ಈ ದಿನ ಸಂಪಾದಕೀಯ | ಮೋದಿಯವರ ಸೇಡಿನ ಕ್ರಮ ರಾಹುಲ್‌ಗೆ ವರವಾಗುವುದೇ?

Date:

ಒಂದು ವೇಳೆ ರಾಹುಲ್ ಜೈಲಿಗೆ ಹೋಗಬೇಕಾಗಿ ಬಂದರೂ ರಾಜಕೀಯವಾಗಿ ಅವರು ಕಳೆದುಕೊಳ್ಳುವುದಕ್ಕಿಂತ ಗಳಿಸಿಕೊಳ್ಳುವುದೇ ಹೆಚ್ಚು. ಮಂಕಾಗಿರುವ ಕಾಂಗ್ರೆಸ್ಸು ಮತ್ತು ಪ್ರತಿಪಕ್ಷ ರಾಜಕಾರಣ ಸಂಘರ್ಷದ ದಾರಿ ಹಿಡಿಯಲು ಈ ಘಟನೆ ಸಹಕಾರಿ ಆದೀತು

‘ಮೋದಿ’ ಉಪನಾಮ ಟೀಕೆಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ನ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಹೀಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ಕತ್ತಿ ರಾಹುಲ್ ತಲೆಯ ಮೇಲೆ ತೂಗಿದೆ. ನಿವಾರಿಸಿಕೊಳ್ಳಲು ಉಳಿದಿರುವ ದಾರಿ ಮತ್ತು ಸಮಯ ಅತ್ಯಲ್ಪ. 

ಅದಾನಿ-ಮೋದಿ ಸಂಬಂಧವನ್ನು ನಿರಂತರ ಪ್ರಶ್ನಿಸಿ ಪ್ರಧಾನಿಯವರಿಗೆ ಮುಜುಗರ ಮೂಡಿಸುತ್ತಿರುವ ರಾಹುಲ್ ಅವರನ್ನು ಹೇಗಾದರೂ ಮಾಡಿ ಜೈಲಿಗೆ ಕಳಿಸಿಯೇ ತೀರಬೇಕೆಂದು  ಮೋದಿ ಸರ್ಕಾರ ತೀರ್ಮಾನಿಸಿದಂತಿದೆ. ಇಲ್ಲವಾದರೆ ರಾಹುಲ್ ವಿರುದ್ಧದ ಮಾನಹಾನಿ ಮೊಕದ್ದಮೆ ಇಷ್ಟು ಅಸಹಜ ವೇಗದಲ್ಲಿ ಇತ್ಯರ್ಥ ಆಗುವುದು ಅನುಮಾನವಿತ್ತು.

ಕೋಲಾರದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಆಡಿದ ಮಾತಿನಿಂದ ಮಾನಹಾನಿಯಾಗಿದೆ ಎಂದು ಗುಜರಾತಿನ ಬಿಜೆಪಿ ಶಾಸಕ ಸೂರತ್ ನಲ್ಲಿ ದೂರು ನೀಡಿದ್ದು 2019ರ ಏಪ್ರಿಲ್ 16ರಂದು. ಆಗ ದವೆ ಎಂಬುವರು ಮ್ಯಾಜಿಸ್ಟ್ರೇಟ್ ಆಗಿದ್ದರು. 2021ರ ಜೂನ್ ತಿಂಗಳಲ್ಲಿ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡುತ್ತಾರೆ. ರಾಹುಲ್ ಹೇಳಿಕೆಯ ಸಾಕ್ಷ್ಯಗಳನ್ನು ಮಂಡಿಸಿ ರಾಹುಲ್ ಗಾಂಧಿ ಅವರನ್ನು ಪುನಃ ನ್ಯಾಯಾಲಯದ ಮುಂದೆ ಕರೆಯಬೇಕೆಂದು ಬಿಜೆಪಿ ಶಾಸಕ ಪೂರ್ಣೇಶ್ ಮೋದಿ 2022ರ ಮಾರ್ಚ್ ತಿಂಗಳಲ್ಲಿ ನ್ಯಾಯಾಲಯವನ್ನು ಕೋರುತ್ತಾರೆ. ನ್ಯಾಯಾಧೀಶ ದವೆ ಈ ಅರ್ಜಿಯನ್ನು ತಳ್ಳಿ ಹಾಕುತ್ತಾರೆ. ಈ ಬೆಳವಣಿಗೆಯ ನಂತರ ತಾವೇ ನಡೆಸಿದ್ದ ಖಟ್ಲೆಗೆ ಹೈಕೋರ್ಟಿನಿಂದ ತಡೆಯಾಜ್ಞೆ ತರುತ್ತಾರೆ ಪೂರ್ಣೇಶ್. ಒಂದು ವರ್ಷ ಕಾಲ ತಣ್ಣಗೆ ಕುಳಿತಿದ್ದ ಪೂರ್ಣೇಶ್ ಇದೇ ಫೆಬ್ರವರಿ 16ರಂದು ಹಠಾತ್ತನೆ ಹೈಕೋರ್ಟ್ ಮುಂದೆ ಹೋಗುತ್ತಾರೆ. ಮೊಕದ್ದಮೆಗೆ ಅಗತ್ಯವಿರುವ ಸಾಕ್ಷ್ಯ ಪುರಾವೆಗಳು ಸಂಗ್ರಹವಾಗಿವೆಯೆಂದು ನಿವೇದಿಸಿಕೊಂಡು, ತಡೆಯಾಜ್ಞೆ ತೆರವು ಮಾಡಿಸುತ್ತಾರೆ. ಪೂರ್ಣೇಶ್ ಪುನಃ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟಿನ ಮುಂದೆ ಸಕ್ರಿಯರಾಗುತ್ತಾರೆ. ಈ ನಡುವೆ ನ್ಯಾಯಾಧೀಶ ದವೆಯವರ ಸ್ಥಾನಕ್ಕೆ ನ್ಯಾಯಾಧೀಶ ಎಚ್.ಎಚ್.ವರ್ಮ ಬಂದಿರುತ್ತಾರೆ. ತಿಂಗಳೊಪ್ಪತ್ತಿನಲ್ಲಿ ಶಿಕ್ಷೆಯ ತೀರ್ಪು ಪ್ರಕಟವಾಗುತ್ತದೆ.

