ವೀರಶೈವ ಲಿಂಗಾಯತ ಜಂಗಮ ಸಮುದಾಯವು ‘ಬೇಡ ಜಂಗಮ’ ಅಥವಾ ‘ಬುಡ್ಗ ಜಂಗಮ’ (ಪರಿಶಿಷ್ಟ ಜಾತಿ – SC) ವ್ಯಾಪ್ತಿಗೆ ಸೇರುವುದಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮರು-ದೃಢೀಕರಿಸಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಮರು-ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ನಕಲಿ ಜಾತಿ ಪ್ರಮಾಣಪತ್ರ ಪಡೆದ ವ್ಯಕ್ತಿಗಳಿಗೆ ತೀವ್ರ ಹಿನ್ನಡೆಯಾಗಿದೆ.
ಮೂಲತಃ ಬೀದರ್ ನಿವಾಸಿಯಾದ ಮತ್ತು ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿದ ರವೀಂದ್ರಸ್ವಾಮಿ ಎಂಬುವವರು ‘ಬೇಡ ಜಂಗಮ’ ಹೆಸರಿನಲ್ಲಿ ಎಸ್‌ಸಿ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದರು. ಇದನ್ನು ಪ್ರಶ್ನಿಸಿ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮತ್ತು ಇತರ ಸಂಘಟನೆಗಳು ನಿರಂತರ ಹೋರಾಟ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದ ಕಲಬುರಗಿ ಹೈಕೋರ್ಟ್ ಪೀಠವು, ರವೀಂದ್ರಸ್ವಾಮಿ ಅವರ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರವೀಂದ್ರಸ್ವಾಮಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನವೆಂಬರ್ 11, 2025 ರಂದು ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೂ, ತೀರ್ಪಿನ ಪುನರ್-ಪರಿಶೀಲನೆಗಾಗಿ ಅವರು ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ನ್ಯಾಯಮೂರ್ತಿಗಳಾದ ರಾಜೇಂದ್ರ ಬಿಂದಲ್ ಮತ್ತು ಮನಮೋಹನ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಈ ಅರ್ಜಿಯನ್ನು ತಿರಸ್ಕರಿಸಿದೆ. ಇದರೊಂದಿಗೆ, ಈ ಕಾನೂನು ವಿವಾದಕ್ಕೆ ಅಂತಿಮ ತೆರೆ ಎಳೆದಂತಾಗಿದೆ.
ಇದನ್ನು ಓದಿದ್ದೀರಾ? IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ
ವೀರಶೈವ ಜಂಗಮರಿಗೆ ಎಸ್‌ಸಿ ಪ್ರಮಾಣಪತ್ರವನ್ನು ನಿರಾಕರಿಸಿದ ನ್ಯಾಯಾಲಯದ ತೀರ್ಮಾನವನ್ನು ರಾಜ್ಯ ದಲಿತ ಸಂಘರ್ಷ ಸಮಿತಿಯ (ಡಿಎಸ್‌ಎಸ್) ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ ಬೌದ್ಧೆ ಅವರು ಸ್ವಾಗತಿಸಿದ್ದಾರೆ. “ಸುಳ್ಳು ಜಾತಿ ಪ್ರಮಾಣಪತ್ರ ಪಡೆದು, ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದ್ದ ಆರೋಪಿಗಳಿಗೆ ಮತ್ತು ಅಂತಹ ಪತ್ರ ನೀಡಿದ ಅಧಿಕಾರಿಗಳಿಗೆ ಕಠಿಣವಾದ ಶಿಕ್ಷೆ ಆಗಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸುಳ್ಳು ಜಾತಿ ವಿರೋಧಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಮೂಲಭಾರತಿ ಅವರು ಸಹಿತ ಈ ತೀರ್ಪನ್ನು ಸ್ವಾಗತಿಸಿದ್ದು, “ಈ ಆದೇಶವು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ,” ಎಂದು ಹೇಳಿದ್ದಾರೆ. ಡಿಎಸ್‌ಎಸ್ ಮತ್ತು ಆರ್‌ಪಿಐ(ಎ) ಮುಖಂಡರಾದ ಮಹೇಶ್ ಗೋರನಾಳಕರ್, ಅರುಣ್ ಪಟೇಲ್, ಬಾಬು ಟೈಗರ್, ರಾಜಕುಮಾರ್ ವಾಘಮಾರೆ, ಅಶೋಕ್ ಗಾಯಕ್ವಾಡ್ ಸೇರಿ ಹಲವರು ನ್ಯಾಯಾಲಯದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.




