ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಮೇಲಿನ ಕಾಳಜಿ ಮೋದಿಯವರಿಗೆ ಕೇವಲ ಭಾಷಣದ ವಸ್ತು ಅಷ್ಟೇ…

Date:

ಹೆಣ್ಣುಮಕ್ಕಳ ಮೇಲಿನ ಕಾಳಜಿ ಮೋದಿಜಿಗೆ ಭಾಷಣದ ವಸ್ತು ಅಷ್ಟೇ. ಅವರ ಸರ್ಕಾರದ ಮಹಿಳಾ ಮಂತ್ರಿಗಳನ್ನು ಪ್ರಶ್ನೆ ಮಾಡಿದ್ರೆ ಕಾಲ್ಕೀಳುತ್ತಿದ್ದಾರೆ. ಬಿಜೆಪಿಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರು ಉನ್ನತ ಸ್ಥಾನದಲ್ಲಿದ್ದಾರೆ. ಅದೇ ಕಾರಣದಿಂದ ಅವರು ಯಾವುದೇ ಮುಜುಗರ ಇಲ್ಲದೇ ಅತ್ಯಾಚಾರಿಗಳನ್ನು ನೇರವಾಗಿಯೇ ಬೆಂಬಲಿಸುತ್ತಾರೆ!

ದೇಶಕ್ಕೆ ಕೀರ್ತಿ ತಂದ ಕುಸ್ತಿ ಪಟುಗಳು ಒಂದು ತಿಂಗಳಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಧರಣಿ ಕುಳಿತಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬುದು ಅವರ ಆರೋಪ. ಜನವರಿಯಲ್ಲೇ ದೂರು ಕೊಟ್ಟರೂ ಪೊಲೀಸರು ಎಫ್‌ಐಆರ್‌ ಮಾಡದೇ ಕಾಲಹರಣ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದ ನಂತರ ಎರಡು ಎಫ್‌ಐಆರ್‌ ದಾಖಲಾಗಿವೆ. ಮೊದಲನೆಯ ಎಫ್.ಐ.ಆರ್. ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆಯಡಿ (ಪೋಕ್ಸೋ) ದಾಖಲಾಗಿದೆ. ಆದರೆ ಇದುವರೆಗೆ ಬ್ರಿಜ್‌ ಭೂಷಣ್‌ ಸಿಂಗ್ ನನ್ನು ಬಂಧಿಸಿಲ್ಲ. ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿಲ್ಲ, ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಪಡೆಯುವ ವಿಚಾರವಂತೂ ಬಹುದೂರ ಉಳಿಯಿತು. ತಮ್ಮ ನಾಯಕರು, ಸಂಸದರು, ಶಾಸಕರು, ಮಂತ್ರಿಗಳು ಅಪರಾಧಿ ಸ್ಥಾನದಲ್ಲಿ ನಿಲ್ಲುವ ಅತ್ಯಾಚಾರ ಪ್ರಕರಣಗಳಲ್ಲಿ ಮೋದಿ ಸರ್ಕಾರದ್ದು 9 ವರ್ಷಗಳಲ್ಲಿ ನಿರಂತರ ಮೌನ.

ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಕ್ರೀಡಾಪಟುಗಳು ನ್ಯಾಯಕ್ಕಾಗಿ ಆಗ್ರಹಿಸಿ ಬೀದಿಯಲ್ಲಿ ಕುಳಿತಿದ್ದರೆ ಪ್ರಧಾನಿ ಹೊಸ ಸಂಸತ್ ಭವನದ ಪ್ರವೇಶ ಮಾಡಿ ಸಂಭ್ರಮಿಸಿದ್ದರು. ಅವರ ಸರ್ಕಾರದ ಮಂತ್ರಿಣಿಯರು ಈ ಬಗ್ಗೆ ಪ್ರಶ್ನೆಗಳಿಂದ ತಪ್ಪಿಸಿಕೊಂಡು ಕಾಲು ಕೀಳುತ್ತಿದ್ದಾರೆ. ಬಿಜೆಪಿಯಲ್ಲಿ ಅತ್ಯಾಚಾರ ಪ್ರಕರಣಗಳ ಆರೋಪಿಗಳು ಉನ್ನತ ಸ್ಥಾನಗಳನ್ನು ಅಲಂಕರಿಸಿರುತ್ತಾರೆ.

