ನೀಗೊನಿ | ಅಯ್ಯ, ಕೋಡಿ ಮತ್ತು ತೀತಾದ ಅಂದಗಾತಿ ನರ್ಸಿ

Date:

ಅಪ್ರಕಟಿತ ಕಾದಂಬರಿ 'ನೀಗೊನಿ'ಯ ಪುಟಗಳು | ಕಾದು ಕಾದು ದಣ್ದಿದ್ದ ಅಯ್ಯ, "ಏನ್ಲಾ ಕೋಡಿ ಇಟೊತ್ತು! ಬೇಗ ಕಟ್ಟಾಕಿ ಬಾರ್ಲಾ ತೀತಾಕ್ಕೆ ಹೋಗಬೇಕು. ಅದೇನೋ ಚಾವ್ಡಿ ನ್ಯಾಯ ಅಂತೆ..." ಎಂದು ಒದರಿ ಒಳಹೋದರು. ಕೋಡಿ ಕುಹಕ ನಗು ನಕ್ಕು, "ಇವತ್ತು ನಮ್ಮ ಅಯ್ಯನ್ದು ಬಲ್‍ಜೋರು," ಎಂದ್ಕಂಡ

ಭಾಗ -5

ಇದ್ದು ಸತ್ತ ಬದ್ಕಿಗೊಂದು ಜೀವ ತೇಯ್ವ ದೈವವಿಲ್ದೆ ಪರಿಪಾಟ್ಲು ಪಡ್ತಿರ್ವ ಸಾವ್ರ ಜೀವ್ಗಳು ಕಾಯ್ತಲೇ ಇವೆ. ಕೋಡಿ ಅಯ್ಯನ ಮನೇಲಿ ಅದೂ ಇದೂ ತಿಂದು ಬಲಿಷ್ಠ ಹೋರಿನೇ ಆಗಿ ಬೆಳೆದುಬಿಟ್ಟಿದ್ದ. ತನ್ಗೆ ಬೇಕು-ಬೇಡಗಳನ್ನೆಲ್ಲ ಅಯ್ಯನೇ ನಿವಾರ್ಸಿಸ್ತಿದ್ರು. ದೊಡ್ಡಯ್ಯ ಕೋಡಿಯ ಬಾಯಲ್ಲಿ ಅಯ್ಯನಾಗೇ ಉಳ್ದುಬಿಟ್ಟಿದ್ರು. ಅಯ್ಯಂಗೂ ಕೋಡಿ ಇಲ್ದೆ ಮನೆ ನಿಭಾಯಿಸೋದು ಕಷ್ಟ ಅನ್ನಂಗೆ ಆಗೋಗಿಬಿಟ್ಟಿತ್ತು. ಯಾವಾಗ್ಲೂ “ಕೋಡಿ ಅದೆಲ್ಲೋ…? ಕೋಡಿ ಬ್ರಾಂಬ್ರ ಮನೆಗೆ ಹೋಗಿ ಸಕುನ ಕೇಳ್ಬಾರೋ, ಹಸು ಈಯ್ತೇನೋ? ಕುರ್ಗಳಿಗೇನಾದ್ರೂ ಜಡ್ಡು ಜಾಪಾತ್ರೆ ಆಯ್ತೇನೋ…” – ಒನ್ದಾ ಎಲ್ಡಾ ಎಲ್ಕೂ ಕೋಡಿನೇ ಬೇಕಾಗಿ ಅಯ್ಯನ ಬಲಗೈ ಬನ್ಟನಾಗಿಬಿಟ್ಟ. ಕೋಡಿಯಿಲ್ದೆ ಅಯ್ಯರ ಯಾವ್ದೇ ಕೆಲ್ಸ ಆಗಲ್ಲ ಅನ್ನನ್ಗೆ ಆಗಿಬಿಡ್ತು.

