ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಇಂದಿನ ಯುವಜನರ ಬದುಕು- ಸ್ಪರ್ಧೆ, ಹೋಲಿಕೆ ಮತ್ತು ತಕ್ಷಣದ ಮೆಚ್ಚುಗೆಯ ಓಟದಿಂದ ತುಂಬಿದೆ. ಎಲ್ಲರೂ ವೇಗವಾಗಿ ಮುಂದೆ ಸಾಗಲು ಹಂಬಲಿಸುತ್ತಿರುವ ಈ ಕಾಲದಲ್ಲಿ, ನಿಧಾನವಾಗಿ ಆದರೆ ದೃಢವಾಗಿ ಹೆಜ್ಜೆ ಇಡುವವರು ವಿರಳ. ಒತ್ತಡಕ್ಕಿಂತ ತಾಳ್ಮೆ, ಪ್ರದರ್ಶನಕ್ಕಿಂತ ಪ್ರಾಮಾಣಿಕತೆ, ಗದ್ದಲಕ್ಕಿಂತ ಶಿಸ್ತನ್ನು ಆಯ್ಕೆ ಮಾಡುವವರ ಬದುಕೇ ನಿಜವಾದ ಎತ್ತರವನ್ನು ತಲುಪುತ್ತದೆ. ಡಾ. ಶ್ರಿಯಾ ದಿನಕರ ಅವರ ಪಯಣ ಅಂತಹ ಶಾಂತವಾದ, ಆದರೆ ಅಸಾಮಾನ್ಯ ಸಾಧನೆಯ ಉದಾಹರಣೆಯಾಗಿದೆ.
1995ರ ಮೇ 14ರಂದು ಜನಿಸಿದ ಶ್ರಿಯಾ, ವಿದ್ಯಾಭ್ಯಾಸದ ಪರಂಪರೆಯಲ್ಲೇ ಬೆಳೆದವರು. ತಂದೆ ಗಿರಿರಾಜು ದಿನಕರ ಅವರು ಪಿಎಚ್.ಡಿ ಪದವೀಧರರು. ಹಾಸನ ಜಿಲ್ಲೆಯ ಅರಕಲಗೂಡು ಮೂಲದವರು. ತಾಯಿ ಸುನೀತಾ ಅವರು ಚಿನ್ನದ ಪದಕ ವಿಜೇತೆ ಹಾಗೂ ಪಿಎಚ್.ಡಿ ಸಾಧನೆಗೆ ಮುಂದಾಗಿರುವವರು. ತಂದೆಯ ಹಾಗೂ ತಾಯಿಯ ಕಡೆಯ ತಾತಂದಿರೂ ಪಿಎಚ್.ಡಿ ಪದವೀಧರರೇ! ಇಂತಹ ಮನೆಯಲ್ಲಿ ವಿದ್ಯಾಭ್ಯಾಸವು ಒತ್ತಾಯವಲ್ಲ, ಬದುಕಿನ ಭಾಗವಾಗಿತ್ತು. ಅರಕಲಗೂಡಿನ ನದಿತೀರಗಳಲ್ಲಿ ಕಳೆದ ಬೇಸಿಗೆ ದಿನಗಳು ಅವರಿಗೆ ಮೌನದ ಕ್ಷಣಗಳನ್ನು ಕೊಟ್ಟವು. ಅದವರಿಗೆ ಯೋಚಿಸಲು, ವಿಶ್ರಾಂತಿ ಪಡೆಯಲು, ತನ್ನೊಳಗನ್ನು ಮರು ರೂಪಿಸಿಕೊಳ್ಳಲು ಅವಕಾಶ ನೀಡಿತು.
