Beautiful Bengaluru | ನಗರದ ಅಂದ ಹೆಚ್ಚಿಸಿದ ಟಬೆಬೂಯ ಬಂದದ್ದು ಎಲ್ಲಿಂದ? ಇಲ್ಲಿದೆ ನೋಡಿ

Date:

1870ರಿಂದಲೂ ಟಬೆಬೂಯ ಮರಗಳು ಬೆಂಗಳೂರಿನಲ್ಲಿವೆ. ತಮ್ಮ ವರ್ಣರಂಜಿತ ಬಣ್ಣಗಳಿಂದ ಜನರ ಮನಸ್ಸಿಗೆ ನೆಮ್ಮದಿ, ಉಲ್ಲಾಸ ನೀಡುತ್ತಿವೆ. ವಸಂತ ಕಾಲದ ತಂಗಾಳಿಯೊಂದಿಗೆ ನಗರದ ಬೀದಿಗಳನ್ನು ಕಂಗೊಳಿಸುವಂತೆ ಮಾಡಿವೆ.

ಮುಂಜಾನೆಯ ಚಳಿ, ಮಧ್ಯಾಹ್ನದ ಬಿಸಿಲು, ರಾತ್ರಿಯ ಸೆಕೆಗೆ ರಾಜ್ಯ ರಾಜಧಾನಿಯ ಜನರು ಸುಸ್ತಾಗುತ್ತಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದೆಲ್ಲದರ ನಡುವೆಯೂ, ಬೆಂಗಳೂರಿಗರ ಮನಸಿಗೆ ವಸಂತಕಾಲದ ಹೂಗಳು ಮುದ ನೀಡುತ್ತಿವೆ. ಕೆಲಸದ ಒತ್ತಡದಲ್ಲಿ ಓಡುತ್ತಿರುವ ರೋಬೋ ನಾಗರಿಕರಿಗೆ ನಗರದ ಬೀದಿಗಳ ಹೂವುಗಳನ್ನು ಮೈದುಂಬಿಕೊಂಡು ನಿಂತಿರುವ ಮರಗಳು ನಿರಾಳ ನೀಡುತ್ತಿವೆ. ಈಗ ನಗರದಲ್ಲಿ ಎತ್ತ ಕಣ್ಣು ಹಾಯಿಸಿದರೂ ಗುಲಾಬಿ, ತಿಳಿ ಗುಲಾಬಿ, ನೀಲಿ, ಬಿಳಿ, ಹಳದಿ ಸೇರಿದಂತೆ ವರ್ಣರಂಜಿತ ಬಣ್ಣದ ಹೂವಿನ ಗಿಡಗಳು ಕಣ್ಮನ ಸೆಳೆಯುತ್ತಿವೆ. ಸಿಲಿಕಾನ್ ಸಿಟಿಯಾಗಿ ಬದಲಾಗಿದ್ದ ನಗರ ಈ ಒಂದು ತಿಂಗಳು ಅಕ್ಷರಶಃ ‘ಉದ್ಯಾನನಗರಿ’ಯಾಗಿ ಮಾರ್ಪಟ್ಟಿದೆ.

ಲಾಲ್‌ಬಾಗ್, ಕಬ್ಬನ್‌ಪಾರ್ಕ್ ಸೇರಿದಂತೆ ನಗರದೆಲ್ಲೆಡೆ ಟಬೆಬೂಯ ಮರಗಳಿಂದ ನಗರದ ಸೌಂದರ್ಯ ದುಪ್ಪಟ್ಟಾಗಿದೆ. ಈ ಬಣ್ಣದ ಹೂವುಗಳ ಹೊದಿಕೆಯನ್ನು ನೋಡಲು ಬೆಂಗಳೂರಿಗರು ಉತ್ಸುಕರಾಗಿದ್ದಾರೆ. ವರ್ಷಕ್ಕೊಮ್ಮೆ ಕಾಣುವ ಈ ಸೌಂದರ್ಯವನ್ನು ಜನರು ಫೋಟೋ ಕ್ಲಿಕ್ಕಿಸಿ ಆನಂದಿಸುತ್ತಿದ್ದಾರೆ.

ಹೂವುಗಳನ್ನು ಹೊದ್ದು ನಿಂತಿರುವ ಮರಗಳು ಬೆಂಗಳೂರಿನ ಬೀದಿಗಳನ್ನು ರಂಗುರಂಗಾಗಿಸಿವೆ. ಹೂವುಗಳಿಂದ ಕಂಗೊಳಿಸುತ್ತಿರುವ ಈ ಮರಗಳನ್ನು ದಕ್ಷಿಣ ಕೊರಿಯಾ, ಜಪಾನ್‌ನಂತಹ ದೇಶಗಳಲ್ಲಿ ಕಾಣಬಹುದು. ಆದರೆ, ಈಗ ಬೆಂಗಳೂರಿನ ಪ್ರತಿ ಪ್ರದೇಶಗಳಲ್ಲಿಯೂ ಜನರನ್ನು ಈ ಹೂವುಗಳು ಸೆಳೆಯುತ್ತಿವೆ.Tabebuia

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಂಗಳೂರಿಗೆ ಟಬೆಬೂಯ ಆಗಮನ

150 ವರ್ಷಗಳ ಹಿಂದೆ ಟಬೆಬೂಯ ಮರಗಳು ಬೆಂಗಳೂರಿಗೆ ಬಂದವು. ದಕ್ಷಿಣ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್‌ನಿಂದ ಟಬೆಬೂಯ ಮರಗಳನ್ನು ತರಲಾಯಿತು. ‘ಮೈಸೂರು ಮಹಾರಾಜರು’, ‘ಮಿರ್ಜಾ ಇಸ್ಮಾಯಿಲ್’ ಹಾಗೂ ‘ಬ್ರಿಟಿಷ್’ ಆಡಳಿತಾವಧಿಯಲ್ಲಿ ಈ ಮರಗಳು ನಗರಕ್ಕೆ ಬಂದಿವೆ. ಇದಕ್ಕೂ ಮುಂಚೆ ಒಂದೇ ಒಂದು ಟಬೆಬೂಯ ಮರ ಕೂಡಾ ನಗರದಲ್ಲಿ ಇರಲಿಲ್ಲ.

