾಟಕದಲ್ಲಿ ಮುಸ್ಲಿಂ ಎಂಎಲ್ಎಗಳ ಪ್ರಮಾಣಕ್ಕೂ ಲಿಂಗಾಯತ, ಒಕ್ಕಲಿಗ ಸಮುದಾಯಗಳ ಪ್ರಮಾಣಕ್ಕೂ ಇರುವ ಬೃಹತ್ ಅಂತರವನ್ನು ನೋಡಿದರೆ ಪ್ರಾತಿನಿಧ್ಯದಲ್ಲಿ ಎಷ್ಟು ಮೋಸವಾಗಿದೆ ಎಂಬುದು ತಿಳಿಯುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲು ಕ್ಷೇತ್ರಗಳಿರುವುದರಿಂದ ಆ ಸಮುದಾಯಗಳಿಂದ ಪ್ರತಿನಿಧಿಗಳು ಆಯ್ಕೆಯಾಗುತ್ತಾರಾದರೂ ಮುಸ್ಲಿಮರ ವಿಚಾರದಲ್ಲಿ ಹಾಗೆ ಇಲ್ಲ. ಮುಸ್ಲಿಮರು ನಿರ್ಣಾಯಕರಾಗಿರುವ ಕ್ಷೇತ್ರಗಳಲ್ಲಷ್ಟೇ ಟಿಕೆಟ್ ಪಡೆದು ಅವರು ಗೆಲ್ಲಬೇಕು. ಆದರೆ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಅತಿ ದೊಡ್ಡ ಸಮುದಾಯಗಳ ಪೈಕಿ ಮುಸ್ಲಿಮರು ಇದ್ದಾರೆ ಎಂಬುದನ್ನು ಕಡೆಗಣಿಸಬಾರದು. ಕರ್ನಾಟಕದಲ್ಲಿ ಒಟ್ಟು 9 ಮಂದಿ ಮುಸ್ಲಿಂ ಎಂಎಲ್ಎಗಳಿದ್ದಾರೆ. ಅವರೆಲ್ಲರೂ ಕಾಂಗ್ರೆಸ್‌ನಿಂದಲೇ ಗೆದ್ದವರು. 2011ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ. 12.92ರಷ್ಟು ಮುಸ್ಲಿಮರಿದ್ದಾರೆ (ಈಗ ಮುಸ್ಲಿಮರ ಪ್ರಮಾಣ ಶೇ.13-14ರಷ್ಟು ಇರಬಹುದೆಂದು ಅಂದಾಜಿಸಲಾಗಿದೆ.) 224 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. 12.92 ಜನಸಂಖ್ಯೆಗೆ ಅನುಗಣವಾಗಿ ಕನಿಷ್ಠ 29 ಮಂದಿ ಮುಸ್ಲಿಂ ಎಂಎಲ್ಎಗಳು ಇರಬೇಕಿತ್ತು. ಇರುವುದು ಕೇವಲ 9. ಅಂದರೆ ಶೇ. 68.96ರಷ್ಟು ಪ್ರಾತಿನಿಧ್ಯದ ಕೊರತೆ ಕಂಡುಬರುತ್ತದೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿನ ಲಿಂಗಾಯತರ ಜನಸಂಖ್ಯೆ ಶೇ. 