ಬಾಗಲಕೋಟೆ ಜಿಲ್ಲೆ | ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿ, ಖಾತೆ ತೆರೆಯುವ ಹಠದಲ್ಲಿ ಜೆಡಿಎಸ್‌

Date:

ಈ ಬಾರಿಯ ಚುನುವಾಣೆಯಲ್ಲಿ ಹೇಗಾದರೂ ಮಾಡಿ ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ತನ್ನ ಗೆಲುವಿನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದೆ. ಬಿಜೆಪಿ ಇರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಿದೆ. ಒಂದು ಕ್ಷೇತ್ರದಲ್ಲಾದರೂ ಖಾತೆ ತೆರೆಯಬೇಕು ಎನ್ನುವ ಹಠದಲ್ಲಿ ಜೆಡಿಎಸ್‌ ಪೈಪೋಟಿಗೆ ನಿಂತಿದೆ.

ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ 2023ರ ಚುನಾವಣೆ ಕಣ ರಂಗು ಪಡೆದಿದೆ. ಮತದಾನಕ್ಕೆ ಐದು ದಿನ ಬಾಕಿ ಇದ್ದು, ಅಭ್ಯರ್ಥಿಗಳು ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ಉಳಿದ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಕಂಡಿತ್ತು. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ತನ್ನ ಗೆಲುವಿನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದೆ. ಬಿಜೆಪಿ ಇರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಿದೆ. ಒಂದು ಕ್ಷೇತ್ರದಲ್ಲಾದರೂ ಖಾತೆ ತೆರೆಯಬೇಕು ಎನ್ನುವ ಹಠದಲ್ಲಿ ಜೆಡಿಎಸ್‌ ಪೈಪೋಟಿಗೆ ನಿಂತಿದೆ.

ಬಾದಾಮಿ ಕ್ಷೇತ್ರ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2018ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ ಕ್ಷೇತ್ರಗಳ ಪೈಕಿ ಬಾದಾಮಿ ಕೂಡ ಒಂದು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಮತ್ತು ಅವರ ಎದುರಾಳಿಯಾಗಿ ಬಿಜೆಪಿಯ ಬಿ ಶ್ರೀರಾಮುಲು ಕಣಕ್ಕಿಳಿಯುತ್ತಿದ್ದಂತೆ ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿ ಈ ಕ್ಷೇತ್ರ ಮುನ್ನೆಲೆಗೆ ಬಂದಿತ್ತು. ಈ ಬಾರಿ ಈ ಇಬ್ಬರೂ ನಾಯಕರು ಕ್ಷೇತ್ರ ತೊರೆದಿದ್ದು ಸ್ಥಳೀಯ ರಾಜಕಾರಣ ಮುನ್ನೆಲೆ ಬಂದಿದೆ.

ಕಾಂಗ್ರೆಸ್‌ನಿಂದ ಬಿ ಬಿ ಚಿಮ್ಮನಕಟ್ಟಿ ಅವರ ಮಗ ಭೀಮಸೇನ ಚಿಮ್ಮನಕಟ್ಟಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅತ್ತ ಬಿಜೆಪಿ ಎಂ ಕೆ ಪಟ್ಟಣಶೆಟ್ಟಿ ಅವರ ಬದಲು ಹೊಸ ಮುಖಕ್ಕೆ ಮಣೆ ಹಾಕಿದ್ದು, ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದ ಶಾಂತಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಿಸಿದೆ. ಕಳೆದ ಬಾರಿ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಸ್ಪರ್ಧೆಯ ನಡುವೆಯೇ ಪೈಪೋಟಿ ನೀಡಿದ ಹನಮಂತ ಮಾವಿನಮರದ ಈ ಬಾರಿಯೂ ಜೆಡಿಎಸ್‌ನಿಂದ ಮತ್ತೆ ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಾಗಿ ಬಿಜೆಪಿಯತ್ತ ಹೆಚ್ಚು ಚಲಾವಣೆಯಾಗುತ್ತವೆ. ಹಾಗಾಗಿ ಪಂಚಮಸಾಲಿ ಸಮುದಾಯದ ಮಾವಿನಮರದ ಅವರ ಸ್ಪರ್ಧೆ ಬಿಜೆಪಿಗೆ ದೊಡ್ಡ ಹೊಡೆತ ಕೊಡಲಿದೆ. ಜೊತೆಗೆ ಮಾವಿನಮರದ ಇತರ ಸಮುದಾಯದ ಮತಗಳನ್ನು ಬಾಚಿಕೊಂಡಿದ್ದೇ ಆದಲ್ಲಿ ಕೈ-ಕಮಲದ ನಡುವೆ ತೆನೆ ಹೊತ್ತ ಮಹಿಳೆ ಎದ್ದು ನಿಂತರೂ ಅಚ್ಚರಿ ಪಡಬೇಕಿಲ್ಲ.

