ಕೃತಿ: Ranade, Gandhi and Jinnah (‘ರಾನಡೆ, ಗಾಂಧಿ ಮತ್ತು ಜಿನ್ನಾ’)
ಮೊದಲ ಮುದ್ರಣ: 1943, Thacker & Co. Ltd.
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ- 1979, ಏಪ್ರಿಲ್ 14
ಇಂಗ್ಲಿಷ್ ಸಂಪುಟ- 1
ಕನ್ನಡ ಸಂಪುಟ- 1
True Sign Publishing House Private Limited Edition- 2024
1943ರ ಜನವರಿ 18ರಂದು ಪುಣೆಯಲ್ಲಿ ಮಹಾದೇವ ಗೋವಿಂದ ರಾನಡೆ ಅವರ 101ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ನೀಡಿದ ಉಪನ್ಯಾಸದ ಲಿಖಿತ ರೂಪವೇ ‘ರಾನಡೆ, ಗಾಂಧಿ ಮತ್ತು ಜಿನ್ನಾ’ ಕೃತಿ. ಈ ಕಿರು ಪುಸ್ತಕ ಜಸ್ಟಿಸ್ ರಾನಡೆಯವರ ವ್ಯಕ್ತಿತ್ವವನ್ನು ವಿಮರ್ಶಿಸುತ್ತ ಅಂದಿನ ಭಾರತದ ಚಿತ್ರಣವನ್ನು, ವಿಶೇಷವಾಗಿ ಹಿಂದೂ ಧರ್ಮದ ಸ್ಥಿತಿಗತಿಗಳನ್ನು, ಅಂದಿನ ಪತ್ರಿಕೋದ್ಯಮ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ತೆರೆದಿಡುತ್ತದೆ. ಅಂಬೇಡ್ಕರ್ ಅವರು ಈ ಕೃತಿಯಲ್ಲಿ ಅಂದಿನ ಕಾಲದ ಇಬ್ಬರು ಪ್ರಬಲ ನಾಯಕರಾದ ಮಹಾತ್ಮ ಗಾಂಧಿ ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ರಾಜಕೀಯ ಶೈಲಿಯನ್ನು ಟೀಕಿಸುತ್ತಾರೆ. ಭಾರತೀಯ ರಾಜಕೀಯದಲ್ಲಿ ಬೆಳೆಯುತ್ತಿದ್ದ ‘ವ್ಯಕ್ತಿ ಪೂಜೆ’ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಅವರು ಎಚ್ಚರಿಸಿದ್ದಾರೆ. ರಾನಡೆಯವರು ತಮ್ಮ ಜೀವತಾವಧಿಯಲ್ಲಿ ಸಾಮಾಜಿಕ ಬದಲಾವಣೆಗಳಿಗಾಗಿ ಮಾಡಿದ ಪ್ರಯತ್ನಗಳನ್ನು ಸ್ಮರಿಸುತ್ತಾರೆ. “ಒಬ್ಬ ವ್ಯಕ್ತಿಯು ಮಹಾನ್ ವ್ಯಕ್ತಿಯಾಗಬೇಕಾದರೆ ಅವನು ಸಮಾಜದ ಸೇವಕನಾಗಿರಬೇಕು ಮತ್ತು ಸಮಾಜಕ್ಕೆ ದಾರಿದೀಪವಾಗಬೇಕು” ಎಂಬುದು ಅವರ ವಾದವಾಗಿತ್ತು. ರಾನಡೆಯವರ ಕಾರ್ಯಗಳನ್ನು ಸ್ಮರಿಸುತ್ತಲೇ ಹಿಂದೂ ಧರ್ಮದ ಕುರಿತು ತೀಕ್ಷ್ಣ ಟೀಕೆಗಳನ್ನು ತಮ್ಮ ಭಾಷಣದಲ್ಲಿ ಬಾಬಾಸಾಹೇಬರು ಮಾಡುತ್ತಾರೆ. ಅಂಬೇಡ್ಕರ್ ಅವರ ಪ್ರಕಾರ, ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವವು ಯಶಸ್ವಿಯಾಗಲು ಸಾಧ್ಯವಿಲ್ಲ. ಇತಿಹಾಸವನ್ನು ಹೇಗೆ ನೋಡಬೇಕು ಮತ್ತು ಒಬ್ಬ ನಾಯಕನಿಗೆ ಇರಬೇಕಾದ ಗುಣಲಕ್ಷಣಗಳೇನು ಎಂಬುದರ ಬಗ್ಗೆಯೂ ಈ ಕೃತಿಯಲ್ಲಿ ಅಂಬೇಡ್ಕರ್ ಅವರು ಗಂಭೀರವಾಗಿ ಚರ್ಚಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ‘ರಾನಡೆ, ಗಾಂಧಿ ಮತ್ತು ಜಿನ್ನಾ’ (Ranade, Gandhi and Jinnah) ಕೃತಿಯು ಅವರ ಅತ್ಯಂತ ಪ್ರಭಾವಶಾಲಿ ಭಾಷಣಗಳಲ್ಲಿ ಒಂದಾಗಿದೆ. ಇದು 1943ರ ಜನವರಿ 18ರಂದು ಪುಣೆಯಲ್ಲಿ ಮಹಾದೇವ ಗೋವಿಂದ ರಾನಡೆ ಅವರ 101ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ನೀಡಿದ ಉಪನ್ಯಾಸದ ಲಿಖಿತ ರೂಪವಾಗಿದೆ. ಡಾ.ಅಂಬೇಡ್ಕರ್ ಅವರು ಕೃತಿಯಲ್ಲಿ ಮಂಡಿಸಿರುವ ಸಾರ್ವಕಾಲಿಕ ಸಂಗತಿಗಳು ಮುಖ್ಯವಾಗುತ್ತವೆ. ವ್ಯಕ್ತಿಯೋರ್ವ, ಅದು ವರ್ತಮಾನ ಇರಲಿ, ಭವಿಷ್ಯವಿರಲಿ, ಇತಿಹಾಸವಿರಲಿ ಹೇಗೆ ಬದುಕಬೇಕು ಮತ್ತು ಸಾಮಾಜಿಕ ಹೋರಾಟಗಾರರು, ರಾಜಕೀಯ ನೇತಾರರು ಹೇಗೆ ಇರಬೇಕೆಂದು ಈ ಕೃತಿ ಜಾಗತಿಕ ದಾಖಲೆಗಳೊಂದಿಗೆ ಚರ್ಚಿಸುತ್ತದೆ. ಇದಿಷ್ಟೆ ಅಲ್ಲ, ಈ ಕೃತಿಯಲ್ಲಿ ಬರುವ ಹಿಂದೂ ಧರ್ಮ ಕುರಿತ ಅಂಬೇಡ್ಕರ್ ಅವರ ವಿಮರ್ಶೆಗಳು ಗಮನಾರ್ಹ. ಸೈದ್ಧಾಂತಿಕ ವಿರೋಧವನ್ನು ವೈಚಾರಿಕತೆಯ ಹಿನ್ನೆಲೆಯಲ್ಲಿ ಸಾಕ್ಷೀಭೂತವಾಗಿ ಬಾಬಾಸಾಹೇಬರು ಮಂಡಿಸುತ್ತಾರೆ. ಅನಾಇಲೇಷನ್ ಆಫ್ ಕ್ಯಾಸ್ಟ್, ಫಿಲಾಸಫಿ ಆಫ್ ಹಿಂದೂಯಿಸಂ, ರಿಡಲ್ಸ್ ಇನ್ ಹಿಂದೂಯಿಸಂ… ಹೀಗೆ ಅವರ ಇತರೆ ಕೃತಿಗಳು ಈ ಕೆಲಸವನ್ನು ಮಾಡಿರಬಹುದಾದರೂ ರಾನಡೆ ಗಾಂಧಿ ಮತ್ತು ಜಿನ್ನಾ’ ಕೃತಿ ಮತ್ತಷ್ಟು ಅದರ ವಿಸ್ತರಣೆಯಾಗಿ ಕಾಣುತ್ತದೆ; ಹಿಂದೂ ಧರ್ಮ ಕುರಿತ ಅಂಬೇಡ್ಕರರ ಪ್ರಬಲ ಸಾರ್ವಕಾಲಿಕ ಪ್ರತಿರೋಧವನ್ನು ಸ್ಪಷ್ಟವಾಗಿ ಎತ್ತಿ ಹಿಡಿಯುತ್ತದೆ. ಆ ಕಾರಣಕ್ಕೆ ಇದು ಪುಟ್ಟ ಕೃತಿ ಮಹತ್ವದ್ದಾಗಿದೆ. ಈ ಕೃತಿ ರಚನೆಯ ಹಿನ್ನೆಲೆಯನ್ನು ಡಾ.