ಈ ದಿನ ಸಂಪಾದಕೀಯ | ಶೇ 33 ಅಂಕ ನಿಗದಿ- ಭೇದಭಾವ ಹೆಚ್ಚಿಸುವ ಪಲಾಯನವಾದಿ ಹಾದಿ

Date:

ಸರ್ಕಾರ ಮನಸ್ಸು ಮಾಡಿದರೆ ಖಾಸಗಿ ಶಾಲೆಗಳಿಗೆ ಸರಿಸಮವಾಗಿ ಅಲ್ಲದಿದ್ದರೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ, ಉನ್ನತ ಶಿಕ್ಷಣದ ಕಡೆಗೆ ಹೋಗುವಂತೆ ಬಡ ಮಕ್ಕಳನ್ನು ರೂಪಿಸಬಹುದು. ಅದಕ್ಕಾಗಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕು. ಆದರೆ ಪಾಸಾಗುವ ಕನಿಷ್ಠ ಅಂಕವನ್ನು ಇನ್ನಷ್ಟು ಕಡಿಮೆ ಮಾಡಿ ಹಾಗೋ ಹೀಗೋ ಶೂನ್ಯ ಫಲಿತಾಂಶವನ್ನು ತಡೆಯುವ ದಾರಿ ಕಂಡುಕೊಳ್ಳುವುದು ಬಡ ಮಕ್ಕಳಿಗೆ ಬಗೆಯುವ ದ್ರೋಹ.

- Advertisement -

ದಶಕಗಳಿಂದ ಎಲ್ಲ ಸರ್ಕಾರಗಳು ಸೇರಿ ಬಡವರ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳನ್ನು ತಿಪ್ಪೆಗುಂಡಿ ಆಗಿಸಿವೆ. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಮೊಟ್ಟೆ, ಹಾಲು, ಸಮವಸ್ತ್ರ, ಪುಸ್ತಕ ಎಲ್ಲವನ್ನೂ ಉಚಿತವಾಗಿ ಸರ್ಕಾರ ಕೊಡುತ್ತಿದೆ ಹೌದು. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಶಿಕ್ಷಣ ಕೊಡುವುದನ್ನೇ ಮರೆತಿದೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯತೊಡಗಿದೆ. ಅನೇಕ ಶಾಲೆಗಳು ಮಕ್ಕಳಿಲ್ಲದೇ ಮುಚ್ಚಿ ಹೋಗಿವೆ. ಇರುವ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆಯಿದೆ. ಕಟ್ಟಡವಿದ್ದರೆ, ಶಿಕ್ಷಕರಿಲ್ಲ. ಶಿಕ್ಷಕರಿದ್ದರೆ ಮಕ್ಕಳಿಲ್ಲ, ಎಲ್ಲಾ ಇದ್ದರೆ ಪಾಠ ಮಾಡುವ ಆಸಕ್ತಿ ಇರುವ ಶಿಕ್ಷಕರಿಗಿಲ್ಲ. ಇದು ಸದ್ಯದ ಸರ್ಕಾರಿ ಶಾಲೆಗಳ ದುಸ್ಥಿತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ...

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಮಣಿಸಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಇತ್ತೀಚೆಗೆ ನಡೆದ ಸಂಡೂರು ವಿಧಾನಸಭಾ ಕ್ಷೇತ್ರದ...

ಬಾಹ್ಯಾಕಾಶದಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ ದಿನಗಳಲ್ಲಿ ಸಂಪರ್ಕ, ಹವಾಮಾನ ಮುನ್ಸೂಚನೆ, ವಿಮಾನ ಮತ್ತು ಹಡಗುಗಳ ಜಿಪಿಎಸ್ (GPS), ತುರ್ತು ಸೇವೆಗಳು ಮತ್ತು ಆರ್ಥಿಕ ಜಾಲಗಳು ಸಂಪೂರ್ಣವಾಗಿ...

