ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್ ಜಾಮರ್‌ನ ವ್ಯಾಪ್ತಿಯನ್ನು ತಾಂತ್ರಿಕವಾಗಿ ಮರುಪರಿಶೀಲಿಸಿ, ಸುತ್ತಮುತ್ತಲಿನ ಗ್ರಾಮಗಳ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯನ್ನು ನಿವಾರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ‘ಇತ್ತೀಚೆಗೆ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ತಡೆಗೋಡೆ ಹಾರಿ ಪರಾರಿಯಾದ ಘಟನೆಯ ಬಳಿಕ ಜೈಲಿನ ಮೊಬೈಲ್ ಜಾಮರ್‌ನ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು. ಇದರಿಂದ ನಂದಿಕೂರ್, ಸೀತನೂರ್, ಪಾಣೆಗಾಂವ್, ಶಿರನೂರ್, ಖಣದಾಳ ಹಾಗೂ ಇಟಗಾ (ಕೆ) ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದು ಹೇಳಿದರು.
‘ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಕರೆಗಳು ಸಂಪರ್ಕವಾಗುತ್ತಿಲ್ಲ. ವಾಟ್ಸ್‌ಆ್ಯಪ್, ಫೋನ್‌ಪೇ, ಗೂಗಲ್‌ಪೇ ಸೇರಿದಂತೆ ಡಿಜಿಟಲ್ ಸೇವೆಗಳು ಸ್ಥಗಿತಗೊಂಡಿದ್ದು, ಇಂಟರ್ನೆಟ್ ಸಂಪರ್ಕದ ಕೊರತೆಯಿಂದ ತುರ್ತು ಮಾಹಿತಿ ಹಾಗೂ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.

‘ಮೊಬೈಲ್ ಸಂಪರ್ಕದ ಸಮಸ್ಯೆಯಿಂದ ವ್ಯಾಪಾರಸ್ಥರು, ರೈತರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತೊಂದರೆ ಅನುಭವಿಸುತ್ತಿದ್ದು, ವ್ಯವಹಾರಗಳ ಮೇಲೂ ದುಷ್ಪರಿಣಾಮ ಉಂಟಾಗಿದೆ. ಕೆಲವರು ಮನೆಯ ಮೇಲ್ಮಾವಣಿಗೆ ತೆರಳಿ ಕರೆ ಮಾಡಲು ಪ್ರಯತ್ನಿಸಿದರೂ ಧ್ವನಿ ಸ್ಪಷ್ಟವಾಗಿ ಕೇಳಿಸದೆ ಕರೆಗಳು ಮಧ್ಯದಲ್ಲೇ ಕಡಿತಗೊಳ್ಳುತ್ತಿವೆ’ ಎಂದು ತಿಳಿಸಿದರು.
‘ಜೈಲಿನ ಭದ್ರತೆಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಜಾಮರ್‌ನ ವ್ಯಾಪ್ತಿಯನ್ನು ತಾಂತ್ರಿಕವಾಗಿ ಮರುಪರಿಶೀಲಿಸಿ, ಗ್ರಾಮಗಳ ಮೊಬೈಲ್ ನೆಟ್‌ವರ್ಕ್‌ಗೆ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಬೇಡಿಕೆ ಈಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಭೂ-ಒಡೆತನ ಯೋಜನೆ ಜಾರಿಗೊಳಿಸಲು ಸಮತಾ ಸೈನಿಕ ದಳ ಪ್ರತಿಭಟನೆ
ಈ ಸಂದರ್ಭದಲ್ಲಿ ಪವನಕುಮಾರ್ ವಳಕೇರಿ, ರವೀಂದ್ರ ವಿಭೂತಿ, ಸಂಗಮೇಶ ನಾಗನಳ್ಳಿ, ರಾಜಣ್ಣಗೌಡ ಪಾಟೀಲ್, ಖಾದರ್ ಸಾಬ್, ಸಯ್ಯದ್ ಪಟೇಲ್, ಉಮೇಶ ಶ್ರೀಗೇರಿ, ಮಲ್ಲಿನಾಥ ನಾಗನಳ್ಳಿ, ಮಹಾದೇವಪ್ಪ ಪಾಟೀಲ್ ಸೇರಿದಂತೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ಸೇರಿದಂತೆ ಇತರರು ಇದ್ದರು.