ಒಂದು ವೇಳೆ ರಾಹುಲ್ ಜೈಲಿಗೆ ಹೋಗಬೇಕಾಗಿ ಬಂದರೂ ರಾಜಕೀಯವಾಗಿ ಅವರು ಕಳೆದುಕೊಳ್ಳುವುದಕ್ಕಿಂತ ಗಳಿಸಿಕೊಳ್ಳುವುದೇ ಹೆಚ್ಚು. ಮಂಕಾಗಿರುವ ಕಾಂಗ್ರೆಸ್ಸು ಮತ್ತು ಪ್ರತಿಪಕ್ಷ ರಾಜಕಾರಣ ಸಂಘರ್ಷದ ದಾರಿ ಹಿಡಿಯಲು ಈ ಘಟನೆ ಸಹಕಾರಿ ಆದೀತು.
1977ರ ಅಕ್ಟೋಬರ್ ನಲ್ಲಿ ಅಂದಿನ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಇಂದಿರಾಗಾಂಧಿ ಅವರನ್ನು ಬಂಧಿಸಿ ಸೆರೆಮನೆಗೆ ಕಳಿಸಿತ್ತು. ಈ ಸೇಡಿನ ಕ್ರಮ ಜನತಾಪಕ್ಷಕ್ಕೆ ತಿರುಗುಬಾಣವಾಗಿ ಪರಿಣಮಿಸಿತು. 1978ರ ನವೆಂಬರ್ ನಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಆರಿಸಿ ಬಂದರು. ಜನತಾ ಸರ್ಕಾರ ಪತನವಾಗಿ ಎರಡೇ ವರ್ಷಗಳಲ್ಲಿ ಇಂದಿರಾ ಅಧಿಕಾರಕ್ಕೆ ಮರಳಿದ್ದರು. ಅಂದಾಕ್ಷಣ ದೇಶದ ಮೇಲೆ ಇಂದಿರಾ ಹೇರಿದ್ದ ತುರ್ತುಪರಿಸ್ಥಿತಿಯನ್ನು ಜನ ಸಮರ್ಥಿಸಿದರೆಂದು ಅರ್ಥವಲ್ಲ. ಇಂದಿರಾ ಅವರ ಈ ಪ್ರಕರಣ ಇಂದಿನ ರಾಜಕಾರಣದಲ್ಲಿ ಕಾಂಗ್ರೆಸ್ ಅಥವಾ ರಾಹುಲ್ ಪಾಲಿಗೆ ಅಂದಿನ ರೂಪದಲ್ಲೇ ಮರುಕಳಿಸಬೇಕೆಂದೇನೂ ಇಲ್ಲ. ರಾಜಕಾರಣದಲ್ಲಿ ಸೇಡು ತೀರಿಸಿಕೊಳ್ಳಲು ವ್ಯಕ್ತಿಯ ಹಿಂದೆ ಬೆನ್ನು ಬಿದ್ದು ಬೇಟೆಯಾಡುವ ಅಧಿಕಾರಸ್ಥರ ಪ್ರವೃತ್ತಿಯನ್ನು ಮತದಾರರು ಸುಲಭಕ್ಕೆ ಒಪ್ಪುವುದಿಲ್ಲ ಎಂಬ ಕಟು ಸತ್ಯವನ್ನು ಇಂದಿರಾ ಪ್ರಕರಣ ಎತ್ತಿ ತೋರಿದೆ.