11. ಆದರೆ ಲಿಂಗಾಯತರು ತಮ್ಮ ಪ್ರಮಾಣ ಶೇ. 14-17 ಎಂದು ವಾದಿಸುತ್ತಾರೆ. ಈ ಸಂಖ್ಯೆಗೆ (14-17) ಲೆಕ್ಕ ಹಾಕಿದರೂ 32-38 ಶಾಸಕರು ಲಿಂಗಾಯತ ಸಮುದಾಯದಿಂದ ಇರಬೇಕಾಗುತ್ತದೆ. ಆದರೆ ಲಿಂಗಾತರ ಎಂಎಲ್ಎಗಳ ಸಂಖ್ಯೆ 56 (ಕಾಂಗ್ರೆಸ್‌ನಿಂದ 37 ಮಂದಿ ಗೆದ್ದಿದ್ದಾರೆ.) ಅಂದರೆ ಶೇ. 60ರಷ್ಟು ಹೆಚ್ಚಿನ ಪ್ರಾತಿನಿಧ್ಯವನ್ನು ಲಿಂಗಾಯತರು ಹೊಂದಿದ್ದಾರೆ. ಇನ್ನು ಒಕ್ಕಲಿಗರ ಜನಸಂಖ್ಯೆಯನ್ನು ನೋಡುವುದಾದರೆ ಜಾತಿಗಣತಿ ವರದಿಯ ಪ್ರಕಾರ ಈ ಸಮುದಾಯದ ಸಂಖ್ಯೆ ಶೇ. 10.31. ಸಮುದಾಯದ ಅಂದಾಜಿನ ಪ್ರಕಾರ ಒಕ್ಕಲಿಗರ ಸಂಖ್ಯೆ ಶೇ. 12-15. ಜನಸಂಖ್ಯೆಯ ಅನುಪಾತದ (ಶೇ. 12-15) ಪ್ರಕಾರ ಲೆಕ್ಕ ಹಾಕಿದರೂ ಸುಮಾರು 27 ರಿಂದ 34 ಶಾಸಕರು ಈ ಸಮುದಾಯದಲ್ಲಿ ಇರಬೇಕಾಗುತ್ತದೆ. ಆದರೆ ಪ್ರಸ್ತುತ ವಿಧಾನಸಭೆಯಲ್ಲಿ 51 ಒಕ್ಕಲಿಗ ಶಾಸಕರಿದ್ದಾರೆ. ಗರಿಷ್ಠ 30 ಶಾಸಕರಿರಬೇಕಾದ್ದಲ್ಲಿ 51 ಮಂದಿ ಇದ್ದಾರೆಂದರೆ ಶೇ. 70ರಷ್ಟು ಹೆಚ್ಚಿನ ಪ್ರಾತಿನಿಧ್ಯವನ್ನು ಒಕ್ಕಲಿಗರು ಗಳಿಸಿದ್ದಾರೆಂದು ಅರ್ಥ. ಇಂತಹ ಅಸಮಾನ ವ್ಯವಸ್ಥೆಯೊಳಗೆ ಮುಸ್ಲಿಮರು ಒಂದು ಸೀಟು ಬಯಸಿದ್ದು ತಪ್ಪೇ? ಸಮುದಾಯದ ಪರವಾಗಿ ಕಾಂಗ್ರೆಸ್‌ನಲ್ಲಿದ್ದ ಮುಸ್ಲಿಂ ನಾಯಕರು ಪ್ರಾತಿನಿಧ್ಯವನ್ನು ಆಗ್ರಹಿಸಿದ್ದು ತಪ್ಪೇ? ಇದನ್ನೇ ನೆಪವಾಗಿಟ್ಟುಕೊಂಡು ಮುಸ್ಲಿಂ ನಾಯಕರ ಮೇಲೆ ಕ್ರಮ ಕೈಗೊಂಡಿರುವ ಕಾಂಗ್ರೆಸ್, ಸಮುದಾಯಕ್ಕೆ ಯಾವ ಸಂದೇಶ ಕೊಟ್ಟಿತು?

