ಮಳೆಯ ಕೊರತೆ ಕೃಷಿ ಇಲಾಖೆಯ ಸಮಸ್ಯೆಯಾಗಿ ಆರಂಭವಾಗಿ, ಅಂತಿಮವಾಗಿ ಆಹಾರ, ಉದ್ಯೋಗ, ಹಣದುಬ್ಬರ, ಗ್ರಾಮೀಣ ಆರ್ಥಿಕತೆ, ನೀರು ಮತ್ತು ವಿದ್ಯುತ್‌ವರೆಗೂ ವ್ಯಾಪಿಸಬಹುದು. ಈ ಹಂತದಲ್ಲಿ ಸರ್ಕಾರ ಕೇವಲ ಮಳೆಯನ್ನು ನಿರೀಕ್ಷಿಸಿ ಕಾಯದೇ ಜಿಲ್ಲೆ ಮತ್ತು ತಾಲೂಕುವಾರು ಮಳೆ ಕೊರತೆ, ಬಿತ್ತನೆ ಪ್ರದೇಶ, ಬೆಳೆ ಸ್ಥಿತಿ ಮತ್ತು ಜಲಾಶಯ-ಕೆರೆಗಳ ಪರಿಸ್ಥಿತಿಯನ್ನು ನಿರಂತರವಾಗಿ ಮಾಪನ ಮಾಡಬೇಕಾಗಿದೆ.
ರಾಜ್ಯದ ಕೃಷಿ ವಲಯಕ್ಕೆ 2026ರ ಮುಂಗಾರು ಬರಗಾಲದ ಗಂಭೀರ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಜೂನ್ ಮತ್ತು ಜುಲೈ ತಿಂಗಳುಗಳು ಮುಗಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದಿರುವುದು ಬಿತ್ತನೆಯಿಂದ ಹಿಡಿದು ಬೆಳೆ ಇಳುವರಿಯವರೆಗೆ ಕೃಷಿಯ ಪ್ರತಿಯೊಂದು ಹಂತದ ಮೇಲೂ ಪರಿಣಾಮ ಬೀರಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ರಾಜ್ಯದ ಸುಮಾರು 150 ಲಕ್ಷ ಟನ್ ವಾರ್ಷಿಕ ಆಹಾರಧಾನ್ಯ ಉತ್ಪಾದನೆಯ ಗುರಿಯಲ್ಲಿ ಈಗಾಗಲೇ ಕನಿಷ್ಠ 50 ಲಕ್ಷ ಟನ್ ಉತ್ಪಾದನೆ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಗುರಿಯ ಸುಮಾರು ಮೂರನೇ ಒಂದು ಭಾಗದಷ್ಟು ಉತ್ಪಾದನೆ ಕುಸಿಯುವ ಭೀತಿ ಎದುರಾಗಿದೆ.
ಇದಕ್ಕಿಂತ ಆತಂಕಕಾರಿ ಸಂಗತಿ ಎಂದರೆ ಸಂಕಷ್ಟ ಇಲ್ಲಿಗೇ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆಗಸ್ಟ್‌ನಲ್ಲಿಯೂ ಮಳೆ ಕೊರತೆ ಮುಂದುವರಿದರೆ ಭತ್ತ, ಮೆಕ್ಕೆಜೋಳ, ಜೋಳ, ರಾಗಿ ಸೇರಿ ಪ್ರಮುಖ ಬೆಳೆಗಳ ಉತ್ಪಾದನೆ ಕುಂಠಿತವಾಗಬಹುದು. ಇದರಿಂದಾಗಿ ಆಹಾರ ಧಾನ್ಯ ಉತ್ಪಾದನೆಯ ನಷ್ಟ 75 ಲಕ್ಷ ಟನ್‌ವರೆಗೆ ಏರಬಹುದು ಎಂದು ರಾಜ್ಯ ಸರ್ಕಾರದ ಮಾಜಿ ಕೃಷಿ ಸಲಹೆಗಾರ ಹಾಗೂ Institute of Agricultural Technologists ಅಧ್ಯಕ್ಷ ಎ.ಬಿ. ಪಾಟೀಲ್ ಎಚ್ಚರಿಸಿದ್ದಾರೆ. ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪರಿಸ್ಥಿತಿ ಇನ್ನೂ ಗಂಭೀರವಾಗಬಹುದು ಎಂದಿದ್ದು, ಆಗಸ್ಟ್ ಅಂತ್ಯದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.
ಮುಂದಿನ ಎರಡು ವಾರಗಳು ಮತ್ತಷ್ಟು ನಿರ್ಣಾಯಕ
ಪರಿಸ್ಥಿತಿಯನ್ನು ಇನ್ನಷ್ಟು ಆತಂಕಕಾರಿಯಾಗಿಸಿರುವುದು ಮುಂದಿನ ಹವಾಮಾನ ಮುನ್ಸೂಚನೆ. ಆಗಸ್ಟ್ 11ರಂದು ಪ್ರಕಟವಾದ ಮಾಹಿತಿಯ ಪ್ರಕಾರ ಮುಂದಿನ ಸುಮಾರು ಎರಡು ವಾರಗಳಲ್ಲಿ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ದೇಶದ ಒಟ್ಟಾರೆ ಮುಂಗಾರು ಮಳೆಯೂ ಆಗಸ್ಟ್ 11ರವರೆಗೆ ಸರಾಸರಿಗಿಂತ ಸುಮಾರು ಶೇ.12 ಕಡಿಮೆಯಾಗಿತ್ತು. ಬಲಗೊಳ್ಳುತ್ತಿರುವ ಎಲ್ ನಿನೊ ಕಾರಣದಿಂದ ಆಗಸ್ಟ್ ಅಂತ್ಯದ ವೇಳೆಗೆ ಕೊರತೆ ಇನ್ನಷ್ಟು ಹೆಚ್ಚುವ ಸಾಧ್ಯತೆಯನ್ನೂ ಹವಾಮಾನ ಇಲಾಖೆ ಸೂಚಿಸಿದೆ.
