ಚುನಾವಣೆ ವಿಶೇಷ | ಆಡಳಿತ ವಿರೋಧಿ ಅಲೆಯಲ್ಲಿ ತರಗೆಲೆಯಾಗಲಿದೆಯೇ ಬಿಜೆಪಿ?

Date:

ಮೂರೂವರೆ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ, ರಾಜ್ಯದ ಜನತೆಯ ಸಹಿಷ್ಣುತೆಗೆ ಸವಾಲೆಸೆದು ಜನವಿರೋಧಿ ಎನಿಸಿಕೊಂಡಿದೆ. ಬಿಜೆಪಿಯ ದೆಹಲಿ ನಾಯಕರಿಗೆ ಬೇಕಿರುವುದು ಸಂಪದ್ಭರಿತ ಕರ್ನಾಟಕವೇ ಹೊರತು, ಜನರಲ್ಲ. ಜನಕಲ್ಯಾಣವಂತೂ ಖಂಡಿತ ಅಲ್ಲ ಎನ್ನುವುದು ಸಾಬೀತಾಗಿದೆ. ಈಗ ಮತಭಿಕ್ಷೆಗಾಗಿ ಜನರ ಬಳಿ ಹೋಗುವ ಹೊತ್ತಿನಲ್ಲಿ ಆಡಳಿತ ವಿರೋಧಿ ಅಲೆ ಎದುರಾಗಿ ತರಗೆಲೆಯಾಗುವ ಭಯ ಕಾಡುತ್ತಲಿದೆ.

ರಾಜ್ಯ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಆಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾಗಿದೆ. ಆದರೆ ಅಧಿಕಾರದಲ್ಲಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮೀನಮೇಷ ಎಣಿಸುತ್ತಿದೆ. ಅಧಿಕಾರದಲ್ಲಿದ್ದ ಪಕ್ಷಕ್ಕೆ ಅಭ್ಯರ್ಥಿಗಳು ಹಾಗೂ ಹಣದ ಕೊರತೆ ಇರುವುದಿಲ್ಲ. ಇರುವುದು ಆಡಳಿತವಿರೋಧಿ ಅಲೆ. ಅದನ್ನು ನಿಭಾಯಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ವರ್ಚಸ್ಸು ಮುಖ್ಯಮಂತ್ರಿಯಾದ ವ್ಯಕ್ತಿಗಿರುತ್ತದೆ. ಅಂತಹ ವರ್ಚಸ್ಸನ್ನು ಬಸವರಾಜ ಬೊಮ್ಮಾಯಿ ಉಳಿಸಿಕೊಂಡಿದ್ದಾರೆಯೇ?

ಈಗ ಈ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಏಕೆಂದರೆ ಬಸವರಾಜ ಬೊಮ್ಮಾಯಿ ಶಾಸಕರಿಂದ ನೇರವಾಗಿ ಆಯ್ಕೆಯಾದ ಮುಖ್ಯಮಂತ್ರಿಯಲ್ಲ. ದೆಹಲಿಯ ನಾಯಕರಿಂದ ನೇಮಕಗೊಂಡ ಆಪತ್ಕಾಲೀನ ಮುಖ್ಯಮಂತ್ರಿ. ಅಸಲಿಗೆ ಅವರು ಬಿಜೆಪಿಯೇ ಅಲ್ಲ. ಸಂಘಪರಿವಾರದ ಸಹವಾಸವೂ ಇಲ್ಲ. ಜನತಾದಳದಲ್ಲಿದ್ದು ಬಿಜೆಪಿಗೆ ಬಂದ ವಲಸಿಗರು. ಲಿಂಗಾಯತ ಎಂಬ ಏಕೈಕ ಕಾರಣಕ್ಕಾಗಿ ಮುಖ್ಯಮಂತ್ರಿಯಾದವರು. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದಾಗ, ಲಿಂಗಾಯತರು ಬಂಡೆದ್ದು ಪಕ್ಷಕ್ಕೆ ಫಜೀತಿ ತರಬಹುದೆಂಬ ದೂರಾಲೋಚನೆಯಿಂದ ಬೊಮ್ಮಾಯಿಯನ್ನು ಸಿಎಂ ಕುರ್ಚಿಯಲ್ಲಿ ಕೂರಿಸಲಾಗಿತ್ತು. ಜೊತೆಗೆ ಯಡಿಯೂರಪ್ಪನವರ ಆಯ್ಕೆಯೂ ಅವರೇ ಆಗಿತ್ತು.

ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತ ಬಸವರಾಜ ಬೊಮ್ಮಾಯಿ, ಕೂರಿಸಿದ ಯಡಿಯೂರಪ್ಪನವರಿಗೂ ನಿಷ್ಠೆ ತೋರಲಿಲ್ಲ; ಅಚ್ಚುಕಟ್ಟಾದ ಆಡಳಿತವನ್ನೂ ಮಾಡಲಿಲ್ಲ. ಬಿಜೆಪಿಗೆ, ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕಾಗಿತ್ತು. ಅದರ ಹಿಂದೆ ಆರೆಸೆಸ್ ನ ಸಂತೋಷರ ಕೈವಾಡವಿತ್ತು. ಯಡಿಯೂರಪ್ಪನವರು ಅಧಿಕಾರದಿಂದ ಕೆಳಗಿಳಿದಾಗ ಅಲ್ಲಿಗೆ ಆರೆಸೆಸ್ ಬಂದು ಕೂತಿತ್ತು. ಅದರ ಆಜ್ಞೆ, ಆದೇಶಗಳನ್ನು ಪಾಲಿಸುವುದಷ್ಟೇ ಬೊಮ್ಮಾಯಿಯವರ ಕೆಲಸವಾಗಿತ್ತು. ಅವರೇಳಿದ್ದನ್ನೂ ಕೇಳಿ, ಇವರೇಳಿದ್ದನ್ನೂ ಮಾಡಿ ಬೊಮ್ಮಾಯಿ `ಬೊಂಬೆ’ ಎನಿಸಿಕೊಂಡರು. ಜೊತೆಗೆ ಬಿಜೆಪಿಯ ಹಿರಿತಲೆಗಳಿಗೆ ಅನನುಭವಿಯಾಗಿ, ಮೂಲ ಬಿಜೆಪಿಗರಿಗೆ ವಲಸಿಗರಾಗಿ ಕಂಡ ಬೊಮ್ಮಾಯಿ, ಸಕಲರಿಗೂ ಸಲ್ಲುವ ವ್ಯಕ್ತಿಯಾಗಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಘನತೆ ಗೌರವವನ್ನೂ ತರಲಿಲ್ಲ.

ಆ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಅವರ ಆಡಳಿತವನ್ನೊಮ್ಮೆ ಹಿಂತಿರುಗಿ ನೋಡಿದರೆ ಅಲ್ಲಿ ದಕ್ಷತೆಯೂ ಕಾಣುವುದಿಲ್ಲ, ಪ್ರಾಮಾಣಿಕತೆ ಮೊದಲೇ ಇಲ್ಲ. ಅವರ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಲಘುವಾದ ಹೇಳಿಕೆಯಿಂದ ಹಿಡಿದು; ಒಕ್ಕಲಿಗರನ್ನು ದೇಶದ್ರೋಹಿಗಳನ್ನಾಗಿಸಿ ಉರಿ-ನಂಜು ಸೃಷ್ಟಿಯವರೆಗೆ, ಬೊಮ್ಮಾಯಿ ತಳೆದ ನಿಲುವು-ಧೋರಣೆ, ಕರ್ನಾಟಕದ ಜನತೆಯಲ್ಲಿ ಬಿಜೆಪಿ ಬಗ್ಗೆ ಭ್ರಮನಿರಸನ ಉಂಟುಮಾಡಿತ್ತು. ಒಬ್ಬ ಮುಖ್ಯಮಂತ್ರಿ ಎಂದರೆ, ಇಡೀ ನಾಡಿನ ಸಮಸ್ತ ಜನಗಳ ಪ್ರತಿನಿಧಿ ಎಂಬ ಸಾಮಾನ್ಯ ತಿಳಿವಳಿಕೆಯನ್ನೇ ಬುಡಮೇಲು ಮಾಡಿತ್ತು.