ಇನ್ನು, ಬಿಜೆಪಿಯಲ್ಲಿ ಪಟ್ಟಣಶೆಟ್ಟಿ ಮತ್ತು ಮಮದಾಪುರ ಇಬ್ಬರು ನಾಯಕರು ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದು, ಪ್ರಚಾರ ಕಾರ್ಯಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದು ಬಿಜೆಪಿಗೆ ದುಬಾರಿಯಾಗುವ ಸಾಧ್ಯತೆ ಇದೆ.

ಬಾದಾಮಿ ಕ್ಷೇತ್ರದಲ್ಲಿ ಚಿಮ್ಮನಕಟ್ಟಿ ಮನೆತನದ ಮೇಲೆ ಕುರುಬ ಸಮುದಾಯಕ್ಕೆ ವಿಶೇಷ ಪ್ರೀತಿ, ಅಭಿಮಾನ ಇದೆ. ಹಾಗಾಗಿ ಸಮುದಾಯದ ಬಹುತೇಕ ಮತಗಳು ಕಾಂಗ್ರೆಸ್ ಅಭ್ಯರ್ಥಿ ಪರ ಬರಲಿವೆ. ಇನ್ನು ಕಾಂಗ್ರೆಸ್‌ನ ಸಾಂಪ್ರದಾಯಿಕ ಬೆಂಬಲಿಗರಾದ ದಲಿತ, ವಾಲ್ಮೀಕಿ, ಮುಸ್ಲಿಂ, ಕ್ರಿಶ್ಚಿಯನ್ ಮತಗಳು ಕೈ ಹಿಡಿಯುವ ಸಾಧ್ಯತೆ ಇದೆ. ಒಟ್ಟಾರೆ ಬಾದಾಮಿಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯಲಿದ್ದು, ಮತದಾರರು ವಿಜಯ ಮಾಲೆ ಯಾರ ಕೊರಳಿಗೆ ಹಾಕುತ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಬೀಳಗಿ ಕ್ಷೇತ್ರ

ಸಾಂಪ್ರದಾಯಕ ಎದುರಾಳಿಗಳ ನಡುವೆಯೇ ಈ ಬಾರಿಯೂ ನಿರ್ಣಾಯಕ ಸ್ಪರ್ಧೆ ಇರಲಿದೆ. ಮುರುಗೇಶ್ ನಿರಾಣಿ ಮತ್ತೊಂದು ಬಾರಿ ಗೆಲುವು ಬಯಸಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಜೆ ಟಿ ಪಾಟೀಲ, ಎಸ್ ಆರ್ ಪಾಟೀಲ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಜೆ ಟಿ ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನು ಜೆಡಿಎಸ್ ಪಕ್ಷದಿಂದ ರುಕ್ಮುದ್ದೀನ್ ಸೌದಗಲ್ ಕಣದಲ್ಲಿದ್ದಾರೆ.

