ಮಣ್ಣಿನಲ್ಲಿ ಸಹಜವಾಗಿ ಸೂಕ್ಷ್ಮಜೀವಿಗಳಿರುತ್ತವೆ. ಆದರೆ ಕೆಲವು ಕಡೆ ಸಾಕಷ್ಟು ಪ್ರಮಾಣದಲ್ಲಿ ಸೂಕ್ಷ್ಮಜೀವಿಗಳಿರುವುದಿಲ್ಲ. ಅಂತಹ ಕೊರತೆಯನ್ನು ನೀಗಿಸಲು ರೈತ ಮಿತ್ರರಾದ ಸೂಕ್ಷ್ಮಜೀವಿಗಳನ್ನು ಪ್ರಯೋಗಾಲಯಗಳಲ್ಲಿ ಉತ್ಪಾದಿಸಿ ‘ಜೈವಿಕ ಗೊಬ್ಬರಗಳು’ (ಬಯೋ ಫರ್ಟಿಲೈಜರ್ಸ್) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಒದಗಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳು ಮತ್ತು ಹಲವಾರು ಕಂಪನಿಗಳು ಜೈವಿಕ ಗೊಬ್ಬರಗಳನ್ನು ಉತ್ಪಾದಿಸುತ್ತಿವೆ.
ಮಣ್ಣಿನಲ್ಲಿ ಬ್ಯಾಕ್ಟೀರಿಯಾ, ಸಯನೋಬ್ಯಾಕ್ಟೀರಿಯಾ, ಶಿಲೀಂಧ್ರ, ಯೀಸ್ಟ್ ಮತ್ತು ಆಕ್ಟಿನೋಮೈಸೀಟ್ಸ್ ಎಂಬ ಸೂಕ್ಷ್ಮಜೀವಿಗಳಿವೆ. ಅವುಗಳಲ್ಲಿ ಬಹುತೇಕವು ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು. ಕಣ್ಣಿಗೆ ಕಾಣದ ಕೋಟಿ ಕೋಟಿ ರೈತ ಮಿತ್ರರು. ಅವು ಸಾಕಷ್ಟು ಸಂಖ್ಯೆಯಲ್ಲಿ ಮಣ್ಣಿನಲ್ಲಿದ್ದರೆ ಅಂತಹ ಮಣ್ಣು ಫಲವತ್ತಾದ ಮಣ್ಣು, ಆರೋಗ್ಯಕರ ಮಣ್ಣು. ಫಲವತ್ತಾದ ಮಣ್ಣಿನಲ್ಲಿ ಬೆಳೆದ ಯಾವುದೇ ಬೆಳೆಯಾದರೂ ರೈತರಿಗೆ ಶೇ. 20ರಿಂದ 25ರಷ್ಟು ಅಧಿಕ ಇಳುವರಿ ಬರುತ್ತದೆ. ಭೂಮಿಯಲ್ಲಿ ಸರ್ವೇಸಾಮಾನ್ಯವಾಗಿ ವಾಸಿಸುವ ಈ ಸೂಕ್ಷ್ಮಜೀವಿಗಳು ಒಂದು ಗ್ರಾಂ ಮಣ್ಣಿನಲ್ಲಿ 100 ಕೋಟಿ ಬ್ಯಾಕ್ಟೀರಿಯಾಗಳು, 10 ಕೋಟಿ ಆಕ್ಟಿನೋಮೈಸೀಟ್ಸ್‍ಗಳು, 10 ಲಕ್ಷ ಶಿಲೀಂಧ್ರಗಳು ಮುಂತಾದ ಅಸಂಖ್ಯಾತ ಸೂಕ್ಷ್ಮಜೀವಿಗಳಿರುತ್ತವೆ. ಪ್ರತಿ ನೂರು ಗ್ರಾಂ ಮಣ್ಣಿನಲ್ಲಿ ಅವುಗಳ ತೂಕವು ಅಂದಾಜು ಅರ್ಧ ಗ್ರಾಂನಷ್ಟಿರುತ್ತದೆ! ಹಲವು ಬಗೆಯ ವೈಜ್ಞಾನಿಕ ಮಾಹಿತಿಯಿರುವ ಪ್ರಗತಿಪರ ರೈತರಿಗೆ ಮಣ್ಣಿನ ಸೂಕ್ಷ್ಮಜೀವಿಗಳ ಮಾಹಿತಿಯಂತೂ ಇದ್ದೇ ಇರುತ್ತದೆ.