ಇದು ಕರ್ನಾಟಕಕ್ಕೆ ವಿಶೇಷವಾಗಿ ಮುಖ್ಯ. ಏಕೆಂದರೆ IMDಯ 2026ರ ಮುಂಗಾರು ಋತುವಿನ ಮುನ್ಸೂಚನೆಯಲ್ಲೇ ಕರ್ನಾಟಕದಲ್ಲಿ ಒಟ್ಟಾರೆ ಮಳೆ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿತ್ತು. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ below-normal(ಸಾಮಾನ್ಯಕ್ಕಿಂತಲೂ ಕಡಿಮೆ) ಮಳೆಯ ಸಾಧ್ಯತೆ ಹಾಗೂ ಉತ್ತರ ಒಳನಾಡಿನಲ್ಲಿ below-normal to near-normal ಮಳೆಯ ಸಾಧ್ಯತೆಯನ್ನು ಸೂಚಿಸಲಾಗಿತ್ತು. ಹೊಸದಾಗಿ ಬಿತ್ತನೆಯಾಗಿರುವ ಬೆಳೆಗಳ ಬೇರುಗಳು ಇನ್ನೂ ಆಳಕ್ಕೆ ಹೋಗಿರುವುದಿಲ್ಲ. ಇಂಥ ಸಂದರ್ಭದಲ್ಲಿ ದೀರ್ಘಕಾಲದ ಒಣ ಅವಧಿ ಬಂದರೆ ಮಣ್ಣಿನ ಮೇಲ್ಮೈ ತೇವಾಂಶ ಬೇಗ ಒಣಗುವುದರಿಂದ ಬೆಳೆಗಳೂ ಒಣಗುವ ಅಪಾಯ ಹೆಚ್ಚು.
ಮಳೆಯಿಲ್ಲದೆ ನೀರಿನ ಅಭಾವ ಉಂಟಾಗಿ, ಅದು ಕೃಷಿ ನಾಶ, ಆಹಾರದ ಕೊರತೆ, ಆರ್ಥಿಕ ಕುಸಿತ, ಉದ್ಯೋಗ ನಷ್ಟ ಮತ್ತು ಜನಸಾಮಾನ್ಯರ ವಲಸೆಯಂತಹ ಸರಣಿ ಗಂಭೀರ ಸಮಸ್ಯೆಗಳನ್ನು ಒಂದರ ನಂತರ ಮತ್ತೊಂದು ಸರಪಳಿ ಕೊಂಡಿ ದುರ್ಬಲಗೊಂಡು ಬರಗಾಲದ ಡೊಮಿನೊ ಎಫೆಕ್ಟ್(ವಿನಾಶಕಾರಿ ಪರಿಣಾಮ) ಉಂಟಾಗುವ ಸಾಧ್ಯತೆ ಅಧಿಕವಾಗಿದೆ. ಅಲ್ಲದೆ ಜಲಾಶಯಗಳಿಗೆ ಒಳಹರಿವು ಕುಸಿದರೆ ಕೃಷಿಯ ಜತೆಗೆ ಕುಡಿಯುವ ನೀರು, ವಿದ್ಯುತ್, ಪಶುಸಂಗೋಪನೆಗೂ ಸಂಕಷ್ಟ ಎದುರಾಗುತ್ತದೆ.
ಮೊದಲ ಹೊಡೆತ ಬಿತ್ತನೆಗೆ
ಕರ್ನಾಟಕದ ಕೃಷಿಯಲ್ಲಿ ಬಹುದೊಡ್ಡ ಪಾಲು ಮಳೆಯನ್ನೇ ಅವಲಂಬಿಸಿದೆ. ಹೀಗಾಗಿ ಮುಂಗಾರಿನ ಆರಂಭದಲ್ಲಿನ ಕೆಲವು ವಾರಗಳ ಮಳೆ ಕೊರತೆಯೂ ಇಡೀ ಬೆಳೆಯ ಚಕ್ರವನ್ನೇ ಬದಲಿಸಬಲ್ಲದು. ಅಂತೆಯೇ ಜೂನ್ ಮಧ್ಯಭಾಗದಲ್ಲಿಯೇ ಬರಗಾಲ ಆವರಿಸುವ ಸೂಚನೆ ಸಿಕ್ಕಿತ್ತು.
ರಾಜ್ಯದಲ್ಲಿ ಮುಂಗಾರು ಬಿತ್ತನೆ ಗುರಿಯ ಕೇವಲ ಶೇ.20ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ನೀರಾವರಿ ಪ್ರದೇಶದಲ್ಲಿ 24.43 ಲಕ್ಷ ಹೆಕ್ಟೇರ್ ಗುರಿಗೆ 5.86 ಲಕ್ಷ ಹೆಕ್ಟೇರ್ ಮತ್ತು ಮಳೆಯಾಶ್ರಿತ ಪ್ರದೇಶದಲ್ಲಿ 59.68 ಲಕ್ಷ ಹೆಕ್ಟೇರ್ ಗುರಿಗೆ ಕೇವಲ 11.23 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿತ್ತು. ಬಿತ್ತನೆ ವಿಳಂಬವಾದರೆ ದೀರ್ಘಾವಧಿಯ ಬೆಳೆಗಳನ್ನು ಬಿಟ್ಟು ಅಲ್ಪಾವಧಿಯ ತಳಿಗಳಿಗೆ ರೈತರು ಬದಲಾಗಬೇಕಾಗುತ್ತದೆ; ಇದರಿಂದ ಅಂತಿಮ ಇಳುವರಿಯೂ ಕಡಿಮೆಯಾಗಬಹುದು ಎಂದು ತಜ್ಞರು ಆಗಲೇ ಎಚ್ಚರಿಸಿದ್ದರು.
