ಗಣೇಶ ಚತುರ್ಥಿ ಎಂದರೆ ಭಕ್ತಿ, ಸಂಭ್ರಮ, ಮೆರವಣಿಗೆ, ಅಲಂಕಾರ ಮತ್ತು ಗಣಪತಿ ಮೂರ್ತಿಗಳ ವೈಭವ ಕಣ್ಣಮುಂದೆ ಬರುತ್ತದೆ. ಆದರೆ ಈ ಸಂಭ್ರಮದ ಹಿಂದೆ ಹಲವು ತಿಂಗಳುಗಳ ಕಾಲ ಬೆವರು ಸುರಿಸುವ ಕೈಗಳ ಕಥೆ ಅನೇಕರಿಗೆ ತಿಳಿದಿರುವುದಿಲ್ಲ. ಗಣೇಶೋತ್ಸವ ಆರಂಭವಾಗುವುದಕ್ಕೂ ಮುನ್ನವೇ ಮೂರ್ತಿ ತಯಾರಕರ ಬದುಕಿನಲ್ಲಿ ಹಬ್ಬದ ಕೆಲಸ ಶುರುವಾಗಿರುತ್ತದೆ.
ಕಲಬುರಗಿಯಲ್ಲಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವ ರಾಜಸ್ಥಾನ ಮೂಲದ ಕುಟುಂಬಗಳು ಜನವರಿಯಿಂದಲೇ ಕೆಲಸ ಆರಂಭಿಸಿ, ಸುಮಾರು ಎಂಟು ತಿಂಗಳ ಕಾಲ ಹಗಲು-ರಾತ್ರಿ ಶ್ರಮಿಸಿ ಸಾವಿರಾರು ಮೂರ್ತಿಗಳಿಗೆ ರೂಪ ನೀಡುತ್ತಿವೆ. ಇವರು ಮಣ್ಣಿನ ಬದಲಿಗೆ ವಿವಿಧ ಸಾಮಗ್ರಿಗಳನ್ನು ಬಳಸಿ ಸಣ್ಣ ಮೂರ್ತಿಯಿಂದ ಹಿಡಿದು 12 ಅಡಿ ಎತ್ತರದ ಬೃಹತ್ ಮೂರ್ತಿಗಳವರೆಗೆ ಸಿದ್ಧಪಡಿಸುತ್ತಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ರಾಜಸ್ಥಾನ ಮೂಲದ ಮೂರ್ತಿ ತಯಾರಕ ವಕ್ತ ರಾಮ್ ಸೋಲಂಕಿ, “ನಾವು ಸುಮಾರು 15 ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಕಲಬುರಗಿಗೆ ಬಂದು 15–20 ವರ್ಷಗಳಾಗಿವೆ. ನಾವು ಚಿಕ್ಕವರಿದ್ದಾಗಿನಿಂದಲೇ ಈ ವೃತ್ತಿಯಲ್ಲಿದ್ದೇವೆ” ಎಂದು ತಮ್ಮ ವೃತ್ತಿ ಬದುಕಿನ ಕುರಿತು ವಿವರಿಸಿದರು.
“ಕಲಬುರಗಿಗೆ ಮೊದಲ ಬಾರಿಗೆ ಬಂದಾಗ ವರ್ಷಕ್ಕೆ 2–3 ಸಾವಿರ ಮೂರ್ತಿಗಳನ್ನು ತಯಾರಿಸುತ್ತಿದ್ದೆವು. ಈಗ 30–40 ಸಾವಿರ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಎಲ್ಲ ಮೂರ್ತಿಗಳಿಗೂ ಬೇಡಿಕೆ ಇದೆ. ಕಲಬುರಗಿ ಸುತ್ತಮುತ್ತಲಿನ ಗ್ರಾಮಗಳಲ್ಲದೆ ಹೈದರಾಬಾದ್, ಬೆಂಗಳೂರು ಮತ್ತು ಮುಂಬೈಯಂತಹ ನಗರಗಳಿಗೂ ಮೂರ್ತಿಗಳನ್ನು ಕಳುಹಿಸುತ್ತೇವೆ” ಎಂದು ಹೇಳಿದರು.

ಮೂರ್ತಿ ತಯಾರಿಕೆಗೆ ಪಿಯುಪಿ, ನಾರಿಯಲ್ ಗುಂಜ್, ನೀರು, ವೈಟ್ ಸಿಮೆಂಟ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಒಂದು ಮೂರ್ತಿಯ ಮೂಲ ಆಕಾರ ಸಿದ್ಧಪಡಿಸಲು ಒಂದರಿಂದ ಎರಡು ಗಂಟೆ ಬೇಕಾದರೂ, ಅದು ಸಂಪೂರ್ಣವಾಗಿ ಸಿದ್ಧವಾಗಿ ಮಾರುಕಟ್ಟೆಗೆ ಹೋಗಲು ಹಲವು ದಿನಗಳ ಪ್ರಕ್ರಿಯೆ ಅಗತ್ಯವಾಗುತ್ತದೆ.