ಸೂಕ್ಷ್ಮಜೀವಿಗಳಿಂದ ಜೈವಿಕ ಗೊಬ್ಬರಗಳು
ಮಣ್ಣಿನಲ್ಲಿ ಸಹಜವಾಗಿ ಸೂಕ್ಷ್ಮಜೀವಿಗಳಿರುತ್ತವೆ. ಆದರೆ ಕೆಲವು ಕಡೆ ಸಾಕಷ್ಟು ಪ್ರಮಾಣದಲ್ಲಿ ಸೂಕ್ಷ್ಮಜೀವಿಗಳಿರುವುದಿಲ್ಲ. ಅಂತಹ ಕೊರತೆಯನ್ನು ನೀಗಿಸಲು ರೈತ ಮಿತ್ರರಾದ ಸೂಕ್ಷ್ಮಜೀವಿಗಳನ್ನು ಪ್ರಯೋಗಾಲಯಗಳಲ್ಲಿ ಉತ್ಪಾದಿಸಿ ‘ಜೈವಿಕ ಗೊಬ್ಬರಗಳು’ (ಬಯೋ ಫರ್ಟಿಲೈಜರ್ಸ್) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಒದಗಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳು ಮತ್ತು ಹಲವಾರು ಕಂಪನಿಗಳು ಜೈವಿಕ ಗೊಬ್ಬರಗಳನ್ನು ಉತ್ಪಾದಿಸುತ್ತಿವೆ. ನಿರಂತರವಾಗಿ ಒಂದಾದ ಮೇಲೆ ಮತ್ತೊಂದು ಬೆಳೆ ಬೆಳೆಯುವ ರೈತರು ಅಂತಹ ಜೈವಿಕ ಗೊಬ್ಬರಗಳನ್ನು ಬಳಸಿ, ಮಣ್ಣಿನ ಆರೋಗ್ಯ ಕಾಪಾಡಿ, ಅಧಿಕ ಇಳುವರಿ ಪಡೆದು, ಹೆಚ್ಚಿನ ಲಾಭ ಪಡೆಯಬಹುದಾಗಿದೆ.
ಸೂಕ್ಷ್ಮಜೀವಿಗಳ ಕಾರ್ಯಕ್ಷಮತೆ
ಸೂಕ್ಷ್ಮಜೀವಿಗಳನ್ನು ಬಳಸಿ ತಯಾರು ಮಾಡುವ ‘ಜೈವಿಕ ಗೊಬ್ಬರಗಳ’ ಬಳಕೆಯ ಅನುಕೂಲತೆಗಳನ್ನು ತಿಳಿಸುವುದು ಈ ಲೇಖನದ ಉದ್ದೇಶ. ಸೂಕ್ಷ್ಮಜೀವಿಗಳ ಕಾರ್ಯಕ್ಷಮತೆಯನ್ನು ಹೀಗೆ ವಿವರಿಸಬಹುದು :
- ಸಾರಜನಕವನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳು
- ರಂಜಕವನ್ನು ಕರಗಿಸುವ ಸೂಕ್ಷ್ಮಜೀವಿಗಳು
- ಪೊಟ್ಯಾಷ್, ಗಂಧಕ ಹಾಗೂ ಇತರೆ ಪೋಷಕಾಂಶಗಳನ್ನು ಗಿಡಕ್ಕೆ ಒದಗಿಸುವ ಸೂಕ್ಷ್ಮಜೀವಿಗಳು
- ಗೊಬ್ಬರ ಮತ್ತಿತರ ಸಾವಯವ ವಸ್ತುಗಳನ್ನು ಕೊಳೆಸುವ ಸೂಕ್ಷ್ಮಜೀವಿಗಳು
- ಬೆಳೆಗೆ ಬೇಕಾದ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮತ್ತು ಮರುಬಳಕೆ