ಮಳೆ ತಡವಾದರೆ ರೈತನಿಗೆ ಎರಡು ರೀತಿಯ ನಷ್ಟ. ಮೊದಲನೆಯದು ಬಿತ್ತನೆಯೇ ಸಾಧ್ಯವಾಗದೆ ಹೊಲ ಖಾಲಿ ಉಳಿಯುವುದು. ಎರಡನೆಯದು ಮಳೆ ಬರುತ್ತದೆಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ನಂತರ ಮೊಳಕೆ ಒಣಗಿದರೆ ಮರುಬಿತ್ತನೆ ಮಾಡಬೇಕಾಗುತ್ತದೆ. ಆಗ ಬೀಜ, ಗೊಬ್ಬರ, ಕಾರ್ಮಿಕ ವೆಚ್ಚ ಎಲ್ಲದಕ್ಕೂ ಎರಡನೇ ಬಾರಿಯೂ ಬಂಡವಾಳ ಹಾಕಬೇಕಾಗುತ್ತದೆ. ಅಲ್ಲದೆ ಮಳೆ ಕೈಕೊಟ್ಟರೆ ಈ ಆರಂಭಿಕ ಬಂಡವಾಳವೇ ರೈತನ ಮೇಲಿನ ಸಾಲವಾಗಿ ಉಳಿಯುತ್ತದೆ. ಉದಾಹರಣೆಗೆ, ಒಂದು ಎಕರೆ ಬಿತ್ತನೆಗೆ ಕನಿಷ್ಠ ₹20,000 ಖರ್ಚಾಗುತ್ತದೆ. ಬೆಳೆ ಬಿತ್ತಿದ ಬಳಿಕ ಮಳೆ ಕೈಕೊಟ್ಟರೆ ಲಾಭವಿರಲಿ ಹಾಕಿದ ಬಂಡವಾಳವೂ ಇಲ್ಲದಂತಾಗುತ್ತದೆ. ರೈತನ ಬಳಿ ಮರುಪಾವತಿಗೆ ಆದಾಯದ ಮೂಲವಿಲ್ಲದೆ ಸಾಲಗಾರನಾಗುವ ಪರಿಸ್ಥಿತಿ ಎದುರಾಗುತ್ತದೆ.
ಮಳೆ ಕೊರತೆ ಯಾವ ಬೆಳೆಗಳಿಗೆ ಹೆಚ್ಚು ಅಪಾಯ?
ಈ ಬಾರಿ ಮೆಕ್ಕೆಜೋಳ, ಹತ್ತಿ, ಜೋಳ ಮತ್ತು ರಾಗಿ ಪ್ರಮುಖವಾಗಿ ಪರಿಣಾಮಕ್ಕೆ ಒಳಗಾಗುವ ಬೆಳೆಗಳೆಂದು ಕೃಷಿ ತಜ್ಞರು ಗುರುತಿಸಿದ್ದಾರೆ. ಆದರೆ ಭತ್ತದ ಬೆಳೆಗೆ ಅತ್ಯಂತ ಗಂಭೀರ ಸ್ಥಿತಿ ಎದುರಾಗಬಹುದು.
ಅತಿಹೆಚ್ಚು ನೀರಿನ ಅವಶ್ಯಕತೆಯಿರುವ ಬೆಳೆ ಭತ್ತ. ಮೂರು ತಿಂಗಳ ಬೆಳೆ ಅವಧಿಯಲ್ಲಿ ಭತ್ತಕ್ಕೆ ಸುಮಾರು 1,200ರಿಂದ 1,500 ಮಿ.ಮೀ. ನೀರು ಅಗತ್ಯವಿದ್ದರೆ, ರಾಗಿಗೆ ಸುಮಾರು 300 ಮಿ.ಮೀ. ನೀರು ಸಾಕಾಗುತ್ತದೆ. ಸಾಮಾನ್ಯವಾಗಿ ಜೂನ್-ಜುಲೈ ವೇಳೆಗೆ ಬಹುತೇಕ ಪ್ರದೇಶಗಳಲ್ಲಿ ಭತ್ತದ ನಾಟಿ ಪೂರ್ಣಗೊಂಡಿರಬೇಕಿತ್ತು. ಈ ವರ್ಷ ಹಲವು ಪ್ರದೇಶಗಳಲ್ಲಿ ನಾಟಿಯೇ ಆಗಿಲ್ಲ.
ದಕ್ಷಿಣ ಕನ್ನಡದಲ್ಲೂ ಭತ್ತದ ಗದ್ದೆಗಳಿಗೆ ನಿರಂತರ ತೇವಾಂಶ ಸಿಗದೆ ನಾಟಿ ವಿಳಂಬವಾಗಿದೆ. ಕೆಲವು ರೈತರಿಗೆ ಭತ್ತದ ಎರಡನೇ ಬೆಳೆ ಕೈತಪ್ಪುವ ಸಾಧ್ಯತೆಯೂ ಎದುರಾಗಿದೆ. ಹೀಗಾಗಿ ಎಳ್ಳು, ಅಲಸಂದೆ, ಉದ್ದು ಮೊದಲಾದ ಕಡಿಮೆ ನೀರು ಬೇಕಾಗುವ ಬೆಳೆಗಳಿಗೆ ಬದಲಾಗುವಂತೆ ಕೃಷಿ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.