ಯಾವೂರ್ಗೋಗ್ಬೇಕು ಅನ್ದ್ರೂ ಕೋಡಿ ಜತೆಗಿರ್ಬೇಕು. ಹಾದಿಬದಿಗೆಲ್ಲ ಕಳ್ಕಾಕ್ರು ಸಿಕ್ಕ-ಸಿಕ್ಕ ಜನ್ಗಳ ಮೇಲೆ ಹರಿಹಾಯ್ತಿದ್ರು. ಅನ್ತ ಟೇಮಲ್ಲಿ ಕೋಡಿ ಇದ್ರೆ ಅಯ್ಯನ್ಗೂ ಒಂದು ಧೈರ್ಯ. ಅಷ್ಟೇ ಕಳ್ಕಾಕ್ರಿಗೂ ಭಯ. ಒಂಜಿನ ದೂರ್ದ ತೀತಾಕ್ಕೆ ಹೋಗ್ಬೇಕಾದ ಅನಿವಾರ್ಯ ಬಂತು. ಜಿಟಿಜಿಟಿ ಮಳೆ ಬೇರೆ. ಮಳೆ ಸುರ್ವಾತು ಅಂದ್ರೆ ಎಷ್ಟು ದಿನ ಆದ್ರೂ ಬಿಡಂಗಿಲ್ಲ. ಅಯ್ಯ ಹೋಗ್ಲೇಬೇಕು. ತೀತಾದಲ್ಲಿ ಹತ್ತೂರುಗಳ ನ್ಯಾಯ ನಡೆಯೋದು. ಅದ್ಕೆ ಈ ಊರಿಂದ ಅಯ್ಯನ ಕರುಸ್ತಿದ್ರು. ಏನಾದ್ರೂ ತಂಟೆ-ತಕರಾರು ನಡುದ್ರೆ ಅಯ್ಯ ಹೋಗ್ಲೇಬೇಕಿತ್ತು. ಹತ್ತದಿನೈದು ಮೈಲುಗಳ ದಾರಿ. ಸುತ್ತುಬಳಸಿ ಬೆಟ್ಟ ಹತ್ತಿ, ಇಳಿದು ಹೋಗ್ಬೇಕಿತ್ತು. ಅದೇನೂ ಸಲಿಸಾಗೋಗೋ ಹಾದಿನೂ ಆಗಿರಲಿಲ್ಲ. ಆಗ್ಲೇ ನಡುರಾತ್ರಿ ಆದಂಗೆ ಕತ್ಲಾಗೋಗಿತ್ತು. ಮಳೆ ಬೇರೆ ನಿಲ್ಲಂಗೆ ಕಾಮ್ತಿರಲಿಲ್ಲ. ಅಯ್ಯ ಹೋಗ್ಲೇಬೇಕಿತ್ತು. ಬೆಳಿಗ್ಗೆನೇ ತೀತಾದಿಂದ ಕರೆ ಬಂದಿತ್ತು. “ಮಾತೂರಯ್ಯನ ಮನೇಲ್ಲಿ ರಂಪರಾಮಾಣ್ಯ ಆಗ್ಬಿಟ್ಟಿದೇ… ಎಲ್ರೂ ಬರ್ತಾರೆ, ನೀವು ಬನ್ನಿ,” ಅಂತಾ ಚಾವ್ಡಿ ನ್ಯಾಯ. ಬೆಳಿಗ್ಗೆನೇ ಹೋಗನಾ ಅಂದ್ರೆ ಕೋಡಿ ಬಿಟ್ಟು ಯಾವತ್ತೂ ಹೋಗೇ ಇಲ್ಲ. ಗಾಡಿನ ಅವ್ನೇ ಕಟ್ಬೇಕು. ಅದಲ್ದೆ ಈಟೊತ್ತಿತಂಕ ಅವ್ನು ಇರ್ತಿರ್ಲಿಲ್ಲ. ಬೆಳ್ಬೆಳ್ಗೆನೇ ಉಂಡ್ಕಂಡು ಕುರಿ, ದನ ಹೊಡ್ಕೊಂಡು ಬೆಟ್ಟಕ್ಕೆ ಹೋಗ್ವನೆ. ಅವ್ನು