“ದಲಿತರ ಮೇಲೆ ದೌರ್ಜನ್ಯ ಎಸಗಿದರೆ ಶಿಕ್ಷೆಯಾಗುತ್ತೆ ಎಂಬ ಮೆಸೇಜ್ ರಾಜ್ಯಕ್ಕೆ ರವಾನೆಯಾಗಿದೆ” ಎಂದಿದ್ದಾರೆ ’ಅಂಗುಲಿಮಾಲ’ ಖ್ಯಾತಿಯ ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯ
2008ನೇ ಇಸವಿಯ ಆಗಸ್ಟ್ 14ರಂದು ನಡೆದ ಘಟನೆಯದು. ದಲಿತರು ಬಲಾಢ್ಯ ಜಾತಿಗಳಿಂದ ಹೇಗೆ ದಾಳಿಗೊಳಗಾಗುತ್ತಾರೆ ಎಂಬುದಕ್ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದುಂಡ ಗ್ರಾಮ ಅಂದು ಸಾಕ್ಷಿಯಾಗಿತ್ತು. ತನಿಖೆಯ ವಿಳಂಬ ನೀತಿ, ಪೊಲೀಸರ ನಿರ್ಲಕ್ಷ್ಯ ಎಲ್ಲವೂ ನಡೆದು ಪ್ರಕರಣ ಹಳಿ ತಪ್ಪಿತ್ತು. ಆದರೆ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ದಿಟ್ಟ ಹೋರಾಟ ಮಾಡಿದರೆ ನ್ಯಾಯ ದೊರಕುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿಯೂ ನಿಂತಿದೆ.
ತುಮಕೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯನವರ ಆತ್ಮಕತೆ ’ಅಂಗುಲಿಮಾಲ’ (ನಿರೂಪಣೆ: ಗುರುಪ್ರಸಾದ್ ಕಂಟಲಗೆರೆ) ಇತ್ತೀಚೆಗೆ ಬಿಡುಗಡೆಗೊಂಡು ಭಾರೀ ಚರ್ಚೆಯಾಗಿತ್ತು. ತಾವು ನಡೆಸಿದ ಹೋರಾಟಗಳ ಕುರಿತು ತಿಮ್ಮಯ್ಯ ಈ ಕೃತಿಯಲ್ಲಿ ಮೆಲುಕು ಹಾಕಿದ್ದಾರೆ. ಅದರಲ್ಲಿ ದುಂಡ ಘಟನೆಗೆ ಸಂಬಂಧಿಸಿದ ವಿವರಗಳೂ ಇವೆ.
ಈ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ’ಅಂಗುಲಿಮಾಲ’ ಕೃತಿಯಲ್ಲಿನ ಪುಟಗಳನ್ನು ನೋಡುವುದು ಸೂಕ್ತ.
ತಮ್ಮಯ್ಯ ಅವರ ಮಾತುಗಳಲ್ಲೇ ನಿರೂಪಣೆಗೊಂಡಿರುವ ವಿವರಗಳು ಹೀಗಿವೆ:
“…..ಒಂದಿನ ಬೆಳ ಬೆಳಗ್ಗೆ ಲ್ಯಾಂಡ್ ಫೋನ್‌ಗೆ ಕಾಲ್ ಬಂತು. ಒಬ್ಬ ಹುಡ್ಗ ಭಯದಿಂದ ಓಡ್ತ ಇದ್ದ. ಅದೆ ಗಾಬ್ರಿನಲ್ಲಿ ಫೋನ್ ಮಾಡಿ ಅಲ್ಲಿ ನಡಿತಾ ಇರಾದ್ದೆಲ್ಲ ಹೇಳಿ, ತಪ್ಪಿಸ್ಕೆಂಡು ಓಡ್ತಾ ಇದ್ದ. ಅಲ್ಲಿನ ಮೇಲ್ಜಾತಿರು ಅಟ್ಟಾಡಿಸಿಕೊಂಡು ನಮ್ಮರನ್ನೆಲ್ಲ ಹೊಡಿತಾ ಇದ್ರು, ಹೆಂಗಸರು ಮಕ್ಳ ಚೀರಾಟ, ಕೂಗಾಟ ನನಿಗೆ ಫೋನ್‌ನಲ್ಲಿ ಕೇಳುಸ್ತಾ ಇತ್ತು. ನನಿಗೆ ಫೋನ್ ಮಾಡಿದ್ದವನ ಹೆಸರು ಗೋವಿಂದರಾಜು ಅಂತ ಎಮ್ ಗ್ರಾಜುಯೇಟ್. ಇದು ನಡ್ಡಿದ್ದು ತುರುವೇಕೆರೆ ತಾಲ್ಲೂಕ್ ದುಂಡ ಗ್ರಾಮದಲ್ಲಿ. ಆ ಊರಿಲ್ಲಿ ಇರದು ಬಹುಸಂಖ್ಯಾತರು ಮೇಲ್ಜಾತಿರು. ನಮ್ಮ ಜಾತಿಯ ಕಾಲೋನಿಯೂ ಐತೆ. ಕುಮಾರ ಅನ್ನ ಮೇಲ್ಪಾತಿಯ ಪ್ರಭಾವಿ ಒಬ್ಬ ಆ ಗ್ರಾಮದ ಮೇಲೆ ಹಿಡಿತಾ ಸಾಧಿಸ್ಕೆಂಡು ಇದ್ದ.
