ʼಲೂಸ್‌ ಟಾಕ್‌ʼ ನಾಯಕರು; ಸಂಘಪರಿವಾರದ ಹಿನ್ನಲೆಯವರೇ ಎಲ್ಲರಿಗಿಂತ ಮುಂದೆ..!

Date:

ತಮ್ಮ ಸ್ಥಾನ, ಜವಾಬ್ದಾರಿ, ಹುದ್ದೆಯ ಘನತೆಯ ಬಗ್ಗೆ ಅರಿವಿಲ್ಲದೇ ಬಾಯಿಗೆ ಬಂದಂತೆ ಮಾತನಾಡುವುದು ರಾಜಕಾರಣದಲ್ಲಿ ಹೊಸದೇನಲ್ಲ. ಎಲ್ಲಾ ಪಕ್ಷದಲ್ಲೂ ಅಂತಹ ಮತಿಗೇಡಿಗಳು ಇದ್ದಾರೆ. ಆದರೆ, ಲೂಸ್‌ ಟಾಕ್‌ಗೆ ಹೆಸರಾದವರ ಪಟ್ಟಿಯಲ್ಲಿ ಸಂಘಪರಿವಾರದ ಹಿನ್ನೆಲೆಯ, ಮಹಾನ್‌ ದೇಶಭಕ್ತರು ಎಂದುಕೊಂಡು ಓಡಾಡುವವರೇ ಹೆಚ್ಚು ಇದ್ದಾರೆ. ಬಿಜೆಪಿಯ ಅನೇಕ ನಾಯಕರ ಮಾತುಗಳು ಸಂವಿಧಾನದ ಎಲ್ಲೆ ಮೀರಿ ಹೋದ, ಅಸೂಕ್ಷ್ಮವಾಗಿ ಮಾತನಾಡಿದ ಅನೇಕ ಉದಾಹರಣೆಗಳಿವೆ. 

ರಾಜಕಾರಣಿಗಳು ಆರೋಪ ಪ್ರತ್ಯಾರೋಪ ಮಾಡುವುದು ಸಹಜ. ಆದರೆ ಇಂತಹ ಟೀಕೆಗಳು, ಆರೋಪ ಪ್ರತ್ಯಾರೋಪಗಳು ಸೌಜನ್ಯದ ಎಲ್ಲೆ ಮೀರಿದಾಗ, ಅಸಂವಿಧಾನಿಕ ಎನಿಸಿದಾಗ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತದೆ. ಈಗ ಆರಗ ಜ್ಞಾನೇಂದ್ರ ಅವರ ವಿರುದ್ಧ ಜನಕ್ರೋಶ ಭುಗಿಲೆದ್ದಿರುವುದರ ಹಿಂದೆಯೂ ಪ್ರಜಾಸತಾತ್ಮಕ ಮಾರ್ಗಗಳನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು ಎಂಬ ಆಗ್ರಹಗಳಿವೆ.

ಕಸ್ತೂರಿ ರಂಗನ್ ವರದಿಯನ್ನು ಟೀಕಿಸುವ ಭರದಲ್ಲಿ, “‘ಅರಣ್ಯ ಸಚಿವರಿಗೆ ಪಶ್ಚಿಮಘಟ್ಟದ ಜನರ ಜೀವನ ವಿಧಾನ, ಮರಗಿಡಗಳ ಕುರಿತು ತಿಳಿವಳಿಕೆ ಇಲ್ಲ. ವಿಜ್ಞಾನಿಯಾಗಿರುವ ಕಸ್ತೂರಿ ರಂಗನ್ ಪಶ್ಚಿಮ ಘಟ್ಟಗಳ ಬಗ್ಗೆ ವರದಿ ನೀಡಲು ಪರಿಸರ ತಜ್ಞ ಅಲ್ಲʼʼ ಎನ್ನುತ್ತಾ, “ಅರಣ್ಯ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗಿರುವುದು ನಮ್ಮ ದುರಾದೃಷ್ಟ. ಬೀದರ್ ಮೂಲದ ಅವರಿಗೆ ಮರ-ಗಿಡ ಅಂದರೆ ಏನು ಎಂಬುದೇ ಗೊತ್ತಿಲ್ಲ. ಅವರಿಗೆ ಮಲೆನಾಡಿನವರ ಬದುಕು, ಪಶ್ಚಿಮ ಘಟ್ಟದವರ ಸಮಸ್ಯೆಗಳ ಬಗ್ಗೆ ಗೊತ್ತಿಲ್ಲ. ಆ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೆ ಅಲ್ಲಿನವರ ಸ್ಥಿತಿ ಗೊತ್ತಾಗುತ್ತದೆ. ಪಾಪ ಅವರ ತಲೆಕೂದಲು ಮುಚಿಕೊಂಡಿದ್ದರಿಂದ ಸ್ವಲ್ಪ ಉಳಕೊಂಡಿದ್ದಾರೆ. ಅದೇ ಅವರ ನೆರಳುʼʼ ಎಂದು ಟೀಕಿಸಿದ್ದಾರೆ.

ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ, “ತೀರ್ಥಹಳ್ಳಿಯಲ್ಲಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಭಾಷಣದಲ್ಲಿ ಖಂಡ್ರೆ ಅವರ ಹೆಸರಿನ ಬದಲು ಖರ್ಗೆ ಅವರ ಹೆಸರು ಬಳಸಿದ್ದೇನೆಯೇ ವಿನಾ ಮಲ್ಲಿಕಾರ್ಜುನ ಖರ್ಗೆ ಎಂದು ಎಲ್ಲಿಯೂ ಹೇಳಿಲ್ಲ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಪಾರ ಗೌರವ ಮೊದಲಿನಿಂದಲೂ ಇದೆ. ಅವರ ಅನುಭವ, ಅವರ ವ್ಯಕ್ತಿತ್ವದ ಬಗ್ಗೆ ಯಾವಾಗಲೂ ಗೌರವದಿಂದ ಮಾತಾಡಿದ್ದೇನೆ. ಅವರ ಬಗ್ಗೆ ಅಸಡ್ಡೆಯಿಂದ ಮಾತಾಡುವುದು ಖಂಡಿತವಾಗಿಯೂ ಸಾಧ್ಯವಿಲ್ಲʼʼ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಆಗಲೂ ತಮ್ಮ ಮಾತು ತಪ್ಪೆಂದು ಅವರು ಭಾವಿಸಿದಂತೆ ತೋರುತ್ತಿಲ್ಲ. ಖಂಡ್ರೆಯವರಿಗೆ ಆಗಲೀ, ಖರ್ಗೆಯವರಿಗೆಯೇ ಆಗಲೀ, ಇನ್ಯಾರಿಗೆಯೇ ಆಗಲೀ- ಇಂತಹ ಅಸಾಂವಿಧಾನಿಕ ರೇಸಿಸ್ಟ್ ಪದಗಳನ್ನು ಬಳಸುವುದು ಸರಿಯೇ? ಒಂದು ಪ್ರದೇಶದ ಜನರನ್ನೇ ಆರಗ ಅವರು ಬಣ್ಣವನ್ನು ಆಧರಿಸಿ ಮೂದಲಿಸುತ್ತಿದ್ದಾರೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಕಸ್ತೂರಿ ರಂಗನ್‌ ಶಿಕ್ಷಣ ತಜ್ಞರೂ ಅಲ್ಲ !

ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಮಾಧವ ಗಾಡ್ಗಿಲ್ ಸಮಿತಿಯನ್ನು ರಚಿಸಲಾಗಿತ್ತು. ಗಾಡ್ಗಿಲ್ ಅವರು ಪರಿಸರ ತಜ್ಞರೂ ಕೂಡ. ಆದರೆ ಅವರ ವರದಿಯನ್ನು ಪ್ರಭುತ್ವ ಒಪ್ಪಿಕೊಳ್ಳಲಿಲ್ಲ. ನಂತರ ವಿಜ್ಞಾನಿ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿ, ವರದಿ ಪಡೆಯಲಾಯಿತು. ಕಸ್ತೂರಿ ರಂಗನ್ ಪರಿಸರ ತಜ್ಞರಲ್ಲ ಎಂದು ಆರಗ ಅವರು ಹೇಳುತ್ತಿರುವುದು ನಿಜವಿದೆ. ಅವರು ನೀಡಿರುವ ವರದಿಯ ಅಂಶಗಳತ್ತ ಹೋಗುವುದು ಬೇಡ. ಆದರೆ ಅವರು ಪರಿಸರ ತಜ್ಞರಲ್ಲ ಎಂಬ ಕಾರಣಕ್ಕೆ ವರದಿಯನ್ನು ತಿರಸ್ಕರಿಸುವುದು ಒಂದು ರೀತಿಯಲ್ಲಿ ಸರಿ ಎನಿಸಬಹುದು. ಇದೇ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ನೂತನ ಶಿಕ್ಷಣ ನೀತಿ(ಎನ್ಇಪಿ) 2020 ರೂಪಿಸಲಾಯಿತು. ಅವರು ಶಿಕ್ಷಣ ತಜ್ಞರೂ ಅಲ್ಲ. ಸಮಿತಿಯಲ್ಲಿ ಇದ್ದ ಅನೇಕರು ಸಂಘಪರಿವಾರದ ಹಿನ್ನೆಲೆಯವರು. ಎನ್ಇಪಿ ಹೇಗೆ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿದೆ ಎಂಬುದನ್ನು, ಅಂಚಿನಲ್ಲಿರುವ ಸಮುದಾಯವನ್ನು ಹೇಗೆ ಶಿಕ್ಷಣದಿಂದ ಹೊರದೂಡುತ್ತದೆ ಎಂಬುದನ್ನು ಅನೇಕ ಶಿಕ್ಷಣ ತಜ್ಞರು ವಿಶ್ಲೇಷಿಸಿದ್ದಾರೆ. ಶಿಕ್ಷಣ ತಜ್ಞರಲ್ಲದ ಕಸ್ತೂರಿ ರಂಗನ್ ನೇತೃತ್ವದಲ್ಲಿ ನೀಡಲಾದ ವರದಿಯನ್ನು ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಒಪ್ಪಿಕೊಂಡಿದ್ದೇಕೆ? ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಪೂರ್ವ ಸಿದ್ಧತೆ, ಚರ್ಚೆಗಳಿಲ್ಲದೆ ಎನ್ಇಪಿಯನ್ನು ಜಾರಿಗೊಳಿಸಿ ಶಿಕ್ಷಣ ವ್ಯವಸ್ಥೆಯನ್ನು ಹಳ್ಳ ಹಿಡಿಸಿದ್ದು ಏಕೆ? – ಈ ಪ್ರಶ್ನೆಗಳಿಗೆ ಆರಗ ಜ್ಞಾನೇಂದ್ರ ಅವರು ಉತ್ತರಿಸುವರೇ? ಇರಲಿ.

