ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿಯ ಬನ್ನಂಜೆ ಅಂಬೇಡ್ಕರ್ ಆಟೋ ರಿಕ್ಷಾ ನಿಲ್ದಾಣದ ಮಾಲಕರ ಹಾಗೂ ಚಾಲಕರ ಸಂಘದ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ನಿಲ್ದಾಣದ ಪ್ರಮುಖ ಮುಖಂಡ ಶಿವಾನಂದ ಮೂಡುಬೆಟ್ಟು ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಸಾಮಾಜಿಕ ಹೋರಾಟಗಾರರು ಹಾಗೂ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ದಲಿತಪರ ಸಾಮಾಜಿಕ ಹೋರಾಟಗಳು ಹಾಗೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ತೋರಿರುವ ಸಂಜೀವ ಬಲ್ಕೂರ್ ಅವರ ಜನಪರ ಕಾಳಜಿಯನ್ನು ಗುರುತಿಸಿ, ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಶಾಲು ಹೊದಿಸಿ, ಫಲಕ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಕೆ. ರಘುಪತಿ ಭಟ್, “ಮುಂದಿನ ದಿನಗಳಲ್ಲಿ ನಿಮ್ಮಿಂದ ಸಮಾಜದ ಶೋಷಿತರ ಧ್ವನಿಯಾಗಿ ಜನಪರ ಹೋರಾಟಗಳು ನಿರಂತರವಾಗಿ ಸಾಗಲಿ. ನಿಮ್ಮ ಮ್ಯಾರಥಾನ್ ಓಟವು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆದು ದೇಶಕ್ಕೆ ಕೀರ್ತಿ ತರಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಆಟೋ ಚಾಲಕ-ಮಾಲಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.





