“ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿಯೇ ಮತ ಹಕ್ಕು ಕಸಿದುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ’ ಎಂದು ಕಾಂಗ್ರೆಸ್ ಮುಖಂಡರೂ ಆಗಿರುವ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆರೋಪಿಸಿದರು.
ಹಾವೇರಿ ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಚುನಾವಣಾ ಆಯೋಗವು ದೇಶದಾದ್ಯಂತ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಆರಂಭಿಸಿದೆ. ಮತ ಹಕ್ಕು ಕಸಿಯುವ ಹುನ್ನಾರ ಇದಾಗಿದ್ದು, ಕರ್ನಾಟಕದಲ್ಲಿ ಒಂದು ಮತ ರದ್ದಾದರೂ ನಾವು ಸಹಿಸುವುದಿಲ್ಲ. ಅದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ’ ಎಂದು ಹೇಳಿದರು.
” ಅಸ್ಸಾಂ ಹಾಗೂ ಬಿಹಾರ ಚುನಾವಣೆಯಲ್ಲಿಯೂ ಮತಗಳನ್ನು ರದ್ದುಪಡಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ 91 ಲಕ್ಷ ಮತಗಳನ್ನು ಪಟ್ಟಿಯಿಂದ ತೆಗೆದಿದ್ದಾರೆ. ಮುಖಂಡರಾದ ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟ್ಯಾಲಿನ್ ಅವರ ಸ್ವಕ್ಷೇತ್ರದಲ್ಲೂ ಸಾವಿರಾರು ಮತಗಳನ್ನು ಕಿತ್ತು ಹಾಕಲಾಗಿದೆ. ದೇಶದಲ್ಲಿ ವ್ಯವಸ್ಥಿತವಾಗಿ ಮತ ಹಕ್ಕು ರದ್ದುಪಡಿಸುವ ಕೆಲಸ ನಡೆಯುತ್ತಿದೆ. ಕರ್ನಾಟಕದಲ್ಲಿ ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ” ಎಂದು ಹೇಳಿದರು.
‘ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ನಾವೂ ಪಾಲ್ಗೊಂಡಿದ್ದೇವೆ. ಜಿಲ್ಲೆ, ತಾಲ್ಲೂಕು ಹಾಗೂ ಬೂತ್ ಮಟ್ಟದಲ್ಲೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಂದು ಬೂತ್‌ನಲ್ಲೂ ನಮ್ಮ ಕಾರ್ಯಕರ್ತರು, ಮತದಾರರನ್ನು ತಲುಪುತ್ತಿದ್ದಾರೆ. ಎಸ್‌ಐಆರ್ ಮಾಡುವುದು ಹೇಗೆ ? ಪಟ್ಟಿಯಲ್ಲಿ ಹೆಸರು ಉಳಿಸುವುದು ಹೇಗೆ ? ಎಂಬ ಇತ್ಯಾದಿ ಮಾಹಿತಿ ತಿಳಿಸುತ್ತಿದ್ದೇವೆ. ಒಂದೂ ಮತವೂ ರದ್ದಾಗದಂತೆ ನೋಡಿಕೊಳ್ಳುತ್ತೇವೆ” ಎಂದರು.
“ಮತ ಸೇರಿಸುವ ಕೆಲಸ ಮಾಡಿದ್ದ ಆಯೋಗವು, ಈಗ ಮತ ಅಳಿಸುವ ಕೆಲಸ ಆರಂಭಿಸಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಲ್ಲಿ ಅನ್ಯಾಯವಾಗುತ್ತಿದೆ. ಆಯೋಗವು, ಕೇಂದ್ರ ಸರ್ಕಾರದ ಟೂಲ್‌ಕಿಟ್ ಆಗಿದೆ. ಪ್ರಜಾಪ್ರಭುತ್ವದ ಮೇಲೆ ನೇರವಾಗಿ ದಾಳಿ ಮಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯದವರು ದಾಖಲೆ ಕೊಟ್ಟರೂ ತಿರಸ್ಕರಿಸಲಾಗುತ್ತಿದೆ. ಅಲ್ಪಸಂಖ್ಯಾತರ ಮತ ಹಕ್ಕು ಕಸಿಯುವ ಪ್ರಯತ್ನ ಇದಾಗಿದೆ” ಎಂದು ದೂರಿದರು.
ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. 2029ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿ ಅವರೇ ಪ್ರಧಾನಿಯಾಗಲಿದ್ದಾರೆ’ ಎಂದು ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯು ಜೂನ್ 21ರ ಬಳಿಕ ಆಗಲಿದೆ. ಹಾವೇರಿ ಜಿಲ್ಲೆಯ ಬಗ್ಗೆ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ’ ಎಂದರು.
ಶಾಸಕ ಬಸವರಾಜ ಶಿವಣ್ಣನವರ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮುಖಂಡ ಎಸ್.ಆರ್. ಪಾಟೀಲ ಪತ್ರಿಕಾಗೋಷ್ಠಿಯಲ್ಲಿದ್ದರು.