ಲಿಂಗಾಯತ ಸಮುದಾಯದ ಪ್ರಬಲ ನಾಯಕ ಯಡಿಯೂರಪ್ಪರನ್ನು ವರಿಷ್ಠರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಮುನ್ಸೂಚನೆಯನ್ನು ಮೊದಲೇ ಅರಿತಿದ್ದ ಮುರುಗೇಶ್ ನಿರಾಣಿ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟರು. ಆದರೆ, ಅದು ಆಗ ಕೈಗೂಡಲಿಲ್ಲ. ಆದರೆ, ಈ ಬಾರಿಯಾದರೂ ಗೆದ್ದು ಮುಖ್ಯಮಂತ್ರಿ ಹುದ್ದೆಗೇರುವ ಕನಸು ಕಟ್ಟಿಕೊಂಡಿರುವ ನಿರಾಣಿ ಐದನೇ ಬಾರಿಗೆ ಸ್ಪರ್ಧೆಯಲ್ಲಿದ್ದಾರೆ.

ಮುರುಗೇಶ್ ನಿರಾಣಿ ಈ ಬಾರಿ ಗೆಲುವು ಸಾಧಿಸುವುದು ಅಷ್ಟು ಸುಲಭವಿಲ್ಲ. ಏಕೆಂದರೆ, ಬೀಳಗಿ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹಿಂದಿಗಿಂತ ಜೋರಾಗಿಯೇ ಇದೆ. ಕ್ಷೇತ್ರದ ರೈತರೊಂದಿಗೆ ಒಳ್ಳೆಯ ಸಂಬಂಧ ಹೊಂದಿರಬೇಕಾಗಿದ್ದ ನಿರಾಣಿ, ಸ್ಥಳೀಯ ರೈತ ಮುಖಂಡರ ವಿರೋಧ ಕಟ್ಟಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಮುರುಗೇಶ್ ನಿರಾಣಿ ವಿರುದ್ಧದ ವಿರೋಧಿ ಅಲೆ ಸಾಂಪ್ರದಾಯಕ ಎದುರಾಳಿ ಕಾಂಗ್ರೆಸ್‌ನ ಜೆ ಟಿ ಪಾಟೀಲ ಅವರ ದಾರಿಯನ್ನು ಮತ್ತಷ್ಟು ಸುಗಮ ಮಾಡಿದೆ. ಜಾತಿಯಿಂದ ಜೆ ಟಿ ಪಾಟೀಲ ರೆಡ್ಡಿ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದ ಮತಗಳನ್ನು ಕ್ರೋಡೀಕರಿಸುವಲ್ಲಿ ಅವರು ಯಶಸ್ವಿಯಾದರೆ, ಕಾಂಗ್ರೆಸ್ ಹಿರಿಯ ಮುಖಂಡ ಎಸ್ ಆರ್ ಪಾಟೀಲ್ ಬೆಂಬಲ ಸಿಕ್ಕರೆ ಪಂಚಮಸಾಲಿ ಲಿಂಗಾಯತ ಮತಗಳು ಇವರತ್ತ ಹರಿದು ಬಂದು ಗೆಲುವಿನ ದಡ ಸೇರುವ ನಿರೀಕ್ಷೆಯಲ್ಲಿದ್ದಾರೆ.

ಜಮಖಂಡಿ ಕ್ಷೇತ್ರ

ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರವಾದ ಜಮಖಂಡಿ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಖ್ಯಾತಿ ಪಡೆದ ವಿಧಾನಸಭಾ ಕ್ಷೇತ್ರ. ದೇಶಕ್ಕೆ ರಾಷ್ಟ್ರಪತಿ, ರಾಜ್ಯಕ್ಕೆ ಮುಖ್ಯಮಂತ್ರಿ ಕೊಟ್ಟ ಜಮಖಂಡಿಯಲ್ಲಿ ಈ ಬಾರಿಯ ಚುನಾವಣೆ ಕಾವು ಜೋರಾಗಿದೆ.

ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ಕ್ಷೇತ್ರದ ಹಾಲಿ ಶಾಸಕರು. 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ತಂದೆಯ ಸಾವಿನ ಅನುಕಂಪದ ಅಲೆಯಲ್ಲಿ ಆನಂದ ನ್ಯಾಮಗೌಡ ಗೆಲವು ಸಾಧಿಸಿದ್ದರು. ಈ ಬಾರಿಯೂ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದುಕೊಂಡು ಕಾಂಗ್ರೆಸ್‌ನಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಜಮಖಂಡಿಯಲ್ಲಿ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಿದ್ದು, ಕಾಂಗ್ರೆಸ್ ಗೆಲುವಿಗೆ ತಡೆಯೊಡ್ಡಲು ಜಗದೀಶ ಗುಡಗುಂಟಿ ಎಂಬುವರನ್ನು ಕಣಕ್ಕೆ ಇಳಿಸಿದೆ. ಜೆಡಿಎಸ್‌ನಿಂದ ಯಾಕೂಬ್ ಕಪಡೆವಾಲೆ ಸ್ಪರ್ಧೆಯಲ್ಲಿದ್ದಾರೆ.

ಕಳೆದ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಬಿಜೆಪಿ ತನ್ನ ಸಂಘಟನಾ ಬಲದಿಂದ ಈ ಬಾರಿ ಕಾಂಗ್ರೆಸ್‌ಗೆ ಪೈಪೋಟಿ ನೀಡಲಿದೆ. ಆನಂದ ನ್ಯಾಮಗೌಡ ಮತ್ತು ಜಗದೀಶ ಗುಡಗುಂಟಿ ನಡುವೆ ನೇರ ಸ್ಪರ್ಧೆ ಇರಲಿದ್ದು, ಜಮಖಂಡಿ ಮತದಾರರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದು ಇನ್ನೂ ಗುಟ್ಟಾಗಿಯೇ ಇದೆ.

ತೇರದಾಳ ಕ್ಷೇತ್ರ

ಜೈನರ ಪ್ರಮುಖ ಕೇಂದ್ರವಾಗಿರುವ ತೇರದಾಳ, ರಾಜ್ಯದಲ್ಲಿ ಅತಿಹೆಚ್ಚು ನೇಕಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ. ನಾಲ್ಕನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ತೇರದಾಳ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ.

ನೇಕಾರ ಪ್ರಾತಿನಿಧ್ಯ ವಿಚಾರದಲ್ಲಿ ಕಾಂಗ್ರೆಸ್​ ನೇಕಾರ ಸಮುದಾಯದ ಉಮಾಶ್ರೀ ಅವರಿಗೆ ಮಣೆ ಹಾಕಿ ಒಮ್ಮೆ ಗೆಲುವು ಕಂಡು ಇನ್ನೊಮ್ಮೆ ಸೋಲು ಅನುಭವಿಸಿದೆ. ಆದರೆ ಬಿಜೆಪಿ ಮಾತ್ರ ಈ ವಿಚಾರದಲ್ಲಿ ಭಿನ್ನವಾಗಿ ನಡೆದುಕೊಂಡಿದೆ. ಪ್ರತಿ ಬಾರಿ ನೇಕಾರರಿಗೆ ಸ್ಪರ್ಧೆಗೆ ಅವಕಾಶ ಕೊಡಿ ಎಂಬ ಕೂಗು ಇದ್ದರೂ ಇದೂವರೆಗೂ ಬಿಜೆಪಿ ನೇಕಾರರಿಗೆ ಮನ್ನಣೆ ನೀಡಿಲ್ಲ. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ, ನೇಕಾರ ಸಮುದಾಯ ಅಲ್ಲದ ಲಿಂಗಾಯತ ಸಮುದಾಯದ ಸಿದ್ದು ಸವದಿಗೆ ಟಿಕೆಟ್‌ ನೀಡಿದೆ.

2008ರಿಂದ ಕಾಂಗ್ರೆಸ್‌ನಿಂದ ತೇರದಾಳ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದ ನಟಿ ಉಮಾಶ್ರೀಗೆ ಈ ಬಾರಿ ಟಿಕೆಟ್‌ ತಪ್ಪಿದ್ದು, ಹೊಸ ಮುಖ ಸಿದ್ದು ಕೊಣ್ಣೂರು ಅವರಿಗೆ ಕಾಂಗ್ರೆಸ್‌ ಮಣೆ ಹಾಕಿದೆ. ತೇರದಾಳ ಕ್ಷೇತ್ರದಲ್ಲಿ ನೇಕಾರರು ಯಾರ ಪರ ಒಲವು ವ್ಯಕ್ತಪಡಿಸುತ್ತಾರೋ ಅವರೇ ಅಲ್ಲಿನ ಶಾಸಕರಾಗುತ್ತಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಫೈಟ್‌ ಇರಲಿದೆ. ಮತ್ತೊಂದು ಅವಧಿಗೆ ಗೆಲ್ಲಲು ಸಿದ್ದು ಸವದಿ ಪ್ರಯತ್ನಿಸುತ್ತಿದ್ದು, ಸವದಿಗೆ ಕಾಂಗ್ರೆಸ್‌ನ ಹೊಸ ಮುಖ ಸಿದ್ದು ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.

ಬಾಗಲಕೋಟೆ ಕ್ಷೇತ್ರ

ಎಸ್‌ ನಿಜಲಿಂಗಪ್ಪ ಅವರಿಗೆ ರಾಜಕೀಯ ಮರು ಜೀವ ನೀಡಿ ಮುಖ್ಯಮಂತ್ರಿ ಮಾಡಿದ ಕ್ಷೇತ್ರ ಬಾಗಲಕೋಟೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ವೀರಣ್ಣ ಚರಂತಿಮಠ ಮತ್ತೊಂದು ಗೆಲುವು ಬಯಸಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಎಚ್‌ ವೈ ಮೇಟಿ ಅವರು ಚರಂತಿಮಠ ಅವರಿಗೆ ಪೈಪೋಟಿ ನೀಡಲು ಉತ್ಸುಕರಾಗಿದ್ದಾರೆ. ಜೆಡಿಎಸ್‌ನಿಂದ ದೇವರಾಜ ಪಾಟೀಲ ಕಣದಲ್ಲಿದ್ದಾರೆ.

ಬಾಗಲಕೋಟೆ ಕ್ಷೇತ್ರದ ಆರಂಭದ ಚುನಾವಣೆಗಳಲ್ಲಿ ಕಾಂಗ್ರೆಸ್ ಹಲವು ಬಾರಿ ಗೆದ್ದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. 2013ರಲ್ಲಿ ಎಚ್‌ ವೈ ಮೇಟಿ ಮೂಲಕ ಕ್ಷೇತ್ರದ ಮೇಲೆ ಕಾಂಗ್ರೆಸ್‌ ಹಿಡಿತ ಸಾಧಿಸಿತ್ತು. ಆದರೆ, 2018ರ ಚುನಾವಣೆಯಲ್ಲಿ ಕೈ ತಪ್ಪಿಹೋಗಿದೆ.

ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಎಚ್ ವೈ ಮೇಟಿ ಅವರ ರಾಜಕೀಯ ನಡೆಯೇ ಮತದಾರರಿಗೆ ಆಪ್ತವಾಗುತ್ತದೆ. ಗೆಲ್ಲಲಿ ಅಥವಾ ಸೋಲಲಿ ಸದಾಕಾಲ ಜನಸಂಪರ್ಕದಲ್ಲಿರುತ್ತಾರೆ. ಕ್ಷೇತ್ರದಲ್ಲಿನ ಎಂತಹದ್ದೇ ಕಾರ್ಯಕ್ರಮವಿದ್ದರೂ ಆಹ್ವಾನವಿದ್ದರೆ ಸಾಕು ಅಲ್ಲಿ ಎಚ್ ವೈ ಮೇಟಿ ಹಾಜರಾಗುತ್ತಾರೆ. ಹೀಗಾಗಿ ಕ್ಷೇತ್ರದ ಜನರು ಅವರನ್ನು ಮೇಟಿ ಮುತ್ಯಾ ಅಂತಲೇ ಪ್ರೀತಿಯಿಂದ ಕರೆಯುತ್ತಾರೆ. ಈ ಬಾರಿ ಎಚ್‌ ವೈ ಮೇಟಿ ಕಡೆ ಕ್ಷೇತ್ರದ ಒಲವು ಇದೆ ಎಂಬ ಮಾತುಗಳು ಕೇಳಿಬಂದಿವೆ.

ಬಿಜೆಪಿಯಿಂದ ಹೊರಬಂದು ಪಕ್ಷೇತರ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ್ ಚರಂತಿಮಠ ಪ್ರಬಲ ಅಭ್ಯರ್ಥಿ ಎಂದು ಹೇಳಲಾಗದಿದ್ದರೂ, ವೀರಣ್ಣ ಚರಂತಿಮಠ ಸೋಲಿಗೆ ಕಾರಣವಾಗುವ ಎಲ್ಲ ಮುನ್ಸೂಚನೆ ಕಾಣುತ್ತಿವೆ. ಮಲ್ಲಿಕಾರ್ಜುನ್ ಜೊತೆಗೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಯುವಮುಖಂಡ ಸಂತೋಷ್ ಹೊಕ್ರಾಣಿ ಸೇರಿದಂತೆ ಸಂಘ ಪರಿವಾರದ ಅನೇಕರು ಅವರ ಬೆನ್ನಿಗೆ ನಿಂತಿದ್ದಾರೆ. ವೀರಣ್ಣ ಚರಂತಿಮಠ ಹಾಗೂ ಮಲ್ಲಿಕಾರ್ಜುನ್ ಹಿರೇಮಠ ನಡುವಿನ ಗುದ್ದಾಟದಲ್ಲಿ ಕಾಂಗ್ರೆಸ್ ಗೆಲುವಿನ ಹಾದಿ ಸುಗಮ ಎಂದು ಹೇಳಲಾಗುತ್ತಿದೆ.

ಡಾ. ದೇವರಾಜ್ ಪಾಟೀಲ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. 2018ರವರೆಗೂ ಬಾದಾಮಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಪ್ರತಿಬಾರಿ ಟಿಕೆಟ್ ಸಿಗದಿದ್ದಾಗ ರೋಸಿಹೋಗಿ ಬಾಗಲಕೋಟೆಯಿಂದಲಾದರೂ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಇದರಿಂದ ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗುವುದಾಗಿ ಘೋಷಿಸಿಕೊಂಡರು. ಕೊನೆಯ ಕ್ಷಣದಲ್ಲಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಕುರುಬ ಸಮುದಾಯಕ್ಕೆ ಸೇರಿದ ದೇವರಾಜ್ ಪಾಟೀಲ್ ಅವರು ಸಮುದಾಯದ ಮತಗಳನ್ನು ಸೆಳೆಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಆದರೆ ಕ್ಷೇತ್ರದಲ್ಲಿ ರಾಜಕಾರಣಿಯಾಗಿ ಆ ಮಟ್ಟಿನ ವರ್ಚಸ್ಸು ಇಲ್ಲದ ಅವರು ಪ್ರಬಲ ಸ್ಪರ್ಧಿ ಅಲ್ಲ ಎನ್ನುವ ಮಾತುಗಳೇ ಹೆಚ್ಚಿವೆ.

ಮುಧೋಳ ಕ್ಷೇತ್ರ

ಬಾಗಲಕೋಟೆ ಜಿಲ್ಲೆಯಲ್ಲಿ ಒಂದೇ ಒಂದು ಎಸ್ಟಿ ಮೀಸಲಾತಿ ಹೊಂದಿರುವ ಕ್ಷೇತ್ರ ಮುಧೋಳವಾಗಿದೆ. ಭರಪೂರ ಕಬ್ಬಿನ ಬೆಳೆ, ಸಮೃದ್ಧ ನೀರಾವರಿಯಿಂದ ಗಮನಸೆಳೆಯುವ ಮುಧೋಳ (ಮೀಸಲು) ಕ್ಷೇತ್ರ ಜಟಾಪಟಿ ರಾಜಕಾರಣಕ್ಕೂ ಹೆಸರುವಾಸಿ.

ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಹಾಗೂ ಅವರ ಎದುರಾಳಿ ಕಾಂಗ್ರೆಸ್‌ನ ಮಾಜಿ ಸಚಿವ ಆರ್‌ ಬಿ ತಿಮ್ಮಾಪೂರ ಅವರ ಹೋರಾಟಕ್ಕೆ ಕ್ಷೇತ್ರ ಸಾಕ್ಷಿಯಾಗಿದೆ. ಜೆಡಿಎಸ್‌ನಿಂದ ಧರ್ಮರಾಜ ದೊಡ್ಡಮನಿ ಸ್ಪರ್ಧಿಸಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸತೀಶ್ ಬಂಡಿವಡ್ಡರ 60 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದರು. ಹೀಗಾಗಿ ಈ ಬಾರಿಯೂ ಟಿಕೆಟ್ ಸಿಗುತ್ತದೆ ಎಂದು ಭಾವಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಸತೀಶ್ ಅವರಿಗೆ ಟಿಕೆಟ್‌ ತಪ್ಪಿದೆ. ಸದ್ಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಾಬಲ್ಯ ಹೊಂದಿಲ್ಲ. ಹೀಗಾಗಿ, ಈ ಬಾರಿಯೂ ಕಾಂಗ್ರೆಸ್‌ – ಬಿಜೆಪಿ ನಡುವೆ ಜಿದ್ದಾಜಿದ್ದಿ ಇರುವುದು ಖಚಿತ. ಈ ನಡುವೆ ಪಕ್ಷೇತರ ಅಭ್ಯರ್ಥಿ ಸತೀಶ್ ಬಂಡಿವಡ್ಡರ್‌ ಇವರಿಬ್ಬರಿಗೂ ಹೇಗೆ ಸವಾಲು ಒಡ್ಡಲಿದ್ದಾರೆ ಎಂಬುದು ಕಾದುನೋಡಬೇಕು.

ಹುನಗುಂದ ಕ್ಷೇತ್ರ

ಬಸವನಾಡು ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಬಾರಿಯ ಚುನಾವಣೆಯಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುತ್ತದೆ. ಇದು ರಾಜ್ಯಕ್ಕೆ ಅಲ್ಪಕಾಲದವರೆಗೆ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರವೂ ಆಗಿದೆ. ಎಸ್.ಆರ್ ಕಂಠಿ ಅವರು ಹುನಗುಂದ ವಿಧಾನಸಭಾ ಕ್ಷೇತ್ರದಿಂದ ಗೆದ್ದು 1962ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಹುನಗುಂದ ಮತಕ್ಷೇತ್ರದಲ್ಲಿ ನಡೆದ ಬಹುತೇಕ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಪಾರುಪತ್ಯ ಸ್ಥಾಪಿಸಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಜೋರಾಗಿತ್ತು. ಆದರೆ ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಯಿಂದ ಮತವಿಂಗಡಣೆಯಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಸೋಲು ಕಂಡಿದೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ವಿಜಯಾನಂದ ಕಾಶಪ್ಪನವರ ಗೆಲುವಿನ ನಿರೀಕ್ಷೆ ಇಟ್ಟುಕೊಂಡು ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ಶಿವಪ್ಪ ಬೋಲಿ ಕಣದಲ್ಲಿದ್ದಾರೆ. ಹುನಗುಂದ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಎಸ್ ಆರ್ ನವಲಿ ಹಿರೇಮಠ ಯುಗಾದಿ ಪಾಡ್ಯದಿಂದಲೇ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.