ಬರೋದೆ ಸಂಜಿಗೆ. ನ್ಯಾಯಕ್ಕೆ ಜನ ಸೇರೋದು ಸಂಜೆಗೆ, ಮುಗ್ಯೋದು ಸರೋತ್ತಿಗೆನೇ. ಎಲ್ಲ ಊರ್ನ ಹಿರಿಕರು ಸೇರಕ್ಕೆ ಆಟೊತ್ತು ಆದೇ ಆಗುತ್ತೆ. ಈ ಕೋಡಿ ಬೇಗ್ಬಂದ್ರೆ ನರ್ಸಿ ಮನೆಗಾದ್ರೂ ಹೋಗ್ಬೋದಲ್ಲ ಅಂಬೋ ಒಳಆಸೆ ಅಯ್ಯನ್ದು. ನರ್ಸಿ ಅಂದ್ಗಾತಿ ಹೆಂಗ್ಸು. ಮೈನೆರ್ದಾಗ್ಲಿಂದ ಅಯ್ಯಂಗೆ ಮೀಸ್ಲಿದ್ದ ಯೆಣ್ಣು. ಅಯ್ಯನ ಬೇಕು-ಬೇಡಗಳನ್ನು ಪಾಲುಸ್ಕೊಂಡು ಬಂದವ್ಳು. ಅಯ್ಯ ವಯ್ಸನಾಗ ಯಾವಾಗ್ಲೂ ನರ್ಸಿ ಮನೇಲಿ ಇರ್ತಿದ್ರು. ಅಯ್ಯನ ಅಪ್ಪ ಇಂಗೇ ಆದ್ರೆ ನಮ್ಮನ್ತನಕ್ಕೆ ಹೆಸರಿಲ್ದಂಗೆ ಆಯ್ತತೆ ಅಮ್ತಾ ವಡ್ಗೆರೆಯಿಂದ ನಾಗಮ್ಮಳ ತಂದು ಅಯ್ಯಂಗೆ ಮದ್ವೆ ಮಾಡಿದ್ರು. ನಾಗಮ್ಮಳ್ನ ಮದುವೆಯಾದ ಹೊಸದರಲ್ಲಿ ನರ್ಸಿನಾ ತಿರ್ಗೇ ನೋಡಿರಲಿಲ್ಲ. ಆಮೇಲೆ ನಾಗಮ್ಮ ಹಳೆದಾಗ್ತಾ-ಹಳೆದಾಗ್ತಾ ನರ್ಸಿ ಹತ್ರಾ ಆಗ್ತಾ ಹೋದ್ಲು. ನ್ಯಾಯ ಗೀಯಾ ಅಂತಾ ವಾರಕ್ಕೊಮ್ಮೆ ನರ್ಸಿ ಹತ್ರ ಹೋಗೋದು ಇದ್ದೇ ಇತ್ತು. ಬೇರೆ ಕಡೆಗಿಂತಾ ತೀತಾ ಕಡೆಗೆ ಹೋಗೋದು ಅಂದ್ರೆ ಅಯ್ಯಂಗೆ ಎಲ್ಲಿಲ್ದ ಸತು ಬಂದ್ಬಿಡೋದು. ‘ನಿಕ್ಕರ್ ವಲ್ಕನ್ಡೋನ್ಗೆ ಉಚ್ಚೆ ಉಯ್ಯಕೆ ತಾವ ಮಾಡ್ಕಳಲ್ವ’ ಅನ್ಗೆ ನಿಭಾಯಿಸೋದ್ನ ಕಲ್ತಕಂಡಿದ್ರು ಅಯ್ಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನೀಗೊನಿ – ಭಾಗ 4: ಅಪ್ಪ-ಮಗನನ್ನು ಅಣಮಂತ ಗುಡಿ ಎದುರಿನ ಕಂಬಕ್ಕೆ ಕಟ್ಟಿ ಹೊಡೆದೇ ಹೊಡೆದರು!