ಗ್ರಾಮಪಂಚಾಯ್ತಿ ಚುನಾವಣೆನಲ್ಲು ಗೆದ್ದು ನಾನು ಹೇಳಿದ್ದೆ ನಡಿಬೇಕು ಅನ್ನ ರೀತಿನಲ್ಲಿ ಪ್ರಭುತ್ವ ಸಾಧಿಸ್ಕೆಂಡಿದ್ದ. ಅಲ್ಲಿನ ನಮ್ಮ ಕಾಲೋನಿರಿಗೂ ಮೇಲ್ಜಾತಿ ಭೂಮಿಗೆ ಸಂಬಂಧಿಸ್ದಂತೆ ಡಿಸ್ಪ್ಯೂಟ್ ನಡೆದಿತ್ತು. ಕುಮಾರ ಒಂದು ತೀರ್ಪು ಕೊಟ್ಟು ಈ ಜಾಗದಲ್ಲಿ ದಲಿತರು ಯಾರು ಓಡಾಡಂಗಿಲ್ಲ ಅಂತ ನಮ್ಮ ಕಾಲೋನಿರಿಗೆ ಹುಕುಂ ಹೊರಿಸಿದ್ದ. ಅದನ್ನ ನಮ್ಮ ಹಟ್ಟಿರು ಈ ಜಮೀನು ನಮ್ದು ನಾವು ಓಡಾಡ್ತಿವಿ ಅಂತ ಧಿಕ್ಕರಿಸಿದ್ರು. ನಾನು ಹೇಳಿರು ಇವ್ರು ಕೇಳಿಲ್ವಲ್ಲ ಅಂತ ಕುಮಾರ ತನ್ನ ಜಾತಿರ್‍ನೆಲ್ಲ ಎತ್ತಿಕಟ್ಟಿ, ರಾತ್ರೋ ರಾತ್ರಿ ಇಡೀ ಕಾಲೋನಿ ಮೇಲೆ ದಾಳಿ ಮಾಡಿದ್ದ.

ಆ ದಾಳಿ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ, ಆ ಕಾಲೋನಿಯೊಳಗೆ ಕೈಗೆ ಸಿಕ್ಕಿದರ್ನೆಲ್ಲ ಮನಸಿಗೆ ಬಂದಂಗೆ ಹೊಡೆದಿದ್ರು, ಮನೆಯೊಳಗಿದ್ದ ಸಾಮಾನು ಸರಂಜಾಮ್ನೆಲ್ಲ ಈಚಿಕೆ ಬಿಸಾಕಿದ್ರು, ರಾತ್ರಿ ಹೊಡೆದದ್ದು ಸಾಲ್ದು ಅಂತ ಬೆಳಗ್ಗೆ ಇನ್ನೊಂದ್ಸಲ ದಾಳಿ ಮಾಡಿದ್ರು.
