ಈ ದಿನ ಸಂಪಾದಕೀಯ | ಅಂಬೇಡ್ಕರ್ ಪ್ರತಿಮೆಗೆ ಅವಮಾನ: ತನ್ನ ಮುಖಕ್ಕೆ ತಾನೇ ಸಗಣಿ ಎರಚಿಕೊಂಡ ‘ನಾಗರಿಕ ಸಮಾಜ’

Date:

ಬಹುಮುಖ ಪ್ರತಿಭೆಯ, ಬಹು ಆಯಾಮಗಳ ಮಹಾ ಮೇಧಾವಿ ಅಂಬೇಡ್ಕರ್ ಅವರನ್ನು ಒಂದು ವರ್ಗದ ಪರ ಎಂದು ಪರಿಭಾವಿಸಿ ಅವಮಾನಿಸುವುದು ನಾಗರಿಕ ಸಮಾಜಕ್ಕೆ ತಕ್ಕುದಲ್ಲದ ನಡೆ. ಈ ಕೃತ್ಯದ ಮೂಲಕ ಅವರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಾರೆ ಮತ್ತು ತಮ್ಮ ಸುತ್ತಲಿನ ನಾಗರಿಕ ಸಮಾಜವನ್ನೂ ಅವಮಾನಿಸಿದ್ದಾರೆ.

ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ವಿರೂಪಗೊಳಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮರೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಾಮಫಲಕದ ಮೇಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ರಾತ್ರೋರಾತ್ರಿ ಕಿಡಿಗೇಡಿಗಳು ಸಗಣಿ ಬಳಿದಿದ್ದಾರೆ. ಇದು ಬಾಬಾ ಸಾಹೇಬರನ್ನು ಅವಮಾನಿಸುವುದು ಅವರ ಉದ್ದೇಶವಾಗಿತ್ತು ಎಂದು ತೋರುತ್ತದೆ.

ಇದೇನೂ ಹೊಸದಲ್ಲವಾದರೂ ಪದೆ ಪದೇ ಯಾಕೆ ಅಂಬೇಡ್ಕರ್ ಅವರ ಪ್ರತಿಮೆಗಳು ಹಾಗೂ ಭಾವಚಿತ್ರಗಳು ಹೀಗೆ ಕೆಲವರ ಅಸಹನೆಗೆ ಗುರಿಯಾಗುತ್ತಿವೆ ಎಂಬುದರ ಕುರಿತು ಚಿಂತಿಸಬೇಕಾಗಿದೆ. ಹೀಗೆ ಮಾಡುವವರು ದಲಿತರಂತೂ ಅಲ್ಲ ಎನ್ನುವುದನ್ನು ತಿಳಿಯಲು ಮಹಾ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ವಾಸ್ತವವಾಗಿ, ಅಂಬೇಡ್ಕರ್ ದಲಿತರ ಐಕಾನ್ ಎಂದು ಇತರರು ಭಾವಿಸಿರುವುದೇ ಕೆಲವರು ಇಂಥ ಕೃತ್ಯಗಳಿಗೆ ಇಳಿಯಲು ಒಂದು ಕಾರಣವಾಗಿದೆ.

