ಈ ದಿನ ಸಂಪಾದಕೀಯ | ಈ ದಿನ.ಕಾಮ್ ಇಟ್ಟ ಎರಡು ಪುಟ್ಟ ಹೆಜ್ಜೆಗಳು; ನಮ್ಮ ಪ್ರಯತ್ನ ನಿಮ್ಮ ಭಾಗೀದಾರಿಕೆ

Date:

ಈ ದಿನ.ಕಾಮ್‌ ಒಂದು ಮಹತ್ವಾಕಾಂಕ್ಷಿ ಮಾಧ್ಯಮ ಪ್ರಯೋಗಕ್ಕೆ ಈಗ ಎರಡು ವರ್ಷ ತುಂಬಿದೆ. ಪುಟ್ಟ ಮಾಧ್ಯಮ ಸಂಸ್ಥೆಗಳ ದೊಡ್ಡ ನೆಟ್‌ವರ್ಕ್ ಕಟ್ಟುವುದು ನಮ್ಮ ಕನಸಾಗಿತ್ತು. ಆ ಕನಸು ಸಾಕಾರಗೊಂಡದ್ದು ನಿಮ್ಮೆಲ್ಲರ ಜೊತೆಗಾರಿಕೆಯಿಂದ. ಈ ಭಾಗೀದಾರಿಕೆ ಇನ್ನಷ್ಟು ಹೆಚ್ಚಾದರೆ ಮಾತ್ರ ಗುರಿಯೆಡೆಗೆ ಸಾಗಲು ಸಾಧ್ಯ… ಎರಡು ವರ್ಷಗಳನ್ನು ಪೂರೈಸಿದ ಈ ಹೊತ್ತು ಆ ಭಾಗೀದಾರಿಕೆಯ ಬಂಧ ಇನ್ನಷ್ಟು ಹೆಚ್ಚಾಗಲಿ ಎಂಬ ನಿರೀಕ್ಷೆಯಲ್ಲಿ…

ಈದಿನ.ಕಾಮ್‌ ಒಂದು ಮಹತ್ವಾಕಾಂಕ್ಷಿ ಮಾಧ್ಯಮ ಪ್ರಯೋಗ. ಈ ಪ್ರಯೋಗಕ್ಕೆ ಈಗ ಎರಡು ವರ್ಷ ತುಂಬಿದೆ. ಈ ನೆಲದಲ್ಲಿ ಸತ್ಯ, ನ್ಯಾಯ, ಪ್ರೀತಿಗಳನ್ನು ನಿರಂತರವಾಗಿ ಹಂಚುವ ಕೆಲಸ ಮಾಡಬೇಕು. ದ್ವೇಷ, ಅನ್ಯಾಯ ಮತ್ತು ಅಸತ್ಯಗಳು ಸೋಲಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿ ವಿಸ್ತಾರವಾದ ಸಿಟಿಜನ್‌ ಜರ್ನಲಿಸ್ಟರು, ಬರಹಗಾರರನ್ನು ಒಳಗೊಳ್ಳುವುದು, ಪುಟ್ಟ ಮಾಧ್ಯಮ ಸಂಸ್ಥೆಗಳ ದೊಡ್ಡ ನೆಟ್‌ವರ್ಕ್ ಕಟ್ಟುವುದು, ರಾಜ್ಯದ ಮೂಲೆ ಮೂಲೆಯನ್ನೂ ತಲುಪುವುದು, ತಳಮಟ್ಟದಲ್ಲಿ ಪರಿಣಾಮ ಬೀರುವ ರೀತಿಯ ಪ್ರಯೋಗಗಳನ್ನು ಮಾಡುವುದು ನಮ್ಮ ಕನಸಾಗಿತ್ತು.

ಆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದೀಗ ಎರಡು ಹೆಜ್ಜೆ ಸಾಗಿದ್ದೇವೆ. ಕನಸಿನ ವೇಗ ತುಸು ಹೆಚ್ಚೇ ಇತ್ತು; ಅದನ್ನು ಕಾರ್ಯರೂಪಕ್ಕಿಳಿಸುವ ವೇಗ ಅಷ್ಟಿರುವುದು ಸಾಧ್ಯವಿರಲಿಲ್ಲ ಎಂಬ ಪಾಠ ಕಲಿತಿದ್ದೇವೆ. ಎರಡೇ ವರ್ಷಗಳಲ್ಲಿ ಹತ್ತಾರು ಪಾಠಗಳು ನಮ್ಮದಾಗಿವೆ. ಇಂತಹ ಯೋಜನೆ ಶುರುವಾಗುವುದೇ ಇಲ್ಲ; ಶುರುವಾದರೂ ಉಳಿಯುವುದಿಲ್ಲ; ಉಳಿದರೂ ಮುಂದುವರೆಯುವುದಿಲ್ಲ ಎಂದು ಅನುಭವೀ ಗೆಳೆಯರು ಆತಂಕಪಟ್ಟಿದ್ದರು. ಇದು ನಡೆಯುತ್ತಿರುವುದು ನಿಜವೇ ಆದರೆ, ಇದರಲ್ಲಿ ಹತ್ತು ಹುಳುಕುಗಳಿರಲೇಬೇಕು ಎಂದು ಅನುಭವವಿಲ್ಲದ ಸ್ನೇಹಿತರು ಅನುಮಾನ ಪಟ್ಟಿದ್ದರು. ಆದರೆ, ಇಂಥದ್ದೊಂದು ನಡೆದೇ ಬಿಡಲಿ ಎಂದು ಕೈ ಜೋಡಿಸಿದ ನೂರಾರು ಜನರ ಹಲವು ಬಗೆಯ ಕೊಡುಗೆ ಮತ್ತು ಇದೇಕೆ ಸಾಧ್ಯವಿಲ್ಲ ನೋಡೇಬಿಡೋಣ ಎಂಬ ಭಂಡತನಗಳು ಕೈ ಹಿಡಿದವು.

ಹ್ಞಾಂ. ಈಗ ಪ್ರಯಾಣ ದೀರ್ಘ ಎಂಬುದರ ಅರಿವಾಗಿದೆ. ನಡೆದಿರುವುದು ಎರಡೇ ಹೆಜ್ಜೆ ಎಂಬುದು ಖಚಿತವಿದೆ. ಆದರೆ, ನೂರು ಹೆಜ್ಜೆ ನಡೆಯುವ ಧೈರ್ಯ ಬಂದಿದೆ. ಅದಕ್ಕೆ ಬೇಕಾದ ಬುನಾದಿಯನ್ನಷ್ಟೇ ಕಟ್ಟಿಕೊಳ್ಳಲಾಗಿದೆ. ಆ ಬುನಾದಿ ಭದ್ರವಾಗಿಯೇ ಇದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಮಧ್ಯೆ ಪಠ್ಯಪುಸ್ತಕಗಳ ಕೋಮುವಾದೀಕರಣ, 40% ಕಮಿಷನ್‌ ಸರ್ಕಾರ, ಉರಿಗೌಡ – ನಂಜೇಗೌಡ, ಸೌಜನ್ಯ ಪ್ರಕರಣ ಸೇರಿದಂತೆ ಆಯಾ ಸಂದರ್ಭದಲ್ಲಿ ಈದಿನ.ಕಾಮ್‌ನಿಂದ ಗಮನ ಸೆಳೆದ ಸುದ್ದಿ – ವಿಶ್ಲೇಷಣೆಗಳು ಬಂದಿವೆ. ಮಿಲಿಯಗಟ್ಟಲೇ ಜನರಿಂದ ನೋಡಿಸಿಕೊಂಡ ವಿಡಿಯೋಗಳು, ಲಕ್ಷಗಟ್ಟಲೇ ಜನರು ಓದಿದ ಬರಹಗಳಿವೆ.