- ಮಣ್ಣಿನಲ್ಲಿರುವ ರೋಗಕಾರಕ ಸೂಕ್ಷ್ಮಜೀವಿಗಳನ್ನು ಸ್ಪರ್ಧಾತ್ಮಕವಾಗಿ ಹೊರಗಿಡುವಿಕೆ (Competitive exclusion)
- ಮಣ್ಣಿನಲ್ಲಿರುವ ರೋಗಕಾರಕ ಸೂಕ್ಷ್ಮಜೀವಿಗಳನ್ನು ನಿಯಂತ್ರಿಸುವ ಪ್ರತಿಜೈವಿಕಗಳ (ಆಂಟಿಬಯಾಟಿಕ್‍ಗಳ) ಉತ್ಪಾದನೆ
- ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುವ ಆಕ್ಸಿನ್ಸ್, ಜಿಬರಲಿನ್ಸ್, ಸೈಟೋಕೈನಿನ್ ಮುಂತಾದ ಸಸ್ಯ ಚೋದಕಗಳ (ಫೈಟೋಹಾರ್ಮೋನ್ಸ್) ಉತ್ಪಾದನೆ
- ಭೂಮಿಯ ಫಲವತ್ತತೆಯ ವೃದ್ಧಿ
- ಬೀಜ ಮೊಳಕೆಯೊಡೆಯಲು ಸಹಕಾರಿ
- ಬೆಳೆಗಳಲ್ಲಿ ಗಾಢವಾದ ಹಸಿರೆಲೆಗಳ ಉತ್ಪಾದನೆ
- ದ್ಯುತಿ ಸಂಶ್ಲೇಷಣಾ ಕ್ರಿಯೆಯ ಸಾಮಥ್ರ್ಯದ ವೃದ್ಧಿ, ಇತ್ಯಾದಿ. ಜೈವಿಕ ಗೊಬ್ಬರಗಳನ್ನು ಬಳಸುವ ಮೂಲಕ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು. ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆಗೆ ಹೆಚ್ಚಿನ ಮಹತ್ವವಿದೆ.
ಸೂಕ್ಷ್ಮಜೀವಿಗಳ ಹೆಸರುಗಳು
ಮಣ್ಣಿನಲ್ಲಿರುವ ಅತಿ ಮುಖ್ಯವಾದ ಸೂಕ್ಷ್ಮಜೀವಿಗಳೆಂದರೆ ರೈಜೋಬಿಯಂ, ಅಜಟೋಬ್ಯಾಕ್ಟರ್, ಅಜೊಸ್ಪೈರಿಲಮ್, ನೀಲಿ ಹಸಿರು ಪಾಚಿ, ಗ್ಲುಕನೋಬ್ಯಾಕ್ಟರ್, ಫ್ರಾಂಕಿಯಾ, ಬ್ಯಾಸಿಲಸ್, ಸೂಡೋಮೊನಾಸ್, ಮೈಕೋರೈಜಾ ಮತ್ತು ಟ್ರೈಕೋಡರ್ಮಾ.
ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳಾಗಲಿ ಅಥವಾ ವಾಣಿಜ್ಯಾತ್ಮಕವಾಗಿ ಲಭ್ಯವಿರುವ ಜೈವಿಕ ಗೊಬ್ಬರದ ರೂಪದ ಸೂಕ್ಷ್ಮಜೀವಿಗಳನ್ನು ಮಣ್ಣಿಗೆ ಸೇರಿಸಿ ಬಳಸಿದಾಗ, ಪ್ರತಿಯೊಂದು ಸೂಕ್ಷ್ಮಜೀವಿಯೂ ನಿರ್ದಿಷ್ಟ ಕಾರ್ಯಗಳನ್ನು ನೆರವೇರಿಸುತ್ತವೆ. ಅಂತಹ ಉಪಯೋಗಗಳನ್ನು ಈ ಮುಂದಿನಂತೆ ವಿವರಿಸಲಾಗಿದೆ.