indian muslims 2
ಭಾರತೀಯ ಮುಸ್ಲಿಮರು

ಮುಸ್ಲಿಮರ ಆಗ್ರಹವನ್ನು ಧಿಕ್ಕರಿಸಿ, ಸಮರ್ಥ್ ಶಾಮನೂರರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡರೂ ಕಾಂಗ್ರೆಸ್ ಗೆಲುವಿನ ಅಂತರ ಕುಸಿದಿರುವುದು ಸ್ಪಷ್ಟ. 2023ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ. 57ರಷ್ಟು ಮತಗಳಿಸಿತ್ತು. ಉಪಚುನಾವಣೆಯಲ್ಲಿ ಶೇ. 43.95ರಷ್ಟು ಮತಗಳನ್ನು ಕಾಂಗ್ರೆಸ್ ಪಡೆದಿದೆ. ಆದರೆ ಎಸ್‌ಡಿಪಿಐ ಮತಪ್ರಮಾಣ ಶೇ. 0.9ರಿಂದ ಶೇ. 11.99ಕ್ಕೆ ಜಿಗಿದಿದೆ. ಅಂದರೆ ಮುಸ್ಲಿಂ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆಯವರತ್ತ ಮುಸ್ಲಿಂ ಸಮುದಾಯದ ಮತಗಳು ಗಣನೀಯವಾಗಿ ಹೊರಳಿರುವುದು ಕಾಂಗ್ರೆಸ್‌ಗೆ ಮೊದಲ ಬಾರಿ ಕೊಟ್ಟಿರುವ ಎಚ್ಚರಿಕೆಯ ಕರೆಘಂಟೆ. ಇದು ಸಮುದಾಯದ ಆಕ್ರೋಶವಷ್ಟೇ ಅಲ್ಲ, ಮೂರು ವರ್ಷಗಳಿಂದಲೂ ಅಲ್ಪಸಂಖ್ಯಾತರ ವಿಚಾರದಲ್ಲಿ ಕಾಂಗ್ರೆಸ್ ಇಟ್ಟಿರುವ ತಪ್ಪು ಹೆಜ್ಜೆಗಳಿಗೆ ಕೊಟ್ಟಿರುವ ಉತ್ತರವೂ ಹೌದು. ದಾವಣಗೆರೆ ಟಿಕೆಟ್ ಕೈತಪ್ಪಿದ್ದರಿಂದ ಮಾತ್ರಕ್ಕೆ ಅಲ್ಪಸಂಖ್ಯಾತರು ಆಕ್ರೋಶಗೊಂಡಿದ್ದಾರೆಂದು ಹೇಳುವುದು ತಪ್ಪಾಗುತ್ತದೆ. ಸಮುದಾಯಕ್ಕೆ ಕಾಂಗ್ರೆಸ್ ನೀಡಿದ ಭರವಸೆಗಳು ಕಾಗದದ ಮೇಲೆ ಉಳಿದಿರುವುದೇ ಈ ಬೆಳವಣಿಗೆಗೆ ನೈಜ ಕಾರಣ. ಆ ಆಕ್ರೋಶವು ಟಿಕೆಟ್ ನಿರೀಕ್ಷೆ ಮತ್ತು ಅವಮಾನದ ಒಂದು ಬಿಂದುವಿನಲ್ಲಿ ಸ್ಫೋಟಗೊಂಡಿತು ಅಷ್ಟೇ. ಈಗ ನಡೆಯಲಿರುವ ಮುಸ್ಲಿಂ ಸಮಾವೇಶದ ಮೂಲಕವೂ ಕಾಂಗ್ರೆಸ್ ಸರ್ಕಾರಕ್ಕೆ ಕಠಿಣ ಸಂದೇಶ ರವಾನೆಯಾಗುವುದಂತೂ ಖಚಿತ.

