ಕರ್ನಾಟಕ ರಾಜ್ಯ ಖಾಸಗಿ ಮಜಲು ಬಸ್ ಮಾಲಕರ ಒಕ್ಕೂಟವು ಜೂನ್ 9ರಿಂದ ಶೇ.3ರಿಂದ 8ರ ವರೆಗೆ ದರ ಪರಿಷ್ಕರಣೆ ಜಾರಿಗೆ ತರುವುದಾಗಿ ಘೋಷಿಸಿದ್ದು, ಇದರ ಪರ-ವಿರೋಧದ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ.
ಒಂದೆಡೆ ಬಸ್ ಮಾಲೀಕರು ತಮ್ಮ ಆರ್ಥಿಕ ಸಂಕಷ್ಟಗಳನ್ನು ಮುಂದಿಟ್ಟು ದರ ಏರಿಕೆ ಅನಿವಾರ್ಯ ಎಂದು ವಾದಿಸುತ್ತಿದ್ದರೆ, ಮತ್ತೊಂದೆಡೆ ಜನಸಾಮಾನ್ಯರು ಮತ್ತು ಹೋರಾಟಗಾರರು ಈ ಹೆಚ್ಚುವರಿ ಭಾರವನ್ನು ಜನರ ಮೇಲೆ ಹೇರಬಾರದು ಎಂದು ಆಗ್ರಹಿಸುತ್ತಿದ್ದಾರೆ.
ಖಾಸಗಿ ಬಸ್ ಮಾಲೀಕರ ಪ್ರಕಾರ ಕಳೆದ ಕೆಲವು ವರ್ಷಗಳಲ್ಲಿ ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ನಿರಂತರ ದರ ಪರಿಷ್ಕರಣೆಯಿಂದ ಒಟ್ಟಾರೆ ಲೀಟರ್‌ಗೆ ಸುಮಾರು 11 ರೂಪಾಯಿಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗಿದೆ ಎಂದು ಹೇಳುತ್ತಾರೆ.
“ಡೀಸೆಲ್ ಮಾತ್ರವಲ್ಲದೆ ವಾಹನಗಳ ಬಿಡಿಭಾಗಗಳು, ಟೈರ್ ಹಾಗೂ ರಿಸೋಲಿಂಗ್ ವೆಚ್ಚ, ವಿಮೆ, ಟೋಲ್ ಶುಲ್ಕ, ನೌಕರರ ವೇತನ ಹಾಗೂ ವಿವಿಧ ತೆರಿಗೆಗಳ ದರಗಳೂ ಹೆಚ್ಚಾಗಿವೆ. ಪ್ರತಿಯೊಂದು ಬಸ್‌ಗೆ ದಿನಕ್ಕೆ ಹೆಚ್ಚುವರಿಯಾಗಿ 700ರಿಂದ 1000 ರೂಪಾಯಿವರೆಗೆ ಡೀಸೆಲ್ ವೆಚ್ಚ ಬರುತ್ತಿದ್ದು, ಹಾಲಿ ದರದಲ್ಲಿ ಸೇವೆ ಮುಂದುವರಿಸುವುದು ಕಷ್ಟಕರವಾಗಿದೆ” ಎಂಬುದು ಅವರ ವಾದ.