ಗುಣಮಟ್ಟದ ಶಿಕ್ಷಣ ಕೊಡಲು ಅಸಮರ್ಥವಾಗಿರುವ ಸರ್ಕಾರ ಈಗ ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಲು ಇದ್ದ ಕನಿಷ್ಠ ಅಂಕವನ್ನು 35ರಿಂದ 33ಕ್ಕೆ ಇಳಿಸಲು ನಿರ್ಧರಿಸಿದೆ. ಈ ವರ್ಷದಿಂದಲೇ ಈ ನಿಯಮ ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ

ಹೊಸ ನಿಯಮದ ಪ್ರಕಾರ 625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣ ಆಗಲಿದ್ದಾರೆ. ಅದೂ ಆಂತರಿಕ ಅಂಕ, ಬಾಹ್ಯ ಅಂಕ ಎರಡೂ ಸೇರಿ. ಇದು ಬಹಳ ಅಪಾಯಕಾರಿಯಾದ ತೀರ್ಮಾನ. ಕೇಂದ್ರ ಸರ್ಕಾರದ ಸಿ.ಬಿ.ಎಸ್.ಇ. ಪಠ್ಯಕ್ರಮಕ್ಕೆ ಅನುಗುಣವಾಗಿ ಈ ಬದಲಾವಣೆಯನ್ನು ತರಲಾಗಿದೆ. (ಆದರೆ ಸಿ.ಬಿ.ಎಸ್.ಇ. ಪಠ್ಯಕ್ರಮದಲ್ಲಿ ಥಿಯರಿ ಮತ್ತು ಪ್ರ್ಯಾಕ್ಟಿಕಲ್ಸ್ ಎರಡರಲ್ಲೂ ಪ್ರತ್ಯೇಕವಾಗಿ ತಲಾ ಶೇ.33ರಷ್ಟು ಅಂಕ ಗಳಿಕೆ ಕಡ್ಡಾಯ). ಬ್ರಿಟಿಷ್ ವಸಾಹತುಶಾಹಿ ಶೈಕ್ಷಣಿಕ ವ್ಯವಸ್ಥೆಯ ಪಳೆಯುಳಿಕೆಯಿದು. ಬ್ರಿಟನ್ನಿನಲ್ಲಿ ತೇರ್ಗಡೆಯ ಶೇಕಡಾವಾರು ಅಂಕವನ್ನು 65ಕ್ಕೆ ನಿಗದಿ ಮಾಡಿದರೆ ಭಾರತದಂತಹ ತನ್ನ ವಸಾಹತು ದೇಶಗಳಲ್ಲಿ ಶೇ..65ರ ಅರ್ಧದಷ್ಟು (ಶೇ.33) ಅಂಕಗಳನ್ನು ಗೊತ್ತುಪಡಿಸಿತು. ಯಾಕೆಂದರೆ ವಸಾಹತು ದೇಶಗಳ ಬುದ್ಧಿಮತ್ತೆಯನ್ನು ತನ್ನ ಜನರ ಬುದ್ಧಿವಂತಿಕೆಯ ಅರ್ಧದಷ್ಟು ಮಾತ್ರ ಎಂದು ಅಳತೆ ಮಾಡಿತ್ತು. ಆರಂಭದಲ್ಲಿ ಶೇ.32.5ರಷ್ಟಿದ್ದದ್ದನ್ನು ಆನಂತರ 1861ಲ್ಲಿ ಶೇ.33ಕ್ಕೆ ನಿಗದಿ ಮಾಡಿ ‘ರೌಂಡ್ ಆಫ್’ ಮಾಡಲಾಯಿತು. ತನಗೆ ಬೇಕಾದದ್ದು ಗುಮಾಸ್ತರು ಮತ್ತು ಕೆಳಹಂತದ ಆಡಳಿತಗಾರರ ಪಡೆ. ಅದನ್ನು ತಯಾರು ಮಾಡಲು ಇಷ್ಟು ಅಂಕಗಳ ಗಳಿಕೆ ಸಾಕು ಎಂಬುದು ಬ್ರಿಟಿಷರ ಧೋರಣೆಯಾಗಿತ್ತು. ಈ ವಸಾಹತುಶಾಹಿ ಮನಸ್ಥಿತಿಗಳಿಂದ ಹಲವು ದೇಶಗಳು ಹೊರಬಿದ್ದಿವೆ.  ಶಾಲಾ ತೇರ್ಗಡೆ ಶೇಕಡಾವಾರು ಅಂಕಗಳನ್ನು 50 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ನಿಗದಿಪಡಿಸಿವೆ.