ಚಳಿಗಾಲ ಆರಂಭವಾದಂತೆ ಟಬೆಬೂಯ ಮರದ ಪೂರ್ತಿ ಎಲೆಗಳು ಇಲ್ಲದೇ ಬರಿ ಹೂಗಳೇ ಕಂಗೊಳಿಸುತ್ತವೆ. ಆದರೆ, ಈ ಹೂವುಗಳ ಜೀವಿತಾವಧಿ ಕೇವಲ ಒಂದು ತಿಂಗಳು. ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

ಈ ಸುದ್ದಿ ಓದಿದ್ದೀರಾ? ಹೊಸ ತಲೆಮಾರಿಗೆ ಹಳೆಯ ನೆನಪು 3 | ಸಂಪಂಗಿ ಕೆರೆಯ ಮೇಲೆ ತಲೆಯೆತ್ತಿ ಮೆರೆಯುತ್ತಿರುವ ಕಂಠೀರವ ಕ್ರೀಡಾಂಗಣ

1870ರಲ್ಲಿ ಟಬೆಬೂಯ ಮರಗಳು ಬೆಂಗಳೂರಿಗೆ ಬಂದವು. ದೀರ್ಘಕಾಲ ಬೆಂಗಳೂರಿನ ಲಾಲ್‌ಬಾಗ್ ಸಸ್ಯತೋಟದ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸಿದ ಜಾನ್ ಕ್ಯಾಮರಾನ್ ಅವರು ದೇಶ-ವಿದೇಶಗಳಿಂದ ಅನೇಕ ಪ್ರಕಾರದ ಸಸ್ಯಗಳನ್ನು ತರಿಸಿ ನೆಟ್ಟರು. ಇವರ ನಂತರ ಲಾಲ್‌ಬಾಗ್ ಸಸ್ಯೋದ್ಯಾನದ ಕ್ಯುರೇಟರ್ ಆಗಿ ಸೇವೆ ಸಲ್ಲಿಸಿದ್ದ ಜಿ.ಎಚ್.ಕೃಂಬಿಗಲ್, ಹೆಚ್ ಸಿ ಜವರಾಯ, ಡಾ. ಎಂ ಎಚ್ ಮರಿಗೌಡರ ಪರಿಶ್ರಮದ ಕಾರಣದಿಂದಾಗಿ ನಗರದಲ್ಲಿ ಇಷ್ಟೊಂದು ಟಬೆಬೂಯ ಮರಗಳಾದವು. ಇವರುಗಳ ಪಾತ್ರ ಪ್ರಮುಖವಾಗಿದೆ.

ಈ ಮರಗಳು 80 ರಿಂದ 100 ವರ್ಷ ಬದುಕುತ್ತವೆ. ಬೆಂಗಳೂರಿನ ಕಬ್ಬನ್‌ಪಾರ್ಕ್, ಲಾಲ್‌ಬಾಗ್, ಸರ್ಕಾರಿ ಸಂಸ್ಥೆಗಳು, ಕಾಲೇಜುಗಳು, ಆಸ್ಪತ್ರೆಗಳ ಮುಂದೆ ಹೆಚ್ಚಾಗಿ ಈ ಮರಗಳನ್ನು ಕಾಣಬಹುದು. ಬೆಂಗಳೂರಿನಲ್ಲಿ ಪ್ರಸ್ತುತವಾಗಿ ಟಬೆಬೂಯದ 10 ತಳಿಯ ಮರಗಳಿವೆ. ಅವುಗಳು ಇಂತಿವೆ.Tabebuia

ಟಬೆಬೂಯ ಅವೆಲನೆಡೆ (Tabebuia avalanidae)

ಬೆಂಗಳೂರಿನಲ್ಲಿ ಈ ಟಬೆಬೂಯ ಮರಗಳು ನವೆಂಬರ್ ನಿಂದ ಮೇ ತನಕ ಹೂ ಬಿಡುತ್ತವೆ. ಟಬೆಬೂಯ ಅವೆಲನೆಡೆ (Tabebuia avalanidae) ಚಳಿಗಾಲದ ಸಮಯದಲ್ಲಿ ಅಂದರೆ, ನವೆಂಬರ್ 15, 20ರಲ್ಲಿ ಹೂವುಗಳು ಬಿಡಲು ಆರಂಭವಾಗುತ್ತದೆ. ಈ ಮರದ ಎಲ್ಲ ಎಲೆಗಳು ಉದುರುತ್ತವೆ. ಜೋರು ಮಳೆ ಬಂದರೆ ಹೂವುಗಳು ಬೀಳುತ್ತವೆ. ಈ ವರ್ಷ ಡಿಸೆಂಬರ್‌ನಲ್ಲಿ ಅನಿರೀಕ್ಷಿತ ಮಳೆ ಬಂದ ಕಾರಣ ಟಬೆಬೂಯ ಅವೆಲನೆಡೆ ಹೂವುಗಳು ಹಾಳಾದವು. ಇಡೀ ದೇಶದಲ್ಲಿ ಬೆಂಗಳೂರು ‘ಟಬೆಬೂಯ ಅವೆಲನೆಡೆ’ಗೆ ಹೆಸರುವಾಸಿಯಾಗಿದೆ.