ಶ್ರಿಯಾರ ಬಾಲ್ಯ ಒತ್ತಡದಿಂದ ಅಲ್ಲ, ಅವಕಾಶಗಳಿಂದ ರೂಪುಗೊಂಡಿತು. ಶಾಲೆಯ ಜೊತೆಗೆ ನೃತ್ಯ ತರಗತಿಗಳು, ಕಲೆ, ಭಾಷಣ, ವಿಜ್ಞಾನ, ಅನ್ವೇಷಣೆ, ವಿಮಾನ ಹಾರಾಟದ ತರಬೇತಿ- ಹೀಗೆ ಅನೇಕ ಚಟುವಟಿಕೆಗಳು ದಿನಚರಿಯ ಭಾಗವಾಗಿದ್ದವು. ಅವರ ಪೋಷಕರು ಎಲ್ಲವನ್ನೂ ಸಮರ್ಪಕವಾಗಿ ಜೋಡಿಸಿ ಕೊಡುತ್ತಿದ್ದರು. ಹೀಗಾಗಿ ಅವರಿಗೆ ಸೋಮಾರಿತನ ಅಥವಾ ಗಾಬರಿಯಿಲ್ಲದೆ ತಮ್ಮ ಆಸಕ್ತಿಗಳನ್ನು ಹತ್ತಿರದಿಂದ ಅನ್ವೇಷಿಸಲು ಸಾಧ್ಯವಾಯಿತು. ಕುತೂಹಲಕ್ಕೆ ಉತ್ತೇಜನ ದೊರೆಯಿತು. ಶಿಸ್ತು ಸಹಜವಾಗಿ ಬೆಳೆಯಿತು.
ಇದನ್ನು ಓದಿದ್ದೀರಾ?: ಹಲವು ಮೊದಲುಗಳ ಅನನ್ಯ ರಂಗ ಭರವಸೆ- ಶ್ವೇತಾ ಎಚ್.ಕೆ.
ಹೀಗಾಗಿ ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ಶ್ರಿಯಾ- ಸೆಸ್ನಾ(CESSNA) ಹಾಗೂ ಮೈಕ್ರೊಲೈಟ್ ವಿಮಾನಗಳಲ್ಲಿ ಹಾರಾಟ ನಡೆಸಿದ್ದರು. ಶೂನ್ಯ ಗುರುತ್ವಾಕರ್ಷಣೆ(Zero Gravity)ಯ ಅನುಭವ ಪಡೆದಿದ್ದರು. ಭಾರತೀಯ ಮಹಾಸಾಗರದಲ್ಲಿ ಸುಮಾರು ನೂರು ಮೀಟರ್ ನೀರಿನೊಳಗೆ ನಡೆದಿದ್ದರು, ಸಬ್‌ಮೆರೀನ್‌ಗಳಲ್ಲಿ ಸಂಚರಿಸಿದ್ದರು. ಇವು ಸಾಹಸ ಪ್ರದರ್ಶನಗಳಲ್ಲ; ವಿಜ್ಞಾನ ಹಾಗೂ ಅನ್ವೇಷಣೆಯ ಬಗೆಗೆ ಅವರ ಬಾಲ್ಯದ ವ್ಯಕ್ತಿತ್ವಕ್ಕಿದ್ದ ಕುತೂಹಲ. ಇದೇ ಅವಧಿಯಲ್ಲಿ Who am I and who are my people ಎಂಬ ಅವರ ಕಲಾಕೃತಿ ಸ್ಲೋವೇನಿಯಾದ ಅಂತಾರಾಷ್ಟ್ರೀಯ ಪ್ರದರ್ಶನಕ್ಕೆ ಆಯ್ಕೆಯಾಗಿ, ನಂತರ 1,37,500(Euro)ಕ್ಕೆ ಹರಾಜಾಗಿ ಅದರ ಮೊತ್ತವನ್ನು ದಾನಧರ್ಮಕ್ಕಾಗಿ ನೀಡಿ ಸಂತಸಪಟ್ಟರು. ಇದು ಅವರ ಪ್ರತಿಭೆ ಹಾಗೂ ಸಾಮಾಜಿಕ ಜಾಗೃತಿಯು ಸಂಗಮಗೊಂಡ ಪ್ರಾರಂಭಿಕ ಗುರುತು.