ಹಾಗಿದ್ದರೆ, ಅಂಬೇಡ್ಕರ್ ಅವರು ದಲಿತರ ಐಕಾನ್ ಮಾತ್ರವೇ? ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿರುವುದು ಈ ಕಾಲಮಾನದ ವಿಪರ್ಯಾಸವೇ ಸರಿ. ಹಳೆಯ ವಿದ್ಯಮಾನವೊಂದರ ಮೂಲಕ ಈ ಪ್ರಶ್ನೆಗೆ ಇದಿರಾಗೋಣ. ‘ಔಟ್‌ಲುಕ್’ ಪತ್ರಿಕೆ 2012ರಲ್ಲಿ ನಡೆಸಿದ್ದ ‘ಅತ್ಯಂತ ಶ್ರೇಷ್ಠ ಭಾರತೀಯ’ ಸಮೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದದ್ದು ಡಾ.ಬಿ ಆರ್ ಅಂಬೇಡ್ಕರ್. ಹಲವು ಹಂತಗಳ ಸಮೀಕ್ಷೆಯಲ್ಲಿ ಹಲವು ಜಾತಿ ಧರ್ಮಗಳ, ಹಲವು ಕ್ಷೇತ್ರಗಳ ಸಾಧಕರ ನಡುವೆ ‘ಶ್ರೇಷ್ಠ ಭಾರತೀಯ’ ಮನ್ನಣೆ ಅಂಬೇಡ್ಕರ್ ಅವರಿಗೆ ಸಂದಿತ್ತು. ಅದು ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಮತ್ತು ಇಲ್ಲಿನ ನೊಂದ ಸಮುದಾಯಗಳಿಗೆ ಮಿಡಿದ ಪರಿಗೆ ಭಾಷ್ಯದಂತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಂಬೇಡ್ಕರ್ ಅವರನ್ನು ಕುರಿತಂತೆ ನಾವು ಪ್ರಸ್ತುತ ಎರಡು ಅತಿರೇಕದ ಪ್ರತಿಕ್ರಿಯೆಗಳನ್ನು ಕಾಣುತ್ತಿದ್ದೇವೆ. ಒಂದು, ಅಂಬೇಡ್ಕರ್ ಸಿದ್ಧಾಂತಕ್ಕೆ ವಿರುದ್ಧವಾದ, ಹಿಂದುತ್ವದ ಪ್ರತಿಪಾದನೆಯೇ ಜೀವಾಳವಾದ ಸಂಘ ಪರಿವಾರದವರು ಅಂಬೇಡ್ಕರ್ ಅವರನ್ನು ‘ತಮ್ಮವ’ರನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿರುವುದು. ಅಂಬೇಡ್ಕರ್ ಅವರ ಚಿಂತನೆಯ ಮೂಲ ನೆಲೆಯೇ ಹಿಂದೂ ವಿರೋಧ ಎನ್ನುವುದನ್ನು ಅವರು ಜಾಣತನದಿಂದ ಮರೆಮಾಚುತ್ತಿದ್ದಾರೆ. ಅಂಬೇಡ್ಕರ್ ಅವರ ರಾಜಕೀಯ ಮತ್ತು ಬೌದ್ಧಿಕ ಚಿಂತನೆಗಳಿಗೆ ಮೂಲಕಾರಣವೇ ಬ್ರಾಹ್ಮಣ್ಯದ ಶೋಷಣೆ.

ಇನ್ನೊಂದು, ಅಂಬೇಡ್ಕರ್ ಅವರನ್ನು ತಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಳ್ಳಬೇಕಾದ, ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಫಲಾನುಭವಿಗಳಾದ ಶೂದ್ರ ಜಾತಿಗಳು ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿರುವುದು; ಅವರನ್ನು ತಮ್ಮ ಏಳಿಗೆಯ ವಿರೋಧಿ ಎಂದು ಭಾವಿಸಿರುವುದು. ವಾಸ್ತವವಾಗಿ, ಸಮಾಜದಲ್ಲಿ ಶೂದ್ರರ ಸ್ಥಾನವೇನು, ಅದರ ಹಿಂದಿನ ಚಾರಿತ್ರಿಕ ಬೆಳವಣಿಗೆಗಳೇನು ಎನ್ನುವುದನ್ನು ಆಳವಾಗಿ ಅಧ್ಯಯನ ಮಾಡಿ, ಅದನ್ನು ಜಗತ್ತಿನ ಮುಂದೆ ಇಟ್ಟು ಶೋಷಿತ ಸಮುದಾಯಗಳ ಕಣ್ಣು ತೆರೆಸಿದವರು ಅಂಬೇಡ್ಕರ್.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಎರಡು ನಾಲಗೆಯ ಸರ್ಕಾರ