ಈಶಾನ್ಯ ಭಾರತದಲ್ಲಿ ಅಂತಾರಾಷ್ಟ್ರೀಯ ಚೆರ್ರಿ ಬ್ಲಾಸಮ್ ಹೂವುಗಳ ಪ್ರದರ್ಶನ ಮೇಘಾಲಯದಲ್ಲಿ ಏರ್ಪಡಿಸಿದ್ದರು. ಆ ಸಮಯದಲ್ಲಿ ಮೇಘಾಲಯದಲ್ಲಿ ಒಂದೇ ಒಂದು ಚೆರ್ರಿ ಬ್ಲಾಸಮ್ ಹೂವು ಸಹ ಬಿಟ್ಟಿರಲಿಲ್ಲ. ಆದರೆ, ಬೆಂಗಳೂರಿನಲ್ಲಿ ನವೆಂಬರ್ 15ಕ್ಕೆ ಕರಾರುವಾಕ್ಕಾಗಿ ಹೂವುಗಳು ಅರಳಲು ಪ್ರಾರಂಭವಾಗಿ ಬಿಡುತ್ತವೆ. ಡಿಸೆಂಬರ್‌ನಲ್ಲಿ ಹೆಚ್ಚಾಗಿ ಹೂವುಬಿಡುತ್ತವೆ. ಕಬ್ಬನ್‌ಪಾರ್ಕ್‌ನಲ್ಲಿ ಈ ಅರಳಿದ ಹೂವುಗಳನ್ನು ಕಣ್ಣುತುಂಬಿಸಿಕೊಳ್ಳಲು ಎರಡು ಕಣ್ಣು ಸಾಲದು, ಅಷ್ಟು ಸುಂದರವಾಗಿ ಕಾಣಿಸುತ್ತದೆ. ಜನವರಿಯಿಂದ ಫೆಬ್ರುವವರಿಗೂ ಈ ಟಬೆಬೂಯ ಅವೆಲನೆಡೆ ಹೂವುಗಳು ಇರುತ್ತವೆ.Tabebuia

ಟಬೆಬೂಯ ಅರ್ಜೆಂನ್ಸಿಯಾ (Tabebuia Argentea)

ಟಬೆಬೂಯ ಅವೆಲನೆಡೆ ಮುಗಿದ ನಂತರ ಹಳದಿ ಬಣ್ಣದ ಸುಂದರ ಟಬೆಬೂಯ ಅರ್ಜೆಂನ್ಸಿಯಾದ ದಿನ ಪ್ರಾರಂಭವಾಗುತ್ತದೆ. ಇದು ಅವೆಲನೆಡೆ ಹೂವಿನಷ್ಟು ಸುಂದರವಾಗಿರದಿದ್ದರೂ, ನಗರದ ತುಂಬೆಲ್ಲ ಹಳದಿ ಬಣ್ಣ ಕಾಣಿಸುತ್ತದೆ. ಬೆಂಗಳೂರಿನ ಗುಟ್ಟಹಳ್ಳಿ ಸರ್ಕಲ್‌ನಲ್ಲಿ ಹಾಗೂ ಜ್ಞಾನಭಾರತಿ ಆವರಣದಲ್ಲಿ ಈ ತಳಿಯ ಸಾವಿರಾರು ಮರಗಳಿವೆ. ತೇಂವಾಶ ಕಡಿಮೆ ಇದ್ದು ಉಷ್ಣವಲಯವಿದ್ದರೆ, ಈ ಹೂವುಗಳು ಬೇಗನೆ ಅರಳುತ್ತವೆ. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದ್ದರೆ, ಹೂವುಗಳು ಅರಳುವುದು ಸ್ವಲ್ಪ ತಡವಾಗುತ್ತದೆ.

ಟಬೆಬೂಯ ಸ್ಪೆಕ್ಟಾಬಿಲಿಸ್ (Tabebuia spectabilis)

ಟಬೆಬೂಯ ಸ್ಪೆಕ್ಟಾಬಿಲಿಸ್ ಲಾಲ್‌ಬಾಗ್‌ನಲ್ಲಿ 10, ಕೃಷಿ ವಿಶ್ವವಿದ್ಯಾಲಯದಲ್ಲಿ 3, ವಿಧಾನಸೌಧದ ಮುಂದೆ 2 ಒಟ್ಟಾರೆಯಾಗಿ ಈ ತಳಿಯ ಮರಗಳು ಬೆಂಗಳೂರಿನಲ್ಲಿ ಕೇವಲ 20 ಇವೆ. ಈ ಮರದ ಹೂವಿನ ಬಣ್ಣ ಹಳದಿ ಬಂಗಾರ (ಗೋಲ್ಡನ್ ಯೆಲ್ಲೋ) ಬಣ್ಣದಲ್ಲಿರುತ್ತದೆ. ಬೆಂಗಳೂರಿನ ವಾತಾವರಣದಲ್ಲಿ ಈ ಮರಗಳು ಬೆಳೆಯುವುದು ಕಡಿಮೆ. ಇದು ಮಾರ್ಚ್‌ನಲ್ಲಿ ಕಾಣಸಿಗುತ್ತದೆ.Tabebuia

ಟಬೆಬೂಯ ರೋಸಿಯಾ (Tabebuia rosea)

ಮಾರ್ಚ್ ಕೊನೆಗೆ ಟಬೆಬೂಯ ರೋಸಿಯಾ ಪ್ರಾರಂಭವಾಗುತ್ತದೆ. ಬೆಂಗಳೂರಿನಲ್ಲಿ ಈ ಹೂವಿನ ಗಿಡಗಳು ಬೆಂಕಿ ಹತ್ತಿದ ಹಾಗೇ ಕಾಣಿಸುತ್ತದೆ. ವಿಮಾನದ ಮೇಲಿನಿಂದ ನೋಡಿದಾಗ ಈ ಗಿಡಗಳು ಅತ್ಯಂತ ಸುಂದರವಾಗಿ ಕಾಣಿಸುತ್ತವೆ. ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 10,000ಕ್ಕೂ ಹೆಚ್ಚು ಟಬೆಬೂಯ ರೋಸಿಯಾ ಮರಗಳಿವೆ.