ತಾವೇ ಎದ್ದು ಸಾನ ಮಾಡಿ, ಬಿಳಾದ ಬಿಳಿ ದೋತ್ರ ಉಟ್ಕಂಡು, ಮೆಲ್ಕೊಂದು ಬಟ್ಟೆನಾ ಸಿಗಿಸ್ಕಂಡು ಹಣೆ ಮೇಲೆ ಅಡ್ಡಕೊಂದು ಉದ್ದಕ್ಕೊಂಡು ಕೆಂಪು ಪಟ್ಟೆ ಬಳ್ಕಂಡು, ಎಲ್ಡು ಕೈಗ್ಳ ಬೆಳ್ಳಿಗೆ ಉಂಗ್ರಾ ಹಾಕೊಂಡು, ಜರ್ರಬರ್ರಾ ಸಬ್ದ ಮಾಡೋ ಜೋಡು ಮೆಟ್ಕಂಡು ಮದ್ಲಿಂಗ್ನಂಗೆ ರಂಗಾಗ್ತಿದ್ರು. ಬೆಳ್ಳಾನೆ ಬಿಳಿ ದೋತ್ರ ಸೊಂಟ್ಕೇರ್ತು ಅಂದ್ರೇ ಅದು ನರ್ಸಿ ನೋಡಕ್ಕೇಯಾ ಅಂತ ಆ ದೋತ್ರುಕ್ಕು ಗೊತ್ತಾಗ್ತಿತ್ತು. ಇಂದು ಅದೇ ಪುಳಕ ಮನ್ಸಲ್ಲಿ. ಯಾವಾಗಾ ನರ್ಸಿನ ನೋಡ್ತೀನೋ ಅಂತ. ಬೇಗೋಗಿ ನ್ಯಾಯ ಗೀಯ ಮುಗಿಸಿ ರಾತ್ರುಕೆ ನರ್ಸಿ ಮನೇಲಿ ಮಲ್ಗಿ ಪ್ರಾಯ ಉಕ್ಕುಸ್ಕಬೇಕು ಎಂಬ ಚಡಪಡಿಕೆ ಅಯ್ಯನ್ದು. ಕತ್ಲಾ ಆಗ್ತಾ ಬಂತು; ಕೋಡಿ ಬರ್ಲೇ ಇಲ್ಲ. ಇಟೊತ್ತ ಮಾಡ್ಬಿಟ್ನಲ್ಲ ಇವ್ನು ಅಂದ್ಕಂಡು ಒಳಗಿನಿಂದ ಹೊರಕ್ಕೆ, ಹೊರಗಿನಿಂದ ಒಳಕ್ಕೆ ಅದೆಷ್ಟು ಬಾರಿ ಓಡಾಡುದ್ರೋ. ನಡ್ದು ನಡ್ದೂ ಕಾಲು ನೋಯ್ತು. ಅದೆಷ್ಟು ಬಾರಿ ಕೋಡಿಯನ್ನು ಬೈಯ್ಕಂಡ್ರೋ.