ಬಹುತೇಕ ಸೂಕ್ಷ್ಮಜೀವಿಗಳು ವಾಯುಮಂಡಲದ ಸಾರಜನಕವನ್ನು ಹೀರಿಕೊಂಡು ಅದನ್ನು ಅಮೋನಿಯಾ ಅಥವಾ ನೈಟ್ರೇಟ್ ರೂಪಕ್ಕೆ ಪರಿವರ್ತನೆಗೊಳಿಸಿ ಗಿಡದ ಬೆಳವಣಿಗೆಗೆ ಒದಗಿಸುತ್ತವೆ. ಅದರಿಂದ ಸಸ್ಯಗಳಲ್ಲಿ ಸಸಾರಜನಕ (ಪ್ರೋಟೀನ್) ತಯಾರಾಗುತ್ತದೆ. ನಾವು ತಿನ್ನುವ ಯಾವುದೇ ಸಸ್ಯಜನಕವಾದ ಸಸಾರಜನಕ (ಪ್ಲಾಂಟ್ ಪ್ರೋಟೀನ್) ಉತ್ಪತ್ತಿಯಾಗುವ ಬಗೆಯಿದು.
ರೈಜೋಬಿಯಂ (Rhizobium): ವಾಯುಮಂಡಲದಲ್ಲಿ ಶೇ. 79ರಷ್ಟು ಸಾರಜನಕವಿರುತ್ತದೆ. ಅಂತಹ ಸಾರಜನಕವನ್ನು ರೈಜೋಬಿಯಂ ಸೂಕ್ಷ್ಮಜೀವಿಗಳು ಹೀರಿಕೊಂಡು ಅದನ್ನು ಅಮೋನಿಯಾ ಅಥವಾ ನೈಟ್ರೇಟ್ ರೂಪಕ್ಕೆ ಪರಿವರ್ತನೆಗೊಳಿಸಿ ಗಿಡದ ಬೆಳವಣಿಗೆಗೆ ಒದಗಿಸುತ್ತವೆ. ಅದರಿಂದ ಸಸ್ಯಗಳಲ್ಲಿ ಸಸಾರಜನಕ (ಪ್ರೋಟೀನ್) ತಯಾರಾಗುತ್ತದೆ. ಈ ಕಾರಣದಿಂದ ಸಾರಜನಕ (ನೈಟ್ರೋಜನ್) ಗೊಬ್ಬರದ ಬಳಕೆಯನ್ನು ಶೇ. 20ರಿಂದ 25ರಷ್ಟು ಕಡಿಮೆ ಮಾಡಬಹುದು. ತೊಗರಿ, ಉದ್ದು, ಅಲಸಂದೆ, ಕಡಲೆ, ಹೆಸರು, ಹುರಳಿ, ಶೇಂಗಾ, ಸೋಯಾ ಅವರೆ ಮುಂತಾದ ಬೆಳೆಗಳಿಗೆ ಸೂಕ್ತ ಸೂಕ್ಷ್ಮಜೀವಿ ಗೊಬ್ಬರವೆಂದರೆ ರೈಜೋಬಿಯಂ ಜೈವಿಕ ಗೊಬ್ಬರ.
ಅಜಟೋಬ್ಯಾಕ್ಟರ್ (Azotobacter): ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿಕೊಂಡು ಸ್ಥಿರೀಕರಿಸಿ ಅಮೋನಿಯಾ ರೂಪದಲ್ಲಿ ಇವೂ ಕೂಡ ಬೆಳೆಗೆ ಒದಗಿಸುತ್ತವೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಪೈರಿನ ಬೆಳವಣಿಗೆಯನ್ನು ಉದ್ದೀಪನೆಗೊಳಿಸುತ್ತವೆ. ರಾಗಿ, ಜೋಳ, ಮುಸುಕಿನ ಜೋಳ, ಗೋಧಿ, ಅರಣ್ಯ ಕೃಷಿಗೆ ಹಾಗೂ ಇತರೆ ಎಲ್ಲಾ ಬೆಳೆಗಳಿಗೂ ಸೂಕ್ತ.