ಮೈ ಬಣ್ಣ ನೋಡಿ ಅಣಕ ಮಾಡಿರುವ ಆರಗ ಜ್ಞಾನೇಂದ್ರ, ಕೇವಲ ಖರ್ಗೆಯವರಿಗೆ, ಖಂಡ್ರೆಯವರಿಗೆ ಅಗೌರವ ತೋರಿಲ್ಲ. ಸಮಸ್ತ ಕರ್ನಾಟಕದ ಜನತೆಗೆ ಅವಮಾನ ಮಾಡಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ. ಕರ್ನಾಟಕ ಎಂಬ ಹೆಸರೇ ʻಕಪ್ಪುʼ ಎಂಬ ಪದದಿಂದ ಹುಟ್ಟಿದೆ ಎಂದು ಭಾಷಾತಜ್ಞರು ವಿಶ್ಲೇಷಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ಕರೆಯಲ್ಪಡುತ್ತಿದ್ದ ಕರ್ನಾಟಕದ ಹೆಸರುಗಳು- ಕರ್ನಾಡು, ಕಮ್ಮಿತ್ತುನಾಡು(ಕಪ್ಪು ಮಣ್ಣಿನ ನಾಡು), ಕರುನಾಡರು, ಕನ್ನಾಡು, ಕರ್ನಾಡು, ಕರುನುಡುಗರಂ, ಕರುನಾಟಕ, ಕಣ್ನೀರ್, ಕನ್ನಡ, ಕನ್ನಡನಾಡು, ಕನ್ನಾಟ, ಕುಂತಳನಾಡು, ಮಹಿಷ ಮಂಡಲ… ಹೀಗೆ.

ಕಪ್ಪುಮಣ್ಣಿನ ನಾಡು ಈ ಕರುನಾಡು, ಕಪ್ಪುಜನರ ನಾಡು ಈ ಕರುನಾಡು. ನಮ್ಮ ನಾಡಿನ ಮೂಲದ ಕುರಿತು, ಇಲ್ಲಿನ ಜನರ ಮೈಬಣ್ಣದ ಕುರಿತು ಅಣಕ ಮಾಡಿರುವ ಆರಗ ಜ್ಞಾನೇಂದ್ರ ಅವರು ಕ್ಷಮೆ ಕೇಳಿದರೆ ಮುಗಿಯಿತೇ? ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೇ ಅಣಕಿಸಿದ ಸಂಘಪರಿವಾರದ ಗುಂಪಿನ ಆರಗ ಜ್ಞಾನೇಂದ್ರರಿಗೆ ತಿಳಿಸಿ ಹೇಳುವವರು ಯಾರು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಖ್ಯವಾಗಿ ಹೇಳಲು ಹೊರಟಿದ್ದು- ಈ ರಾಜಕಾರಣಿಗಳು ಮತ್ತು ಸಾರ್ವಜನಿಕ ಬದುಕಿನಲ್ಲಿರುವವರ ಲೂಸ್ ಟಾಕ್‌ಗಳ ಬಗ್ಗೆ. ಮುಖ್ಯವಾಗಿ ಸಂಘಪರಿವಾರದ ಹಿನ್ನೆಲೆಯವರು ಇಂತಹ ಬಾಡಿ ಶೇಮಿಂಗ್, ಜನಾಂಗೀಯ ನಿಂದನೆ, ರೇಸಿಸ್ಟ್ ಭಾಷೆ, ಲಿಂಗ ಅಸೂಕ್ಷ್ಮತೆಯ ಮಾತುಗಳನ್ನು ಆಡುವುದು, ಅಂತಹದ್ದನ್ನೇ ಬರೆಯುವುದು ಏತಕ್ಕೆ? ಯಾವುದು ಇವರ ಸಂಸ್ಕೃತಿ?

ʻವಿಶ್ವವಾಣಿʼ ಪತ್ರಿಕೆಯಲ್ಲಿ ಪ್ರಕಟವಾಗುವ ʻನೂರೆಂಟು ವಿಶ್ವʼ ಎಂಬ ಅಂಕಣದಲ್ಲಿ ʼನದಿಯ ಹೆಸರಿಟ್ಟುಕೊಂಡು ನೀರಿಗಾಗಿ ನರಳುವ ಜೋರ್ಡಾನ್!ʼ ಎಂಬ ಲೇಖನವನ್ನು ಪ್ರಕಟಿಸಿದ್ದ ಸಂಪಾದಕ ವಿಶ್ವೇಶ್ವರ ಭಟ್, “ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ!” ಎಂದು ಬರೆದಿದ್ದರು. ಈ ಪ್ರಕರಣ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮುಟ್ಟಿದ ಬಳಿಕ ಸದರಿ ಸಂಪಾದಕ ಬೇಷರತ್ ಕ್ಷಮೆಯಾಚಿಸಿದ ಬೆಳವಣಿಗೆಯೂ ಆಗಿತ್ತು.