ಆಗ್ಲೇ ಎದ್ರುಗಿದ್ವರಾ ಮಕವೇ ಕಾಣ್ತಾ ಇರ್ಲಿಲ್ಲ. ಆ ಹೊತ್ತಿಗೆ ಕೋಡಿಯ ದನಿ ಕೇಳಿಸಿತು. ಕಾದು ಕಾದು ದಣ್ದಿದ್ದ ಅಯ್ಯನ್ಗೆ ಈಗೀಗ ಒಂಚೂರು ತಾವು ಬಂದಂಗಿತ್ತು. ಕೋಡಿ ಇನ್ನೂ ಕೊಟ್ಗೆಲಿ ಇದ್ದಾಗಲೇ ಅಲ್ಗೆ ಹೋಗಿ, “ಏನ್ಲಾ ಕೋಡಿ ಇಟೊತ್ತು! ಬೇಗ ಕಟ್ಟಾಕಿ ಬಾರ್ಲಾ ತೀತಾಕ್ಕೆ ಹೋಗಬೇಕು. ಅದೇನೋ ಚಾವ್ಡಿ ನ್ಯಾಯ ಅಂತೆ…” ಎಂದು ಒಂದೇ ಉಸುರಿಗೆ ಒದರಿ ಒಳಹೋದರು. ವಿಷಯ ಕೇಳಿ ಕೋಡಿ ಕುಹಕ ನಗು ನಕ್ಕು, “ಇವತ್ತು ನಮ್ಮ ಅಯ್ಯನ್ದು ಬಲ್‍ಜೋರು,” ಎಂದ್ಕಂಡ. ತೀತಾದಲ್ಲಿ ಅಯ್ಯನ್ದು ನರ್ಸಿದು ಕತೆ ದಿನಬಳಕೆಯಾಗಿಬಿಟ್ಟಿತ್ತು. ಅಷ್ಟೇ ಅಲ್ಲ, ಎಲ್ಲ ಕಡೆಗೂ ಅಯ್ಯನ ರಸಿಕತನ ಹಬ್ಬಿಬಿಟ್ಟಿತ್ತು. ಆ ನರ್ಸಿ ಸುಂದರಿ. ಅಷ್ಟೇ ಅಲ್ಲ, ಪ್ರೀತಿ ತೋರುವ ಯೆಣ್ಣು. ಅಯ್ಯನ್ನಾ ಯೇಟು ಚೆನ್ನಾಗಿ ನೋಡ್ಕೊಳ್ತಿದ್ದಲೋ ಅಷ್ಟೆ ವೈನಾಗಿ ಕೋಡಿಯನ್ನೂ ಕಾಣ್ತಿದ್ಳು. ಎಷ್ಟೋ ಬಾರಿ ಕೋಡಿಗೆ ಅನಿಸಿದ್ದುಂಟು. ಇವರೇನಾದ್ರೂ ನನ್ನವ್ವನಾ? ನನ್ನ ಅವ್ವ ಆಗ್ಬಿಟ್ಟಿದ್ರೆ? ಎಂಬ ಒಳಆಸೆಯೂ ಇತ್ತು. ಅಯ್ಯನ ಜತೆ ಹೋದಾಗಷ್ಟೇ ಅಲ್ಲ, ಬೇರೆ ಏನಾದ್ರೂ ಇಚಾರ ಮುಟ್ಸಕ್ಕೆ ಕೋಡಿ ತೀತಾಕ್ಕೆ ಹೋದಾಗಲೂ ನರ್ಸಿ ಮನ್ಗೆ ಹೋಗಿ ಬರ್ತಿದ್ದ. ಆಗ ಅವ್ಳು ಮಾಡ್ತಿದ್ದ ಉಪ್ಚಾರದಿಂದ ಕೋಡಿ ಉಬ್ಬಿ ಹೋಗ್ತಿದ್ದ. ಏನಾದರೊಂದು ನೆವ ಹೇಳಿ ವಾರಕ್ಕೊಮ್ಮೆ ತೀತಾಕ್ಕೋಗಕ್ಕೆ ಹಂಬ್ಲಿಸುತ್ತಿದ್ದ.