ಅಜೊಸ್ಪೈರಿಲಮ್ (Azospirillum) : ಈ ಸೂಕ್ಷ್ಮಜೀವಿಗಳು ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿಕೊಂಡು ಸಸಾರಜನಕವನ್ನು ತಯಾರಿಸಲು ಬೆಳೆಗೆ ಒದಗಿಸುತ್ತವೆ. ಇವುಗಳಿಂದ ತಯಾರಾದ ಜೈವಿಕ ಗೊಬ್ಬರವನ್ನು ರಾಗಿ, ಭತ್ತ, ಜೋಳ, ಸಿರಿಧಾನ್ಯಗಳು, ಮುಂತಾದ ಬೆಳೆಗಳಲ್ಲಿ ಉಪಯೋಗಿಸಲಾಗುತ್ತಿದೆ.
ನೀಲಿ ಹಸಿರು ಪಾಚಿ (Blue Green Algae): ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿಕೊಂಡು ಸ್ಥಿರೀಕರಣಗೊಳಿಸಿ ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಭತ್ತದ ಗದ್ದೆಗಳಲ್ಲಿ ಇವುಗಳನ್ನು ಬೆಳೆಸಿದಾಗ ಭತ್ತದ ಇಳುವರಿಯು ಶೇ. 15ರಿಂದ 18ರಷ್ಟು ಹೆಚ್ಚಾಗುತ್ತದೆ.
ಗ್ಲುಕನೋಬ್ಯಾಕ್ಟರ್ (Gluconobacter) : ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿಕೊಂಡು ಬೆಳೆಗೆ ಒದಗಿಸುತ್ತವೆ. ಕಬ್ಬು, ಗೆಣಸು, ಬೀಟ್‍ರೂಟ್, ಮರಗೆಣಸು ಬೆಳೆಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಕಬ್ಬು ಬೆಳೆಯಲ್ಲಿ 25ರಿಂದ 30ರಷ್ಟು ಅಧಿಕ ಇಳುವರಿ ಪಡೆಯಬಹುದು.
ಫ್ರಾಂಕಿಯಾ (Frankia) : ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿಕೊಳ್ಳುತ್ತವೆ. ಅಮೋನಿಯಾವನ್ನು ಗಿಡಗಳಿಗೆ ಒದಗಿಸುತ್ತವೆ. ಬೇರುಗಳ ಒಳಹೊಕ್ಕು ಗಂಟಿನ ಆಕಾರದ ಬೇರುಗಳನ್ನು ಸೃಷ್ಟಿಸುತ್ತದೆ. ಸರ್ವೆ ಮರ, ಆಲ್ನಸ್ ಮರ, ಮೈರಿಕಾ ಮರಗಳ ಬೆಳವಣಿಗೆಯಲ್ಲಿ ಸಹಕಾರಿ. ಅರಣ್ಯ ಕೃಷಿಗೆ ಸೂಕ್ತವಾದ ಜೈವಿಕ ಗೊಬ್ಬರ.
ಮೈಕೋರೈಜಾ (Mycorrhiza) : ಇದೊಂದು ಶಿಲೀಂಧ್ರ ಸೂಕ್ಷ್ಮಾಣುಜೀವಿ. ಗಿಡಕ್ಕೆ ಕರಗಿದ ರೂಪದಲ್ಲಿರುವ ರಂಜಕವನ್ನು ಒದಗಿಸುತ್ತದೆ. ಜೊತೆಗೆ, ತಾಮ್ರ, ಕಬ್ಬಿಣ, ಸತು, ಅಲ್ಯುಮಿನಿಯಂ, ಮೆಗ್ನಿಶೀಯಂ, ಮ್ಯಾಂಗನೀಸ್ ಮತ್ತು ಗಂಧಕದಂತಹ ಲವಣಗಳನ್ನು ಗಿಡಗಳಿಗೆ ಸೇರುವಂತೆ ಮಾಡುತ್ತದೆ. ಅಂತಹ ಸಸ್ಯಾಹಾರವನ್ನು ನಾವು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಲವಣಗಳು ಲಭಿಸುತ್ತವೆ. ಮೈಕೋರೈಜಾ ಶಿಲೀಂಧ್ರವು ಗಿಡಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಪ್ರಚೋಧಿಸುತ್ತದೆ. ಬೇರು ಕೊಳೆಕಾರಕ ರೋಗಗಳನ್ನು ತಡೆಯುತ್ತದೆ. ಹಲವಾರು ಬೆಳೆಗಳಲ್ಲಿ ಮೈಕೋರೈಜಾವನ್ನು ಬಳಸಲಾಗುತ್ತಿದೆ.