ಅಂಬೇಡ್ಕರ್ ಅವರ ವಿಚಾರಗಳ ಹಿನ್ನಲೆಯಿಂದ ತಿಳಿಯುವುದು ಮುಖ್ಯ. ರಾನಡೆ ಅವರ ಪೂರ್ಣ ಹೆಸರು ಮಹಾದೇವ ಗೋವಿಂದ ರಾನಡೆ ಅಥವಾ ಎಂ.ಜಿ.ರಾನಡೆ. ರಾನಡೆಯವರು ಮಹಾರಾಷ್ಟ್ರದ ಓರ್ವ ಸಮಾಜ ಸುಧಾರಕರು. 1842ರಲ್ಲಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಆ ಕಾಲದಲ್ಲಿ ಓರ್ವ ಬುದ್ಧಿಜೀವಿಯಾಗಿ, ಪತ್ರಕರ್ತರಾಗಿ, ಮುಖ್ಯವಾಗಿ ಓರ್ವ ನ್ಯಾಯಾಧೀಶರಾಗಿ ಜನಪ್ರಿಯರಾದವರು. ಅದಕ್ಕಿಂತಲೂ ಮುಖ್ಯವೇನೆಂದರೆ ಮಹಾತ್ಮ ಜ್ಯೋತಿಬಾ ಪುಲೆಯವರಿಂದ ಆ ಸಮಕಾಲ ಘಟ್ಟದಲ್ಲಿ ಆರಂಭವಾದ ಸಾಮಾಜಿಕ ಸುಧಾರಣೆಯಿಂದ ಪ್ರಭಾವಿತರಾದವರು. ಆ ಹಾದಿಯಲ್ಲಿ ಮುನ್ನಡೆದವರು. ಈ ಹಿನ್ನೆಲೆಯಲ್ಲಿ 1942ರಲ್ಲಿ ಅವರ 101ನೇ ಜನ್ಮ ಶತಮಾನೋತ್ಸವ ಬರುತ್ತದೆ. ತನ್ನಿಮಿತ್ತ ಅಂದಿನ ಪೂನಾದಡೆಕ್ಕನ್ ಸಭಾ’ ಎಂಬ ಸಂಘಟನೆ ಆ ವರ್ಷ ರಾನಡೆಯವರನ್ನು ಕುರಿತು ವಿಚಾರಸಂಕಿರಣ ಏರ್ಪಡಿಸುತ್ತದೆ. ಡೆಕ್ಕನ್ ಸಭಾ’ವು ಮುಖ್ಯ ಭಾಷಣಕಾರರಾಗಿ ಡಾ.ಅಂಬೇಡ್ಕರ್ ಅವರನ್ನು ಆಹ್ವಾನಿಸುತ್ತದೆ. ಈ ಹಿನ್ನೆಲೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಂಡಿಸಿದ ಭಾಷಣವೇ-ರಾನಡೆ, ಗಾಂಧಿ ಮತ್ತು ಜಿನ್ನಾ’ ಕೃತಿಯಾಗಿ ಪ್ರಕಟವಾಗಿದೆ.

ಕೃತಿಯಲ್ಲಿ ಕಂಡುಬರುವ ಮೊದಲ ವಿಚಾರ ಶ್ರೇಷ್ಠ ವ್ಯಕ್ತಿ ಎಂದರೆ ಯಾರು ಎಂಬ ಪ್ರಶ್ನೆ. ಡಾ.ಅಂಬೇಡ್ಕರ್ ಅವರು, ಓರ್ವ ವ್ಯಕ್ತಿಯಾಗಿ ರಾನಡೆ ಅವರು ಹೇಗೆ ಶ್ರೇಷ್ಠ ಎಂದು ಚರ್ಚಿಸುತ್ತಾ ಹೋಗುತ್ತಾರೆ. “ಮಿಲಿಟರಿ ಹೀರೋಗಳಾದ ಅಲೆಕ್ಸಾಂಡರ್, ಅಟ್ಟಿಲಿ, ಸೀಸರ್ ಮತ್ತು ಟೇಮರ್‌ಲೇನ್ ಇವರುಗಳ ಬಗ್ಗೆ ಹೇಳುವುದಾದರೆ, ಇವರುಗಳು ಶ್ರೇಷ್ಠ ವ್ಯಕ್ತಿಗಳಾ ಎಂದು ಕೇಳಿದರೆ ಖಂಡಿತ ಉತ್ತರಿಸುವುದು ಕಷ್ಟವಿಲ್ಲ. ಯಾಕೆಂದರೆ ಸೇನಾ ದಂಡನಾಯಕರುಗಳು ಒಂದು ಹೊಸ ಯುಗವನ್ನು ಸೃಷ್ಟಿಸಿರುತ್ತಾರೆ ಮತ್ತು ಒಂದು ವಿಶಾಲ ಬದಲಾವಣೆಗೆ ಕಾರಣರಾಗಿರುತ್ತಾರೆ. ಹಾಗಾಗಿ ಅವರುಗಳು ತಮ್ಮ ರೋಚಕ ಗೆಲುವುಗಳ ಮೂಲಕ ತಮ್ಮ ಸಮಕಾಲೀನ ಸಮಾಜದ ಜನರಲ್ಲಿ ದಿಗಿಲು ಹುಟ್ಟಿಸಿರುತ್ತಾರೆ, ಬೆರಗುಗೊಳಿಸಿರುತ್ತಾರೆ. ಪರಿಣಾಮ ಶ್ರೇಷ್ಠ ಎಂದು ಕರೆಯುವುದಕ್ಕೆ ಮುಂಚೆಯೇ ಅವರು ಶ್ರೇಷ್ಠರಾಗಿರುತ್ತಾರೆ; ಜಿಂಕೆಗಳ ಮಧ್ಯೆ ಸಿಂಹಗಳು ಇದ್ದ ಹಾಗೆ. ಅಂಥವರು ಮನುಷ್ಯರ ನಡುವೆ ಇದ್ದರೆ ಶ್ರೇಷ್ಠರಾಗಿಯೇ ಆಗುತ್ತಾರೆ. ಆದರೆ ಒಂದು ವಿಚಾರ, ಇತಿಹಾಸದ ಮೇಲೆ ಅಂಥವರು ಬೀರುವ ಪರಿಣಾಮ ತೀರಾ ಕ್ಷಣಿಕ. ಏಕೆಂದರೆ ಅವರು ಆಕ್ರಮಿಸುವ ಪ್ರದೇಶಗಳು ಅವರ ಎದುರೇ ಆ ಕ್ಷಣವೇ ಅವರು ನೋಡಿದ್ದಕ್ಕಿಂತಲೂ ಹೆಚ್ಚು ಕುಗ್ಗಿಹೋಗಿರುತ್ತವೆ! ಉದಾಹರಣೆಗೆ ಫ್ರಾನ್ಸ್‌ನ ಶ್ರೇಷ್ಠ ದಂಡನಾಯಕ ನೆಪೋಲಿಯನ್ ತನ್ನೆಲ್ಲ ಆಕ್ರಮಣಗಳ ಬಳಿಕ ತನ್ನೆದುರೇ ಫ್ರಾನ್ಸ್ ಕೊಂಚ ಕರಗಿದ್ದನ್ನು ನೋಡಿದ! ಈ ನಿಟ್ಟಿನಲ್ಲಿ ಮಿಲಿಟರಿ ದಂಡನಾಯಕರುಗಳನ್ನು ಒಂದು ನಿರ್ದಿಷ್ಟ ಅಂತರ ಇಟ್ಟು ನೋಡಿದಾಗ ಏನನಿಸುತ್ತದೆ? ಅವರು ಬೀರುವ ಪರಿಣಾಮ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತ ಅನಿಸುತ್ತದೆ. ಅವರುಗಳು ತಾವು ಬದುಕಿದ್ದ ಸಮಕಾಲೀನ ಸಮಾಜದ ಮೇಲೆ ಯಾವುದೇ ಶಾಶ್ವತ ಪರಿಣಾಮ ಬೀರದೆ ಜಾಗತಿಕ ಚಲನೆಯಲ್ಲಿ ಜರುಗುವ ಒಂದೆರಡು ಘಟನೆಗಳಾಗುತ್ತಾರಷ್ಟೆ. ಹೀಗಿದ್ದರೂ ಅವರುಗಳ ಬದುಕು ಮತ್ತು ಹೋರಾಟದ ವಿವರಣೆ ಆಸಕ್ತಿಕರ ಇರಬಹುದು. ಆದರೆ ವಾಸ್ತವ ಅಂದರೆ ಇಡೀ ಪ್ರಪಂಚದ ಸ್ಥಿತಿಗತಿ ಮತ್ತು ತಾವು ಬದುಕಿದ್ದ ಸಾಮಾಜಿಕ ಕಾಲಘಟ್ಟದ ಮೇಲೆ ಅವರು ಯಾವುದೇ ಪರಿಣಾಮ ಬೀರಿರುವುದಿಲ್ಲ”.
