ಹೊಸಿಲ ಒಳಗೆ-ಹೊರಗೆ | ನೀವು ಯಾವತ್ತಾದರೂ ಬಸ್ಸಿನಲ್ಲಿ ಪಯಣಿಸುವ ಮಹಿಳೆಯ ಸ್ಥಾನದಲ್ಲಿ ನಿಂತು ಯೋಚಿಸಿದ್ದೀರಾ?

Date:

ಹುಡುಗನೊಬ್ಬ ಹುಡುಗಿ ಕಡೆ ನೋಡುತ್ತಲೇ ಇರುವ, ಅತ್ತ ಹುಡುಗಿ ತಲೆ ಎತ್ತಿ ನೋಡಲಾಗದೆ ತಳಮಳಿಸುವ ದೃಶ್ಯಗಳನ್ನು ನಾವು ಸಾರ್ವಜನಿಕ ಸ್ಥಳಗಳಲ್ಲಿ ನೋಡಬಹುದು. ಹಾಗಾದರೆ, ಕಣ್ಣಲ್ಲೇ ದಿಟ್ಟವಾಗಿ ಉತ್ತರಿಸಿ ಹುಡುಗ ತಲೆ ಎತ್ತಲಾರದಂತೆ ಮಾಡಲು ಹುಡುಗಿಯರಿಗೆ ಸಾಧ್ಯವಿಲ್ಲವೇ?

ಇದೊಂದು ಹೊಸ ರೀತಿಯ ಚಪ್ಪಾಳೆ… 1-2, 1-2-3 ಲಯದಲ್ಲಿ ಚಪ್ಪಾಳೆ ಹಾಕಬೇಕು. ನಂತರ, “ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾಲಲಾ…” ಅಂತ ಜೋರಾಗಿ ಹೇಳುತ್ತ, ಕೈಗಳನ್ನು ತಿರುವುತ್ತ ಮೇಲಕ್ಕೆ ಎತ್ತಬೇಕು. ಎಲ್ಲರೂ ಜೊತೆಯಾಗಿ ಈ ರೀತಿ ಚಪ್ಪಾಳೆ ತಟ್ಟುವುದು ನೋಡುವುದಕ್ಕೂ ಅಂದವಾಗಿ ಕಾಣುತ್ತದೆ, ಗುಂಪಿನಲ್ಲಿ ಸ್ವಲ್ಪ ಲವಲವಿಕೆಯೂ ಮೂಡುತ್ತದೆ. ತರಬೇತಿ ನಡೆಸುವಾಗ ಗಂಭೀರವಾದ ಚರ್ಚೆಗಳ ನಡುವೆ ಇಂತಹ ಕೆಲವು ಹಗುರವಾದ ಕ್ರಿಯೆಗಳು ಸಹಕಾರಿಯಾಗುತ್ತವೆ. ಈ ಚಪ್ಪಾಳೆ ಹಾಕಿಸುವಾಗ ಅನೇಕ ಬಾರಿ, ಅನೇಕ ಮಂದಿ, ಅದರಲ್ಲೂ ಹೆಣ್ಣುಮಕ್ಕಳ ಕೈ ಭುಜದಿಂದ ಮೇಲಕ್ಕೆ ಹೋಗುವುದಿಲ್ಲ. ದೈಹಿಕ ಮುಜುಗರ ಎದ್ದುಕಾಣುತ್ತದೆ. “ಆರಾಮವಾಗಿ ಮಾಡಿ, ಕೈಯೆತ್ತಿ ಮಾಡಿ, ಖುಶಿಯಿಂದ ಮಾಡಿ,” ಅಂತ ಹೇಳುತ್ತ, ನಿರಾಳವಾಗಿ ಮಾಡುವಂತೆ ಸೂಚನೆ ಕೊಡಬೇಕಾಗುತ್ತದೆ. ಈ ದೈಹಿಕ ಮುಜುಗರ ಯಾಕೆ ಬಂತು, ಹೇಗೆ ಬಂತು ಅಂತ ಕೇಳಿದರೆ, “ರೂಢಿ ಇಲ್ಲ…” ಅನ್ನುತ್ತಾರೆ. “ಇಷ್ಟು ಸಂಕೋಚ ಮಾಡಿಕೊಳ್ಳುವುರಿಂದಲೇ, ಹಿಂದಿನಿಂದ ಯಾರಾದರೂ ಅಲ್ಲಿ-ಇಲ್ಲಿ ಮುಟ್ಟಿದಾಗ ಕೈಎತ್ತಿ ತಡೆಯಬೇಕೆಂದರೂ ಕೈ ಮೇಲೆ ಏಳುವುದಿಲ್ಲವಷ್ಟೇ… ಯಾಕೆಂದರೆ ರೂಢಿ ಇಲ್ಲ!” ಅಂತ ಹೇಳಿ ಮತ್ತೆ-ಮತ್ತೆ ಈ ಆಟ ಆಡಿಸುತ್ತೇವೆ.