ಟ್ರೈಕೋಡರ್ಮಾ (Trichoderma) : ಇದೂ ಕೂಡ ಶಿಲೀಂಧ್ರ ಗುಂಪಿಗೆ ಸೇರಿದೆ. ಸಸ್ಯ ಬೆಳವಣಿಗೆಯ ಪೋಷಣೆ, ಸೊರಗು ರೋಗ ನಿಯಂತ್ರಣ, ಸಾವಯವ ವಸ್ತುಗಳನ್ನು ಕೊಳೆಸುವ ಕ್ರಿಯೆ ಮತ್ತು ರಂಜಕವನ್ನು ಕರಗಿಸಿ ಗಿಡಕ್ಕೆ ಒದಗಿಸುವ ಕ್ರಿಯೆಗಳಲ್ಲಿ ಇದು ತೊಡಗುತ್ತದೆ. ಏಲಕ್ಕಿ, ಬಾಳೆ, ಶೇಂಗಾ ಇತ್ಯಾದಿ ಬೆಳೆಗಳಲ್ಲಿ ಹೆಚ್ಚು ಬಳಕೆಯಲ್ಲಿದೆ.
ಜೈವಿಕ ಗೊಬ್ಬರಗಳ ಲಭ್ಯತೆಯ ರೂಪ
ಜೈವಿಕ ಗೊಬ್ಬರಗಳನ್ನು ಮೂರು ವಿಧಗಳಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಅವೆಂದರೆ: ಘನ ರೂಪ, ಹರಳು ರೂಪ ಮತ್ತು ದ್ರವ ರೂಪ. ಘನ ರೂಪದ ಜೈವಿಕ ಗೊಬ್ಬರವನ್ನು ಇದ್ದಿಲು ಪುಡಿ, ಕಲ್ಲಿದ್ದಲು, ಪ್ರೆಸ್ ಮಡ್, ಕೊಟ್ಟಿಗೆ ಗೊಬ್ಬರಗಳಲ್ಲಿ ಯಾವುದಾದರೊಂದು ವಸ್ತುವಿನ ಜೊತೆಗೂಡಿಸಿ ತಯಾರಿಸಲಾಗಿರುತ್ತದೆ. ಪೂರೈಕೆದಾರರು ಒದಗಿಸುವ ಮಾಹಿತಿಯನ್ನು ಅನುಸರಿಸಿ ಜೈವಿಕ ಗೊಬ್ಬರಗಳನ್ನು ಬಳಸಬೇಕು.
ಜೈವಿಕ ಗೊಬ್ಬರಗಳನ್ನು ಕೊಳ್ಳಲು ರೈತರು ಹಿಂದು ಮುಂದು ನೋಡುತ್ತಾರೆ. ಲಾಭ-ವೆಚ್ಚದ ಅನುಪಾತವನ್ನು ಲೆಕ್ಕ ಹಾಕಿ ತಮ್ಮ ಜಾಣ್ಮೆಯನ್ನು ಬಳಸಿ ರೈತರು ಜೈವಿಕ ಗೊಬ್ಬರಗಳನ್ನು ಬಳಸಬಹುದಾಗಿದೆ. ಕೃಷಿ ಮತ್ತು ಸಂಬಂಧಿತ ಅಭಿವೃದ್ದಿ ಇಲಾಖೆಗಳ ಮತ್ತು ಕೃಷಿ ವಿಶ್ವವಿದ್ಯಾಲಯದ ತಜ್ಞರಿಂದ ಸಲಹೆಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : ಪ್ರೊ. ಎನ್. ಉಮಾಶಂಕರ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ಸೂಕ್ಷ್ಮಜೀವಿ ವಿಭಾಗ, ಕೃಷಿ ಮಹಾವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560065, ಮೊಬೈಲ್ ಸಂಖ್ಯೆ : 9845637672.