2007ರ ಸೆಪ್ಟೆಂಬರ್ 27ರಂದು ಹೈದರಾಬಾದ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳ ಸಮ್ಮೇಳನದಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಶ್ರಿಯಾ ಭೇಟಿಯಾದ ಸಂದರ್ಭವು ಅವರ ಮೇಲೆ ದೀರ್ಘಕಾಲದ ಪ್ರಭಾವ ಬೀರಿತು. ಆದರೆ ಸಾರ್ವಜನಿಕವಾಗಿ ಆಕರ್ಷಕವಾಗಿರುವ ಕ್ಞೇತ್ರವನ್ನು ಬಿಟ್ಟು ಅವರು ಕಠಿಣವಾದ ದಾರಿಯನ್ನು ಆಯ್ಕೆ ಮಾಡಿಕೊಂಡರು. ಅದು ವೈದ್ಯಕೀಯ ಕ್ಷೇತ್ರ!
ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ತರಬೇತಿ ಪಡೆದ ಅವರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ಪರಿಣತಿ ಪಡೆದರು. 2024ರಲ್ಲಿ ತುಮಕೂರಿನ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ವೈದ್ಯಕೀಯ ಫೆಲೋಶಿಪ್ ಪೂರ್ಣಗೊಳಿಸಿದರು. ಸದ್ಯ 31 ವರ್ಷಗಳ ಶ್ರಿಯಾ ಪ್ರಸ್ತುತ ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಜಿಲ್ಲಾ ಲೇಖಕಿಯರ ಬಳಗ ನಡೆದು ಬಂದ ಹಾದಿ
ಜೊತೆಗೆ ತಮ್ಮ ಕಿಶೋರ ವಯಸ್ಸಿನಲ್ಲಿಯೇ ನೃತ್ಯ ಹಾಗೂ ಕಲಾ ಸಾಧನೆಗಾಗಿ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಭರತನಾಟ್ಯ, ಕಥಕ್ ಹಾಗೂ ಇತರೆ ಭಾರತೀಯ ಶಾಸ್ತ್ರೀಯ ನೃತ್ಯಶೈಲಿಗಳಲ್ಲಿ ಗಾಢ ಅಭ್ಯಾಸ ಅವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಶಾಸ್ತ್ರೀಯ ನೃತ್ಯವು ಅವರ ಜೀವನದ ಪ್ರತಿಯೊಂದು ಹಂತದಲ್ಲೂ ನೆಲೆಯಾಗಿ ನಿಂತಿದೆ. ಶ್ರಿಯಾ, ನೃತ್ಯವನ್ನು ಕೇವಲ ಪ್ರದರ್ಶನವಾಗಿ ಅಲ್ಲ, ಶಿಸ್ತಿನ ಅಭ್ಯಾಸವಾಗಿ, ಆಂತರಿಕ ನೆಲೆಯಾಗಿ ಕಂಡರು. ದೇಹದ ಸಹನಶಕ್ತಿ, ಮನಸ್ಸಿನ ಏಕಾಗ್ರತೆ ಮತ್ತು ಆಂತರಿಕ ಸಮತೋಲನವನ್ನು ಬೆಳೆಸುವ ಸಾಧನವಾಗಿ ಅನುಸರಿಸಿದರು. ಇಂದಿಗೂ ನಿಯಮಿತವಾಗಿ ನೃತ್ಯಾಭ್ಯಾಸ ಮುಂದುವರಿಸುತ್ತಿರುವ ಅವರು, ಭವಿಷ್ಯದಲ್ಲಿ- ಹಿಂದುಳಿದ ಮಕ್ಕಳಿಗಾಗಿ ನೃತ್ಯ ಶಾಲೆಯನ್ನು ಆರಂಭಿಸಿ, ಕಲೆಯ ಮೂಲಕ ಆತ್ಮವಿಶ್ವಾಸ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವ ಕನಸನ್ನು ಹೊಂದಿದ್ದಾರೆ.
ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ತಮ್ಮ ಹದಿಹರೆಯದಲ್ಲೇ Billion Dollar Baby ಎಂಬ ಕನ್ನಡ ಚಿತ್ರಸಾಹಿತ್ಯವನ್ನು ಬರೆದು, ನಿರ್ದೇಶಿಸಿ, ನಟಿಸಿದ್ದು ಅವರ ಪ್ರತಿಭೆಯ ಮತ್ತೊಂದು ಆಯಾಮ. ಇದೇ ಅವಧಿಯಲ್ಲಿ ಶ್ರಿಯಾ ವಿದೇಶದಲ್ಲಿ ಸ್ಪೇಸ್(Space) ಮೆಡಿಸಿನ್ ಕ್ಷೇತ್ರದಲ್ಲಿ ಉನ್ನತ ಅಧ್ಯಯನ ಮತ್ತು ಸಂಶೋಧನೆ ಮುಂದುವರಿಸಲು ಅವಕಾಶಗಳನ್ನೂ ಪಡೆದಿದ್ದರು. ಆದರೆ ತಂದೆಯ ಅಕಾಲಿಕ ನಿಧನದ ನಂತರ, ವಿದೇಶಕ್ಕೆ ತೆರಳುವುದನ್ನು ಬಿಟ್ಟು ತಾಯಿಯೊಂದಿಗೆ ಉಳಿಯುವುದನ್ನೇ ಅವರು ಆರಿಸಿಕೊಂಡರು. ಅದು ಕೇವಲ ವೈಯಕ್ತಿಕ ನಿರ್ಧಾರವಲ್ಲ. ಪ್ರಚಾರಕ್ಕಿಂತ ಕುಟುಂಬ, ಖ್ಯಾತಿಗಿಂತ ಹೊಣೆಗಾರಿಕೆ, ಮಹತ್ವಾಕಾಂಕ್ಷೆಗಿಂತ ಮೌಲ್ಯಗಳಿಗೆ ಆದ್ಯತೆಯನ್ನು ಕೊಟ್ಟ ಅವರ ಬದುಕಿನ ಗುರಿಯ ಸ್ಪಷ್ಟ ಪ್ರತಿಬಿಂಬ ಇದು. ಡಾ.ಮಧುಸೂದನ್ ಅವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿರುವ ಶ್ರಿಯಾ, ಇಂದಿಗೂ ಸ್ಥಿರತೆಯಿಂದ ಬದುಕನ್ನು ಎದುರಿಸುತ್ತಿದ್ದಾರೆ. ಅವರ ದೃಷ್ಟಿಯಲ್ಲಿ ಸಾಧನೆ ಎಂದರೆ ಇತರರೊಂದಿಗೆ ಹೋಲಿಕೆ ಅಥವಾ ವೇಗವಲ್ಲ; ಅರ್ಥಪೂರ್ಣ ಕೆಲಸದಲ್ಲಿ ತೃಪ್ತಿಯಾಗಿರುವುದು. ಕುಟುಂಬದ ಬೆಂಬಲವೇ ಅವರ ಬಲವಾದ ಅಸ್ತಿವಾರ.