ಆರಗ ಜ್ಞಾನೇಂದ್ರ ವಿಚಾರಕ್ಕೆ ಮತ್ತೆ ಬರುವುದಾದರೆ ಕೆಲವು ದಿನಗಳ ಹಿಂದೆ ಇಂತಹದ್ದೇ ಅಸೂಕ್ಷ್ಮ ಮಾತುಗಳನ್ನು ಅವರು ಆಡಿದ್ದರು. “ಭಿಕ್ಷುಕರು, ಹಾವಾಡಿಗರಾಗಿದ್ದ ಭಾರತೀಯರನ್ನು ಪ್ರಧಾನಿ ಮೋದಿ ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿದ್ದಾರೆʼʼ ಎಂದಿದ್ದರು ಆರಗ. ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುನ್ನ ಈ ದೇಶ ಭಿಕ್ಷುಕರ, ಹಾವಾಡಿಗರ ದೇಶವಾಗಿತ್ತು ಎನ್ನುವಲ್ಲಿಯೂ ಅಸೂಕ್ಷ್ಮತೆ ಇದೆ. ಭಿಕ್ಷುಕರು ಮತ್ತು ಹಾವಾಡಿಗರನ್ನು ಹೀಯಾಳಿಸುವುದು ಒಂದು ಕಡೆಯಾದರೆ ಭಾರತವನ್ನು ಅತ್ಯಂತ ತುಚ್ಛವಾಗಿ ಕಾಣುವ ಮಾತಿದು. ಬಿಜೆಪಿಯ ನಾಯಕ ಅಟಲ್ ಬಿಹಾರಿ ವಾಜಪೇಯಿಯವರೂ ಈ ಹಿಂದೆ ಪ್ರಧಾನಿಯಾಗಿದ್ದರು ಎಂಬುದನ್ನು ಒಂದು ಕ್ಷಣ ನೆನೆದಿದ್ದರೂ ಇಂತಹ ಮಾತುಗಳನ್ನು ಆರಗ ಆಡುತ್ತಿರಲಿಲ್ಲವೇನೋ.

ಆರಗ ಅವರು ಗೃಹ ಸಚಿವರಾಗಿದ್ದಾಗ ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಭಾರೀ ಚರ್ಚೆಗೆ ಒಳಪಟ್ಟಿತ್ತು. ಆರಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಆಗ್ರಹವನ್ನು ಕಾಂಗ್ರೆಸ್ ಮಾಡಿತ್ತು. ಅತ್ಯಾಚಾರದಂತಹ ವಿಚಾರದಲ್ಲಿ ಆರಗ ನೀಡಿದ ಬೇಜವಾಬ್ದಾರಿ ಹೇಳಿಕೆ: “ರೇಪ್ ಆಗಿರುವುದು ಮೈಸೂರಿನಲ್ಲಿ. ಆದರೆ ಈ ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆʼʼ.

ಬಿಜೆಪಿಯ ಅನೇಕ ನಾಯಕರ ಮಾತುಗಳು ಸಂವಿಧಾನದ ಎಲ್ಲೆ ಮೀರಿ ಹೋದ, ಅಸೂಕ್ಷ್ಮವಾಗಿ ಮಾತನಾಡಿದ ಅನೇಕ ಉದಾಹರಣೆಗಳಿವೆ. ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹಿಂದೊಮ್ಮೆ ಅತ್ಯಂತ ತುಚ್ಛವಾಗಿ ಮಹಿಳೆಯೊಬ್ಬರ ಬಗ್ಗೆ ಮಾತನಾಡಿದ್ದರು. ಅಹವಾಲು ಸಲ್ಲಿಸಲು ಬಂದಿದ್ದ ಮಹಿಳೆಯ ಮೇಲೆ ಕೂಗಾಗಿದ್ದ ಅವರು ಘಟನೆಯನ್ನು ಸಮರ್ಥಿಸುತ್ತಾ ಖಾಸಗಿ ಚಾನೆಲ್ ನೀಡಿದ ಸಂದರ್ಶನದಲ್ಲಿ, “ಮಹಿಳೆಯನ್ನು ನಾನು ರೇಪ್ ಮಾಡಿದ್ದೇನೆಯೆ?” ಎಂದು ಪ್ರಶ್ನಿಸಿದ್ದರು.

ರಾಜ್ಯ ಕೃಷಿ ಸಚಿವರಾಗಿದ್ದ ಬಿ.ಸಿ.ಪಾಟೀಲ್ ಹಿಂದೊಮ್ಮೆ, “ಉದ್ಯಮಿಗಳು ಸೇರಿದಂತೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಕೃಷಿ ನೀತಿಯಿಂದ ಮನನೊಂದು ಯಾರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಮಾನಸಿಕ ದೌರ್ಬಲ್ಯ ಹೊಂದಿರುವವರಷ್ಟೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದು ರೈತರ ಆತ್ಮಹತ್ಯೆಗಳನ್ನೇ ಅಪಹಾಸ್ಯ ಮಾಡಿದ್ದರು.
ಬಿಜೆಪಿಯ ಶಾಸಕ ಯತ್ನಾಳ್ ಲೂಸ್ ಟಾಕ್‌ಗಳಿಗೆ ಹೆಸರಾದವರು. ಅಸಾಂವಿಧಾನಿಕ ಭಾಷೆಯನ್ನು, ರೌಡಿಸಂ ಮ್ಯಾನರಿಸಂ ಅನ್ನು ಅನೇಕ ಸಲ ಅವರು ಪ್ರದರ್ಶಿಸಿದ್ದಾರೆ. “ತಾನು ಹೋಂ ಮಿನಿಸ್ಟ್ರು ಆಗಿದ್ದಿದ್ದ್ರೆ, ಸೋ ಕಾಲ್ಡ್ ಸೆಕ್ಯುಲರಿಸ್ಟುಗಳನ್ನು ಗುಂಡಿಟ್ಟು ಸಾಯಿಸುವಂತೆ ಆರ್ಡರ್ ಮಾಡುತ್ತಿದ್ದೆ” ಎಂದಿದ್ದರು ಒಮ್ಮೆ.