‘ಈದಿನ ಡಾಟ್ ಕಾಮ್’ ಜೊತೆ ಮಾತನಾಡಿದ ಸಮಾವೇಶದ ಸಂಚಾಲಕರಲ್ಲಿ ಒಬ್ಬರಾದ ಮಾಜಿ ಡಿವೈಎಸ್ಪಿ ಸುಹೇಲ್ ಅಹಮ್ಮದ್, ”ಇದು ದಾವಣಗೆರೆ ಉಪಚುನಾವಣೆಯ ಫಲಿತಾಂಶ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಮಾವೇಶವಲ್ಲ. ರಾಜ್ಯ ಸರ್ಕಾರವು ಮುಸ್ಲಿಮರಿಗೆ ನೀಡಿದ್ದ ಭರವಸೆಗಳು ಮತ್ತು ಕಾರ್ಯಗತದ ವಿಚಾರವಾಗಿ ಸಮಾವೇಶ ಕೈಗೊಳ್ಳಬೇಕು ಎಂದು ಒಂದು ವರ್ಷದಿಂದಲೂ ವಿವಿಧ ಸಂಘಟನೆಗಳು ಕಾರ್ಯಪ್ರವೃತ್ತವಾಗಿದ್ದವು. ಉಪಚುನಾವಣೆ ಬಳಿಕ ಸಮಾವೇಶ ಆಯೋಜನೆಯಾಗಿರುವುದರಿಂದ ಕಾಕತಾಳೀಯವೆಂಬಂತೆ ಸಂಬಂಧ ಕಲ್ಪಿಸುವುದು ಸಹಜ. ಆದರೆ ಸರ್ಕಾರದ ಕಾರ್ಯವೈಖರಿ ಸಮುದಾಯಕ್ಕೆ ಭ್ರಮನಿರಸನ ತಂದಿದೆ ಎಂಬುದಂತೂ ಸತ್ಯ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ?: ಅಧಿಕಾರ ರಾಜಕಾರಣದಲ್ಲಿ ಮುಸ್ಲಿಮರು ಎಲ್ಲಿದ್ದಾರೆ?

”ಮುಸ್ಲಿಂ ಸಮುದಾಯದ ನಿರೀಕ್ಷೆಗಳನ್ನು ಹುಸಿಗೊಳಿಸಿದರೆ ಪರ್ಯಾಯ ದಾರಿಗಳಿವೆ ಎಂಬ ಸಂದೇಶವನ್ನು ಸಮುದಾಯ ನೀಡುತ್ತಿದೆ ಎಂದು ಕಾಂಗ್ರೆಸ್ ಮರೆಯಬಾರದು” ಎನ್ನುವ ಸುಹೇಲ್, ”ಬಿಜೆಪಿಯ ಕಿರುಕುಳದಿಂದ ಸಮುದಾಯ ಬೇಸತ್ತಿತ್ತು. ಎಲ್ಲ ಅಧ್ವಾನಗಳನ್ನು ಸರಿಪಡಿಸಲು ಕಾಂಗ್ರೆಸ್ ಪಕ್ಷವೇ ಸರಿಯಾದ ಆಯ್ಕೆ ಎಂದು ಭಾವಿಸಿ, ಏಕಪಕ್ಷೀಯವಾಗಿ ಇದನ್ನು ಬೆಂಬಲಿಸಿತು. ಹೀಗಾಗಿ ಪ್ರಾಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಬೇಕಿದೆ. ಕೋಮುದ್ವೇಷದ ವಿರುದ್ಧ ಕಾಯ್ದೆಯನ್ನೇನೋ ತಂದಿದ್ದಾರೆ. ಆದರೆ ಅದು ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಸಮುದಾಯ ಸಿದ್ಧಪಡಿಸಿರುವ ವರದಿಯನ್ನು ಸಮಾವೇಶದಲ್ಲಿ ಸಾರ್ವಜನಿಕಗೊಳಿಸುತ್ತೇವೆ. ಸರ್ಕಾರದ ಮೇಲೆ ಒತ್ತಡ ತರುವುದು ಸಮಾವೇಶದ ಉದ್ದೇಶ” ಎಂದು ವಿವರಿಸಿದರು.

ಸಾಮಾಜಿಕ ಹೋರಾಟಗಾರ ಮುಹಮ್ಮದ್ ಯಾಸಿನ್ ಮಲ್ಪೆ ಪ್ರತಿಕ್ರಿಯಿಸಿ, ”ಮುಸ್ಲಿಂ ಸಮುದಾಯದ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಿಂದ ಏನನ್ನೂ ಮಾಡಿಲ್ಲ. ಮುಸ್ಲಿಮರು ಕೇವಲ ಮತಚಲಾಯಿಸಲಷ್ಟೇ ಇದ್ದಾರೆಂದು ಕಾಂಗ್ರೆಸ್ ಭಾವಿಸಿದಂತಿದೆ. ಪಕ್ಷವು ಕೊಟ್ಟಿರುವ ಮಾತುಗಳನ್ನು ನೆನಪಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದರು.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...