ಹೀಗೆ ಡಾ.ಅಂಬೇಡ್ಕರ್ ಅವರು ಶ್ರೇಷ್ಠತೆ ಎಂಬುದರ ವಿವರಣೆ ನೀಡುತ್ತಾರೆ. ಅವರ ದೃಷ್ಟಿಯಲ್ಲಿ ಶ್ರೇಷ್ಠ ವ್ಯಕ್ತಿಗಳು ತಾವು ಬದುಕಿರುವ ಸಮಾಜದ ಮೇಲೆ ಶಾಶ್ವತವಾದ ಪರಿಣಾಮ ಬೀರಿರಬೇಕು, ಜನ ಅದನ್ನು ಸದಾ ನೆನಪಿಸಿಕೊಳ್ಳುತ್ತಿರಬೇಕು. ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಕಾರ್ಲೈಲ್ ಎಂಬ ಚಿಂತಕರ ವಿಚಾರಗಳನ್ನು ಉಲ್ಲೇಖಿಸುತ್ತಾರೆ. “ಯಾವುದನ್ನಾದರೂ ಸರಿ ಸಾಧಿಸುತ್ತೇನೆ ಎನ್ನುವಷ್ಟು ಸಮರ್ಥರು ಯಾವುದೇ ಮನುಷ್ಯರು ಆಗಿರಲು ಸಾಧ್ಯವಿಲ್ಲ. ಆದರೆ ಯಾವುದರ ಬಗ್ಗೆಯಾದರೂ ಸರಿ ಮನುಷ್ಯನಲ್ಲಿ ಇರಬೇಕಾದ ಮೊದಲ ಗುಣ ಅದು ಬದ್ಧತೆ. ಬದ್ಧತೆ ಇರುವ ವ್ಯಕ್ತಿಗಳನ್ನು ನಾನು ಪ್ರಾಮಾಣಿಕರು ಎಂದು ಕರೆಯುತ್ತೇನೆ. ಪ್ರಾಮಾಣಿಕತೆ, ಅದರಲ್ಲೂ ಆಳವಾದ ಪ್ರಾಮಾಣಿಕತೆ ಶ್ರೇಷ್ಠ ವ್ಯಕ್ತಿಯೊಬ್ಬನ ಪ್ರಮುಖ ಗುಣಲಕ್ಷಣ ಎಂಬುದನ್ನು ನಾನು ತಿಳಿಯಲಿಚ್ಛಿಸುತ್ತೇನೆ” ಎಂದಿದ್ದನು ಕಾರ್ಲೈಲ್.
ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು
ಕಾರ್ಲೈಲ್ ಅವರ ಈ ಚಿಂತನೆಯನ್ನು ಅನುಮೋದಿಸಿ ಡಾ. ಅಂಬೇಡ್ಕರ್, ನನ್ನ ದೃಷ್ಟಿಯಲ್ಲಿ ಪ್ರಾಮಾಣಿಕತೆ (sincerity)ಯು ಶ್ರೇಷ್ಠತೆಯ ಮೊದಲ ಪರೀಕ್ಷೆ. ಹಾಗಿದ್ದರೆ ಪ್ರಾಮಾಣಿಕತೆಯಷ್ಟೇ ಸಾಕೆ? ಖಂಡಿತ ಇಲ್ಲ. ಮನುಷ್ಯ ಶ್ರೇಷ್ಠನಾಗಬೇಕು ಎಂದರೆ ಆತನಿಗೆ ಕೇವಲ ಪ್ರಾಮಾಣಿಕತೆಯೊಂದೇ ಸಾಲುವುದಿಲ್ಲ. ಮನುಷ್ಯನೋರ್ವ ಪ್ರಾಮಾಣಿಕನಾಗಿರಬಹುದು. ಹಾಗಿದ್ದರೂ ಆತ ಮೂರ್ಖನೂ ಆಗಿರಬಹುದು! ಮೂರ್ಖತನವು ಶ್ರೇಷ್ಠತೆಗೆ, ವ್ಯಕ್ತಿ ಶ್ರೇಷ್ಠತೆಗೆ ತಡೆಯೊಡ್ಡುತ್ತದೆ. ಆದ್ದರಿಂದ ವ್ಯಕ್ತಿಯೋರ್ವ ಶ್ರೇಷ್ಠನಾಗಬಲ್ಲ, ಯಾವಾಗ ಅಂದರೆ ಆತ ಗಂಡಾಂತರದ ಸನ್ನಿವೇಶದಲ್ಲಿಯೂ ಸಮಕಾಲೀನ ಸಮಾಜವನ್ನು ರಕ್ಷಿಸಿದಾಗ. ಆತನ ಇಂತಹ ಕೆಲಸಕ್ಕೆ ಸಾಥ್ ನೀಡುವ ಅಂಶ-ಬೌದ್ಧಿಕತೆ (intellect). ಬೌದ್ಧಿಕತೆ ಅಥವಾ ವೈಚಾರಿಕತೆಯಿಂದ ಮಾತ್ರ ಆತ ಇದನ್ನು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಬೌದ್ಧಿಕತೆ ಎಂಬುದು ಬೆಳಕು. ಅದಿಲ್ಲದೆ ಏನೂ ಸಾಧ್ಯವಿಲ್ಲ. ಪ್ರಾಮಾಣಿಕತೆ ಮತ್ತು ಬೌದ್ಧಿಕತೆ(ವಿಚಾರವಂತಿಕೆ)ಗಳ ಸಂಯೋಗದಿಂದ ಮಾತ್ರ ವ್ಯಕ್ತಿಯೋರ್ವ ಶ್ರೇಷ್ಠನಾಗುತ್ತಾನೆ”. ಹೀಗೆ ಹೇಳುತ್ತಾ ಅಂಬೇಡ್ಕರ್ ಅವರು ಜಸ್ಟಿಸ್ ರಾನಡೆಯವರಲ್ಲಿ ಪ್ರಾಮಾಣಿಕತೆ ಮತ್ತು ವಿಚಾರವಂತಿಕೆ ಎರಡು ಕೂಡ ಇತ್ತು. ಆ ಕಾರಣದಿಂದ ಅವರದು ಶ್ರೇಷ್ಠ ವ್ಯಕ್ತಿತ್ವ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ.