ನನಿಗೆ ವಿಷ್ಯ ಗೊತ್ತಾದ ತಕ್ಷಣ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಫೋನ್ ಮಾಡಿ, ಪೊಲೀಸ್ ಬಂದೋಬಸ್ತ್ ಹಾಕಿ ಅಲ್ಲಿನ ದಲಿತರಿಗೆ ಕೂಡಲೆ ರಕ್ಷಣೆ ಕೊಡಿ ಅಂತ ತಾಕೀತು ಮಾಡಿದೆ. ತುಮಕೂರಿನ ದೊರೆರಾಜುರವರಿಗೆ ಫೋನ್ ಮಾಡಿ, ಸರ್ ಇಂಗಾಗೋಗಿದೆ ಬನ್ನಿ ಸ್ಥಳಕ್ಕೆ ಭೇಟಿ ನೀಡೋಣ ಅಂದೆ.
ಅವ್ರು ತಕ್ಷಣ ಹೊರಟು ಬಂದ್ರು. ನಾನು ಮತ್ತು ದೊರೆರಾಜ್‌ರವರು ಏಕಕಾಲದಲ್ಲಿ ಬಸ್ ಇಳಿದು ದುಂಡಾ ಗ್ರಾಮಕ್ಕೆ ಹೋದು. ಅಲ್ಲಿನ ಪರಿಸ್ಥಿತಿ ಹೇಗಿತ್ತು ಅಂದ್ರೆ, ನನಗೆ ಫೋನ್ ಮಾಡಿದ್ದ ಗೋವಿಂದರಾಜನಿಗೆ ಬುರುಡೆ ಬಿಚ್ಚಿಕಣಂಗೆ ಹೊಡೆದಿದ್ರು, ಅವ್ನು ಆಸ್ಪತ್ರೆಲಿ ಅಡ್ಮಿಟ್ ಆಗಿದ್ದ.
ಇಡೀ ಪೊಲೀಸ್ ಊರ ತುಂಬ ಆವರಿಸಿತ್ತು. ಹಟ್ಟಿಯೊಳಗೆ ಸಾಮಾನು ಸರಂಜಾಮು ಚಲ್ಲಾಡಿತ್ತು. ಹೆಂಗಸ್ರು ಮಕ್ಳು “ಸ್ವಾಮಿ ನಾವು ಬದುಕಕಾಗಲ್ಲ, ನಮ್ಮುನ್ನ ಕಾಪಾಡಿ, ಕೊಂದಾಕಿಬಿಡ್ತರೆ” ಅಂತ ಕೈಕಾಲು ಕಟ್ಟಿರು.
ಕಾಲೋನಿ ಎಂಟ್ರೆಂಸ್‌ನಲ್ಲಿ ಅಧಿಕಾರಿಗಳೆಲ್ಲ ನಿಂತಿದ್ರು. ನಾನು ಡಿವೈಎಸ್‌ಪಿನ, “ಇಷ್ಟೆಲ್ಲ ನಡೆದ್ರು ಏನ್ ಕ್ರಮ ಕೈಗೊಂಡಿದಿರ, ಏನಿದು ಅನಾಚಾರ, ಕಂಪ್ಲೇಂಟ್ ತಗಂಡಿದಿರ, ಆರೋಪಿಗಳನ್ನ ದಸ್ತಗಿರಿ ಮಾಡಿದಿರ?” ಅಂತ ಕೇಳ್ದೆ.
ಅವು ಸಮಾಧಾನವಾಗಿ “ಮಾಡ್ತಿವಿ, ಈಗ ಮಾಡ್ತಿವಿ” ಅಂತ ಉತ್ರ ಕೊಟ್ರು, ನನ್ಗೆ ಕೋಪ ನೆತ್ತಿಗೇರಿಬಿಡ್ತು. “ನೆನ್ನೆ ರಾತ್ರಿನೆ ಘಟನೆ ನಡೆದಿದ್ರು, ಇದುವರೆಗು ಯಾಕೆ ಕಂಪ್ಲೆಂಟ್ ತಗಂಡಿಲ್ಲ, ಪರೋಕ್ಷವಾಗಿ ನೀವು ಅಪರಾಧಿಗಳ ರಕ್ಷಣೆಗೆ ನಿಂತಿದಿರ, ನಿಮ್ಮುನ್ನ ನಂಬಿಕೆಂಡಿದ್ರೆ ಪ್ರಾಣ ಕಳ್ಕಬೇಕಾಗುತ್ತೆ, ನಿಮ್ಮ ಕೈಲಿ ಆಗ್ಲಿಲ್ಲ ಅಂದ್ರೆ ಹೇಳಿ, ನಮ್ಮ ರಕ್ಷಣೆನ ನಾವೆ ಮಾಡ್ಕೊಂತಿವಿ, ಮೊದಲು ನಿಮ್ಮುನ್ನ ಅರೆಸ್ಟ್ ಮಾಡಿರೆ ಅಮೇಲೆ ನೀವು ಚುರುಕಾಗ್ತಿರ” ಅಂದು ಅಲ್ಲಿದ್ದ ನಮ್ಮ ಹಟ್ಟಿರ್‍ನೆಲ್ಲ, “ಲೆ ಎಲ್ಲ ಪೊಲೀಸ್ ಸುತ್ತುವರಿರೊ, ಬಿಡಬೇಡ್ರಿ” ಅಂದೆ.
ಆಗ ಪೊಲೀಸ್ನವ್ರು ಇಲ್ಲ ಈ ಕೂಡಲೆ ಕೇಸ್ ದಾಖಲಿಸ್ತಿವಿ ಅಂತ ಅಂದ್ರು. ಆದ್ರೆ ಅವ್ರು ಕೇಸ್ ದಾಖಲಿಸಿಕಂಡ್ರು ಕಠಿಣವಾಗಿ ಏನು ಕ್ರಮ ಕೈಗೊಳ್ಲಿಲ್ಲ. ಆರೋಪಿಗಳನ್ನ ಬಂಧಿಸ್ಲಿಲ್ಲ. ಈ ನಡುವೆ ಏನಾಯ್ತು ಅಂದ್ರೆ ಆ ದುಂಡಾ ಗ್ರಾಮದ ಸುತ್ತ ಇರೊ ಬೇರೆ ಗ್ರಾಮದ ಮೇಲ್ಜಾತಿರೂ ಸೇರಿ ಅಪರಾಧಿಗಳಿಗೆ ರಕ್ಷಣೆ ಕೊಡೋದು, ನಮ್ಮ ಜನರ ಮೇಲೆ ಕೆಕ್ಕರ್‍ಸೋಕೆ ಶುರುವಾದ್ರು. ನಾವು ಎಷ್ಟು ಪ್ರಯತ್ನಪಟೂ ವ್ಯವಸ್ಥೆ ಅವರ ಪರವಾಗಿ ಇರೊ ತರ ವರ್ತಿಸೋಕ್ಕೆ ಶುರುವಾದ್ರು.
ನಾವು ಎಷ್ಟು ಪ್ರಯತ್ನಪಟ್ರು ವ್ಯವಸ್ಥೆ ಅವರ ಪರವಾಗೆ ಇರೋ ತರ ವರ್ತಿಸೋಕ್ಕೆ ಶುರುವಾಯ್ತು. ನಾವು ಇದನ್ನ ಹಿಂಗೆ ಬಿಟ್ರೆ ಸರಿಯಾಗಲ್ಲ ಅಂತ ತುರುವೇಕೆರೆ ತಾಲ್ಲೋಕ್ ದಸಂಸ ಸಭೆ ಕರೆದು ಒಂದು ತೀರ್ಮಾನಕ್ಕೆ ಬಂದು.
ದುಂಡಾ ಗ್ರಾಮದ ಗುಂಡಾಗಳನ್ನ ಬಂಧಿಸಿ, ಗಡಿಪಾರು ಮಾಡಿ ಅಂತ ತುರುವೇಕೆರೆ ತಾಲ್ಲೋಕ್ ಕಚೇರಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು ತೊಂಭತ್ತು ಕಿಲೋಮೀಟರ್ ಬೃಹತ್ ಕಾಲ್ನಡಿಗೆ ಜಾಥಾವನ್ನ ಹಮ್ಮಿಕೊಂಡು ಸರ್ಕಾರದ ಮೇಲೆ ಒತ್ತಡ ತರಬೇಕು ಅಂತ ತೀರ್ಮಾನಿಸಿವು. ಯಾವಾಗ ನಮ್ಮ ಕಾಲ್ನಡಿಗೆ ಜಾಥಾದ ಕರಪತ್ರ ಬಿತ್ತೋ, ಆಗ ಮೂರು ಜನ ಆರೋಪಿಗಳನ್ನ ಬಂಧಿಸುವ ನಾಟಕ ಆಡಿರು. ಆದ್ರೆ ಯಾರು ಪ್ರಮುಖ ಹಲ್ಲೆಕೋರರು, ಪ್ರಭಾವಿಗಳು ಇದ್ರೊ ಅವರನ್ನ ಏನು ಮಾಡದೆ ಹಾಗೆ ಬಿಟ್ಟಿದ್ರು. ಅವರೆಲ್ಲ ಹೋಗಿ ಸ್ವಾಮೀಜಿಗಳ ಮಠದಲ್ಲಿ ರಕ್ಷಣೆ ಪಡಕಂಡಿದ್ರು. ಯಾವಾಗ ನಾವು ಕಾಲ್ನಡಿಗೆ ಮೂಲಕ ಒತ್ತಾಯ್ಸಕೆ ಶುರುವಾದ್ವೊ ಆಗ ಆ ಜಾತಿಯ ಸ್ವಾಮೀಜಿಗಳ ಮುಖಾಂತರ, ರಾಜಕಾರಣಿಗಳ ಮುಖಾಂತರ ನಿಮ್ಮ ಜಾಥವನ್ನು ವಾಪಾಸ್ ತಗಳಿ ಅಂತ ನನಗೆ ಒತ್ತಡ ತಂದ್ರು. ಆದ್ರೆ ನಾವು ಯಾವುದ್ಕು ಹಿಂದ್ಸರಿಲೇ ಇಲ್ಲ.
ಮೂರು ದಿನ ಸತತವಾಗಿ ನಡೆದ ಜಾಥದಲ್ಲಿ ನಮ್ಮ ಘೋಷಣೆಗಳು ’ದುಂಡಾದ ಗುಂಡಾಗಳನ್ನು ಬಂಧಿಸಿ’ ‘ರೌಡಿ ಶೀಟ್ ಓಪನ್ ಮಾಡಿ’ `ಗಡಿಪಾರು ಮಾಡಿ’ ಎಂದಾಗಿತ್ತು. ನಮ್ಮ ಜಾಥಾದಲ್ಲಿ ರಾಯಚೂರಿನ ಹಾಡುಗಾರ ಕಲಾವಿದ ಡಿಂಗ್ರಿ ನರಸಪ್ಪ ಮತ್ತವರ ತಂಡ ಬಂದು ಹೋರಾಟದ ಹಾಡುಗಳ ಮುಖಾಂತರ ಪ್ರತಿಭಟನಾಕಾರರನ್ನ ಹುರಿದುಂಬಿಸುತ್ತಿದ್ರು, ಸುಮಾರು ಸಾವಿರಾರು ಜನ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದಲೂ ಬಂದು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ರು. ನಮ್ಮ ಜಾಥಾ ತಾರತಮ್ಯ, ಅಸಮಾನತೆ ಹೆಚ್ಚಿಗೆ ಇರ ಗ್ರಾಮಗಳ ಮೇಲಾದು ಹೋಗಿತ್ತು. ಆ ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ನಿಂತು ಬಹಿರಂಗ ಸಮಾವೇಶದಲ್ಲಿ ಎಚ್ಚರಿಕೆಯ ಸಂದೇಶದ ಮಾತುಗಳನ್ನಾಡಿ ಮುಂದಕ್ಕೋಗುತ್ತಿದ್ದು.
ಈ ಬೃಹತ್ ಕಾಲ್ನಡಿಗೆ ಜಾಥಾದ ಮುಖಾಂತರ ಇಡೀ ಜಿಲ್ಲೆಗೆ ಸ್ವತಃ ದಸಂಸಕ್ಕೆ ಒಂದು ಸಂಚಲನವನ್ನು ಕೊಟ್ಟು. ಮೂರನೆ ದಿನ ತುಮಕೂರು ತಲುಪಿ ಡಿ.ಸಿ. ಕಚೇರಿಗೆ ಮುತ್ತಿಗೆ ಹಾಕದು ನಮ್ಮ ಉದ್ದೇಶ್ವಾಗಿತ್ತು. ಅಷ್ಟ್ರಲ್ಲಿ ಮಳೆ ಜೋರಾಗಿ ಸುರಿಯಕೆ ಶುರುವಾತು. ಪ್ರತಿಭಟನಾಕಾರರು ಆಕ್ರೋಶಭರಿತರಾಗಿದ್ರು. ಬ್ಯಾರಿಕೇಡ್ ಹಾಕಿದ್ರು. ಅದನ್ನು ಮುರ್‍ದು ನುಗ್ಗುವ ಉತ್ಸಾಹದಲ್ಲಿ ಪ್ರತಿಭಟನಾಕಾರರಿದ್ರು, ಅಂತಿಮವಾಗಿ ನನ್ನನ್ನು ಒಳಗೊಂಡ ದೊರೈರಾಜ್, ಕೇಬಿ ಸಿದ್ದಯ್ಯ ಮುಂತಾದ ಪ್ರಮುಖರ ತಂಡ ಡಿ.ಸಿ.ಯವರೊಂದಿಗೆ ಚರ್ಚಿಸಿ ಸುಮಾರು ಒಂಭತ್ತು ಜನ ದುಂಡಾದ ಗುಂಡಾಗಳ ಮೇಲೆ ರೌಡಿ ಶೀಟ್ ಓಪನ್ ಮಾಡಿಸಲು ಒತ್ತಾಯ್ಸಿವು. ಆಗಿನ ಉಸ್ತುವಾರಿ ಮಂತ್ರಿ ಸುರೇಶ್ ಕುಮಾರ್ ನಮಗೆ ಆಶ್ವಾಸನೆ ಕೊಟ್ಟು ನಿಮ್ಮ ಬೇಡಿಕೆಗಳನ್ನ ಈಡೇರುಸ್ತಿವಿ ನೀವು ಪ್ರತಿಭಟನೆಯನ್ನ ಕೈಬಿಡಿ ಎಂದು ಮನವಿ ಮಾಡಿಕಂಡ್ರು, ನಂತರ ಕೆಲವೇ ದಿನದಲ್ಲಿ ಎಲ್ಲಾ ಆರೋಪಿಗಳನ್ನ ಬಂಧಿಸಿ ಜೈಲು ಪಾಲು ಮಾಡಿರು. ದುಂಡಾದ ದಲಿತರಿಗೆ ಪೊಲೀಸ್ ರಕ್ಷಣೆ ಸಿಕ್ತು. ಸುತ್ತ ಮುತ್ತ ಸವರ್ಣಿಯರು ಹೆದರಿರು. ದಲಿತರು ಸ್ವಾಭಿಮಾನದಿಂದ, ನಿರ್ಭಯದಿಂದ ಬದುಕುವ ವಾತಾವರಣ ಒಂದಷ್ಟು ಕಾಲ ದುಂಡಾ ಗ್ರಾಮದ ಸುತ್ತಮುತ್ತ ನಿರ್ಮಾಣವಾಯ್ತು…”
– ಇದಿಷ್ಟು ’ಅಂಗುಲಿಮಾಲ’ ಕೃತಿಯಲ್ಲಿ ದಾಖಲೆಗೊಂಡಿರುವ ದುಂಡ ಘಟನೆಯ ವಿವರಗಳು.
ಖುಲಾಸೆಯಾಗಿದ್ದ ಪ್ರಕರಣ; ಹೈಕೋರ್ಟ್‌ನಲ್ಲಿ ನ್ಯಾಯ
ಗೋವಿಂದರಾಜು, ನರಸಿಂಹಮೂರ್ತಿ, ಕೆಂಪ ಓಬಳಯ್ಯ, ದೊಡ್ಡಯ್ಯನ ಕೆಂಪ ಓಬಳಯ್ಯ, ವೆಂಕಟೇಶ್, ಮಂಜುನಾಥ್, ಉಮೇಶ್, ಮಹಾಲಕ್ಷ್ಮಮ್ಮ ಅವರ ಮೇಲೆ ದೊಣ್ಣೆ, ಕಲ್ಲುಗಳನ್ನು ಬಳಸಿ ದಾಳಿ ನಡೆಸಿದ ಪರಿಣಾಮ ಅವರು ಗಂಭೀರವಾಗಿ ಘಟನೆಯಲ್ಲಿ ಗಾಯಗೊಂಡಿದ್ದರು. ದಂಡಿನಶಿವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2011ರಲ್ಲಿ ವಿಚಾರಣಾ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ವಿಚಾರಣಾ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆಯಾಗಿರುವ ಲಕ್ಷ್ಮಮ್ಮ ಹೈಕೋರ್ಟ್‌ಗೆ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೈಬುನ್ನೀಸಾ ಮೊಹಿದ್ದೀನ್ ಖಾಝಿ ಅವರಿದ್ದ ನ್ಯಾಯಪೀಠ ನ.1ರಂದು ಅಪರಾಧಿಗಳೆಂದು ಆದೇಶ ನೀಡಿತ್ತಲ್ಲದೇ, ಅವರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ನ.16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ದಂಡದ ಜೊತೆಗೆ ಎಲ್ಲ 10 ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದಲ್ಲಿ ಅಪರಾಧಿಗಳಾಗಿ ಸುದೀಪ್(ಎ1), ಜಯಮ್ಮ(ಎ2), ನಟರಾಜ್(ಎ3), ಶ್ರೀನಿವಾಸ್(ಎ4) ಶಂಕರಯ್ಯ(ಎ5), ಶಿವಕುಮಾರ್(ಎ6), ಹರ್ಷಾ(ಎ7), ಶಿವಲಿಂಗಯ್ಯ(ಎ8), ಪ್ರಕಾಶ್(ಎ9), ಗೌರಮ್ಮ(ಎ10), ಕಲ್ಪನಾ(ಎ11) ಎಂಬವರು ಅಪರಾಧಿಗಳು ಎಂದು ಸಾಬೀತಾಗಿದೆ. ಪ್ರಕರಣದ 8ನೇ ಆರೋಪಿಯಾಗಿದ್ದ ಶಿವಲಿಂಗಯ್ಯ ಎಂಬುವವರು ಅರ್ಜಿ ವಿಚಾರಣೆ ನಡುವೆ ಮೃತಪಟ್ಟಿರುವುದರಿಂದ ಅವರ ವಿರುದ್ಧದ ಪ್ರಕರಣ ಹಿಂಪಡೆಯಲಾಗಿದೆ.
’ಈದಿನ’ದೊಂದಿಗೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಕುಂದೂರು ತಿಮ್ಮಯ್ಯ, “ಹೈಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಇದು ಹೆಮ್ಮೆ ಪಡಬೇಕಾದ ವಿಚಾರ. ದಲಿತರ ಮೇಲೆ ದೌರ್ಜನ್ಯ ಎಸಗಿದರೆ ಶಿಕ್ಷೆಯಾಗುತ್ತೆ ಎಂಬ ಮೆಸೇಜ್ ರಾಜ್ಯಕ್ಕೆ ರವಾನೆಯಾಗಿದೆ” ಎಂದರು.
“ತೀರ್ಪು ಹೊರಬಿದ್ದ ತಕ್ಷಣ ದುಂಡ ಗ್ರಾಮದ ನಮ್ಮ ಸಮುದಾಯದ ಹುಡುಗ್ರನ್ನ ಸಂಪರ್ಕಿಸಿದ್ದೆ. ಗಲಾಟೆಯಾಗುವ ಸನ್ನಿವೇಶ ಇದೆಯಾ ಎಂದು ವಿಚಾರಿಸಿದೆ. ಅಂತಹ ಯಾವುದೇ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು. ತೀರ್ಪು ಹೊರಬಿದ್ದಾಗ ಆರೋಪಿಗಳು ಎಸ್ಕೇಪ್ ಆಗಿದ್ದರು. ನಂತರ ದಸ್ತಗಿರಿಯಾಗಿದೆ. ಜನ ಈಗ ಶಾಂತಿಯುತವಾಗಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿರಿ: 2008ರ ತುಮಕೂರು ದಲಿತ ದೌರ್ಜನ್ಯ ಪ್ರಕರಣ: 10 ಮಂದಿಗೆ 1 ವರ್ಷ ಜೈಲು, ದಂಡ ವಿಧಿಸಿದ ಹೈಕೋರ್ಟ್