“ಸರ್ಕಾರದಿಂದ ಜಾರಿಯಾಗಿರುವ ಪಂಚಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು, ಈ ಯೋಜನೆಗಳ ಅನುಷ್ಟಾನವು ಬಡಜನರ ಸೇವೆಗೆ ಒದಗಿಸಿದ ಬಹುದೊಡ್ಡ ಅವಕಾಶವಾಗಿದೆ” ಎಂದು ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೊಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ಗದಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಬಡವರಿಗೆ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗಬಾರದು. ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿಯೇ ತಲುಪಿಸುವಂತಾಗಬೇಕು. ಪಂಚಗ್ಯಾರಂಟಿ ಯೋಜನೆಗಳ ಅನುಷ್ಟಾನ ಶೇಕಡ ನೂರರಷ್ಟು ಪ್ರಗತಿ ಸಾಧಿಸಬೇಕು. ಗ್ಯಾರಂಟಿ ಯೋಜನೆಯ ಅನುಷ್ಟಾನದಲ್ಲಿ ಪ್ರಾಮಾಣಿಕತನವಿರಬೇಕು. ಬಡಜನರಿಗೆ ಸೇವೆ ಸಲ್ಲಿಸುವುದು ಪವಿತ್ರ ಕೆಲಸವಾಗಬೇಕು” ಎಂದರು.
“ವಿದ್ಯುತ್ ಕಂಬಗಳು ದುರಸ್ತಿಯಾದಾಗ ಅಥವಾ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಸಾರ್ವಜನಿಕರು ಹೆಸ್ಕಾಂ ಕಚೇರಿಯವರನ್ನು ಸಂಪರ್ಕಿಸಿದಾಗ ಹೆಸ್ಕಾಂನ ಲೈನ್‌ಮನ್‌ಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು” ಎಂದರು.
“ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಹಾಗೂ ಆರ್ಥಿಕ ಸಬಲೀಕರಣಗೊಳಿಸಲು ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಸೌಲಭ್ಯದಿಂದ ಯಾವ ಅರ್ಹ ಫಲಾನುಭವಿಯೂ ವಂಚಿತರಾಗದಂತೆ ನೋಡಿಕೊಳ್ಳಬೇಕು. ಗೃಹಲಕ್ಷ್ಮೀ ಯೋಜನೆಯ ಹಣ ದುರುಪಯೋಗವಾಗದಂತೆ ಕ್ರಮ ವಹಿಸಬೇಕು. ಮರಣ ಹೊಂದಿದವರ ಖಾತೆಗ ಗೃಹಲಕ್ಷ್ಮೀ ಹಣ ಜಮಾ ಆಗುತ್ತಿದ್ದರೆ, ಅಂತಹ ಪ್ರಕರಣಗಳಾಗದಂತೆ ತಡೆಯಲು ಕ್ರಮ ವಹಿಸಬೇಕು” ಎಂದು ಹೇಳಿದರು
“ಒಂದು ವೇಳೆ ಮರಣ ಹೊಂದಿದವರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆಯಾಗಿದ್ದರೆ ಅಂತಹ ಹಣವನ್ನು ಸರ್ಕಾರಕ್ಕೆ ಮರುಪಾವತಿಗೆ ಕ್ರಮ ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಆಯಾ ವ್ಯಾಪ್ತಿಯಲ್ಲಿನ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ವಿವರ ಹಾಗೂ ಮರಣ ಹೊಂದಿದವರ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನಿರ್ದೇಶನ ನೀಡಬೇಕು. ಈ ವರದಿಯನ್ನು ಎಲ್ಲ ಬ್ಯಾಂಕುಗಳಿಗೆ ಸಲ್ಲಿಸಬೇಕು. ಒಟ್ಟಾರೆಯಾಗಿ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪೂರ್ಣಪ್ರಮಾಣದಲ್ಲಿ ಸದ್ಭಳಕೆಯಾಗಬೇಕು” ಎಂದು ಅಶೋಕ ಮಂದಾಲಿ ನಿರ್ದೇಶನ ನೀಡಿದರು.
“ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸದಸ್ಯರು ಕೃಷ್ಣಗೌಡ ಎಚ್. ಪಾಟೀಲ ಅವರು ಮಾತನಾಡಿ, “ಅರ್ಹ ನಿರುದ್ಯೋಗಿ ಯುವಕ-ಯುವತಿಯರಿಗೆ ಯುವನಿಧಿ ಯೋಜನೆಯ ಮಾಹಿತಿ ತಲುಪಿಸಲು ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೂ ತಾಲೂಕಿನ ಎಲ್ಲಾ ಪದವಿ ಮತ್ತು ಡಿಪ್ಲೊಮಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಮಾಹಿತಿ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು” ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಬೋಳನವರ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರುಗಳಾದ ಶಂಭು ಕಾಳೆ, ಶ್ರೀಮತಿ ಮೀನಾಕ್ಷಿ ಬೆನಕಣ್ಣವರ, ದಯಾನಂದ ಪವಾರ, ಸಂಗು ಕರಕಲಮಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಶ್ರೀಮತಿ ಸಾವಿತ್ರಿ ಹೂಗಾರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಎಚ್.ಎಸ್.ಜಿನಗ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ,ವಿ, ಗ್ಯಾರಂಟಿ ಯೋಜನೆಗೆ ಸಂಬAಧಿತ ಅಧಿಕಾರಿಗಳು ಹಾಜರಿದ್ದರು.




