ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ನೀಡದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿಯ ಡಿಆರ್‌ಡಿಎ ಕೋಶದ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಆರ್. ಬಂಗಾರಪ್ಪನವರಿಗೆ ರಾಜ್ಯ ಮಾಹಿತಿ ಆಯೋಗ ₹10 ಸಾವಿರ ದಂಡ ವಿಧಿಸಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಅನುದಾನದ ದುರ್ಬಳಕೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರು 2021ರ ಜೂನ್ 28ರಂದು ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಎಚ್.ವಿ. ಅವರಿಗೆ ದೂರು ಸಲ್ಲಿಸಿದ್ದರು.
ದೂರಿಗೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆ, ಎಫ್‌ಐಆರ್ ಪ್ರತಿ, ಅಮಾನತು ಆದೇಶ ಹಾಗೂ ಕೈಗೊಂಡ ಕ್ರಮಗಳ ದೃಢೀಕೃತ ದಾಖಲೆಗಳನ್ನು ನೀಡುವಂತೆ ಮಾಹಿತಿ ಕೋರಿದ್ದರು. ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ 2021ರ ಆಗಸ್ಟ್ 13ರಂದು ಪ್ರಥಮ ಮೇಲ್ಮನವಿ ಹಾಗೂ ನವೆಂಬರ್ 9ರಂದು ರಾಜ್ಯ ಮಾಹಿತಿ ಆಯೋಗಕ್ಕೆ ದ್ವಿತೀಯ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಕೋರಿದ ಮಾಹಿತಿಯನ್ನು ಒದಗಿಸುವಂತೆ ಆಯೋಗ ಸೂಚಿಸಿ, ಆದೇಶ ಪಾಲಿಸದಿದ್ದರೆ ಮಾಹಿತಿ ಹಕ್ಕು ಕಾಯ್ದೆ ಕಲಂ 20(1)ರಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು. ಆದರೂ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆಯೋಗ ರವಿ ಆರ್. ಬಂಗಾರಪ್ಪನವರಿಗೆ ₹10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
“ಐದು ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ,” ಎಂದು ಶ್ರೀನಿವಾಸಗೌಡ ಪಾಟೀಲ ತಿಳಿಸಿದ್ದಾರೆ.