ಕೆಲವು ವಿಡಿಯೋಗಳು – ಸುದ್ದಿಗಳನ್ನು ಸಾವಿರ ಜನರಷ್ಟೇ ನೋಡಿರಬಹುದು. ಆದರೆ, ಅದರಿಂದ ರಾಜಧಾನಿಯಿಂದ ಬಹುದೂರದ ಹಳ್ಳಿಯ ಅಂಗನವಾಡಿ ರಿಪೇರಿಯಾದದ್ದು, ಊರೊಳಗಿನ ಕಸ ಎತ್ತಲು ಅಧಿಕಾರಿಗಳು ಬಂದದ್ದು, ಅಲೆಮಾರಿ ಸಮುದಾಯಕ್ಕೆ ಆಸರೆ ಸಿಕ್ಕಿದ್ದು, ಅಸ್ಪೃಶ್ಯತೆ ಆಚರಿಸುತ್ತಿದ್ದ ಸಾರ್ವಜನಿಕ ಸ್ಥಳದಲ್ಲಿ ಬದಲಾವಣೆಗೆ ಕಾರಣವಾಗಿದ್ದು – ಸಣ್ಣ ಸಣ್ಣ ಪರಿಣಾಮ ಬೀರಿದ ಇಂತಹ ನೂರಾರು ಸುದ್ದಿಗಳನ್ನು, ಪ್ರಯೋಗಗಳನ್ನು ಪ್ರಕಟಿಸಿದ ಸಂತೋಷ ನಮ್ಮದು.

ಮಣಿಪುರದ ಸಂಘರ್ಷ, ಶಿರೂರು ಗುಡ್ಡ ಕುಸಿತ, ಶಿವಮೊಗ್ಗ ಕೋಮುಗಲಭೆ, ವಯನಾಡಿನ ಭೂಕುಸಿತದ ದುರಂತದ ಸಂದರ್ಭಗಳಲ್ಲಿ ನಮ್ಮ ಯುವ ವರದಿಗಾರರು, ವರದಿಗಾರ್ತಿಯರು ಅಲ್ಲಿಗೇ ಹೋಗಿ ಗ್ರೌಂಡ್‌ ರಿಪೋರ್ಟ್‌ ಮಾಡಿದ್ದರು ಎಂಬ ಹೆಮ್ಮೆ ನಮ್ಮದು.

ರಾಜ್ಯದ ಮೂಲೆ ಮೂಲೆಗಳ ಭಾಷೆ – ಯಾಸೆ – ಸಂಸ್ಕೃತಿಗಳನ್ನು, ನುಡಿಹಲವು – ದೇಸಿ ನುಡಿಗಟ್ಟುಗಳ ಮೂಲಕ ಹೆಕ್ಕಿ ತಲುಪಿಸುವ ಪ್ರಯತ್ನವಾಗಿದೆ. ನಮ್ಮ ವರದಿಗಾರರು, ನುರಿತ ಬರಹಗಾರರ ಬರಹಗಳಲ್ಲದೇ, ಇದುವರೆಗೆ ಎಂದೂ ಬರೆದಿರದವರು, ಕ್ಯಾಮೆರಾ ಮುಂದೆ ನಿಂತು ಮಾತನಾಡಿರದವರು ನಮ್ಮಲ್ಲಿ ತಮ್ಮ ಭಾವನೆಗಳನ್ನು ತೆರೆದಿಟ್ಟಿದ್ದಾರೆ.