ಕೊನೆಯ ಮಾತು
ಎಲಿ ಮೆಚ್ನಿಕಾಫ್ (16.05.1845-15.07.1916) ಎಂಬ ವಿಜ್ಞಾನಿಯು ಯೂರೋಪಿನ ಕಕೇಶಿಯನ್ ಪರ್ವತದ ಆಸುಪಾಸಿನ ಹಳ್ಳಿಗಳ ಜನರು ಹೆಚ್ಚಾಗಿ ಮೊಸರನ್ನು ಸೇವಿಸುತ್ತಾರೆಂದೂ, ಮೊಸರಿನಲ್ಲಿ ಉಪಯೋಗಿ ಲ್ಯಾಕ್ಟೋಬ್ಯಾಸಿಲಸ್ ಸೂಕ್ಷ್ಮಜೀವಿಗಳಿರುವುದರಿಂದ ಅವರ ಕರುಳಿನ ಕಾರ್ಯಕ್ಕೆ ಅದರಿಂದ ಅನುಕೂಲವಾಗಿ ಆ ಜನರು ಹೆಚ್ಚು ಆಯಸ್ಸು ಉಳ್ಳವರಾಗಿದ್ದಾರೆಂದೂ ಮೊಟ್ಟಮೊದಲಿಗೆ 1907ರಲ್ಲಿ ಅವಲೋಕಿಸಿದರು. ಕಾಲಕ್ರಮೇಣ, 1970ರ ದಶಕದ ವಿಜ್ಞಾನಿಗಳು ಅಂತಹ ಕರುಳಿನ ಉಪಯೋಗಿ ಸೂಕ್ಷ್ಮಜೀವಿಗಳನ್ನು ಪ್ರೊಬಯೋಟಿಕ್ಸ್ (ಸಹಜೈವಿಕಗಳು) ಎಂದು ಕರೆದರು. ಅಮೆರಿಕವು ಸಹಜೈವಿಕಗಳನ್ನು ಡೈರೆಕ್ಟ್ ಫೆಡ್ ಮೈಕ್ರೋಬಿಯಲ್ಸ್ (Direct Fed Microbials : DFM) ಎಂದು ಪ್ರತ್ಯೇಕ ಹೆಸರಿನಿಂದ ಕರೆಯುತ್ತದೆ. ಇಂದು ಸಹಜೈವಿಕಗಳ ಪಾತ್ರವನ್ನು ಕೊಂಡಾಡಲಾಗಿದೆ. ಕರುಳಿನ ಆರೋಗ್ಯಕ್ಕೆ ಸಹಜೈವಿಕಗಳು ಅತ್ಯಗತ್ಯ. ಹಾಗೆಯೇ, ಮಣ್ಣಿನ ಆರೋಗ್ಯಕ್ಕೆ ರೈಜೋಬಿಯಂ, ಅಜಟೋಬ್ಯಾಕ್ಟರ್, ಅಜೊಸ್ಪೈರಿಲಮ್, ನೀಲಿ ಹಸಿರು ಪಾಚಿ, ಗ್ಲುಕನೋಬ್ಯಾಕ್ಟರ್, ಫ್ರಾಂಕಿಯಾ, ಮೈಕೋರೈಜಾ, ಟ್ರೈಕೋಡರ್ಮಾ ಮುಂತಾದ ಉಪಯೋಗಿ ಸೂಕ್ಷ್ಮಜೀವಿಗಳು ಅತ್ಯಗತ್ಯ.