ಈ ಟಬೆಬೂಯ ರೋಸಿಯಾ ‘ಬಿಗ್ನೋನಿಯೇಸಿ’ ಕುಟುಂಬಕ್ಕೆ ಸೇರಿದ್ದಾಗಿದೆ. ಇದರ ವೈಜ್ಞಾನಿಕ ಹೆಸರು ಕೂಡಾ ‘ಬಿಗ್ನೋನಿಯೇಸಿ’ ಆಗಿದೆ. ಈ ಹೂವು ಮೂಲತಃವಾಗಿ ಪೆರು ದೇಶದ್ದಾಗಿದೆ. ಈ ಗುಲಾಬಿ ಬಣ್ಣದ ಹೂಗಳು ಕಾಲಕ್ಕನುಗುಣವಾಗಿ ಅರಳುತ್ತದೆ.

ಹಿಂದಿಯಲ್ಲಿ ಇದನ್ನು ‘ಬಸಂತ್ ರಾಣಿ’ ಎಂದು ಕರೆಯಲಾಗುತ್ತದೆ. ಟಬೆಬೂಯ ರೋಸಿಯಾ ಸಸ್ಯಗಳು ಶೀಘ್ರವಾಗಿ ಬೆಳೆಯುತ್ತವೆ. ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್‌ನಲ್ಲಿ ಸಾಮಾನ್ಯವಾಗಿ ಹೂಬಿಡುತ್ತವೆ. ಈ ಮರಗಳು ಬೆಚ್ಚಗಿನ ಮತ್ತು ಶುಷ್ಕ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಸಸ್ಯಗಳು 2 ರಿಂದ 3 ವರ್ಷಗಳಲ್ಲಿ ಹೂವುಗಳನ್ನು ಬಿಡಲು ಪ್ರಾರಂಭಿಸುತ್ತವೆ. ವಸಂತ ಕಾಲದಲ್ಲಿ ಹೂ ಬಿಡುವ ಇವುಗಳ ಎಲೆಗಳು ಚಳಿಗಾಲದಲ್ಲಿ ಉದುರುತ್ತವೆ.Tabebuia

ಟಬೆಬೂಯ ರೋಸಿಯಾ ಆಲ್ಬಾ (Tabebuia rosea Alba)

ಇದು ಬಿಳಿ ಬಣ್ಣದ ಹೂವುಗಳನ್ನು ಹೊಂದಿರುತ್ತವೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಈ ಮರವನ್ನು ಕಾಣಬಹುದು.

ಟಬೆಬೂಯ ಪೆಂಟಾಫಿಲ್ಲಾ (Tabebuia pentaphilla)

ಇದು ಎಲೆಗಳ ಜತೆಗೆ ಹೂವು ಇರುತ್ತದೆ. ಇದರ ಹೂವಿನ ಬಣ್ಣ ತಿಳಿ ಗುಲಾಬಿ. ಎಲೆ ಇರುವುದರಿಂದ ಇದರ ಹೂವು ಅಷ್ಟಾಗಿ ಎದ್ದು ಕಾಣುವುದಿಲ್ಲ. ಇದು ಐದು ಎಳೆಯ ಹೂವಿನ ದಳವನ್ನು ಹೊಂದಿರುತ್ತದೆ. ಬೆಂಗಳೂರಿನ ಲಾಲ್‌ಬಾಗ್, ಕಬ್ಬನ್‌ಪಾರ್ಕ್ ಹಾಗೂ ನಗರದ ರಸ್ತೆ ಬದಿಗಳಲ್ಲಿ ಈ ಮರವನ್ನು ಕಾಣಬಹುದು.

ಟಬೆಬೂಯ ಟ್ರಿಫಿಲ್ಲಾ (Tabebuia trifilla)

ಈ ಮರದ ಹೂವುಗಳು ಮೂರು ದಳವನ್ನು ಹೊಂದಿರುತ್ತವೆ.

ಟಬೆಬೂಯ ಪಲ್ಲಿಡಾ (Tabebuia pallida), ಟಬೆಬೂಯ ಡೊನ್ನೆಲ್‌ ಸ್ಮಿಥಿ (Tabebuia donnelsmithi) ತಳಿಯ ಮರಗಳು ಬೆಂಗಳೂರಿನಲ್ಲಿ ಇವೆ. ಆದರೆ, ಇವು ಉಳಿದ ಮರಗಳಂತೆ ಅಷ್ಟೊಂದು ಆಕರ್ಷಣೀಯ ಮರಗಳಲ್ಲ.

ಜವಹರಲಾಲ್ ನೆಹರು ಅವರು ನೆಟ್ಟ ಟಬೆಬೂಯ ಮರ

1955ರಲ್ಲಿ ಲಾಲ್‌ಬಾಗ್‌ನಲ್ಲಿ ಜವಹರಲಾಲ್‌ ನೆಹರು ಅವರು ಟಬೆಬೂಯ ಮರವನ್ನು ನೆಟ್ಟಿದ್ದರು. ಆ ಮರ ಇನ್ನೂ ಇದೆ. 1965ರಲ್ಲಿ ಮಾರ್ಷಲ್ ಕಿಟೋ ಹಾಗೂ ಇಂದಿರಾಗಾಂಧಿ ಅವರು ನಗರದಲ್ಲಿ ಈ ತಳಿಯ ಮರಗಳನ್ನು ನೆಟ್ಟಿದ್ದಾರೆ.