ಕಲಬುರಗಿಯಲ್ಲಿ ಹೆಸರು ಮತ್ತು ಉದ್ದು ಬೆಳೆಗಳ ಮೇಲೂ ಪರಿಣಾಮ ಬೀರಿದೆ. ಅಲ್ಲಿ ಹೆಸರು ಬಿತ್ತನೆ ಗುರಿ 54,000 ಹೆಕ್ಟೇರ್ ಇದ್ದರೆ 34,753 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಉದ್ದು 25,000 ಹೆಕ್ಟೇರ್ ಗುರಿಗೆ 12,631 ಹೆಕ್ಟೇರ್‌ಗೆ ಸೀಮಿತವಾಗಿತ್ತು. ಸೋಯಾಬೀನ್ ಬಿತ್ತನೆಯೂ ಗುರಿಗಿಂತ ಕಡಿಮೆಯಾಗಿತ್ತು. ಮತ್ತೆ ಬಿತ್ತನೆಗೆ ವಿಳಂಬವಾದ್ದರಿಂದ ಇಳುವರಿ ಕುಂಠಿತ, ಕೀಟದ ಹಾವಳಿ, ನೀರು ಕೊರತೆಯಂತಹ ಸಮಸ್ಯಗಳು ಕಾಡಬಹುದೆಂದು ರೈತರು ಹಿಂದೆ ಸರಿದಿದ್ದಾರೆ.
50 ಲಕ್ಷ ಟನ್ ಬೆಳೆ ಉತ್ಪಾದನೆ ನಷ್ಟ: ಕೇವಲ ರೈತನ ನಷ್ಟವಲ್ಲ
ಆಹಾರಧಾನ್ಯ ಉತ್ಪಾದನೆ ಕುಸಿತವನ್ನು ಕೇವಲ ಕೃಷಿ ಇಲಾಖೆಯ ಅಂಕಿಅಂಶವೆಂದು ನೋಡಲಾಗದು. ಅದರ ಪರಿಣಾಮ ರೈತನ ಹೊಲದಿಂದ ಗ್ರಾಹಕನ ಅಡುಗೆಮನೆಯವರೆಗೆ ಸಾಗುತ್ತದೆ. ಉತ್ಪಾದನೆ ಕಡಿಮೆಯಾದರೆ ಮೊದಲಿಗೆ ಮಾರುಕಟ್ಟೆಗೆ ಬರುವ ಆಹಾರಧಾನ್ಯದ ಪ್ರಮಾಣ ಕುಸಿಯುತ್ತದೆ. ರಾಗಿ, ಜೋಳ, ಅಕ್ಕಿ, ಬೇಳೆಕಾಳುಗಳು ಮತ್ತು ಮೆಕ್ಕೆಜೋಳದ ಪೂರೈಕೆಯಲ್ಲಿ ಕೊರತೆ ಉಂಟಾದರೆ ಬೆಲೆ ಏರಿಕೆಯ ಒತ್ತಡ ಉಂಟಾಗಬಹುದು. ಪೂರೈಕೆಯ ಕೊರತೆಯನ್ನು ಹೊರರಾಜ್ಯಗಳಿಂದ ಸರಕು ತರಿಸುವ ಮೂಲಕ ಸರಿಪಡಿಸಬೇಕಾದರೆ ಸಾಗಣೆ ವೆಚ್ಚವೂ ಬೆಲೆಯಲ್ಲಿ ಸೇರುತ್ತದೆ. ವಿಶೇಷವಾಗಿ ಬೇಳೆಕಾಳುಗಳ ಉತ್ಪಾದನೆ ಕುಸಿದರೆ ಆಹಾರ ಹಣದುಬ್ಬರದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
ತರಕಾರಿ ಮತ್ತು ಹಣ್ಣುಗಳ ಬೆಲೆಗೂ ಬಿಸಿ
ಬರದ ಪರಿಣಾಮ ಆಹಾರಧಾನ್ಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಕೆರೆ, ಬಾವಿ, ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾದರೆ ತರಕಾರಿ ಮತ್ತು ತೋಟಗಾರಿಕಾ ಬೆಳೆಗಳಿಗೂ ನೀರಿನ ಕೊರತೆ ಎದುರಾಗುತ್ತದೆ. ಮೊದಲು ರೈತರು ಹೆಚ್ಚು ನೀರು ಬೇಕಾಗುವ ಬೆಳೆಗಳ ವಿಸ್ತೀರ್ಣವನ್ನು ಕಡಿಮೆ ಮಾಡುತ್ತಾರೆ. ನಂತರ ಉತ್ಪಾದನೆ ಇಳಿಯುತ್ತದೆ. ಸ್ಥಳೀಯ ಮಾರುಕಟ್ಟೆಗೆ ಸರಕು ಕಡಿಮೆಯಾಗುತ್ತಿದ್ದಂತೆ ಟೊಮ್ಯಾಟೊ, ಈರುಳ್ಳಿ, ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಏರಿಳಿತ ಹೆಚ್ಚಬಹುದು.