“ಕೊರೊನಾ ಬಳಿಕ ಖಾಸಗಿ ಸಾರಿಗೆ ಕ್ಷೇತ್ರ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ, ಎಂಬುದು ಬಸ್ ಮಾಲೀಕರ ಮತ್ತೊಂದು ಪ್ರಮುಖ ವಾದ. ರಾಜ್ಯದಲ್ಲಿ ಸುಮಾರು 6000 ಖಾಸಗಿ ಮಜಲು ಬಸ್‌ಗಳಿದ್ದರೂ, ಪ್ರಸ್ತುತ ಕೇವಲ 5300ರಷ್ಟು ಬಸ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ, ಹೊಸ ಬಸ್‌ಗಳನ್ನು ಖರೀದಿಸುವ ಪರಿಸ್ಥಿತಿ ಇಲ್ಲದ ಕಾರಣ ಹಳೆಯ ಬಸ್‌ಗಳನ್ನೇ ದುರಸ್ತಿ ಮಾಡಿ ಓಡಿಸಲಾಗುತ್ತಿದೆ. ಆದಾಯ ಮತ್ತು ವೆಚ್ಚದ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗದ ಕಾರಣ ದರ ಏರಿಕೆ ಅನಿವಾರ್ಯವಾಗಿದೆ” ಎಂದು ಬಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಖಾಸಗಿ ಮಜಲು ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ಕುಯಿಲ್ಲಾಡಿ ಸುರೇಶ್ ನಾಯಕ್, “ಕಳೆದ ಒಂದು ವರ್ಷದಲ್ಲಿ ಡೀಸೆಲ್ ದರದಲ್ಲಿ ಗಣನೀಯ ಏರಿಕೆಯಾಗಿದ್ದು, ರಾಜ್ಯ ಸರ್ಕಾರವೂ ಹಿಂದೆ ಪ್ರತಿ ಲೀಟರ್‌ಗೆ ₹3 ಹೆಚ್ಚಳ ಮಾಡಿತ್ತು. ಇದರೊಂದಿಗೆ ವಾಹನಗಳ ಬಿಡಿಭಾಗಗಳು, ಟೈರ್ ಹಾಗೂ ಟೈರ್ ರಿಸೋಲಿಂಗ್ ವೆಚ್ಚ, ಟೋಲ್ ಶುಲ್ಕ, ನೌಕರರ ವೇತನ, ವಿಮೆ ಹಾಗೂ ವಿವಿಧ ತೆರಿಗೆಗಳ ದರಗಳಲ್ಲೂ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಟಿಕೆಟ್ ದರ ಪರಿಷ್ಕರಿಸುವ ಅನಿವಾರ್ಯತೆ ಎದುರಾಗಿದೆ” ಎಂದು ಹೇಳಿದರು.

“ರಾಜ್ಯದ ಖಾಸಗಿ ಸಾರಿಗೆ ವ್ಯವಸ್ಥೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ದಿನನಿತ್ಯದ ನಿರ್ವಹಣಾ ವೆಚ್ಚಗಳನ್ನು ಭರಿಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಅಧಿಸೂಚನೆಯ ಪ್ರಕಾರ ವಿಧಿಸಲು ಅವಕಾಶವಿರುವ ಸೆಸ್ ಅನ್ನು ಜಾರಿಗೆ ತಂದು, ಹಾಲಿ ದರಗಳಿಗೆ ಶೇ. 3ರಿಂದ 8ರ ವರೆಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯಾದ್ಯಂತ ಸುಮಾರು 6,000 ಖಾಸಗಿ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದರೆ, ಕೋವಿಡ್ ಬಳಿಕ ಸುಮಾರು 5,300 ಹಗಲು ವೇಳೆಯ ಖಾಸಗಿ ಮಜಲು ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ರಾತ್ರಿ ಸಂಚರಿಸುವ ಬಸ್‌ಗಳಿಗೆ ಈ ದರ ಪರಿಷ್ಕರಣೆ ಅನ್ವಯಿಸುವುದಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಈಗಾಗಲೇ ದೊರೆಯುತ್ತಿರುವ ರಿಯಾಯಿತಿಗಳು ಮುಂದುವರಿಯಲಿವೆ” ಎಂದರು.
“ಡೀಸೆಲ್ ದರದಲ್ಲಿ ₹2 ಅಥವಾ ₹3 ಏರಿಕೆಯಾದಾಗ ಬಸ್ ದರ ಹೆಚ್ಚಿಸಿರಲಿಲ್ಲ. ಆದರೆ ಈಗ ಒಟ್ಟಾರೆ ಸುಮಾರು ₹11ರಷ್ಟು ಏರಿಕೆಯಾಗಿದ್ದು, ಒಂದು ಬಸ್‌ಗೆ ಪ್ರತಿದಿನ ₹700ರಿಂದ ₹1,000ರವರೆಗೆ ಹೆಚ್ಚುವರಿ ಡೀಸೆಲ್ ವೆಚ್ಚವಾಗುತ್ತಿದೆ. ಪ್ರಸ್ತುತ ವಿಧಿಸಿರುವ ಸೆಸ್‌ನಲ್ಲಿ ಕೇವಲ ಡೀಸೆಲ್ ವೆಚ್ಚವನ್ನಷ್ಟೇ ಪರಿಗಣಿಸಲಾಗಿದ್ದು, ಟೈರ್, ಆಯಿಲ್ ಸೇರಿದಂತೆ ಇತರೆ ವೆಚ್ಚಗಳನ್ನು ಸೇರಿಸಿಲ್ಲ” ಎಂದು ಸುರೇಶ್ ನಾಯಕ್ ಸ್ಪಷ್ಟಪಡಿಸಿದರು.