ಕರ್ನಾಟಕದಲ್ಲಿ ಬಹು ಕಾಲದಿಂದ ಜಾರಿಯಲ್ಲಿರುವ ನಿಯಮದಂತೆ ಪ್ರಥಮ ಭಾಷೆ ಕನ್ನಡದಲ್ಲಿ ನೂರು ಅಂಕಗಳಿಗೆ ನಡೆಸುವ ಪರೀಕ್ಷೆಯಲ್ಲಿ ಮುವ್ವತ್ತೈದು ಅಂಕ ಮತ್ತು ಆಂತರಿಕ ಇಪ್ಪತ್ತೈದು ಅಂಕ ಹಾಗೂ ಮಿಕ್ಕಂತೆ ಉಳಿದ ಭಾಷೆ, ವಿಷಯಗಳಿಗೆ 80 ಅಂಕಗಳಲ್ಲಿ 28, ಆಂತರಿಕ ಅಂಕ ಸೇರಿ ಒಟ್ಟು 35 ಅಂಕ ಪಡೆದರೆ ಪಾಸ್ ಎಂದು ಪರಿಗಣಿಸಲಾಗುತ್ತಿತ್ತು. ಹೊಸ ನಿಯಮದಂತೆ ಆಂತರಿಕ ಮತ್ತು ಬಾಹ್ಯ ಪರೀಕ್ಷೆ ಸೇರಿ 33 ಅಂಕ ಪಡೆದರೆ ಉತ್ತೀರ್ಣ ಎಂದು ತಿದ್ದುಪಡಿ ಮಾಡಲಾಗಿದೆ. ಅಂದರೆ ಪರೀಕ್ಷೆಯಲ್ಲಿ ಕೇವಲ 20 ಅಂಕ, ಆಂತರಿಕ 13 ಅಂಕ ಕೊಟ್ಟು ಮುಂದಕ್ಕೆ ತಳ್ಳುವ ಕೆಲಸಕ್ಕೆ ಸರ್ಕಾರ ಹೊರಟಿದೆ. ಇದು ನಿಜವಾಗಿಯೂ ಈಗಾಗಲೇ ಕುಸಿದಿರುವ ಶಿಕ್ಷಣ ಗುಣಮಟ್ಟವನ್ನು ಪಾತಾಳಕ್ಕೆ ತಳ್ಳಲಿದೆ ಎಂಬುದು ಶಿಕ್ಷಕರು ಮತ್ತು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

2025-26ನೇ ಸಾಲಿನಿಂದ ಈ ನಿಯಮ ಜಾರಿಗೆ ಬರಲಿದೆ. ಈ ವರ್ಷ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು, ಪುನರಾವರ್ತಿತರಿಗೆ, ಖಾಸಗಿ ಅಭ್ಯರ್ಥಿಗಳಿಗೂ ಈ ನಿಯಮ ಅನ್ವಯಿಸಲಿದೆ ಎಂಬುದಾಗಿ ಸಚಿವರು ತಿಳಿಸಿದ್ದಾರೆ. ಇದು ಯಾವ ರೀತಿಯಲ್ಲಿ ಪರೀಕ್ಷಾ ಸುಧಾರಣೆಯಾಗಿದೆ?

ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ತಕ್ಷಣವೇ ಮತ್ತೆ ಎರಡು ಬಾರಿ ಪರೀಕ್ಷೆ ಬರೆಯುವ ಅವಕಾಶವನ್ನು ರಾಜ್ಯ ಶಿಕ್ಷಣ ಇಲಾಖೆ ಕಳೆದ ವರ್ಷದಿಂದ ಕಲ್ಪಿಸಿದೆ. ಅದು ನಿಜವಾಗಿಯೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಸಾಗಲು ಪ್ರೋತ್ಸಾಹದಾಯಕ ಕ್ರಮ. ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಟಿವಿ ಅಳವಡಿಕೆ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಿತ್ತು. ಕರ್ತವ್ಯಲೋಪ ಎಸಗುತ್ತಿದ್ದ ಬೇಜವಾಬ್ದಾರಿ ಶಿಕ್ಷಕರ ಮೇಲೆ ನಿಗಾ ಇಡುವುದು ಇದೇ ಸುಧಾರಣಾ ಕ್ರಮದ ಭಾಗವಾಗಿತ್ತು. ಅಷ್ಟೇ ಅಲ್ಲ, ಫಲಿತಾಂಶ ಕುಸಿದ ಶಾಲೆಗಳಲ್ಲಿ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡುವ ಮೂಲಕ ಚುರುಕು ಮುಟ್ಟಿಸಲಾಗಿತ್ತು. 

ಈಗಾಗಲೇ ಒಂದರಿಂದ ಒಂಭತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳನ್ನು ಫೇಲ್‌ ಮಾಡಬಾರದು ಎಂಬ ನಿಯಮದಿಂದಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಫೇಲ್‌ ಆಗುವ ಭಯವಿಲ್ಲ. ಅವರು ಓದಿನ ಕಡೆಗೆ ಆಸಕ್ತಿ ವಹಿಸುತ್ತಿಲ್ಲ. ಹೆತ್ತವರೂ ಉದಾಸೀನ ತೋರುತ್ತಿದ್ದಾರೆ. ಫೇಲ್‌ ಆಗುವ ಭಯವಿದ್ದಾಗ ಕನಿಷ್ಠ 35 ಅಂಕ ಪಡೆಯಲೆಂದು ಶ್ರಮಪಡುತ್ತಿದ್ದರು. ಆದರೆ ಬಹಳ ವರ್ಷಗಳಿಂದ ಹಾಜರಾತಿ, ಅಂಕ ಎರಡೂ ಇಲ್ಲದೆಯೂ ಮಕ್ಕಳನ್ನು ಒಂಭತ್ತನೇ ತರಗತಿಯವರೆಗೆ ಸುಮ್ಮನೆ ಮುಂದಿನ ವರ್ಗಗಳಿಗೆ ತಳ್ಳಲಾಗುತ್ತಿದೆ. ಆಯಾ ತರಗತಿಯಲ್ಲಿ ಏನೇನು ಕಲಿಯಬೇಕಿತ್ತೋ ಅವನ್ನು ಕಲಿಯದೇ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಫೇಲ್‌ ಆಗುತ್ತಿದ್ದಾರೆ. ಅಲ್ಲಿಗೆ ಸರ್ಕಾರಿ ಶಾಲೆಗಳ ಗಣನೀಯ ಪ್ರಮಾಣದ ಮಕ್ಕಳ ಶಿಕ್ಷಣ ಕೊನೆಗೊಳ್ಳುತ್ತಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಕನಿಷ್ಠ ಮೂಲ ಸೌಕರ್ಯಗಳ ಜೊತೆಜೊತೆಗೆ ಪೋಷಕರು ಮತ್ತು ಶಿಕ್ಷಕರ ಕಾಳಜಿಯಿಂದ ಶಾಲೆಗಳ ನಿರ್ವಹಣೆ ಉತ್ತಮವಾಗಿದೆ. ಬದ್ಧತೆ ಇರುವ ಶಿಕ್ಷಕರು, ಶಿಕ್ಷಣಾಧಿಕಾರಿಗಳು ಇದ್ದರೆ ಸಾಕು. ಕರಾವಳಿ ಭಾಗದಲ್ಲಿ ಈಗಲೂ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗೆ ಸರಿಸಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರ ಪಟ್ಟಿಯಲ್ಲಿ ಸರ್ಕಾರಿ ಶಾಲಾ ಮಕ್ಕಳೂ ಇರುತ್ತಾರೆ ಎಂಬುದು ಗಮನಾರ್ಹ. ಇಲ್ಲಿ ಅಧಿಕಾರಿಗಳು, ಶಿಕ್ಷಕರು ಪೋಷಕರ ಜವಾಬ್ದಾರಿಯೂ ಇದೆ. 