ಹ್ಞಾಂ… ನಮ್ಮನ್ನು ಚುನಾವಣಾ ಭವಿಷ್ಯ ನುಡಿಯುವವರಾಗಿ ಮಾತ್ರ ನೆನಪಿಟ್ಟುಕೊಳ್ಳುವವರು ಇದ್ದಾರೆ. ಅದಕ್ಕೆ ಕಾರಣ 2023ರ ವಿಧಾನಸಭಾ ಚುನಾವಣೆಯಲ್ಲಿ ನಡೆಸಿದ ಸಮೀಕ್ಷೆ. ಸಾವಿರಾರು ಮಾಧ್ಯಮ ಕಾರ್ಯಕರ್ತರು ಮತ್ತು ವಿಷಯ ಪರಿಣಿತರು ಜೊತೆಗೂಡಿದ್ದರಿಂದ ಸಾಧ್ಯವಾದ ಸಮೀಕ್ಷೆಯದು. ಚುನಾವಣಾ ಫಲಿತಾಂಶ ಬದಲಾಯಿಸಲೂ ಕೆಲಸ ಮಾಡುವುದು ಮಾಧ್ಯಮ ಸಂಸ್ಥೆಯ ಕರ್ತವ್ಯ. ದ್ವೇಷ ರಾಜಕಾರಣವನ್ನು ವಿರೋಧಿಸುತ್ತಲೇ, ಆಳುವ ಸರ್ಕಾರ ಯಾವುದೇ ಆದರೂ ನಿಷ್ಠುರವಾಗಿ ವಿಮರ್ಶಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಾಂಗ್ಲಾ ಹಿಂದೂಗಳ ಸಂಕಟ: ದಿಟವೆಷ್ಟು, ಸಟೆಯೆಷ್ಟು?

ಇಲ್ಲಿಯವರೆಗೆ ಐನೂರಕ್ಕೂ ಹೆಚ್ಚು ಬರಹಗಾರರು ಈದಿನದಲ್ಲಿ ಬರೆದಿದ್ದಾರೆ; ನಮ್ಮ ಜಿಲ್ಲಾ ಸಂಯೋಜಕರಲ್ಲದೇ, ದೊಡ್ಡ ಸಂಖ್ಯೆಯ ಸಿಟಿಜನ್‌ ಜರ್ನಲಿಸ್ಟರು ನಮ್ಮೊಂದಿಗೆ ಹೆಜ್ಜೆ ಹಾಕಿದ್ದಾರೆ. ತಾವೂ ಬೆಳೆದು, ಸಂಸ್ಥೆಯನ್ನು ಬೆಳೆಸಿದ್ದಾರೆ. ಈದಿನದ ಹುಟ್ಟಿಗೆ ಕೈ ಜೋಡಿಸಿದ ಜನಸಂಘಟನೆಗಳು ಮತ್ತು ಕರ್ನಾಟಕದ ಹಲವಾರು ಸಂಘ-ಸಂಸ್ಥೆಗಳು ನಮ್ಮ ಬೆಳವಣಿಗೆಗೆ ಕಾರಣರಾಗಿದ್ದಾರೆ. ಸಣ್ಣ ಪ್ರಮಾಣದ ವಂತಿಗೆಯಿಂದ ಹಿಡಿದು, ದೊಡ್ಡ ಹೂಡಿಕೆಯವರೆಗೆ ಇದಕ್ಕೆ ಹಣಕಾಸಿನ ನೆರವು ಕೊಟ್ಟವರ ಪಟ್ಟಿಯೂ ಬಹಳ ದೊಡ್ಡದಿದೆ. ಅವರೆಲ್ಲರನ್ನೂ ಈ ಹೊತ್ತು ನಾವು ನೆನೆಯುತ್ತೇವೆ.