ಮತ್ತೊಮ್ಮೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಈ ನಾಡಿನ ಸಾಕ್ಷಿಪ್ರಜ್ಞೆಯಾಗಿ ಬಾಳಿ ಬದುಕಿದ ಎಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಕೀಳು ಮಟ್ಟದ ಕಮೆಂಟ್ ಮಾಡಿದ್ದರು ಯತ್ನಾಳ್. “ದೊರೆಸ್ವಾಮಿ ಒಬ್ಬ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಎಲ್ಲಿದ್ದಾನೆ ಆ ಮುತ್ಯಾ? ಪಾಕಿಸ್ತಾನದ ಏಜೆಂಟ್ʼʼ ಎಂದೆಲ್ಲ ಹೇಳಿಕೆ ನೀಡಿದ್ದು ಈ ನಾಡಿನ ಇತಿಹಾಸಕ್ಕೊಂದು ಕಪ್ಪುಚುಕ್ಕೆ. ಈ ಮಾತನ್ನು ಮತ್ತೊಬ್ಬ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಬೆಂಬಲಿಸಿದ್ದರು. ಈಶ್ವರಪ್ಪನವರ ನಾಲಗೆ ಮತ್ತು ಬ್ರೈನ್‌ಗೆ ಕನೆಕ್ಷನ್ ಕಟ್ ಆದ ಸಾಕಷ್ಟು ಉದಾಹರಣೆಗಳಂತೂ ಇವೆ. ಕೋಮುದ್ವೇಷ ಭಾಷಣಗಳನ್ನು ಮಾಡುವುದರಲ್ಲಿ ಈಶ್ವರಪ್ಪ ಒಂದು ಹೆಜ್ಜೆ ಮುಂದೆ.

”ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ?”
“ಮುಂದೊಂದು ದಿನ ತ್ರಿವರ್ಣ ಧ್ವಜದ ಬದಲು ಕೇಸರಿ ಭಾಗವಧ್ವಜವೇ ದೇಶದ ರಾಷ್ಟ್ರೀಯ ಧ್ವಜವಾದರೂ ಆಗಬಹುದು”
“ಮನಮೋಹನ್ ಸಿಂಗ್ ಗಂಡಸೇ ಅಲ್ಲ, ಕಾಂಗ್ರೆಸ್ನಲ್ಲಿ ತಾಯಿ ಮೊಲೆಹಾಲು ಕುಡಿದ ಗಂಡಸರೇ ಇಲ್ಲ”
“ಈ ಹಿಂದೆ ಹಿಂದುತ್ವದ ಬಗ್ಗೆ ಮಾತಾಡಿದ್ರೆ ಕೊಲೆ ಆಗ್ತಾ ಇತ್ತು. ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆಗ ವಾಪಾಸ್ ಹೊಡಿಯೋ ಶಕ್ತಿ ನಮಗೆ ಇರಲಿಲ್ಲ. ಆದರೆ, ಈಗ ದೇಶದಲ್ಲಿ ಬಿಜೆಪಿ ದೊಡ್ಡದಾಗಿ ಬೆಳೀತಿದೆ. ನಮಗೆ ಈಗ ತಿರುಗಿಸಿ ಹೊಡೆಯುವ ಶಕ್ತಿ ಬಂದಿದೆ. ಹೀಗಾಗಿ ಯಾರು ನಮ್ಮ ಕಾರ್ಯಕರ್ತರ ಮೇಲೆ ಯಾವುದರಲ್ಲಿ ಹೊಡೀತಾರೋ ಅದ್ರಲ್ಲೆ ತಿರುಗಿಸಿ ಹೊಡೆಯಿರಿ, ಒಂದಕ್ಕೆ ಎರಡು ತೆಗೀರಿ”
“ಕಾಂಗ್ರೇಸಿಗರು ಕುಡುಕ ಸೂ….ಮಕ್ಕಳು”
“ಸಿದ್ದರಾಮಯ್ಯ ಓರ್ವ ಕುಡುಕ, ಮೋಸಗಾರ. ಯಾವ ಸಂದರ್ಭದಲ್ಲಿ ಕುಡೀತಾರೆ, ಕುಡಿದಾಗ ಏನು ಮಾತಾಡ್ತಾರೆ ಅಂತ ಅವರಿಗೆ ಗೊತ್ತಿರಲ್ಲ”
-ಇಂತಹ ಸಾಲು ಸಾಲು ಹೇಳಿಕೆಗಳನ್ನು ನೀಡಿದವರು ಈಶ್ವರಪ್ಪ. ದಾಖಲಿಸುತ್ತಾ ಹೋದರೆ ಈಶ್ವರಪ್ಪನವರ ವಿಚ್ಛಿದ್ರಕಾರಿ ಭಾಷಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ದ್ವೇಷದ ಭಾಷಣಗಳಿಗೆ ಹೆಸರಾದವರು. “ನಾವು ಸಂವಿಧಾನವನ್ನು ಬದಲಿಸುವುದಕ್ಕೇ ಬಂದಿದ್ದೇವೆ. ಜಾತ್ಯತೀತರಿಗೆ ಅಪ್ಪ ಅಮ್ಮ ಯಾರು ಅಂತ ಗೊತ್ತಿಲ್ಲ, ಜಾತ್ಯತೀತರಿಗೆ ಅಪ್ಪ ಅಮ್ಮ ಇಲ್ಲʼʼ ಎಂದು ಅತ್ಯಂತ ಹೀನಾಯವಾಗಿ ಮಾತನಾಡಿದ್ದರು. ಆನಂತರ ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ನಳಿನ್‌ ಕುಮಾರ್‌ ಕಟೀಲ್‌ ಜೋಕರ್‌ ಎಂದೇ ಪ್ರಸಿದ್ಧ. ರಾಹುಲ್‌ ಗಾಂಧಿ ಡ್ರಗ್‌ ಪೆಡ್ಲರ್‌ ಎಂದು ಹೇಳಿದ್ದರು.