ಈ ಸಂದರ್ಭದಲ್ಲಿ ನಾವು ದೇವರಾಜ ಅರಸು ಅವರ ರಾಜಕೀಯ ನಿಲುವುಗಳತ್ತ ನೋಡುವುದು ಸೂಕ್ತವೆನಿಸುತ್ತದೆ. 1978ರಲ್ಲಿ ಹೊಸದಾಗಿ ಗೆದ್ದ ಶಾಸಕರಿಗೆ ದೇವರಾಜ ಅರಸು, ಟೇಬಲ್ ಮೇಲಿದ್ದ ನೀರಿನ ಲೋಟವನ್ನು ಎತ್ತಿ ಹಿಡಿದು, `ಇದು ಸರಕಾರದ ಕಾರ್ಯಕ್ರಮ. ದಾಹವಿರುವವನಿಗೆ ಕೊಟ್ಟು ಬಾ ಎಂದರೆ, ನೀವು ನಮ್ಮ ಪಕ್ಷದವರಿಗೆ, ನಮ್ಮ ಜಾತಿಯವರಿಗೆ ಎಂದು ಹುಡುಕಿ ಕೊಡಬಾರದು. ಅದು ರಾಜಧರ್ಮಕ್ಕೆ ವಿರೋಧ. ಜನತಂತ್ರಕ್ಕೆ ಅಪಚಾರ. ಕುಡಿಯುವ ನೀರಿಗೆ, ಉರಿಯುವ ದೀಪಕ್ಕೆ, ತಿರುಗುವ ರಸ್ತೆಗೆ, ಓದುವ ಶಾಲೆಗೆ, ರೋಗಿಯ ಚಿಕಿತ್ಸೆಗೆ, ಜಾತಿ, ಧರ್ಮ, ಜನಾಂಗ, ಭಾಷೆಗಳ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಜನದ್ರೋಹ. ಎಲ್ಲ ವಿಷಯಗಳಲ್ಲೂ ರಾಜಕಾರಣ ಮಾಡುವುದು ಅಪಾಯಕಾರಿ’ ಎಂದು ಹೇಳಿದ್ದರು. ರಾಜಧರ್ಮದ ಬಗ್ಗೆ ಹೊಸ ಶಾಸಕರಿಗೆ ತಿಳಿವಳಿಕೆ ತುಂಬಿದ್ದರು.

ಇದೇ ರಾಜಧರ್ಮ ಪಾಲನೆ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ, 2002ರ ಗುಜರಾತ್ ಗಲಭೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಗೆ ತಿಳಿ ಹೇಳಿದ್ದರು. ಆದರೆ ಮೋದಿ, ವಾಜಪೇಯಿ ಮಾತಿಗೆ ಬೆಲೆ ಕೊಡಲಿಲ್ಲ, ರಾಜಧರ್ಮವನ್ನೂ ಪಾಲಿಸಲಿಲ್ಲ. ಬಿಜೆಪಿಯ ಪರಮೋಚ್ಚ ನಾಯಕ ಮೋದಿಯೇ ರಾಜಧರ್ಮವನ್ನು ಪಾಲಿಸದಿದ್ದಾಗ, ಬಸವರಾಜ ಬೊಮ್ಮಾಯಿಯವರು ಪಾಲಿಸುತ್ತಾರೆಯೇ? ಮೋದಿ ಮಾಡಿದಂತೆಯೇ ಬೊಮ್ಮಾಯಿ ಕೂಡ ಮಾಡಿದರು. ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಆರೆಸೆಸ್ಸಿನ ಅಡಿಯಾಳಾಗಿ ರಾಜ್ಯದ ಮುಸ್ಲಿಮರನ್ನು ಭಯೋತ್ಪಾದಕರಂತೆ ಚಿತ್ರಿಸಿದರು. ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗುವುದು ಗೊತ್ತಿದ್ದರೂ ಹಿಜಾಬ್ ಪ್ರಕರಣವನ್ನು ನಾಡಿನ ಜ್ವಲಂತ ಸಮಸ್ಯೆಯನ್ನಾಗಿಸಿದರು. ಸಾಲದೆಂದು, ಹಲಾಲ್-ಆಝಾನ್ ಗೆ ಗಾಳಿ ಹಾಕಿದರು. ದೇವಸ್ಥಾನಗಳ ಮುಂದೆ, ಜಾತ್ರೆಯಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಹಿಂದು ಸಂಘಟನೆಗಳ ಕಾರ್ಯಕರ್ತರು ತೊಂದರೆ ಕೊಟ್ಟರೂ ತೆಪ್ಪಗಿದ್ದರು. ಇದು ನಾಡನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯೊಬ್ಬರು ಮಾಡುವ ಕೆಲಸವೇ?