“ಹೊಸ ದರದ ಪ್ರಕಾರ ಉಡುಪಿ–ಮಂಗಳೂರು ಮಾರ್ಗದ ಟಿಕೆಟ್ ದರ ₹95ರಿಂದ ₹100ಕ್ಕೆ, ಉಡುಪಿ–ಕುಂದಾಪುರ ದರ ₹60ರಿಂದ ₹63ಕ್ಕೆ, ಉಡುಪಿ–ಮಣಿಪಾಲ ದರ ₹12ರಿಂದ ₹13ಕ್ಕೆ, ಉಡುಪಿ–ಕಾರ್ಕಳ ದರ ₹58ರಿಂದ ₹60ಕ್ಕೆ ಹಾಗೂ ಕುಂದಾಪುರ–ಮಂಗಳೂರು ದರ ₹145ರಿಂದ ₹153ಕ್ಕೆ ಏರಿಕೆಯಾಗಲಿದೆ” ಎಂದು ಅವರು ಮಾಹಿತಿ ನೀಡಿದರು.
ಇನ್ನೊಂದೆಡೆ ಈ ನಿರ್ಧಾರವನ್ನು ವಿರೋಧಿಸುವವರು, ಈಗಾಗಲೇ ಖಾಸಗಿ ಬಸ್‌ಗಳು ಅನೇಕ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂದು ಆರೋಪಿಸುತ್ತಿದ್ದಾರೆ. ಕೊರೊನಾ ಅವಧಿಯಲ್ಲಿ ಜಾರಿಗೊಂಡಿದ್ದ ಹೆಚ್ಚುವರಿ ದರವನ್ನು ಸಂಪೂರ್ಣವಾಗಿ ಹಿಂಪಡೆಯದೇ ಇರುವಾಗ ಮತ್ತೊಮ್ಮೆ ದರ ಏರಿಕೆ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಸಾಮಾಜಿಕ ಹೋರಾಟಗಾರರು ವಾದಿಸುತ್ತಿದ್ದಾರೆ. ಡೀಸೆಲ್ ಬೆಲೆ ಏರಿಕೆಯ ಸಂಪೂರ್ಣ ಹೊರೆ ಪ್ರಯಾಣಿಕರ ಮೇಲೆ ವರ್ಗಾಯಿಸುವ ಬದಲು ಸರ್ಕಾರದ ಮೇಲೆ ಒತ್ತಡ ಹೇರಿ ತೆರಿಗೆ ಕಡಿತಕ್ಕೆ ಒತ್ತಾಯಿಸಬೇಕೆಂಬುದು ಅವರ ವಾದ.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಸಿಪಿಐಎಂ ಮುಖಂಡ ಚಂದ್ರಶೇಖರ್, “ಖಾಸಗಿ ಬಸ್ ದರ ಏರಿಕೆ ನಿರ್ಧಾರವು ಸಾಮಾನ್ಯ ಜನರ ಮೇಲೆ ಮತ್ತೊಂದು ಆರ್ಥಿಕ ಹೊರೆ ಹೊರಿಸುವಂತಾಗಿದೆ. ಈಗಾಗಲೇ ಅನೇಕ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳು ಕೆಎಸ್‌ಆರ್‌ಟಿಸಿ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದು, ಕೋವಿಡ್ ಅವಧಿಯಲ್ಲಿ ಹೆಚ್ಚಿಸಲಾದ ದರಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡದಿರುವುದು ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ” ಎಂದು ಅವರು ತಿಳಿಸಿದ್ದಾರೆ.