ಬೆಂಗಳೂರು ನಗರದ ರಸ್ತೆಬದಿಗೆ ಈ ಮರಗಳು ಉತ್ತಮ ಮರಗಳಾಗಿದ್ದು, ನೆರಳನ್ನು ನೀಡುತ್ತವೆ. ಜತೆಗೆ ನಗರಕ್ಕೆ ಅಂದವನ್ನೂ ನೀಡುತ್ತವೆ. ಪರಿಸರದ ದೃಷ್ಟಿಯಿಂದ ಮಾಲಿನ್ಯ ಸುರಕ್ಷಿತವಾಗಿವೆ. ನಗರದ ಉದ್ಯಾನಗಳಲ್ಲಿ ಇವು ಮತ್ತಷ್ಟು ವಿಶಾಲವಾಗಿ ಬೆಳೆಯುತ್ತವೆ.Tabebuia

ಟಬೆಬೂಯದಲ್ಲಿ 90ಕ್ಕೂ ಹೆಚ್ಚು ಬಗೆಯ ಹಲವು ತಳಿಗಳಿವೆ. ಈ ಮರಗಳು ಕ್ಯೂಬಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೆಕ್ಸಿಕೊ, ಕೆರಿಬಿಯನ್, ಅರ್ಜೆಂಟೀನಾ, ಅಮೆರಿಕ ಸೇರಿದಂತೆ ಉಪಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.

ಉಪ ಉಷ್ಣವಲಯದಲ್ಲಿ ಬೆಳೆಯುವ ಇವು ಸುಮಾರು 100 ಅಡಿಗಳಷ್ಟು (30 ಮೀಟರ್) ಎತ್ತರ ಇರುತ್ತವೆ. ಕೋಸ್ಟಾರಿಕಾದಲ್ಲಿ ಇದನ್ನು ‘ಸವನ್ನಾ ಓಕ್’ ಎಂದೇ ಕರೆಯುತ್ತಾರೆ. ಇದಕ್ಕೆ 20 ರಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಬೇಕು. ಎಲ್ಲ ವಿಧದ ಮಣ್ಣುಗಳಲ್ಲೂ ಬೆಳೆಯಬಲ್ಲ ಟಬೆಬೂಯಗೆ ವಾರ್ಷಿಕ 500 ಮಿಲಿಮೀಟರ್ ಮಳೆ ಬೇಕು. ಈ ಹೂವನ್ನು ‘ಎಲ್-ಸಾಲ್ವೆಡಾರ್’ ದೇಶ ತನ್ನ ರಾಷ್ಟ್ರೀಯ ಹೂವಾಗಿ ಘೋಷಿಸಿದೆ.

ಬೆಂಗಳೂರು ಹಾಗೂ ಮೈಸೂರಿಗೆ ಟಬೆಬೂಯ ಆಗಮನ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ದಿವಾನರಾಗಿ ಸೇವೆ ಸಲ್ಲಿಸಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಬೆಂಗಳೂರು ಹಾಗೂ ಮೈಸೂರಿಗೆ ‘ಉದ್ಯಾನನಗರಿ’ ಎಂದು ಹೆಸರು ಬರಲು ಪ್ರಮುಖ ಕಾರಣರಾದವರು.

ಮೈಸೂರು ಸಂಸ್ಥಾನ ಹಾಗೂ ಬೆಂಗಳೂರು ನಗರವನ್ನು ಸುಂದರವಾಗಿಸಲು ಮತ್ತು ಬೇಸಿಗೆಯಲ್ಲಿ ಜನರಿಗೆ ನೆರಳಿನ ಜೊತೆಗೆ ಸೌಂದರ್ಯವನ್ನೂ ಆಸ್ವಾದಿಸಲೆಂದು ಚಿಂತಿಸಿ ಈ ಮರಗಳನ್ನು ನೆಡಲು ಇಸ್ಮಾಯಿಲ್ ಅವರು ಚಿಂತಿಸಿದರು. ಅದರಂತೆಯೇ, ಬೆಂಗಳೂರಿನಲ್ಲಿ ಕಬ್ಬನಪಾರ್ಕ್, ಲಾಲ್‌ಬಾಗ್ ಹಾಗೂ ಮೈಸೂರಿನಲ್ಲಿ ‘ಕೃಷ್ಣರಾಜ ಸಾಗರದ ಬೃಂದಾವನ’ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದವರು.Tabebuia

ಸ್ವಯಂ ತೋಟಗಾರಿಕಾ ಪ್ರವೀಣರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಅವರು, ನಗರದ ರಸ್ತೆಗಳ ಬದಿ ಸೌಂದರ್ಯ ಹೆಚ್ಚಿಸಲು, ನಗರಗಳಲ್ಲಿ ಅತ್ಯುತ್ತಮ ಉದ್ಯಾನವನಗಳು ಮತ್ತು ಸಸ್ಯರಾಶಿಯನ್ನು ನಿರ್ಮಿಸಲು ವಿಶ್ವದೆಲ್ಲೆಡೆಯಿಂದ ಶ್ರೇಷ್ಠ ಚಿಂತಕರನ್ನು ಕರೆಸಿ, ಇಲ್ಲಿನ ಮರಗಳು ವರ್ಷವಿಡೀ ಹಸಿರಾಗಿರುವಂತೆ, ಎಲ್ಲ ಕಾಲದಲ್ಲೂ ವರ್ಣಾಲಂಕಾರದ ಪುಷ್ಪಗಳಿಂದ ಕಂಗೊಳಿಸುವಂತೆಯೂ ಕ್ರಮ ಕೈಗೊಂಡರು. ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲೂ ಇಂತಹ ಉದ್ಯಾನವನದ ವಾತಾವರಣವನ್ನು ಸೃಷ್ಟಿಸುವಲ್ಲಿ ವಿಶೇಷ ಕಾಳಜಿ ವಹಿಸಿದ್ದರು.