ನೀಗೊನಿ – ಭಾಗ 3: ಕುಂಟ್ನಾಯಿ ಕಚ್ಚಿದ್ದೇ ತಡ ನನ್ಜ ನಾಯ್ಗಳಿಗಿಂತಲೂ ಜೋರಾಗಿ ಅರಚಿದ!

ಅಯ್ಯ ಹೋದಾಗಲಂತೂ ನರ್ಸಿ ಮನೆಯಲ್ಲಿ ಹಬ್ಬದ ವಾರ್ತಾವರ್ಣ. ಅಯ್ಯ ಬರ್ತಾರೆ ಅಂತ ಕೋಳಿ, ಕುರಿಗಳೆಲ್ಲ ಸಾರ್ಗೆ ಸಿದ್ಧವಾಗುತ್ತಿದ್ದವು. ಆ ಬಾಡಿನ ಗಮ್ಲು ಕೋಡಿನ್ನ ಸೆಳೆದರೆ, ನರ್ಸಿ ಗಮ್ಲು ಅಯ್ಯನ ಸೆಳೆತಿತ್ತು. ವಾರಕ್ಕೆ ಎರಡ್ಮೂರು ಸಾರಿ ಈ ಬಾಡೂಟ ತಪ್ಪುತ್ತಿರಲಿಲ್ಲ. ಅಯ್ಯರ ಹೆಂಡ್ತಿ ನಾಗಮ್ನೋರು ಯಾಕೆ ಇಂಗೆ ನನ್ನ ನೋಡ್ಕಳಲ್ಲ ಎಂಬ ಪ್ರಶ್ನೆ ಕೋಡಿಗೆ ಕಾಡ್ತಾನೇ ಇತ್ತು. ನಾಗಮ್ಮನೋರು ಯಾವಾಗ್ಲೂ ಚಿಟಾಪಟಾ ಅಂತಿರೋದೇ. ನರಸಮ್ಮನಂಥೋರು ನನ್ನವ್ವ ಆಗಿದ್ರೆ ಅಂತಾ ಎಷ್ಟು ಸಾರಿ ಅಂದ್ಕಂಡಿದಾನೋ ಲೆಕ್ಕವೇ ಇಲ್ಲ. ಎಲ್ಲ ನೆನಪಿಸ್ಕೊಳ್ತಾ ಹಟ್ಟಿಯಲ್ಲಿ ರಾಸುಗಳ್ನ ಕಟ್ಟಾಕಿ ಮನೆ ಹಜಾರ್ದ ಆಚ್ಗೆ ನಿಂತು, “ಅಯ್ಯ…” ಎಂದ. “ಹೇ ಕೋಡಿ, ಗಾಡಿ ಕಟ್ಟೋ ಹೊಲ್ಡಣ. ತಡ ಆಯ್ತು…” ಎಂಬ ದನಿ ಒಳಗಿಂದಲೇ ಕೇಳುಸ್ತು. “ಅಯ್ಯ ವಟ್ಟೆ ಅಸಿತೈತೆ. ಇಂಗ್ ಮನ್ಗೋಗಿ ಅಂಗೇ ಬಂದ್ಬಿಡ್ತೀನಿ.” “ಹೇ ನಡ್ಯೋ… ಯಾವಾಗ್ಲೂ ತಿನ್ನದೇ. ಈಗ್ಲೇ ತಡ ಆಗೈತೆ. ಅಲ್ಲೇ ಏನಾದ್ರೂ ತಿನ್ವಂತೆ,” ಎಂದಿದ್ದೇ ತಡ, ಒಳ್ಮನೆಯಿಂದ ನಾಗಮ್ಮಳ ದನಿ – “ಹೋಗೋಗಿ ಆ ನನ್ನ ಸವ್ತಿ ಕಾಯ್ತಾವಳೆ. ನನ್ನ ಗಂಡನ್ನು ಸೆರಗಲ್ಲಿ ಕಂಟ್ಕಂಡವಳೆ. ಆಹಹಾ ಎಟೊಂದು ಸಂತಸ ಮೊಗ್ದಲ್ಲಿ…” ಶುರುವಿಟ್ಟಿಕೊಂಡಿದ್ದನ್ನ ಕೇಳಿಸಿಕೊಂಡು ಕೋಡಿ, ಈ ರಗ್ಳೆ ಯಾವಾಗ್ಲೂ ಇದ್ದದೇ ಅಂತ ತನ್ನ ಮಡ್ದಿ ದೊಡ್ಡೀರಿನಾ ನೆನಸ್ಕೋತ ಗಾಡಿಗೆ ಎತ್ಗುಳನ್ನು ಬಿಚ್ಚಲು ಕೊಟ್ಟಿಗೆಗೆ ಹ್ವಾದ.

ಕಲಾಕೃತಿ ಕೃಪೆ: Unsplash ಜಾಲತಾಣ

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ರವಿಕುಮಾರ್ ನೀಹ
ರವಿಕುಮಾರ್ ನೀಹ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯವರು. ಕನ್ನಡ ಮೇಷ್ಟ್ರು. ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಪರಿಭಾಷೆಗಳನ್ನು ಜೋಡಿಸಿದ ಗಮನಾರ್ಹ ವಿಮರ್ಶಕ. ಇತ್ತೀಚೆಗೆ ಬಿಡುಗಡೆಯಾದ 'ಅರಸು ಕುರನ್ಗರಾಯ' ಕೃತಿ ಇವರ ಸಂಶೋಧನಾ ಆಸಕ್ತಿಯನ್ನು ಮತ್ತು ನಿಜವಾದ ನೆಲಮೂಲದ ಸಂಶೋಧನೆಗಳು ಸಾಗಬೇಕಾದ ಹಾದಿಯನ್ನು ಸಾರುವ ಅಪೂರ್ವ ದಾಖಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...