ಈ ಕೃತಿಯಲ್ಲಿ ಬರುವ ಪ್ರಮುಖ ಅಂಶ ಹಿಂದೂ ಧರ್ಮ ಕುರಿತದ್ದು. ಹಿಂದೂ ಧರ್ಮ ಕುರಿತು ಯಾಕೆ ಡಾ.ಅಂಬೇಡ್ಕರ್ ಅವರು ಈ ಕೃತಿಯಲ್ಲಿ ವಿವರಿಸುತ್ತಾರೆ? ಎಂಬುದನ್ನು ಗಮನಿಸಬೇಕು. ಜಸ್ಟಿಸ್ ರಾನಡೆಯವರು ಜನಿಸಿದ್ದು 1842ರಲ್ಲಿ. ಅಂದರೆ 1818ರಲ್ಲಿ ಘಟಿಸಿದ ಕಿರ್ಕಿ ಅಥವಾ ಕೋರೆಗಾಂವ್ ಯುದ್ಧದ 22 ವರ್ಷಗಳ ನಂತರ. ಕಿರ್ಕಿ ಅಥವಾ ಕೋರೆಗಾಂವ್ ಯುದ್ಧ ಮಹಾರಾಷ್ಟ್ರದಲ್ಲಿ ದೌರ್ಜನ್ಯಕೋರ ಮರಾಠ ಪೇಶ್ವೆಗಳ ಆಡಳಿತವನ್ನು ಕೊನೆಗಾಣಿಸಿತು. ರಾನಡೆಯವರು, ಮರಾಠರ ಈ ಅವನತಿಗೆ ಕಾರಣ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿರುವ ದೌರ್ಬಲ್ಯಗಳು ಎಂಬುದನ್ನು ಗ್ರಹಿಸಿದರು. ಆ ನಿಟ್ಟಿನಲ್ಲಿ ಗ್ರಹಿಸಿದ್ದ ಇಂತಹ ದೌರ್ಬಲ್ಯಗಳನ್ನು ಕೊನೆಗಾಣಿಸದೆ ಹಿಂದೂ ಧರ್ಮಕ್ಕೆ ಭವಿಷ್ಯವಿಲ್ಲ ಎಂದು ಅವರು ಹಿಂದೂ ಧಾರ್ಮಿಕ ಸುಧಾರಣೆಗೆ ಮುಂದಾಗುತ್ತಾರೆ. ಇದನ್ನು ತಮ್ಮ ಈ ಕೃತಿಯಲ್ಲಿ ಡಾ.ಅಂಬೇಡ್ಕರ್‌ರವರು ದಾಖಲಿಸುತ್ತಾರೆ. “ಹಿಂದೂ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಹೇಗಿದೆ ಅಂದರೆ ಅದರ ಆದರ್ಶ ರೂಪವನ್ನು ವಾಸ್ತವಕ್ಕಿಳಿಸಲು ಸಾಧ್ಯವಾ ಎಂದು ಯಾರಾದರೂ ಮುಂದಾದರೆ ಅದು ಅಕ್ಷರಶಃ ಅಸಾಧ್ಯ ಎಂಬುದು ತಿಳಿಯುತ್ತದೆ. ಅದರ ಆದರ್ಶ ರೂಪವೇ ಕೆಟ್ಟದ್ದಾಗಿದೆ. ಹಾಗೆ ಇರುವ ವಾಸ್ತವವನ್ನಾದರೂ ಆದರ್ಶ ರೂಪಕ್ಕೆ ಏರಿಸಲು ಸಾಧ್ಯವೇ ಎಂದರೆ ಅದು ಕೂಡ ಸಾಧ್ಯವಿಲ್ಲ. ಯಾಕೆಂದರೆ ಅಸ್ತಿತ್ವದಲ್ಲಿರುವ ವಾಸ್ತವವೇ ಬೇರೆ. ಅದು ಈಗಿರುವ ಸ್ಥಿತಿ ಕೆಟ್ಟದ್ದಕ್ಕಿಂತಲೂ ಕೆಟ್ಟದ್ದಾಗಿದೆ. ಅಂದಹಾಗೆ ಹೀಗೆ ಹೇಳುವುದು ಅದು ಅತಿಶಯೋಕ್ತಿಯೇನಲ್ಲ. ಹಿಂದೂ ಸಾಮಾಜಿಕ ಸ್ಥಿತಿ ಮತ್ತು ಹಿಂದೂ ಧಾರ್ಮಿಕ ಸ್ಥಿತಿಗಳನ್ನು ಅವುಗಳ ಸಾಮಾಜಿಕ ಉಪಯೋಗ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪರೀಕ್ಷಿಸುವುದಾದರೆ… ಧರ್ಮದ ಬಗ್ಗೆ ಎಲ್ಲರೂ ಒಂದು ಮಾತು ಹೇಳುತ್ತಾರೆ. ಗಿಡದಿಂದ ಕಿತ್ತಾಗ ಒಂದು ಮಸಾಲೆ ಎಷ್ಟು ಫ್ರೆಶ್ ಆಗಿರುತ್ತದೆಯೋ ಹಾಗೆ ಅದು ಒಳ್ಳೆಯದಾಗಿರುತ್ತದೆ ಎಂಬುದು ಅವರ ಮಾತು. ಆದರೆ ಆರಂಭದಲ್ಲೇ ಗಮನಿಸುವುದಾದರೆ ಹಿಂದೂ ಧರ್ಮ ಅದೊಂದು ಕೆಟ್ಟ ನಾಣ್ಯವಾಗಿದೆ. ಹಿಂದೂ ಧರ್ಮವು ಹೇಳುವ ಹಿಂದೂ ಸಾಮಾಜಿಕ ಆದರ್ಶ ಹಿಂದೂ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂದರೆ- ದಯನೀಯ ಮತ್ತು ಇಡೀ ವ್ಯವಸ್ಥೆಯನ್ನು ನೈತಿಕ ಅಧಃಪತನದೆಡೆಗೆ ದೂಡುವ ರೀತಿ ಕೆಲಸ ಮಾಡಿದೆ! ಹಾಗೆ ಅದರ ರೂಪ ಮತ್ತು ಮೂಲತತ್ವವು ನೀಷೆಯ ಮಾದರಿಯದ್ದಾಗಿದೆ (ನೀಷೆಯು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನನ್ನು ಪ್ರಭಾವಿಸಿದ ಫ್ಯಾಸಿಸ್ಟ್ ಚಿಂತಕ). ಈ ನಿಟ್ಟಿನಲ್ಲಿ ನೀಷೆಗಿಂತ ಬಹಳ ಹಿಂದೆಯೇ ಮೊದಲು ಭಾರತದಲ್ಲಿ ಜನಿಸಿದ್ದು ಮನು. ನೀಷೆ ಯಾವ ಸಿದ್ಧಾಂತವನ್ನು ಬೋಧಿಸಿದನೋ ಆ ಥರದ ಬೋಧನೆಯನ್ನು ಆ ಕಾಲದಲ್ಲೇ ಮನು ರೂಪಿಸಿದ್ದ! ಇದರಿಂದ ಅರ್ಥವಾಗುವುದು ಹಿಂದೂ ಧರ್ಮವು- ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯನ್ನು ಸ್ಥಾಪಿಸುವ ಉದ್ದೇಶ ಹೊಂದಿಲ್ಲದ ಧರ್ಮ. ಅದು ಬ್ರಾಹ್ಮಣ ಎಂಬ ಸೂಪರ್ ಮ್ಯಾನ್ ಅನ್ನು ಹಿಂದೂ ಸಮಾಜದ ಇತರರು ಪೂಜಿಸುವಂತೆ ತಿಳಿಸುವ ಬೋಧನೆಯಾಗಿದೆ. ಆ ಸೂಪರ್ ಮ್ಯಾನ್ ಮತ್ತು ಆತನ ವರ್ಗ ಮಾತ್ರ ಈ ಜಗತ್ತಿನಲ್ಲಿ ಬದುಕಲು ಸಾಧ್ಯ. ಈ ಜಗತ್ತಿನಲ್ಲಿ ಆಳಲು ಅರ್ಹ ಎಂಬ ಸಿದ್ಧಾಂತವನ್ನು ಅದು ಬೋಧಿಸುತ್ತದೆ. ಉಳಿದ ಇತರರು ಅವರ ಸೇವೆ ಮಾಡಬೇಕು ಮತ್ತು ಅದಕ್ಕಿಂತ ಹೆಚ್ಚೇನನ್ನು ಹೊಂದಲು ಸಾಧ್ಯವಿಲ್ಲ ಎಂದು ಅದು ಹೇಳುತ್ತದೆ. ಆ ಉಳಿದ ಇತರರು ತಮ್ಮದೇ ಸ್ವಂತ ಬದುಕನ್ನು ಹೊಂದುವ, ತಮ್ಮದೇ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ. ಇದೇ ಹಿಂದೂ ಧರ್ಮದ ಧಾರ್ಮಿಕ ಬೋಧನೆಯಾಗಿದೆ. ಹಿಂದೂ ತತ್ವವಾಗಿದೆ” ಎನ್ನುತ್ತಾರೆ ಅಂಬೇಡ್ಕರ್.
ಮುಂದುವರಿದು ಡಾ. ಅಂಬೇಡ್ಕರ್‌ರವರು, ಜಾತಿ ವ್ಯವಸ್ಥೆಯು ಅದು ಚಾತುರ್ವರ್ಣ ಪದ್ಧತಿಯ ವಿರೂಪಗೊಂಡ ರೂಪ. ಅದೇ ಹಿಂದೂ ಧರ್ಮದ ಆದರ್ಶ. ಅಂದಹಾಗೆ ಆನುವಂಶಿಕ ಮೂರ್ಖನೊಬ್ಬನನ್ನು ಹೊರತುಪಡಿಸಿ ಮತ್ತ್ಯಾರು ತಾನೇ ಚಾತುರ್ವರ್ಣವನ್ನು ಸಮಾಜವೊಂದರ ಆದರ್ಶ ರೂಪ ಎನ್ನಲು ಸಾಧ್ಯ? ಆದ್ದರಿಂದ ವ್ಯಕ್ತಿ ದೃಷ್ಟಿಯಿಂದ ಮತ್ತು ಸಾಮಾಜಿಕ ದೃಷ್ಟಿಯಿಂದ ಅದೊಂದು {ಚಾತುರ್ವರ್ಣ} ಮೂರ್ಖ ನಂಬಿಕೆಯಾಗಿದೆ, ಅಪರಾಧವಾಗಿದೆ. ಏಕೆಂದರೆ ಒಂದು ವರ್ಗ ಕೇವಲ ಒಂದು ವರ್ಗ ಮಾತ್ರ ಶಿಕ್ಷಣವನ್ನು ಮತ್ತು ಕಲಿಕೆಯನ್ನು ಪಡೆಯಲು ಸಾಧ್ಯ! ಒಂದು ವರ್ಗ ಕೇವಲ ಒಂದು ವರ್ಗ ಮಾತ್ರ ಆಯುಧಗಳನ್ನು ಹಿಡಿಯಲು ಸಾಧ್ಯ! ಒಂದು ವರ್ಗ ಕೇವಲ ಒಂದು ವರ್ಗ ಮಾತ್ರ ವ್ಯಾಪಾರ -ವ್ಯವಹಾರಗಳನ್ನು ಮಾಡಲು ಸಾಧ್ಯ! ಒಂದು ವರ್ಗ ಕೇವಲ ಒಂದು ವರ್ಗ ಮಾತ್ರ ಇತರರ ಸೇವೆಗಳನ್ನು ಮಾಡಲು ಸಾಧ್ಯ!” ಎಂದು ಕುಟುಕುತ್ತಾರೆ.