ತೋಟಗಾರಿಕಾ ಬೆಳೆಗಳಲ್ಲಿ ಮಳೆ ಕೊರತೆಯ ಪರಿಣಾಮ ತಕ್ಷಣವೇ ಸಂಪೂರ್ಣವಾಗಿ ಕಾಣಿಸದಿದ್ದರೂ ಹೂ ಬಿಡುವಿಕೆ, ಕಾಯಿ ಕಟ್ಟುವಿಕೆ ಹಾಗೂ ಮುಂದಿನ ಹಂಗಾಮಿನ ಇಳುವರಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಾಲಿನ ಉತ್ಪಾದನೆಯ ಮೇಲೂ ಪರಿಣಾಮ
ಪಶುಸಂಗೋಪನೆಯ ಮೇಲೆ ಬರದ ಇನ್ನೊಂದು ದೊಡ್ಡ ಪರಿಣಾಮ ಬೀರುತ್ತದೆ. ಮಳೆಯಿಲ್ಲದೆ ಹುಲ್ಲುಗಾವಲು ಒಣಗುತ್ತದೆ. ಜೋಳ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಉತ್ಪಾದನೆ ಕಡಿಮೆಯಾದರೆ ಕೃಷಿ ತ್ಯಾಜ್ಯಗಳಿಂದ ಸಿಗುವ ಮೇವು ಸಹ ಕಡಿಮೆಯಾಗುತ್ತದೆ. ಹಸಿರು ಮೇವಿನ ಕೊರತೆಯಿಂದ ರೈತರು ಒಣಮೇವು ಮತ್ತು ಪಶು ಆಹಾರವನ್ನು ಖರೀದಿಸಬೇಕಾಗುತ್ತದೆ. ಇದರಿಂದ ಹೈನುಗಾರಿಕೆಯ ಉತ್ಪಾದನಾ ವೆಚ್ಚ ಹೆಚ್ಚುತ್ತದೆ. ಅಲ್ಲದೆ ಹಾಲಿಂಡುವ ರಾಸುಗಳಿಗೆ ಒಣಮೇವು ನೀಡಿದರೆ ಹಾಲಿನ ಪ್ರಮಾಣವೂ ಕುಂಠಿತವಾಗುತ್ತದೆ.
ನೀರಿನ ಕೊರತೆ ಮತ್ತು ಪೌಷ್ಠಿಕ ಆಹಾರದ ಕೊರತೆ ಹಾಲಿನ ಉತ್ಪಾದನೆಗೂ ಹೊಡೆತ ನೀಡಬಹುದು. ಕೃಷಿ ಬೆಳೆ ವಿಫಲವಾದ ಕುಟುಂಬಗಳಿಗೆ ಹೈನುಗಾರಿಕೆ ಪರ್ಯಾಯ ಆದಾಯದ ಮೂಲವಾಗಿರುತ್ತದೆ. ಅದಕ್ಕೂ ಬರದ ಹೊಡೆತ ಬಿದ್ದರೆ ಗ್ರಾಮೀಣ ಕುಟುಂಬಗಳ ಆರ್ಥಿಕ ಸುರಕ್ಷತೆಯ ಸರಪಳಿಯ ಕೊಂಡಿಗಳೇ ದುರ್ಬಲವಾಗುತ್ತವೆ.
ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲ
ಬೆಳೆ ಕಡಿಮೆಯಾಗುವುದು ರೈತನ ಆದಾಯವನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಬಿತ್ತನೆ, ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಕೊಯ್ಲು ಮುಂತಾದ ಕೆಲಸಗಳ ಮೇಲೆ ಅವಲಂಬನೆಯಾಗಿರುವ ಲಕ್ಷಾಂತರ ಮಂದಿ ಕೃಷಿ ಕಾರ್ಮಿಕರ ಉದ್ಯೋಗ ದಿನಗಳೂ ಕಡಿಮೆಯಾಗುತ್ತವೆ. ಇದರಿಂದಾಗಿ ಖರೀದಿ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರ-ವ್ಯವಹಾರಗಳ ಮೇಲೆಯೂ ಕಾರ್ಗತ್ತಲು ಕವಿಯುತ್ತದೆ.
ಬೆಳಗಾವಿಯಲ್ಲಿ ಈಗಾಗಲೇ ಕೃಷಿ ಕೆಲಸಗಳು ಕುಸಿದಿರುವುದರಿಂದ ಕೆಲವು ಗ್ರಾಮೀಣ ಕುಟುಂಬಗಳು ಉದ್ಯೋಗಕ್ಕಾಗಿ ಹೊರರಾಜ್ಯಗಳಿಗೆ ವಲಸೆ ಹೋಗುತ್ತಿರುವುದು ಗಮನಾರ್ಹ. ಧಾರವಾಡದಲ್ಲಿಯೂ ರೈತ ಕುಟುಂಬಗಳ ಸದಸ್ಯರು ನಗರಗಳಲ್ಲಿ ಕೂಲಿ ಕೆಲಸಕ್ಕೆ ತೆರಳುವ ಪರಿಸ್ಥಿತಿ ಕುರಿತು ಹೇಳಿಕೊಂಡಿದ್ದಾರೆ. ಹೀಗಾಗಿ ಬರ ತೀವ್ರಗೊಂಡರೆ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು ಸೇರಿದಂತೆ ನಗರಗಳತ್ತ ಋತುಮಾನಿಕ ಗ್ರಾಮೀಣ ವಲಸೆ ಹೆಚ್ಚುವ ಸಾಧ್ಯತೆ ಇದೆ.