ಇತ್ತೀಚೆಗೆ ಲೋಕಸಭೆಯಲ್ಲಿ ರಾಹುಲ್ ಭಾಷಣಗಳು ಆಳುವ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದವು. ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ನಂತರ ರಾಹುಲ್ ಆಕ್ರಮಣಕ್ಕೆ ಮತ್ತಷ್ಟು ಮೊನಚು ಮೂಡಿತ್ತು. ಅದಾನಿ- ಮೋದಿಯವರ ಸಂಬಂಧವನ್ನು ಸದನದಲ್ಲಿ ಪ್ರಶ್ನಿಸಿದ್ದರು. ಅದಾನಿ ಶೇರು ಹಗರಣದ ತನಿಖೆಗೆ ಜಂಟಿ ಸದನ ಸಮಿತಿ ರಚಿಸುವಂತೆ ಆಗ್ರಹಿಸಿದ್ದರು. ಅದಾನಿ ಕುರಿತ ಯಾವ ಆಪಾದನೆಗಳಿಗೂ ಮೋದಿಯವರು ಸದನದಲ್ಲಿ ಉತ್ತರ ನೀಡಿರಲಿಲ್ಲ.

ರಾಹುಲ್ ಅವರ ತೀವ್ರ ತೇಜೋವಧೆ ಮಾಡಿ, ಪಪ್ಪು ಎಂಬ ಸುಳ್ಳನ್ನೇ ಸಾವಿರ ಬಾರಿ ಹೇಳಿ ಸತ್ಯವಾಗಿಸುವ ಗೆಬೆಲ್ಸ್ ಪ್ರಚಾರ ತಂತ್ರ ಬಹುತೇಕ ಫಲ ನೀಡಿತ್ತು. ಈ ತೇಜೋವಧೆ ತಮ್ಮನ್ನು ತಾಕಿಯೇ ಇಲ್ಲವೆಂಬ ಮಾನಸಿಕ ಗಟ್ಟಿತನ ತೋರಿ ನೆಲಕಚ್ಚಿ ನಿಂತಿರುವ ಕಾಂಗ್ರೆಸ್ ತಲೆಯಾಳು ಸುಲಭವಾಗಿ ಸೋಲೊಪ್ಪುತ್ತಿಲ್ಲ. ಭಾರತ್ ಜೋಡೋ ಯಾತ್ರೆಯು ರಾಹುಲ್ ತೇಜೋವಧೆಯ ತಂತ್ರವನ್ನು ದುರ್ಬಲವಾಗಿಸಿದೆ.

ಕಡು ಕೋಮುವಾದಿ ರಾಜಕಾರಣದ ವಿಜೃಂಭಣೆಯ ನಡುವೆ ಪ್ರತಿಪಕ್ಷಗಳು ನಿಸ್ತೇಜವಾಗಿ ಅಡ್ಡ ಮಲಗಿರುವ ದಿನಗಳಿವು. ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಗಾಂಧಿ ಅವರಲ್ಲಿ ಹೊಸ ಆತ್ಮವಿಶ್ವಾಸ ತುಳುಕಿದ್ದು ಮತ್ತು ಅವರ ಕುರಿತು ಹರಡಲಾಗಿದ್ದ ಪೂರ್ವಗ್ರಹಗಳು ಚೆದುರುತ್ತಿರುವುದು ಸ್ಪಷ್ಟವಿತ್ತು.

ಒಂದೊಮ್ಮೆ ಹದಿನೆಂಟು ತಿಂಗಳುಗಳ ಕಾಲ ನಾಗರಿಕ ಹಕ್ಕುಗಳನ್ನು ತುಳಿದಿಟ್ಟಿದ್ದ ಪಕ್ಷವೊಂದರ ನಾಯಕನಾಗಿ ರಾಹುಲ್ ಗಾಂಧಿ ಸರ್ವಾಧಿಕಾರದ ವಿರುದ್ಧ, ಮೂಲಭೂತ ಹಕ್ಕುಗಳ ದಮನದ ವಿರುದ್ಧ ದನಿ ಎತ್ತಿರುವುದು ಆಶಾದಾಯಕ ಬೆಳವಣಿಗೆ.
ಯಾವುದೇ ದಮನದ ಪರ್ವಕ್ಕೆ ಅಂತ್ಯವಿರುತ್ತದೆ. ಅದು ನಿತ್ಯ ನಿರಂತರವಲ್ಲ. ಹೊಸ ಭರವಸೆ ಮೂಡಿಸಿರುವ ರಾಹುಲ್ ಗಾಂಧಿ ಮತ್ತು ಅವರ ಪಕ್ಷವನ್ನು ಹಾಲಿ ಮಾನಹಾನಿ ಮೊಕದ್ದಮೆಯ ವಿದ್ಯಮಾನ ಮತ್ತಷ್ಟು ಗಟ್ಟಿಗೊಳಿಸೀತು. 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...

ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ,...

ಈ ದಿನ ಸಂಪಾದಕೀಯ | ನಿರ್ಮಲಾ ಸೀತಾರಾಮನ್‌ ಮುಕ್ತಮನಸ್ಸಿನಿಂದ ಚರ್ಚೆಯಲ್ಲಿ ಭಾಗವಹಿಸುವರೇ ?

ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಪ್ರಜ್ಞಾವಂತರು ಸಿದ್ದಪಡಿಸಿರುವ ವೇದಿಕೆಗೆ ಬಂದು ಮುಕ್ತ...