ಸುಳ್ಳುಗಳನ್ನು ಹೇಳಿರುವುದರಲ್ಲಿ ಮತ್ತು ಕೋಮುದ್ವೇಷವನ್ನು ಬಿತ್ತುವರಲ್ಲಿ ಸಿ.ಟಿ.ರವಿಯವರು ಎತ್ತಿದ ಕೈ. “ಇವ್ರು ಕೇಳ್ ಕೇಳಿದ್ನೆಲ್ಲ ಕೊಡೋಕೆ ಕೇಂದ್ರ ಸರ್ಕಾರ ಏನು ಇವ್ರ್ ಅತ್ತೆ ಮನೆ ಅಂದ್ಕೊಂಡಿದರಾ?”, “ತುದಿ ಕಟ್ ಮಾಡಿಸೋದು ಕಾಂಗ್ರೆಸ್‌ನವರ ಅಜೆಂಡಾ”, “ಯುಪಿಯಲ್ಲಿ ಮಾತ್ರ ಬುಲ್ಡೋಜರ್ ಓಡಾಡುತ್ತದೆ, ಇಲ್ಲಿ ಓಡಾಡೋದು ಬೇಡವಾ? ಬಹುಮತ ನಮಗೆ ಸಿಗಬೇಕು” ಎಂದಿದ್ದು, ಸಿದ್ದರಾಮಯ್ಯನವರನ್ನು ʼಸಿದ್ರಾಮುಲ್ಲಾಖಾನ್ʼ ಎಂದು ಮೂದಲಿಸಿ ಅದನ್ನು ಸಮರ್ಥಿಸಿದ್ದು, “ದೇಶಕ್ಕಾಗಿ ಬಿಜೆಪಿ ಮನೆಯ ಒಂದು ನಾಯಿಯೂ ಸತ್ತಿಲ್ಲ ಎಂದುʼʼ ಮಲ್ಲಿಕಾರ್ಜುನ ಖರ್ಗೆಯವರು ಹೇಳಿಕೆ ನೀಡಿದಾಗ ಸಿ.ಟಿ.ರವಿ, “ಇಟಲಿ ಕಾಂಗ್ರೆಸ್‌ನ ಒಂದು ನಾಯಿಯೂ ಭಾರತ ಪರ ಬೊಗಳಿಲ್ಲ. ಅದು ಚೀನಾ ಮತ್ತು ಪಾಕ್ ಪರ ಬೊಗಳುತ್ತೆ. ಇಟಲಿ ಕಾಂಗ್ರೆಸ್ ಒಂದೂ ನಾಯಿಯೂ ಇದುವರೆಗೆ ಭಾರತ ಪರ ಬಾಲ ಅಲ್ಲಾಡಿಸಿಲ್ಲ ಹಾಗೂ ಬೊಗಳಿಲ್ಲ. ಭಾರತದ ರಕ್ಷಣೆ ಕೆಲಸ ಮಾಡಿಲ್ಲ. ಅದು ಚೀನಾ, ಪಾಕಿಸ್ತಾನದ ಎಂಜಲು ತಿಂದಿದೆʼʼ ಎಂದಿದ್ದರು ಸಿ.ಟಿ.ರವಿ. ಸಂಘಪರಿವಾರದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂಬ ಐತಿಹಾಸಿಕ ಸತ್ಯಗಳ ಹಿನ್ನೆಲೆಯಲ್ಲಿ ಖರ್ಗೆಯವರು ವಾಗ್ದಾಳಿ ನಡೆಸಿದ್ದರು. ಆದರೆ ಸಿ.ಟಿ.ರವಿಯಂಥವರು ಅದಕ್ಕೆ ನೀಡಿದ ಪ್ರತಿಕ್ರಿಯೆ ಸ್ವೀಕೃತವೇ? ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಸಿದ್ರಾಮಯ್ಯ ಕಚ್ಚೆಹರುಕ ಎಂದಿದ್ದರು.

