“ನಾನೊಬ್ಬ ಮಂತ್ರಿಯಾಗಿದ್ದವಳು. ಆದರೂ ನನ್ನ ಬಳಿ ಪಾಸ್‌ಪೋರ್ಟ್ ಇಲ್ಲ. ನಾನು ಎಸ್‌ಎಸ್‌ಎಲ್‌ಸಿವರೆಗೂ ಓದಿಲ್ಲ. ಅಂದರೆ, ಈಗ ನಾನು ಎಸ್‌ಐಆರ್‌ನಿಂದಾಗಿ ಮತಪಟ್ಟಿಯಿಂದ ಹೊರಗುಳಿಯುತ್ತೇನೆ. ಮಾಜಿ ಮಂತ್ರಿಯಾಗಿ ನನ್ನ ಸ್ಥಿತಿಯೇ ಹೀಗಾದರೆ, ಸಾಮಾನ್ಯ ಬಡ ಜನರು, ದಲಿತರು, ಆದಿವಾಸಿ, ಅಲ್ಪಸಂಖ್ಯಾತರ ಪರಿಸ್ಥಿತಿ ಏನು” ಎಂದು ಮಾಜಿ ಸಚಿವೆ, ಹೋರಾಟಗಾರ್ತಿ ಬಿ.ಟಿ ಲಲಿತಾ ನಾಯಕ್ ಪ್ರಶ್ನಿಸಿದ್ದಾರೆ.
ಜೂನ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆ ಆಯೋಜಿಸಿರುವ ಪ್ರತಿರೋಧ ಸಮಾವೇಶದ ಕುರಿತು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿ ಅವರು ಮಾತನಾಡಿದರು. “ಬಹುಸಂಖ್ಯಾತ ಜನರು ಸ್ವಂತ ಆಸ್ತಿ, ನೆಲೆ, ಎಸ್‌ಎಸ್‌ಎಲ್‌ಸಿ ವರೆಗಿನ ಶಿಕ್ಷಣ, ಪಾಸ್‌ಪೋರ್ಟ್ ಹೊಂದಿಲ್ಲ. ಆದರೆ, ಜನರ ಬಳಿ ಇಲ್ಲದ ದಾಖಲೆಗಳನ್ನೇ ಎಸ್‌ಐಆರ್‌ನಲ್ಲಿ ಚುನಾವಣಾ ಆಯೋಗ ಕೇಳುತ್ತಿದೆ. ಕೇಂದ್ರ ಸರ್ಕಾರವು ಬಡ ಜನರನ್ನು ‘ನೀನು ನನಗೆ ಮತ ಹಾಕಲು ಯೋಗ್ಯನಲ್ಲ’ವೆಂದು ಹೊರಹಾಕುತ್ತಿದೆ. ಜನರ ಮತದಾನದ ಹಕ್ಕನ್ನುಉಳಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು” ಎಂಧು ಹೇಳಿದ್ದಾರೆ.
“ಜನರ ಬಳಿ ಇಲ್ಲದ ದಾಖಲೆಗಳನ್ನು ಕೇಳುವ ಈಗಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಬೇಕು. ನಮ್ಮ ಬಳಿ ಇರುವ ದಾಖಲೆಗಳನ್ನೇ ಆಧರಿಸಿ ಮತಪಟ್ಟಿ ಪರಿಷ್ಕರಣೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ನಾಯಕ ಜೆ.ಎಂ ವೀರಸಂಗಯ್ಯ, “ಎಸ್‌ಐಆರ್ ವಿರುದ್ಧ ರಾಜ್ಯಾದ್ಯಂತ ಐದು ತಂಡಗಳಾಗಿ ಜಾಗೃತಿ ಜಾಥಾ ನಡೆಸಲಾಗಿದೆ. 31 ಜಿಲ್ಲೆಗಳಲ್ಲಿ 100 ಕಡೆ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದೇವೆ. 75 ಲಕ್ಷ ಜನರನ್ನು ತಲುಪಿದ್ದೇವೆ. ಜನರು ಆತಂಕಗೊಂಡಿದ್ದಾರೆ. ಎಸ್‌ಐಆರ್‌ನಿಂದ ಮತದಾನದ ಹಕ್ಕು ಉಳಿಸಿಕೊಳ್ಳುವ ಕುರಿತು ಕಳವಳಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