ಇದನ್ನು ಓದಿದ್ದೀರಾ?: ಜಿಲ್ಲೆಯ ಸಂಗೀತ ಲೋಕದ ಮಿಂಚುಗಳು
ವೈದ್ಯಕೀಯ ಮತ್ತು ಶೈಕ್ಷಣಿಕ ಸಾಧನೆಗಳ ಜೊತೆಗೆ, ಶ್ರಿಯಾ ಅವರ ಪ್ರತಿಭೆಗೆ ಕಲೆ, ಸಮಾಜಸೇವೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿಯೂ ವ್ಯಾಪಕ ಮಾನ್ಯತೆ ದೊರೆತಿದೆ. ಅನೇಕ ಭಾರತೀಯ ಶಾಸ್ತ್ರೀಯ ನೃತ್ಯಶೈಲಿಗಳಲ್ಲಿ ತರಬೇತಿ ಪಡೆದ ಅವರು, ಬಾಲ್ಯದಿಂದಲೇ ನೂರಾರು ಬಹುಮಾನಗಳನ್ನು ಗಳಿಸಿ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. 2015ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಗಾಗಿ ಅಂತಾರಾಷ್ಟ್ರೀಯ ಲಯನ್ಸ್ ಗೋಲ್ಡ್ ಪ್ರಶಸ್ತಿಯಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಕ್ಲಿನಿಕಲ್ ಸೇವೆಯ ಜೊತೆಗೆ ಸ್ತ್ರೀರೋಗ, ಪ್ರಸೂತಿ ತಜ್ಞತೆ ಮತ್ತು ಸಂತಾನೋತ್ಪತ್ತಿಯ ವಿಷಯಗಳಲ್ಲಿ ಸಂಶೋಧನಾ ಲೇಖನಗಳನ್ನು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಿರುವುದು ಅವರ ಸಾಮಾಜಿಕ ಬದ್ಧತೆ, ವೃತ್ತಿ ಪ್ರಾವೀಣ್ಯತೆ ಮತ್ತು ವೈಜ್ಞಾನಿಕ ನಿಷ್ಠೆಯ ಅಪರೂಪದ ಸಂಯೋಜನೆಯನ್ನು ತೋರಿಸುತ್ತದೆ.
ಡಾ. ಶ್ರಿಯಾ ದಿನಕರ ಹೇಗೆ ಇತರರಿಗಿಂತ ವಿಭಿನ್ನವೆಂದರೆ- ಅದು ಸಾಧನೆಗಳ ಸಂಖ್ಯೆಯಿಂದಲ್ಲ. ಇಷ್ಟು ಕಿರಿಯ ವಯಸ್ಸಿನಲ್ಲೇ ಅವರು ತೆಗೆದುಕೊಂಡ ನಿರ್ಧಾರಗಳಿಂದಾಗಿ! ತಮ್ಮಲ್ಲಿ ಚಿಕ್ಕ ವಯಸ್ಸಿನಲ್ಲೇ ಅನೇಕ ಪ್ರತಿಭೆಗಳಿದ್ದರೂ ಚಿತ್ತಚಂಚಲರಾಗದೆ, ಮಹತ್ವಾಕಾಂಕ್ಷೆಯಿದ್ದರೂ ಆತುರವಿಲ್ಲದೆ, ಯಶಸ್ಸಿದ್ದರೂ ವಿನಯ ಕಳೆದುಕೊಳ್ಳದೆ ಧೀಮಂತಿಕೆಯಿಂದ ಬದುಕಬಹುದು ಎಂಬುದನ್ನವರು ತೋರಿಸಿದ್ದಾರೆ. ಗದ್ದಲವನ್ನು ಮೆಚ್ಚುವ, ಅಲ್ಲೇ ಕಳೆದು ಹೋಗುವ ಈ ಜಗತ್ತಿನಲ್ಲಿ, ಸಹನೆಯೊಂದಿಗೆ ಉದ್ದೇಶಿತ ದಿಕ್ಕಿನೆಡೆಗೆ ಒಂದೊಂದೇ ಹೆಜ್ಜೆಗಳನ್ನಿಡುತ್ತಾ ಸಾಗುವುದು ತನ್ನದೇ ಆದ ಹೊಸ ಮಾರ್ಗವನ್ನು ಸೃಷ್ಟಿಸುತ್ತದೆ ಎಂಬುದನ್ನು ಅವರ ಜೀವನದ ಕಥೆಯು ಮೌನವಾಗಿ ಸಾರುತ್ತದೆ. ಅವರಿಗೆ ಎಲ್ಲವೂ ಒಳಿತೇ ಆಗಲಿ ಎಂದು ಹಾರೈಸುತ್ತೇನೆ.
-ಐರಿನ್ ಆರತಿ