ಇನ್ನು ಕೈ ನಾಯಕರು ಕೂಡ ಇಂತಹ ಅಸೂಕ್ಷ್ಮ ಹೇಳಿಕೆಗಳನ್ನು ನೀಡಿದ ಉದಾಹರಣೆಗಳಿವೆ. ಮಲ್ಲಿಕಾರ್ಜುನ ಖರ್ಗೆಯವರು ಚುನಾವಣಾ ಸಂದರ್ಭದಲ್ಲಿ “ಮೋದಿ ವಿಷಸರ್ಪ ಇದ್ದಂತೆʼʼ ಎಂದಿದ್ದರು. ಇದು ಅತ್ಯಂತ ಕಟುವಾದ ಟೀಕೆಯಾಗಿತ್ತು. ಮೋದಿಯವರು ತಮ್ಮ ಅವಧಿಯಲ್ಲಿ ಮಾಡಿರುವ ಅವಾಂತರಗಳನ್ನು, ತೆಗೆದುಕೊಂಡಿರುವ ಪಕ್ಷಪಾತಿ ನಿಲುವುಗಳನ್ನು ಟೀಕಿಸಲು ಬೇರೆ ಪದಗಳಿದ್ದವು ಎಂಬುದು ಬೇರೆಯ ಮಾತು. ಖರ್ಗೆಯವರ ಹೇಳಿಕೆ ಹೊರಬಿದ್ದ ಬಳಿಕವಂತೂ ಬಿಜೆಪಿ ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ಹೇಳಿಕೆಗಳನ್ನು ನೀಡಿದರು. ಯತ್ನಾಳ್, “ಸೋನಿಯಾ ಗಾಂಧಿ ವಿಷಕನ್ಯೆ, ರಾಹುಲ್ ಗಾಂಧಿ ಹುಚ್ಚʼʼ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶೋಭಾ ಕರಂದ್ಲಾಜೆ, “ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಹೇಳಿರುವುದು ಸರಿಯಲ್ಲ. ಕಾಂಗ್ರೆಸ್‌ನವರು ಪ್ರಧಾನಿ ಮೋದಿಯನ್ನು ಪದೇ ಪದೇ ಕೆಟ್ಟದಾಗಿ ಬಿಂಬಿಸುವ ಕಾರಣದಿಂದ ಬೇಸರಗೊಂಡು ಈ ಹೇಳಿಕೆ ನೀಡರಬಹುದು” ಎಂದು ಅಚ್ಚರಿ ಮೂಡಿಸಿದ್ದರು. ಶವ ರಾಜಕಾರಣದ ಸಂದರ್ಭಗಳಲ್ಲಿ ಶೋಭಾ ಕರಂದ್ಲಾಜೆ ಏನೆಲ್ಲ ಸುಳ್ಳುಗಳನ್ನು ಹೇಳಿದ್ದಾರೆಂಬುದನ್ನು ರಾಜಕೀಯ ಇತಿಹಾಸ ನೋಡಿದ ಎಲ್ಲರಿಗೂ ಗೊತ್ತಿರುವ ಸಂಗತಿ.

ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಸೃಷ್ಟಿಸಿದ ಉರಿಗೌಡ, ದೊಡ್ಡ ನಂಜೇಗೌಡ ವಿವಾದ ಗೊತ್ತೇ ಇದೆ. ʼʼಉರಿಗೌಡ ಮತ್ತು ನಂಜೇಗೌಡರು ಟಿಪ್ಪು ಸುಲ್ತಾನನನ್ನು ಹೇಗೆ ಕೊಂದು ಹಾಕಿದರೋ ಅದೇ ರೀತಿ ಸಿದ್ದರಾಮಯ್ಯರನ್ನೂ ಹೊಡೆದು ಹಾಕಬೇಕುʼʼ ಎಂದು ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದರು.

ಜನಾಂಗೀಯ ದ್ವೇಷದ ಭಾಷಣ ಮಾಡುವ ತೇಜಸ್ವಿ ಸೂರ್ಯ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. “ಪಂಜರ್ ಹಾಕೋರು” ಎಂದು ಮುಸ್ಲಿಂ ಸಮುದಾಯವನ್ನು ಮೂದಲಿಸಿ ಟೀಕೆಗೆ ಒಳಗಾಗಿದ್ದರು.
ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಅವರು ದೇವೇಗೌಡರ ಕುರಿತು ತೀರ ಹಗುರವಾಗಿ ಮಾತನಾಡಿದ್ದರು. “ದೇವೇಗೌಡರು ಈಗ ಇಬ್ಬರ ಹೆಗಲ ಮೇಲೆ ಕೈ ಹಾಕಿ ನಡೆಯುತ್ತಿದ್ದಾರೆ. ಇನ್ನು ನಾಲ್ವರ ಮೇಲೆ ಹೋಗುವ ಸಮಯ ಹತ್ತಿರದಲ್ಲೇ ಇದೆʼʼ ಎಂದು ಅತ್ಯಂತ ಕೀಳುಮಟ್ಟದಲ್ಲಿ ಲೇವಡಿ ಮಾಡಿದ್ದು ಆಕ್ರೋಶಕ್ಕೆ ಗುರಿಯಾಗಿತ್ತು.

ಸಂಸದ ಪ್ರತಾಪ್ ಸಿಂಹ ಅವರು ಕೋಮುದ್ವೇಷ ಮಾತನಾಡುವುದರಲ್ಲಿ ಎತ್ತಿದ ಕೈ. “ನಮ್ಮ ಮನೆಯಲ್ಲಿ 17 ಮತಗಳಿವೆ ನಾವು ಸಿದ್ದರಾಮಯ್ಯ ಅವರಿಗೆ ಮತ ಹಾಕ್ತೀವಿʼʼ ಎಂದು ಟ್ವೀಟ್ ಮಾಡಿದ್ದ ಯುವಕನಿಗೆ ಪ್ರತಾಪ್ ಸಿಂಹ್, “ನೀನು ಮೋಹನ್ನಾ ಅಥವಾ ಮಹಮ್ಮದ್ದಾ?ʼʼ ಎಂದು ಕೀಳಾಗಿ ಪ್ರತಿಕ್ರಿಯಿಸಿದ್ದರು. “ಈಗ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಹವಣಿಸುತ್ತಿದ್ದಾರೆ. ಒಂದು ವೇಳೆ ನಮ್ಮ ಕಾರ್ಯಕರ್ಯರು ಈ ವೇಳೆ ಮೈ ಮರೆತರೆ, ರಾಜ್ಯದಲ್ಲಿ ಮತ್ತೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ” ಎಂದು ಹೇಳಿಕೆ ನೀಡಿದ್ದರು.

ಇದನ್ನು ಓದಿ ಸ್ನಾನದ ವಿಡಿಯೋ ಪ್ರಕರಣ : ಸಂಘಪರಿವಾರದ ಕಾರ್ಯಕರ್ತನ ವಿರುದ್ಧ ಎಫ್‌ಐಆರ್, ನ್ಯಾಯಾಂಗ ಬಂಧನ

“ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ನಮ್ಮ ಪಕ್ಷದ ಸಿ.ಎಂ. ಇಬ್ರಾಹಿಂ ಏಕೆ ಮುಖ್ಯಮಂತ್ರಿ ಆಗಬಾರದು. ಅವರೇನು ಅಸ್ಪೃಶ್ಯರೆʼʼ ಎಂಬ ಅಸೂಕ್ಷ್ಮ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನೀಡಿದ್ದರು. ಅಸ್ಪೃಶ್ಯರು (ದಲಿತರು) ಸಿಎಂ ಆಗಬಾರದೆ ಎಂಬ ಪ್ರಶ್ನೆಯನ್ನು ಕುಮಾರಸ್ವಾಮಿಗೆ ಈ ನಾಡಿನ ಜನತೆ ಕೇಳಿತ್ತು.

ರಾಜಕಾರಣಿಗಳು ಆಗಾಗ್ಗೆ ಗಂಡಸ್ತನದ ಮಾತುಗಳನ್ನು ಆಡುತ್ತಾರೆ. “ನೀನು ಗಂಡಸಾಗಿದ್ದರೆʼʼ, “ನಾನೇನು ಬಳೆ ತೊಟ್ಟುಕೊಂಡಿಲ್ಲʼʼ ಎಂಬಂತಹ ಹೇಳಿಕೆಗಳನ್ನು ನೀಡುತ್ತಾರೆ. ಲಿಂಗ ಸೂಕ್ಷ್ಮವಿಲ್ಲದ ಭಾಷೆಯನ್ನು ಬಳಸುವುದು ರೂಢಿಯಲ್ಲಿದೆ. ಇದಕ್ಕೆ ಯಾವುದೇ ಪಾರ್ಟಿಯ ನಾಯಕರು ಹೊರತಲ್ಲ. ಇಂತಹ ರಾಜಕೀಯದ ಕುರಿತು ನಾಡಿನ ಜನತೆ ಎಚ್ಚರಿಕೆ ವಹಿಸಿದ್ದಾರೆ. ರಾಜಕಾರಣಿಗಳು ಎಚ್ಚರಿಕೆ ವಹಿಸಿ ಮಾತನಾಡುವುದು ಒಳಿತು.

ಯತಿರಾಜ್‌ ಬ್ಯಾಲಹಳ್ಳಿ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

1 COMMENT

  1. ಸಂವೇದನೆ ಕಳೆದುಕೊಂಡು ತಮ್ಮ ದಿಲ್ಲಿ ಬಾಸ್ ಮೆಚ್ಚಿಸಲು ತಮ್ಮ ಅಸ್ತಿತ್ವವನ್ನು ಮಾರಿಕೊಂಡವರಂತೆ, ಮಾನಸಿಕ ಅಸ್ವಸ್ಥರಂತೆ ಹೇಳಿಕೆ ಕೊಡುವ ರಾಜಕಾರಣಿಗಳನ್ನು ಬೆತ್ತಲೆ ಮಾಡುವ ಉತ್ತಮ ಲೇಖನ,,,, ಇಂಥಾ ರಾಜಕಾರಣಿಗಳ ಹುಚ್ಚಾಟದಿಂದ ದಾರಿ ತಪ್ಪುತ್ತಿರುವ ಯುವಕರಿಗಾಗಿ ವಿಶೇಷ ಲೇಖನಗಳು ಪ್ರಕಟವಾಗಲಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಾತ್ಮ ಗಾಂಧಿ | ಸಂಭಾಷಣೆಯಲ್ಲಿ ರೂಪುಗೊಂಡ ಲೋಕಹಿತ ಚಿಂತಕ

ಈ ಲೇಖನದಲ್ಲಿ ನಾವು ನಿದರ್ಶನವಾಗಿ ತೋರಿಸಿದ ಮೂರು ಸಂವಾದಗಳು ಭಾರತದ ಸ್ವಾತಂತ್ರ್ಯ...

ಈ ದಿನ Exclusive ಸಂದರ್ಶನ | ದೇಶಕ್ಕೆ ಸಾಮೂಹಿಕ ಜೋಮು ಹಿಡಿದಿದೆ; ಹೊಸ ಭ್ರಮೆಗಳ ಕಟ್ಟಲಾಗುತ್ತಿದೆ: ಪರಕಾಲ ಪ್ರಭಾಕರ್

ಪರಕಾಲ ಪ್ರಭಾಕರ್ ಬುಧವಾರ(ಜ.24)ದಂದು ಬೆಂಗಳೂರಿಗೆ ಭೇಟಿ ನೀಡಿದ್ದರು. 'ಈ ದಿನ' ಯೂಟ್ಯೂಬ್...

ಭಾರತೀಯರಿಗೆ ಪುರಾಣ ಪಥ್ಯವಾಯಿತು, ವಾಸ್ತವ ಅಪಥ್ಯವಾಯಿತು

ಭಾರತದ ಇತಿಹಾಸದ ನೆಲೆಗಳೆಲ್ಲವೂ ವಾಸ್ತವದಲ್ಲಿ ಬೌದ್ಧ ಹಾಗೂ ಜೈನ ನೆಲೆಗಳು. ಇದಕ್ಕೆ...