ಸಾರ್ವಜನಿಕ ಸ್ಥಳಗಳಲ್ಲಿ ಹುಡುಗನೊಬ್ಬ ಹುಡುಗಿ ಕಡೆ ನೋಡುತ್ತಲೇ ಇರುವುದು, ಹುಡುಗಿ ತಲೆ ಎತ್ತಿ ನೋಡಲಾಗದೆ ತಳಮಳಿಸುವ ಮತ್ತು ಕಣ್ಣು ತಪ್ಪಿಸಲು ಪ್ರಯತ್ನಿಸುವ ದೃಶ್ಯವನ್ನು ನಾವು ಅಲ್ಲಲ್ಲಿ ನೋಡಬಹುದು. ಇದರ ಬದಲು ಹುಡುಗಿಯೊಬ್ಬಳು ಹುಡುಗ ಬೀರುವ ಆ ಕೆಟ್ಟ ದೃಷ್ಟಿಯನ್ನು ದಿಟ್ಟವಾಗಿ ಎದುರಿಸಿ, ಹುಡುಗನೇ ಕಣ್ಣು ತಪ್ಪಿಸುವಂತಾಗುವ ದೃಶ್ಯ ಕಾಣಸಿಗುವುದು ಬಹಳ ಅಪರೂಪ. “ಯಾಕೆ ಹುಡುಗಿಯರ ದೇಹ ಇದಕ್ಕೆ ಸಹಕರಿಸುವುದಿಲ್ಲ?” ಅಂತ ಕೇಳಿದರೆ “ರೂಢಿ ಇಲ್ಲ…” ಅನ್ನುವ ಉತ್ತರ ಬರುತ್ತದೆ!