ಸಾಲದ ಸುಳಿಯಲ್ಲಿ ರೈತ
ರೈತರು ಈಗಾಗಲೇ ಬೀಜ ಖರೀದಿಸಿದ್ದಾನೆ. ಗೊಬ್ಬರ ಹಾಕಿದ್ದಾನೆ. ಟ್ರ್ಯಾಕ್ಟರ್‌ಗೆ ಹಣ ಕೊಟ್ಟಿದ್ದಾನೆ. ಕಾರ್ಮಿಕರ ಕೂಲಿ ಪಾವತಿಸಿದ್ದಾನೆ. ಕೆಲವರು ಮರುಬಿತ್ತನೆಯನ್ನೂ ಮಾಡಿದ್ದಾರೆ. ಆದರೆ ಬೆಳೆ ಬಂದಿಲ್ಲವೆಂದರೆ ಆದಾಯ ಶೂನ್ಯಕ್ಕೆ ಸಮೀಪಿಸಬಹುದು; ಖರ್ಚು ಮಾತ್ರ ಸಾಲವಾಗಿ ಉಳಿಯುತ್ತದೆ.
ಮುಂದಿನ ಹಂಗಾಮಿನ ಬಿತ್ತನೆಗೆ ಮತ್ತೆ ಹಣ ಬೇಕಾಗುತ್ತದೆ. ಹೀಗಾಗಿ ಬ್ಯಾಂಕ್ ಸಾಲ, ಸಹಕಾರಿ ಸಾಲ ಹಾಗೂ ಖಾಸಗಿ ಸಾಲದ ಮೇಲಿನ ಅವಲಂಬನೆ ಹೆಚ್ಚಬಹುದು. ಬೆಳೆವಿಮೆ ಮತ್ತು ಸರ್ಕಾರದ ಪರಿಹಾರ ಎಷ್ಟು ಬೇಗ ಹಾಗೂ ಎಷ್ಟು ಸಮರ್ಪಕವಾಗಿ ರೈತನ ಕೈ ಸೇರುತ್ತದೆ ಎಂಬುದು ಅತ್ಯಂತ ನಿರ್ಣಾಯಕವಾಗುತ್ತದೆ. ಹಾಗಾಗಿ ಬರದ ಅತ್ಯಂತ ಅಪಾಯಕಾರಿ ಆರ್ಥಿಕ ಪರಿಣಾಮ.
ಕುಡಿಯುವ ನೀರಿಗೂ ಅಪಾಯ
ಮಳೆ ಕೊರತೆಯ ಪರಿಣಾಮ ಬಹುಶಃ ಮುಂದಿನ ಬೇಸಿಗೆಯಲ್ಲಿ ಇನ್ನಷ್ಟು ಸ್ಪಷ್ಟವಾಗಿ ಕಾಣಬಹುದು. ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ತುಂಬದಿದ್ದರೆ ನಗರ ಮತ್ತು ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಮೇಲೆ ಒತ್ತಡ ಹೆಚ್ಚುತ್ತದೆ. ಕೆರೆಗಳು ತುಂಬದಿದ್ದರೆ ಅಂತರ್ಜಲ ಮರುಪೂರಣವೂ ಕಡಿಮೆಯಾಗುತ್ತದೆ. ಈಗಾಗಲೇ ಕೆಲವು ಪ್ರದೇಶಗಳಲ್ಲಿ ಬಾವಿ ಮತ್ತು ಕೊಳವೆಬಾವಿಗಳು ಒಣಗುತ್ತಿರುವ ಕುರಿತು ವರದಿಗಳಿವೆ.
ಮುಂಗಾರು ಅಂತ್ಯದವರೆಗೂ ಪರಿಸ್ಥಿತಿ ಸುಧಾರಿಸದಿದ್ದರೆ 2027ರ ಫೆಬ್ರವರಿ-ಮೇ ಅವಧಿಯಲ್ಲಿ ನೀರಿನ ಅಭಾವ ಮತ್ತಷ್ಟು ತೀವ್ರವಾಗುವ ಅಪಾಯವನ್ನು ನಿರ್ಲಕ್ಷಿಸಲಾಗದು.
ಜಲಾಶಯಗಳು ತುಂಬದಿದ್ದರೆ ಎರಡನೇ ಸಂಕಷ್ಟ
ಕರ್ನಾಟಕದ ಕೃಷಿ ಸಮಸ್ಯೆಯನ್ನು ಕೇವಲ ಹೊಲದಲ್ಲಿ ಬೀಳುವ ಮಳೆಯ ಪ್ರಮಾಣದಿಂದ ಅಳೆಯಲು ಸಾಧ್ಯವಿಲ್ಲ. ಪಶ್ಚಿಮಘಟ್ಟ ಮತ್ತು ಪ್ರಮುಖ ನದಿಗಳ ಜಲಾನಯನ ಪ್ರದೇಶಗಳಲ್ಲಿ ಬೀಳುವ ಮಳೆಯೂ ಅಷ್ಟೇ ಮುಖ್ಯವಾಗುತ್ತದೆ.
ಜೂನ್ ಮತ್ತು ಜುಲೈನಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಅತ್ಯಲ್ಪ ಅಥವಾ ಯಾವುದೇ ಗಮನಾರ್ಹ ಒಳಹರಿವು ಇಲ್ಲದ ಕಾರಣ KRS ಮತ್ತು ತುಂಗಭದ್ರಾ ಜಲಾಶಯಗಳಿಂದ ನೀರಾವರಿಗೆ ಇನ್ನೂ ನೀರು ಬಿಡುಗಡೆ ಮಾಡಿಲ್ಲ. ಏಕೆಂದರೆ ಬರದ ಪರಿಸ್ಥಿತಿಯಲ್ಲಿ ಸರ್ಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತಿರುವುದರಿಂದ ಕೃಷಿಗೆ ಲಭ್ಯವಾಗುವ ನೀರು ಮತ್ತಷ್ಟು ಸೀಮಿತವಾಗಬಹುದು. ಇದರ ಪರಿಣಾಮ ಎರಡು ಹಂತಗಳಲ್ಲಿ ನಷ್ಟವಾಗುವ ಸಾಧ್ತೆ ಇದೆ.