ಮೂರ್ತಿಯನ್ನು ತಯಾರಿಸಿದ ಬಳಿಕ ಒಣಗಿಸುವುದು, ಬಣ್ಣ ಹಚ್ಚುವುದು, ಫಿನಿಶಿಂಗ್ ನೀಡುವುದು ಸೇರಿದಂತೆ ಹಂತ ಹಂತವಾಗಿ ಕೆಲಸ ನಡೆಯುತ್ತದೆ. ಸಾವಿರಾರು ಮೂರ್ತಿಗಳನ್ನು ಸಿದ್ಧಪಡಿಸುವ ಸಂಪೂರ್ಣ ಪ್ರಕ್ರಿಯೆ ಎಂಟು ತಿಂಗಳವರೆಗೂ ಸಾಗುತ್ತದೆ.
ಗಣಪನ ಸಾವಿರಾರು ರೂಪ
ಈ ಕೆಲಸದಲ್ಲಿ ಸುಮಾರು 40 ಮಂದಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಇವರಿಗೆ ದಿನಕ್ಕೆ ಸುಮಾರು ₹500 ನೀಡಲಾಗುತ್ತದೆ.
ಮೂರು ಅಡಿಯಿಂದ 12 ಅಡಿವರೆಗಿನ ವಿವಿಧ ಗಾತ್ರದ ಮೂರ್ತಿಗಳು ಇಲ್ಲಿ ಸಿದ್ಧವಾಗುತ್ತವೆ. ಪ್ರತಿಯೊಂದು ಮೂರ್ತಿಗೂ ವಿಭಿನ್ನ ವಿನ್ಯಾಸ, ಆಕಾರ ಮತ್ತು ಅಲಂಕಾರ ನೀಡಲಾಗುತ್ತದೆ. ಗ್ರಾಹಕರ ಬೇಡಿಕೆ ಹಾಗೂ ಮಾರುಕಟ್ಟೆಯ ಅಭಿರುಚಿಗೆ ಅನುಗುಣವಾಗಿ ಹೊಸ ಹೊಸ ಮಾದರಿಗಳನ್ನು ರೂಪಿಸುವ ಸವಾಲು ಕೂಡ ಇವರ ಮುಂದಿದೆ.
“ಈ ಕೆಲಸದಲ್ಲಿ ನಮಗೆ ತೃಪ್ತಿ ಇದೆ. ಹಲವು ವರ್ಷಗಳಿಂದ ಇದೇ ವೃತ್ತಿ ಮಾಡಿಕೊಂಡು ಬಂದಿದ್ದೇವೆ. ಮೂರ್ತಿಗಳ ತಯಾರಿಕೆಯಲ್ಲಿ ಬಳಸುವ ಸಾಮಗ್ರಿಗಳೊಂದಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ಇದೇ ನಮ್ಮ ಜೀವನಾಧಾರ” ಎಂದು ವಕ್ತಾರಾಮ ಹೇಳಿದರು.
ಮತ್ತೊಬ್ಬ ಮೂರ್ತಿ ತಯಾರಕ ಶಂಕರ್ ರಾಥೋಡ್ ಅವರ ಕುಟುಂಬವೂ ಹಲವು ವರ್ಷಗಳಿಂದ ಇದೇ ವೃತ್ತಿಯಲ್ಲಿದೆ. “ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತೇವೆ. ಉಳಿದ ಸಮಯದಲ್ಲಿ ಮನೆಯ ಅಲಂಕಾರ ವಸ್ತುಗಳು ಹಾಗೂ ಗೊಂಬಿಗಳನ್ನು ತಯಾರಿಸುತ್ತೇವೆ. ನಮ್ಮ ಕುಟುಂಬದ 25–30 ಮಂದಿ ಸುಮಾರು 17–20 ವರ್ಷಗಳಿಂದ ಕಲಬುರಗಿಯಲ್ಲೇ ವಾಸವಾಗಿದ್ದಾರೆ. ಸಣ್ಣವರು ಶಾಲೆಗೆ ಹೋಗುತ್ತಾರೆ. ದೊಡ್ಡವರು ಮೂರ್ತಿ ತಯಾರಿಸುವ ಕೆಲಸ ಮಾಡುತ್ತಾರೆ” ಎಂದು ಹೇಳಿದರು.
ಗ್ರಾಹಕರ ಬೇಡಿಕೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಸುಮಾರು 22–24 ಬಗೆಯ ಮಾದರಿಗಳಲ್ಲಿ ಮೂರ್ತಿಗಳನ್ನು ತಯಾರಿಸಲಾಗುತ್ತಿದ್ದು, ವಿಭಿನ್ನ ವಿನ್ಯಾಸದ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಸಾಚೆಗಳ ಸಹಾಯದಿಂದ ಒಂದು ದಿನದಲ್ಲಿ ಏಳೆಂಟು ಮೂರ್ತಿಗಳವರೆಗೆ ತಯಾರಿಸಬಹುದಾದರೂ, ಅವುಗಳನ್ನು ಒಣಗಿಸಿ ಬಣ್ಣ, ಫಿನಿಶಿಂಗ್ ಸೇರಿದಂತೆ ಅಂತಿಮ ರೂಪ ನೀಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಮೂರ್ತಿಗಳ ಗಾತ್ರ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಬೆಲೆಯಲ್ಲೂ ವ್ಯತ್ಯಾಸವಿರುತ್ತದೆ. ಸಣ್ಣ ಮೂರ್ತಿಗಳಿಂದ ₹35 ಸಾವಿರದಿಂದ ₹45 ಸಾವಿರದವರೆಗಿನ ಮೂರ್ತಿಗಳಿಗೂ ಬೇಡಿಕೆ ಇದೆ ಎಂದು ಅವರು ತಿಳಿಸಿದರು.

ನಾಲ್ಕು ಲಕ್ಷ ಹೂಡಿಕೆ… ಎಂಟು ತಿಂಗಳ ನಿರೀಕ್ಷೆ
ಮೂರ್ತಿ ತಯಾರಿಕೆಯ ವೃತ್ತಿಯಲ್ಲಿ ಹೂಡಿಕೆ ಕಡಿಮೆ ಇಲ್ಲ. ಸಾಮಗ್ರಿಗಳನ್ನು ಖರೀದಿಸಲು ಆರಂಭದಲ್ಲೇ ದೊಡ್ಡ ಮೊತ್ತ ಬೇಕಾಗುತ್ತದೆ.ಅಂಬರೀಶ್ ರಾಥೋಡ್ ಅವರ ಬದುಕಿನ ಕಥೆ ಈ ವೃತ್ತಿಯ ಮತ್ತೊಂದು ಮುಖವನ್ನು ತೆರೆದಿಡುತ್ತದೆ.
“ಮೊದಲು ರಾಜಸ್ಥಾನದಲ್ಲಿದ್ದೆವು. ಅಲ್ಲಿ ಬದುಕು ಸಾಗಿಸುವುದು ಕಷ್ಟವಾಗಿತ್ತು. ಸುಮಾರು 10 ವರ್ಷ ನೇಪಾಳದಲ್ಲಿಯೂ ಮೂರ್ತಿ ತಯಾರಿಸುವ ಕೆಲಸ ಮಾಡಿದ್ದೇವೆ. ನಂತರ ಕಲಬುರಗಿಗೆ ಬಂದೆವು. ಇಲ್ಲಿ ಬಂದು ಸುಮಾರು 20 ವರ್ಷಗಳಾಗಿವೆ” ಎಂದು ಅವರು ಹೇಳಿದರು.
“ಮೊದಲ ಬಾರಿ ಮೂರ್ತಿ ತಯಾರಿಕೆಗಾಗಿ ಸುಮಾರು ₹4 ಲಕ್ಷ ಖರ್ಚು ಮಾಡಿ ಸಾಮಗ್ರಿಗಳನ್ನು ತಂದಿದ್ದೆವು. ಮದುವೆಯಾದ ನಂತರ ಕುಟುಂಬದ ಜವಾಬ್ದಾರಿ ಮತ್ತಷ್ಟು ಹೆಚ್ಚಾಯಿತು. ನಾನು ಹೆಚ್ಚು ಓದಿಲ್ಲ. ನಮ್ಮ ಅಜ್ಜ-ತಾತಂದಿರೂ ಇದೇ ಕೆಲಸ ಮಾಡುತ್ತಿದ್ದರು. ನಮಗೆ ಬೇರೆ ಕೆಲಸವೂ ಗೊತ್ತಿಲ್ಲ. ಹೀಗಾಗಿ ಈ ವೃತ್ತಿಯನ್ನೇ ಮುಂದುವರಿಸಿಕೊಂಡು ಬಂದಿದ್ದೇವೆ” ಎಂದರು.
ಮಳೆ ಬಂದರೆ ಎಂಟು ತಿಂಗಳ ಪರಿಶ್ರಮ ನೀರಲ್ಲಿ ಹೋಮ
ಮೂರ್ತಿ ತಯಾರಕರಿಗೆ ಮಾರುಕಟ್ಟೆಯ ಅನಿಶ್ಚಿತತೆ ಒಂದೆಡೆಯಾದರೆ, ಹವಾಮಾನ ಮತ್ತೊಂದೆಡೆ ದೊಡ್ಡ ಸವಾಲಾಗಿದೆ. ಮಳೆ ಬಂದರೆ ಮೂರ್ತಿಗಳನ್ನು ಒಣಗಿಸುವುದು ಕಷ್ಟವಾಗುತ್ತದೆ. ಕೆಲಸ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲಸ ಮಾಡುವ ಜಾಗಕ್ಕೆ ಬಾಡಿಗೆಯನ್ನೂ ಪಾವತಿಸಬೇಕಾಗುತ್ತದೆ.
“ಈ ಜಾಗಕ್ಕೆ ತಿಂಗಳಿಗೆ ಸುಮಾರು ₹4 ಸಾವಿರ ಬಾಡಿಗೆ ಕೊಡಬೇಕು. ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿದೆ. ಆದರೆ ಗ್ರಾಹಕರು ಹಿಂದಿನ ದರದಲ್ಲೇ ಮೂರ್ತಿ ಕೇಳುತ್ತಾರೆ. ಒಂದು ಮೂರ್ತಿಯಿಂದ ₹1,000–₹1,500ರಷ್ಟು ಉಳಿತಾಯವಾದರೆ ಮಾತ್ರ ನಮ್ಮ ಎಂಟು ತಿಂಗಳ ಪರಿಶ್ರಮಕ್ಕೆ ಸ್ವಲ್ಪ ಪ್ರತಿಫಲ ಸಿಗುತ್ತದೆ” ಎಂದು ಅಂಬರೀಶ್ ಹೇಳಿದರು.
ಸಂಭ್ರಮದ ಹಿಂದೆ ಬದುಕಿನ ಹೋರಾಟದ ಕತೆ
ಗಣೇಶ ಚತುರ್ಥಿ ದಿನದಂದು ಭಕ್ತರು ಮೂರ್ತಿಗೆ ಪೂಜೆ ಸಲ್ಲಿಸಿ, ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಆದರೆ ಆ ಮೂರ್ತಿಗೆ ರೂಪ ನೀಡಿದ ಕೈಗಳು ಅದಕ್ಕೂ ಮುನ್ನ ಎಂಟು ತಿಂಗಳ ಕಾಲ ಬದುಕಿನ ಹೋರಾಟದೊಂದಿಗೆ ಕೆಲಸ ಮಾಡಿರುತ್ತವೆ.
ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ, ಕಾರ್ಮಿಕರ ಕೂಲಿ, ಸ್ಥಳದ ಬಾಡಿಗೆ, ಕಚ್ಚಾ ಸಾಮಗ್ರಿಗಳ ವೆಚ್ಚ, ಮಾರುಕಟ್ಟೆಯ ಬೇಡಿಕೆ ಮತ್ತು ಹವಾಮಾನದ ಅನಿಶ್ಚಿತತೆ—ಇವೆಲ್ಲದರ ನಡುವೆ ಮೂರ್ತಿ ತಯಾರಕರು ಪ್ರತಿವರ್ಷ ಹೊಸ ನಿರೀಕ್ಷೆಯೊಂದಿಗೆ ಕೆಲಸ ಆರಂಭಿಸುತ್ತಾರೆ.
“ಎಂಟು ತಿಂಗಳು ದುಡಿದ ನಂತರ ಮೂರ್ತಿಗಳು ಉತ್ತಮವಾಗಿ ಮಾರಾಟವಾದರೆ ಮಾತ್ರ ನಮ್ಮ ಪರಿಶ್ರಮ ಸಾರ್ಥಕವಾಗುತ್ತದೆ. ಲಾಭ-ನಷ್ಟ ಏನೇ ಇರಲಿ, ಇದೇ ನಮ್ಮ ವೃತ್ತಿ, ಇದೇ ನಮ್ಮ ಬದುಕು” ಎಂಬ ಅಂಬರೀಶ್ ಅವರ ಮಾತುಗಳು ಗಣೇಶೋತ್ಸವದ ವೈಭವದ ಹಿಂದಿರುವ ಶ್ರಮಜೀವಿಗಳ ಬದುಕಿನ ವಾಸ್ತವವನ್ನು ತೆರೆದಿಡುತ್ತವೆ.
ಹೀಗೆ, ಭಕ್ತರ ಮನೆ ಹಾಗೂ ಸಾರ್ವಜನಿಕ ಮಂಟಪಗಳಲ್ಲಿ ಪ್ರತಿಷ್ಠಾಪನೆಯಾಗುವ ಪ್ರತಿಯೊಂದು ಗಣೇಶ ಮೂರ್ತಿಯ ಹಿಂದೆ ತಿಂಗಳುಗಳ ಶ್ರಮ, ನೂರಾರು ಕೈಗಳ ದುಡಿಮೆ ಮತ್ತು ಒಂದು ಕುಟುಂಬದ ಬದುಕಿನ ನಿರೀಕ್ಷೆ ಅಡಗಿದೆ.





