ತಾಲ್ಲೂಕು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ ತಾರಕ್ಕೇರಿದೆ. ಈ ಹಿನ್ನೆಲೆ ನಾಳೆ (ಬುಧವಾರ) ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ (ಬಾಗೇಪಲ್ಲಿ ಚೇಳೂರು ಹಾಗೂ ಗುಡಿಬಂಡೆ) ತಾಲ್ಲೂಕು ಗಳು ಬಂದ್‌ಗೆ ಕರೆ ನೀಡಿರುವ ಬೆಂಬಲಿಗರು, ಪಕ್ಷದ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬೆಂಬಲಿಗರು ಬಾಗೇಪಲ್ಲಿಯ ಶಾಸಕ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳನ್ನು ಒಳಗೊಂಡಂತೆ ನಾಳೆ ಸಂಪೂರ್ಣ ಬಂದ್ ನಡೆಸಲು ಒಮ್ಮತ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನರೇಂದ್ರ, ʻಆಪರೇಷನ್ ಕಮಲʼದ ವೇಳೆ ಬಿಜೆಪಿ ಸಚಿವ ಸ್ಥಾನ ನೀಡುವ ಆಫರ್ ಮಾಡಿತ್ತು. ಆದರೂ ಸುಬ್ಬಾರೆಡ್ಡಿ ಕಾಂಗ್ರೆಸ್ ತೊರೆಯಲಿಲ್ಲ. ಈಗ ಕಾಂಗ್ರೆಸ್ ಸಚಿವ ಸ್ಥಾನ ನೀಡುವುದಾಗಿ ಹೇಳಿ ಅವಕಾಶ ನೀಡದೇ ಅವಮಾನ ಮಾಡಿದೆ. ಇದರಿಂದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ತೀವ್ರ ನೋವಾಗಿದೆ. ಅದಕ್ಕಾಗಿ ನಾವು ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಅಮರನಾಥ ರೆಡ್ಡಿ ಮಾತನಾಡಿ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸುಬ್ಬಾರೆಡ್ಡಿ ಅಭಿಮಾನಿಗಳು ಆ.5ರಂದು (ಬುಧವಾರ) ಬಾಗೇಪಲ್ಲಿ ಬಂದ್‌ಗೆ ಕರೆ ನೀಡಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನ ಕೊಡದ ಕಾರಣ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುವ ಜತೆಗೆ ಕಾಂಗ್ರೆಸ್ ಪಾರುಪತ್ಯಕ್ಕೂ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಕೋಲಾರ | ಎಸ್‌ಐಆರ್ ಅವಾಂತರ: ಇಷ್ಟು ವರ್ಷ ಮತ ಚಲಾಯಿಸಿದ್ದರೂ ಕೆಲವರ ಹೆಸರು ಗಾಯಬ್…?
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ವಿ.ಪೂಜಪ್ಪ, ಬಿ.ವಿ.ವೆಂಕಟರವಣ ,ಕೊಮುಲ್ ಮಂಜುನಾಥ್ ರೆಡ್ಡಿ, ಪಿ.ಮಂಜುನಾಥ್ ರೆಡ್ಡಿ, ಬೂರಗಮಡಗು ನರಸಿಂಹಪ್ಪ, ಟಿ.ಶ್ರೀನಿವಾಸ್, ಸುಧಾಕರ ರೆಡ್ಡಿ ,ಚಲಂ,ಚಂದ್ರಶೇಖರ ರೆಡ್ಡಿ, ಸೋಮಶೇಖರ್, ಲಕ್ಷ್ಮೀಪತಿ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ ,ಆನಂದ್,ಶ್ರೀನಿವಾಸ್ ,ಪ್ರಭಾಕರ್ ರೆಡ್ಡಿ, ಮನ್ಸೂರ್, ನಜಿರಾ ಬೇಗಂ,ಲಕ್ಷ್ಮೀ, ಹಾಗೂ ಇತರರು ಹಾಜರಿದ್ದರು.