ಸಾಂದರ್ಭಿಕ ಚಿತ್ರ

ಹದಿಹರೆಯದ ವಯಸ್ಸಿನಲ್ಲಿ ಸ್ತನಗಳು ಮೂಡುವ ಹೊತ್ತಿನಲ್ಲಿ ಮೈ ತುಂಬಾ ಬಟ್ಟೆ ಹಾಕಿಕೊಂಡಿದ್ದರೂ ದೇಹ ಮುದುರಿಸಿಕೊಂಡು, ಪುಸ್ತಕವನ್ನೋ, ಬ್ಯಾಗನ್ನೋ, ದುಪಟ್ಟಾವನ್ನೋ ಎಳೆದೆಳೆದು ಎದೆ ಮುಚ್ಚಿಕೊಳ್ಳಲು ಪರದಾಡುವುದನ್ನು ಇಂದಿನ ದಿನಗಳಲ್ಲೂ ಕಾಣಬಹುದು (ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದವರೂ ಇದ್ದಾರೆ. ಆದರೆ, ಅವರ ಬಗ್ಗೆ ಕುಹಕದ ಮಾತುಗಳು ಇದ್ದೇ ಇರುತ್ತವೆ). ಜನ ಇರುವೆಡೆಗಳಲ್ಲಿ, ಬಗ್ಗಿ ಏನೋ ಹೆಕ್ಕಬೇಕು ಅಂದರೆ, ಮುಂದೆ ಕಾಣುತ್ತದೋ ಹಿಂದೆ ಕಾಣುತ್ತದೋ ಅನ್ನುವ ಚಡಪಡಿಕೆ ಅವರ ಚಲನವಲನಗಳಲ್ಲಿ ಕಾಣುತ್ತದೆ. ಹುಡುಗರಿಗೆ ಕೂಡ ದೇಹದ ಬದಲಾವಣೆಯ ಹೊತ್ತಿನಲ್ಲಿ ಸ್ವಲ್ಪ ಕಸಿವಿಸಿ, ಮುಜುಗರ ಆಗುವುದು ಇದೆ. ಆದರೆ, ಅವರು ದೈಹಿಕವಾಗಿ ಮುದುರಿಕೊಳ್ಳುವುದಿಲ್ಲ. ಬಗ್ಗುವಾಗ ಅವರು ಏನನ್ನೋ ಮುಚ್ಚಿಕೊಳ್ಳಲು ಹೆಣಗಾಡುವ ಹಾಗೆ ಕಾಣುವುದಿಲ್ಲ. ಯಾಕೆಂದರೆ, ಹೆಣ್ಣುಮಕ್ಕಳ ದೇಹದ ಮೇಲೆ ಕಣ್ಣೋಟಗಳು ಹರಿದಾಡುವಂತೆ ಅವರ ಮೇಲೆ ಹರಿದಾಡುವುದಿಲ್ಲ. ಹೆಣ್ಣುಮಕ್ಕಳ ದೇಹದ ಮೇಲೆ ಕಾವಲು ಕಾಯುವಂತೆ ಅವರ ದೇಹದ ಮೇಲೆ ಕಾವಲು ಕಾಯುವುದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ಆಡಿಯೋ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಸಿಟ್ಟಿನ ಈ ಪುಟ್ಟನ ಕತೆ ನಿಮ್ಮ ಮಗುವಿನದ್ದೂ ಆಗಿರಬಹುದು