ನಂತರದಲ್ಲಿ ತೋಟಗಾರಿಕಾ ತಜ್ಞರಾದ ಜಾನ್ ಕ್ಯಾಮರಾನ್ ಸೇರಿದಂತೆ ಹಲವು ಚಿಂತಕರೊಂದಿಗೆ ಬೆಂಗಳೂರಿನಲ್ಲಿ ನಾನಾ ಜಾತಿಯ ಹೂವುಗಳು ಮತ್ತು ಸಸ್ಯಗಳನ್ನು ಬೆಳೆಯುವ ಬಗ್ಗೆ ಚರ್ಚಿಸಿ, ಟಬೆಬೂಯ ಮರಗಳನ್ನು ನಗರದಲ್ಲೆಡೆ ಬೆಳೆಸಿದರು.

ಟಬೆಬೂಯ ಮರಗಳ ಬಗ್ಗೆ ಪರಿಸರ ಪ್ರೇಮಿಗಳು ತಮ್ಮ ಅಭಿಪ್ರಾಯವನ್ನು ಈ ದಿನ.ಕಾಮ್ ನೊಂದಿಗೆ ಹಂಚಿಕೊಂಡಿದ್ದಾರೆ. ಅವರೆಲ್ಲರ ಮನದ ಮಾತು ಹೀಗಿದೆ:

“ಆಲದಮರ, ರೇನ್ ಟ್ರೀ ಹಾಗೂ ಅರಳಿಮರವನ್ನು ಬೆಂಗಳೂರಿನಲ್ಲಿ ಬೆಳೆಯಬಾರದು ಎಂದು ರಾಜ್ಯ ಸರ್ಕಾರ ಹೇಳಿದೆ. ಅರಣ್ಯ ಇಲಾಖೆ ಕೂಡಾ ಈ ಮರಗಳನ್ನು ಬೆಳೆಯಬಾರದು ಎಂದು ಸೂಚಿಸಿದೆ. ಅಂದರೆ ಈಗ ಇರುವ ಮರಗಳನ್ನು ಮಾತ್ರ ಸಂರಕ್ಷಿಸಬೇಕು ಎಂದು ಸರ್ಕಾರ ಹೇಳಿದೆ. ನಗರದಲ್ಲಿ ಒಂದು ಅರಳಿ ಮರ ಸರಿಸುಮಾರು ಎಕರೆ ಲೆಕ್ಕದಷ್ಟು ಜಾಗದಲ್ಲಿ ವಿಸ್ತಾರವಾಗಿ ಬೆಳೆಯುತ್ತದೆ. ಆದರೆ, ನಗರದಲ್ಲಿ 1 ಚದರ ಅಡಿಯ ಜಾಗದ ಬೆಲೆ ಸರಿಸುಮಾರು ₹25,000 ಇರುವಾಗ ಯಾರು ಬೆಳೆಯುತ್ತಾರೆ. ಹಾಗಾಗಿ, ಇನ್ನುಮುಂದೆ ನಗರದಲ್ಲಿ ಈ ಮರಗಳನ್ನು ಬೆಳೆಯಬಾರದು ಎಂದು ಸರ್ಕಾರ ಹೇಳುತ್ತದೆ. ಬೆಂಗಳೂರಿನಲ್ಲಿ ಈ ಮರಗಳು ಇನ್ನು ಮುಂದೆ ಮುಗಿದ ಇತಿಹಾಸ” ಎಂದು ನಿವೃತ್ತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಎಸ್ ನಾರಾಯಣಸ್ವಾಮಿ ಈ ದಿನ.ಕಾಮ್‌ಗೆ ತಿಳಿಸಿದರು.Tabebuia

“ಬೆಂಗಳೂರಿಗೆ ಹೊರಗಿನ ದೇಶದ ಮರಗಳು ಬಂದು ಆಕ್ರಮಿಸಿವೆ. ಇದರಿಂದ ನಮ್ಮ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ನಮ್ಮಲ್ಲಿ ಹತ್ತಿಮರ, ಅರಳಿಮರ, ಆಲದಮರಗಳಿದ್ದವು. ಇವೆ ಎಂದು ಕೆಲವರು ಹೇಳುತ್ತಾರೆ. ಆದರೆ, ಅದರಲ್ಲಿ ಯಾವುದೇ ನಿಜಾಂಶವಿಲ್ಲ. ಕೇವಲ 100 ವರ್ಷದ ಹಿಂದೆ ಟೊಮೆಟೊ, ಆಲೂಗಡ್ಡೆ ಇರಲಿಲ್ಲ. ಅಂದ ಮಾತ್ರಕ್ಕೆ ಹೊರದೇಶದಿಂದ ಯಾವ ಮರವನ್ನೂ ತರಬಾರದು ಅಂತಾನಾ?” ಎಂದು ಪ್ರಶ್ನಿಸಿದರು.

“ಅವೆನ್ಯೂ ರಸ್ತೆಗಳಲ್ಲಿ ಮರಗಳನ್ನು ನೆಡಲು ಈ ಮರಗಳು ಸಹಕಾರಿಯಾಗಿವೆ. ಬೆಳೆಯುವುದಕ್ಕೆ ಹೆಚ್ಚು ಪ್ರದೇಶದ ಅಗತ್ಯವಿಲ್ಲ. ಹಾಗಾಗಿ, ಈ ಎಲ್ಲ ಕಾರಣಗಳಿಂದ ಟಬೆಬೂಯ ಬೆಳೆಯುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ” ಎಂದು ಹೇಳಿದರು.