ಇಂತಹ “ಆ ಒಂದು ವರ್ಗ ಮಾತ್ರ” ಎಂಬ ಥಿಯರಿಯ ಕಾರಣಕ್ಕೆ ಆದ ಪರಿಣಾಮ? ಅದನ್ನು ಕೂಡ ಅಂಬೇಡ್ಕರ್ ಅವರು ಹೇಳುತ್ತಾರೆ. ಭಾರತಕ್ಕೆ ಪರಕೀಯ ದಾಳಿಗಳು ಆ ಕಾಲದಿಂದಲೂ ಆದವು. ಆದರೆ ಕೇವಲ ಒಂದು ವರ್ಗ ಮಾತ್ರ (ಕ್ಷತ್ರಿಯ ವರ್ಗ) ಆಯುಧ ಹಿಡಿಯುವ ನಿಯಮ ಇದ್ದಿದ್ದರಿಂದ ಇತರೆ ಎಲ್ಲ ವರ್ಗಗಳು ಅಂತಹ ದಾಳಿಗಳ ಸಂದರ್ಭದಲ್ಲಿ ಮೌನವಾದವು, ಜವಾಬ್ದಾರಿಯಿಂದ ನುಣುಚಿಕೊಂಡವು. ಪರಿಣಾಮ ಭಾರತ ನಿರಂತರ ದಾಳಿಗಳಿಗೆ ಗುರಿಯಾಯಿತು. “ವಿದೇಶಿ ಆಕ್ರಮಣದ ಬಿರುಗಾಳಿಯನ್ನು ಭೀಕರತೆಯನ್ನು ಹಿಂದೂ ಜಾತಿ ವ್ಯವಸ್ಥೆಗೆ ತಡೆಯಲು ಸಾಧ್ಯವಾಯಿತೆ? ಇಲ್ಲ. ಸಮಾಜವೊಂದು ತನ್ನ ರಕ್ಷಣೆಗಾಗಿ ಅಥವಾ ಪ್ರತಿದಾಳಿ ಮಾಡಲಿಕ್ಕಾಗಲಿ ಒಂದು ಶಕ್ತಿಯಾಗಿ ಪ್ರಬಲವಾಗಿ ಒಂದುಗೂಡಬೇಕು. ಆದರೆ ಇಂತಿಂಥ ವರ್ಗಗಳಿಗೆ ಇಂತಿಂಥ ಕರ್ತವ್ಯ ಎಂದು ಹಂಚಿಕೆ ಮಾಡಿದ್ದರಿಂದ, ಉಲ್ಲಂಘಿಸದ ರೀತಿಯ ಕಾನೂನು ರೂಪಿಸಿದ್ದರಿಂದ ವಿದೇಶಿ ದಾಳಿಯ ಸಂದರ್ಭದಲ್ಲಿ ಇಡೀ ಹಿಂದೂ ಸಮಾಜ ಒಂದಾಗಲಿಕ್ಕೆ ಸಾಧ್ಯವಾಗಲಿಲ್ಲ. ಬ್ರಾಹ್ಮಣರು, ವೈಶ್ಯರು ಮತ್ತು ಶೂದ್ರರು ಸೇರಿದಂತೆ ಹಿಂದೂ ಧರ್ಮದ ಶೇಕಡ 90ರಷ್ಟು ಜನ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಶಸ್ತ್ರವನ್ನು ಹೊಂದುವ ಆಗಿರಲಿಲ್ಲ. ಹೀಗಿರುವಾಗ ಗಂಡಾಂತರದ ಸಂದರ್ಭದಲ್ಲಿ ಒಂದು ದೇಶ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಹಿಂದೂ ಸಮಾಜವನ್ನು ದುರ್ಬಲಗೊಳಿಸಿದ್ದು ತನ್ನ ಅಹಿಂಸಾ ಸಿದ್ಧಾಂತದ ಕಾರಣಕ್ಕಾಗಿ ಬುದ್ಧನಲ್ಲ. ಅದು ಬ್ರಾಹ್ಮಣರ ಚಾತುರ್ವರ್ಣ ಪದ್ಧತಿ. ಅದೇ ಹಿಂದೂ ಸಮಾಜದ ಸೋಲಿಗೆ ಮತ್ತು ಅವನತಿಗೆ ಮೂಲ ಕಾರಣ” ಎನ್ನುತ್ತಾರೆ ಅಂಬೇಡ್ಕರ್.
ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ
ಅಂದಹಾಗೆ ಬಾಬಾಸಾಹೇಬರ ಈ ಆರೋಪದ ಬಗ್ಗೆ ಕೆಲವರು ಆಕ್ಷೇಪ ಎತ್ತಬಹುದು. ಆದರೆ ಅದಕ್ಕೂ ಅಂಬೇಡ್ಕರರು ಸೂಕ್ತ ಕಾರಣ ಸಮೇತ ಹಿಂದೂ ಸಾಮಾಜಿಕ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹಾಕುತ್ತಾರೆ. “ಹತ್ತಿರ ಸೇರಿಸಲು ಬಾರದಂತಹ, ನೆರಳು ಸಹ ಸೋಕಬಾರದಂತಹ, ನೋಡಲು ಸಹ ಅರ್ಹವಲ್ಲದಂತಹ ಸಮುದಾಯಗಳನ್ನು ಹೊಂದಿರುವ ಸಮಾಜವೊಂದು ಪ್ರಪಂಚದಲ್ಲಿ ಎಲ್ಲಾದರೂ ಇರಲು ಸಾಧ್ಯವೇ? ಅಪರಾಧಿ ಬುಡಕಟ್ಟುಗಳನ್ನು ಹೊಂದಿರುವಂಥ ಸಮಾಜವೊಂದು ಪ್ರಪಂಚದಲ್ಲಿ ಎಲ್ಲಾದರೂ ಇರಲು ಸಾಧ್ಯವೇ? ಹಿಂದೂ ಸಮಾಜದಲ್ಲಿ ಕಂಡುಬರುವ ಇವರೆಲ್ಲರೂ ಅದೆಷ್ಟು ಸಂಖ್ಯೆಯಲ್ಲಿದ್ದಾರೆ? ಕೆಲವು ನೂರುಗಳು ಅಥವಾ ಕೆಲವು ಸಾವಿರಗಳು? ನಾನು ತೀರಾ ಕಡಿಮೆ ಇರಬೇಕು ಎಂದು ಆಶಿಸುತ್ತೇನೆ. ಆದರೆ ದುರಂತವೆಂದರೆ ಅವರು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ! ದಶಲಕ್ಷ ಅಸ್ಪೃಶ್ಯರು! ದಶಲಕ್ಷ ಅಪರಾಧಿ ಬುಡಕಟ್ಟುಗಳು! ದಶಲಕ್ಷ ಆದಿವಾಸಿ ಬುಡಕಟ್ಟುಗಳು! ಯಾರಿಗಾದರೂ ಇದನ್ನು ನೋಡಿದಾಗ ಹಿಂದೂ ನಾಗರಿಕತೆ ಅದು ನಾಗರಿಕತೆಯೋ ಅಥವಾ ಅಪಖ್ಯಾತಿಯೋ ಎಂದೆನಿಸದಿರದು” ಎಂದು ವಿಷಾದಿಸುತ್ತಾರೆ.