ಮೈಸೂರು ಸಂಸ್ಥಾನದಲ್ಲಿ 1908ರಿಂದ 1934ರವರೆಗೆ 26 ವರ್ಷಗಳ ಕಾಲ ಕೃಷಿ ವಿಜ್ಞಾನಿಯಾಗಿ ಮತ್ತು ಕೃಷಿ ಇಲಾಖೆಯ ನಿರ್ದೇಶಕರಾಗಿ ಕೃಷಿಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಕೆನಡಾ ದೇಶದ ಡಾ. ಲೆಸ್ಲಿ ಚಾರ್ಲ್ಸ್ ಕೋಲ್ಮನ್ ಅವರು ಸರ್ವೆ ಮರ ನೆಟ್ಟು, ಆ ಮೂಲಕ ಭೂಮಿಯಲ್ಲಿ ಸಾರಜನಕವು ಸ್ಥಿರೀಕರಣಗೊಳ್ಳುವಂತೆ ಮಾಡಿ, ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ರೂಪಿಸಿಕೊಳ್ಳಲು ರೈತರಿಗೆ ಕರೆ ನೀಡಿದ್ದಾರೆ. ಇತ್ತೀಚಿನ ಆಧುನಿಕ ಕೃಷಿ ಸೂಕ್ಷ್ಮಜೀವಿ ವಿಜ್ಞಾನದ ಜ್ಞಾನದಂತೆ ಅವರ ಆಲೋಚನೆಗೆ ಹಲವು ವಿಧದಲ್ಲಿ ಪುಷ್ಟಿ ಸಿಕ್ಕಿದೆ.
ಕೃಷಿ ಸೂಕ್ಷ್ಮಜೀವಿ ವಿಜ್ಞಾನವು ಶೈಕ್ಷಣಿಕವಾಗಿ ಒಂದು ಪ್ರತ್ಯೇಕ ಅಧ್ಯಯನ ವಿಷಯವಾಗುವಂತೆ ಚರ್ಚಿಸಿ, ಇಡೀ ದೇಶದಲ್ಲಿಯೇ ಕೃಷಿ ಸೂಕ್ಷ್ಮಜೀವಿ ವಿಜ್ಞಾನ ವಿಭಾಗವನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಮೊಟ್ಟಮೊದಲಿಗೆ 1966ರಲ್ಲಿಯೇ ಸ್ಥಾಪನೆಯಾಗುವಂತೆ ಮಾಡಿದ ಕೀರ್ತಿಯು ಪ್ರಾಧ್ಯಾಪಕರಾಗಿದ್ದ ಡಾ. ಜಿ. ರಂಗಸ್ವಾಮಿಯವರಿಗೆ ಸಲ್ಲುತ್ತದೆ. ಇಂದು ಆ ಕೃಷಿ ಸೂಕ್ಷ್ಮಜೀವಿ ವಿಜ್ಞಾನ ವಿಭಾಗವು ಹೆಮ್ಮರವಾಗಿ ಬೆಳೆದು ರೈತಸ್ನೇಹಿಯಾಗಿದೆ. ಜೈವಿಕ ಗೊಬ್ಬರಗಳನ್ನು ಉತ್ಪಾದಿಸಿ ರೈತರಿಗೆ ಪೂರೈಸುತ್ತಿದೆ. ಜೈವಿಕ ಗೊಬ್ಬರ ತಯಾರಿಕೆಯ ಉದ್ದಿಮೆದಾರರಿಗೆ ಮಾರ್ಗದರ್ಶನ ಮಾಡುತ್ತಿದೆ.
ಪುರಂದರದಾಸರ ಕೀರ್ತನೆಯಾದ ‘ಮಣ್ಣಿಂದ ಕಾಯ ಮಣ್ಣಿಂದ’ ಹಾಡಿನಲ್ಲಿ ಹೊರಹೊಮ್ಮುವ ಹಲವು ಅರ್ಥಗಳಲ್ಲಿ ಮಣ್ಣಿನ ಸೂಕ್ಷ್ಮಜೀವಿಗಳ ಪಾತ್ರವೂ ಇರಬಹುದಲ್ಲವೇ?

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ



