ಈ ದಿನ ಸಂಪಾದಕೀಯ | ಬಿಬಿಎಂಪಿ ಚುನಾವಣೆ; ಸಿದ್ದರಾಮಯ್ಯ ಸರ್ಕಾರದ ಮುಂದಿವೆ ಹಲವು ಸವಾಲು

Date:

ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ವಿಚಾರವು ಗೊಂದಲದ ಗೂಡಾಗಿದ್ದು, ಅಧಿಕಾರಿಗಳ ಸುಲಿಗೆಗೆ ಸಾಧನವಾಗಿದೆ ಎನ್ನುವ ಆರೋಪಗಳಿವೆ. ಇನ್ನು ಹೊರವರ್ತುಲ ರಸ್ತೆ ನಿರ್ಮಾಣ, ಶಿವರಾಮ ಕಾರಂತ ಬಡಾವಣೆ ನಿರ್ಮಾಣದಂಥ ಹಲವು ವಿಚಾರಗಳ ಬಗ್ಗೆ ಪಾಲಿಕೆಯಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ ಶೀಘ್ರವಾಗಿ ಪಾಲಿಕೆಯ ಚುನಾವಣೆ ನಡೆಸುವುದು ಅತ್ಯಗತ್ಯವಾಗಿದೆ. 

ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳ ಭರವಸೆಯನ್ನು ಈಡೇರಿಸುವ ಸಿದ್ದರಾಮಯ್ಯ ಸರ್ಕಾರ ಆರಂಭದಲ್ಲೇ ಜನರ ಮೆಚ್ಚುಗೆ ಗಳಿಸಿದೆ. ಕಾಂಗ್ರೆಸ್ ಸರ್ಕಾರದ ಹಾದಿ ಇನ್ನೂ ಕಠಿಣವಾಗಿದ್ದು, ಸರ್ಕಾರದ ಮುಂದೆ ಹಲವು ಸವಾಲುಗಳಿವೆ. ಅವುಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯೂ ಒಂದು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಬಿಬಿಎಂಪಿ ಮಾಜಿ ಮಹಾಪೌರರು ಹಾಗೂ ಆಡಳಿತ ಪಕ್ಷದ ಮಾಜಿ ನಾಯಕರುಗಳ ನಿಯೋಗ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಬಿಬಿಎಂಪಿ ಚುನಾವಣೆ ಹಾಗೂ ಬಿಜೆಪಿ ಅವಧಿಯಲ್ಲಿ ನಡೆದಿರುವ ಅವೈಜ್ಞಾನಿಕ ವಾರ್ಡ್ ವಿಂಗಡಣೆ ಕುರಿತಂತೆ ಸುದೀರ್ಘವಾಗಿ ಚರ್ಚಿಸಿತು.