ಹಾಗಿದ್ದರೆ ಹಿಂದೂ ಧರ್ಮದಲ್ಲಿ ಬುದ್ಧಿಜೀವಿ ವರ್ಗ ಇರಲಿಲ್ಲವೇ ಎಂದು ಯಾರಿಗಾದರೂ ಅನಿಸಬಹುದು. ಇದರ ಬಗ್ಗೆ ಕೂಡ ಡಾ.ಅಂಬೇಡ್ಕರ್ ಮುಂದೆ ಮಾತನಾಡುತ್ತಾರೆ: “ಮುಂದುವರಿದು ನಾನು ಬುದ್ಧಿ ಜೀವಿ ವರ್ಗದ ಬಗ್ಗೆ ಹೇಳುತ್ತೇನೆ. ಯಾವುದೇ ನಾಗರಿಕತೆ ಬೆಳವಣಿಗೆ ಕಾಣಬೇಕಾದರೆ, ಮಾರ್ಗದರ್ಶನ ಹೊಂದಬೇಕಾದರೆ ಅದು ತನ್ನ ಬುದ್ಧಿಜೀವಿ ವರ್ಗದ ಮೇಲೆ ಅವಲಂಬಿತವಾಗಿರುತ್ತದೆ. ನೇರವಾಗಿ (ಹಿಂದೂ ಸಮಾಜದ ಮಟ್ಟಿಗೆ) ಹೇಳುವುದಾದರೆ ಅದು ಬ್ರಾಹ್ಮಣರ ಮೇಲೆ ಅವಲಂಬಿತವಾಗಿತ್ತು. ಹಳೆಯ ಹಿಂದೂ ಕಾನೂನಿನ ಪ್ರಕಾರ ಬ್ರಾಹ್ಮಣರು ಪೌರೋಹಿತ್ಯ ವರ್ಗದ ಅನುಕೂಲಗಳನ್ನು ಅನುಭವಿಸುತ್ತಿದ್ದರು. ಕೊಲೆಯಂತಹ ಅಪರಾಧ ಮಾಡಿದರೂ ಅವರನ್ನು ನೇಣಿಗೇರಿಸುತ್ತಿರಲಿಲ್ಲ. ತೀರಾ ಇತ್ತೀಚಿನವರೆಗೆ ಅಂದರೆ 1817ರವರೆಗೆ ಈಸ್ಟ್ ಇಂಡಿಯಾ ಕಂಪನಿ(ಬ್ರಿಟಿಷರು) ಕೂಡ ಅವರಿಗೆ ಅಂತಹ ಅನುಕೂಲ ನೀಡಿತ್ತು. ಪ್ರಶ್ನೆ ಎಂದರೆ ಹೀಗಿದ್ದರೂ ಬ್ರಾಹ್ಮಣರಲ್ಲಿ ಅಂತಹ ಒಂದು ಯಾವುದಾದರೂ ರುಚಿ (ಯೋಗ್ಯತೆ) ಉಳಿದಿದೆಯೇ? ನೇರ ಹೇಳುವುದಾದರೆ, ಅವರ ವೃತ್ತಿ(ಪೌರೋಹಿತ್ಯ) ಈಗ ತನ್ನ ಎಲ್ಲ ಶ್ರೇಷ್ಠತೆಗಳನ್ನು ಕಳೆದುಕೊಂಡಿದೆ. ಅವರು ಈಗ ಒಂದು ಕೀಟವಾಗಿದ್ದಾರೆ. ವ್ಯವಸ್ಥಿತವಾಗಿ ಸಮಾಜದ ಮೇಲೆ ದಾಳಿ ನಡೆಸುತ್ತ ಧರ್ಮದ ಹೆಸರಿನಲ್ಲಿ ಅವರು ಲಾಭ ಪಡೆದಿದ್ದಾರೆ. ಟನ್‌ಗಟ್ಟಲೆ ಅವರು ಬರೆದ ಶಾಸ್ತ್ರಗಳು, ಪುರಾಣಗಳು ತೀಕ್ಷ್ಣ ಆಚರಣೆಯ ಭಂಡಾರಗಳಾಗಿದ್ದವು. ಅದನ್ನು ಬ್ರಾಹ್ಮಣರು ಬಡ ಅಶಿಕ್ಷಿತ ಮೂಢನಂಬಿಕೆಯ ಹಿಂದೂ ಜನಸಾಮಾನ್ಯರನ್ನು ಮೂರ್ಖರನ್ನಾಗಿಸಲು, ವಂಚಿಸಲು, ಮೋಸಗೊಳಿಸಲು ಬಳಸಿಕೊಂಡರು”.
ಇಷ್ಟೆಲ್ಲ ನಡೆಯುತ್ತಿರಬೇಕಾದರೆ ಅಲ್ಲಿ ಇದು ತಪ್ಪು ಎಂದು ಹೇಳುವ ಸಾರ್ವಜನಿಕ ಆತ್ಮಸಾಕ್ಷಿ ಇರಲಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಡಾ.ಅಂಬೇಡ್ಕರ್, “ಖಂಡಿತ, ಅಲ್ಲಿ ಸಾರ್ವಜನಿಕ ಆತ್ಮ ಸಾಕ್ಷಿ ಇರಲಿಲ್ಲ. ಆತ್ಮಸಾಕ್ಷಿಯ ಕೊರತೆಯ ಕಾರಣದಿಂದ ತತ್ಸಂಬಂಧ ನಡೆಯುತ್ತಿದ್ದ ಸಾಮಾಜಿಕ ತಪ್ಪುಗಳ ವಿರುದ್ಧ ನೈತಿಕ ಆಕ್ರೋಶವನ್ನು ಅಪೇಕ್ಷಿಸುವುದು ಅಲ್ಲಿ ಅದು ಅಕ್ಷರಶಃ ವ್ಯರ್ಥವಾಗಿತ್ತು” ಎನ್ನುತ್ತಾರೆ.
ಈ ಕೃತಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾನಡೆಯವರನ್ನು ಕೇಂದ್ರವಾಗಿಟ್ಟುಕೊಂಡು ಪ್ರಜಾಪ್ರಭುತ್ವ ಕುರಿತ ತಮ್ಮ ವ್ಯಾಖ್ಯಾನವನ್ನು ನೀಡುತ್ತಾರೆ. “ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲವೆಂದರೆ ಪ್ರಜಾಪ್ರಭುತ್ವದ ಮಾಮೂಲಿ ಚೌಕಟ್ಟಿಗೆ ಅಂಥ ಯಾವುದೇ ಬೆಲೆ ಇರುವುದಿಲ್ಲ. ಅದು ಸರಿಯಾಗಿ ಹೊಂದಿಕೊಳ್ಳದ ವ್ಯವಸ್ಥೆಯಾಗುತ್ತದೆ. ಆದರೆ ಪ್ರಜಾಪ್ರಭುತ್ವ ಎಂಬುದು ಸರ್ಕಾರದ ರೂಪವಲ್ಲ, ಬದಲಿಗೆ ಅತ್ಯಗತ್ಯವಾಗಿ ಅದೊಂದು ಸಮಾಜದ ಒಂದು ರೂಪ ಎಂಬುದನ್ನು ರಾಜಕೀಯವಾದಿಗಳು ಎಂದಿಗೂ ಒಪ್ಪಿಕೊಳ್ಳಲೇ ಇಲ್ಲ. ಮತ್ತೊಂದು ವಿಚಾರ, ಪ್ರಜಾಪ್ರಭುತ್ವವಾದಿ ಸಮಾಜ ಎಂಬುದಕ್ಕೆ ಈ ಕೆಳಗಿನ ಅಂಶಗಳು ಇರಲೇಬೇಕು ಎಂದಲ್ಲ; ಅಂದರೆ ಐಕ್ಯತೆಯಿಂದ ಇರಬೇಕು, ಉದ್ದೇಶ ಹೊಂದಿರುವ ಸಮುದಾಯಗಳಾಗಿರಬೇಕು, ಸಾರ್ವಜನಿಕ ಅಗತ್ಯತೆಗಳಾಗಿ ವಿಧೇಯತೆ ಹೊಂದಿರಬೇಕು ಮತ್ತು ಪರಸ್ಪರ ಅನುಕಂಪ ಹೊಂದಿರಬೇಕು ಎಂದಲ್ಲ. ಬದಲಿಗೆ ಪ್ರಜಾಪ್ರಭುತ್ವ ಯಾವುದೇ ಚ್ಯುತಿಯಿರದ ರೀತಿ ಎರಡು ಅಂಶಗಳನ್ನು ಹೊಂದಿರಲೇಬೇಕು. ಒಂದನೆಯದು ಮನಸ್ಸುಗಳ ಮನೋಭಾವ, ಸಹಜೀವಿಗಳಿಗೆ ಸಮಾನತೆ ಮತ್ತು ಗೌರವವನ್ನು ನೀಡುವ ಮನೋಭಾವ. ಎರಡನೆಯದು ಕಠಿಣ ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತವಾದ ಸಾಮಾಜಿಕ ಒಂದುಗೂಡುವಿಕೆ”. ಹೀಗೆ ಹೇಳುತ್ತ ಡಾ.ಅಂಬೇಡ್ಕರ್ ಅವರು, “ರಾನಡೆಯವರು ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪಿಸಲು ಯತ್ನಿಸಿದರು. ಅದರ ಹೊರತಾಗಿ ಸುಸ್ಥಿರ ರಾಜಕಾರಣ ಅಸಾಧ್ಯ ಎಂಬುದನ್ನು ಪ್ರತಿಪಾದಿಸಿದರು” ಎಂದು ಹೇಳುತ್ತಾರೆ.
