ಮೊನೊಕ್ರೊಟೊಫಾಸ್ | 111 ದೇಶಗಳು ಬಿಸಾಡಿದ ವಿಷವನ್ನ ಭಾರತದ ಒಡಲಿಗೆ ತುಂಬುತ್ತಿರುವುದೇಕೆ?

Date:

ಯಾವ ಕೀಟನಾಶಕದ ಮೂಲ ಎರಡನೇ ಮಹಾಯುದ್ಧದ ಸೈನಿಕರನ್ನು ಕೊಲ್ಲುವ ಅನಿಲದಲ್ಲಿದೆಯೋ, ಜಗತ್ತಿನ 111 ದೇಶಗಳು ಮನುಷ್ಯನ ಜೀವಕ್ಕೆ ಕಂಟಕ ಎಂದು ಯಾವುದನ್ನು ಹತ್ತಿರ ಸೇರಿಸದೆ ನಿಷೇಧಿಸಿವೆಯೋ, ಅದೇ ಮಾರಣಾಂತಿಕ ‘ಮೊನೊಕ್ರೊಟೊಫಾಸ್’ ಇಂದಿಗೂ ಭಾರತದ ಹೊಲಗದ್ದೆಗಳಲ್ಲಿ ರಾಜಾರೋಷವಾಗಿ ಹರಿಯುತ್ತಿದೆ. ಬಿಹಾರದಲ್ಲಿ ಬಿಸಿಯೂಟ ತಿಂದ 23 ಮಕ್ಕಳ ಉಸಿರು ನಿಲ್ಲಿಸಿ, ಮಹಾರಾಷ್ಟ್ರದಲ್ಲಿ ಹತ್ತಾರು ರೈತರನ್ನು ಸಾಮೂಹಿಕವಾಗಿ ಬಲಿಪಡೆದ ಈ ಘೋರ ವಿಷ, ಕಾರ್ಪೊರೇಟ್ ಲಾಬಿಯ ಮರೆಯಲ್ಲಿ ಇಂದಿಗೂ ಅನ್ನ ಬೆಳೆವ ಮಣ್ಣಿನ ಬಾಯಿಗೇ ವಿಷ ಉಗುಳುತ್ತಿದೆ.

- Advertisement -

Monocrotophos ‌ನ ಮೂಲ ಹುಡುಕುತ್ತಾ ಹೋದರೆ ಎರಡನೇ ಮಹಾಯುದ್ಧದ ಇತಿಹಾಸಕ್ಕೆ ತಲುಪುತ್ತೇವೆ. ಯುದ್ಧದ ಸಮಯದಲ್ಲಿ ಮಾನವನ ನರಮಂಡಲವನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸಿ ಶತ್ರುಸೈನಿಕರನ್ನು ಕೊಲ್ಲಲು ವಿಜ್ಞಾನಿಗಳು ‘ಸಾರಿನ್’ ಮತ್ತು ‘ಟಬುನ್’ ನಂತಹ ಭೀಕರ ʼನರ ಅನಿಲʼಗಳನ್ನು ಸೃಷ್ಟಿಸಿದ್ದರು. ಯುದ್ಧ ಮುಗಿದ ನಂತರ, ಬಹುರಾಷ್ಟ್ರೀಯ ಕಂಪನಿಗಳು ಇದೇ ರಾಸಾಯನಿಕ ಸೂತ್ರವನ್ನು ಕೃಷಿಗೆ ಅಳವಡಿಸಲು ಮುಂದಾದವು. ಮನುಷ್ಯನ ನರಮಂಡಲವನ್ನೇ ನಿಷ್ಕ್ರಿಯಗೊಳಿಸಬಲ್ಲ ಶಕ್ತಿ ಇರುವಾಗ, ಕೃಷಿ ಬೆಳೆಯನ್ನು ನಾಶಮಾಡುವ ಕೀಟಗಳನ್ನು ಕೊಲ್ಲುವುದು ಇವುಗಳಿಗೆ ದೊಡ್ಡ ಕೆಲಸವೇ ಅಲ್ಲ. ಈ ಚಿಂತನೆಯ ಫಲವಾಗಿ 1965ರಲ್ಲಿ ಸ್ವಿಟ್ಜರ್‌ಲ್ಯಾಂಡ್ ಮೂಲದ ಸಿಬಾ ಎಜಿ ಮತ್ತು ಅಮೆರಿಕದ ಶೆಲ್ ಕೆಮಿಕಲ್ ಕಂಪನಿ ಜಂಟಿಯಾಗಿ ಮೊನೊಕ್ರೊಟೊಫಾಸ್ ಅನ್ನು ಜಗತ್ತಿಗೆ ಪರಿಚಯಿಸಿದವು. ಇದು ಗಿಡದ ಒಳಗೆ ಸೇರಿ ಇಡೀ ಸಸ್ಯದ ಅಂಗಾಂಶಗಳನ್ನು ವಿಷವಾಗಿಸುವ ಶಕ್ತಿ ಹೊಂದಿತ್ತು. ಗಿಡವನ್ನು ಕಚ್ಚಿ ತಿನ್ನುವ ಕೀಟಗಳು ಈ ವಿಷದ ಪ್ರಭಾವದಿಂದ ಕ್ಷಣಮಾತ್ರದಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿ ಸತ್ತು ಬೀಳುತ್ತಿದ್ದವು. ಭಾರತದಲ್ಲಿ 1970 ಮತ್ತು 80ರ ದಶಕದ ಕೃಷಿ ಕ್ರಾಂತಿಯ ಸಮಯದಲ್ಲಿ ಅತಿ ಹೆಚ್ಚು ಇಳುವರಿ ಪಡೆಯುವ ಉಮೇದಿನಲ್ಲಿ ಈ ಕೀಟನಾಶಕವನ್ನು ಮುಕ್ತವಾಗಿ ಬರಮಾಡಿಕೊಳ್ಳಲಾಯಿತು. ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಸಂಸ್ಥೆಯು ದೇಶೀಯವಾಗಿಯೇ ಇದನ್ನು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ನಂತರ ಭಾರತದ ಕಂಪನಿಗಳು ಇದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಆರಂಭಿಸಿದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...
image 47 1