ಈದಿನ ಇದೀಗ, ಇನ್ನೊಂದು ಮಜಲಿಗೆ ಹೊರಳಿಕೊಳ್ಳುತ್ತಿದೆ. ಗುಣಮಟ್ಟದಲ್ಲೂ, ಜನರನ್ನು ತಲುಪುವ ವಿಚಾರದಲ್ಲೂ. ಆ ಇನ್ನೊಂದು ನೆಗೆತಕ್ಕೆ ಬೇಕಾದ ತಯಾರಿಯಲ್ಲಿ ಈದಿನ ತಂಡ ಕೆಲಸ ಮಾಡುತ್ತಿದೆ. ರಾಜ್ಯ – ದೇಶವನ್ನು ಕಾಡುತ್ತಿರುವ ಎರಡು ಮಹತ್ವದ ಸಂಗತಿಗಳ ಕುರಿತಾಗಿ ಎರಡು ದೊಡ್ಡ ಅಧ್ಯಯನ – ಸಮೀಕ್ಷೆಯನ್ನು ಈದಿನ ನಡೆಸಲಿದೆ. ಡಿಜಿಟಲ್‌ ಲೋಕದೊಳಗೇ ನಡೆಸುವ ಪ್ರಯತ್ನಗಳ ಜೊತೆಗೆ, ಮುದ್ರಣ – ಕೇಬಲ್‌ ಟಿವಿ ಇನ್ನಿತರ ಆಯಾಮಗಳನ್ನೂ ಹಂತಹಂತವಾಗಿ ಕಟ್ಟಿಕೊಳ್ಳುವ ಯೋಜನೆಯಿದೆ. ಎಲ್ಲವೂ ಸಾಧ್ಯವಾಗಿದ್ದು ನಿಮ್ಮೆಲ್ಲರ ಜೊತೆಗಾರಿಕೆಯಿಂದ. ಈ ಭಾಗೀದಾರಿಕೆ ಇನ್ನಷ್ಟು ಹೆಚ್ಚಾದರೆ ಮಾತ್ರ ಗುರಿಯೆಡೆಗೆ ಸಾಗಲು ಸಾಧ್ಯ…

ಎರಡು ವರ್ಷಗಳನ್ನು ಪೂರೈಸಿದ ಈ ಹೊತ್ತು ಆ ಭಾಗೀದಾರಿಕೆಯ ಬಂಧ ಇನ್ನಷ್ಟು ಹೆಚ್ಚಾಗಲಿ ಎಂಬ ನಿರೀಕ್ಷೆಯಲ್ಲಿ…

ಎಲ್ಲರಿಗೂ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೇಕೆದಾಟು ಮಧ್ಯಸ್ಥಿಕೆ ವಹಿಸದ ಕೇಂದ್ರ, ದಕ್ಷಿಣದ ರಾಜ್ಯಗಳಿಗಿದು ಸಕಾಲ

ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಹಿಂದೆ ಸರಿದಿರುವ ಈ ಸಂದರ್ಭದಲ್ಲಾದರೂ, ಯೋಜನೆಯ...

ಈ ದಿನ ಸಂಪಾದಕೀಯ | ಅತ್ಯಾಚಾರಿಗೆ ಶಿಕ್ಷೆ; ನುಡಿದಂತೆ ನಡೆಯಲಿ ನರೇಂದ್ರ ಮೋದಿ

ದೆಹಲಿಯ ನಿರ್ಭಯ ಪ್ರಕರಣದ ನಂತರ 2013ರಲ್ಲಿ ʼನಿರ್ಭಯ ನಿಧಿʼ ಸ್ಥಾಪಿಸಲಾಗಿತ್ತು. ಈ...

ಈ ದಿನ ಸಂಪಾದಕೀಯ | ದರ್ಶನಾತಿಥ್ಯ- ಪೊಲೀಸರಿಂದ ಪೊಲೀಸರಿಗಾದ ಅವಮಾನ

ಪೊಲೀಸ್‌ ಇಲಾಖೆ ಎಂದಾಕ್ಷಣ ನ್ಯಾಯ ಸಿಗುವುದಿಲ್ಲ ಎಂಬ ಸಾಮಾನ್ಯ ಜನಾಭಿಪ್ರಾಯವನ್ನು ದರ್ಶನಾತಿಥ್ಯ...

ಈ ದಿನ ಸಂಪಾದಕೀಯ | ಮಾನವ ಘನತೆಗಾಗಿ ಹೋರಾಟ – ಕನ್ನಡ ತಮಿಳು ಎಂಬ ಗಡಿಗೆರೆಗಳು ಸಲ್ಲದು

ಶತಮಾನಗಳ ನೋವನ್ನು ಸ್ಮೃತಿಯಲ್ಲಿಟ್ಟುಕೊಂಡು, ಇಂದೂ ಅದರ ವಿವಿಧ ರೂಪಗಳು ಢಾಳಾಗಿ ಕಂಡಾಗ...