ಭೂ-ಒಡೆತನ ಯೋಜನೆಯನ್ನು ತಕ್ಷಣ ಜಾರಿಗೊಳಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ರಚಿಸಿ ಭೂಹೀನ ದಲಿತ ಕುಟುಂಬಗಳಿಗೆ ಭೂಮಿ ಹಂಚಿಕೆ ಮಾಡಬೇಕು. ಜೊತೆಗೆ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿ ರೈತರ ಬೆಳೆಸಾಲ ಮನ್ನಾ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಹತ್ತಿಗುಡೂರ ಶರಣರೆಡ್ಡಿ, ‘2019-20ನೇ ಸಾಲಿನಲ್ಲಿ ಭೂ-ಒಡೆತನ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಿ ಪ್ರಕ್ರಿಯೆ ಆರಂಭಿಸಲಾಗಿದ್ದರೂ, ಕಳೆದ ಐದು ವರ್ಷಗಳಿಂದ ಯೋಜನೆ ಸ್ಥಗಿತಗೊಂಡಿದೆ. ಇದರಿಂದ ಭೂಮಿ ನೀಡಲು ಒಪ್ಪಿಗೆ ನೀಡಿದ ಭೂಮಾಲೀಕರು ಹಾಗೂ ಭೂಹೀನ ದಲಿತ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ’ ಎಂದು ಹೇಳಿದರು.
‘ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಕ್ಷಣವೇ ಹೊಸ ಸಮಿತಿ ರಚಿಸಿ ಭೂಮಿಯ ಮೌಲ್ಯ ನಿಗದಿಪಡಿಸಿ ಅರ್ಹ ಫಲಾನುಭವಿಗಳಿಗೆ ಭೂಮಿ ಹಂಚಿಕೆ ಮಾಡಬೇಕು. ಹತ್ತಿಗೂಡೂರು, ಐಕೂರು, ಮಾಲಹಳ್ಳಿ, ನಾಯ್ಕಲ್, ಚಟ್ನಳ್ಳಿ, ಬಲಕಲ್, ಮರಮಕಲ್, ದೋರನಹಳ್ಳಿ, ಇಂಗಳಗಿ, ಬಸವಂತಪುರ, ಹಯ್ಯಾಳ (ಬಿ), ಇಟ್ಟಿಗಿ, ಶಿರವಾಳ, ಕೊಂಗಂಡಿ, ಯಕ್ಷಿಂತಿ, ಬೊಮ್ಮನಹಳ್ಳಿ, ಅನವಾರ, ಕೊಳ್ಳೂರು, ತುಮಕೂರು, ಕಾಡೆಮೆಗೆರೆ ಸೇರಿದಂತೆ ವಿವಿಧ ಗ್ರಾಮಗಳ ಭೂಹೀನ ದಲಿತ ಕುಟುಂಬಗಳನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.
‘ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿ ರೈತರ ಬೆಳೆಸಾಲ ಮನ್ನಾ ಮಾಡಬೇಕು, ಬರ ಪರಿಹಾರವನ್ನು ಶೀಘ್ರ ವಿತರಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ಅರ್ಹ ದಲಿತ ಕುಟುಂಬಗಳಿಗೆ ವಸತಿ ಮನೆಗಳನ್ನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.
‘ಈ ಹಿಂದೆಯೂ ಹಲವು ಬಾರಿ ಮನವಿ ಸಲ್ಲಿಸಿ ಹೋರಾಟ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಸಮತಾ ಸೈನಿಕ ದಳದ ನೇತೃತ್ವದಲ್ಲಿ ಮಹಿಳಾ ಜಿಲ್ಲಾ ಸಮಿತಿಯಿಂದ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಆಸ್ತಿ ವರ್ಗಾವಣೆ ಕಡತಕ್ಕೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಗ್ರಾ.ಪಂ ಕಾರ್ಯದರ್ಶಿ
ಪ್ರತಿಭಟನೆಯಲ್ಲಿ ಹಿರಿಯ ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ಭೀಮರಾಯ ದೋರನಹಳ್ಳಿ, ಶರಣಪ್ಪ ಕಡಿಮನಿ ಅನಕಸೂಗೂರು, ಶರಣಪ್ಪ ಚಲುವಾದಿ ಸೇರಿದಂತೆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.