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಲೇಖಕ, ಪರಿಸರವಾದಿ ನಾಗೇಶ್ ಹೆಗಡೆ, “ವಸಂತಕಾಲದಲ್ಲಿ ಬೆಂಗಳೂರು ನಗರ ಸುಂದರವಾಗಿ ಕಂಗೊಳಿಸುತ್ತದೆ. ನಗರದೆಲ್ಲೆಡೆ ಇರುವ ಈ ಮರಗಳ ಸಂತತಿ ಇದೀಗ ಕಡಿಮೆಯಾಗಿದೆ. ಈ ಹಿಂದೆ ನಗರದೆಲ್ಲೆಡೆ ಹೆಚ್ಚಾಗಿದ್ದ ಈ ಮರಗಳು ‘ಸಿಲಿಕಾನ್ ಸಿಟಿ’ ಎಂಬ ನವೀಕರಣಕ್ಕೆ ಸಿಲುಕಿ ಬೆಂದುಹೋಗಿವೆ. ಹಲವೆಡೆ ಮರಗಳನ್ನು ಕಡಿಯಲಾಗುತ್ತಿದೆ” ಎಂದು ತಿಳಿಸಿದರು.

ಟಬೆಬೂಯ ಹೂವುಗಳ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಸಾಹಿತಿ ಪ್ರತಿಭಾ ನಂದಕುಮಾರ್, “ಪ್ರತಿ ಮರದ ಜೊತೆಗೆ ವ್ಯಕ್ತಿಯ ಬಾಂಧವ್ಯವಿರುತ್ತದೆ. ಅದರಂತೆಯೇ ವರ್ಷಕ್ಕೊಮ್ಮೆ ಅರಳುವ ಈ ಬಣ್ಣದ ಹೂವುಗಳನ್ನು ಕಂಡಾಗ ಉಲ್ಲಾಸವಾಗುತ್ತದೆ. ಟಬೆಬೂಯ ಮಾತ್ರವಲ್ಲದೇ ಬೆಂಗಳೂರು ಏಷ್ಯಾದಲ್ಲಿಯೇ ಹೂವಿಗೆ ಪ್ರಸಿದ್ಧಿಯನ್ನು ಹೊಂದಿದೆ” ಎಂದರು.Tabebuia

‘ಜೇಮ್ಸ್’ ಚಿತ್ರದ ನಿರ್ದೇಶಕ ಚೇತನ ಕುಮಾರ ಈ ದಿನ.ಕಾಮ್ ಜತೆಗೆ ಮಾತನಾಡಿ, “ಪ್ರತಿ ವರ್ಷ ಈ ಕಾಲ ಸಂತಸ ಕೊಡುತ್ತದೆ. ಬೇರೆ ಯಾವುದೋ ಹೊರದೇಶದಲ್ಲಿ ನೆಲೆಸಿದ್ದೀವಿ ಎಂಬ ಭಾವನೆಯನ್ನು ಮೂಡಿಸುತ್ತದೆ. ವಿಮಾನದಲ್ಲಿ ಹಾರಾಟ ಮಾಡಿದ ಸಂದರ್ಭದಲ್ಲಿ ಮೇಲಿನಿಂದ ನೋಡಿದಾಗ ಭೂಮಿಯ ಮೇಲಿನ ದೃಶ್ಯ ಅದ್ಭುತವಾಗಿ ಕಾಣಿಸುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬ್ರಿಟಿಷರ ಕಾಲದಿಂದಲೂ ನಾನಾ ತಳಿಯ ಮರಗಳು ಹಾಗೂ ಹೂವುಗಳನ್ನು ಬ್ರಿಟಿಷರು ಇಲ್ಲಿ ತಂದು ನೆಟ್ಟಿದ್ದಾರೆ. ಸಂತಸವಾಗುತ್ತದೆ” ಎಂದರು.

‘ಆ ದಿನಗಳು’ ಚಿತ್ರ ನಿರ್ದೇಶಕ ಚೈತನ್ಯ ಈ ದಿನ.ಕಾಮ್ ಜತೆಗೆ ಮಾತನಾಡಿ, “ಹೈದರಾಲಿ, ಟಿಪ್ಪು ಸುಲ್ತಾನ್, ಬ್ರಿಟಿಷರ ಕಾಲದಿಂದಲೂ ನಮ್ಮಲ್ಲಿ ಉದ್ಯಾನವನಗಳು ಇವೆ. ಇದು ನಮ್ಮ ಅದೃಷ್ಟ. ಸಣ್ಣ ವಯಸ್ಸಿನಿಂದ ನನಗೆ ಇರುವ ನೆನಪು ಇದು. ನವೆಂಬರ್‌ನಿಂದ ಹಳದಿ, ಗುಲಾಬಿ ಸೇರಿದಂತೆ ಬಣ್ಣದ ಹೂವಿನ ಹಾಸಿಗೆ ರಸ್ತೆಯ ಮೇಲೆ ಇರುತ್ತದೆ. ಇದು ಬೆಂಗಳೂರು ಬಿಟ್ಟು ಬೇರೆ ಯಾವ ನಗರಕ್ಕೆ ಹೋದರು ಕಾಣಸಿಗುವುದಿಲ್ಲ. ಆ ದಿನಗಳು ಸಿನಿಮಾವನ್ನು ಬೆಂಗಳೂರಿನಲ್ಲಿಯೇ ಶೂಟ್ ಮಾಡಿದ್ದೇವೆ. ಬೆಂಗಳೂರನ್ನು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದೇವೆ” ಎಂದರು.

ಸಾಹಿತಿ ಕೆ ಪುಟ್ಟಸ್ವಾಮಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಉದ್ಯಾನ ನಿರ್ಮಾಣ ಮಾಡುವುದು ಮೊಘಲರ ಕಾಲದಿಂದಲೂ ಇತ್ತು. ಹೈದರಾಲಿ, ಟಿಪ್ಪು ಸುಲ್ತಾನ್ ಅವರು ಉದ್ಯಾನವನ್ನು ನಿರ್ಮಾಣ ಮಾಡುವುದಕ್ಕೆ ಹೆಚ್ಚು ಒತ್ತು ನೀಡಿದ್ದರು. ಕ್ಯಾಮರಾನ್ ಅವರ ಕಾಲದಲ್ಲಿ ನಗರಕ್ಕೆ ಟಬೆಬೂಯ ಮರಗಳನ್ನು ಪರಿಚಯಿಸಲಾಯಿತು. ದಕ್ಷಿಣ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಿಂದ ತಂದ ಮರಗಳಿವು. ಬ್ರಿಟಿಷರ ಕಾಲದಲ್ಲಿ ಈ ಮರಗಳು ಪರಿಚಯವಾದವು” ಎಂದರು.Tabebuia

“ಟಬೆಬೂಯ ರೋಸಿಯಾ ಬೆಂಗಳೂರನ್ನು ಗುರುತಿಸುವ ಬ್ರಾಂಡ್ ಆಗಿದೆ. ಜನರು ಈ ಹೂವುಗಳನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಜಾನ್ ಕ್ಯಾಮರಾನ್, ಕೃಂಬಿಗಲ್, ಜವರಾಯ, ಮರಿಗೌಡರು ಎಲ್ಲರೂ ಪ್ರಜ್ಞಾಪೂರ್ವಕವಾಗಿ ಯೋಚಿಸಿ ನಗರಕ್ಕೆ ಉತ್ತಮ ಮರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ವರ್ಷದ ಪ್ರತಿ ತಿಂಗಳು ಹೂವುಗಳು ಅರಳುವಂತಹ ಮರಗಳನ್ನು ನೆಟ್ಟಿದ್ದಾರೆ” ಎಂದು ತಿಳಿಸಿದರು.

“ಮೇ ತಿಂಗಳಿನಲ್ಲಿ ಗುಲ್ಮೊಹರ್, ಬೇಸಿಗೆಯಲ್ಲಿ ಟಬೆಬೂಯ ಹೂವುಗಳು ಅರಳುತ್ತವೆ. ನಗರದಲ್ಲಿ ವರ್ಷಪೂರ್ತಿ ಹೂವುಗಳು ಅರಳುವ ಯೋಜನೆಯನ್ನು ಮಹನೀಯರು ನಮಗೆ ನೀಡಿದ್ದಾರೆ. ಆದರೆ, ಈಗ ನಗರೀಕರಣದ ಹೆಸರಿನಲ್ಲಿ ಎಲ್ಲ ಹೂವಿನ ಮರಗಳನ್ನು ಕಡಿದು ಹಾಕುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಏನೇ ಇರಲಿ, ಪ್ರಸ್ತುತ ನಗರದಲ್ಲಿ ಮೂಡಿರುವ ಈ ರಂಗುರಂಗಾದ ಹೂವುಗಳ ಸುರಿಮಳೆಗೆ ಜನರು ಮನಸೋತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಮಗೆ ಇಷ್ಟವಾದ ಬಣ್ಣದ ಹೂವಿನ ಗಿಡದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಹಬ್ಬ ಮಾಡುತ್ತಿದ್ದಾರೆ. ಟ್ವಿಟರ್ ನಲ್ಲಿ ಹೂನಗರಿಯನ್ನು ಟ್ರೆಂಡಿಂಗ್ ನಲ್ಲಿಟ್ಟಿದ್ದಾರೆ. ಸುಂದರವಾದ ಬೆಂಗಳೂರು ಎಂದು ಟ್ಯಾಗ್ ನೀಡುತ್ತಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು |ತಲಾ ₹1 ಲಕ್ಷ ದಂಡ ಬಾಕಿ ಉಳಿಸಿಕೊಂಡಿವೆ 123 ವಾಹನಗಳು

ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು...

ಮೈಸೂರು | ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ: ಸಾಹಿತಿ ದೇವನೂರು ಮಹಾದೇವ ಕರೆ

ಕೆಂಡವನ್ನು ಮಡಿಲಿನಲ್ಲಿ ಇಟ್ಟುಕೊಂಡ ಅನುಭವ ನಮ್ಮದು, ರೈತರನ್ನು ಭಾರತದ ಬೆನ್ನೆಲುಬು ಎನ್ನುತ್ತಾರೆ....

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಡೀ ದಿನ ಕಳೆದೆ ಎಂದು ಸುಳ್ಳು ಹೇಳಿದ ಯೂಟ್ಯೂಬರ್‌ ಬಂಧನ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ವಿಡಿಯೋ ರೆಕಾರ್ಡ್ ಮಾಡಿ...

ಯಾವುದೇ ಆಮೀಷ, ಪ್ರೇರೇಪಣೆಗಳಿಗೆ ಒಳಗಾಗದೆ ಮತ ಚಲಾಯಿಸಿ: ತುಷಾರ್ ಗಿರಿನಾಥ್

ಪ್ರತಿಯೊಬ್ಬ ಯುವ ಮತದಾರರು ಚುಣಾವಣಾ ರಾಯಭಾರಿಗಳಾಗಿದ್ದು, ಯಾವುದೇ ಆಮೀಷ, ಪ್ರೇರೇಪಣೆಗಳಿಗೆ ಒಳಗಾಗದೆ...