ಬಾಬಾಸಾಹೇಬ್ ಅಂಬೇಡ್ಕರ್ ಕೇವಲ ದಲಿತರ ಪಾಲಿನ ವಿಮೋಚಕರಷ್ಟೇ ಅಲ್ಲ; ತಮ್ಮ ಕೊನೆಯ ಉಸಿರಿನವರೆಗೆ ಭಾರತದ ದಲಿತರು, ಶೂದ್ರರು, ಮಹಿಳೆಯರು, ಬಡವರು ಹೀಗೆ ಎಲ್ಲ ನೊಂದವರ ವಿಮೋಚನೆಗಾಗಿ ಚಿಂತಿಸಿದವರು. ಅದಕ್ಕಾಗಿ ಅವಿರತವಾಗಿ ದುಡಿದವರು. ಭಾರತಕ್ಕೆ ಶ್ರೇಷ್ಠವಾದ, ಆಧುನಿಕ ಕಾಣ್ಕೆಗಳುಳ್ಳ ಸಂವಿಧಾನ ಕೊಟ್ಟವರು ಅಂಬೇಡ್ಕರ್. ಕಾರ್ಮಿಕರ ವಿಷಯದಲ್ಲಿ ಅಂಬೇಡ್ಕರ್ ಮಾಡಿದ ಕೆಲಸ ಚರಿತ್ರಾರ್ಹವಾದುದು. ದಿನಕ್ಕೆ ಎಂಟು ಗಂಟೆಗಳ ಕೆಲಸದ ಅವಧಿ, ಹೆರಿಗೆ ರಜೆ, ಸಮಾನ ವೇತನ ಇವೆಲ್ಲವೂ ಅಂಬೇಡ್ಕರ್ ಚಿಂತನೆಯ ಫಲ. ಭಾರತವನ್ನು ಆಧುನಿಕ ಪ್ರಜಾಪ್ರಭುತ್ವವಾದಿ ಗಣರಾಜ್ಯವನ್ನಾಗಿ ರೂಪಿಸುವುದರ ಹಿಂದೆ ಇರುವುದು ಕೂಡ ಅಂಬೇಡ್ಕರ್ ಅವರ ಚಿಂತನೆಯೇ. ದೇಶದಲ್ಲಿ ಪೌರತ್ವ, ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಪರಿಕಲ್ಪನೆಗಳಿಗೆ ಅವರೇ ಜೀವ ಕೊಟ್ಟವರು.

ಇಂಥ ಬಹುಮುಖ ಪ್ರತಿಭೆಯ, ಬಹು ಆಯಾಮಗಳ ಮಹಾ ಮೇಧಾವಿ ಅಂಬೇಡ್ಕರ್ ಅವರನ್ನು ಒಂದು ವರ್ಗದ ಪರ ಎಂದು ಪರಿಭಾವಿಸಿ ಅವಮಾನಿಸುವುದು ನಾಗರಿಕ ಸಮಾಜಕ್ಕೆ ತಕ್ಕುದಲ್ಲದ ನಡೆ. ಈ ಕೃತ್ಯದ ಮೂಲಕ ಅವರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಾರೆ ಮತ್ತು ತಮ್ಮ ಸುತ್ತಲಿನ ನಾಗರಿಕ ಸಮಾಜವನ್ನೂ ಅವಮಾನಿಸಿದ್ದಾರೆ.

ಶೋಷಿತರು ಎಚ್ಚೆತ್ತುಕೊಳ್ಳುವ ಪ್ರತಿ ಹಂತದಲ್ಲೂ ಇತರ ಜಾತಿಗಳು ತಮ್ಮ ಅಸಹನೆ, ಪ್ರತೀಕಾರಗಳನ್ನು ತೋರುತ್ತಲೇ ಇವೆ. ವಿಚಿತ್ರವೆಂದರೆ, ಅಂಬೇಡ್ಕರ್ ಸೇರಿದಂತೆ ಕೆಳಜಾತಿ, ಕೆಳ ವರ್ಗಗಳಿಗೆ ಸೇರಿದ ಸಾಧಕರು, ವಿಮೋಚಕರು ಮಾತ್ರವೇ ಹೀಗೆ ಅವಮಾನಗಳಿಗೆ ಗುರಿಯಾಗುವುದು ಭಾರತದ ಜಾತಿನಿಷ್ಠ ಸಮಾಜದ ಪ್ರತಿಫಲನದಂತಿದೆ. ಚರಿತ್ರೆ ಮತ್ತು ವರ್ತಮಾನದ ಸರಿಯಾದ ತಿಳಿವಳಿಕೆಯಿಂದ ಜಾತಿಗ್ರಸ್ತ ಮನಸ್ಸುಗಳಲ್ಲಿ ಕಾಠಿಣ್ಯ ಕಳೆದು ಕಾರುಣ್ಯ ತುಂಬಬೇಕಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ

ಈಗ ಮತ್ತೊಮ್ಮೆ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢ ಸ್ಥಿತಿಯಲ್ಲಿರುವ; ಬಹುಸಂಖ್ಯಾತರು ಮತ್ತು ಬಲಾಢ್ಯರು...

ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?

ಯಾರಿಗೂ ಸಿಗದ ಅಪೂರ್ವ ಅವಕಾಶ ಮೋದಿಯವರಿಗೆ ಮತ್ತೊಮ್ಮೆ ಸಿಕ್ಕಿದೆ. ಮತ್ತೊಮ್ಮೆ ಬಾಬಾ...

ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ

ದುಬಾರಿ ಚುನಾವಣೆಗಳು ಒಟ್ಟು ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಲೇ ಸಾಗಿವೆ. ಇಂತಹ ವ್ಯವಸ್ಥೆಯಲ್ಲಿ ಸರಳರು,...