ಬಿಬಿಎಂಪಿಯೂ ಸೇರಿದಂತೆ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿಗಳ ಅವಧಿ ಮುಗಿದು ಎರಡು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಅದರಲ್ಲೂ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲದೇ ಬೆಂಗಳೂರು ನಗರದ ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವ ವ್ಯಾಪಕ ಅಸಮಾಧಾನವಿದೆ. ಮುಂದಿನ ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಅದರ ಒಳಗೆ ಬಿಬಿಎಂಪಿ ಚುನಾವಣೆ ನಡೆಯವುದೇ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕ್ಷೇತ್ರ ವಿಂಗಡಣೆಯ ನೆಪದಲ್ಲಿ ಹಿಂದಿನ ಸರ್ಕಾರ ಚುನಾವಣೆ ಮುಂದೂಡಿತ್ತು. ನಂತರ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ವಿಂಗಡಿಸಲಾಗಿತ್ತು. ಅದರ ಬಗ್ಗೆ ರಾಮಲಿಂಗಾರೆಡ್ಡಿ ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಕೆಲವರು ಬಿಜೆಪಿ ಸರ್ಕಾರದ ಕ್ಷೇತ್ರ ವಿಂಗಡಣೆ ರದ್ದುಪಡಿಸಬೇಕು ಎನ್ನುತ್ತಿದ್ದರೆ, ಮತ್ತೆ ಕೆಲವರು ಅದೇ ವಿಂಗಡಣೆಯ ಆಧಾರದ ಮೇಲೆ ಚುನಾವಣೆಗೆ ಹೋಗುವುದು ಒಳಿತು ಎನ್ನುತ್ತಿದ್ದಾರೆ. ಈ ನಡುವೆ ಹಿಂದಿನ ಸರ್ಕಾರ ಮಾಡಿದ್ದ ವಾರ್ಡ್ ವಿಂಗಡಣೆಯನ್ನು ಪರಿಶೀಲಿಸಿ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆಪಿಸಿಸಿಯು ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ‘ಬಿಬಿಎಂಪಿ ಚುನಾವಣಾ ಪೂರ್ವ ತಯಾರಿ ಸಮಿತಿ’ ರಚಿಸಿ, 15 ದಿನದಲ್ಲಿ ವರದಿ ಸಲ್ಲಿಸಲು ಸೂಚಿಸಿತ್ತು. ಆ ಸಮಿತಿ ಈಗ ವರದಿ ಸಲ್ಲಿಸಿದ್ದು, ‘ಈ ವರ್ಷದ ಅಂತ್ಯಕ್ಕೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕು’ ಎಂದು ವರದಿ ನೀಡಿದೆ. ಇದೇ ವೇಳೆ ಡಿ ಕೆ ಶಿವಕುಮಾರ್ ಚುನಾವಣೆಗೆ ಸಜ್ಜಾಗಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಬಿಬಿಎಂಪಿ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರದ ಮುಂದೆ ಹಲವು ತೊಡಕುಗಳಿವೆ. ಒಬಿಸಿ ಮೀಸಲಾತಿ ವಿಚಾರ ಕೋರ್ಟ್‌ನಲ್ಲಿದ್ದು, ಈ ಸಂಬಂಧ ಸರ್ಕಾರ ಕೋರ್ಟ್‌ಗೆ ಸಮರ್ಥನೆ ಕೊಡಬೇಕಿದೆ. ಮುಂದಿನ ವಿಚಾರಣೆ ಜುಲೈ 4ಕ್ಕೆ ವಿಚಾರಣೆ ನಿಗದಿಯಾಗಿದೆ.

ಬಿಬಿಎಂಪಿ ಚುನಾವಣೆ ಸಂಬಂಧ ಎರಡು ಪಕ್ಷಗಳೂ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿವೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತಿದ್ದು, ಕಾಂಗ್ರೆಸ್ ಪರ ಅಲೆ ಇದೆ. ಈಗಲೇ ನಡೆಸಿದರೆ ಒಳಿತು ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ನ ಒಂದು ವಲಯದಲ್ಲಿದೆ. ಬಿಜೆಪಿ ಕೂಡ ಈ ವಿಚಾರದಲ್ಲಿ ಅತ್ಯುತ್ಸಾಹದಿಂದಿದೆ. ಕಾಂಗ್ರೆಸ್ ಅಲೆಯ ನಡುವೆಯೂ ಬೆಂಗಳೂರಿನಲ್ಲಿ ಬಿಜೆಪಿ ಹೆಚ್ಚಿನ ಸಾಧನೆ ಮಾಡಿದೆ. ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಬಿಜೆಪಿ 16 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಅಧಿಕಾರದಲ್ಲಿದೆ. ಉಳಿದ ಕೆಲವು ಕಡೆ ಕಾಂಗ್ರೆಸ್ ಅತ್ಯಂತ ಕಡಿಮೆ ಅಂತರದಲ್ಲಿ ಗೆದ್ದಿದೆ. ಹಾಗಾಗಿ ಈಗ ಚುನಾವಣೆ ನಡೆದರೆ, ಬಿಜೆಪಿಗೆ ಅನುಕೂಲವಾಗಲಿದೆ. ಬಿಬಿಎಂಪಿ ಗದ್ದುಗೆ ಹಿಡಿದು ವಿಧಾನಸಭಾ ಚುನಾವಣೆಯ ಸೋಲಿನಿಂದ ಕಳೆಗುಂದಿರುವ ಪಕ್ಷದ ಕೇಡರ್‌ಗಳ ನೈತಿಕ ಸ್ಥೈರ್ಯ ಹೆಚ್ಚಿಸುವುದು ಬಿಜೆಪಿ ಲೆಕ್ಕಾಚಾರ.  

