ಈಗ ಎರಡೇ ದಿನ ಬಾಕಿ ಇರುವುದು? ಅಷ್ಟರಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಕೂಡಲೇ ಎಸ್ಐಆರ್ ಅನ್ನು ಒಂದು ತಿಂಗಳು ಮುಂದೂಡಿ, ನೀವು ಮಾಡಿದ ತಪ್ಪುಗಳನ್ನು ಸರಿಪಡಿಸಿ. ಇಲ್ಲದಿದ್ರೆ ಜನರ ಕೋಪ ಎದುರಿಸಬೇಕಷ್ಟೇ!
ರಾಜ್ಯದ 1 ಕೋಟಿ 10 ಲಕ್ಷ ಮತದಾರರನ್ನು ಎಎಸ್‌ಡಿಡಿಓ ಪಟ್ಟಿಗೆ ಸೇರಿಸಿ ಚುನಾವಣಾ ಆಯೋಗ ಯಡವಟ್ಟು ಮಾಡಿದೆ. ಅದರ ವಿವರ ಇಲ್ಲಿದೆ ನೋಡಿ.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಪಾರ್ಟ್ ನಂಬರ್ 72ರಲ್ಲಿ ಹಿರಿಯ ದಲಿತ ಮುಖಂಡರಾದ, ಪತ್ರಕರ್ತರಾದ ಇಂದೂಧರ ಹೊನ್ನಾಪುರರವರು ನೆಲೆಸಿದ್ದಾರೆ. ಅವರು ಆಗಸ್ಟ್ 2ರಂದು ಅವರ ಮನೆಯ 5 ಜನರ ಎನ್ಯುಮರೇಷನ್ ಫಾರ್ಮ್ ತುಂಬಿಕೊಟ್ಟಿದ್ದಾರೆ. ಆರ್‌ಐಗೆ ತಡವಾಗಿ ಕೊಡುತ್ತಿದ್ದೇನೆ ಎಂದು ತಪ್ಪು ಮಾಡಬೇಡಿ, ಸರಿಯಾಗಿ ತುಂಬಿ ಎಂದು ಹೇಳಿಕೊಟ್ಟಿದ್ದಾರೆ. ಆದರೆ ಅವರನ್ನು ‘ಪರ್ಮನೆಂಟ್ಲಿ ಶಿಫ್ಟೆಡ್’ ಎಂದು ಈಗಾಗಲೇ ತುಂಬಿಬಿಟ್ಟಿದ್ದಾರೆ. ಅವರ ಮನೆಯ 4 ಮತಗಳನ್ನು ಎಎಸ್‌ಡಿಡಿಓ ಪಟ್ಟಿಗೆ ಸೇರಿಸಿಬಿಟ್ಟಿದ್ದಾರೆ.. ಏಕಿಷ್ಟು ಆತುರ? ಚುನಾವಣಾ ಆಯೋಗದ ಅಧಿಕಾರಿಗಳೇ ಏನ್ ಮಾಡ್ತಾ ಇದ್ದೀರಿ? ಮನಬಂದಂತೆ ಡಿಲೀಟ್ ಮಾಡಲು ನಿಮಗೆ ಅವಕಾಶ ಕೊಟ್ಟವರು ಯಾರು?
ಇದನ್ನೂ ಓದಿ: ಬಂಗಾಳ | TMCಯೊಳಗೆ ವಿಘಟನೆ ಸೃಷ್ಟಿಸಿದ BJP; ತಲ್ಲಣಗೊಂಡಿದೆ ದೀದಿ ಸಾಮ್ರಾಜ್ಯ!
ಇಂದೂಧರ ಸರ್ ವಿದ್ಯಾವಂತರು. ಅವರು ಚೆಕ್ ಮಾಡಿ ಏಕೆ ಹೀಗೆ ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಎಷ್ಟೊ ಜನ ಅವಿದ್ಯಾವಂತರು, ಬಡವರು ಹೇಗೆ ಚೆಕ್ ಮಾಡಲು ಸಾಧ್ಯ? ಅವರ ವೋಟು ಕಿತ್ತುಕೊಳ್ಳುವುದು ಸರಿಯೇ?
ಎರಡನೇ ಉದಾಹರಣೆ ನೋಡಿ. ಬಸವನಗುಡಿ ವಿಧಾನಸಭಾ ಕ್ಷೇತ್ರದ ಎ. ನಾರಾಯಣ. ಚಿಂತಕರು ಮತ್ತು ಪ್ರಾಧ್ಯಾಪಕರು, ಪ್ರಜಾವಾಣಿಯಲ್ಲಿ ಕಾಲಂ ಬರೆಯುತ್ತಾರೆ. ಅವರು 2002ರ ಡೇಟಾ ಹುಡುಕಿ ಹುಡುಕಿ ಸುಸ್ತಾಗಿ ಸಿಗದೇ ಮ್ಯಾಪಿಂಗ್ ಕಾಲಂ ಖಾಲಿ ಬಿಟ್ಟು, ಕೆಳಗಿನ ಕಾಲಂಗಳನ್ನು ತುಂಬಿ ಎನ್ಯುಮರೇಷನ್ ಫಾರ್ಮ್ ವಾಪಸ್ ಕೊಟ್ಟಿದ್ದಾರೆ. ಆದರೆ ಎಎಸ್‌ಡಿಡಿಓ ಲಿಸ್ಟ್‌ನಲ್ಲಿ ಅವರ ಮತ್ತು ಅವರ ಪತ್ನಿಯ ಹೆಸರು ಬಂದಿದೆ. ‘ಅನ್‌ಟ್ರೇಸಬಲ್, ಆಬ್ಸೆಂಟ್’ ಎಂದು ಬರೆದು ಅವರ ಹೆಸರು ಡಿಲೀಟ್ ಮಾಡುವ ಹುನ್ನಾರ ನಡೆದಿದೆ. ಏಕೆ? 8ನೇ ತಾರೀಖಿನವರೆಗೂ ಇನ್ನೂ ಎನ್ಯುಮರೇಷನ್ ಫಾರ್ಮ್ ಕೊಡಬಹುದು ಅಲ್ಲವೇ? ಅದಕ್ಕಿಂತ ಮುಂಚೆ ಡಿಲೀಟ್ ಮಾಡುವ ಧಾವಂತವೇಕೆ?