ಮುಂದುವರಿದು ಡಾ. ಅಂಬೇಡ್ಕರ್ ಅವರು, “ತಪ್ಪು ಸಾಮಾಜಿಕ ವ್ಯವಸ್ಥೆಯೆಂದರೆ, ಅದು ತೀವ್ರ ಅಪ್ರಜಾಪ್ರಭುತ್ವವಾದಿ ಆಗಿರುವುದು, ತೀರಾ ನಿರ್ದಿಷ್ಟ ವರ್ಗಗಳ ಪರ ಇರುವುದು ಮತ್ತು ಜನಸಾಮಾನ್ಯರ ವಿರುದ್ಧ ಇರುವುದು. ಹಾಗೆ ತೀವ್ರ ಕೋಮುವಾದಿ ಮನಸ್ಥಿತಿ ಇರುವುದು, ತೀವ್ರ ವರ್ಗ ಮನೋಭಾವ ಇರುವುದು. ಈ ನಿಟ್ಟಿನಲ್ಲಿ ಇಂಥವುಗಳ ಆಧಾರದ ಮೇಲೆ ರಾಜಕೀಯ ಪ್ರಜಾಪ್ರಭುತ್ವ ಕಟ್ಟಲ್ಪಟ್ಟರೆ ಅದು ಸಂಪೂರ್ಣ ನಗೆಪಾಟಲಿನದಾಗುತ್ತದೆ, ಅಸಗಂತವಾಗುತ್ತದೆ” ಎಂದು ಅಭಿಪ್ರಾಯಪಡುತ್ತಾರೆ.
ಡಾ.ಅಂಬೇಡ್ಕರ್ ಅವರು ಹೇಳುವ ಈ ಮಾದರಿಯಲ್ಲಿ ಜಸ್ಟಿಸ್ ರಾನಡೆಯವರು ಆ ಕಾಲದಲ್ಲಿ ಸಾಮಾಜಿಕ ಸುಧಾರಣೆಗೆ ಮುಂದಾಗಿದ್ದರು. ರಾನಡೆಯವರಿಗೆ ತೊಂದರೆ ಕೊಡಲು ಯಾರು ಮುಂದು ಬರಲಿಲ್ಲವೇ? ಅದಕ್ಕೆ ಅಂಬೇಡ್ಕರರು ಉದಾಹರಣೆ ಸಹಿತ ಮಾತು ಮುಂದುವರಿಸುತ್ತಾರೆ. “ಒಂದು ಬುದ್ಧಿವಂತ ಆದರೆ ಬದ್ಧತೆ ಇರುವ ಅಪ್ರಮಾಣಿಕ ಬುದ್ಧಿಜೀವಿ ವರ್ಗ ಸಾಂಪ್ರದಾಯಿಕತೆಯನ್ನು ರಕ್ಷಿಸಿಕೊಳ್ಳಲು ಮುಂದೆ ಬಂದಿತು ಮತ್ತು ಅದು ರಾನಡೆಯವರ ವಿರುದ್ಧ ಯುದ್ಧಕ್ಕಿಳಿಯಿತು”. ಅಂದರೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸಾಮಾಜಿಕ ಸುಧಾರಕ ರಾನಡೆಯವರ ವಿರುದ್ಧ ಅದೇ ಸಮುದಾಯದ ಸಂಪ್ರದಾಯವಾದಿಗಳು ಆ ಕಾಲದಲ್ಲೂ ಯುದ್ಧಕ್ಕಿಳಿದಿದ್ದನ್ನು ಗಮನಿಸಬಹುದು. ರಾನಡೆಯವರನ್ನು ನಿಂದಿಸಿದ್ದನ್ನು ಉಲ್ಲೇಖಿಸುತ್ತಾ ಅಂಬೇಡ್ಕರ್ ಅವರು, “ಸಾಮಾಜಿಕ ಸುಧಾರಣಾವಾದಿಗಳ ವಿರುದ್ಧ ಸಂಪ್ರದಾಯವಾದಿಗಳು ಬಳಸಿದ ತಂತ್ರ- ಬೈಗುಳಗಳ ಮೂಲಕ ನಿಂದಿಸುವುದು. ಖಂಡಿತ ಸಭ್ಯರು ಅಂಥವರ ವಿರುದ್ಧ ಹೋರಾಡುವುದು ಅಸಾಧ್ಯವಾಯಿತು” ಎಂದು ಕುಟುಕುತ್ತಾರೆ.
ಈ ಕೃತಿಯ ಮತ್ತೊಂದು ಪ್ರಮುಖ ಅಂಶ ‘ಗಾಂಧಿ ಮತ್ತು ಜಿನ್ನಾ’ ಅವರ ಬಗ್ಗೆ ಕುರಿತದ್ದು. ಗಾಂಧಿ ಮತ್ತು ಜಿನ್ನಾ ಅವರ ಹೆಸರು ಈ ಕೃತಿಯಲ್ಲಿ ಏಕೆ ಬರುತ್ತದೆ? ಅದು 1942ರ ಕಾಲಘಟ್ಟ. ಕೋಮು ವಿಭಜನೆಯ ಸದ್ದು ಕೇಳಿ ಬರುತ್ತಿದ್ದ ಕಾಲಘಟ್ಟ. ಬಾಬಾಸಾಹೇಬ್ ಅಂಬೇಡ್ಕರ್ ಅವರು 1942ರಲ್ಲಿ ತಾವು ಮಾಡಿದ ಈ ಭಾಷಣದಲ್ಲಿ ರಾನಡೆಯವರ ರಾಜಕೀಯ ನಿಲುವುಗಳನ್ನು ಗಾಂಧಿ ಮತ್ತು ಜಿನ್ನಾ ಅವರ ರಾಜಕೀಯ ನಿಲುವುಗಳ ಜೊತೆ ಹೋಲಿಸುತ್ತ ಅವರುಗಳನ್ನು ತಮ್ಮ ಈ ಕೃತಿಯಲ್ಲಿ ಪ್ರಸ್ತಾಪಿಸುತ್ತಾರೆ. ಮುಖ್ಯವಾಗಿ ಗಾಂಧಿ ಮತ್ತು ಜಿನ್ನಾರವರು ತಮ್ಮ ವ್ಯಕ್ತಿತ್ವವನ್ನು ಕಡೆದು ರೂಪಿಸಿಕೊಂಡದ್ದು, ಯಾರೂ ಪ್ರಶ್ನಿಸದಂತೆ ಮಾಡಿಕೊಂಡಿದ್ದನ್ನು ಅಂಬೇಡ್ಕರ್‌ರವರು ವಿಶ್ಲೇಷಿಸುತ್ತಾ ವಿಮರ್ಶೆಗೆ ಒಡ್ಡುತ್ತಾರೆ.

ಗಾಂಧಿ ಮತ್ತು ಜಿನ್ನಾರವರ ಇಂತಹ ವ್ಯಕ್ತಿತ್ವ ರೂಪುಗೊಳ್ಳುವಿಕೆಗೆ ಕಾರಣವಾದದ್ದು ಅಂದಿನ ಪತ್ರಿಕೋದ್ಯಮ. ಇದನ್ನು ವಿವರಿಸುತ್ತಾ ಅಂಬೇಡ್ಕರ್ ಅವರು, “ಗಾಂಧಿ ಮತ್ತು ಜಿನ್ನಾ ಅವರು ರೂಪಿಸಿಕೊಂಡಿರುವ ಇಂತಹ ಪಾರಮ್ಯ ಮತ್ತು ಪ್ರಶ್ನಿಸಲು ಸಾಧ್ಯವಾಗದಂತಹ ವ್ಯಕ್ತಿತ್ವ, ಅದಕ್ಕೆ ಕಾರಣ ಭಾರತದ ಈಗಿನ ಪತ್ರಿಕೋದ್ಯಮ. ಪತ್ರಿಕೋದ್ಯಮ ಹಿಂದೆ ಭಾರತದಲ್ಲಿ ಒಂದು ವೃತ್ತಿಯಾಗಿತ್ತು. ಈಗ ಅದು ಒಂದು ವ್ಯಾಪಾರವಾಗಿದೆ. ಸೋಪು ತಯಾರಿಕೆಗಿಂತ ಹೆಚ್ಚಿನ ನೈತಿಕ ಗುಣವನ್ನು ಈಗ ಅದು ಉಳಿಸಿಕೊಂಡಿಲ್ಲ. ಸಾರ್ವಜನಿಕರ ಪ್ರಾಮಾಣಿಕ ಸಲಹೆಗಾರನಾಗಿ ಅದು ತನ್ನನ್ನು ತಾನು ಪರಿಗಣಿಸುತ್ತಿಲ್ಲ. ಯಾವುದೇ ದುರುದ್ದೇಶ ಇಲ್ಲದೆ ಸುದ್ದಿಗೆ ಬಣ್ಣ ಕಟ್ಟದೆ ಸುದ್ದಿ ಕೊಡುವ, ಸಮುದಾಯದ ಹಿತಕ್ಕೆ ಒಳ್ಳೆಯದಾಗಲಿ ಎಂಬ ಕಾರಣ ಇಟ್ಟುಕೊಂಡು ಸಾರ್ವಜನಿಕ ನೀತಿಗಳನ್ನು ಪ್ರಸ್ತುತ ಪಡಿಸಬೇಕೆನ್ನುವ, ಯಾರು ಎಷ್ಟೇ ಎತ್ತರ ಇದ್ದರೂ ತಪ್ಪು ಮತ್ತು ಅಡ್ಡದಾರಿ ಹಿಡಿದವರನ್ನು ಯಾವುದೇ ಭಯವಿಲ್ಲದೆ ತಿದ್ದುವುದು ಖಂಡಿಸುವುದನ್ನು ತನ್ನ ಪ್ರಥಮ ಕರ್ತವ್ಯ ಎಂದು ಪತ್ರಿಕೋದ್ಯಮ ಅಂದುಕೊಳ್ಳುತ್ತಿಲ್ಲ. ವ್ಯಕ್ತಿಯೊಬ್ಬನನ್ನು ಒಪ್ಪಿಕೊಂಡು ಆತನನ್ನು ಪೂಜಿಸುವುದೇ ತಮ್ಮ ಪ್ರಮುಖ ಕರ್ತವ್ಯವೆಂದು ಇಂದು ಅವು ಪರಿಗಣಿಸಿವೆ” ಎಂದು ಟೀಕಾಪ್ರಹಾರ ನಡೆಸುತ್ತಾರೆ.
“ಇಂತಹ ಮಾದರಿಯ ಪತ್ರಿಕೋದ್ಯಮದ ಅಡಿಯಲ್ಲಿ ಸಹಜ ಸುದ್ದಿಯ ಸ್ಥಾನವನ್ನು ರೋಚಕತೆ ಆಕ್ರಮಿಸಿದೆ. ವೈಚಾರಿಕತೆಯಿಂದ ಒಡಮೂಡಬೇಕಾಗಿದ್ದ ಅಭಿಪ್ರಾಯದ ಸ್ಥಾನವನ್ನು ಅವೈಚಾರಿಕ ಮನೋವಿಕಾರ ಆಕ್ರಮಿಸಿದೆ. ಜವಾಬ್ದಾರಿಯುತ ಜನರ ಮನಸ್ಸುಗಳಿಗೆ ಕರೆ ಕೊಡಬೇಕಾಗಿದ್ದ ವಿಷಯಗಳ ಸ್ಥಾನವನ್ನು ಬೇಜವಾಬ್ದಾರಿಯುತ ಜನರ ಭಾವನೆಗಳಿಗೆ ಕರೆ ಕೊಡುವುದು ಆಕ್ರಮಿಸಿದೆ. ಪತ್ರಿಕೋದ್ಯಮ ಇಂದು ಆಫೀಸ್ ಬಾಯ್‌ಗಳಿಂದ ಆಫೀಸ್ ಬಾಯ್‌ಗಳಿಗೆ ಎಂಬಂತಾಗಿದೆ. ಡ್ರಮ್ ಬಾಯ್‌ಗಳಿಂದ ತಮ್ಮ ಹೀರೋಗಳನ್ನು ಹೊಗಳಲು ಬರೆಸಲ್ಪಟ್ಟ ರೀತಿಯಂತಿದೆ. ವ್ಯಕ್ತಿ ಪೂಜೆಗಾಗಿ ದೇಶದ ಹಿತಾಸಕ್ತಿಯನ್ನು ಇಷ್ಟೊಂದು ದಯನೀಯವಾಗಿ ಬಲಿ ಕೊಟ್ಟದ್ದು ಹಿಂದೆಂದೂ ನಡೆದಿಲ್ಲ. ಈ ಮಟ್ಟದ ಅಂಧಭಕ್ತಿಯ ರೂಪ ಪಡೆದಿದ್ದು ಭಾರತದಲ್ಲಿ ಹಿಂದೆಂದೂ ನಡೆದಿಲ್ಲ. ಈ ನಡುವೆ ಪತ್ರಿಕೋದ್ಯಮದ ಗೌರವವನ್ನು ಉಳಿಸಿಕೊಂಡಿರುವ ಒಂದಷ್ಟು ಜನರು ಇದ್ದಾರೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ. ಆದರೆ ಅಂಥವರ ಸಂಖ್ಯೆ ತೀರಾ ಕಡಿಮೆಯಿದೆ. ಅವರ ದನಿ ತೀರ ಕ್ಷೀಣವಾಗಿದೆ…” ಎಂದು ತಿಳಿಸುತ್ತಾರೆ.
ಇದನ್ನೂ ಓದಿರಿ: ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’
ಹೀಗೆ ರಾನಡೆಯವರನ್ನು ಗಾಂಧಿ ಮತ್ತು ಜಿನ್ನಾರವರಿಗೆ ಹೋಲಿಸುತ್ತ, ಅಂದಿನ ಪತ್ರಿಕೋದ್ಯಮವನ್ನು ಜೊತೆಗೆ ವಿಶ್ಲೇಷಿಸುತ್ತ ಬಾಬಾಸಾಹೇಬರು ಮಾಧ್ಯಮ ಕ್ಷೇತ್ರ ಅಂದು ತಲುಪಿದ್ದ ಸ್ಥಿತಿಯನ್ನು ತಮ್ಮ ಈ ಕೃತಿಯಲ್ಲಿ ಹೊರಗೆಡವುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರರ ಆ ಮಾತುಗಳು ಇಂದಿನ ಮಾಧ್ಯಮ ಕ್ಷೇತ್ರಕ್ಕೆ ಅದರಲ್ಲೂ ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ಅನ್ವಯಿಸುತ್ತಿವೆ ಎಂಬುದನ್ನು ಓದುಗರು ಗಮನಿಸಬಹುದು.
ಒಟ್ಟಾರೆ ಹೇಳುವುದಾದರೆ, ಡಾ.ಅಂಬೇಡ್ಕರ್‌ರವರ ಈ ಕಿರು ಕೃತಿ ಜಸ್ಟಿಸ್ ಮಹಾದೇವ ಗೋವಿಂದ ರಾನಡೆಯವರ ವ್ಯಕ್ತಿತ್ವವನ್ನು ವಿಮರ್ಶಿಸುತ್ತ ಅಂದಿನ ಭಾರತದ ಚಿತ್ರಣವನ್ನು, ವಿಶೇಷವಾಗಿ ಹಿಂದೂ ಧರ್ಮ, ಅಂದಿನ ಪತ್ರಿಕೋದ್ಯಮ, ಸಾಮಾಜಿಕ ಸ್ಥಿತಿಗತಿಯನ್ನು ತೆರೆದಿಡುತ್ತದೆ. ಮುಖ್ಯವಾಗಿ ಇಲ್ಲಿಯ ಈ ಎಲ್ಲ ವಿಚಾರಗಳು ಯಾವ ರೀತಿ ಈಗಲೂ ಪ್ರಸ್ತುತ, ಅದರಲ್ಲೂ ಸಂಘಪರಿವಾರ, ಕೋಮುವಾದ, ಅದರ ಪತ್ರಿಕೋದ್ಯಮದ ರೀತಿ, ವ್ಯಕ್ತಿ ಪೂಜೆ, ಸಾಮಾಜಿಕ ಮಾಧ್ಯಮಗಳಲ್ಲಿನ ಅಂಧಭಕ್ತಿ- ಹೀಗೆ ಎಲ್ಲದಕ್ಕೂ ಈ ಕೃತಿ ಕನ್ನಡಿ ಹಿಡಿಯುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೃತಿಗಳು ಮತ್ತು ಬರಹಗಳು ಸಾರ್ವಕಾಲಿಕ. ಭವಿಷ್ಯಕ್ಕೂ ವರ್ತಮಾನಕ್ಕೂ ಅವು ಪೀನ ಮಸೂರ ನಿಮ್ನ ಮಸೂರಗಳನ್ನು ಹಿಡಿಯುತ್ತವೆ. ವೈಚಾರಿಕತೆಯ ದಿಕ್ಕಾಗುತ್ತವೆ, ಬೆಳಕಾಗುತ್ತವೆ.

ರಘೋತ್ತಮ ಹೊ.ಬ
ಲೇಖಕ