ಹದಿಹರೆಯದಲ್ಲಂತೂ ಹೆಣ್ಣುಮಕ್ಕಳ ಚಲನವಲನಗಳ ಮೇಲೆ ನಿಯಂತ್ರಣ ಶುರುವಾಗುತ್ತದೆ. ಕಾಲು ಅಗಲಿಸಿ ಕುಳಿತುಕೊಳ್ಳಬಾರದು, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವಂತಿಲ್ಲ, ಮೊಣಕಾಲಿನ ಮೇಲಕ್ಕೆ ಕಾಣಬಾರದು, ಜೋರಾಗಿ ನಗಬಾರದು, ತಲೆ ಎತ್ತಿ ನೋಡಬಾರದು – ಇಂತಹ ಆದೇಶಗಳ ಮೇಲೆ ಆದೇಶಗಳು ನಾನಾ ಸ್ವರೂಪದಲ್ಲಿ ವ್ಯಕ್ತವಾಗುತ್ತಲೇ ಇರುತ್ತವೆ. ಬಸ್ಸಿನಲ್ಲಿ ಪಯಣಿಸುವ ದೃಶ್ಯವೊಂದನ್ನು ಮನಸ್ಸಿಗೆ ತಂದುಕೊಂಡರೆ, ಹೆಣ್ಣು-ಗಂಡಿನ ದೇಹಭಾಷೆಗಳು (ಬಾಡಿ ಲಾಂಗ್ವೇಜ್) ಬಹಳ ಸ್ಪಷ್ಟವಾಗಿ ಗೋಚರವಾಗುತ್ತವೆ. ಅಕ್ಕಪಕ್ಕದಲ್ಲಿ ಮಹಿಳೆ- ಪುರುಷ ಕುಳಿತಿದ್ದರೆ, ಸಾಧಾರಣವಾಗಿ ಮಹಿಳೆಯರು ಮುದುರಿಕೊಂಡಿರುತ್ತಾರೆ, ಪುರುಷರು ಆರಾಮವಾಗಿ ಕುಳಿತಿರುತ್ತಾರೆ. ಹೆಣ್ಣು ದೇಹ ಮುದುರಿಕೊಂಡಷ್ಟೂ ಗಂಡು ದೇಹ ಆ ಸ್ಥಳವನ್ನು ಆಕ್ರಮಿಸುತ್ತಿರುತ್ತದೆ. ನಿಂತಿರುವ ಹೆಣ್ಣು ಮಕ್ಕಳನ್ನು ಕಲ್ಪಿಸಿಕೊಳ್ಳಿ… ಅಲ್ಲಿ-ಇಲ್ಲಿ ಹಿಡಿದುಕೊಂಡು ಜೋಲಾಡದಂತೆ ನಿಭಾಯಿಸಬೇಕು. ಅದರ ಜೊತೆಗೆ ಸೀರೆ ಸೆರಗು ಜಾರದಂತೆ ಕಾಪಾಡಿಕೊಳ್ಳಬೇಕು. ಬಟ್ಟೆ ಆಚೀಚೆ ಆಗದಂತೆ ಎಳೆದುಕೊಳ್ಳುತಿರಬೇಕು. ಬ್ರಾ ಹೊರಗೆ ಕಾಣದಂತೆ ಎಚ್ಚರಿಕೆ ವಹಿಸಬೇಕು. ಹೊಟ್ಟೆ ಮುಚ್ಚಿಕೊಳ್ಳಲು ಹೆಣಗಾಡಬೇಕು. ಈ ಹೊತ್ತಿನಲ್ಲಿ ಒಬ್ಬ ಪುರುಷ ಇಂತಹ ಯಾವುದೇ ತಳಮಳಗಳಿಲ್ಲದೆ ನಿಂತಿರುತ್ತಾನೆ. ಸೆರಗು ಜಾರುವುದಂತೂ ಹೆಣ್ಣುಮಕ್ಕಳ ಪಾಲಿಗೆ ಬಹಳ ಅನಾಹುತಕಾರಿ ವಿಷಯ. ಸೆರಗು ಜಾರುವುದು, ಜಾರಿಸುವುದು ಅನ್ನುವುದನ್ನು ತೀರಾ ಅವಹೇಳನಕಾರಿಯಾಗಿ ಬಳಸುತ್ತಾರೆ. ಸೆರಗು ಸಂಭಾಳಿಸುವುದಕ್ಕೆ ಆಗದವರು ಸೀರೆ ಯಾಕೆ ಉಡಬೇಕು ಅಂತ ಗೇಲಿ ಮಾಡುವುದೂ ಇದೆ. ಸೆರಗು, ದುಪಟ್ಟಾ ಎಲ್ಲವೂ ಸದಾ ಎದೆಯ ಮೇಲೆ ಇರುವುದೇ ಮರ್ಯಾದಾ ಹೆಣ್ಣಿನ ಲಕ್ಷಣ ಎಂಬ ಮೌಲ್ಯವನ್ನು ಹೇರಲಾಗಿದೆ. ದೇಹಭಾಷೆಯ ಮೇಲೆ, ದೇಹದ ಚಲನವಲನದ ಮೇಲೆ ನಿಯಂತ್ರಣವನ್ನು ಈ ರೀತಿಯಾಗಿ ಸಾಧಿಸಲಾಗುತ್ತದೆ. ಇವೆಲ್ಲದರ ಪರಿಣಾಮವಾಗಿ, ದೇಹಕ್ಕೆ ಒಂದಷ್ಟು ಒಪ್ಪಿತ, ಸೀಮಿತ ಚಲನವಲನಗಳು ಮಾತ್ರವೇ ರೂಢಿ ಆಗಿಬಿಡುತ್ತವೆ.

