ಬೇರೆ ಮದುವೆಯಾಗಲು ಮುಂದಾಗಿದ್ದ ಪ್ರಿಯಕರನನ್ನು ಪ್ರಶ್ನಿಸಿದ್ದಕ್ಕೆ ಯುವತಿಯನ್ನು ಹತ್ಯೆ ಮಾಡಿ ಶವವನ್ನು ಮಹಾರಾಷ್ಟ್ರದ ದಟ್ಟ ಕಾಡಿನಲ್ಲಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬೆಳಗಾವಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ಗಂಗವ್ವ ಹಂಚಿನಮನಿ (25) ಕೊಲೆಯಾದ ಯುವತಿ. ಹುಕ್ಕೇರಿ ತಾಲೂಕಿನ ರಾಜನಕಟ್ಟಿ ಗ್ರಾಮದ ಬಸವರಾಜ್ ಕರ್ನಾವರ್ (33) ಪ್ರಮುಖ ಆರೋಪಿಯಾಗಿದ್ದು, ತನ್ನ ತಂದೆ ಯಲ್ಲಪ್ಪ ಹಾಗೂ ಮಾವ ಲಗಮಪ್ಪ ಅವರೊಂದಿಗೆ ಸೇರಿ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ಗಂಗವ್ವಳನ್ನು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದು, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ತಿಲಾರಿ ಘಾಟ್ ಪ್ರದೇಶದ ದಟ್ಟ ಕಾಡಿನಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದರು.
ಮೇ 29ರಂದು ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಚಂದಗಡ ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ಟೋಲ್‌ಗೇಟ್ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸಿದರು. ಮಹಿಳೆ ಕಾರಿನಲ್ಲಿ ತೆರಳಿದ್ದ ಮಾಹಿತಿ ದೊರೆತ ಬಳಿಕ ವಾಹನದ ಸಂಖ್ಯೆಯನ್ನು ಪತ್ತೆಹಚ್ಚಿ ಆರೋಪಿಗಳ ಸುಳಿವು ಕಂಡುಹಿಡಿದರು.
ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪೊಲೀಸರು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಬಳಿಕ ಸತತ ತನಿಖೆ ನಡೆಸಿ ಬಸರಾಜ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.