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಡಳಿತದಲ್ಲಾದರೂ ದಕ್ಷತೆ, ಪಾರದರ್ಶಕತೆ ಮೆರೆದರೆ, ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಯಾಯಿತೆ ಎಂದರೆ, ಅಲ್ಲೂ ಹಗರಣಗಳ ಸಾಲು ಸಾಲು. ಕೊರೊನಾದಿಂದ ಜನ ಸಾಯುತ್ತಿದ್ದರೂ, ಅದರ ನೆಪದಲ್ಲಿ ಬೊಕ್ಕಸ ಬರಿದು ಮಾಡಿದರು. ಪಿಎಸ್ಐ ಹಗರಣದಲ್ಲಿ ಬಿಜೆಪಿಯವರೇ ಭಾಗಿಯಾಗಿದ್ದರೂ ಘನತೆವೆತ್ತ ವಿಧಾನಮಂಡಲದಲ್ಲಿ ಹಗರಣವಾಗಿಲ್ಲ ಎಂದು ಗೃಹ ಸಚಿವರಿಂದ ಸುಳ್ಳು ಹೇಳಿಸಿದರು. ಸರ್ಕಾರದ ಬೊಕ್ಕಸದಿಂದ ಕೋಟ್ಯಾಂತರ ರೂಪಾಯಿಗಳನ್ನು ಎಗರಿಸಿದ ಬಿಟ್ ಕಾಯಿನ್ ಶ್ರೀಕಿ ಎಂಬ ಮಾದಕದ್ರವ್ಯ ವ್ಯಸನಿಗೂ ಬಿಜೆಪಿ ನಾಯಕರ ಪುತ್ರರಿಗೂ ಇರುವ ಸಂಬಂಧದ ಬಗ್ಗೆ ಸ್ಪಷ್ಟೀಕರಣ ಕೊಡದೆ ಕಣ್ಮುಚ್ಚಿ ಕುಳಿತರು. ಸಾಂಸ್ಕೃತಿಕ ಲೋಕದ ವಿರೋಧದ ನಡುವೆಯೂ ಬಲಪಂಥೀಯ ಪಠ್ಯಕ್ರಮವನ್ನು ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ಹೇರಿ ಕೇಕೆ ಹಾಕಿದರು. ಯಾವ ತಯಾರಿಯನ್ನೂ ಮಾಡಿಕೊಳ್ಳದೆ ಎನ್ಇಪಿ ಜಾರಿಗೊಳಿಸಿ ಉನ್ನತ ಶಿಕ್ಷಣವನ್ನು ಅಧ್ವಾನಗೊಳಿಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ನೇರವಾಗಿ ಪ್ರಧಾನಿಗಳಿಗೆ ಪತ್ರ ಬರೆದು 40% ಕಮಿಷನ್ ವಿಷಯ ಹೊರಹಾಕಿದರೂ ಮೌನವಾಗಿದ್ದರು.  ಮತದಾರರ ಮಾಹಿತಿ ಕದ್ದ ಚಿಲುಮೆ ಹಗರಣದ ಬಗ್ಗೆ, ಗುಜರಾತಿನ ಅಮುಲ್ ನೊಂದಿಗೆ ನಮ್ಮ ನಂದಿನಿಯನ್ನು ವಿಲೀನಗೊಳಿಸುವ ಬಗ್ಗೆ, ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಅನಾವರಣ ಮಾಡುವ ಮೂಲಕ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತಂದ ಬಗ್ಗೆ, ಕಾಮಗಾರಿ ಪೂರ್ಣವಾಗದಿದ್ದರೂ ಮೋದಿ ಕರೆಸಿ ಉದ್ಘಾಟನೆಗಳ ಮೆರವಣಿಗೆ ಮಾಡಿಸಿದ ಬಗ್ಗೆ ಮಾತನಾಡದಾದರು. ಬಿಜೆಪಿಯ ಪರಮೋಚ್ಚ ನಾಯಕ ಮೋದಿಯ `ನಾ ಖಾವೂಂಗ, ನಾ ಖಾನೆದೂಂಗ’, `ಚೌಕಿದಾರ್’ ಸ್ಲೋಗನ್ ಗಳನ್ನೇ ಜನ ಗೇಲಿ ಮಾಡುವಂತೆ ಮಾಡಿದರು.

ಇದಲ್ಲದೆ, ಭಾರತೀಯ ಜನತಾ ಪಕ್ಷದೊಳಗೆ ನಡೆಯುತ್ತಿದ್ದ ನಾಯಕರ ನಡುವಿನ ಕಾಲೆಳೆದಾಟ, ಮೇಲಾಟಗಳನ್ನಾದರೂ ಬಸವರಾಜ ಬೊಮ್ಮಾಯಿ ತಹಬಂದಿಗೆ ತಂದರೆ? ಲಿಂಗಾಯತ ನಾಯಕ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಷ್ಟು ದಿನವೂ, ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೀದಿಯಲ್ಲಿ ಹರಾಜು ಹಾಕಿದ್ದರು. ಯತ್ನಾಳ್ ಹಿಂದೆ ಆರೆಸೆಸ್ಸಿನ ಸಂತೋಷರ ಕುಮ್ಮಕ್ಕು ಇತ್ತು. ಆ ಕಾರಣದಿಂದ `ಶಿಸ್ತಿ’ನ ಪಕ್ಷವಾದ ಬಿಜೆಪಿಯಲ್ಲಿ ಯತ್ನಾಳ್ ವಿರುದ್ಧ ಶಿಸ್ತುಕ್ರಮವೆಂಬುದೇ ಇಲ್ಲವಾಗಿತ್ತು. ಯಡಿಯೂರಪ್ಪನವರು ಕೆಳಗಿಳಿದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ, ಯತ್ನಾಳ್ ಸುಮ್ಮನಾದರೂ, ಪಕ್ಕದಲ್ಲಿದ್ದ ಮತ್ತೊಬ್ಬ ಲಿಂಗಾಯತ ನಾಯಕ ಮುರುಗೇಶ್ ನಿರಾಣಿ ಎದ್ದು ನಿಂತಿದ್ದರು. ಜೋಷಿ ಕುಮ್ಮಕ್ಕಿನಿಂದ ಅರವಿಂದ ಬೆಲ್ಲದ್, ಅಮಿತ್ ಶಾ ಬೆಂಬಲದಿಂದ ನಿರಾಣಿ, ಬೊಮ್ಮಾಯಿಗೆ ಬೆವರಿಳಿಸಿಬಿಟ್ಟರು. ಆದರೂ ಶಿಸ್ತಿನ ಪಕ್ಷದಲ್ಲಿ ಶಿಸ್ತುಕ್ರಮ ಕಾಣಲೇ ಇಲ್ಲ. ಇನ್ನು ಬೆಂಗಳೂರು ನಗರವನ್ನು ಹಂಚಿಕೊಳ್ಳುವಲ್ಲಿ ಸಚಿವರಾದ ಅಶ್ವತ್ಥನಾರಾಯಣ, ಆರ್. ಅಶೋಕ್ ಮತ್ತು ವಿ. ಸೋಮಣ್ಣರ ನಡುವೆ ಬೀದಿಕಾಳಗವೇರ್ಪಟ್ಟರೂ ಬೊಮ್ಮಾಯಿ ಬಾಯಿ ಬಿಡದಂತಾದರು. ಸೋಮಣ್ಣನವರ ರಥಯಾತ್ರೆಯಿಂದ ಅಶೋಕ್ ಅರ್ಧಕ್ಕೇ ಇಳಿದುಹೋದರೂ, ಬೇಸತ್ತ ಸೋಮಣ್ಣ ಕಾಂಗ್ರೆಸ್ ನತ್ತ ಮುಖ ಮಾಡಿದರೂ, ಬೊಮ್ಮಾಯಿ ಬೊಂಬೆಯೇ ಆದರು.

ಇದೂ ಒತ್ತಟ್ಟಿಗಿರಲಿ, ಗಡಿನಾಡು ಬೆಳಗಾವಿ ಬಗೆಗಾದರೂ ಬಸವರಾಜ ಬೊಮ್ಮಾಯಿ ಬಾಯ್ಬಿಟ್ಟರೇ? ಕನ್ನಡಿಗರು-ಮರಾಠಿಗರನ್ನು ಸಮಾನವಾಗಿ ಕಂಡರೇ?  ಇಲ್ಲ, ರಮೇಶ್ ಜಾರಕಿಹೊಳಿ ಒತ್ತಾಯಕ್ಕೆ ಮಣಿದು, ಶಿವಾಜಿ ಪ್ರತಿಮೆ ಅನಾವರಣ ಮಾಡಿ, ಗಡಿನಾಡಲ್ಲಿ ಕನ್ನಡಿಗರ ಧ್ವನಿಯನ್ನೇ ಅಡಗಿಸಿಬಿಟ್ಟರು. ಮುಖ್ಯಮಂತ್ರಿಗಳಿಗೆ ಕನ್ನಡಿಗರಿಗಿಂತಲೂ ರಮೇಶ್ ಜಾರಕಿಹೊಳಿ ಮುಖ್ಯ ಎನಿಸಿಬಿಟ್ಟರು. ಏಕೆಂದರೆ, ರಮೇಶ್ ಕೇವಲ ತಮ್ಮ ಗೋಕಾಕ್ ಕ್ಷೇತ್ರ ಮಾತ್ರವಲ್ಲದೇ ಬೆಳಗಾವಿ ಜಿಲ್ಲೆ ರಾಜಕಾರಣದಲ್ಲಿ ತಮ್ಮದೇ ಹಿಡಿತ ಹೊಂದಿದವರು. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಲಖನ್ ಜಾರಕಿಹೊಳಿಯನ್ನು ಗೆಲ್ಲಿಸಿಕೊಂಡು, ಬಿಜೆಪಿಗೇ ಸೆಡ್ಡು ಹೊಡೆದಿದ್ದರು. ಬೆದರಿದ ಬೊಮ್ಮಾಯಿ ಕಳೆದವಾರ ಕೂಡ ರಮೇಶ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಆದರೆ ಬೆಳಗಾವಿ ಜಿಲ್ಲೆಯ ಬಿಜೆಪಿ ಇಬ್ಭಾಗವಾಗಿದ್ದು, ಸಿಎಂ ಕಾರ್ಯಕ್ರಮವನ್ನೇ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರು, ನಾಯಕರು ಬಹಿಷ್ಕರಿಸಿದ್ದರು. ಅಷ್ಟೇ ಅಲ್ಲ, ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಲಕ್ಷ್ಮಣ ಸವದಿ ಪ್ರಯತ್ನಿಸುತ್ತಿದ್ದರೆ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿಗೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಬ್ಲಾಕ್ ಮೇಲ್ ರಾಜಕಾರಣಕ್ಕಿಳಿದಿದ್ದಾರೆ. ಅಶ್ಲೀಲ ಸಿಡಿ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿಯ ಅಟಾಟೋಪಕ್ಕೆ ಬಿಜೆಪಿಯಂಥ ರಾಷ್ಟ್ರೀಯ ಪಕ್ಷ ಬಗ್ಗುತ್ತದೆ ಎಂದರೆ, ಅದು ಜನರ ಮನಸ್ಸನ್ನು ಗೆಲ್ಲುತ್ತದೆಯೇ?