“ಡೀಸೆಲ್ ಬೆಲೆ ಏರಿಕೆಯನ್ನು ಕಾರಣವನ್ನಾಗಿ ಮಾಡಿ ಸಾರಿಗೆ ವೆಚ್ಚದ ಭಾರವನ್ನು ನೇರವಾಗಿ ಪ್ರಯಾಣಿಕರ ಮೇಲೆ ವರ್ಗಾಯಿಸುವುದು ಸರಿಯಲ್ಲ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಂಕಷ್ಟಗಳಿಂದ ಜನರು ನರಳುತ್ತಿರುವ ಸಂದರ್ಭದಲ್ಲಿ ದರ ಹೆಚ್ಚಳವು ಮತ್ತಷ್ಟು ತೊಂದರೆ ಉಂಟುಮಾಡಲಿದೆ. ಖಾಸಗಿ ಬಸ್ ಮಾಲಕರು ಕೂಡ ದರ ಏರಿಕೆ ಮಾಡುವ ಬದಲು ಸರ್ಕಾರಗಳ ಮೇಲೆ ಒತ್ತಡ ಹೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ಉಡುಪಿ ಜಿಲ್ಲೆಯಲ್ಲಿ ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳೇ ಸಂಚಾರ ನಡೆಸುತ್ತಿರುವ ಕಾರಣ, ಕೆಎಸ್‌ಆರ್‌ಟಿಸಿಯ ಉಚಿತ ಪ್ರಯಾಣ ಯೋಜನೆಗಳ ಲಾಭ ಎಲ್ಲರಿಗೂ ತಲುಪುತ್ತಿಲ್ಲ. ಆದ್ದರಿಂದ ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸುವ ಮೂಲಕ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ವಿಸ್ತರಣೆಗಾಗಿ ಸಿಪಿಐಎಂ ಹೋರಾಟ ನಡೆಸಲಿದೆ” ಎಂದು ತಿಳಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಪ್ರಯಾಣಿಕ ಸಂದೀಪ್, “ಈಗಾಗಲೇ ದಿನನಿತ್ಯದ ಜೀವನ ವೆಚ್ಚಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಖಾಸಗಿ ಬಸ್ ದರವನ್ನು ಮತ್ತೆ ಏರಿಕೆ ಮಾಡಿರುವುದು ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಪ್ರತಿದಿನ ಬಸ್ ಅವಲಂಬಿಸಿರುವ ಜನರು ಇದರಿಂದ ಸಂಕಷ್ಟ ಅನುಭವಿಸಬೇಕಾಗುತ್ತದೆ. ದರ ಏರಿಕೆ ಮಾಡುವ ಮೊದಲು ಪ್ರಯಾಣಿಕರ ಹಿತಾಸಕ್ತಿಯನ್ನು ಪರಿಗಣಿಸಿ, ಸರ್ಕಾರ ಮತ್ತು ಬಸ್ ಮಾಲಕರು ಸಮತೋಲನದ ನಿರ್ಧಾರ ಕೈಗೊಳ್ಳಬೇಕಿತ್ತು” ಎಂದು ಅಭಿಪ್ರಾಯ ಪಟ್ಟರು.
“ಕರೋನಾ ಅವಧಿಯಲ್ಲಿ ಹೆಚ್ಚಿಸಲಾಗಿದ್ದ ಬಸ್ ಪ್ರಯಾಣ ದರವನ್ನು ಪರಿಸ್ಥಿತಿ ಸಹಜಗೊಂಡ ಬಳಿಕವೂ ಕಡಿಮೆ ಮಾಡಲಾಗಿರಲಿಲ್ಲ. ಇದೀಗ ಮತ್ತೊಮ್ಮೆ ದರ ಏರಿಕೆ ಮಾಡಿರುವುದು ಮತ್ತು ಅದಕ್ಕೆ ಜಿಲ್ಲಾಡಳಿತ ಮೌನ ಬೆಂಬಲ ನೀಡುತ್ತಿರುವುದು ಸಾರ್ವಜನಿಕರ ಹಿತಕ್ಕೆ ವಿರುದ್ಧವಾದ ಕ್ರಮವಾಗಿದ್ದು, ಇದು ಜನರಿಗೆ ಮಾಡುವ ದ್ರೋಹವಾಗಿದೆ” ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
“ಜಿಲ್ಲಾ ಸಮಿತಿಯು ಬೆಲೆ ಏರಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 11 ಗಂಟೆಗೆ ಸಿಪಿಐ(ಎಂ) ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದು, ಸಾರ್ವಜನಿಕರು ಭಾಗವಹಿಸಬೇಕು” ಎಂದು ಕರೆ ನೀಡಿದೆ.