“ಸಂವಿಧಾನ ಕೊಟ್ಟ ಮತದಾನದ ಹಕ್ಕನ್ನು ಎಸ್‌ಐಆರ್ ಮೂಲಕ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಕಸಿದುಕೊಳ್ಳುತ್ತಿವೆ. ಈ ಎಸ್‌ಐಆರ್‌ನಿಂದ ರಾಜ್ಯದಲ್ಲಿ ಒಂದೇ ಒಂದು ಅರ್ಹ ಮತ ಡಿಲೀಟ್ ಆಗಬಾರದು. ಜನರ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ರಾಜ್ಯದ ಕಾಂಗ್ರೆಸ್ ಸರ್ಕಾರವು ಏನೆಲ್ಲ ಮಾಡಬೇಕು ಎಂಬುದರ ಕುರಿತು 4 ಪ್ರಮುಖ ಸೂತ್ರಗಳು ರಚಿಸಿದ್ದೇವೆ. ಆ ಸೂತ್ರಗಳನ್ನು ಈಗಾಗಲೇ ಸರ್ಕಾರಕ್ಕೂ ಕಳಿಸಿದ್ದೇವೆ. ನಾಳಿನ (ಜೂನ್ 20) ಸಮಾವೇಶಕ್ಕೆ ಬಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೇವಲ ಮನವಿ ಸ್ವೀಕರಿಸಿ, ಆಶ್ವಾಸನೆ ನೀಡುವುದಲ್ಲ. ತಮ್ಮ ಪಕ್ಷ ಮತ್ತು ಸರ್ಕಾರವು ಎಸ್‌ಐಆರ್ ವಿರುದ್ಧ ಏನು ಮಾಡಲಿದೆ ಎಂಬುದಕ್ಕೆ ಸಿದ್ಧರಾಗಿ ಬರಬೇಕು. ತಾವು ರೂಪುರೇಷೆಗಳನ್ನು ರಾಜ್ಯದ ಜನರ ಮುಂದಿಡಬೇಕು” ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಮುಸ್ಲಿಂ ನಾಯಕ ಮೊಹಮದ್ ಯೂಸಫ್ ಕನ್ನಿ, “2024ರಲ್ಲಿ ಯಾರು ಮೋದಿ ಸರ್ಕಾರಕ್ಕೆ ಓಟು ಹಾಕಿದ್ದರೋ, ಅವರ ವಿರುದ್ಧವೇ ಎಸ್‌ಐಆರ್ ನಡೆಯುತ್ತಿದೆ. ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಈ ಹಿಂದೆ, ‘ನಿಮ್ಮ ಓಟು ನಿಮ್ಮ ಹಕ್ಕು, ಮತ ಚಲಾಯಿಸಿ, ಮತದಾನ ಕಡೆಗಣಿಸಬಾರದು’ ಎಂದೆಲ್ಲ ಫಲಕಗಳನ್ನು ಹಾಕಲಾಗುತ್ತಿತ್ತು. ಜನರದಲ್ಲಿ ಮತದಾನದ ಜಾಗೃತಿ ಮೂಡಿಸಲಾಗುತ್ತಿತ್ತು. ಆದರೆ, ಈಗೇನಾಗಿದೆ? ಎಸ್‌ಐಆರ್ ಬಗ್ಗೆ ಸರ್ಕಾರ/ಚುನಾವಣಾ ಆಯೋಗ ಯಾವುದೇ ಜಾಗೃತಿ ಮೂಡಿಸುತ್ತಿಲ್ಲ. ಬದಲಾಗಿ, ಎಸ್‌ಐಆರ್‌ಅನ್ನು ಹೇರಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಎಸ್‌ಐಆರ್‌ಗೆ ದಾಖಲೆಯಾಗಿ ಪಾಸ್‌ಪೋರ್ಟ್ ಕೇಳಲಾಗುತ್ತಿದೆ. ಆದರೆ, ಸರ್ಕಾರ ಮತ್ತು ಆಯೋಗಕ್ಕೆ ಗೊತ್ತಿರಬೇಕಾದ ವಿಷಯ; ದೇಶದಲ್ಲಿ ಕೇವಲ 19% ಜನರ ಬಳಿ ಮಾತ್ರ ಪಾಸ್‌ಪೋರ್ಟ್ ಇದೆ. ಉಳಿದವರ ಕತೆಯೇನು? ಅವರಿಗೆ ಸರ್ಕಾರ ಪಾಸ್‌ಪೋರ್ಟ್ ಕೊಡುತ್ತದೆಯೇ? ಮತ್ತೊಂದು ದಾಖಲೆಯಾಗಿ, ಜನನ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಆದರೆ, ಸರ್ಕಾರಗಳು ಕಳೆದ ದಶಕಕ್ಕೂ ಮುನ್ನ ಎಲ್ಲರಿಗೂ ಜನ್ಮ ಪ್ರಮಾಣ ಪತ್ರ ಕೊಡುತ್ತಿದ್ದವೇ? ಇಲ್ಲವೆಂದ ಮೇಲೆ ಜನ್ಮ ಪ್ರಮಾಣ ಪತ್ರ ಸಲ್ಲಿಸುವುದಾದರೂ ಹೇಗೆ? ಅಂತೆಯೇ, ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ ಕೇಳುತ್ತಿದ್ದಾರೆ! ಇಂದಿಗೂ ಬಹುಸಂಖ್ಯಾತ ದಲಿತ, ಆದಿವಾಸಿ, ಅಲೆಮಾರಿ ಸಮುದಾಯದ ಜನರು/ಯುವಜನರು ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣವನ್ನೇ ಪಡೆದಿಲ್ಲ. ಅವರೆಲ್ಲರೂ ಯಾವ ದಾಖಲೆ ನೀಡಬೇಕು. ಜನರ ಬಳಿ ಇಲ್ಲದ ದಾಖಲೆ ಕೇಳಿ, ಅವರೆಲ್ಲರನ್ನೂ ಹೊರಹಾಕುವ ಹುನ್ನಾರ ನಡೆದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: SIR ಎಂಬ BJPಯ ಆಶ್ವಮೇಧ ಕುದುರೆಯನ್ನು ಕರ್ನಾಟಕ ಕಟ್ಟಿಹಾಕಲಿದೆ: ನೂರ್ ಶ್ರೀಧರ್
ಮತ್ತೋರ್ವ ಮುಸ್ಲಿಂ ನಾಯಕ ಅಮ್ಜದ್ ಪಾಷಾ ಅವರು ಮಾತನಾಡಿ, “ಎಸ್‌ಐಆರ್ ಎಂಬುದು ಅಸಂವಿಧಾನಿಕ, ದೋಷಪೂರಿತ, ದುರುದ್ದೇಶಪೂರಿತ ಪ್ರಕ್ರಿಯೆ. ಚುನಾವಣಾ ಆಯೋಗದ ಆಯುಕ್ತರ ಆಯ್ಕೆಯೇ ವಂಚನೆಯಿಂದ ಕೂಡಿದೆ. ಆಯೋಗವು ಪಾರದರ್ಶಕತೆಯಿಂದ ಕೆಲಸ ಮಾಡಬೇಕೆಂಬ ಕಾರಣಕ್ಕೆ ಆಯೋಗದ ಆಯ್ಕೆ ಸಮಿತಿಯಲ್ಲಿ ಆಳುವ ಪಕ್ಷದಿಂದ ಪ್ರಧಾನಿ, ವಿರೋಧ ಪಕ್ಷದಿಂದ ವಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇರುತ್ತಿದ್ದರು. ಆದರೆ, ಈ ಆಯ್ಕೆ ಸಮತಿಯನ್ನೇ ಮೋದಿ ಸರ್ಕಾರ ಬುಡಮೇಲು ಮಾಡಿದೆ. ಪ್ರಧಾನಿ ಮತ್ತು ಅವರ ಆಯ್ಕೆಯ ಕೇಂದ್ರ ಸಚಿವರು ಹಾಗೂ ವಿಪಕ್ಷ ನಾಯಕರಿರುವ ಸಮತಿಯನ್ನು ರೂಪಿಸಲಾಗಿದೆ. ಇಲ್ಲಿ, ಸರ್ಕಾರದ ಪರವಾಗಿ ಇಬ್ಬರು ಸದಸ್ಯರಿರುವಾಗ, ಪಾರದರ್ಶಕತೆ ಎಲ್ಲಿಂದ ಸಾಧ್ಯ? ಆಯ್ಕೆಯಾಗುವ ಆಯುಕ್ತರು ಆಳುವ ಪಕ್ಷದ ಪರವಾದ ಧೋರಣೆಯೊಂದಿಗೆ, ಕೆಲಸ ಮಾಡುತ್ತಾರೆ. ಈಗ ಅದೇ ನಡೆಯುತ್ತಿದೆ. ಹಾಲಿ ಆಯುಕ್ತರು ಬಿಜೆಪಿಯ ಕೈಗೊಂಬೆಯಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದೇಶದ ಮೊದಲ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಅವರು ‘ಒಬ್ಬನೇ ಒಬ್ಬ ದೇಶದ ಪ್ರಜೆ ಮತದಾನದ ಹಕ್ಕಿನಿಂದ ಹೊರಗುಳಿಯಬಾರದು’ ಎಂದಿದ್ದರು. ಆದರೆ, ಈಗೇನಾಗುತ್ತಿದೆ? ಬಿಜೆಪಿ ವಿರೋಧಿ ಮತಗಳನ್ನು ಹುಡುಕಿ ಹುಡುಕಿ ಸಾರಾಸಗಟಾಗಿ ಡಿಲೀಟ್ ಮಾಡಲಾಗುತ್ತಿದೆ. ಎಸ್‌ಐಆರ್‌ಅಲ್ಲಿ ಹೆಸರಿಲ್ಲ ಅಂದರೆ, ನಾಗರಿಕತ್ವವೂ ರದ್ದಾಗುತ್ತದೆ, ಅವರನ್ನು ಡಿಟೆನ್ಶನ್ ಕ್ಯಾಂಪ್‌ನಲ್ಲಿ ಇರಿಸಲಾಗುತ್ತದೆ ಹಾಗೂ ಸರ್ಕಾರಿ ಯೋಜನೆ, ಮೂಲ ಸೌಕರ್ಯಗಳಿಂದ ಹೊರಹಾಕಲಾಗುತ್ತದೆ ಎಂಬ ಆತಂಕ ಹುಟ್ಟು ಹಾಕಿದ್ದಾರೆ. ಈ ಜನ ವಿರೋಧಿ ಎಸ್‌ಐಆರ್ ರದ್ದಾಗಬೇಕು” ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನೂರ್ ಶ್ರೀಧರ್, ತಾರಾ ರಾವ್, ಮಮತಾ, ಮನೋಜ್, ಪವನ್ ಇತರರು ಇದ್ದರು.