2018ರ ಜನವರಿ 10. ಜಮ್ಮು ಕಾಶ್ಮೀರದ ಕಥುವಾದ ಸಮೀಪದ ರಸಾನಾ ಗ್ರಾಮದಲ್ಲಿ ಬಕರ್ವಾಲ್‌ ಎಂಬ ಅಲೆಮಾರಿ ಸಮುದಾಯದ ಎಂಟು ವರ್ಷದ ಬಾಲಕಿ ಅಸೀಫಾ ಬಾನೋ ಮಧ್ಯಾಹ್ನ 12.30ರ ಸುಮಾರಿಗೆ ಕುದುರೆ ಮೇಯಿಸುತ್ತಾ ದೇವಸ್ಥಾನವೊಂದರ ಬಳಿ ಹೋಗಿದ್ದಾಳೆ. ಸಂಜೆ ನಾಲ್ಕಕ್ಕೆ ಕುದುರೆಗಳಷ್ಟೇ ಮನೆಗೆ ವಾಪಾಸಾಗಿವೆ. ಅಸೀಫಾ ಪುಟ್ಟಿ ನಾಪತ್ತೆ. ವಾರದ ನಂತರ ಅಸೀಫಾ ಮೃತದೇಹ ಪೊದೆಯೊಂದರಲ್ಲಿ ಸಿಗುತ್ತದೆ. ದೇವಸ್ಥಾನದ ಅರ್ಚಕನ ಮಗ ವಿಶಾಲ್‌ ಮತ್ತು ಸಂಬಂಧಿ ಅಸೀಫಾಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ದೇವಸ್ಥಾನದಲ್ಲಿ ಕೂಡಿ ಹಾಕಿರುತ್ತಾರೆ. ಮತ್ತು ಬರುವ ಔಷಧಿ ತಿನ್ನಿಸಿ ಅರ್ಚಕ, ಇಬ್ಬರು ಪೊಲೀಸರು ಸೇರಿದಂತೆ ಐವರು ವಾರವಿಡೀ ನಿರಂತರ ಅತ್ಯಾಚಾರಗೈದು ಕತ್ತು ಹಿಸುಕಿ ಕೊಂದು, ತಲೆಯನ್ನು ಕಲ್ಲಿನಿಂದ ಜಜ್ಜಿ ಎಸೆದಿದ್ದರು. ಮನುಕುಲ ತಲೆತಗ್ಗಿಸಬೇಕಾದ ಅಮಾನುಷ ಕೃತ್ಯವಿದು. ಆದರೆ ಆರೋಪಿಗಳನ್ನು ಬೆಂಬಲಿಸಿ ʼಹಿಂದೂ ಏಕ್ತಾ ಮಂಚ್‌ʼ ರ್ಯಾಲಿ ಮಾಡಿತ್ತು. ದುರಂತವೆಂದರೆ ಪ್ರತಿಭಟನೆಗೆ ಬೆಂಬಲ ನೀಡಿದವರು ಬಿಜೆಪಿಯ ನಾಯಕರಾದ ಲಾಲ್‌ಸಿಂಗ್‌ ಚೌಧರಿ ಮತ್ತು ಚಂದನ್‌ ಪ್ರಕಾಶ್‌ ಗಂಗಾ! ಬಾಲಕಿ ಮುಸ್ಲಿಂ ಧರ್ಮೀಯಳು ಎಂಬ ಕಾರಣದಿಂದಾಗಿ ಬಿಜೆಪಿಗರು ಅಮಾನವೀಯ ಹೇಳಿಕೆಗಳನ್ನು ಕೊಟ್ಟರು. ನರೇಂದ್ರ ಮೋದಿಯವರು ಈ ನಿರ್ಲಜ್ಜ ಕೃತ್ಯ ಕುರಿತು ಬಾಯಿ ಬಿಡಲಿಲ್ಲ. ಘಟನೆಯ ನಂತರ ಘಟನೆ ಜರುಗುತ್ತಿದ್ದರೂ ಪ್ರಧಾನಿ ಮೌನ ಚೋದ್ಯವೇ ಸರಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉತ್ತರ ಪ್ರದೇಶದ ಉನ್ನಾವೋನಲ್ಲಿ 2017ರಲ್ಲಿ ಬಿಜೆಪಿ ಶಾಸಕ ಕುಲ್‌ದೀಪ್‌ ಸೆಂಗರ್‌ 17 ವರ್ಷದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ. ಆತನ ಬಂಧನವಾಗುವವರೆಗೆ ಬಿಜೆಪಿ ಆತನನ್ನು ಪಕ್ಷದಿಂದ ವಜಾ ಮಾಡದೆ ಸಮರ್ಥಿಸಿಕೊಂಡಿತು. ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಸೆಂಗರ್ ಕಾಡಿದ ಪರಿ ಎದೆ ನಡುಗಿಸುವಂತಹುದು. ಸಂತ್ರಸ್ತೆಯ ತಂದೆಯನ್ನು ಪೊಲೀಸರು ಕರೆದೊಯ್ದು ಶವವಾಗಿ ಕಳಿಸಿಕೊಟ್ಟಿದ್ದರು. ಕೋರ್ಟ್‌ಗೆ ತೆರಳುತ್ತಿದ್ದ ಸಂತ್ರಸ್ತೆಯ ಕಾರಿನ ಮೇಲೆ ಟ್ರಕ್‌ ಹತ್ತಿಸಿ ಇಬ್ಬರು ಸಂಬಂಧಿಗಳ ಹತ್ಯೆ ಮಾಡಲಾಯಿತು. ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು, ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಯ ನಂತರ ಸೆಂಗರ್‌ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು. ಸೆಂಗರ್ ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ.

2011ರಲ್ಲಿ ಉತ್ತರಪ್ರದೇಶದ ಶಹಜಹಾನ್‌ಪುರದ ಸಂಸದ, ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ. ಆತನ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‌ನಲ್ಲಿ ವಾಸವಿದ್ದ ಕಾನೂನು ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರದ ಆರೋಪ ಹೊತ್ತಿದ್ದ. ಹಾಸ್ಟೆಲ್‌ನ ಬಾತ್‌ರೂಮಿನಲ್ಲಿ ಸ್ನಾನ ಮಾಡುತ್ತಿರುವಾಗ ವಿಡಿಯೊ ಚಿತ್ರಿಸಿ ಅದನ್ನಿಟ್ಟುಕೊಂಡು ಒಂದು ವರ್ಷ ಕಾಲ ಅತ್ಯಾಚಾರ ನಡೆಸಿದ ದೂರು ದಾಖಲಾಗಿತ್ತು. ಆರೋಪಕ್ಕೆ ಪೂರಕವಾಗಿ 43 ವಿಡಿಯೊ ಕ್ಲಿಪ್ಪಿಂಗ್‌ಗಳನ್ನು ಎಸ್‌ಐಟಿಗೆ ಒಪ್ಪಿಸಲಾಗಿತ್ತು. ಆದರೆ, ಪೊಲೀಸರು ಚಿನ್ಮಯಾನಂದನ ಬದಲು ಸಂತ್ರಸ್ತೆಯನ್ನೇ ಬಂಧಿಸಿದ್ದರು. ಯೋಗಿ ಸರ್ಕಾರ ಚಿನ್ಮಯಾನಂದನ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿತ್ತು. ಇದನ್ನು ಆಕ್ಷೇಪಿಸಿದ ಸಂತ್ರಸ್ತೆ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಕಡೆಗೂ ಆರೋಪಿಗೆ ಶಿಕ್ಷೆ ಆಗಿದೆ.

ಇದೇ ಉತ್ತರ ಪ್ರದೇಶದ ಹಥರಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಸ್ಪತ್ರೆಯಲ್ಲಿ ಮೃತಪಟ್ಟ ಸಂತ್ರಸ್ತೆಯ ದೇಹವನ್ನು ಕುಟುಂಬದವರಿಗೆ ನೀಡದೆ ಪೊಲೀಸರೇ ಕತ್ತಲಲ್ಲಿ ಗುಟ್ಟಾಗಿ ಸುಟ್ಟರು. ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಸಾಮಾಜಿಕ ಕಾರ್ಯಕರ್ತರು, ರಾಜಕೀಯ ವ್ಯಕ್ತಿಗಳು ಮತ್ತು ಸಮೂಹ ಮಾಧ್ಯಮಗಳಿಗೆ ಅವಕಾಶ ನಿರಾಕರಿಸಲಾಯಿತು. ಮೋದಿ ಸರ್ಕಾರ ಈ ಯಾವ ಪ್ರಕರಣವನ್ನೂ ಖಂಡಿಸಿ ಬಾಯಿ ತೆರೆದಿಲ್ಲ. ಹೆಣ್ಣುಮಕ್ಕಳ ಮೇಲಿನ ಕಾಳಜಿ ಮೋದಿಜೀಗೆ ಕೇವಲ ಭಾಷಣದ ವಸ್ತು ಅಷ್ಟೇ.

ಹೆಣ್ಣುಮಕ್ಕಳ ಪಾಲಿಗೆ ಅತ್ಯಾಚಾರವೆಂಬುದೇ ಭಯಾನಕ ನರಕ. ಅದಕ್ಕಿಂತ ಭೀಕರ ಅದನ್ನು ಬಹಿರಂಗಪಡಿಸಿ ಆರೋಪಿಗಳ ವಿರುದ್ಧ ಕಾನೂನು ಹೋರಾಟ ನಡೆಸುವುದು ಮತ್ತು ತಮ್ಮನ್ನು ರಕ್ಷಿಸಿಕೊಳ್ಳುವುದು. ಕುರುಡು ಕಿವುಡು ಸರ್ಕಾರವನ್ನು ಅಮಾನವೀಯ ಸಮಾಜವನ್ನು ಎದುರಿಸಲು ನಿಜಕ್ಕೂ ಗಟ್ಟಿ ಗುಂಡಿಗೆ ಬೇಕು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಯುಪಿ-ಬಿಹಾರದಲ್ಲಿ ಧೂಳೆಬ್ಬಿಸಿದೆ ʼಖಟಾಖಟ್ ಖಟಾಖಟ್ʼ ಮಹಾಲಕ್ಷ್ಮೀ ಯೋಜನೆ

ಒಂದು ಸಿಲಿಂಡರ್ ಅಡುಗೆ ಅನಿಲವನ್ನು ಉಚಿತವಾಗಿ ನೀಡಿ, ತಿಂಗಳಿಗೆ ಐದು ಕೇಜಿ...

ಈ ದಿನ ಸಂಪಾದಕೀಯ | ಸರ್ಕಾರಕ್ಕೆ ಒಂದು ವರ್ಷ, ಸಮರ್ಥನೀಯವಲ್ಲದ ನಡೆ

ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಆಗುವ ಕೆಲ ಬದಲಾವಣೆಗಳು, ಆ...

ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಮಿತಿ ಮರೆತು ಅತಿಯಾಗುತ್ತಿದೆ. ಕ್ರೀಡಾಸ್ಫೂರ್ತಿ ಮರೆಯಾಗಿ ಹುಚ್ಚಾಟ...

ಈ ದಿನ ಸಂಪಾದಕೀಯ | ಪ್ಲಾನ್ ಬಿ ಬಗೆಗಿನ ಮಾತು ಮತ್ತು ನಾಯಕನ ಹಿಂದಿನ ನಾಯಕ

ಹತ್ತು ವರ್ಷಗಳ ಕಾಲ ಮೋದಿಯನ್ನು ಮೆರೆಯಲು ಬಿಟ್ಟ ಅಮಿತ್ ಶಾ, ಬಿಜೆಪಿಯನ್ನು...