ಮೂರನೇಯ ಉದಾಹರಣೆ ನೋಡಿ. ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರ. ಇಲ್ಲಿ ಸುಮಾರು 3 ಲಕ್ಷ ಮತದಾರರಿದ್ದರೆ ಸುಮಾರು 2 ಲಕ್ಷ 80 ಸಾವಿರದಷ್ಟು ಜನರನ್ನು ಎಎಸ್‌ಡಿಡಿಓ ಪಟ್ಟಿಗೆ ಸೇರಿಸಲಾಗಿದೆ. ಅಂದರೆ 90% ಎಎಸ್‌ಡಿಡಿಓ ಹೇಗೆ ಸಾಧ್ಯ? ಅಲ್ಲಿ ಮ್ಯಾಪಿಂಗ್ ಆಗಿರುವವರ ಹೆಸರನ್ನು ಸಹ ಸೇರಿಸಲಾಗಿದೆ. ಈ ಬಗ್ಗೆ ಬಿಎಲ್ಒ ಕೇಳಿದರೆ ನಮಗೆ ಗೊತ್ತಿಲ್ಲ, ನಾನು ಸರಿಯಾಗಿ ತುಂಬಿದ್ದೀನಿ, ಎಆರ್‌ಒಗೆ ಕಳಿಸಿದ್ದೀನಿ. ಆದರೂ ಹೀಗೆ ಏಕೆ ಬಂದಿದೆ ಗೊತ್ತಿಲ್ಲ, ನನ್ನ ತಪ್ಪಿಲ್ಲ ಎಂದು ಅಳುತ್ತಾರೆ. ನಾನು ಎಷ್ಟು ಮಾಡಲು ಸಾಧ್ಯ ಎಂದು ಗೋಳಿಡುತ್ತಾರೆ. ಎಆರ್‌ಒಗೆ ಫೋನ್ ಮಾಡಿದರೆ ತೆಗೆದುಕೊಳ್ಳುತ್ತಿಲ್ಲ…
‘ನಾವೇ ಪ್ರಥಮ, ನಾವೇ ಫಸ್ಟ್’ ಎಂದು ತೋರಿಸಿಕೊಳ್ಳುವ ಧಾವಂತದಲ್ಲಿ ಮಿಸ್ಟರ್ ಅನ್ಬುಕುಮಾರ್ ಅವರು ಮಾಡಿದ ತಪ್ಪು ಇದು. ಪ್ರಗತಿ ತೋರಿಸದಿದ್ದರೆ ಎಫ್ಐಆರ್ ಹಾಕುತ್ತೇವೆ ಎಂದು ಹೆದರಿಸಿ ಬಿಎಲ್ಒಗಳ ಮೇಲೆ ಒತ್ತಡ ತಂದರು. ಸರಿಯಾಗಿ ತರಬೇತಿ ನೀಡಲಿಲ್ಲ. ಅವರು ಸಿಕ್ಕ ಸಿಕ್ಕವರನ್ನು ‘ಶಿಫ್ಟೆಡ್’ ಎಂದು ಸಿಗದವರನ್ನು ‘ಆಬ್ಸೆಂಟ್’ ಎಂದು ಬರೆದು ಡಿಲೀಟ್ ಮಾಡಿಸುತ್ತಿದ್ದಾರೆ. ಇದನ್ನು ಎಸ್ಐಆರ್ ಎನ್ನಲಾಗುತ್ತದೆಯೇ? ಮಾಸ್ ಡಿಲೀಟ್ ಕ್ಯಾಂಪೇನ್ ಎಂದು ಕರೆಯಬಹುದಲ್ಲವೇ?
ಈಗ ಎರಡೇ ದಿನ ಬಾಕಿ ಇರುವುದು? ಅಷ್ಟರಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಕೂಡಲೇ ಎಸ್ಐಆರ್ ಅನ್ನು ಒಂದು ತಿಂಗಳು ಮುಂದೂಡಿ, ನೀವು ಮಾಡಿದ ತಪ್ಪುಗಳನ್ನು ಸರಿಪಡಿಸಿ. ಇಲ್ಲದಿದ್ರೆ ಜನರ ಕೋಪ ಎದುರಿಸಬೇಕಷ್ಟೇ!

ಮುತ್ತುರಾಜು
ಪತ್ರಕರ್ತ, ಲೇಖಕ



