“ದಲಿತರಿಗೇಕೆ ಬೇಕು RSS ವಿಷಯ?” ಎಂದು ಪ್ರಶ್ನಿಸಿದ್ದ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. “ನಾನು ಬಾಬಾ ಸಾಹೇಬರ ಸಿದ್ದಾಂತದವನು, ಪ್ರಶ್ನಿಸುವ ಧೈರ್ಯ ಮತ್ತು ವೈಚಾರಿಕತೆ ಅವರಿಂದಲೇ ಬಂದಿರುವುದು, ಬಾಬಾ ಸಾಹೇಬರನ್ನು ನಂಬಿದವರಿಗೆ ಅಂಜಿಕೆ ಎಂಬುದೇ ತಿಳಿದಿರುವುದಿಲ್ಲ” ಎಂದಿದ್ದಾರೆ.
X ನಲ್ಲಿ ಟ್ವೀಟ್ ಮಾಡಿರುವ ಅವರು, “ರಮೇಶ್ ಜಿಗಜಿಣಗಿ ಅವರು ಕೇಳಿರುವ ಮಾತು ವಿವಿಧ ಆಯಾಮಗಳಿಂದ ವಿಮರ್ಶಿಸಬೇಕಾಗಿರುವ ಪ್ರಶ್ನೆ. ದಲಿತ ಸಮುದಾಯದವರೇ ಆಗಿರುವ ರಮೇಶ್ ಜಿಗಜಿಣಗಿಯವರಿಗೆ ಇದು RSS ಗರ್ಭಗುಡಿಯೊಳಗೆ ಪ್ರವೇಶ ಸಿಗದಿರುವ ಹತಾಶೆಯ ಮಾತೇ? ಶ್ರೇಣೀಕೃತ ವ್ಯವಸ್ಥೆಯ ಮೂಲಭೂತವಾದವನ್ನು ನಂಬಿರುವ RSS ಸಹವಾಸಕ್ಕೆ ದಲಿತರು ಹೋಗಬೇಡಿ ಎಂಬ ಎಚ್ಚರಿಕೆಯ ಮಾತುಗಳೇ? ಸಮಾಜದಲ್ಲಿನ ಮೇಲರಿಮೆಯ ಮನಸ್ಥಿತಿಯ ಜನರ ಹಿತಾಶಕ್ತಿ ಕಾಯಲು ರೂಪುಗೊಂಡಿರುವ RSSನ್ನು ಪ್ರಶ್ನೆ ಮಾಡಲು ದಲಿತನಾಗಿ ನಿನಗೆ ಅರ್ಹತೆ ಇಲ್ಲ ಎಂದು ನನಗೆ ಹೇಳಿರುವ ಕುಹಕದ ಮಾತುಗಳೇ? RSSನಂತಹ ವ್ಯವಸ್ಥೆಯನ್ನು ಸಂವಿಧಾನದ ಹಾದಿಗೆ ತರಲು ದಲಿತರಿಗೆ ಸಾಧ್ಯವಿಲ್ಲ ಎಂಬ ಹತಾಶೆಯ ಮಾತುಗಳೇ?ʼʼ ಎಂದು ಪ್ರಶ್ನಿಸಿದ್ದಾರೆ.
“RSS ತಂಟೆಗೆ ಹೋದವರು ಯಾರೂ ಉಳಿದಿಲ್ಲ” ಎಂಬ ಎಚ್ಚರಿಕೆಯನ್ನೂ ಕೊಟ್ಟಿರುವ ರಮೇಶ್ ಜಿಗಜಣಗಿಯವರು RSSನ ಭಯಕ್ಕೊಳಪಟ್ಟು ಹೇಳಿರುವುದೋ ಅಥವಾ ನನ್ನನ್ನು ಭಯಪಡಿಸಲು ಹೇಳಿರುವುದೋ? ಈ ಬೆದರಿಕೆಯ ಹಿಂದಿರುವ ಕಾರಣಗಳೇನು? “ಯಾರೂ ಉಳಿದಿಲ್ಲ” ಎಂದರೆ ಏನರ್ಥ RSS ಭಯೋತ್ಪಾದಕ ಸಂಘಟನೆಯೇ? ಪ್ರಶ್ನಿಸುವವರನ್ನು ಮುಗಿಸುತ್ತದೆಯೇ? ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: RSS ಬೃಹತ್ ಗೌಪ್ಯ ಜಾಲವು ಅಧಿಕಾರವನ್ನು ಹೇಗೆ ನಿರ್ಮಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ?
“ರಮೇಶ್ ಜಿಗಜಣಗಿಯವರೇ, ನಾನು ಬಾಬಾ ಸಾಹೇಬರ ಸಿದ್ದಾಂತದವನು, ನಾನು ಸಂವಿಧಾನದ ರಕ್ಷಣೆಯ ನೆರಳಲ್ಲಿರುವವನು, ಸಂವಿಧಾನದಡಿಯಲ್ಲಿ ಮಾನ್ಯತೆಯೇ ಇಲ್ಲದವರಿಗೆ ಭಯಪಡುವ ಜಾಯಮಾನ ನನ್ನದಲ್ಲ. ನಾನು ಅಂಜುವುದು ನೈತಿಕತೆಗೆ ಹೊರತು, ಬೆದರಿಕೆಗಳಿಗಲ್ಲ, ಏಕೆಂದರೆ ನಮ್ಮದು ಅಂಬೇಡ್ಕರ್‌ರವರ ರಕ್ತ” ಎಂದು ತಿವಿದಿದ್ದಾರೆ.