ಇದನ್ನು ಓದಿದ್ದೀರಾ? ಚುನಾವಣೆ ಮೇಲೆ ಕಣ್ಣಿಟ್ಟ ಒಳಮೀಸಲಾತಿ ಸೂತ್ರದ ಒಳಗುಟ್ಟು

ಮೂರೂವರೆ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ, ಜನವಿರೋಧಿ ಎಂಬುದು ಸಾಬೀತಾಗಿದೆ. ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಬೆಲೆ ಏರಿಕೆ, ಆರ್ಥಿಕ ಹಣದುಬ್ಬರದ ಕಾರಣದಿಂದ ರೋಸಿ ಹೋಗಿದ್ದಾರೆ. ಜನರ ಬಳಿ ಹೋಗುವ ಹೊತ್ತಿನಲ್ಲಿ ಆಡಳಿತ ವಿರೋಧಿ ಅಲೆ ಎದುರಾಗಿ ತರಗೆಲೆಯಾಗುವ ಭಯ ಕಾಡುತ್ತಲಿದೆ. ಅದನ್ನು ಮುಚ್ಚಿಕೊಳ್ಳುವ ಸಲುವಾಗಿ ಯಡಿಯೂರಪ್ಪನವರನ್ನು ಹಾಡಿ ಹೊಗಳುತ್ತಿದ್ದಾರೆ. ಎಲ್ಲದಕ್ಕೂ ಅವರನ್ನೇ ಮುಂದೆ ಮಾಡುತ್ತಿದ್ದಾರೆ. ಮತ್ತೊಂದು ಕಡೆಯಿಂದ, ಮೀಸಲಾತಿ ಕಾರಣಕ್ಕೆ ಬಂಜಾರರನ್ನು ಎತ್ತಿಕಟ್ಟಿ ಅವರ ಮನೆಗೆ ಕಲ್ಲು ಹೊಡೆಸಿ ಅಪಮಾನಿಸುವ ಕೃತ್ಯಕ್ಕೂ ಕೈಹಾಕಿದ್ದಾರೆ. ತಮಗಾದ ನೋವನ್ನು ತೋಡಿಕೊಳ್ಳಲು ಇತ್ತೀಚೆಗೆ ಬೆಂಗಳೂರಿನಲ್ಲಿ ಯಡಿಯೂರಪ್ಪ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ, `ಇನ್ನೊಂದು ವಾರದಲ್ಲಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಲಿದೆ, ಯಾರಿಗೆ ಟಿಕೆಟ್ ಎಂಬುದನ್ನು ದೆಹಲಿ ನಾಯಕರು ನಿರ್ಧರಿಸಲಿದ್ದಾರೆ’ ಎಂದು ನೋವು ನುಂಗಿಕೊಂಡರು. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ, ಚುನಾವಣೆಗಳನ್ನು ಗೆದ್ದು ತೋರಿದ ಯಡಿಯೂರಪ್ಪನವರ ಬಾಯಿಂದ ಈ ಮಾತು ಹೇಳಿಸಲಾಗುತ್ತದೆ ಎಂದರೆ, ಪಕ್ಷದಲ್ಲಿ ಅವರ ಪಾತ್ರವೇನು ಎಂಬುದು ನಾಡಿನ ಜನತೆ ಅರ್ಥಮಾಡಿಕೊಳ್ಳಬೇಕಿದೆ.

ಆದರೆ ಬಿಜೆಪಿ, ಹಗರಣಗಳನ್ನು, ಅಂಧಾದುಂದಿ ಆಡಳಿತವನ್ನು ಮುಚ್ಚಲು-ಮರೆಸಲು ಮೋದಿಯ ಮೆರವಣಿಗೆ ಮಾಡುತ್ತಿದೆ. ಹಿಂದುತ್ವ, ರಾಷ್ಟ್ರೀಯತೆ, ದೇಶದ್ರೋಹಗಳೆಂಬ ಅಫೀಮನ್ನು ಹಂಚುತ್ತಿದೆ. ವಿರೋಧಿಗಳನ್ನು ಬಗ್ಗುಬಡಿಯಲು ಐಟಿ, ಇಡಿ, ಎನ್ಐಎಗಳನ್ನು ಛೂ ಬಿಟ್ಟಿದೆ. ಕರ್ನಾಟಕವೆಂಬ ಶಾಂತಿಯ ತೋಟ ಕುದಿಯುವ ಕಣವಾಗಲಿದೆ. ಅಕಸ್ಮಾತ್ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯೆ ಕಡಿಮೆಯಾದರೆ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಲೂ ಸಿದ್ಧವಾಗಿದೆ.

ಬಿಜೆಪಿಯ ದೆಹಲಿ ನಾಯಕರಿಗೆ ಬೇಕಿರುವುದು ಸಂಪದ್ಭರಿತ ಕರ್ನಾಟಕವೇ ಹೊರತು, ಜನರಲ್ಲ. ಜನಕಲ್ಯಾಣವಂತೂ ಖಂಡಿತ ಅಲ್ಲ. ಹಾಗಂತ ಕಾಂಗ್ರೆಸ್-ಜೆಡಿಎಸ್ ಸಾಚಾಗಳೇನಲ್ಲ. ಆದರೆ ಚುನಾವಣೆಗೆ ನಿಂತ ಮೂವರು ಕಳ್ಳರಲ್ಲಿ, ಕಡಿಮೆ ಕಳ್ಳರನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಆ ಮೂಲಕ ಕರ್ನಾಟಕವನ್ನು ಕರ್ನಾಟಕವನ್ನಾಗಿಯೇ ಉಳಿಸಿಕೊಳ್ಳಬೇಕಾಗಿದೆ. ಉತ್ತರದ ರಾಜ್ಯಗಳ ಸಾಲಿಗೆ ಸೇರದಂತೆ ತಡೆಯಬೇಕಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶದಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ನಂಬರ್ ಒನ್ ಆಗಿಸಬೇಕಿದೆ: ಸಿದ್ದರಾಮಯ್ಯ

'ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಸುಸ್ಥಿರ ಬೆಳವಣಿಗೆ ಕಾಣಬೇಕು' 'ರಾಜ್ಯದ...

‘ಫ್ರೀಡಂ ಪಾರ್ಕ್’ನಿಂದ ನಮಗೆ ‘ಫ್ರೀಡಂ’ ಕೊಡಿ: ಸಿಎಂ ಸಿದ್ದರಾಮಯ್ಯಗೆ ‘ಮಹಾಧರಣಿ’ ಆಗ್ರಹ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಕೇವಲ 'ಫ್ರೀಡಂ ಪಾರ್ಕ್‌'ಗೆ ಸೀಮಿತವಾಗಿದ್ದು,...

ತೆಲಂಗಾಣ ಪತ್ರಿಕೆಗಳಲ್ಲಿ ಜಾಹೀರಾತು; ರಾಜ್ಯದ ಬೊಕ್ಕಸ ದುರ್ಬಳಕೆ: ಆರ್‌ ಅಶೋಕ ಕಿಡಿ

'ರಾಜ್ಯದ ಬೊಕ್ಕಸ ಬರಿದು ಮಾಡಿ, ಹೆಮ್ಮಾರಿಯಾದ ಕಾಂಗ್ರೆಸ್ ಸರ್ಕಾರ' 'ಅಭಿವೃದ್ಧಿಗೆ...

ಚಾಮುಂಡೇಶ್ವರಿಗೆ ಐದು ವರ್ಷಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ

ವೈಯಕ್ತಿಕವಾಗಿ ದೇವಿಗೆ ಹಣ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕ...