ಯುವತಿಯೊಬ್ಬಳನ್ನು ಸಾರ್ವಜನಿಕವಾಗಿ ಚುಡಾಯಿಸಿದ್ದನ್ನು ಪ್ರಶ್ನಿಸಿದ ಹಿರಿಯರೊಬ್ಬರ ಮೇಲೆ ಪುಂಡರು ಹಲ್ಲೆ ಮಾಡಿದ್ದು, ಅವರ ಅಂಗಡಿಯನ್ನೇ ನಾಶ ಮಾಡಿ, ₹40,000 ದೋಚಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್ ನಿಲ್ದಾಣದ ಬಳಿ ಇರುವ ಅಂಗಡಿಗೆ ಬಂದಿದ್ದ ಯುವತಿಯೊಬ್ಬಳನ್ನು ಅಲ್ಲಿದ್ದ ಪುಂಡರ ಗುಂಪು ಚುಡಾಯಿಸಿದೆ. ಹುಡುಗಿ ಅಸಹಾಯಕವಾಗಿ ಅಂಗಡಿ ಮಾಲೀಕರತ್ತ ನೋಡಿದ್ದಾಳೆ. ಬಳಿಕ ಅಂಗಡಿ ಮಾಲೀಕರು ಯುವಕರನ್ನು ಪ್ರಶ್ನೆ ಮಾಡಿದ್ದಕ್ಕೆ ಅವರು ಹಿರಿಯ ಜೀವದ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೆ ಅಂಗಡಿಯನ್ನೇ ಪುಡಿ ಪುಡಿ ಮಾಡಿ ಕ್ರೌರ್ಯ ಮೆರೆದಿದ್ದಾರೆ.
ಅಂಗಡಿ ಮಾಲೀಕ ಚಂದ್ರಶೇಖರ್ ಅವರು ಹಲ್ಲೆಗೆ ಒಳಗಾದವರು. ಅವರ ಅಂಗಡಿಗೆ ಯುವತಿಯೊಬ್ಬಳು ಆಗಮಿಸಿ ಸಾಮಗ್ರಿ ಖರೀದಿಸುತ್ತಿದ್ದಾಗ ಹಿರೇಮರಳಿ ಗ್ರಾಮದ ರಕ್ಷಿತ್ ಎಂಬಾತ ಯುವತಿಯನ್ನು ರೇಗಿಸಿದ್ದಾರೆ. ಈ ವೇಳೆ ಚಂದ್ರಶೇಖರ್ ಅವರು ʻʻಈ ರೀತಿ ಹುಡುಗಿಯನ್ನು ರೇಗಿಸಬೇಡ. ಇಲ್ಲಿಂದ ಹೋಗುʼʼ ಎಂದು ಬುದ್ಧಿವಾದ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ನ್ಯಾ. ಉಂಡಿ ಮಂಜುಳಾ ಶಿವಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ; ಬಾಣಂತಿ ಬಿಡುವ ಗುಡಿಸಲು ನಾಶ
ಈ ವೇಳೆ ರಕ್ಷಿತ್ ಪೋನ್ ಮಾಡಿ ತನ್ನ ಕೆಲವು ಸ್ನೇಹಿತರನ್ನು ಕರೆಸಿಕೊಂಡಿದ್ದಾನೆ. ಅವರೆಲ್ಲ ಬಂದಾಗ ʻʻನನಗೇ ಬುದ್ದಿ ಹೇಳ್ತೀಯಾʼʼ ಎಂದು ಸ್ನೇಹಿತರ ಜೊತೆಗೆ ಸೇರಿ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಆರೋಪಿ ರಕ್ಷಿತ್ ಮತ್ತು ತಂಡ ಅಂಗಡಿಯಲ್ಲಿದ್ದ ಕಂಪ್ಯೂಟರ್ ಧ್ವಂಸಗೊಳಿಸಿ, ₹40,000 ದೋಚಿ ಪರಾರಿಯಾಗಿದೆ.
ಗಾಯಗೊಂಡಿರುವ ಚಂದ್ರಶೇಖರ್ ಅವರಿಗೆ ಪಾಂಡವಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಿತ್, ಬೋರಾಶೆಟ್ಟಿ, ವಿನಯ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.