ಸಾಂದರ್ಭಿಕ ಚಿತ್ರ

ದೇಹದ ವಿಚಾರ ಬಂದಾಗ ಗಂಭೀರವಾಗಿ ಚಿಂತಿಸಬೇಕಾದ ಇನ್ನೊಂದು ಅಂಶ ದೈಹಿಕ ಅವಹೇಳನ (ಬಾಡಿ ಶೇಮಿಂಗ್). ಇದನ್ನು ಹೆಣ್ಣುಮಕ್ಕಳು, ಗಂಡುಮಕ್ಕಳು ಎಲ್ಲರೂ ಅನುಭವಿಸುತ್ತಾರೆ. ದಪ್ಪ ದೇಹ, ತೆಳು ದೇಹ, ಕಪ್ಪು ಚರ್ಮ, ಕುಳ್ಳ ದೇಹ, ಮೊಂಡು ಮೂಗು, ಚಿಕ್ಕ ಸ್ತನಗಳು ಅಥವಾ ದೊಡ್ಡ ಸ್ತನಗಳು… ಹೀಗೇ ಏನೇನೋ ಮಾದರಿಗಳನ್ನು ಇಟ್ಟುಕೊಂಡು ಹೆಣ್ಣುಮಕ್ಕಳ ಅವಹೇಳನ ನಡೆಯುತ್ತದೆ. ಅಂತೆಯೇ, ಸಣಕಲು ದೇಹ, ಸರಿಯಾಗಿ ಮೂಡದಿರುವ ಮೀಸೆ ಇಂತಹ ಅಂಶಗಳನ್ನು ಇಟ್ಟುಕೊಂಡು ಗಂಡುಮಕ್ಕಳನ್ನು ಅವಹೇಳನ ಮಾಡಲಾಗುತ್ತದೆ. ಸುದ್ದಿ ಮಾಧ್ಯಮಗಳಲ್ಲಿ, ಸಿನಿಮಾಗಳಲ್ಲಿ ಕೂಡ ದೈಹಿಕ ಅವಹೇಳನದ ಸಂದೇಶಗಳು ನಾನಾ ಸ್ವರೂಪದಲ್ಲಿ ಬರುತ್ತಿರುತ್ತವೆ. ಕೆಲವು ದೈಹಿಕ ಸ್ವರೂಪಗಳಿಗೆ ಇಲ್ಲಸಲ್ಲದ ಗುಣಗಳನ್ನೂ ಆರೋಪಿಸಲಾಗುತ್ತದೆ. ಕಪ್ಪಗಿದ್ದರೆ, ದಪ್ಪಕ್ಕಿದ್ದರೆ ಆಕರ್ಷಕ ಅಲ್ಲ ಹೇಳಲಾಗುತ್ತದೆ. ಕೆಲವೊಮ್ಮೆ ಕೆಟ್ಟ ಮಂದಿಯನ್ನು ಕಪ್ಪು ಬಣ್ಣದಲ್ಲಿ ಚಿತ್ರಿಸುತ್ತಾರೆ. ಈ ಎಲ್ಲ ಸಂದೇಶಗಳು, ಹೆಣ್ಣು-ಗಂಡು ಎಲ್ಲರಲ್ಲೂ ಕೀಳರಿಮೆ ಬೆಳೆಸುತ್ತದೆ. “ನಾನು ಕುಟುಂಬದ ಯಾವುದೇ ಹಬ್ಬ-ಹರಿದಿನಗಳಲ್ಲಿ ಭಾಗವಹಿಸುವುದಿಲ್ಲ. ಯಾಕೆಂದರೆ, ಎಲ್ಲರೂ ‘ಯಾಕೆ ಇಷ್ಟು ದಪ್ಪ ಆಗಿದ್ದೀಯಾ?’ ಅಂತ ಹೇಳುವುದು ಕೇಳಿ-ಕೇಳಿ ಸಾಕಾಗಿಹೋಗಿದೆ,” ಅಂತ ವಯಸ್ಸಿಗೆ ಬಂದ ಹುಡುಗಿಯರು ಹೇಳುತ್ತಾರೆ. ದುರಂತವೆಂದರೆ, ಈ ದೈಹಿಕ ಅವಹೇಳನಗಳು ಆತ್ಮಹತ್ಯೆಗೂ ಕಾರಣವಾಗಿಬಿಡುತ್ತವೆ.

ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಡಾರ್ವಿನ್‌ ಹೇಳಿದ್ದು ಅರಗಿಸಿಕೊಳ್ಳಲಾಗದಂಥ ಸತ್ಯವೇ?

ಗದ್ದೆ-ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಕೂಲಿ ಕೆಲಸ ಮಾಡುವ ಮಹಿಳೆಯರು, ಕ್ರೀಡಾಪಟುಗಳು, ರಂಗಭೂಮಿಯಲ್ಲಿ ತೊಡಗಿಸಿಕೊಂಡ ಮಹಿಳೆಯರ ದೇಹಭಾಷೆಯಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದು. ದುಡಿಮೆಯ ಕಾರಣಕ್ಕಾಗಿ ದೇಹವನ್ನು ಬಳಸಬೇಕಾದ ಅನಿವಾರ್ಯತೆಯಿಂದಾಗಿ ದೇಹದ ಬಿಗುಮಾನ ಅಷ್ಟಾಗಿ ಕಂಡುಬರುವುದಿಲ್ಲ. ಕ್ರೀಡೆ, ರಂಗಭೂಮಿಯಲ್ಲಿ ಹೆಣ್ಣುಮಕ್ಕಳು ತಮ್ಮ ದೇಹದೊಂದಿಗೆ ಹೆಚ್ಚಿನ ಒಡನಾಟ ಅನುಭವಿಸುವ ಅವಕಾಶ ಇರುತ್ತದೆ. ಅದಕ್ಕಾಗಿ ಹೆಚ್ಚಿನ ನಿರಾಳತೆ ಸಿಕ್ಕಿರುತ್ತದೆ. ಹೀಗಿದ್ದರೂ, ದೈಹಿಕ ವಿಷಯಕ್ಕೆ ಸಂಬಂಧಿಸಿದಂತೆ ‘ತನ್ನ ಹಕ್ಕು’ ಅಂದರೆ, ನಿರ್ಧಾರ ತೆಗೆದುಕೊಳ್ಳುವ ಅವಕಾಶ ಎಷ್ಟಿದೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಕುಟುಂಬ, ಶಿಕ್ಷಣ, ರಾಜಕೀಯ, ಮಾಧ್ಯಮ, ಸಾರ್ವಜನಿಕ ವ್ಯವಸ್ಥೆ ಮತ್ತು ಪ್ರಭುತ್ವ – ಇಂತಹ ಯಾವುದೇ ವಲಯವನ್ನು ತಗೆದುಕೊಂಡರೂ ಅಲ್ಲಿ ಮಹಿಳೆಯರ ದೇಹದ ಮೇಲೆ ಹತ್ತು ಹಲವು ರೀತಿಯಲ್ಲಿ ನಿಯಂತ್ರಣ ಹಾಕಿರುವುದನ್ನು ಗಮನಿಸಬಹುದು. ಚಲನಶೀಲತೆಗೆ, ಸೌಂದರ್ಯಕ್ಕೆ, ಪ್ರಜನನ ವಿಷಯಗಳಿಗೆ ಅಥವಾ ಶೀಲ, ಚಾರಿತ್ರ್ಯಕ್ಕೆ ಸಂಬಂಧಿಸಿದಂತೆ ಇರುವ ಈ ನಿರ್ಬಂಧಗಳು ಅವಳನ್ನು ಸಶಕ್ತಳಾಗದಂತೆ ನಿಗಾ ವಹಿಸುತ್ತವೆ. ಒಂದು ಬಗೆಯಲ್ಲಿ ಇದು ಆಕೆಯ ರೆಕ್ಕೆ ಕಿತ್ತು-ಕಿತ್ತುಹಾಕುತ್ತಲೇ ಸಾಗುವ ಪ್ರಕ್ರಿಯೆಯೂ ಹೌದು.

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...