ಆದರೆ, ಈ ಕೀಟನಾಶಕದ ತೀವ್ರತೆ ಕೃಷಿಯ ಗಡಿಯನ್ನಷ್ಟೇ ಅಲ್ಲದೆ ಮಾನವನ ಜೀವದ ಗಡಿಯನ್ನೂ ಮೀರಿ ಬೆಳೆಯಿತು. ವಿಶ್ವ ಆರೋಗ್ಯ ಸಂಸ್ಥೆಯು ಮೊನೊಕ್ರೊಟೊಫಾಸ್ ಅನ್ನು ‘ಅತ್ಯಂತ ಅಪಾಯಕಾರಿ’ ಎಂದು ವರ್ಗೀಕರಿಸಿರುವುದು ಇದಕ್ಕೆ ಸಾಕ್ಷಿ. ಇದು ಒರ್ಗಾನೊಫಾಸ್ಫೇಟ್ ಗುಂಪಿಗೆ ಸೇರಿದ ರಾಸಾಯನಿಕ. ಮನುಷ್ಯನ ನರಮಂಡಲದ ಮೇಲೆಯೇ ನೇರ ದಾಳಿ ಮಾಡುತ್ತದೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ, ಈ ವಿಷದ ತೀವ್ರತೆಗೆ ಒಳಗಾದ ಶೇಕಡಾ 87 ರಷ್ಟು ರೋಗಿಗಳಿಗೆ ವೆಂಟಿಲೇಟರ್ ಬೆಂಬಲ ಅತ್ಯಗತ್ಯವಾಗುತ್ತದೆ ಮತ್ತು ಇವರಲ್ಲಿ ಸಾವಿನ ಪ್ರಮಾಣ ಶೇಕಡಾ 23 ಕ್ಕಿಂತಲೂ ಹೆಚ್ಚಿರುತ್ತದೆ. ಇದನ್ನು ಆಹಾರದ ಮೂಲಕ ಸೇವಿಸುವುದಷ್ಟೇ ಅಲ್ಲ, ಬೇಸಿಗೆಯ ಬಿಸಿ ವಾತಾವರಣದಲ್ಲಿ ಹೊಲಗಳಿಗೆ ಸಿಂಪಡಿಸುವಾಗ ಇದು ಗಾಳಿಯ ಮೂಲಕ ಶ್ವಾಸಕೋಶವನ್ನು ಸೇರಬಹುದು ಅಥವಾ ಚರ್ಮದ ಮೂಲಕ ದೇಹದೊಳಗೆ ಇಳಿದು ಪ್ರಾಣವನ್ನೇ ಕಸಿಯಬಹುದು. ಮನುಷ್ಯರಷ್ಟೇ ಅಲ್ಲದೆ ಪರಿಸರದ ಜೀವವೈವಿಧ್ಯದ ಮೇಲೂ ಇದು ಘೋರ ಪರಿಣಾಮ ಬೀರುತ್ತದೆ. ಹಕ್ಕಿಗಳು, ಜೇನುನೊಣಗಳು ಮತ್ತು ಕೃಷಿಗೆ ನೆರವಾಗುವ ಮಿತ್ರ ಕೀಟಗಳಿಗೆ ಇದು ಯಮನಂತಿದೆ. ಅರ್ಜೆಂಟೀನಾದಲ್ಲಿ 1995ರ ಅವಧಿಯಲ್ಲಿ ಮಿಡತೆಗಳ ನಿಯಂತ್ರಣಕ್ಕೆ ಈ ವಿಷವನ್ನು ಬಳಸಿದಾಗ, ಅಲ್ಲಿಗೆ ವಲಸೆ ಬಂದಿದ್ದ 20,000ಕ್ಕೂ ಹೆಚ್ಚು ಅಪರೂಪದ ಬೇಟೆ ಹಕ್ಕಿಗಳು ಕೆಲವೇ ವಾರಗಳಲ್ಲಿ ಸಾಮೂಹಿಕವಾಗಿ ಸತ್ತು ಬಿದ್ದ ಇತಿಹಾಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿತ್ತು.

2013 ರ ಜುಲೈ ತಿಂಗಳಿನಲ್ಲಿ ಬಿಹಾರದ ಸರನ್ ಜಿಲ್ಲೆಯ ಗಂಡಮನ್ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 23 ಅಮಾಯಕ ಮಕ್ಕಳು ಕೆಲವೇ ಗಂಟೆಗಳಲ್ಲಿ ಪ್ರಾಣ ಕಳೆದುಕೊಂಡರು. ನಂತರ ನಡೆದ ವಿಧಿವಿಜ್ಞಾನ ತನಿಖೆಯಲ್ಲಿ ಹೊರಬಂದ ಸತ್ಯ ಇಡೀ ದೇಶವನ್ನು ಬೆಚ್ಚಿಬೀಳಿಸಿತು. ಅಡುಗೆ ಮಾಡಲು ಬಳಸಿದ ಎಣ್ಣೆಯನ್ನು ಈ ಹಿಂದೆ ಮೊನೊಕ್ರೊಟೊಫಾಸ್ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ಡಬ್ಬದಲ್ಲಿ ಇಡಲಾಗಿತ್ತು. ಆ ವಿಷದ ತೀವ್ರತೆ ಎಷ್ಟಿತ್ತೆಂದರೆ, ಮಕ್ಕಳ ಜೀವವನ್ನು ಕೆಲ ಗಂಟೆಗಳಲ್ಲೇ ಸದ್ದಿಲ್ಲದೆ ನಿಲ್ಲಿಸಿತ್ತು. ಇದೇ ರೀತಿಯ ಮತ್ತೊಂದು ದುರಂತ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಮರುಕಳಿಸಿತು. ಹತ್ತಿ ಬೆಳೆಗೆ ಬಂದ ಕೀಟಗಳನ್ನು ನಾಶಮಾಡಲು ರೈತರು ಯಾವುದೇ ಮಾಸ್ಕ್, ಗ್ಲೌಸ್ ಅಥವಾ ಕಣ್ಣಿನ ರಕ್ಷಣೆ ಇಲ್ಲದೆ ಬಿಸಿಲಿನಲ್ಲಿ ದಿನವಿಡೀ ಮೊನೊಕ್ರೊಟೊಫಾಸ್ ಸಿಂಪಡಿಸಿದರು. ಗಾಳಿಯಲ್ಲಿ ಹರಡಿದ ವಿಷ ಶ್ವಾಸಕೋಶದ ಮೂಲಕ ದೇಹ ಸೇರಿ 20 ಕ್ಕೂ ಹೆಚ್ಚು ರೈತರು ಮತ್ತು ಕೃಷಿ ಕಾರ್ಮಿಕರು ಸಾಮೂಹಿಕವಾಗಿ ಸಾವನ್ನಪ್ಪಿದರು, ನೂರಾರು ಜನ ಆಸ್ಪತ್ರೆ ಸೇರಿದರು ಮತ್ತು ಹಲವರು ಶಾಶ್ವತವಾಗಿ ಕಣ್ಣಿನ ದೃಷ್ಟಿ ಕಳೆದುಕೊಂಡರು.

ಇಷ್ಟೆಲ್ಲಾ ದುರಂತಗಳು ಸಂಭವಿಸಿದರೂ ಭಾರತೀಯ ಮಾರುಕಟ್ಟೆಯಲ್ಲಿ ಇದು ಇಂದಿಗೂ ಲಭ್ಯವಿರುವುದಕ್ಕೆ ನಮ್ಮ ದೇಶದಲ್ಲಿರುವ ಕಾರ್ಪೊರೇಟ್ ಲಾಬಿಯೇ ಪ್ರಮುಖ ಕಾರಣ. ಭಾರತದಲ್ಲಿ ಕೀಟನಾಶಕಗಳನ್ನು ನಿಯಂತ್ರಿಸುವ ಇಂದಿನ ಕಾಯ್ದೆ ಜಾರಿಗೆ ಬಂದಿದ್ದು 1968 ರಲ್ಲಿ. ಐದು ದಶಕಗಳಿಗಿಂತಲೂ ಹಳೆಯದಾದ ಈ ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಕೀಟನಾಶಕ ಕಂಪನಿಗಳು ಕೋಟ್ಯಂತರ ರೂಪಾಯಿ ಲಾಭ ಮಾಡುತ್ತಿವೆ. ಪ್ರತಿ ಬಾರಿ ಈ ವಿಷವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬಂದಾಗಲೆಲ್ಲಾ, ಹೊಸದೊಂದು ತಜ್ಞರ ಸಮಿತಿಯನ್ನು ರಚಿಸಿ, ವಿಷಯವನ್ನು ತಣ್ಣಗಾಗಿಸುವ ಒಂದು ವ್ಯವಸ್ಥಿತ ಆಡಳಿತಾತ್ಮಕ ತಂತ್ರ ದೇಶದಲ್ಲಿ ನಡೆಯುತ್ತಲೇ ಬಂದಿದೆ. 2020ರಲ್ಲಿ ಕೃಷಿ ಸಚಿವಾಲಯವು ಮೊನೊಕ್ರೊಟೊಫಾಸ್ ಸೇರಿದಂತೆ ಅಪಾಯಕಾರಿ ಕೀಟನಾಶಕಗಳನ್ನು ನಿಷೇಧಿಸಲು ಕರಡು ಆದೇಶ ಹೊರಡಿಸಿದಾಗ, ಕೀಟನಾಶಕ ಉದ್ಯಮದ ಬೃಹತ್ ಕಂಪನಿಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದವು. ಇದರ ಪರಿಣಾಮವಾಗಿ ರಚನೆಯಾದ ಡಾ. ಟಿ. ಪಿ. ರಾಜೇಂದ್ರನ್ ನೇತೃತ್ವದ ತಾಂತ್ರಿಕ ಸಮಿತಿಯು ಕಂಪನಿಗಳ ವಾದವನ್ನು ಆಲಿಸಿ, 2023 ರಲ್ಲಿ ತನ್ನ ನಿರ್ಧಾರವನ್ನು ಬದಲಾಯಿಸಿತು ಮತ್ತು ಮೊನೊಕ್ರೊಟೊಫಾಸ್ ಅನ್ನು ನಿಷೇಧದ ಪಟ್ಟಿಯಿಂದಲೇ ಹೊರಗಿಟ್ಟಿತು. ಬಡ ರೈತರಿಗೆ ಅಗ್ಗದ ಪರ್ಯಾಯಗಳಿಲ್ಲ ಎಂಬ ನೆಪವೊಡ್ಡಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆಯಾದರೂ, ಮನುಷ್ಯನ ಜೀವಕ್ಕಿಂತ ಆರ್ಥಿಕ ಲಾಭ ದೊಡ್ಡದೇ ಎಂಬ ಪ್ರಶ್ನೆಗೆ ಉತ್ತರವಿಲ್ಲ.