ಪಕ್ಷಗಳ ಈ ಲೆಕ್ಕಾಚಾರ ಹೊರತುಪಡಿಸಿ ನೋಡಿದರೆ, ಆದಷ್ಟು ಶೀಘ್ರವಾಗಿ ಪಾಲಿಕೆಯ ಚುನಾವಣೆ ನಡೆಸುವುದು ಅತ್ಯಗತ್ಯವಾಗಿದೆ. ಜನಪ್ರತಿನಿಧಿಗಳಿಲ್ಲದ ಕಾಲದಲ್ಲಿ ಘಟಿಸಿದ ಮಳೆ, ಪ್ರವಾಹದಂಥ ಕೆಲವು ಅನಾಹುತಗಳಿಂದ ಬೆಂಗಳೂರು ನಲುಗಿ ಹೋಗಿದೆ. ಜೊತೆಗೆ ನಗರದ ಒಳಗೇ ಅಭಿವೃದ್ಧಿಯಲ್ಲಿ ಅಸಮಾನತೆ ಇದೆ. ಕೆಲವು ಏರಿಯಾಗಳಿಗೆ ಹೆಚ್ಚಿನ ಅನುದಾನ ಲಭ್ಯವಾಗುತ್ತಿದ್ದರೆ, ಮತ್ತೆ ಕೆಲವು ಪ್ರದೇಶಗಳು ಕನಿಷ್ಠ ಮೂಲಸೌಕರ್ಯಗಳಿಲ್ಲದೇ ಬವಣೆ ಪಡುತ್ತಿವೆ. ಅದರಲ್ಲೂ ಬಿಬಿಎಂಪಿಯ ಭಾಗವಾದ ವಿವಿಧ ನಗರಸಭೆ, ಪಂಚಾಯಿತಿಗಳ 110 ಹಳ್ಳಿಗಳು ಅಭಿವೃದ್ಧಿಯ ಪಸೆಯೇ ಇಲ್ಲದಂತಿವೆ. ಬಹುತೇಕ ಪ್ರದೇಶಗಳಲ್ಲಿ ಇವತ್ತಿಗೂ ರಸ್ತೆ, ಕುಡಿಯುವ ನೀರು ಕೂಡ ಸಮರ್ಪಕವಾಗಿಲ್ಲ.

ಇವುಗಳ ನಡುವೆ ಪಾಲಿಕೆಯಲ್ಲಿ ಸೂಕ್ತ ನಿರ್ಧಾರದ ಕೊರತೆಯಿಂದ ಬಿ ಖಾತಾ ವಿಚಾರವು ಗೊಂದಲದ ಗೂಡಾಗಿದ್ದು, ಅಧಿಕಾರಿಗಳ ಸುಲಿಗೆಗೆ ಸಾಧನವಾಗಿದೆ ಎನ್ನುವ ಆರೋಪಗಳಿವೆ. ಇನ್ನು ಹೊರವರ್ತುಲ ರಸ್ತೆ ನಿರ್ಮಾಣ, ಶಿವರಾಮ ಕಾರಂತ ಬಡಾವಣೆ ನಿರ್ಮಾಣದಂಥ ಹಲವು ವಿಚಾರಗಳ ಬಗ್ಗೆ ಪಾಲಿಕೆಯಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ.

ಸಿದ್ದರಾಮಯ್ಯನವರ ಸರ್ಕಾರವು ಆದಷ್ಟು ಶೀಘ್ರವಾಗಿ ಬಿಬಿಎಂಪಿ ಚುನಾವಣೆ ನಡೆಸಿ, ನಗರದಲ್ಲಿ ಜನಪ್ರತಿನಿಧಿಗಳ ಆಡಳಿತಕ್ಕೆ ಅನುವು ಮಾಡಿಕೊಡಲಿ ಎನ್ನುವ ನಿರೀಕ್ಷೆ ಜನರಲ್ಲಿದೆ.  

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯವನ್ನು ತಲ್ಲಣಿಸಿದ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ಕೊಡುತ್ತಿರುವ ಸಂದೇಶವೇನು?

ಒಂದು ತಿಂಗಳಲ್ಲಿ ಮೂರ್ನಾಲ್ಕು ಘಟನೆಗಳು ನಡೆದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರಿಗೆ...

ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಜನಾಕ್ರೋಶದ ಹಿಂದೆ ಸುದ್ದಿ ಮಾಧ್ಯಮಗಳ ಪ್ರಚೋದನೆ...

ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!

ಪ್ರಸಿದ್ಧ ಇಂಗ್ಲಿಷ್ ನಿಯತಕಾಲಿಕ 'ದಿ ಎಕಾನಮಿಸ್ಟ್‌'ನ 2022ರ ಏಪ್ರಿಲ್ ಸಂಚಿಕೆಯೊಂದರ ಬರೆಹವೊಂದರ...

ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?

'ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು' ಎನ್ನುವುದು ಕೇವಲ ಒಂದು ಪೊಲಿಟಿಕಲ್...