ಈಗಿನ ಮುಂಗಾರು ಬೆಳೆಗಳಿಗೆ ನೀರು ಸಿಗುವುದಿಲ್ಲ. ಮುಂದಿನ ಹಿಂಗಾರು ಹಂಗಾಮಿನಲ್ಲೂ ಜಲಾಶಯಗಳಲ್ಲಿ ಸಾಕಷ್ಟು ಸಂಗ್ರಹ ಇಲ್ಲದಿದ್ದರೆ ನೀರಾವರಿ ಪ್ರದೇಶದಲ್ಲಿಯೂ ಬಿತ್ತನೆ ಕಡಿಮೆಯಾಗಬಹುದು. ಹೀಗಾಗಿ 2026ರ ಮಳೆ ಕೊರತೆ ಕೇವಲ ಒಂದು ಹಂಗಾಮಿನ ಸಮಸ್ಯೆಯಾಗಿ ಉಳಿಯದೆ 2026-27ರ ಕೃಷಿ ವರ್ಷವನ್ನೇ ಬಾಧಿಸುವ ಸಾಧ್ಯತೆ ಇದೆ.
ಜಲವಿದ್ಯುತ್ ಉತ್ಪಾದನೆಗೂ ಹೊಡೆತ
ಜಲಾಶಯಗಳ ನೀರಿನ ಮಟ್ಟ ಕಡಿಮೆಯಾದರೆ ಕೃಷಿ ಮತ್ತು ಕುಡಿಯುವ ನೀರಿನ ಜತೆಗೆ ಜಲವಿದ್ಯುತ್ ಉತ್ಪಾದನೆಯ ಮೇಲೂ ಒತ್ತಡ ಬರಬಹುದು. ವಿದ್ಯುತ್ ಬೇಡಿಕೆ ಹೆಚ್ಚಿರುವ ಬೇಸಿಗೆಯಲ್ಲಿ ಜಲವಿದ್ಯುತ್ ಉತ್ಪಾದನೆ ಕುಸಿದರೆ ರಾಜ್ಯವು ಇತರ ಮೂಲಗಳಿಂದ ಹೆಚ್ಚು ವಿದ್ಯುತ್ ಖರೀದಿಸಬೇಕಾಗಬಹುದು.
ಮತ್ತೊಂದೆಡೆ ಮಳೆ ಕೊರತೆಯ ಜತೆಗೆ ಉಷ್ಣಾಂಶ ಏರಿದರೆ ನೀರಾವರಿ ಪಂಪ್‌ಸೆಟ್‌ಗಳ ಬಳಕೆ ಹೆಚ್ಚುತ್ತದೆ. ಅಂದರೆ ವಿದ್ಯುತ್ ಉತ್ಪಾದನೆಯ ಒಂದು ಮೂಲ ದುರ್ಬಲವಾಗುವಾಗಲೇ ಕೃಷಿ ಮತ್ತು ಗೃಹ ಬಳಕೆಯ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.
ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಪ್ರಮುಖ ಪರಿಣಾಮಗಳು
ಮಳೆ ಕೊರತೆ ಮುಂದುವರಿದರೆ ಕರ್ನಾಟಕ ಒಂದೇ ಸಮಯದಲ್ಲಿ ಬೆಳೆ ನಷ್ಟ → ರೈತರ ಆದಾಯ ಕುಸಿತ → ಸಾಲದ ಹೊರೆ ಹೆಚ್ಚಳ → ಕೃಷಿ ಕೂಲಿ ಕೆಲಸ ಕಡಿತ → ಗ್ರಾಮೀಣ ವಲಸೆ ಹೆಚ್ಚಳ → ಆಹಾರಧಾನ್ಯ ಪೂರೈಕೆ ಕುಸಿತ → ಆಹಾರ ಬೆಲೆ ಏರಿಕೆ → ಮೇವು ಕೊರತೆ → ಹೈನುಗಾರಿಕೆ ವೆಚ್ಚ ಹೆಚ್ಚಳ → ಜಲಾಶಯಗಳ ನೀರಿನ ಕೊರತೆ → ಕುಡಿಯುವ ನೀರು ಮತ್ತು ವಿದ್ಯುತ್ ಮೇಲಿನ ಒತ್ತಡದಂತಹ ಹಲವು ಪರಸ್ಪರ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಅಂದರೆ, ಮಳೆಯ ಕೊರತೆ ಕೃಷಿ ಇಲಾಖೆಯ ಸಮಸ್ಯೆಯಾಗಿ ಆರಂಭವಾಗಿ, ಅಂತಿಮವಾಗಿ ಆಹಾರ, ಉದ್ಯೋಗ, ಹಣದುಬ್ಬರ, ಗ್ರಾಮೀಣ ಆರ್ಥಿಕತೆ, ನೀರು ಮತ್ತು ವಿದ್ಯುತ್‌ವರೆಗೂ ವ್ಯಾಪಿಸಬಹುದು. ಈ ಹಂತದಲ್ಲಿ ಸರ್ಕಾರ ಕೇವಲ ಮಳೆಯನ್ನು ನಿರೀಕ್ಷಿಸಿ ಕಾಯದೇ ಜಿಲ್ಲೆ ಮತ್ತು ತಾಲೂಕುವಾರು ಮಳೆ ಕೊರತೆ, ಬಿತ್ತನೆ ಪ್ರದೇಶ, ಬೆಳೆ ಸ್ಥಿತಿ ಮತ್ತು ಜಲಾಶಯ-ಕೆರೆಗಳ ಪರಿಸ್ಥಿತಿಯನ್ನು ನಿರಂತರವಾಗಿ ಅಳೆಯಬೇಕಾಗಿದೆ.