image 48 8

ಸರ್ಕಾರ ರೂಪಿಸುವ ನಿಯಮಗಳಿಗೂ, ಭಾರತದ ಹೊಲಗದ್ದೆಗಳಿಗೂ ಸಂಬಂಧವೇ ಇಲ್ಲ. ಇಲ್ಲಿನ ನಿಯಮಗಳ ಪ್ರಕಾರ ಮೊನೊಕ್ರೊಟೊಫಾಸ್ ಅನ್ನು ತರಕಾರಿಗಳಿಗೆ ಬಳಸುವಂತಿಲ್ಲ, ಏಕೆಂದರೆ ತರಕಾರಿಗಳ ಮೇಲೆ ಇದರ ವಿಷದ ಅಂಶ ದೀರ್ಘಕಾಲ ಉಳಿದು ಜನರ ಹೊಟ್ಟೆ ಸೇರುತ್ತದೆ. ಇದನ್ನು ಕೇವಲ ಹತ್ತಿ, ಭತ್ತ, ಸಾಸಿವೆ ಮತ್ತು ಕಬ್ಬಿನಂತಹ ಬೆಳೆಗಳಿಗೆ ಮಾತ್ರ ಬಳಸಲು ಅನುಮತಿ ಇದೆ. ಆದರೆ ಗ್ರಾಮೀಣ ಭಾರತದ ಮಾರುಕಟ್ಟೆಯಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಬಂದು ರೈತರಿಗೆ ಮಾರ್ಗದರ್ಶನ ನೀಡುವುದನ್ನೇ ಮರೆತಿರುವಾಗ, ರೈತರು ಕೀಟನಾಶಕ ಅಂಗಡಿಯ ವ್ಯಾಪಾರಿಯನ್ನೇ ನಂಬುತ್ತಾರೆ. ಈ ವಿಷವು ಹೊಸ ಕೀಟನಾಶಕಗಳಿಗಿಂತ ಅತ್ಯಂತ ಅಗ್ಗವಾಗಿರುವುದರಿಂದ ಮತ್ತು ಕೀಟಗಳನ್ನು ತಕ್ಷಣವೇ ಕೊಲ್ಲುವುದರಿಂದ, ವ್ಯಾಪಾರಿಗಳು ಇದನ್ನು ಬದನೆಕಾಯಿ, ಟೊಮೆಟೊ, ಎಲೆಕೋಸು ಮತ್ತು ದಪ್ಪ ಮೆಣಸಿನಕಾಯಿಯಂತಹ ನಿತ್ಯ ತಿನ್ನುವ ತರಕಾರಿಗಳಿಗೂ ಸಿಂಪಡಿಸಲು ರೈತರಿಗೆ ಶಿಫಾರಸು ಮಾಡುತ್ತಾರೆ. ಪರಿಣಾಮವಾಗಿ, ನಾವು ನಿತ್ಯ ಮಾರುಕಟ್ಟೆಯಿಂದ ತಂದು ತಿನ್ನುವ ತರಕಾರಿಗಳ ಮೂಲಕ ಈ ವಿಷ ನೇರವಾಗಿ ನಮ್ಮಹೊಟ್ಟೆ ಸೇರುತ್ತದೆ.

ಇದನ್ನೂ ಓದಿ: ಮುಪ್ಪಿಲ್ಲದ ಯೌವನ, ಕಸ್ಟಮೈಸ್ಡ್ ಮಕ್ಕಳು! ಎತ್ತ ಸಾಗುತ್ತಿದೆ ವೈದ್ಯಕೀಯ ಕ್ರಾಂತಿ?

ಪರಿಸರ ಸಂಸ್ಥೆಗಳು ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ನಂತರ, 2024 ರ ಅಕ್ಟೋಬರ್ ತಿಂಗಳಿನಲ್ಲಿ ಇದರ ಮೇಲೆ ಕೆಲವು ಕಠಿಣ ನಿರ್ಬಂಧಗಳನ್ನು ಹೇರಲಾಯಿತು. ತೀರಾ ಇತ್ತೀಚೆಗೆ 2026 ರ ಮಾರ್ಚ್ ತಿಂಗಳಿನಲ್ಲಿ ಸಂಸತ್ತಿನಲ್ಲಿಯೂ (ರಾಜ್ಯಸಭೆ) ಈ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಸರ್ಕಾರವು ದೇಶಾದ್ಯಂತ ಕೀಟನಾಶಕ ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದಾಗಿ ಭರವಸೆ ನೀಡಿದೆ. ಆದರೆ ಕಾನೂನಿನ ಅತಿ ದೊಡ್ಡ ಲೋಪವೆಂದರೆ, ಸರ್ಕಾರ ಕೇವಲ ‘ಮೊನೊಕ್ರೊಟೊಫಾಸ್ 36% SL’ ಎಂಬ ನಿರ್ದಿಷ್ಟ ಸೂತ್ರೀಕರಣವನ್ನು ಮಾತ್ರ ನಿಷೇಧಿಸಿದೆ. ಆದರೆ ಇದರ ತಾಂತ್ರಿಕ ದರ್ಜೆಯ ರಾಸಾಯನಿಕವನ್ನು ತಯಾರಿಸಲು ಮತ್ತು ವಿದೇಶಗಳಿಗೆ ರಫ್ತು ಮಾಡಲು ಇಂದಿಗೂ ಮುಕ್ತ ಅವಕಾಶ ನೀಡಲಾಗಿದೆ. ಈ ರಫ್ತು ಪರವಾನಗಿಯ ಮರೆಯಲ್ಲಿ ಕಂಪನಿಗಳು ಇಂದಿಗೂ ದೇಶದೊಳಗೆ ಈ ವಿಷವನ್ನು ಉತ್ಪಾದಿಸುತ್ತಿದ್ದು, ಅದು ಬೇರೆ ಬೇರೆ ಹೆಸರುಗಳಲ್ಲಿ ಮತ್ತು ಬೇರೆ ಸಾಂದ್ರತೆಗಳಲ್ಲಿ ಮಾರುಕಟ್ಟೆಗಳಲ್ಲಿ ಇಂದಿಗೂ ಗುಪ್ತವಾಗಿ ಮಾರಾಟವಾಗುತ್ತಿದೆ.

ಅನ್ನ ಬೆಳೆಯುವ ಮಣ್ಣನ್ನು ಮಸಣವಾಗಿಸುತ್ತಿರುವ ಈ ವಿಷದ ಸರಪಳಿಯನ್ನು ತಕ್ಷಣವೇ ಕಡಿತಗೊಳಿಸಬೇಕಾಗಿದೆ. ಮುಂದುವರಿದ ದೇಶಗಳು ಪರಿಸರಸ್ನೇಹಿ ಜೈವಿಕ ಕೀಟನಾಶಕಗಳತ್ತ ಮುಖ ಮಾಡುತ್ತಿದ್ದರೆ, ನಾವು ಇನ್ನೂ ಯುದ್ಧಕಾಲದ ರಾಸಾಯನಿಕಗಳನ್ನೇ ನಂಬಿ ಕುಳಿತಿರುವುದು ಯುದ್ಧದಷ್ಟೇ ದುರಂತ. ಕೃಷಿ ಭೂಮಿಗೆ ನಿರಂತರವಾಗಿ ಈ ವಿಷವನ್ನು ಸುರಿಯುವುದರಿಂದ ಮಣ್ಣು ತನ್ನ ನೈಸರ್ಗಿಕ ಪುನರುತ್ಪಾದನಾ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಲಕ್ಷಾಂತರ ಹೆಕ್ಟೇರ್ ಭೂಮಿ ಬಂಜರಾಗುತ್ತಿದೆ. ಸರ್ಕಾರಗಳು ಕೀಟನಾಶಕ ಕಂಪನಿಗಳ ಲಾಬಿಗೆ ಮಣಿಯದೆ, ಜಾಗತಿಕವಾಗಿ ನಿಷೇಧಿತವಾಗಿರುವ ಎಲ್ಲಾ ಘೋರ ವಿಷಗಳನ್ನು ಭಾರತದಲ್ಲೂ ಸಂಪೂರ್ಣವಾಗಿ ಮತ್ತು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಅದರೊಂದಿಗೆ ರೈತರಿಗೆ ಕಡಿಮೆ ವೆಚ್ಚದ, ಸುರಕ್ಷಿತವಾದ ಜೈವಿಕ ಪರ್ಯಾಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ, ನಾವು ಬೆಳೆಯುವ ಅನ್ನವೇ ನಂಜಾಗಿ, ನಮ್ಮ ದೇಶದ ಭವಿಷ್ಯದ ಪೀಳಿಗೆಯನ್ನು ರೋಗಗ್ರಸ್ತವನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಮೈಸೂರು ವಿವಿ ಸಂಜೆ ಕಾಲೇಜು: ಸಾಂಸ್ಕೃತಿಕ ಹಾಗೂ NSS ಚಟುವಟಿಕೆಗಳಿಗೆ ಚಾಲನೆ

ಮೈಸೂರು ವಿವಿ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ 2026-27ನೇ ಶೈಕ್ಷಣಿಕ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10 ದಿನಗಳಲ್ಲಿ ಘೋಷಣೆ – ಶಾಸಕ ಅಶೋಕ ಪಟ್ಟಣ

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ,...

ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆ ನಿರ್ಮಾಣಕ್ಕೆ ಸರ್ಕಾರ ಅಸ್ತು

"ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ...