ಚುನಾವಣೆ ಮೇಲೆ ಕಣ್ಣಿಟ್ಟ ಒಳಮೀಸಲಾತಿ ಸೂತ್ರದ ಒಳಗುಟ್ಟು

Date:

ಮೀಸಲಾತಿ ಪ್ರಮಾಣವನ್ನು ಪುನರ್ ಹಂಚಿಕೆ ಮಾಡುವಾಗ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿಯು ತಾನು ನ್ಯಾ. ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸನ್ನು ಪರಿಗಣಿಸಿರುವುದಾಗಿ ಎಲ್ಲಿಯೂ ಹೇಳಿಲ್ಲ. ಬದಲಾಗಿ ಈ ವರದಿಯನ್ನು ಸರ್ಕಾರ ತಿರಸ್ಕರಿಸಿರುವುದಾಗಿ ಮಾಧುಸ್ವಾಮಿ ಹೇಳಿದ್ದಾರೆ

ಪರಿಶಿಷ್ಟ ಜಾತಿಯ ಎಡಗೈ ಜನಾಂಗದ ಹತ್ತಾರು ವರ್ಷಗಳ ಬೇಡಿಕೆಯಾಗಿದ್ದ ಒಳಮೀಸಲಾತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸಿದೆ. ಪರಿಶಿಷ್ಟ ಜಾತಿಯ ವರ್ಗೀಕರಣ ಕುರಿತ ನ್ಯಾ. ಎ.ಜೆ. ಸದಾಶಿವ ಆಯೋಗ ತಮಗೆ ನೀಡಿದ್ದ ಮೀಸಲಾತಿ ಪ್ರಮಾಣ ಶೇ. 6ರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಎಂಬ ಹಕ್ಕೊತ್ತಾಯವನ್ನು ಸರ್ಕಾರ ಈಡೇರಿಸಿದೆ ಎಂಬ ಸಮಾಧಾನ ಹಲವು ಹೋರಾಟಗಾರರಲ್ಲಿರುವ ನಂಬಿಕೆ.

ಹೀಗಾಗಿ ಈ ಒಳಮೀಸಲಾತಿ ವರ್ಗೀಕರಣದ ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳವನ್ನು ತಲುಪಲಿದೆ.ಇದಕ್ಕಾಗಿ ಎಡಗೈ ಸಮುದಾಯ ಅಲ್ಲಲ್ಲಿ ತಮ್ಮ ಹೋರಾಟದ ಗೆಲುವನ್ನು ಸಂಭ್ರಮಿಸುತ್ತಿದೆ. ಇದರಿಂದ ಸರ್ಕಾರಕ್ಕೂ ಒಂದು ರೀತಿಯ ತೃಪ್ತಿ ತಂದಿದೆ.
ಆದರೆ ನ್ಯಾ. ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ. 15ರಿಂದ ಶೇ. 17ಕ್ಕೆ ಹೆಚ್ಚಿಸಬೇಕು ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಹೆಚ್ಚಿಸಬೇಕೆನ್ನುವ ಶಿಫಾರಸ್ಸನ್ನು ಸಹ ರಾಜ್ಯ ಸರ್ಕಾರ ಒಪ್ಪಿಕೊಂಡಂತಾಗಿದೆ.

ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ. 2ರಷ್ಟನ್ನು ಹೆಚ್ಚಿಸಬೇಕೆನ್ನುವ ಶಿಫಾರಸ್ಸಿನಲ್ಲಿ ತನಗೆ ಮೋಸವಾಗಿದೆ ಎನ್ನುವ ಅಸಮಾಧಾನ ಕೂಡ ಈ ಎಡಗೈ ಪಂಗಡದಲ್ಲಿ ವ್ಯಕ್ತವಾಗುತ್ತಿದೆ. ನ್ಯಾ. ಸದಾಶಿವ ಆಯೋಗ ಶಿಫಾರಸ್ಸು ಮಾಡಿದ್ದ ವರ್ಗೀಕರಣದಲ್ಲಿ ಎಡಗೈಗೆ ಶೇ.6, ಬಲಗೈ ಸಮುದಾಯಕ್ಕೆ ಶೇ.5, ಲಂಬಾಣಿ, ಬೋವಿ, ಕೊರಚ, ಕೊರಮ ಜನರಿಗೆ ಶೇ. 3 ಮತ್ತು ಇತರರಿಗೆ ಶೇ.1 ಎಂದು ನಿಗದಿ ಪಡಿಸಿತ್ತು. ನ್ಯಾ.ನಾಗಮೋಹನ ದಾಸ್ ಆಯೋಗದಿಂದ ಹೆಚ್ಚುವರಿಯಾಗಿ ಬಂದ ಶೇ.2ರಷ್ಟು ಮೀಸಲಾತಿಯನ್ನು ಅರ್ಧ ಬಲಗೈನವರಿಗೆ ಮತ್ತು ಉಳಿದ ಶೇ. ಒಂದುವರೆ ಮೀಸಲಾತಿಯನ್ನು ಲಂಬಾಣಿ, ಬೋವಿ, ಕೊರಚ, ಕೊರಮ ಜನರಿಗೆ ಹಂಚಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೀಗೆ ಮೀಸಲಾತಿ ಪ್ರಮಾಣವನ್ನು ಪುನರ್ ಹಂಚಿಕೆ ಮಾಡುವಾಗ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿಯು ತಾನು ನ್ಯಾ. ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸನ್ನು ಪರಿಗಣಿಸಿರುವುದಾಗಿ ಎಲ್ಲಿಯೂ ಹೇಳಿಲ್ಲ. ಬದಲಾಗಿ ಈ ವರದಿಯನ್ನು ಸರ್ಕಾರ ತಿರಸ್ಕರಿಸಿರುವುದಾಗಿ ಮಾಧುಸ್ವಾಮಿ ಅವರು ತುಮಕೂರಿನಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ ಸ್ಪಷ್ಟವಾಗಿ ಹೇಳಿದ್ದಾರೆ.

ಪರಿಶಿಷ್ಟ ಜಾತಿಯಲ್ಲಿ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲವಾಗಿದೆ ಎನ್ನಲಾದ ಬಲಗೈ ಜನಾಂಗದ ಪ್ರಾತಿನಿಧ್ಯ ಸಂಪುಟದಲ್ಲಿಯೂ ಇಲ್ಲ ಹಾಗಾಗಿ ಉಪಸಮಿತಿಯಲ್ಲಿ ಇವರ ಪ್ರಾತಿನಿಧ್ಯದ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಹಾಗಾಗಿ ಈ ಮೀಸಲಾತಿ ಪುನರ್ ಹಂಚಿಕೆಯ ಸರ್ಕಾರದ ಪ್ರಕ್ರಿಯೆಯಲ್ಲಿ ಈ ಜನರ ಪರವಾದ ದನಿಯೇ ಇಲ್ಲವಾಗಿತ್ತು. ವಾಸ್ತವವಾಗಿ ಈ ಜನಾಂಗ ಈ ಒಳಮೀಸಲಾತಿ ಬಗೆಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿತು. ಇತ್ತೀಚೆಗಷ್ಟೆ ಕೆಲವು ಮಂದಿ ಈ ಒಳಮೀಸಲಾತಿಗೆ ತಮ್ಮ ಬೆಂಬಲ ಸೂಚಿಸಿದ್ದರು. ಈ ಎಲ್ಲ ಬೆಳವಣಿಗೆಯ ನಡುವೆಯೂ ಈ ವರ್ಗ ಮೌನವಹಿಸಿದೆ . ಯಾವ ಅಪಸ್ವರವನ್ನಾಗಲಿ ಅಥವಾ ಬೇಡಿಕೆಯನ್ನಾಗಲಿ ಸರ್ಕಾರದ ಮುಂದಿಟ್ಟಿಲ್ಲ.

ಈ ಮಧ್ಯೆ ಬೋವಿ, ಲಂಬಾಣಿ, ಕೊರಚ, ಕೊರಮ ವರ್ಗಕ್ಕೆ ಶೇ. 3ರಿಂದ ಶೇ. 4.5ಕ್ಕೆ ಹೆಚ್ಚಿಸಿರುವುದನ್ನು ವಿವರಿಸಿರುವ ಸಂಪುಟ ಉಪಸಮಿತಿಯ ಅಧ್ಯಕ್ಷ ಮಾಧುಸ್ವಾಮಿ, ಈ ವರ್ಗಗಳಿಂದ ಹಲವು ಮನವಿಗಳು ಬಂದು, ನ್ಯಾ. ಸದಾಶಿವ ಆಯೋಗವು ಜನಸಂಖ್ಯೆಯ ಬಗೆಗೆ ಮಾಡಿರುವ ಅಂಕಿ ಅಂಶಗಳು ಸರಿಯಾಗಿಲ್ಲ ಎಂದು ದೂರು ನೀಡಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ 2011ರ ಜನಗಣತಿ ಮಾಹಿತಿಯನ್ನು ಪರಿಶೀಲಿಸಿದಾಗ ಎರಡು ಲಕ್ಷದಷ್ಟು ವ್ಯತ್ಯಾಸ ಕಂಡು ಬಂದಿತು. ಈ ಲೋಪದಿಂದಾಗಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ನಾವು ಗಣನಗೆ ತೆಗೆದುಕೊಳ್ಳಲಿಲ್ಲ. ಜೊತೆಗೆ ಕೆಲವು ಸಣ್ಣಪುಟ್ಟ ಅಂದರೆ ಚಂಡಾಲ ಮುಂತಾದ ಜಾತಿಗಳನ್ನು ಅಸ್ಪೃಶ್ಯ ಮತ್ತು ಸ್ಪೃಶ್ಯ ಜಾತಿಗಳ ಪಟ್ಟಿಯಿಂದ ತೆಗೆದು ಇವರನ್ನೇ ಒಂದು ಗುಂಪನ್ನಾಗಿ ಮಾಡಿ ಅವರಿಗೆ ಶೇ. 1ರಷ್ಟು ಮೀಸಲಾತಿಯನ್ನು ಹಂಚಲಾಗಿದೆ ಎಂದಿದ್ದಾರೆ.

ಹೀಗಾಗಿ ನ್ಯಾ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಒಪ್ಪಿಲ್ಲ. ಅದನ್ನು ರಿಜೆಕ್ಟ್ ಮಾಡಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹತ್ತಾರು ವರ್ಷಗಳಿಂದ ಇದ್ದ ಇಂತಹ ಸಮಸ್ಯೆಗಳನ್ನು ಇನ್ನೆಷ್ಟು ವರ್ಷ ಮುಂದುವರಿಸುವುದು ಎಂದು ರಾಜ್ಯ ಸರ್ಕಾರ ತನ್ನದೇ ಆದ ಒಂದು ಸೂತ್ರವನ್ನು ಮಾಡಿ ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಅದರ ಮುಂದಿನ ತೀರ್ಮಾನ ಕೇಂದ್ರ ಸರ್ಕಾರದ್ದು ಎಂದು ಸಚಿವ ಮಾಧುಸ್ವಾಮಿ ರಾಜ್ಯ ಸರ್ಕಾರ ಈ ಸಮಸ್ಯೆಯಿಂದ ತನ್ನ ಕೈತೊಳೆದುಕೊಂಡಿರುವ ಅರ್ಥದಲ್ಲಿ ಹೇಳಿದ್ದಾರೆ.

ನಿಜ. ನ್ಯಾ. ಸದಾಶಿವ ಆಯೋಗದ ವರದಿಯ ಸೋರಿಕೆ ಆಗಿದ್ದು, ಅದನ್ನು ಅಧ್ಯಯನ ಮಾಡಿದಾಗ ಹಲವಾರು ದೋಷಗಳು ಕಾಣುತ್ತವೆ. ಈ ವರ್ಗಗಳ ತಲೆ ಎಣಿಕೆಯ ಸಮೀಕ್ಷೆ ನಡೆದಿಲ್ಲ. ಸರ್ಕಾರದ ವಿವಿಧ ಇಲಾಖೆಗಳು, ವಿಶ್ವ ವಿದ್ಯಾಲಯಗಳು ನೀಡಿದ ಮಾಹಿತಿ ಮೇಲೆ ಜನಸಂಖ್ಯೆ ಮತ್ತು ಅವರ ಸಾಕ್ಷರತೆ, ಶೈಕ್ಷಣಿಕ ಪ್ರಮಾಣ ಇತ್ಯಾದಿಯನ್ನು ಪರಿಗಣಿಸಲಾಗಿದೆ. ಯಾವ ಆಯೋಗವೂ ಹೀಗೆ ತಲೆ ಎಣಿಕೆಯಂತೆ ಸಮೀಕ್ಷೆ ನಡೆಸುವುದಿಲ್ಲ ಎಂದು ಹೇಳುವವರೂ ಇದ್ದಾರೆ. ನ್ಯಾ. ಕಾಂತರಾಜು ಆಯೋಗ ಮನೆ ಮನೆ ಸಮೀಕ್ಷೆ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.

ನ್ಯಾ. ಸದಾಶಿವ ಆಯೋಗದಲ್ಲಿ ಪ್ರಮುಖವಾಗಿ ಕಂಡು ಬರುವ ದೋ಼ಷ ಎಂದರೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಇರುವ ಪುಟ 344ರಲ್ಲಿ ಹೇಳುವುದು ಕ್ರೀಮಿ ಲೇಯರ್ (ಕೆನೆಪದರ) ಜಾರಿಗೆ ತರಬೇಕು ಎನ್ನುವುದು. ಸಂವಿಧಾನದ ಆರ್ಟಿಕಲ್ 15 ಮತ್ತು 16ರ ಅನ್ವಯ ಪರಿಶಿಷ್ಟ ಜಾತಿಗೆ ನೀಡುವ ಮೀಸಲಾತಿಯಲ್ಲಿ ಕ್ರೀಮಿ ಲೇಯರ್ ನಿಯಮವನ್ನು ಸರ್ಕಾರ ಅಂಗೀಕರಿಸಬೇಕು.

ಈ ನಿಯಮದಂತೆ ಸರ್ಕಾರಿ ಉದ್ಯೋಗದಲ್ಲಿರುವ ಕ್ಲಾಸ್-1 ಮತ್ತು ಕ್ಲಾಸ್-2 ಅಧಿಕಾರಿಗಳ ಒಂದು ತಲೆಮಾರಿನ ಮಕ್ಕಳಿಗೆ ಮಾತ್ರ ಮೀಸಲಾತಿ ನೀಡಬೇಕು.

ಹಾಗೆಯೇ ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಅದಕ್ಕೆ ತತ್ಸಮಾನವಾದ ಹುದ್ದೆ ಹೊಂದಿರುವ ಅಧಿಕಾರಿಗಳ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಯಾವುದೇ ಬಗೆಯ ಮೀಸಲಾತಿಯನ್ನು ನೀಡಬಾರದು ಎಂದು ಹೇಳಿದೆ. ಇದು ಸುಲಭವಾಗಿ ಒಪ್ಪುವ ವಿಚಾರವಲ್ಲ. ಈ ಬಗೆಗೆ ಮುಕ್ತವಾಗಿ ಚರ್ಚೆ ನಡೆಯಬೇಕಿದೆ.

ಈ ಆಯೋಗದ ವರದಿಯಲ್ಲಿ ಇರುವ ಒಂದು ಉತ್ತಮ ಸಲಹೆ ಎಂದರೆ ರಾಜ್ಯ ಸರ್ಕಾರವು ತನ್ನ ವ್ಯಾಪ್ತಿಯಲ್ಲಿ ಬರುವ ಖಾಸಗಿ ಉದ್ಯಮ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಬೇಕು ಎನ್ನುವುದು.

ಪರಿಶಿಷ್ಟ ಜಾತಿಯಲ್ಲಿನ ಉನ್ನತ ಅಧಿಕಾರಿಗಳ ಮಕ್ಕಳು ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ. ಬಲಿಷ್ಠರೇ ಎಲ್ಲ ಮೀಸಲಾತಿಯನ್ನು ಕಬಳಿಸುತ್ತಿದ್ದಾರೆ. ಹೀಗಾಗಿ ಮೀಸಲಾತಿಯ ಸವಲತ್ತು ಆ ಜನರ ಬಡವರಿಗೆ ಸಿಗುತ್ತಿಲ್ಲ ಎನ್ನುವ ಒಂದು ವಾದ ಸಾಮಾನ್ಯವಾಗಿದೆ. ಪೌರ ಕಾರ್ಮಿಕರ ನೇಮಕ ಬಿಟ್ಟರೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಹುದ್ದೆಗಳಲ್ಲೂ ಶೇ.18ರಷ್ಟು ಮೀಸಲಾತಿ ಮೀರಿ ನೇಮಕ ನಡೆದಿಲ್ಲ. ಇನ್ನೂ ಸಹಾ ಸಾವಿರಾರು ಹುದ್ದೆಗಳು ಖಾಲಿ ಇರುವುದನ್ನು ಗಮನಿಸಬೇಕಿದೆ.
ಇಂತಹ ಒಂದು ಮಾತು ಒಳಮೀಸಲಾತಿ ಹೋರಾಟವನ್ನು ಆರಂಭಿಸಿದ ಎಡಗೈ ಜನರಲ್ಲೂ ಇದೆ. ಬಲಗೈ ಜನರೇ ಮೀಸಲಾತಿಯ ಸೌಲಭ್ಯವನ್ನು ಕಬಳಿಸಿದ್ದಾರೆ ಎನ್ನುವ ಮಾತುಗಳು ಹಲವಾರು ವರ್ಷಗಳಿಂದ ಕೇಳಿ ಬರುತ್ತಿವೆ. ನ್ಯಾ. ಸದಾಶಿವ ಆಯೋಗದ ವರದಿಯಲ್ಲೂ ಈ ಪ್ರಸ್ತಾವ ಇದೆ. ಇಲ್ಲಿ ಕಬಳಿಕೆ ಪ್ರಶ್ನೆ ಬರುವುದಿಲ್ಲ.

ಮುಖ್ಯವಾಗಿ ಈ ಆರೋಪಕ್ಕೆ ನಾವು ಸರಿಯಾದ ಉತ್ತರವನ್ನು ಕಂಡುಕೊಳ್ಳಲೇಬೇಕಿದೆ. ಈ ಬಲಗೈ ಜನರ ಕುಲಕಸಬು ಕೃಷಿ. ಕೃಷಿಯ ಜೊತೆಗೆ ಕೃಷಿಗೆ ಪೂರಕವಾದ ಕೆಲಸಗಳನ್ನು ಮಾಡುತ್ತಾ ಬಂದಿರುವುದರಿಂದ ಅವರು ಹೆಚ್ಚಾಗಿ ನೀರಾವರಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಅಂದರೆ ಕಾವೇರಿ ಕಣಿವೆಯ ಮೈಸೂರು, ಬೆಳಗಾವಿ, ಕಲ್ಬುರ್ಗಿ, ಧಾರವಾಡ ಮುಂತಾದ ಭಾಗದಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಜೊತೆಗೆ ಮೈಸೂರಿನ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಪಂಚಮ ಬೋರ್ಡಿಂಗ್ ಶಾಲೆಗಳು ಆರಂಭವಾಗಿ ಈ ಜನರಿಗೆ ಶಿಕ್ಷಣ ದೊರೆಯಿತು. ಮೀಸಲಾತಿಯನ್ನೂ ಅವರು ಜಾರಿಗೆ ತಂದಿದ್ದರಿಂದ ಶಿಕ್ಷಣ ಕಲಿತ ಮೊದಲ ಪೀಳಿಗೆ ಉದ್ಯೋಗಾವಕಾಶವನ್ನು ಪಡೆದದ್ದನ್ನು ಇಲ್ಲ ಎನ್ನಲಾಗದು.

ದುರದೃಷ್ಟಕರ ಸಂಗತಿ ಎಂದರೆ ತುಮಕೂರಿನಿಂದಾಚೆಗೆ ಅಂದರೆ ಉತ್ತರ ಕರ್ನಾಟಕದ ಬರಗಾಲ ಪ್ರದೇಶಗಳಲ್ಲಿ ಎಡಗೈ ಜನರು ಹೆಚ್ಚಾಗಿ ಕಂಡು ಬರುತ್ತಾರೆ. ನೈಸರ್ಗಿಕವಾಗಿ ಮೊದಲೇ ಬರಪೀಡಿತ ಪ್ರದೇಶ. ಜೊತೆಗೆ ಹೈದರಾಬಾದ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಇಲ್ಲದೆ ಲಿಂಗಾಯತ ಮಠಗಳು ಮತ್ತು ಲಿಂಗಾಯತರ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನು ನಡೆಸುತ್ತಿದ್ದರಿಂದ ಈ ಎಡಗೈ ಜನರಿಗೆ ನಿರೀಕ್ಷೆಯ ಮಟ್ಟದಲ್ಲಿ ಶಿಕ್ಷಣ ಸಿಗಲಿಲ್ಲ ಎನ್ನುವುದು ಬೆಳಕಿನಷ್ಟು ಸತ್ಯ. ಇದು ಸಹಾ ಅವರು ಶೈಕ್ಷಣಿಕವಾಗಿ ಹಿಂದುಳಿದು ಉದ್ಯೋಗಾವಕಾಶ ಪಡೆಯಲು ಆಗಲಿಲ್ಲ. ಇದು ನೈಸರ್ಗಿಕವಾಗಿ ಆಗಿರುವ ಅನ್ಯಾಯ.

ಇನ್ನು ರಾಜಕೀಯವಾಗಿ ನೋಡಿದರೆ ಮೈಸೂರು ಭಾಗದಲ್ಲಿ ಬಲಗೈ ಜನರಿಗೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವವರು ಎಲ್ಲ ಪಕ್ಷಗಳಿಂದಲೂ ಅವರೇ ಆಗಿರುವುದರಿಂದ ಚುನಾವಣೆಗಳಲ್ಲಿ ಅವರಲ್ಲೇ ಒಬ್ಬರು ಆಯ್ಕೆ ಆಗುವುದು ಖಚಿತ.

ಆದರೆ ಇಂತಹ ಅನುಕೂಲಕರ ಪರಿಸ್ಥಿತಿ ಎಡಗೈನವರಿಗೆ ಇಲ್ಲ. ಉತ್ತರ ಕರ್ನಾಟಕ ಭಾಗದ ಮೀಸಲು ಕ್ಷೇತ್ರಗಳಲ್ಲಿ ಇವರಿಗೆ ಇತ್ತೀಚೆಗೆ ಬೋವಿ ಮತ್ತು ಲಂಬಾಣಿಗಳು ಮುಖ್ಯ ಸ್ಪರ್ಧಿಗಳು. ಇಂತಹ ಸಂದರ್ಭಗಳಲ್ಲಿ ದಲಿತರಲ್ಲದ ಮತದಾರರು ಸಾಮಾನ್ಯವಾಗಿ ಎಡಗೈ ಅಭ್ಯರ್ಥಿಗಿಂತ ಬೋವಿ ಅಥವಾ ಲಂಬಾಣಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ನಮ್ಮ ಜಾತಿ ವ್ಯವಸ್ಥೆಯ ಮನಃಸ್ಥಿತಿ ಕಾರಣ ಎನ್ನುವುದನ್ನು ತಳ್ಳಿಹಾಕಲಾಗದು.

ಇದನ್ನು ಓದಿದ್ದೀರಾ? 2ಬಿ ಮೀಸಲಾತಿ ರದ್ದು | ಕ್ಷುಲ್ಲಕವಾಗಿ ಕಾಣುತ್ತಿರುವುದು ಸರಕಾರದ ತೀರ್ಮಾನ ಮಾತ್ರ!

ಈ ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಾಗ ಸಹಜವಾಗಿ ಎಡಗೈ ಸಮುದಾಯ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲಗೈ ಜನರಿಗಿಂತ ಹಿಂದುಳಿಯಲು ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಮೀಸಲಾತಿ ವರ್ಗೀಕರಣವೊಂದರಿಂದಲೇ ಆಗದು. ಆ ಜನರಲ್ಲಿ ವಿಶೇಷವಾಗಿ ಉನ್ನತ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗದಲ್ಲಿರುವ ಜನರು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ. ಆ ಕೆಲಸ ಜನಾಂಗದ ಒಳಗಿನಿಂದಲೂ ಆಗಬೇಕಿದೆ.

ಪರಿಶಿಷ್ಟ ಜಾತಿ ಇಂತಹ ಸ್ಥಿತಿಯಲ್ಲಿರುವಾಗ ನ್ಯಾ. ಸದಾಶಿವ ಆಯೋಗವು ಈ ಕ್ರೀಮಿ ಲೇಯರ್ ಪದ್ಧತಿಯನ್ನು ಜಾರಿಗೆ ತರಬೇಕೆನ್ನುವ ಶಿಫಾರಸ್ಸು ಅಚ್ಚರಿ ಮೂಡಿಸುತ್ತದೆ. ಒಂದು ವೇಳೆ ಕ್ರೀಮಿ ಲೇಯರ್ ಪದ್ಧತಿಯನ್ನು ಈಗ ಜಾರಿಗೆ ತಂದರೆ, ಮುಂದೆ ಮೀಸಲಾತಿ ಪಡೆಯುವ ಬಡ ಮಕ್ಕಳು ಐಐಟಿ, ಐಐಎಂ, ಐಐಸಿ ಮುಂತಾದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಷ್ಟು ಅಂಕಗಳನ್ನು ಗಳಿಸಿರಲಾರರು. ಅಂತಹ ಕಡೆ ಪ್ರವೇಶ ಪಡೆಯುವ ಸಾಮರ್ಥ್ಯ ಹೊಂದುವವರು ಅನುಕೂಲಸ್ಥರ ಮಕ್ಕಳು ಮಾತ್ರ ಎನ್ನುವುದು ಸತ್ಯ. ಜೊತೆಗೆ ಅಂತಹ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವುದು ಕನಸಿನ ಮಾತಾಗುತ್ತದೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಾದವೆಂದರೆ “ಮೀಸಲಾತಿ ಕೇವಲ ಬಡತನ ನಿರ್ಮೂಲನೆ ಅಲ್ಲ. ಸರ್ಕಾರದ ಆಡಳಿತ ವ್ಯವಸ್ಥೆಯ ಎಲ್ಲ ಸ್ಥರಗಳಲ್ಲು ಪರಿಶಿಷ್ಟ ಜಾತಿಯ ಪ್ರಾತಿನಿಧ್ಯ ಇರಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ದೊರೆತಂತಾಗುವುದು” ಎನ್ನುವುದು.

ಇದನ್ನು ಓದಿದ್ದೀರಾ? ಮೀಸಲಾತಿ | ಬಿಜೆಪಿಯ ತಂತ್ರಗಾರಿಕೆಯ ವೈಫಲ್ಯಕ್ಕೆ ಕಾರಣಗಳೇನು?

ಈ ವಾಸ್ತವದ ಹಿನ್ನೆಲೆಯನ್ನು ಗಮನಿಸಿದರೆ ಇನ್ನೂ ಹಲವು ವರ್ಷಗಳ ಕಾಲ ಕ್ರೀಮಿ ಲೇಯರ್ ಪದ್ಧತಿಯನ್ನು ಈ ವರ್ಗಗಳಿಗೆ ಅನ್ವಯಿಸಲಾಗದು. ಈ ಕ್ರೀಮಿ ಲೇಯರ್ ಪದ್ಧತಿಯನ್ನು ಅನುಸರಿಸಿದರೆ ಈ ವರ್ಗವು ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಯಲ್ಲಿನ ಶಿಕ್ಷಣ ಮತ್ತು ಉದ್ಯೋಗಾವಕಾಶದಿಂದ ವಂಚಿತರಾಗಬೇಕಾಗುತ್ತದೆ. ಇದಕ್ಕಾಗಿ ಈ ವರ್ಗ ಮುಂದೆ ಮತ್ತೊಂದು ಹೋರಾಟ ಮಾಡಬೇಕಾಗುವಂತಹ ಪರಿಸ್ಥಿತಿ ಉದ್ಭವವಾಗುವುದನ್ನು ತಳ್ಳಿಹಾಕಲಾಗದು.

ನ್ಯಾ. ಸದಾಶಿವ ಆಯೋಗದ ಮತ್ತೊಂದು ದೋಷ ಎಂದರೆ ಪುಟ 311ರಲ್ಲಿ “ದೇಶದ ಒಟ್ಟು ಜನಸಂಖ್ಯೆಯ ಹಿತದೃಷ್ಟಿಯಿಂದ ಈ ವರ್ಗದ ಮೀಸಲಾತಿ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಬೇಕೆನ್ನುವ ಪ್ರಶ್ನೆಯನ್ನು ಆಯೋಗವು ಒಪ್ಪುವುದಿಲ್ಲ”.

ರಾಜ್ಯ ಸರ್ಕಾರವು ಈಗಾಗಲೇ ನ್ಯಾ. ನಾಗಮೋಹನ ದಾಸ್ ಸಮಿತಿಯ ಶಿಫಾರಸ್ಸನ್ನು ಒಪ್ಪಿ ಈ ವರ್ಗಕ್ಕೆ ಶೇ.2ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ಕಾರಣ ಈ ಅಂಶಕ್ಕೆ ಈಗ ಯಾವ ಕಿಮ್ಮತ್ತೂ ಇಲ್ಲದಂತಾಗಿದೆ. ಆದರೆ ಈ ವರದಿಯಲ್ಲಿನ ಇಂತಹ ನಕಾರಾತ್ಮಕ ಅಂಶಗಳನ್ನು ನಿರ್ಲಕ್ಷಿಸಲಾಗದು.

ನ್ಯಾ. ಸದಾಶಿವ ಆಯೋಗದ ವರದಿಯ ನಕಾರಾತ್ಮಕ ಅಂಶಗಳು

ನ್ಯಾ. ಸದಾಶಿವ ಆಯೋಗದ ವರದಿಯ ಜಾರಿಯಿಂದಲೇ ನಮ್ಮ ಉದ್ಧಾರ ಎಂದು ನಂಬಿರುವ ಒಳಮೀಸಲಾತಿ ಹೋರಾಟಗಾರರು ವರದಿಯಲ್ಲಿನ ಇಂತಹ ನಕಾರಾತ್ಮಕ ಅಂಶಗಳನ್ನು ಮುಕ್ತ ಮನಸ್ಸಿನಿಂದ ಗಂಭೀರವಾಗಿ ನೋಡಬೇಕು.