ಈ ಬಾರಿ ಹುನಗುಂದ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತವಾಗಿದೆ. 2018ರ ಚುನಾವಣೆಯಲ್ಲಿ ಸಹ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ ಬಿಜೆಪಿ ಪಕ್ಷಕ್ಕೆ ಲಾಭವಾಗಿತ್ತು. ಏಕೆಂದರೆ ಎಸ್ ಆರ್ ನವಲಿ ಹಿರೇಮಠ ಅವರು ಅಧಿಕ ಸಂಖ್ಯೆಯ್ಲಿ ಮತಗಳನ್ನು ಸೆಳದು ಕಾಂಗ್ರೆಸ್ ಸೋಲಿಗೆ ಪರೋಕ್ಷವಾಗಿ ಕಾರಣರಾಗಿದ್ದರು. ಈ ಭಾರಿಯು ಮತ್ತೆ ತ್ರಿಕೋನ ಸ್ಪರ್ಧೆದಿಂದಾಗಿ ಈ ಸಾರಿ ಯಾರಿಗೆ ಲಾಭ, ಯಾರಿಗೆ ಹಾನಿ ಎಂಬುದು ಸದ್ಯ ಹೇಳಲು ಕಷ್ಟ.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವಿಜಯಾನಂದ ಕಾಶಪ್ಪನವರ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸುವ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈ ತ್ರಿಕೋನ ಸ್ಪರ್ಧೆಯಲ್ಲಿ ಜಾತಿ ಲೆಕ್ಕಾಚಾರವು ಕೆಲಸ ಮಾಡಲಿದೆ. ಇವೆಲ್ಲ ಅಂಶಗಳು ಯಾರಿಗೆ ಫಲಪ್ರದವಾಗಿದೆ ಎಂದು ಕಾದು ನೋಡಬೇಕಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆ ಕದನ | ಸಂಘರ್ಷ ಪೀಡಿತ ಮಣಿಪುರದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ?

ಮಣಿಪುರದಲ್ಲಿ ಬಿಜೆಪಿ ಕಳೆದೆರಡು ಚುನಾವಣೆಯಲ್ಲೂ ಮತಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ ಈ ಬಾರಿ...

‘ಈಸ್ಟರ್ ಭಾನುವಾರ’ ಕೆಲಸದ ದಿನವೆಂದು ಘೋಷಣೆ; ಮಣಿಪುರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

ಕ್ರೈಸ್ತರ ಪ್ರಮುಖ ಹಬ್ಬವಾದ 'ಈಸ್ಟರ್ ಭಾನುವಾರ'ವನ್ನು (ಮಾರ್ಚ್‌ 31) ಕೆಲಸದ ದಿನವಾಗಿ...

ತಮಿಳುನಾಡು | 238 ಬಾರಿ ಚುನಾವಣೆಯಲ್ಲಿ ಸೋತರೂ ದಣಿಯದ ಪದ್ಮರಾಜನ್;‌ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ

ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೆ ಯಾರಿಗಾದರೂ ನಿರಾಶೆ ಉಂಟಾಗಬಹುದು. ಆದರೆ ಟೈರ್ ರಿಪೇರಿ...

ತೆರಿಗೆ ಮರು ಮೌಲ್ಯಮಾಪನ ವಿರುದ್ಧದ ಕಾಂಗ್ರೆಸ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ತೆರಿಗೆ ಅಧಿಕಾರಿಗಳು ತಮ್ಮ ವಿರುದ್ಧ ನಾಲ್ಕು ವರ್ಷಗಳ ಅವಧಿಯ ತೆರಿಗೆ ಮರುಮೌಲ್ಯಮಾಪನ...