ಸರ್ಕಾರ ಮನಸ್ಸು ಮಾಡಿದರೆ ಖಾಸಗಿ ಶಾಲೆಗಳಿಗೆ ಸರಿಸಮವಾಗಿ ಅಲ್ಲದಿದ್ದರೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ, ಉನ್ನತ ಶಿಕ್ಷಣದ ಕಡೆಗೆ ಹೋಗುವಂತೆ ಬಡ ಮಕ್ಕಳನ್ನು ರೂಪಿಸಬಹುದು. ಅದಕ್ಕಾಗಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕು. ಆದರೆ ಪಾಸಾಗುವ ಕನಿಷ್ಠ ಅಂಕವನ್ನು ಇನ್ನಷ್ಟು ಕಡಿಮೆ ಮಾಡಿ ಹಾಗೋ ಹೀಗೋ ಶೂನ್ಯ ಫಲಿತಾಂಶವನ್ನು ತಡೆಯುವ ದಾರಿ ಕಂಡುಕೊಳ್ಳುವುದು ಬಡ ಮಕ್ಕಳಿಗೆ ಬಗೆಯುವ ದ್ರೋಹ. ಅವರನ್ನು ಕಷ್ಟಪಟ್ಟಾದರೂ ಕಲಿಯುವಂತೆ ಮಾಡಲು ಸಹ್ಯ ವಾತಾವರಣ ರೂಪಿಸಬೇಕು. ಅದು ಬಿಟ್ಟು ಶಿಕ್ಷಣದ ಗುಣಮಟ್ಟವನ್ನು ಸರ್ಕಾರವೇ ಮುಂದೆ ನಿಂತು ಕೆಳಗೆ ಬೀಳಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಈ ಆದೇಶವನ್ನು ವಾಪಸ್‌ ಪಡೆಯಬೇಕು. ಬೋಧನೆಯ ಮತ್ತು ಮೂಲಸೌಕರ್ಯಗಳ ಮಟ್ಟವನ್ನು ಹೆಚ್ಚಿಸುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ದೊರೆಯಲೇಬೇಕು.

ಶಿಕ್ಷಣ ಮೂಲಭೂತ ಹಕ್ಕು ಎಂಬುದನ್ನು ಸರ್ಕಾರಗಳು ಮರೆಯಕೂಡದು. ಬಡವ ಬಲ್ಲಿದರೆಂಬ ಭೇದಭಾವ ಇಲ್ಲದೆ ಸಮಾನ ಶಾಲಾ ಶಿಕ್ಷಣವನ್ನು ನೀಡುವುದೇ ಕಲ್ಯಾಣ ಸರ್ಕಾರಗಳ ಅಂತಿಮ ಗುರಿಯಾಗಿರಬೇಕು. ಅದನ್ನು ಮರೆತು ತೇರ್ಗಡೆಯ ಅಂಕಗಳನ್ನು ತಗ್ಗಿಸುವುದು ಅತ್ಯಂತ ಸುಲಭದ ದಾರಿ. ಬಡಜನರ ಕಿಸೆಗಳಿಗೆ ಎಟುಕದ ಖಾಸಗಿ ಶಾಲೆಗಳು ಮತ್ತು ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳ ನಡುವಣ ಅಂತರವನ್ನು ಹೆಚ್ಚಿಸುವ ದುರುಳ ಹಾದಿ. ಅವಕಾಶವಾದಿ ಮತ್ತು ಪಲಾಯನವಾದಿ ಹಾದಿ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ತಾಪಮಾನ ಏರಿಕೆಗೆ ಬದುಕಿನ ಬೆಲೆ ತೆರುವವರು ಯಾರು?

ಭೂಮಿಗೆ ನಮ್ಮ ಅಗತ್ಯವಿಲ್ಲ, ನಮಗೆ ಭೂಮಿಯ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು....

ಈ ದಿನ ಸಂಪಾದಕೀಯ | ಜನಪೀಡಕ ಕೇಸರಿ ಕೇಡಿಗಳಿಗೆ ಕಡೆಗಾಲ ಬಂದಿದೆ, ಎಚ್ಚರಗೊಳ್ಳುತ್ತಿದೆ ಜನಶಕ್ತಿ!

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ ಸ್ವತಂತ್ರ ಭಾರದ್ವಾಜ್ ಎಂಬ ವ್ಯಕ್ತಿ ನೀಡಿದ ಹೇಳಿಕೆಯೀಗ...

ಈ ದಿನ ಸಂಪಾದಕೀಯ | ಗುಳೆ ಹೊಸದಲ್ಲ, ಪರ್ಯಾಯ ಹುಡುಕದಿರುವುದು ಸರ್ಕಾರದ ವೈಫಲ್ಯವಲ್ಲವೇ?

ಗುಳೆ ಸಮಸ್ಯೆಯನ್ನು ಕೇವಲ ಕೃಷಿಕರ, ಬಡ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ...

ಈ ದಿನ ಸಂಪಾದಕೀಯ | GDP ಶೇ.7.8; ಅಸಲಿ ಅಭಿವೃದ್ಧಿ ಯಾರ ಪಾಲಿಗೆ?

ಈ ದೇಶದ GDP ದರ ನಿರೀಕ್ಷೆಗೂ ಮೀರಿ ಶೇ.7.8ರಷ್ಟು ದಾಖಲಾಗಿದ್ದರೆ ಅದು...