ರಾಜ್ಯ ಸರ್ಕಾರ ಈಗ ತಾನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಸೂತ್ರವನ್ನು ಗಮನಿಸೋಣ. ಇಲ್ಲಿ ಮುಖ್ಯ ಪ್ರಶ್ನೆ ಎಂದರೆ ಮೀಸಲಾತಿಯಂತಹ ಗಂಭೀರವಾದ ವಿಷಯವನ್ನು ಸಚಿವ ಸಂಪುಟದ ಒಂದು ಉಪಸಮಿತಿ ಸಿದ್ಧಪಡಿಸಿದನ್ನು ಸಂಪುಟ ಒಪ್ಪಿ ಅದರ ಜಾರಿಗೆ ಕೇಂದ್ರ ಸರ್ಕಾರಕ್ಕೆ ಮಾಡುವ ಶಿಫಾರಸ್ಸು ಸಂವಿಧಾನ ತಿದ್ದುಪಡಿಗೆ ಅರ್ಹವಾಗಿರುತ್ತದೆಯೇ ಎನ್ನುವುದು.
ಈ ಸೂತ್ರವನ್ನು ಸಿದ್ಧಪಡಿಸಲು ಅನುಸರಿಸಿದ ಮಾನದಂಡಗಳೇನು? ಅದಕ್ಕೆ ಯಾವ ಅಂಶಗಳು ಆಧಾರವಾಗಿವೆ? ಇದರ ಅರ್ಹತೆಯನ್ನು ಸಂಬಂಧಿಸಿದವರು ನ್ಯಾಯಾಲಯಗಳಲ್ಲಿ ಪ್ರಶ್ನಿಸಿದರೆ ಅದು ಊರ್ಜಿತವಾಗಲಿದೆಯೇ? ನಿಜ. ಈ ಸೂತ್ರವನ್ನು ಸಿದ್ಧಪಡಿಸುವಾಗ ಸರ್ಕಾರ ಕೂಡ ತನ್ನದೇ ಆದ ಕಾನೂನು ತಜ್ಞರಿಂದ ಸಲಹೆಗಳನ್ನು ಪಡೆದಿರುತ್ತದೆ. ಆದರೆ ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕೆ ಸಂವಿಧಾನದಲ್ಲಿ ಆಗಿರುವ ಅಡಚಣೆಯನ್ನು ಹೇಗೆ ದಾಟಬಹುದು ಎನ್ನುವುದು ಕೇಂದ್ರ ಸರ್ಕಾರ ಮಾಡುವ ತಿದ್ದುಪಡಿಯಿಂದ ಮಾತ್ರ ಸಾಧ್ಯ.

ಇಂತಹದೊಂದು ಕಸರತ್ತು ಮಾಡಲು ಕೇಂದ್ರ ಸರ್ಕಾರ ಬೇರೆ ರಾಜ್ಯಗಳ ಸಲಹೆ ಮತ್ತು ಒಪ್ಪಿಗೆ ಪಡೆಯಬೇಕಾಗುತ್ತದೆ. ಅದಕ್ಕೆ ಬೇಕಾದ ರಾಷ್ಟ್ರೀಯ ಪರಿಶಿಷ್ಟ ಜಾತಿಯ ಆಯೋಗ ಮತ್ತು ಕಾನೂನು ತಜ್ಞರ ಶಿಫಾರಸ್ಸುಗಳನ್ನು ಪಡೆದುಕೊಳ್ಳಬೇಕಿದೆ. ಈ ಕೆಲಸ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶವೂ ಬೇಕಾಗಬಹುದು. ಆದರೆ ಆರ್ಥಿಕವಾಗಿ ಹಿಂದುಳಿವರಿಗೆ ಶೇ. 10ರಷ್ಟು ಮೀಸಲಾತಿ ತರುವಲ್ಲಿ ವಹಿಸಿದ ಆಸಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ತೋರುವರೇ ಎನ್ನುವುದು ಈಗಿರುವ ಪ್ರಶ್ನೆ.

ಶಿವಾಜಿ ಗಣೇಶನ್‌
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಶಿವಾಜಿ ಗಣೇಶನ್‌
ಶಿವಾಜಿ ಗಣೇಶನ್‌
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ)...