ಅಮೆರಿಕ ಇಸ್ರೇಲ್ ಮೈತ್ರಿ ಇರಾನಿನ ಮೇಲೆ ನಡೆಸುತ್ತಿರುವ ದಾಳಿಗೆ ಈ ಹಿಂದೆಯೇ ಸ್ಪೇನ್ ಪ್ರತಿರೋಧ ವ್ಯಕ್ತಪಡಿಸಿತ್ತು. ಈಗ ತನ್ನ ವಾಯುಮಾರ್ಗವನ್ನು ಅಮೆರಿಕ ಬಳಸದಂತೆ ನಿರ್ಭಂದ ಹೇರಿದ ಸ್ಪೇನ್ ಅಮೆರಿಕದ ಯುದ್ಧದಾಹಿ ಧೋರಣೆಯನ್ನು ತೀವ್ರವಾಗಿ ವಿರೋಧಿಸಿದೆ.
ತನ್ನ ವಾಯುನೆಲೆಗಳನ್ನು ಅಮೆರಿಕ ಬಳಸದಂತೆ ಸಂದೇಶ ನೀಡಿರುವ ಸ್ಪೇನ್, ಇರಾನ್ ಮೇಲಿನ ಅಮೆರಿಕ ನಿರಂತರ ದಾಳಿಗೆ ತನ್ನ ಬೆಂಬಲವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಲು ಸ್ಪೇನ್ ವಾಯುಮಾರ್ಗದ ಮೂಲಕ ಹಾರಾಡುವ ಅಮೆರಿಕದ ಯುದ್ದ ವಿಮಾನಗಳಿಗೆ ಯುದ್ಧ ಸಂಬಂಧಿ ಹಾರಾಟಗಳಿಗೆ ತನ್ನ ಸೇನಾ ನೆಲೆ ಹಾಗೂ ವಾಯುಮಾರ್ಗವನ್ನು ಬಳಸದಂತೆ ಇರಾನ್ ರಕ್ಷಣಾ ಸಚಿವ ಮಾರ್ಗರಿಟ ರೊಬ್ಲೆಸ್ ಎಚ್ಚರಿಕೆ ನೀಡಿದ್ದಾರೆ.
ಸ್ಪಾನಿಷ್ ಪತ್ರಿಕೆ ಎಲ್ ಪೈಸ್ ಈ ಕುರಿತು ವರದಿ ಮಾಡಿದ್ದು, ಮಧ್ಯಪ್ರಾಚ್ಯದ ಮೇಲೆ ವೈಮಾನಿಕ ದಾಳಿ ನಡೆಸುವ ವೈಮಾನಿಕ ನೌಕೆಗಳು ನ್ಯಾಟೊ ಸದಸ್ಯ ಸ್ಪೇನ್ ದೇಶವನ್ನು ಹಾಯುವಂತೆ ಒತ್ತಡಕ್ಕೆ ಒಳಪಡಿಸುತ್ತಿದ್ದವು. ಸದ್ಯದ ನಿರ್ಬಂಧ ತುರ್ತು ಪರಿಸ್ಥಿತಿಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪೇನ್ ಸ್ಪಷ್ಟನೆ ನೀಡಿದೆ.
ಸ್ಪೇನ್ ಆರ್ಥಿಕ ಸಚಿವ ಕಾರ್ಲೋಸ್ ಮಾತನಾಡಿ, ಈ ನಿರ್ಧಾರವು ರಾಷ್ಟ್ರವು ತನ್ನ ಯುದ್ಧ ವಿರೋಧಿ ನಿಲುವಿಗೆ ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದಾರೆ. ನಮ್ಮ ಈ ನಿರ್ಣಯವು ಈ ಹಿಂದಿನ ನಮ್ಮ ನಿಲುವಿನ ಭಾಗವೇ ಆಗಿದ್ದು, ನಾವು ಯಾವ ರೀತಿಯಾಗಿಯೂ ಯುದ್ಧವನ್ನು ಪ್ರೋತ್ಸಾಹಿಸುವುದಿಲ್ಲ ಹಾಗೂ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಸ್ಪೇನ್ ಪ್ರಧಾನಿ ಪೆಡ್ರೊ ಸಾನ್ಚೆಸ್ ಮೊದಲಿನಿಂದಲೂ ಅಮೆರಿಕದ ಬಹಳ ತೀವ್ರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಇರಾನ್ ಮೇಲಿನ ಅಮೆರಿಕ ಇಸ್ರೇಲ್ ಜಂಟಿ ದಾಳಿಯನ್ನು ಅಜಾಗರೂಕ, ಅಸಂಬದ್ಧ ನಡೆ ಎಂದು ಕರೆದಿದ್ದ ಸ್ಪೇನ್ ಪ್ರಧಾನಿ ಪೆಡ್ರೊ ಮೇಲೆ ಸದ್ಯ ಟ್ರಂಪ್ ಕೆಂಗಣ್ಣು ಬಿದ್ದಿದೆ.
ಸ್ಪೇನ್ ಇದೇ ರೀತಿಯ ನಿಲುವು ತಾಳಿದರೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ ಎಂದಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಮಾಡ್ರಿಡ್ ಜೊತೆಗಿನ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ.