ಸಿಐಟಿಯು ಉಡುಪಿ ವಲಯ ಸಮಿತಿ ಸಂಚಾಲಕ ಕವಿರಾಜ್. ಎಸ್.ಕಾಂಚನ್ ಈ ಕುರಿತು ಮಾತನಾಡಿ, ಪೆಟ್ರೋಲ್, ಡೀಸೆಲ್ ದರ ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವುದು . ದರ ಇಳಿಕೆ ಮಾಡಲು ಬಸ್ ಮಾಲಿಕರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು.ಹೋರಾಟದಿಂದ ಟೋಲ್ ತೆಗೆದು ಹಾಕಿರುತ್ತಾರೆ ಅದರೆ ಬಸ್ ದರ ಇಳಿಕೆ ಮಾಡಿಲ್ಲ .ಈಗ ಮತ್ತೆ ದರ ಏರಿಕೆ ಮಾಡಿ ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಈಡು ಮಾಡಿದ್ದಾರೆ. ವಿದ್ಯಾರ್ಥಿಗಳ, ಕಾರ್ಮಿಕರ, ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಗ್ರಾಮಗಳಿಗೆ ಸರಕಾರಿ ಬಸ್ ಹಾಕಬೇಕು. ಎಂದು ಸಿಐಟಿಯು ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು ,ಸಾರ್ವಜನಿಕರು ಸೇರಿ ತೀವ್ರ ವಾದ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

“ಆದಾಗ್ಯೂ ಖಾಸಗಿ ಬಸ್ ಮಾಲೀಕರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ರಿಯಾಯಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ಸಂಬಂಧಿಸಿದ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಲು ಅವರು ಈ ಹಿಂದೆ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದರೂ ಅದು ಅಂಗೀಕಾರವಾಗಿಲ್ಲ. ಸರ್ಕಾರ ಮರುಪಾವತಿ ಮಾಡುವ ವ್ಯವಸ್ಥೆ ಇದ್ದರೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಉಚಿತ ಅಥವಾ ರಿಯಾಯಿತಿ ಪ್ರಯಾಣ ನೀಡಲು ತಾವು ಸಿದ್ಧ” ಎಂದು ಮಾಲೀಕರು ಹೇಳುತ್ತಿದ್ದಾರೆ.
ಈ ಎಲ್ಲವನ್ನು ಗಮನಿಸಿದರೆ ಸಾಮಾನ್ಯ ಜನರೇ ಹೆಚ್ಚು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ, ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ಪ್ರತಿದಿನ ಬಸ್ ಅವಲಂಬಿಸುವವರು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ. ದಿನನಿತ್ಯ ಉಡುಪಿ–ಮಂಗಳೂರು, ಉಡುಪಿ–ಕುಂದಾಪುರ, ಉಡುಪಿ–ಕಾರ್ಕಳ ಮುಂತಾದ ಮಾರ್ಗಗಳಲ್ಲಿ ಪ್ರಯಾಣಿಸುವ ನೌಕರರು, ವಿದ್ಯಾರ್ಥಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ತಿಂಗಳ ಮಟ್ಟಿಗೆ ಹೆಚ್ಚುವರಿ ವೆಚ್ಚ ಉಂಟಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರಿಗೆ ಇದು ಮತ್ತೊಂದು ಹೊರೆ ಆಗುವ ಸಾಧ್ಯತೆ ಇದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