ತೀವ್ರವಾಗಿ ಬಾಧಿತ ಪ್ರದೇಶಗಳಲ್ಲಿ ಅಲ್ಪಾವಧಿ ಮತ್ತು ಕಡಿಮೆ ನೀರಿನ ಬೆಳೆಗಳಿಗೆ ರೈತರನ್ನು ವರ್ಗಾಯಿಸುವುದು, ಪರ್ಯಾಯ ಬೀಜಗಳನ್ನು ಉಚಿತ ಅಥವಾ ರಿಯಾಯಿತಿ ದರದಲ್ಲಿ ಒದಗಿಸುವುದು, ಮೇವು ಸಂಗ್ರಹ ಆರಂಭಿಸುವುದು, ಕುಡಿಯುವ ನೀರಿನ ಮೂಲಗಳನ್ನು ಗುರುತಿಸುವುದು, ಬೆಳೆ ವಿಮೆ ಪ್ರಕ್ರಿಯೆಯನ್ನು ಸರಳಗೊಳಿಸುವುದು ಹಾಗೂ ಗ್ರಾಮೀಣ ಉದ್ಯೋಗದ ಬೇಡಿಕೆ ಹೆಚ್ಚುವ ಸಾಧ್ಯತೆಗೆ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ.
ಅಷ್ಟೇ ಮುಖ್ಯವಾಗಿ ಜಲಾಶಯದಲ್ಲಿರುವ ನೀರನ್ನು ಕುಡಿಯುವ ನೀರು–ಕೃಷಿ–ಕೈಗಾರಿಕೆ ನಡುವೆ ಹೇಗೆ ಹಂಚಿಕೆ ಮಾಡಬೇಕು ಎಂಬುವ ಗಂಭೀರತೆ ಮುಂದಿನ ತಿಂಗಳುಗಳಲ್ಲಿ ಅತ್ಯಂತ ಸೂಕ್ಷ್ಮವಾಗಬಹುದು.
ಮುಂದೆ ಮಳೆ ಬಂದರೂ ಎಲ್ಲ ನಷ್ಟಗಳು ಮರಳಿ ಬರುವುದಿಲ್ಲ
ಆಗಸ್ಟ್ ಮತ್ತು ಸೆಪ್ಟೆಂಬರ್ ಮಳೆ, ಜಲಾಶಯಗಳ ಒಳಹರಿವು, ಮರುಬಿತ್ತನೆ, ಪರ್ಯಾಯ ಬೆಳೆಗಳಿಗೆ ಮರುಜೀವ ಹಾಗೂ ಹಿಂಗಾರು ಹಂಗಾಮಿನ ಪರಿಸ್ಥಿತಿಯ ಆಧಾರದಲ್ಲಿ ನಷ್ಟದ ಪ್ರಮಾಣ ಬದಲಾಗಬಹುದು. ಆದರೆ ಜೂನ್-ಜುಲೈನಲ್ಲಿ ಆಗಬೇಕಿದ್ದ ಬಿತ್ತನೆ ಮತ್ತು ಬೆಳೆ ಬೆಳವಣಿಗೆಯ ಸಮಯ ಕಳೆದುಹೋದ ಕಾರಣ ಮುಂದೆ ಮಳೆ ಬಂದ ಮಾತ್ರಕ್ಕೆ ಈಗಾಗಲೇ ಸಂಭವಿಸಿರುವ ಎಲ್ಲ ಕೃಷಿ ನಷ್ಟವನ್ನು ಸರಿಪಡಿಸಲು ಸಾಧ್ಯವಿಲ್ಲ.
2026ರ ಮಳೆ ಕೊರತೆಯ ಕಥೆ ಕೇವಲ ‘ಈ ವರ್ಷ ಎಷ್ಟು ಮಳೆ ಕಡಿಮೆಯಾಯಿತು?’ ಎಂಬ ಪ್ರಶ್ನೆಯಲ್ಲ. ‘ಇದರ ಪರಿಣಾಮವಾಗಿ ಕರ್ನಾಟಕ ಎಷ್ಟು ಆಹಾರ ಕಳೆದುಕೊಳ್ಳಲಿದೆ, ಎಷ್ಟು ರೈತರು ಆದಾಯ ಕಳೆದುಕೊಳ್ಳಲಿದ್ದಾರೆ, ಎಷ್ಟು ಕೃಷಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಮತ್ತು ಮುಂದಿನ ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ನೀರು ಉಳಿಯಲಿದೆ’ ಎಂಬ ಗಂಭೀರತೆಗಳಿಗೆ ಮುಂದಿನ ವಾರಗಳ ಮಳೆಯೇ ಸ್ಪಷ್ಟತೆ ನೀಡಲಿದೆ. ಆದರೆ ಈಗಿರುವ ಸೂಚನೆಗಳಿಂದ ʼರಾಜ್ಯದ ಕೃಷಿ ಬರ ಕೇವಲ ಹವಾಮಾನ ಸಮಸ್ಯೆಯಾಗಿ ಅಲ್ಲ, ಆಹಾರ ಮತ್ತು ಗ್ರಾಮೀಣ ಆರ್ಥಿಕತೆಯ ಸಂಕಷ್ಟವಾಗಿ ಎದುರಿಸಲು ಈಗಿನಿಂದಲೇ ಸಿದ್ಧವಾಗಬೇಕಿದೆ ಎಂಬುದನ್ನು ಸಾಬೀತುಪಡಿಸಿದೆ.




